ನಾಮಕೋಟಿಗಳನ್ನು ಮೀಟುತ್ತಿದೆ ವಾಟ್ಸಾಪ್
Team Udayavani, Jan 8, 2017, 3:45 AM IST
ಸ್ಥಾಪನೆಯಾದ ಐದೇ ವರ್ಷಗಳ ನಂತರ, 2014ರಲ್ಲಿ ಫೇಸ್‌ಬುಕ್ ಎಂಬ ದೈತ್ಯ ಕಂಪೆನಿ ವಾಟ್ಸಾಪನ್ನು 19.3 ಶತಕೋಟಿ ಡಾಲರುಗಳಿಗೆ ಖರೀದಿಸಿದಾಗ ಉದ್ಯಮದ ದಿಗ್ಗಜರೆಲ್ಲ ಫೇಸ್‌ಬುಕ್ಕಿನ ವ್ಯವಹಾರ ಜ್ಞಾನವನ್ನು ಸಾರ್ವಜನಿಕವಾಗಿಯೇ ಹೀಗಳೆದಿದ್ದರು. ಕೇವಲ ಒಂದು ಸಂದೇಶವಾಹಕ ಆಪ್‌ಗಾಗಿ ಕೋಟಿ ಕೋಟಿ ಸುರಿದು ಜಗತ್ತಿನಾದ್ಯಂತ ಟೆಕ್ ಮತ್ತು ಹಣಕಾಸು ತಜ್ಞರನ್ನೆಲ್ಲ ಫೇಸ್‌ಬುಕ್ ಕಂಪೆನಿ ಬೆಚ್ಚಿಬೀಳಿಸಿತ್ತು. ಇಂದು ನೂರಕ್ಕೂ ಹೆಚ್ಚಿನ ದೇಶಗಳ ಜನ ಹತ್ತಾರು ಭಾಷೆಗಳಲ್ಲಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿ ತಿಂಗಳ ಗಣತಿಯ ಪ್ರಕಾರ ವಿಶ್ವದಾದ್ಯಂತ ಒಂದು ಶತಕೋಟಿ ಸ್ಮಾರ್ಟುಫೋನುಗಳಲ್ಲಿ ಜನ ಈ ಸೌಲಭ್ಯವನ್ನು ಅಳವಡಿಸಿಕೊಂಡಿದ್ದಾರೆ. ಭಾರತದಲ್ಲೇ ಸುಮಾರು ಏಳು ಕೋಟಿ ಜನರು ವಾಟ್ಸಾಪನ್ನು ನಿತ್ಯವೂ ಉಪಯೋಗಿಸುತ್ತಿದ್ದಾರೆ ಎಂದು ಜರ್ಮನಿಯ ಪ್ರಮುಖ ಸಂಖ್ಯಾಶಾಸ್ತ್ರ ಪೋರ್ಟಲ್ “ಸ್ಟಾಟಿಸ್ಟಾ’ ವರದಿ ಮಾಡಿದೆ.
ನೀನು ವಾಟ್ಸಪ್‌ನಲ್ಲಿದ್ದೀಯೇನು?”
ದೀಪಾವಳಿಗೆ ಶುಭಾಶಯ ಹೇಳಲು ಕರೆ ಮಾಡಿದಾಗ ನಮ್ಮ ಗೋಕರ್ಣದ ದೊಡ್ಡಮ್ಮ ಹೀಗೆಂದು ಕೇಳಿ ನನ್ನನ್ನು ಬೆಚ್ಚಿಬೀಳಿಸಿಬಿಟ್ಟರು. ಕೆಲವೇ ವರ್ಷಗಳ ಹಿಂದೆ ಹೊಸತಾಗಿ ಮೊಬೈಲು ಫೋನುಗಳು ಬಳಕೆಗೆ ಬಂದಾಗ ಅವರು ಚಿಕ್ಕ ಫೋನನ್ನು ಒಮ್ಮೆ ಕಿವಿಯ ಹತ್ತಿರವೂ ಇನ್ನೊಮ್ಮೆ ಬಾಯ ಹತ್ತಿರವೂ ತೆಗೆದುಕೊಂಡು ಮಾತನಾಡುತ್ತ ಪಡುತ್ತಿದ್ದ ಪಡಿಪಾಟಲನ್ನು ನೆನೆದು ನನ್ನ ಮನಸ್ಸು ತುಂಬಿ ಬಂತು. ಮನೆಯವರೆಲ್ಲ ಒಂದೊಂದು ಮೊಬೈಲು ಫೋನು ಕೊಂಡರೂ ತಮಗೆ ಮಾತ್ರ ಮನೆಯ ಫೋನೇ ಮಾತನಾಡಲು ಸಲೀಸಾಗುತ್ತದೆ ಎಂದು ಅದೆಷ್ಟೋ ವರ್ಷ ಲ್ಯಾಂಡ್‌ಲೈನನ್ನು ಹಟತೊಟ್ಟು ಅವರು ಇರಿಸಿಕೊಂಡಿದ್ದುದೂ ನೆನಪಾಯಿತು.
ಹೊಸತಾಗಿ ಕೆಲಸಕ್ಕೆ ಸೇರಿದ ಅವರ ದೊಡ್ಡಮಗ ಆಗಷ್ಟೇ ಅವರಿಗೊಂದು ಸ್ಮಾರ್ಟ್‌ಫೋನ್ ತೆಗೆಸಿಕೊಟ್ಟಿದ್ದನಂತೆ. ನಮ್ಮ ತಾಯಿಗೆ ದೂರದ ಅಕ್ಕನಾದ ಈಕೆ ಚಿಕ್ಕಂದಿನಿಂದಲೂ ನನ್ನನ್ನು ಎತ್ತಾಡಿಸಿದ ಸಲಿಗೆಯಿಂದ ಇನ್ನೊಮ್ಮೆ ಗದರಿದರು.
“”ಇಲ್ಲದಿದ್ದರೆ ಬೇಗ ಸೇರಿಕೊಂಡುಬಿಡು. ಸುಮ್ಮನೇ ಯಾಕೆ ಅಷ್ಟು ದೂರದಿಂದ ಫೋನು ಮಾಡಿ ದುಡ್ಡು ದಂಡ ಮಾಡುತ್ತೀ? ವಾಟ್ಸಾಪಿದ್ದರೆ ಯಾವಾಗ ಬೇಕಿದ್ರೂ ವೀಡಿಯೋ ಚಾಟ್ ಮಾಡಬಹುದು”.
ಆಗ ನಾನಿನ್ನೂ ವಾಟ್ಸಾಪನ್ನು ನನ್ನ ಫೋನಿನಲ್ಲಿ ಅಳವಡಿಸಿರಲಿಲ್ಲ. ಹೊಸ ಆಪ್‌ಗ್ಳು ಬಂದ ಹಾಗೆಯೇ ಅವುಗಳ ರಗಳೆಯೂ ಹೆಚ್ಚು ಎನ್ನುವುದು ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ನಾನು ಕಂಡುಕೊಂಡ ಅನುಭವವಾಗಿತ್ತು. ಕೊನೆಗೂ ದೊಡ್ಡಮ್ಮನ ದೆಸೆಯಿಂದಲೇ ನಾನು ವಾಟ್ಸಾಪಿಗೆ ಸೇರುವಂತಾಯಿತು. ಹಾಗೆಯೇ ಅವರು ರಂಗೋಲಿಗೆಂದು ಇಟ್ಟ ಚುಕ್ಕೆಗಳನ್ನು ಸೇರಿಸಿ ಆಧುನಿಕ ಚಿತ್ರಗಳನ್ನು ಬರೆದು ಅದರ ಫೋಟೋ ಕಳಿಸುವುದೂ, ಗೋಕರ್ಣದಂಥ ಪುಟ್ಟ ಊರಿನಲ್ಲಿಯೂ ಎಲ್ಲೆಲ್ಲಿಂದಲೋ ಹುಡುಕಿ ತಂದು ಇಟಾಲಿಯನ್ ಪಾಸ್ತಾ ತಯಾರಿಸಿದ ವೀಡಿಯೋ ಹಂಚಿಕೊಳ್ಳುವುದೂ ಶುರುವಾಯಿತು.
ಇಲ್ಲಿ ಒಂದು ಕುತೂಹಲಕರವಾದ ಅಂಶವನ್ನು ಗಮನಿಸಬೇಕು. ಫೇಸ್‌ಬುಕ್, ಜೀಮೇಲ್ ಮುಂತಾದ ಅಂತಜಾìಲದ ಸೌಲಭ್ಯಗಳನ್ನು ಎಳೆಯರ ಸಹಾಯ ಪಡೆದು ಉಪಯೋಗಿಸುವ ಹಿರಿಯರು ವಾಟ್ಸಾಪನ್ನು ಮಾತ್ರ ತಾವೇ ಆತ್ಮವಿಶ್ವಾಸದಿಂದ ನಿರ್ವಹಿಸುತ್ತಿದ್ದಾರೆ. ಇದು ಆಕಸ್ಮಿಕವಂತೂ ಖಂಡಿತ ಅಲ್ಲ.
ಶುರುವಾದದ್ದೆಲ್ಲಿ ?
2009ರ ಫೆಬ್ರವರಿಯಲ್ಲಿ ಕ್ಯಾಲಿಫೋರ್ನಿಯಾದ ಪುಟ್ಟ ಆಫೀಸೊಂದರಲ್ಲಿ ಅಂತಜಾìಲದ ತರಂಗಗಳ ಗುಂಟ ವಿಶ್ವದಾದ್ಯಂತ ಸಂದೇಶ ಕಳುಹಿಸುವ ಗುರಿಯಿಟ್ಟುಕೊಂಡು, “ನೋ ಆಡ್ಸ್ , ನೋ ಗೇಮ್ಸ್ , ನೋ ಗಿಮಿಕ್ಸ್’ ಎಂಬ ಏಕಸೂತ್ರವನ್ನಿಟ್ಟುಕೊಂಡು ಪ್ರಾರಂಭವಾದ ವಾಟ್ಸಾಪಿನಲ್ಲಿ ಉಳಿದ ಸಾಮಾಜಿಕ ತಾಣಗಳಂತೆ ಜಾಹೀರಾತುಗಳು ಎಲ್ಲೆಂದರಲ್ಲಿ ಕಣ್ಣಿಗೆ ಬೀಳುವುದಿಲ್ಲ. ಹಾಗೆಯೇ ವಾಟ್ಸಾಪಿನ ಆವರಣ ಕೂಡ ಬಳಸುವವರಿಗೆ ತುಂಬಾ ಸರಳವಾಗಿರುವುದೂ ಹಿರಿಯರ ನಡುವೆ ಈ ಸಂಪರ್ಕ ಕೊಂಡಿಯ ಗೆಲುವಾಗಿರಬಹುದು ಅನ್ನಿಸುತ್ತದೆ.
ಇದು ವಲಸೆಗಾರರ ನವಯುಗ. ಹಿಂದೆಂದೂ ಕಾಣದಷ್ಟು ವೇಗದಲ್ಲಿ ಇಂದು ಜನ ವಿದ್ಯಾಭ್ಯಾಸ, ಉದ್ಯೋಗ, ಶಾಂತಿ, ಅವಕಾಶಗಳನ್ನು ಅರಸಿ ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಿರುವ ಪ್ರಮಾಣ ಹೆಚ್ಚಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕಳೆದ ಡಿಸೆಂಬರ್ ತಿಂಗಳಲ್ಲಿ ವರದಿ ಮಾಡಿದ ಪ್ರಕಾರ ಸಿರಿಯಾದಿಂದ ಯೂರೋಪಿಗೆ ವಲಸೆ ಬರುವ ಲಕ್ಷಾಂತರ ವಲಸಿಗರಿಗೆ ವಾಟ್ಸಾಪ್ ಒಂದು ಅತಿಮುಖ್ಯ ಸಂಪರ್ಕ ಕೊಂಡಿಯಾಗಿದೆಯಂತೆ. ಹೊಸ ದೇಶದಲ್ಲಿ ಬಂದಿಳಿದಾಗ ವಾಟ್ಸಾಪ್‌ನ ಹಲವು ಗುಂಪುಗಳು ಅವರ ನೆರವಿಗೆ ಧಾವಿಸುತ್ತವಂತೆ. ಜೊತೆಗೆ ದೂರದೇಶದ ಸಂಬಂಧಿಕರಿಗೆ ತಮ್ಮ ಕ್ಷೇಮಸಮಾಚಾರವನ್ನು ತಕ್ಷಣವೇ ತಿಳಿಸುವುದು ಈ ವಲಸಿಗರಿಗೆ ವಾಟ್ಸಾಪ್ ಸೌಲಭ್ಯದಿಂದಲೇ ಸುಲಭ ಸಾಧ್ಯವಾಗಿದೆ ಎಂದು ಪತ್ರಕರ್ತ ಫರ್ಹಾದ್ ಮಾಂಜೂ ತಮ್ಮ ಈ ಲೇಖನದಲ್ಲಿ ದಾಖಲಿಸಿದ್ದಾರೆ.
ವಾಟ್ಸಪ್ಪೂ ಫೇಸ್‌ಬುಕ್ಕೂ
ಸ್ಥಾಪನೆಯಾದ ಐದೇ ವರ್ಷಗಳ ನಂತರ 2014ರಲ್ಲಿ ಫೇಸ್‌ಬುಕ್ ಎಂಬ ದೈತ್ಯ ಕಂಪೆನಿ ವಾಟ್ಸಾಪನ್ನು 19.3 ಶತಕೋಟಿ ಡಾಲರುಗಳಿಗೆ ಖರೀದಿಸಿದಾಗ ಉದ್ಯಮದ ದಿಗ್ಗಜರೆಲ್ಲ ಫೇಸ್‌ಬುಕ್ಕಿನ ವ್ಯವಹಾರ ಜಾnನವನ್ನು ಸಾರ್ವಜನಿಕವಾಗಿಯೇ ಹೀಗಳೆದಿದ್ದರು. ಕೇವಲ ಒಂದು ಸಂದೇಶವಾಹಕ ಆಪ್‌ಗಾಗಿ ಕೋಟಿ ಕೋಟಿ ಸುರಿದು ಜಗತ್ತಿನಾದ್ಯಂತ ಟೆಕ್ ಮತ್ತು ಹಣಕಾಸು ತಜ್ಞರನ್ನೆಲ್ಲ ಫೇಸ್‌ಬುಕ್ ಕಂಪೆನಿ ಬೆಚ್ಚಿಬೀಳಿಸಿತ್ತು. ಇದು ಜಾಣ ನಿರ್ಧಾರವಲ್ಲ ಎಂಬುದೂ ಕೆಲವರ ಅಭಿಪ್ರಾಯವಾಗಿತ್ತು.
ಆದರೆ, ಅಂತರ್ಜಾಲದ ಏಕೈಕ ಸೌಲಭ್ಯವಿರಿಸಿಕೊಂಡು ದೇಶ-ದೇಶಗಳ ಜನರ ನಡುವೆ ಸಂವಹನ ಕೊಂಡಿಯನ್ನು ಸ್ಥಾಪಿಸಿರುವ ವಾಟ್ಸಾಪ್ ಇಂದು ಫೇಸ್‌ಬುಕ್ ಕಂಪೆನಿಯ ಕಣ್ಮಣಿಯಾಗಿದೆ. ಇಂದು ನೂರಕ್ಕೂ ಹೆಚ್ಚಿನ ದೇಶಗಳ ಜನ ಹತ್ತಾರು ಭಾಷೆಗಳಲ್ಲಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕಳೆದ ವರ್ಷ ಫೆಬ್ರುವರಿ ತಿಂಗಳ ಗಣತಿಯ ಪ್ರಕಾರ ವಿಶ್ವದಾದ್ಯಂತ ಒಂದು ಶತಕೋಟಿ ಸ್ಮಾರ್ಟುಫೋನುಗಳಲ್ಲಿ ಜನ ಈ ಸೌಲಭ್ಯವನ್ನು ಅಳವಡಿಸಿಕೊಂಡಿದ್ದಾರೆ. ಭಾರತದಲ್ಲೇ ಸುಮಾರು ಏಳು ಕೋಟಿ ಜನರು ವಾಟ್ಸಾಪನ್ನು ನಿತ್ಯವೂ ಉಪಯೋಗಿಸುತ್ತಿದ್ದಾರೆ ಎಂದು ಜರ್ಮನಿಯ ಪ್ರಮುಖ ಸಂಖ್ಯಾಶಾಸ್ತ್ರ ಪೋರ್ಟಲ್ ಸ್ಟಾಟಿಸ್ಟಾ ವರದಿ ಮಾಡಿದೆ.
ನಡೆಯುವುದು ಹೇಗೆ?
ಅಂತರ್ಜಾಲ ಸಂಪರ್ಕಕ್ಕಾಗಿ ನಾವು ವ್ಯಯಿಸುವ ಸಣ್ಣ ಮೊತ್ತವನ್ನು ಹೊರತುಪಡಿಸಿದರೆ ಈ ಸೌಲಭ್ಯಗಳೆಲ್ಲ ಸಂಪೂರ್ಣವಾಗಿ ಉಚಿತವಾಗಿಯೇ ಕಾರ್ಯನಿರ್ವಹಿಸುವಾಗ ಈ ದೈತ್ಯ ಕಂಪೆನಿಗಳೆಲ್ಲ ಹೇಗೆ ಲಾಭ ಮಾಡುತ್ತವೆ ಎಂಬುದು ಆಶ್ಚರ್ಯ ಪಡಬೇಕಾದ ಸಂಗತಿಯೇ. ಸಾವಿರಾರು ಮೈಲಿ ದೂರವಿರುವ ದೊಡ್ಡಮ್ಮನೊಡನೆ ನಾನು ಉಚಿತವಾಗಿ ಮಾತನಾಡುವ ಅವಕಾಶ ಒದಗಿಸಲು ಈ ಕಂಪೆನಿಗಳೇನು ಸಮಾಜಸೇವೆಗೆ ನಿಂತಿವೆಯೇ ಅಂತೆಲ್ಲ ಪ್ರಶ್ನೆಗಳು ಹುಟ್ಟುವುದು ಸಹಜ.
ಹಾಗೆ ಕೇಳಿಕೊಂಡಾಗ ಮಾತ್ರ ನಮಗೆ ಈ ಬೃಹತ್ ಅರ್ಥವ್ಯವಸ್ಥೆಯ ಒಳಕೊಂಡಿಗಳು ಗೋಚರವಾಗುವವು. ಜನಸಾಮಾನ್ಯರ ಸಂವಹನದ ಜರೂರನ್ನೇ ವ್ಯಾಪಾರೀ ಸರಕಾಗಿಸಿಕೊಂಡು ಲಾಭ ಮಾಡುತ್ತಿರುವ ಈ ಕಂಪೆನಿಗಳೆಲ್ಲ ನಮ್ಮ ದೃಷ್ಟಿ ತಾಕದಷ್ಟು ದೂರದಲ್ಲಿ ಒಂದಕ್ಕೊಂದು ಬೆಸೆದುಕೊಂಡಿರುವುದು ನಿಧಾನಕ್ಕೆ ಕಾಣಸಿಗುವುದು. ನಾವೆಲ್ಲರೂ ಮೆರೆಯುತ್ತಿರುವ ಸ್ಮಾರ್ಟುಫೋನು ಎಂಬ ಈ ಆಧುನಿಕ ಸಂಪರ್ಕ ವಿಸ್ಮಯ ನಿಂತಿರುವುದೇ ಜಾಹೀರಾತು ಮತ್ತು ಬ್ರಾಂಡಿಂಗ್ ಮೇಲೆ ಎಂಬುದು ಅನುಭವಕ್ಕೆ ಬರುವುದು.
ಕಳೆದ ವರ್ಷದ ಆರಂಭದಲ್ಲಿ ಅಲ್ಲಿಯ ತನಕ ತನ್ನ ಚಂದಾದಾರರಿಗೆ ವಿಧಿಸುತ್ತಿದ್ದ ಸಣ್ಣ ಮೊತ್ತವನ್ನು ವಾಟ್ಸಾಪ್ ಕಂಪೆನಿ ರದ್ದುಗೊಳಿಸಿ ಬಳಕೆದಾರರಿಗೆ ಈ ಸೌಲಭ್ಯವನ್ನು ಉಚಿತವಾಗಿ ಬಳಸುವಂತೆ ಮಾಡಿತು. ನಂತರ ಏಳೇ ತಿಂಗಳು ಬಿಟ್ಟು ತನ್ನ ಮಾತೃ ಕಂಪೆನಿಯಾದ ಫೇಸ್‌ಬುಕ್ಕಿನ ಜೊತೆಗೆ ಬಳಕೆದಾರರ ಫೋನ್ ನಂಬರುಗಳನ್ನು ಹಂಚಿಕೊಳ್ಳಲು ಶುರುಮಾಡಿತು. “”ಇದರಿಂದ ಬಳಕೆದಾರರ ಗೋಪ್ಯತೆಗೆ ಏನೂ ಭಂಗ ಬರಲಾರದು. ಈ ಮೊಬೈಲು ನಂಬರುಗಳನ್ನು ನಿಮ್ಮ ಸ್ನೇಹಿತರ ಜೊತೆ ಸಂವಹನವನ್ನು ಸುಲಭವಾಗಿಸಲು, ಫ್ರೆಂಡ್ ರಿಕ್ವೆಸ್ಟ್ ಗಳನ್ನು ಕಳಿಸಲು ಉಪಯೋಗಿಸುತ್ತೇವೆ” ಅಂತ ಫೇಸಬುಕ್ ವಾಟ್ಸಾಪ್ ಬಳಕೆದಾರರಿಗೆಲ್ಲ ಭರವಸೆ ನೀಡಿತು.
ಉದಾಹರಣೆಗೆ ನಿಮ್ಮ ಫೋನಿನಲ್ಲಿ ನಿಮ್ಮ ಹಿತೈಷಿಯೊಬ್ಬರ ಮೊಬೈಲು ಸಂಖ್ಯೆ ಫೀಡ್ ಆಗಿದೆ ಅಂತಿಟ್ಟುಕೊಳ್ಳಿ. ಆ ಮೊಬೈಲು ಸಂಖ್ಯೆಯನ್ನು ವಾಟ್ಸಾಪ್ ತನ್ನ ಮಾತೃಸಂಸ್ಥೆಯಾದ ಫೇಸ್‌ಬುಕ್ಕಿನ ಜೊತೆ ಹಂಚಿಕೊಳ್ಳುತ್ತದೆ. ಆ ಹಿತೈಷಿಯೂ ಫೇಸ್‌ಬುಕ್ಕಿನಲ್ಲಿದ್ದರೆ ಅವರು ನಿಮ್ಮ ಜೊತೆ ಫೇಸಬುಕ್ಕಿನಲ್ಲಿ ಸ್ನೇಹಹಸ್ತ ಚಾಚುವಂತೆ ಮಾಡುತ್ತದೆ. ಇದು ಅಷ್ಟಕ್ಕೇ ನಿಲ್ಲದೇ ನಿಮ್ಮ ಸ್ನೇಹಿತರೂ, ನಿಮ್ಮ ಹಿತೈಷಿಯ ಸ್ನೇಹಿತರೂ ಸ್ನೇಹಕ್ಕಾಗಿ ಕೈ ಚಾಚುವಂತೆ “ಫ್ರೆಂಡ್ ಸಜೆಷನ್’ಗಳನ್ನು ಕಳುಹಿಸುತ್ತದೆ. ಹೀಗೆ ಮಾಡಿದಾಗ ಫೇಸಬುಕ್ಕಿನಲ್ಲಿ ನೀವೂ, ನಿಮ್ಮ ಹಿತೈಷಿಯೂ, ಅವರ ಸ್ನೇಹಿತರೂ ಕಳೆಯುವ ಸಮಯ ಕ್ರಮೇಣ ವಿಸ್ತಾರವಾಗುತ್ತದೆ. ಅವರ ಜೊತೆಗೆ ಸಂವಾದಿಸುವಾಗ ವಿವಿಧ ಜಾಹೀರಾತುಗಳು ಬೇಡಬೇಡವೆಂದರೂ ಕಣ್ಣಿಗೆ ಬೀಳುತ್ತವೆ.
ಸಾಮಾಜಿಕ ಜಾಲತಾಣಗಳ ಮೂಲಸತ್ವವಿರುವುದೇ ಈ ಜಾಹೀರಾತು ಪ್ರಪಂಚದಲ್ಲಿ. ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಪರಿಚಯಿಸಲು ಸಣ್ಣ ದೊಡ್ಡ ಉದ್ಯಮದವರಿಗೆ ಸಮರ್ಥ ಮಾಧ್ಯಮದ ಆವಶ್ಯಕತೆಯಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಂತರ್ಜಾಲವೆಂಬ ನವ ಮಾಧ್ಯಮ ಜನರ ಬದುಕಿನಲ್ಲಿ ನೆಲೆ ಕಾಣುವ ಮೊದಲು ಆ ಉದ್ಯಮದವರೆಲ್ಲ ಪತ್ರಿಕೆಗಳನ್ನು ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಆದರೆ ಫೇಸ್‌ಬುಕ್ ಸೇರಿದಂತೆ ಅಂತರ್ಜಾಲದ ಹತ್ತಾರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ಜನರನ್ನು ತಲುಪಬಹುದೆಂದು ಗೊತ್ತಾದಾಗ ಕಂಪೆನಿಗಳೆಲ್ಲ ಈ ಜಾಲತಾಣಗಳಲ್ಲಿ ತಮ್ಮ ಜಾಹೀರಾತುಗಳನ್ನು ಹರಿಯಬಿಡಲು ಮುಗಿಬಿದ್ದವು.
ಆಧುನಿಕ ವಿಜಾnನದ ಕೃಪೆಯಿಂದ ಜಗತ್ತಿಗೆ ದೊರಕಿರುವ ಈ ಅಂತಜಾìಲವೆಂಬ ಹೊಸ ಸ್ಪೇಸ್‌ನಲ್ಲಿ ಜಾಹೀರಾತುಗಳ ಹಂಚಿಕೆ ಬಹು ಮಹತ್ವದ ವಿಷಯವಾಗಿದೆ. ಉದಾಹರಣೆಗೆ ಫೇಸ್‌ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಹಂಚಿಕೊಂಡ ಚಿನ್ನದ ಆಭರಣಗಳನ್ನು ಮಾರುವ ಜಾಹೀರಾತನ್ನು ನೋಡುತ್ತಿದ್ದೇವೆ ಅಂತಿಟ್ಟುಕೊಳ್ಳೋಣ. ಅಲ್ಲಿ ಒಬ್ಬ ಹರೆಯದ ತರುಣಿ ಮತ್ತವಳ ತಾಯಿ ನೆಕ್ಲೆಸ್ ಕೊಳ್ಳಲು ಬಹುಮಹಡಿಯ ಒಂದು ಚಿನ್ನದಂಗಡಿಗೆ ತೆರಳುತ್ತಾರೆ. ಅಂಗಡಿಯವನು ನಗುತ್ತ ಅವರನ್ನು ಬರಮಾಡಿಕೊಂಡು ತಂಪು ಪಾನೀಯ ತರಿಸಿಕೊಡುತ್ತಾನೆ. ಮಗಳಿಗೆಂದು ಆಭರಣ ಕೊಳ್ಳಲು ಬಂದವರು ಚೆಂದ ಕಂಡಿತೆಂದು ತಾಯಿಯೂ ಮಗಳೂ ಎರಡೆರಡು ಸರ, ಬಳೆ, ಓಲೆಗಳನ್ನು ಕೊಳ್ಳುತ್ತಾರೆ. ಈ ದೃಶ್ಯಸರಣಿಯ ಕೊನೆಗೆ ಎಲ್ಲರೂ ಸಂತಸದಿಂದ ಕಂಗೊಳಿಸುತ್ತಿರುತ್ತಾರೆ. ಇದನ್ನೆಲ್ಲ ತೋರಿಸಲು ಕೇವಲ ಮೂವತ್ತು ಸೆಕೆಂಡು ಸಾಕು. ಆದರೆ ನೋಡುಗರ ಮನಸ್ಸಿನಲ್ಲಿ ಇದು ದೀರ್ಘಕಾಲದ ಪರಿಣಾಮ ಮಾಡುವುದು ಸುಳ್ಳಲ್ಲ.
ಇಲ್ಲಿ ಈ ಜಾಹೀರಾತು ಕೇವಲ ಆಭರಣ ಮಾತ್ರವಲ್ಲದೇ ಒಂದು ಜೀವನಶೈಲಿಯನ್ನೇ ಹೇಗೆ ಮಾರುತ್ತಿದೆ ಎಂಬುದನ್ನು ಗಮನಿಸಬೇಕು. ಆ ತಾಯಿ ಮಗಳು ಧರಿಸಿದ ಉಡುಪಿನಿಂದ ಹಿಡಿದು ಅಂಗಡಿಯವನು ತಂದುಕೊಟ್ಟ ಕೂಲ್‌ಡ್ರಿಂಕ್‌ವರೆಗೂ ಹಂತಹಂತವಾಗಿ ಕೊಳ್ಳುಬಾಕುತನದ ಮೊಹರನ್ನು ಈ ಜಾಹೀರಾತು ಅತಿ ಮೋಹಕವಾಗಿಯೇ ಕೇವಲ ಮೂವತ್ತು ಸೆಕೆಂಡುಗಳ ಅವಧಿಯಲ್ಲಿ ಬಳಕೆದಾರರ ಮನಸ್ಸಿನಲ್ಲಿ ಹೇಗೆ ಅಚ್ಚೊತ್ತುತ್ತದೆ ಎಂಬುದು ಸ್ವಾರಸ್ಯದ ಸಂಗತಿ.
ಇತ್ತೀಚೆಗೆ ಇಂತಹದ್ದೇ ಜಾಹೀರಾತುಗಳು ಸಂದೇಶದ ಅಂಗಿ ತೊಟ್ಟು ವಾಟ್ಸಾಪಿನಲ್ಲಿ ಹರಿದು ಬರುವುದು ಶುರುವಾಗಿದೆ. ಅಲ್ಲದೇ ನಿಮ್ಮ ಫೋನ್ ನಂಬರು ಒಂದಿದ್ದರೆ ನಿಮ್ಮ ಅನುಮತಿಯಿಲ್ಲದೇ ಗುಂಪುಗಳಿಗೆ ಸೇರಿಸಿಕೊಳ್ಳಲು ವಾಟ್ಸಾಪಿನಲ್ಲಿ ಅವಕಾಶವಿದೆ. ಕೆಲವೊಮ್ಮೆ ತುಂಬಾ ಹತ್ತಿರದವರ ಮನಸ್ಸಿಗೆ ನೋವಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಗುಂಪುಗಳಿಗೆ ಸೇರಿ ಅಲ್ಲಿ ಬರುವ ನೂರಾರು ಮೆಸೇಜುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇನ್ನು ಕೆಲವರಂತೂ ಬೆಳಿಗ್ಗೆ ರಾತ್ರಿ ಗುಂಪುಗಳಲ್ಲಿ “ಗುಡ್ ಮಾರ್ನಿಂಗ್’ “ಗುಡ್ ನೈಟ್’ ಸಂದೇಶಗಳನ್ನು ರವಾನಿಸುತ್ತ ಸಮಯ ಕಳೆಯುತ್ತಾರೆ. ಕೆಲವೊಮ್ಮೆಯಂತೂ ಇವರು ಸಂದೇಶ ಕಳುಹಿಸುವುದು ಆತ್ಮೀಯತೆಗೋ ಅಥವಾ ಕಳುಹಿಸಲು ಉಚಿತವಾದ ಅವಕಾಶವಿದೆ ಎಂಬ ಒಂದೇ ಕಾರಣಕ್ಕೋ ಎಂದು ಗುಮಾನಿಯಾಗುತ್ತದೆ.
ಇನ್ನು ವಾಟ್ಸಾಪಿನಲ್ಲಿ ಜನಪ್ರಿಯವಾದ ಗುಂಪು ಸಂವಹನಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇ ಬೇಕು. ಮಾಧ್ಯಮ ಪಂಡಿತರ ಪ್ರಕಾರ ಇಂದು ನವಮಾಧ್ಯಮದಲ್ಲಿ ಸುದ್ದಿಯು ನಮ್ಮನ್ನು ಹುಡುಕಿಕೊಂಡು ಬಾರದೇ ನಾವೇ ನಮಗೆ ಬೇಕಾದ ಸುದ್ದಿಯನ್ನು ಅರಸಿ ಹೋಗುತ್ತಿದ್ದೇವೆ. ಹೀಗಾದಾಗ ನಮಗೆ ನೈಜ ಸುದ್ದಿ ತಿಳಿಯದೇ ನಮ್ಮ ಧೋರಣೆಗೆ ಸರಿಹೊಂದುವ ಸಂಗತಿಯೇ ಸುದ್ದಿಯಾಗಿ ತಲುಪಿ ವಿಷಯವನ್ನು ಎಲ್ಲ ಮುಖಗಳಿಂದ ಕಾಣುವ ಪ್ರಜ್ಞೆ ಕಳೆದುಕೊಂಡುಬಿಡುತ್ತೇವೆ. ಸತ್ಯ-ಮಿಥ್ಯೆಗಳ ನಡುವಿನ ನಾಜೂಕು ಗೆರೆ ನಮ್ಮ ಮನಸ್ಸಿಗೆ ಬೇಕಾದ ಹಾಗೆ ಮಾರ್ಪಾಟಾಗುತ್ತದೆ. ಗುಂಪು ಸಂವಹನಗಳಲ್ಲಿ ಅನೇಕ ಮೌಡ್ಯಗಳನ್ನೂ, ಅಜಾnನವನ್ನೂ ಜನರ ಮನಸ್ಸಿನಲ್ಲಿ ನೇರವಾಗಿ ಬಿತ್ತಲು ಹೇರಳ ಅವಕಾಶ ಇರುವುದು ವಿಪರ್ಯಾಸವೇ ಸರಿ.
ಎಲ್ಲಕ್ಕೂ ಮಿಗಿಲಾಗಿ ಈ ತಕ್ಷಣದ ಸಂದೇಶಗಳು ಗಡಿಬಿಡಿಯ ಸುದ್ದಿಗಳಂತೆಯೇ ನನ್ನನ್ನು ಅನುಮಾನಕ್ಕೆ ನೂಕುತ್ತವೆ. ತತ್ಕಾಲ ಸುದ್ದಿಗಳಿಗಾಗಿ ಟೆಲಿಗ್ರಾಮನ್ನೂ, ನಿಧಾನ ವಾರ್ತೆಗಾಗಿ ಪತ್ರಗಳನ್ನೂ ನಚ್ಚುವ ಸಂಸ್ಕೃತಿ ಕ್ರಮೇಣ ನಶಿಸಿಯೇ ಹೋದದ್ದು ಕಂಡು ನೋವಾಗುತ್ತದೆ. ವರ್ಷಗಳು ಕಳೆದಂತೆ ಸಾಮಾಜಿಕ ಜಾಲತಾಣಗಳನ್ನು ನಾವು ಬಳಸದೇ ಇರಲು ಆಯ್ಕೆಯೇ ತೆರೆದಿರುವುದಿಲ್ಲವೇನೋ ಎಂದು ಭಯವಾಗುತ್ತದೆ.
ನಿನ್ನೆ ನನ್ನ ಅಮ್ಮ ವಾಟ್ಸಾಪಿನಲ್ಲೇ ವೀಡಿಯೋ ಕರೆ ಮಾಡಿದ್ದರು. ನಾನು ಚಿಕ್ಕಂದಿನಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ಪತ್ರೊಡೆಯನ್ನು ತಯಾರಿಸುವ ವಿಧಾನವನ್ನು ಅವರು ವೀಡಿಯೋದಲ್ಲಿ ತೋರಿಸುತ್ತಿದ್ದರು. ಅದನ್ನು ನೋಡುತ್ತ ನಾನು ಮೈಮರೆತಾಗ ಅಡುಗೆ ಮನೆಯಲ್ಲಿ ಗ್ಯಾಸಿನ ಮೇಲಿಟ್ಟಿದ್ದ ಪಲ್ಯ ಸೀದು ಹೋಯಿತು. ಆ ಸಂದರ್ಭದಲ್ಲಿ ಒಂದು ವಿಚಿತ್ರ ಬಗೆಯ ಕಂಪನ ನನ್ನಲ್ಲಿ ಹಾದು ಹೋಯಿತು.
ನಾನು ವೀಡಿಯೋದಲ್ಲಿ ನಮ್ಮ ತಾಯಿ ತಯಾರಿಸುವ ಪತ್ರೊಡೆಯನ್ನು ಕಾಣಬಲ್ಲೆನಷ್ಟೇ. ಆದರೆ ಅದರ ಫಮವನ್ನೂ, ರುಚಿಯನ್ನೂ ಆಸ್ವಾದಿಸಲು ಸಾಧ್ಯವೇ ಇಲ್ಲ. ಎಲ್ಲ ಇಂದ್ರಿಯಗಳಿಗೆ ನಿಲುಕದ ಈ ಅನುಭವ ಕೇವಲ ಒಂದು ಮಿಥ್ಯೆಯಲ್ಲವೇ ಅಂತ ಒಂದು ಕ್ಷಣ ಅನ್ನಿಸಿ ಸಂಕಟವಾಯಿತು.
ನಿಮಿಷಕ್ಕೊಂದರಂತೆ ವಾಟ್ಸಾಪು ಸಂದೇಶಗಳು ಬರುತ್ತಲೇ ಇದ್ದರೂ ಅದೇಕೋ ಫೋನು ಮುಚ್ಚಿಟ್ಟು ಇನ್ನೊಮ್ಮೆ ಪಲ್ಯ ತಯಾರಿಸಲು ಶುರು ಮಾಡಿದೆ.
ಕಾವ್ಯಾ ಕಡಮೆ ನಾಗರಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.