ಮಿಸ್ ಲೀಲಾವತಿ !
Team Udayavani, Sep 8, 2019, 5:30 AM IST
ಮರೂನ್ ಕಲರ್‌ನಲ್ಲಿ ಆರನೆಯ ನಂಬರಿನ ಒಂದು ಶಿಲ್ಪಾ ಸ್ಟಿಕ್ಕರ್ ಕೊಡಿ ಅಣ್ಣಾ’ ಎಂದು ಲೀಲಾ ಅಂಗಡಿಯವನನ್ನು ಕೇಳಿದಳು. “ಎಷ್ಟು ಪ್ಯಾಕೆಟ್ ಬೇಕು ಮೇಡಂ?” ಎಂದು ಅಂಗಡಿ ಹುಡುಗ ಹೇಳಿದ್ದರಲ್ಲಿ ಇವಳಿಗೆ “ಮೇಡಂ’ ಅಂತ ಹೇಳಿದ್ದಷ್ಟೇ ಕೇಳಿಸಿದ್ದು. “ಮುಂದಿನ ವಾರದ ಲೇಡಿಸ್ ಕ್ಲಬ್ಬಿನ ಕಾರ್ಯಕ್ರಮಕ್ಕೆ ಹೊಸದಾಗಿ ಹೊಲಿಸಿರುವ ಗೋಲ್ಡನ್ ಬುಟ್ಟಾ ಇರುವ ಬಿಳಿಯ ಸಿಲ್ಕ… ಸೀರೇನೇ ಹಾಕೋಬೇಕು. ಥೇಟ್ ಆ ಹೀರೋಯಿನ್ ಎಡಕಲ್ಲುಗುಡ್ಡ ಸಿನೆಮಾದಲ್ಲಿ ಅರ್ಜುನ ಸನ್ಯಾಸಿ… ಎಂದು ರೇಗಿಸುತ್ತ ಹಾಡುವ ಹಾಡಿದೆಯಲ್ಲ, ಆ ರೀತೀನೇ ಕೊಡವ ಸೀರೆಯುಟ್ಟು ಹೋಗಬೇಕು. “ಸೆಂಟರ್ ಆಫ್ ಅಟ್ರ್ಯಾಕ್ಷನ್’ ಆಗಿ ಆ ಮೆಚ್ಚಿನ ನಟಿಯಿಂದ ಪ್ರಶಂಸೆ ಪಡೆಯಬೇಕು. ಅವರನ್ನು ಮಾತಾಡಿಸಿ, ಆಟೋಗ್ರಾಫ್ ಪಡೆದು, ಸೆಲ್ಫಿ ತೆಗೆದುಕೊಂಡು, ಫೇಸುಕ್, ವಾಟ್ಸಾಪ್‌ನಲ್ಲಿ ಅಪ್‌ಡೇ ಟ್ ಮಾಡಬೇಕು. ಛೆ, ಅಷ್ಟರೊಳಗೆ ಒಂದು ಹೊಸ ಆ್ಯಂಡ್ರಾಯಿಡ್ ಫೋನು, ಫೋಟೋಕ್ಲಾರಿಟಿ ಚೆನ್ನಾಗಿರುವಂಥದ್ದು ತೆಗೆದುಕೊಳ್ಳಬೇಕು. ಹಳೇ ಫೋನು ಕಳೆದುಹೋಗಿದ್ದೇ ಸರಿಯಾಯ್ತು. ಲೀಲಾಳ ಲಹರಿ ಹೀಗೆ ಹರಿಯುತ್ತಲೇ ಇತ್ತು. “ಮತ್ತೇನಾದ್ರೂ ಬೇಕಾ ಮೇಡಂ?’ ಸ್ವಲ್ಪ ಗಟ್ಟಿ ದನಿಯಲ್ಲಿ ಅಂಗಡಿಯವನು ಮತ್ತೆ ಎರಡನೆಯ ಬಾರಿಗೆ ಕೇಳಿದಾಗ, ಕನಸಿನ ಲೋಕದಿಂದ ಸಾವರಿಸಿಕೊಂಡು ವಾಸ್ತವಕ್ಕೆ ಬಂದ ಲೀಲಾ, “ಇಲ್ಲ, ಹಾ ಹಾ ಬೇಕು, ಗೋಲ್ಡನ್ ಬಾರ್ಡರ್ ಇರುವ ಬಿಳೀ ಸೀರಿಗೆ ಮ್ಯಾಚ್ ಆಗೋ ಹಾಗೆ ಎರಡೆರಡು ಡಜನ್ ಬಳೆ ಕೊಡಿ. ಮ್ಯಾಚಿಂಗ್ ಹೇರ್‌ಕ್ಲಿಪ್ಪು, ಸ್ಟಿಕ್ಕರ್‌ನೂ ಕೊಡಿ’ ಎಂದೆಲ್ಲ ಬೇಕುಗಳ ಪಟ್ಟಿ ಹೇಳಿದಳು. ಆಮೇಲೆ ಅಂಗಡಿಯವನು ಕೊಟ್ಟ ಐಟಮ್‌ಗಳು ಸರಿಯಿದೆಯಾ ಎಂದು ಮತ್ತೂಮ್ಮೆ ಚೆಕ್ ಮಾಡಿಕೊಂಡು ಹಣಕೊಟ್ಟು ಅಂಗಡಿ ಮೆಟ್ಟಿಲಿಳಿದು ಮನೆಯತ್ತ ಹೆಜ್ಜೆ ಹಾಕಿದಳು. ಅವಳ ಹೆಜ್ಜೆಗಳು ಒಂದು ನೃತ್ಯದ ಲಯದಲ್ಲಿ ಮುಂದುವರೆಯುತ್ತಿದ್ದವು.
ಲೀಲಾಳ ಪೂರ್ಣ ಹೆಸರು ಲೀಲಾವತಿ. ಲೀಲಾಳೇ ಹೇಳುವಂತೆ, ಮಿಸ್ ಲೀಲಾವತಿ ಸಿನೆಮಾ ನೋಡಿದ ಮೇಲೆ ಅದರಲ್ಲಿನ ನಾಯಕ ನಟಿಯಾಗಿ ಅಭಿನಯಿಸಿದ್ದ ಜಯಂತಿಯವರ ದೊಡ್ಡ ಅಭಿಮಾನಿಯಾಗಿದ್ದ ಅಪ್ಪ ಆ ಹೆಸರು ಇಟ್ಟಿದ್ದು. ಹಾಗೆಂದು ಅಮ್ಮ ಆಗಾಗ್ಗೆ ಸ್ವಲ್ಪ ಅಸೂಯೆಯಿಂದ ಹೇಳುತ್ತಿದ್ದರು. ಅಮ್ಮನ ಅಸೂಯೆ ಲೀಲಾಳಿಗೂ ಗೊತ್ತಿತ್ತು. ಏಕೆಂದರೆ, ಆ ನಟಿಯ ಯಾವುದೇ ಚಿತ್ರ ಟಿ.ವಿ.ಯಲ್ಲಿ ಪ್ರಸಾರವಾದರೂ ಟಿ.ವಿ. ಮುಂದೆ ಅಪ್ಪ ಮಿಸುಕಾಡದೇ ಕೂರುತ್ತಿದ್ದದ್ದನ್ನು ಲೀಲಾಳೂ ನೋಡಿದ್ದಳು. “”ಅಪ್ಪಾ, ನಂಗೆ ಜಯಂತಿ ಮೇಡಂ ಮಾಡಿದ ಯಾವುದೋ ಪಾತ್ರದ ಹೆಸರಿಡೋ ಬದಲು, ಅವರ ಹೆಸರು ಜಯಂತಿ ಅಂತಾನೇ ಅಲ್ವಾ ಅದನ್ನೇ ಇಡಬಹುದಿತ್ತಲ್ವಾ? ಏಕೆ ಇಡಲಿಲ್ಲ?” ಎಂದೂ ಕೇಳಿದ್ದಳು. ಅದಕ್ಕೆ ಅಪ್ಪ ಹಳೇ ಕನ್ನಡ ಸಿನೆಮಾಹೀರೋನ ಹಾಗೆ ಮೀಸೆಯ ಮರೆಯಲ್ಲಿ ನಸುನಕ್ಕು ಸುಮ್ಮನಾದರೆ, ಅಡುಗೆ ಮನೆಯಲ್ಲಿ ಅಮ್ಮನ ಪಾತ್ರೆಗಳು ದೊಡ್ಡ ಶಬ್ದದಲ್ಲಿ ಸಿಡಿಮಿಡಿಗುಟ್ಟುತ್ತಿದ್ದವು.
ತನಗೆ ಜನಪ್ರಿಯ ನಟಿಯೊಬ್ಬರು ಅಭಿನಯಿಸಿದ ಜನಪ್ರಿಯ ಚಿತ್ರವೊಂದರ ನಾಯಕಿಯ ಪಾತ್ರದ ಹೆಸರಿಟ್ಟಿದ್ದರೂ, ಲೀಲಾವತಿಯು ಸುಮಾರು ದೊಡ್ಡವಳಾಗೋವರೆಗೂ ಮಿಸ್ ಲೀಲಾವತಿ ಸಿನೆಮಾ ನೋಡಿರಲಿಲ್ಲ. ಆದರೂ ಆ ಚಿತ್ರದ ನಾಯಕಿಯ ಹೆಸರನ್ನು ತನ್ನ ಮಗಳಿಗೇ ಇಡಬೇಕು ಅನ್ನೋವಷ್ಟು ಅಪ್ಪನನ್ನು ಅದು ಏಕೆ ಕಾಡಿದೆ ಮತ್ತು ಹೇಗೆ ಪ್ರಭಾವಿಸಿದೆ ಅನ್ನೋದು ನೆನೆದಾಗಲೆ ಲ್ಲ ಆ ಚಿತ್ರದಲ್ಲಿ ಅಂಥಾದ್ದೇನಿದೆ ವಿಶೇಷ ಅನ್ನುವ ಕುತೂಹಲ ಮಾತ್ರ ಅವಳಿಗೆ ಬಹಳ ಕಾಡುತ್ತಿತ್ತು.
ಅವಳ ಈ ಕುತೂಹಲ ತಣಿಯಲು ಹೆಚ್ಚೇನು ಕಾಯಬೇಕಿರಲಿಲ್ಲ. ಪಿಯುಸಿಗೆಂದು ಊರಿನಿಂದ ಪಟ್ಟಣದ ಕಾಲೇಜಿಗೆ ಸೇರಿದಾಗ, ಪಟ್ಟಣದವರೇ ಕೆಲವು ಹುಡುಗಿಯರು ಲೀಲಾಗೆ ಹೊಸ ಗೆಳತಿಯರಾದರು. ಅದರಲ್ಲಿ ಹೆಚ್ಚು ಆಪ್ತಳಾದದ್ದು ಬ್ಯಾಂಕ್ ಮೇನೇಜರ್ ಮಗಳಾದ ಪ್ರಿಯಾ. ಒಂದು ಬಾರಿ ಪ್ರಿಯಾಳ ಜೊತೆ ತನ್ನ ಹೆಸರಿನ ಬಗ್ಗೆ ಮಾತನಾಡುವಾಗ, ಅಪ್ಪನ ಮೆಚ್ಚಿನ ನಟಿಯಾದ ಜಯಂತಿಯವರ ಅಭಿನಯದ ಚಿತ್ರ ಹೆಸರದು. ಆದರೆ ತಾನು ಮಾತ್ರ ಮಿಸ್ ಲೀಲಾವತಿ ಸಿನೆಮಾ ನೋಡಿಲ್ಲವೆಂದು ಹೇಳಿ ಅಲವತ್ತು ಕೊಂಡಿದ್ದಳು. ಒಮ್ಮೆ ಇವಳಿಗೆಂದೇ ಪ್ರಿಯಾಳ ಮನೆಯಲ್ಲಿ ವಿಸಿಡಿ ಹಾಕಿಸಿ ಆ ಸಿನೆಮಾ ನೋಡಿಸಿದ್ದಾಯಿತು.
ಸಿನೆಮಾ ನೋಡುತ್ತಲೇ ಲೀಲಾ ಬಹಳ ಪರವಶಳಾಗಿ ಬಿಟ್ಟಳು. ಆಹಾ! ಚಿತ್ರದಲ್ಲಿ ಆ ನಾಯಕಿಯ ಗತ್ತೇನು! ಸ್ಟೈಲೇನು! ಅವರ ಮಾಡ್ರನ್ ಉಡುಗೆಗಳೇನು ! ಆತ್ಮವಿಶ್ವಾಸವೇನು! ಲೀಲಾಳನ್ನು ತುಂಬಾ ಸಿನೆಮಾ ತುಂಬಾನೇ ಪ್ರಭಾವಿಸಿಬಿಟ್ಟಿತು.
ಸಿನೆಮಾ ನೋಡಿಯಾದ ಮೇಲೆ ಅವಕಾಶ ಸಿಕ್ಕಿದಾಗೆಲ್ಲ ಲೀಲಾ, ಜಯಂತಿಯವರು ನಟಿಸಿದ ಹಲವಾರು ಸಿನೆಮಾಗಳನ್ನು ನೋಡುತ್ತಿದ್ದಳು. ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಚಿತ್ರಗಳನ್ನು ಕತ್ತರಿಸಿ ಒಂದು ದಪ್ಪ ಲೆಡ್ಜರ್ ನಲ್ಲಿ ಅಂಟಿಸಿಕೊಳ್ಳುತ್ತಿದ್ದಳು. ತನ್ನ ಪ್ರತೀ ನೋಟ್‌ಬುಕ್ಕಿನ ಕೊನೆಯ ಪುಟದಲ್ಲಿ ಖಾಯಂ ಆಗಿ “ಅಭಿನಯ ಶಾರದೆ’ ಎಂದು ಬರೆದುಕೊಳ್ಳುತ್ತಿದ್ದಳು. ಆದರೆ, ತನ್ನ ಯಾವ ಭಾವನೆ, ಅಭಿಮಾನವೂ ಅತಿರೇಕಕ್ಕೆ ಹೋಗದಂತೆ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಳು. ಅವಳ “ಅಭಿನಯ ಶಾರದೆ’ಯ ಮೇಲಿನ ಅಭಿಮಾನವು ಗೌರವದಿಂದ ಕೂಡಿತ್ತೇ ಹೊರತು ಹುಚ್ಚಾಗಿ ಕಾಡಲಿಲ್ಲ. ಅಷ್ಟರಮಟ್ಟಿಗೆ ಸಂಯಮವಿತ್ತು.
ಹೀಗಿರುವಾಗಲೇ ಒಂದು ದಿನ ತನ್ನ ಸ್ನೇಹಿತೆಯರೊಡನೆ ಹರಟುತ್ತಿದ್ದಾಗ ಮಾತು ಸಿನೆಮಾ ಕಡೆಗೆ ಹೊರಳಿತು. ಆಗ ಒಬ್ಟಾಕೆ ಗುಂಪಿನಲ್ಲಿದ್ದವಳು, “ಏ ಲೀಲಾವತಿ, ನಿನ್ನ ಲೈಫೂ ಆ ಸಿನೆಮಾದ ಹೀರೋಯಿನ್ ಮಿಸ್. ಲೀಲಾವತಿ ರೀತಿಯಲ್ಲಿ ದುರಂತವಾಗದ ಹಾಗೆ ನೋಡ್ಕೊಳೇ” ಎಂದು ರೇಗಿಸಿದ್ರು.
ಆಗ ಲೀಲಾಗೆ ಆ ಚಿತ್ರದ ಫ್ರೆàಮ್ ಟು ಫ್ರೆಮ್ ದೃಶ್ಯಗಳು ನೆನಪಾದವು. “”ಅದೊಂದು ಸಿನೆಮಾ ಕಣೆ. ನಿರ್ದೇಶಕ ತೆಗೆದ ಹಾಗೆ ಸಿನೆಮಾ ಇರುತ್ತೆ. ಅವರು ಹೇಳಿಕೊಟ್ಟ ಹಾಗೆ ಕಲಾವಿದರು ಅಭಿನಯಿಸಬೇಕು. ಅಲ್ಲದೆ, ನಮ್ಮ ಜಯಂತಿ ಮೇಡಂ ಅದೆಷ್ಟು ಬೋಲ್ಡಾಗಿ ಅಭಿನಯಿಸಿದ್ದಾರೆ ನೋಡ್ರೇ, ನಾವು ಹೆಣ್ಮಕ್ಳು ಅವರ ಧೈರ್ಯ ನೋಡಿ ಕಲೀಬೇಕು. ಅದೇ ಕಥೇನಾ ಇಟ್ಕೊಂಡು ಈ ಕಾಲದಲ್ಲಿ ಸಿನೆಮಾ ಆಗಿ ತೆಗಿದಿದ್ರೆ ಸೂಪರ್ ಹಿಟ್ ಮೂವಿ ಆಗಿರುತ್ತಿತ್ತು ಗೊತ್ತಾ ಹಂಡ್ರೆಡ್ ಡೇಸ್ ನೋ ಡೌಟ್. ನನ್ನ ಅಭಿಪ್ರಾಯ ಹೇಳ್ಳೋದಾದ್ರೆ, ಆ ಚಿತ್ರದ ನಿರ್ದೇಶಕರು ಕಥಾ ನಾಯಕಿಯ ದಿಟ್ಟ ನಡೆಯನ್ನು ಬೆಂಬಲಿಸಬೇಕಿತ್ತು. ನಾಯಕಿಯ ಭಾವನೆ, ಸ್ವಾವಲಂಬಿ ಬದುಕನ್ನು ಮೆಚ್ಚಿಕೊಂಡು ಅವರ ಪ್ರಾಮಾಣಿಕ ಅಭಿಪ್ರಾಯವನ್ನು ಗೌರವಿಸಬೇಕಿತ್ತು. ಚಿತ್ರಕಥೆಯನ್ನು ಇನ್ನೂ ಗಟ್ಟಿಯಾಗಿ ಕಟ್ಟಬೇಕಿತ್ತು. ಆದರೆ, ಏಕೋ ಏನೋ ಅಂದಿನ ಸಮಾಜಕ್ಕೆ ಹೆದರಿ ನಾಯಕಿಯ ಬದುಕನ್ನು ದುರಂತವಾಗಿ ಚಿತ್ರಿಸಿದ್ದಾರೆ ಅನ್ಸುತ್ತೆ ಮಿಸ್ ಲೀಲಾವತಿಯನ್ನು ನಿರ್ದೇಶಕ ಏನಾದ್ರು ಗೆಲ್ಲಿಸಿಬಿಟ್ಟಿದ್ರೆ, ಈ ಸಿನೆಮಾದಿಂದ ನಮ್ಮ ಸಮಾಜ ಹಾಳಾಯ್ತು, ನಮ್ಮ ಮನೆ ಹೆಣ್ಮಕ್ಳು ಹಾಳಾದ್ರು. ಹೆಣ್ಣು ಕೆಟ್ಟ ಸಂದೇಶ ಕೊಡುವ ಸಿನೆಮಾ ಅಂತ ಜನ ದೊಡ್ಡ ಗಲಾಟೆ ಮಾಡಿಬಿಟಿ¤ದ್ರು ಗೊತ್ತಾ? ಅವೆಲ್ಲ ಬಿಡ್ರೇ, ನಮ್ಮ ಜಯಂತಿ ಮೇಡಂ ಧೈರ್ಯ ನೋಡ್ರೇ, ಅಂಥಾ ಸಬೆಕ್ಟ್ ಇರೋ ಸಿನೆಮಾದಲ್ಲಿ ಎಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಆ್ಯಕ್ಟಿಂಗ್ ನೋಡ್ರೇ… ಬೋಲ್ಡ… ಆ್ಯಂಡ್ ಬ್ಯಾಟಿಫುಲ್’ ಎಂಬ ಮಾತಿಗೆ ಅನ್ವರ್ಥವಾಗಿದ್ದಾರೆ ಅವರು ಅದರಲ್ಲಿ. ಅವರಷ್ಟು ನ್ಯಾಚುರಲ್ ಆಕೆóಸ್ ಕನ್ನಡದಲ್ಲಿ ಯಾರಿದ್ದಾರೆ? ಎಂದು ಆವೇಶದಿಂದ ಒಂದೇ ಉಸಿರಿನಲ್ಲಿ ಮಾತಾಡಿ ಆಮೇಲೊಂದಷ್ಟು ಹೊತ್ತು ಸುಧಾರಿಸಿಕೊಂಡಿದ್ದಳು.
ಹೀಗೆ ಹಳೆಯ ದಿನಗಳ ಆ ಸೊಗಸನ್ನು ಮೆಲುಕು ಹಾಕುತ್ತ, ತಾನೂ ಸಹ ಹೇಗೆ ಹಠ ಹಿಡಿದು ಓದಿ ಕಾಲೇಜು ಲೆಕ್ಚರರ್ ಆದೆ ಎಂಬುದನ್ನು ನೆನಪಿಸಿಕೊಂಡಳು ಹೆಮ್ಮೆಪಟ್ಟಳು. ಅದರ ಜೊತೆಯಲ್ಲೇ ಇನ್ನೇನು ಕೆಲವೇ ದಿನಗಳಲ್ಲಿ ಮೆಚ್ಚಿನ ಹುಡುಗನೊಡನೆ ಹಸೆಮಣೆ ಏರಿದ್ರೆ, ನಾನು ಮಿಸ್ ಲೀಲಾವತಿಯಲ್ಲ, ಮಿಸೆಸ್ ಲೀಲಾವತಿ ಆಗಿಬಿಡ್ತೀನಲ್ವಾ! ಎಂಬ ಯೋಚನೆ ಬಂದದ್ದೇ ತಡ ನಾಚಿಕೆಯ ನಗುವೊಂದು ಮುಖದಲ್ಲಿ ಹರಡಿ ಆನಂದದ ಅಲೆಯೊಂದು ಸೋಕಿದಂತಾಗಿ, ಆ ನವಿರ ಭಾವವು ಲೀಲಾಳನ್ನು ಗಾಳಿಯಲ್ಲಿ ಹಗೂರಕ್ಕೆ ತೇಲಿಸಿಕೊಂಡು ಮನೆಯ ಬಾಗಿಲಿಗೆ ತಂದುಬಿಟ್ಟವು.
ಮುಚ್ಚಿದ ಮನೆ ಬಾಗಿಲು ನೋಡಿ ಲೀಲಾ ಆಶ್ಚರ್ಯಪಟ್ಟಳು. ಯಾಕಂದರೆ, ದಿನಾ ಕಾಲೇಜಿನಿಂದ ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿರುತ್ತಿತ್ತು. ಹಳ್ಳಿಗಳಲ್ಲಿ ಇರುವಂತೆ, ನಗರದಲ್ಲಿ ಮನೆ ಬಾಗಿಲಿಗೆ ಚಿಲಕ ಹಾಕದೇ ಬಿಡುವಂತಿರಲಿಲ್ಲ. ಕಳ್ಳರ ಭಯ ಇದ್ದೇ ಇರುತ್ತಿತ್ತು. ಇದರ ಬಗ್ಗೆ ಎಷ್ಟೇ ಹೇಳಿದ್ರೂ ಅಮ್ಮ ಮಾತ್ರ, “ಸಾಯಂಕಾಲದ ಸಮಯದಲ್ಲೇ ಕಣೇ ಮಹಾಲಕ್ಷ್ಮೀ ಮನೆಗೆ ಬರೋದು. ಲಕ್ಷ್ಮೀ ಬರೋವಾಗ ಬಾಗಿಲಿಗೆ ನೀರು ಹಾಕಿ, ರಂಗೋಲಿ ಬಿಟ್ಟು, ಅರಿಸಿನ-ಕುಂಕುಮ ಹಚ್ಚಿ, ಹೊಸ್ತಿಲಿಗೆ ಎರಡು ದೀಪ ಹಚ್ಚಿಡಬೇಕು, ಆಗ ಒಂದು ಹತ್ತು ನಿಮಿಷಾನಾದ್ರೂ ತಲೆಬಾಗಿಲನ್ನು ತೆಗೆದಿರಬೇಕು ಕಣೇ, ಆಮೇಲೆ ಬೇಕಾದ್ರೆ ನೀನು ಭದ್ರವಾಗಿ ಮುಚ್ಚಿಕೋ’ ಅಂತ ಹೇಳ್ತಿದ್ದರು. “ಏ ಬಿಡಮ್ಮಾ, ನನ್ನ ಪಾಲಿಗೆ ನೀವೇ ಆ ಲಕ್ಷ್ಮೀ ನಿಮಗೆ ನಾನೇ ಮಹಾಲಕ್ಷ್ಮೀ’ ಎಂದು ಆಗಾಗ್ಗೆ ಲೀಲಾಳೂ ಅಮ್ಮನನ್ನು ರೇಗಿಸುತ್ತಿದ್ದಳು. “ಹೂ ಕಣೇ, ನೀನೇ ನಮ್ಮನೆ ಲಕ್ಷ್ಮೀ, ಸರಸ್ವತಿ, ಮಾಕಾಳಿ ಎಲ್ಲಾ’ ಎಂದು ಅವಳಮ್ಮನೂ ಅವಳ ಜೊತೆ ಸೇರಿಕೊಂಡು ಮನಸಾರೆ ನಗುತ್ತ ಹಗುರವಾಗುತ್ತಿದ್ದರು. ಆದರೂ ಸಂಜೆ ಮಾತ್ರ ದೀಪ ಹಚ್ಚಿ ಬಾಗಿಲು ತೆರೆದಿಡೋರು. ಇವತ್ತೇಕೋ ಮುಂಬಾಗಿಲು ಮುಚ್ಚಿದೆಯಲ್ಲ, ಎಂದು ಆಶ್ಚರ್ಯಪಡುತ್ತ ಬಾಗಿಲು ದೂಡಿ ನೋಡಿದಳು. ಬಾಗಿಲು ತೆರೆಯಲಿಲ್ಲ.
ಅಮ್ಮನಿಗೆ ಅಪ್ಪ ಸತ್ತಾಗಿನಿಂದ ಬಿ. ಪಿ, ಶುಗರ್ ಶುರುವಾಗಿತ್ತು. ಆಗಾಗ್ಗೆ ಅವು ನಿಯಂತ್ರಣ ತಪ್ಪಿ ಏರುಪೇರಾಗಿ ತಾಪತ್ರಯವಾಗುತ್ತಿತ್ತು. ಒಮ್ಮೆ ಪ್ರಜ್ಞೆತಪ್ಪಿಯೂ ಬಿದ್ದಿದ್ದರು. ಆಗಿನಿಂದ ಒಬ್ಬರೇ ಇರುವಾಗ ಯಾವ ಬಾಗಿಲೂ ಹಾಕಬಾರದೆಂದು ಲೀಲಾಳೇ ಹೇಳಿದ್ದಳು. ಮುಖ್ಯವಾಗಿ ಬಚ್ಚಲು ಹಾಗೂ ಟಾಯ್ಲೆಟ್ ಒಳಗಿರುವಾಗ ಚಿಲಕವನ್ನು ಹಾಕಿಕೊಳ್ಳಬಾರದೆಂದು, “”ಮೇನ್ ಡೋರಿಗೆ ಒಳಗಿಂದ ಚಿಲಕ ಹಾಕಬೇಡ. ಬೇಕಿದ್ರೆ ಒಳಗಿಂದ ಲಾಕ್ ಮಾಡಿರು. ನನ್ನ ಹತ್ತಿರಾನೂ ಮತ್ತೂಂದು ಕೀ ಇರೋದ್ರಿಂದ ಯಾವಾಗ ಬಂದ್ರೂ ನಾನೇ ಬಾಗಿಲು ತೆಗೆದುಕೊಂಡು ಬರ್ತೀನಿ. ಬೇರೆ ಯಾರಾದ್ರೂ ಬಂದು ಕಾಲಿಂಗ್ ಬೆಲ್ ಮಾಡಿದ್ರೆ, ಕಿಟಕೀಲಿ ನೋಡಿ ಬಾಗಿಲು ತೆಗಿ” ಅಂತಾನೂ ಹೇಳಿದ್ದಳು. ಇವತ್ತೂ ಸಹ ಬಾಗಿಲಿಗೆ ಡೋರ್ ಲಾಕ್ ಹಾಕಿದ್ದರಿಂದ ತನ್ನ ಬಳಿಯಿದ್ದ ಮತ್ತೂಂದು ಕೀ ಬಳಸಿ ಮನೆ ಒಳಗೆ ಹೋದಳು.
ಎಂದಿನಂತೆ, “ಅಮ್ಮಾ…. ಕಾಫಿ..?’ ಎಂದು ಕೂಗುತ್ತಾ ಡೈನಿಂಗ್ ಟೇಬಲಿನ ಮೇಲೆ ತನ್ನ ಕೈಚೀಲಗಳನ್ನು ಇಟ್ಟಳು. ಹೊರಗಿಂದ ಬಂದ ತಕ್ಷಣ ಸೀದಾ ಅಡುಗೆ ಮನೇಗೆ ಬರಬೇಡವೇ ಎಂದು ದಿನಾ ಬೈಸಿಕೊಳ್ಳೋದು ಏಕೆಂದುಕೊಂಡು, ಕೈಕಾಲು ಮುಖ ತೊಳೆಯಲು ಬಚ್ಚಲು ಮನೆಗೆ ಹೋದಳು.
ಅಡುಗೆ ಮನೆಯಿಂದ ಅಮ್ಮನಿಂದ ಯಾವ ಉತ್ತರವೂ ಬರಲಿಲ್ಲ. ತನಗೇ ಕೇಳಿಸಿಲ್ಲವೇನೋ ಅಂದುಕೊಂಡು ಮತ್ತೆ “ಮಾ… ಕಾಫೀ..’ ಎಂದು ರಾಗವಾಗಿ ಕೂಗಿ ಬಚ್ಚಲು ಮನೆ ಬಾಗಿಲು ಮುಚ್ಚಿಕೊಂಡಳು.
ಮುಖಕ್ಕೆ ಸೋಪು ಹಚ್ಚುವಾಗ ಬೆಳಗ್ಗೆ ಸ್ಟಾಫ್ ರೂಮಿನಲ್ಲಿ, ತರಗತಿಯಲ್ಲಿ ನಡೆದ ಒಂದೆರಡು ತಮಾಷೆಯ ಪ್ರಸಂಗಗಳು ನೆನಪಾಗಿ ತುಟಿಯಂಚಲ್ಲಿ ನಗು ಮೂಡಿ, ಅಮ್ಮನೊಡನೆ ಅದನ್ನೆಲ್ಲ ಬೇಗ ಹೇಳಬೇಕು, ಆಮೇಲೆ ಶಾರದಾ ಆಂಟಿಗೆ ಕೊಟ್ಟಿದ್ದ ಹೊಸ ಬ್ಲೌಸ್ ಹೊಲಿದ್ರಂತಾ, ವಿಚಾರಿಸಿದ್ರಾ ಕೇಳಬೇಕು ಎನ್ನುತ್ತಾ ಸರಸರ ಮುಖ ತೊಳೆದು ಹೊರಬಂದಳು.
ಹೊರಗೆ ಬಂದ ಲೀಲಾಳಿಗೆ ಬಿಸಿಬಿಸಿ ಹಬೆಯಾಗಿ ಗಾಳಿಯಲ್ಲಿ ತೇಲಿಬರಬೇಕಿದ್ದ ಕಾಫಿಯ ಘಮಘಮ ಮೂಗಿಗೆ ತಟ್ಟಲಿಲ್ಲ. ಒಳಗೆ ಅಡುಗೆ ಮನೆಯಲ್ಲೂ ಯಾವುದೇ ಶಬ್ದವಿಲ್ಲ. ಅಮ್ಮ ಬಹುಶಃ ಹಿತ್ತಲಿನಲ್ಲಿ ಕುಳಿತು ಅವರೇ ಕಾಳು ಬಿಡಿಸುತ್ತಿರಬೇಕು. ಊರಿಂದ ಮೊನ್ನೆ ಬಂದಿದ್ದ ಅಮ್ಮನ ತಮ್ಮ ತಂದಿದ್ದ ಒಂದೈದು ಕೆ.ಜಿ. ಸೋನೆ ಅವರೆಕಾಯಿ ಬಿಡಿಸ್ತಿರಬೇಕು. ರಾಸಾಯನಿಕ ಹಾಕದೇ ಬೆಳೆದಿರೋದ್ರಿಂದ ಹುಳ ಜಾಸ್ತಿ ಇರುತ್ತೆ ಅಂತೆಳಿ ಅಮ್ಮ ಆ ಚೀಲವನ್ನು ಮನೆಯ ಹಿತ್ತಲಿನಲ್ಲೇ ಹಾಕಿಸಿ ಕಾಯಿ ಹರವಿದ್ದರು.
ಲೀಲಾ ಹಿತ್ತಲಿಗೆ ಹೋಗಿ ನೋಡಿದರೆ ಅಲ್ಲೂ ಅಮ್ಮ ಕಾಣಲಿಲ್ಲ! ದಿಕ್ಕು ತಪ್ಪುತಿದ್ದ ಹೃದಯ ಬಡಿತವನ್ನು ಸಾವರಿಸಿಕೊಂಡು , ತಕ್ಷಣ ಹಿತ್ತಲಿನ ಟಾಯ್ಲೆಟ್ ಕಡೆಗೆ ಓಡಿ ನೋಡಿದು. ಬಾಗಿಲು ಹಾಕಿರಲಿಲ್ಲ. ದೂಡಿದು.. ಅಮ್ಮ ಅಲ್ಲಿರಲಿಲ್ಲ. ಮನೆ ಒಳಗೆ ಮತ್ತೂಮ್ಮೆ ಹುಡುಕಿ ಹೊರಗೆ ಬಂದು ರಾಧಾ ಆಂಟಿ ಮನೆ, ಸವಿತಕ್ಕನ ಮನೆ ವಠಾರ, ಸುಭದ್ರಮ್ಮ ಆಂಟಿ ಕಂಪೌಂಡ್ ಕಡೆವರೆಗೂ ಹೋಗಿನೋಡಿ ಎಲ್ಲೂ ಅಮ್ಮ ಕಾಣಿಸಿರಲಿಲ್ಲ. ಸೊಪ್ಪಿನವನ ತಳ್ಳು ಗಾಡಿ ನಿಲ್ಲಿಸಿಕೊಂಡು ಚೌಕಾಶಿ ಮಾಡ್ತಿದ್ದ ಸುಮಿತ್ರಮ್ಮನವರನ್ನ ಅಮ್ಮನ್ನ ನೋಡಿದ್ರಾ ಆಂಟಿ ಅಂತ ಕೇಳಿದು. ಇಲ್ಲಮ್ಮ, ನಾನು ಈಗ್ಲೆà ಮನೆಯಿಂದ ಹೊರಗೆ ಬಂದದ್ದು ನೋಡಿಲ್ಲ. ಯಾಕೆ ಮನೇಲಿಲ್ವಾ ಎಂದವರ ಮರು ಪ್ರಶ್ನೆಗೆ ಉತ್ತರಿಸದೇ…
ಪುನಃ ಮನೆ ಒಳಗೆ ಬಂದ ಲೀಲಾ “ಈ ಅಮ್ಮ ಮೊಬೈಲೂ ಇಟ್ಕೊàಳಲ್ಲ. ಎಮರ್ಜೆನ್ಸಿಗೆ ಬೇಕಾಗುತ್ತೆ ಒಂದಿರಲಿ ಚಿಕ್ಕದ್ದು ಅಂದ್ರೂ ಲ್ಯಾಂಡ್‌ಲೈನಿಗೇ ಮಾತಾಡು’ ಅಂತಿರ್ತಾರೆ. ಹೊರಗಡೆ ಹೋಗ್ತಿರ್ತೀಯ ಬೇಕಾಗತ್ತೆ ಅಂತ ಎಷ್ಟು ಸಲ ಹೇಳಿದ್ರೂ ಕೇಳಲ್ಲ. ಛೇ.. , ಯಾರ ಜೊತೆ ಹೋಗಿದ್ದಾರೆ ಅಂತ ಕಂಡುಹಿಡೀಲಿ ಈಗ? ಲೀಲಾಳ ಮನಸ್ಸಿಗೆ ತಳಮಳವಾಯಿತು.
ಅಮ್ಮನ ಎಲ್ಲಾ ಸ್ನೇಹಿತೆಯರನ್ನು ನೆನಪು ಮಾಡಿಕೊಳ್ಳುತ್ತ ಹೋದಳು. ಕಡೆಗೆ ಅಮ್ಮ ಆಗಾಗ್ಗೆ ಹೋಗುವ ಸಾವಿತ್ರಿ ಆಂಟಿ ಮನೆಗೆ ಫೋನ್ ಮಾಡಿ ನೋಡೋಣ ಎಂದು ಅವರ ನಂಬರಿಗೆ ಡಯಲ್ ಮಾಡಿದಳು.
ಆ ಕಡೆ ರಿಸೀವರ್ ತೆಗೆದುಕೊಂಡ ಸಾವಿತ್ರಿ ಆಂಟಿಯ ಮಗಳು ರಾಧಿಕಾ, “”ಹಲೋ ಯಾರು ಹೇಳಿ” ಎಂದಳು.””ರಾಧಿಕಾ, ನಾನು ಲೀಲಾ. ನಮ್ಮಮ್ಮ ಬಂದಿದ್ದಾರ?” ಅಂತ ಕೇಳಿದಳು. “”ಹೂಂ ಆಂಟಿ, ಆಗಲೇ ಬಂದಿದ್ರು. ನಮ್ಮಮ್ಮನ ಜೊತೆ ವನಿತಾ ಲೇಡಿಸ್ ಕ್ಲಬ್ ನಲ್ಲಿ ಇವತ್ತಿನ ತಿಂಗಳ ಅತಿಥಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಯಾಕೆ ನೀವು ಹೋಗಲಿಲ್ವಾ ? ಸಪೆìçಸ್ ಆಗ್ತಿದೆ ನಂಗೆ! ಗೆಸ್ ಮಾಡಿ ಇವತ್ತಿನ ಗೆ… ಯಾರೂಂತ!” ರಾಧಿಕಾ ಉತ್ಸಾಹದ ದನಿಯಲ್ಲಿ ಕೇಳ್ತಿದ್ರೆ ಲೀಲಾಳಿಗೆ ಅಮ್ಮ ಎಲ್ಲಿ ಅನ್ನೋ ಪ್ರಶ್ನೆಗೆ ಉತ್ತರ ದೊರೆತ ಸಮಾಧಾನವಾದ್ರೂ, ಮರುಕ್ಷಣವೇ ಗೆಸ್ ಮಾಡಿ ಗೆÓr… ಯಾರೂಂತ ಎಂಬುದನ್ನು ಕೇಳಿ ಕಣ್ಣು ಗೋಡೆಗೆ ತೂಗು ಹಾಕಿದ್ದ ಕ್ಯಾಲೆಂಡರಿನ ಕಡೆಗೆ ನೋಡಿತು. ಮನಸ್ಸು ಟುಸ್Õ ಎಂದು ಊದಿದ ಬಲೂನು ಗಾಳಿ ಬಿಡುತ್ತಾ ಸೊರಗಿದ ಹಾಗೆ ಬಾಡಿಹೋಯ್ತು. ಅಪಾರ ನಿರಾಸೆಯಿಂದ ಕರೆ ಬಂದ್ ಮಾಡಿ ಸೋಫಾ ಮೇಲೆ ಕುಸಿದಳು.
ಬಹಳ ಹಿಂದೆಯೇ “ಲೇಡಿಸ್ ಕ್ಲಬ್’ ವಾಟ್ಸಪ್ ಗ್ರೂಪಲ್ಲಿ ತಿಂಗಳ ಅತಿಥಿ’ ಕಾರ್ಯಕ್ರಮಕ್ಕೆ ಹೊರಡಿಸಲಾದ ಆಹ್ವಾನ ಪತ್ರಿಕೆಯಲ್ಲಿ ಸುಂದರ ನಗೆಯ ನಟಿ ಜಯಂತಿಯವರ ಫೋಟೋ ಹಾಕಿ ಮುಂದಿನ ತಿಂಗಳ ನಮ್ಮ ವಿಶೇಷ ಅತಿಥಿ, “ಅಭಿನಯ ಶಾರದೆ ಜಯಂತಿ!’ ತಪ್ಪದೇ ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಿರಿ. ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಿರಿ ಎಂದು ಬಂದ ಸಂದೇಶದ ನೆನಪಾಯಿತು. ನಾನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬಾರದ, ನನಗೆ ಮಿಸ್ ಆಗಬಾರದ ಪ್ರೋಗ್ರಾಮ್ ಅದು. ಜಯಂತಿ ಮೇಡಂ ಅವರಲ್ಲಿ ನನ್ನ ಹೆಸರಿನ ಪುರಾಣ ಹೇಳಿಕೊಳ್ಳಬೇಕೆಂದು ಅದೆಷ್ಟು ಬಯಸಿ¨ªೆ! ಅದರ ಪೂರ್ವತಯಾರಿಯೆಲ್ಲ ಆಗಿತ್ತಲ್ಲ, ಒಡಲಲ್ಲಿ ಬಿಳಿ ರೇಷ್ಮೆಯ ಬಂಗಾರದ ಜರಿ ಬಾರ್ಡರ್ ಸೀರೆ, ಮ್ಯಾಚಿಂಗ್ ಕೈ ಬಳೆ… ಛೇ ಎಂದು ಪೇಚಾಡುತ್ತ ಈಗೇನಾದ್ರೂ ಮನೆಯಿಂದ ಹೊರಟರೆ, ಪ್ರೋಗ್ರಾಮ್ ಅಟೆಂಡ್ ಮಾಡಬಹುದಾ ಎಂದು ಗಡಿಯಾರದತ್ತ ನೋಡಿದಳು.
ಓ…! ಆಗಲೇ ಎಂಟರ ಸಮೀಪಕ್ಕೆ ಚಿಕ್ಕಮುಳ್ಳು ಬಂದಿದೆ. ಅಮ್ಮನ ಹುಡುಕುವ ಗಡಿಬಿಡಿಯಲ್ಲಿ ಇಷ್ಟೊಂದು ಹೊತ್ತಾಗಿದೆಯಾ! ಈಗ ಹೋದರೂ ಪ್ರಯೋಜನವಿಲ್ಲ, ಪ್ರೋಗ್ರಾಮ್ ಮುಗಿದು ಎಲ್ಲರೂ ಅವರವರ ಮನೆ ಸೇರುತ್ತಿರುತ್ತಾರೆ ಅಂದುಕೊಂಡಳು.
ಅಷ್ಟರಲ್ಲಿ ಲೀಲಾಳ ಅಮ್ಮ, “”ನಮ್ಮ ಲೀಲಾನೂ ಜಯಂತಿ ಮೇಡಂನ ಕಣ್ಣೆದುರು ನೋಡ್ಬೇಕು, ಅವರ ಜೊತೆ ಮಾತಾಡ್ಬೇಕು ಅಂತಿದು, ಇವತ್ತೇ ಕಣೇ ಪ್ರೋಗ್ರಾಮ್ ಇರೋದು ಅಂತ ಬೆಳಿಗ್ಗೆ ಹೇಳಿ ಜ್ಞಾಪಿಸೋದು ಮರೆತೋಯ್ತು ಕಣ್ರೀ, ಪಾಪ ಫೋನೂ ಕಳ್ಕಂಬುಟ್ಟವೆ. ಅವಳೂ ಬಂದಿದ್ರೆ ಚೆನ್ನಾಗಿರ್ತಿತ್ತು ಅಲ್ವಾ. ಅವರಂಗೆ ಸೀರೇ ಉಟ್ಕೊಬೇಕು ಅಂತ ಹೊಸ ಬ್ಲೌಸ್ ಬೇರೆ ವಲಿಸ್ಕಂಡಿದು…” ಎಂದು ಸಂತಾಪ ಪಡುತ್ತ ಸಾವಿತ್ರಿಯವರ ಜೊತೆ ಒಳಗೆ ಬಂದರು. ಇಬ್ಬರೂ ಮನೆಗೆ ಬಂದದ್ದಕ್ಕೆ ಸಾಕ್ಷಿಯಾಗಿ ಮನೆಯ ಬಾಗಿಲು ಕಿರ್ರನೆ ಶಬ್ದಮಾಡುತ್ತ ತೆರೆದುಕೊಂಡಿತು.
ವಸುಂಧರಾ ಕೆ.ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.