Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು!
Team Udayavani, Apr 10, 2024, 7:30 AM IST
ಚಾರಿತ್ರಿಕವಾಗಿ, ಐತಿಹಾಸಿಕವಾಗಿ, ಭೌಗೋಳಿಕವಾಗಿ ಒಂದಲ್ಲ ಒಂದು ವಿಶೇಷತೆ ಹೊಂದಿರುವ ಹಲವು ಜಿಲ್ಲೆಗಳಲ್ಲಿ ಕೊಪ್ಪಳವೂ ಒಂದು. ಈ ಜಿಲ್ಲೆಯ ಗಂಗಾವತಿ ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಹಿರೇಬೆಣಕಲ್ ಗ್ರಾಮದ ಸರಹದ್ದಿನ ಬೆಟ್ಟ ಸಾಲುಗಳಲ್ಲಿ, ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ಮೊರ್ಯಾರ್ ಮನೆಗಳನ್ನು ಕಾಣಬಹುದು. ಆ ಸ್ಥಳವನ್ನು ಸ್ಥಳೀಯರು ಮೊರ್ಯಾರ್ ಬೆಟ್ಟ ಎಂದೇ ಕರೆಯುವುದುಂಟು. ಮೊರ್ಯಾರ್ ಮನೆಗಳನ್ನು ನೋಡಬೇಕೆಂದರೆ 2 ಬೆಟ್ಟ ಹತ್ತಿ ಇಳಿದು ಸಾಗಬೇಕಾಗುತ್ತದೆ. ಅಷ್ಟೇನೂ ಪ್ರಯಾಸದಾಯಕವಲ್ಲದ, ಅಂದಾಜು 1.5/2 ಕಿ.ಮೀ. ಚಾರಣ ಮಾಡಿದರೆ, ಬೆಟ್ಟದ ಮೇಲೆ ಸಮತಟ್ಟಾದ ವಿಶಾಲ ಪ್ರದೇಶ ತೆರೆದುಕೊಳ್ಳುತ್ತದೆ. ಅಲ್ಲಿ ಸುಮಾರು 400ರವರೆಗೆ ಚಿಕ್ಕ ಚಿಕ್ಕ 2, 3 ಅಡಿ ಎತ್ತರದಿಂದ ಹಿಡಿದು 7, 8 ಅಡಿ ಎತ್ತರದಷ್ಟು ಯಾವುದೇ ಥರದ ಗಾರೆ ಬಳಸದೆ, ಗ್ರಾನೈಟ್ ಕಲ್ಲುಗಳನ್ನು ಚಪ್ಪಟೆ ಆಕಾರದಲ್ಲಿ ಕತ್ತರಿಸಿ ನಾಲ್ಕು ಗೋಡೆಗಳು ಮತ್ತು ವೃತ್ತಾಕಾರದಲ್ಲಿ ಕತ್ತರಿಸಿದ ಮೇಲ್ಛಾವಣಿಯಿರುವ ಚಿಕ್ಕ ಕೋಣೆಯಾಕಾರದ ರಚನೆಗಳನ್ನು ಕಾಣಬಹುದು.
3000 ವರ್ಷ ಹಿಂದಿನವು!:
ಹಿರೇಬೆಣಕಲ್‌ನ ಮೊರ್ಯಾರ್ ಮನೆಗಳು ಸುಮಾರು 3000 ವರ್ಷಗಳ ಹಿಂದೆ ನಿರ್ಮಿಸಲಾದ ಪ್ರಾಗೈತಿಹಾಸಿಕ ಮಹಾಶಿಲಾ ಸ್ಮಾರಕಗಳ ತಾಣ. ಶಿಲಾಯುಗದಲ್ಲಿ ನಮ್ಮ ಪೂರ್ವಜರು ಅಲೆದಾಡಿದ್ದ ಈ ನೆಲ, ಅಲ್ಲಿನ ಆ ರಚನೆಗಳು ಇಂದಿಗೂ ನಮಗೆ ನೋಡಲಿಕ್ಕೆ ಉಳಿದಿದ್ದು ನಮ್ಮ ಅದೃಷ್ಟವೆಂದು ಭಾವಿಸಬಹುದು. ಈ ರಚನೆಗಳನ್ನು ಸ್ಥಳೀಯರು ಮೊರ್ಯಾರ್ ಮನೆಗಳೆಂದು ಕರೆಯುತ್ತಾರೆ. ಆದರೆ, ಅವು ಮನೆಗಳಾಗಿರದೆ ನವ ಶಿಲಾಯುಗದ ಮಧ್ಯದಲ್ಲಿ ಜೀವಿಸಿದ್ದ ಜನರ ಗೋರಿಗಳ ರಚನೆಗಳಾಗಿವೆ ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಬೆಟ್ಟದ ಅಡಿಯಿಂದ ಕಾಲ್ನಡಿಗೆಯಲ್ಲಿ ಹೊರಟು ಮೇಲೆ ಸ್ಮಾರಕಗಳು ಇರುವ ಸ್ಥಳಕ್ಕೆ ತಲುಪುವವರೆಗೆ ದಾರಿಯುದ್ದಕ್ಕೂ ಅತ್ಯಾಕರ್ಷಕ ಬಂಡೆಗಳು, ಗುಹೆಗಳು ಮತ್ತು ಚಾಚಿದ ಬಂಡೆಗಳ ಆಶ್ರಯಗಳನ್ನು ಕಾಣಬಹುದು. ಅಂತಹ ಕೆಲವು ಬಂಡೆಗಳಲ್ಲಿ ಶಿಲಾಯುಗದ ಜನರು ರಚಿಸಿದ ಸುಂದರ ವರ್ಣಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು..
ಬೆಟ್ಟದ ಮೇಲುಂಟು ದೊಡ್ಡ ಕೆರೆ!
ಮೊರ್ಯಾರ್ ಬೆಟ್ಟದಲ್ಲಿ ಮೊರ್ಯಾರ್ ಮನೆಗಳನ್ನು ನೋಡಿ ಅಶ್ಚರ್ಯಪಡುವುದು ಒಂದಾದರೆ, ಆ ಬೆಟ್ಟದ ತುಂಬೆಲ್ಲಾ ಹರಡಿಕೊಂಡಿರುವ ಮರಳು ಕಲ್ಲುಗಳು ಮತ್ತು ಗ್ರಾನೈಟಿನ ಬೃಹತ್ ಬಂಡೆಗಳ ಚಿತ್ರ-ವಿಚಿತ್ರ ರಚನೆಗಳದ್ದೇ ಮತ್ತೂಂದು ಬಗೆಯ ಕಣ್ಣು ಸೆಳೆಯುವ ಸೌಂದರ್ಯ. ಬೆಟ್ಟದ ಮೇಲೆ ವಿಶಾಲವಾದ ಕೆರೆಯೂ ಇರುವುದು ಮತ್ತೂಂದು ಆಶ್ಚರ್ಯ. ಮಳೆಗಾಲದಲ್ಲಿ ಹರಿಯುವ ತೊರೆಗಳು, ಹಳ್ಳಕೊಳ್ಳಗಳು, ಬೆಟ್ಟದ ತುಂಬೆಲ್ಲಾ ಇವೆ. ಮೂರ್ನಾಲ್ಕು ತಾಸು ಸುತ್ತಾಡುವಷ್ಟು ಸಮಯ ಹೊಂದಿಸಿಕೊಂಡು ಹೋದರೆ ಸದಾ ನೆನಪಲ್ಲಿ ಉಳಿಯುವಂತಹ ಒಂದೊಳ್ಳೆ ಗತಕಾಲದ ವಿಶಿಷ್ಟ ಸ್ಥಳದ ಪರಿಚಯವಾಗುವದಂತೂ ಸುಳ್ಳಲ್ಲ. ಈ ಮೊರ್ಯಾರ್ ಗುಡ್ಡ, ವಿಶ್ವದ ಅತ್ಯಂತ ಹಳೆಯ ಮೆಗಾಲಿಥಿಕ್-ಬೃಹತ್ ಶಿಲಾ ಸ್ಮಾರಕಗಳ ತಾಣಗಳಲ್ಲಿ ಒಂದು ಎನ್ನುವುದು ಸಂಶೋಧಕರ ಅಭಿಪ್ರಾಯ.
ಚಾರಣಕ್ಕೆ ಒಳ್ಳೆಯ ತಾಣ:
ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ ಇರುವ ಈ ತಾಣದ ಕೆಲ ಮಾಹಿತಿಯನ್ನು ಹಾಗೂ ಸಾಗುವ ಮಾರ್ಗಸೂಚಿಯನ್ನು ಬೋರ್ಡ್‌ಗಳಲ್ಲಿ ಬರೆದು ಹಾಕಿದ್ದಾರೆ. ಬೆಟ್ಟದ ಕೆಳಗೆ ಚಾರಣ ಆರಂಭಕ್ಕೂ ಮೊದಲೇ ಎಲ್ಲವನ್ನೂ ವಿವರವಾಗಿ ಓದಿಕೊಂಡು ಚಾರಣ ಆರಂಭಿಸಬಹುದಾಗಿದೆ. ಚಾರಣದ ಹಾದಿ ಕುರಿತು ಗೊಂದಲವಾಗದಂತೆ ದಾರಿಯುದ್ದಕ್ಕೂ ಬಂಡೆಕಲ್ಲುಗಳ ಮೇಲೆ ಬಣ್ಣದ ಬಾಣದ ಗುರುತುಗಳನ್ನು ಹಾಕಿದ್ದಾರೆ. ಮ್ಯಾಪ್‌ನಲ್ಲಿ ತೋರಿಸಿರುವ ಹಾದಿಯಲ್ಲಿ ಸಾಗಿದಂತೆ ರಾಕ್ ಆರ್ಟ್, ಬೃಹತ್ ಶಿಲಾ ರಚನೆಗಳು ಕಾಣಸಿಗುತ್ತವೆ.
ದ್ವಿತೀಯ ಸಮಾಧಿಗಳು! :
ಸತ್ತವರನ್ನು ಹೂಳುವ ಸ್ಥಳವನ್ನು ವಾಸಿಸುವ ಸ್ಥಳದಿಂದ ದೂರದಲ್ಲಿ ಕಟ್ಟುವ ಪದ್ಧತಿ ಶುರುವಾಗಿರಬಹುದಾದ ಕಾಲವದು. ಸತ್ತವರ ದೇಹವನ್ನು ಮಣ್ಣು ಮಾಡಿ ಕೆಲ ತಿಂಗಳುಗಳ ಬಳಿಕ ಮತ್ತೆ ಸಮಾಧಿ ಅಗೆದು ಕೆಲವು ಅಸ್ತಿಗಳನ್ನಷ್ಟೇ ಹೊರತೆಗೆದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಬೃಹತ್ ಶಿಲೆಗಳಿಂದ ಕಟ್ಟಿದ ಕೋಣೆಯಾಕಾರದ ಸ್ಮಾರಕಗಳಲ್ಲಿ ಇರಿಸುತ್ತಿದ್ದುದ್ದರಿಂದ ಈ ಸ್ಮಾರಕಗಳನ್ನು ದ್ವಿತೀಯ ಸಮಾಧಿಗಳೆಂದೂ ಗುರುತಿಸುತ್ತಾರೆ. ಕಾಲದ ಹೊಡೆತದಿಂದ ಮತ್ತು ನಿಧಿ ಇರಬಹುದೆಂಬ ಮಾನವರ ದುರಾಸೆಗೆ ಕೆಲವು ಸಮಾಧಿ ಹಾಳಾಗಿದ್ದು, ಈಗ ಅಲ್ಲಿ ಯಾವುದೇ ಅಸ್ತಿಗಳು ಕಾಣಸಿಗದೆ ಬರಿ ಖಾಲಿ ಕೋಣೆಗಳು ಇವೆ. ಕೆಲವು ಸಮಾಧಿಗಳನ್ನು ಈಗಲೂ ಬೆಟ್ಟದಲ್ಲಿ ಸ್ವಲ್ಪ ದೂರದಲ್ಲಿ ಕಾಣಬಹುದಾಗಿದೆ. ಇವು ಶಿಲಾಯುಗದ ಬುಡಕಟ್ಟು ಜನರ ನಂಬಿಕೆ ಮತ್ತು ವಿಶಿಷ್ಟ ಸಂಪ್ರದಾಯದ ಕುರುಹಗಳಾಗಿ ಇಂದಿಗೂ ಉಳಿದುಕೊಂಡಿವೆ.
-ಪ್ರಕಾಶ ಡಂಗಿ, ಬಾಗಲಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.