ಮನುಕುಲದ ಯಾತನೆಗೆ ಸ್ವರವಾದ ತಾಯ್ತನ
Team Udayavani, Apr 9, 2017, 3:45 AM IST
ತಾಯಿಗೂ ಪದ್ಮಭೂಷಣ ಕೊಟ್ಟು ಅವಳ ಮಗಳಿಗೂ ಪದ್ಮ ಭೂಷಣ ಕೊಟ್ಟು , “”ಶಕ್ತಿಸ್ವರೂಪಿಣಿಯರೇ, ಮಣಿದಿದ್ದೇವೆ ನಿಮ್ಮ ಸೃಜನಶೀಲತೆಗೆ” ಅಂತ ದೇಶವು ಹೇಳಿದ ಸಂದರ್ಭ ಅಪರೂಪ. ಅಂಥಾ ತಾಯಿ ಮೋಗೂಬಾಯಿ ಕುರ್ಡಿಕರ್ ಮತ್ತು ಮಗಳು ಕಿಶೋರಿ ಅಮೋನ್ಕರ್. ಇಬ್ಬರ ಬದುಕಿಗೆ ಸಂಗೀತವು ತಿರುವಾದ ಮೂಲಕಾರಣವು ಅಲ್ಲಾದಿಯಾ ಖಾನ್ ಎಂಬ ಹಿರಿಯ ಉಸ್ತಾದರು ಸಾಂಗ್ಲಿ ಪಟ್ಟಣಕ್ಕೆ ತನ್ನ ಚಿಕಿತ್ಸೆಗೆ ಬಂದುದರಿಂದ ಆಗಿಬಿಟ್ಟಿತ್ತು. ಇದು ಸೋಜಿಗ. ಬದುಕು ಆಗುವುದು ಹೀಗೆ ಕಾಕತಾಳೀಯಗಳಿಂದ.
ಸಾತಾರ್ಕರ್ ಮಂಡಳಿಯಲ್ಲಿ ಹಾಡುಗಾರ್ತಿಯೂ, ಕಥಕ್ ನೃತ್ಯಗಾರ್ತಿಯೂ ಆದ ಇನ್ನೂ ಇಪ್ಪತ್ತು ಮುಟ್ಟದ ಮೋಗೂ ಎಂಬ ಎಳೆಯ ಯುವತಿ ಇದ್ದಳು. ತಾಯಿ ತೀರಿದ ಬಳಿಕ ನಾಟಕ ಕಂಪೆನಿಯೇ ಅವಳ ಬದುಕು. ಸಾಂಗ್ಲಿಯಲ್ಲಿ ಅದು ಮೊಕ್ಕಾಂ ಹಾಕಿ¨ªಾಗ, ಮೋಗೂ ಮನೆಯೊಳಗೆ ಒಂದು ದಿನ ಹಗಲಿನ ಅಭ್ಯಾಸ ಮಾಡುತ್ತಿದ್ದಳು. ಕೇಳಿ ಕುತೂಹಲದ ಕಿವಿಯಾಗಿ ನೇರ ಒಳಗೆ ಬಂದ ಒಬ್ಬ ಅಪರಿಚಿತ ಗಂಡಸು “ಶಹಬ್ಟಾಸ್’ ಅಂದ. “ನಾನೆ ನಿನಗೆ ಹೊಸ ಗುರುವಾಗುವೆ’ ಅಂದ.ಬಂದವರು ಅಲ್ಲಾದಿಯಾ ಖಾನ್ ಸಾಹೇಬ್. ಹಿಂದೂಸ್ತಾನಿ ಸಂಗೀತ ಪ್ರಪಂಚದಲ್ಲಿ ಜೈಪುರ್ ಅತ್ರಾವಲಿ ಘರಾನಾ ಎಂದರೆ ಒಂದು ಕ್ಷಣ ಅದರ ವಿದ್ವತ್ತಿಗೆ, ಸಿದ್ಧಿಗೆ, ಸಂಕೀರ್ಣತೆಗೆ ನುರಿತ ಸಂಗೀತಗಾರರು ಕೂಡ ದಿಗ್ಭ್ರಮೆಯಲ್ಲಿ ಮಣಿಯುತ್ತಾರೆ. ಈ ಗಾಯನ ಪರಂಪರೆಗೆ ಗಟ್ಟಿ ಚೌಕಟ್ಟು ಹಾಕಿದ ಕಲಾವಿದ ಆಚಾರ್ಯ ಅಲ್ಲಾದಿಯಾ ಖಾನ್. ಮುಂದೆ ಈ ಮಹಾಗುರು ತನ್ನ ಉಸಿರು ನಿಲ್ಲಿಸುವವರೆಗೆ ಮೋಗೂವಿನ ಸಂಗೀತ ಕಲಿಕೆ ಎರಡು ದಶಕಗಳ ಕಾಲ ನಡೆಯಿತು. ಮೋಗೂಬಾಯಿಯ ಶಿಷ್ಯೆ ಕಿಶೋರಿ ತಾಯಿಯಲ್ಲಿ ಇನ್ನೊಂದು ಹೊಸ ನಾದಪ್ರವಾಹವಾಗಿ ಜೈಪುರ್‌ಘರಾನಾ ಕವಲೊಡೆಯಿತು.
ಕುರ್ಡಿಎಂಬುದು ಪೋರ್ಚುಗೀಸ್ ಗೋವಾದ ಒಳಗಿನೊಳಗಿನ ಹಳ್ಳಿ. ಅಲ್ಲಿ ಕಿಶೋರಿಯ ಹಿರಿಯರು ವಾಸಿಸುತ್ತಿದ್ದ ಮುದಿಮನೆಯು ಇತ್ತು. ಯುವತಿ ಮೋಗೂ ನಾಟಕ ಕಂಪೆನಿಗಳಲ್ಲಿ ಬದುಕುತ್ತಿದ್ದವಳು ಗಾಯನಕಲೆಯಲ್ಲಿ ಭವಿಷ್ಯದ ದಾರಿ ಹುಡುಕುತ್ತ ಮುಂಬೈ ಸೇರಿದಳು.ಅÇÉಾದಿಯಾಖಾನರು ಅಲ್ಲಿ ಆಕೆಗೆ ಹೇಳಿಕೊಡಲು ಸಿಗುತ್ತಿದ್ದುದು ಇನ್ನೊಂದು ಆಕರ್ಷಣೆ. ಅದು ಹಲವಾರು ಗೋವಾ ಮೂಲದ ಕಲೆಯ ತಾಯಂದಿರು (ಇದರಲ್ಲಿ ಮಂಗೇಶ್ಕರ್ ಕುಟುಂಬವೂ ಒಂದು) ಹತ್ತಿರದ ಮಹಾನಗರದ ಕಡೆಗೆ ಅವಕಾಶ ಅರಸಿ ವಲಸೆಯಾಗುವ ಕಾಲ. ಕಾವ್ಯ, ಶಾಸ್ತ್ರ , ನೃತ್ಯ, ಗಾಯನ, ವಾದನ ಎಲ್ಲ ಒಟ್ಟಾಗಿ ಬಲ್ಲವರೆಂದರೆ ಅಂದಿನ ಸಮಾಜದಲ್ಲಿ ಈ ಹೆಂಗಳೆಯರು ಮಾತ್ರ. ಬದಲಾದ ಸಮಾಜಧೋರಣೆಯಂತೆ ಈ ವಿದ್ವಾಂಸೆಯರು ತಮ್ಮ ಪೂರ್ವಿಕರಲ್ಲಿ ಇಲ್ಲದಿದ್ದ ವಿವಾಹವನ್ನು ಕಟ್ಟಿಕೊಳ್ಳತೊಡಗಿದರು. ಮೋಗೂಬಾಯಿ ಹೀಗೆ ಮಾಧವದಾಸರ ಮದುವೆಯಾದಳು. ಆತ ಬೇಗನೆ ಮರಣಿಸಿದಾಗ ದೊಡ್ಡ ಮಗಳು ಕಿಶೋರಿ ಕೇವಲ ಆರು ವರುಷದ ಪುಟ್ಟಿ. ಮೂರು ಮಕ್ಕಳ ಕಟ್ಟಿಕೊಂಡು ಈ ಹಾಡುಗಾರ್ತಿ ಮುಂಬಯಿಯಲ್ಲಿ ಪುಟ್ಟ ಕೋಣೆಯ ಚಾಲ್ ಹಿಡಿದಳು. ಕರೆದಲ್ಲಿ ಹೋಗಿ ಕಚೇರಿ ಮುಗಿಸಿ, ಒಂದಿಷ್ಟು ದುಡ್ಡು ಹಿಡಿದುಕೊಂಡು, ಮನೆಗೆ ಓಡಿ ಬಂದು ಮಕ್ಕಳ ಪಾಲಿಸುವ ಬಿರುಸಿನ ತಾಯಿಯಾದಳು.
ಮುತ್ತಜ್ಜಿಯ ಸಮಾಧಿ…
ಕಿಶೋರಿಗೆ ಆ ಬಾಲ್ಯ ಸದಾ ನೆನಪು. ನಾವು ಆಗಾಗ ಸ್ಕೂಲು ರಜೆಯಲ್ಲಿ ಮುಂಬೈಯ ಚಾಲ್‌ನಿಂದ ಗೋವಾದ ನಮ್ಮೂರು ಕುರ್ಡಿಗೆ ಹೋಗುತ್ತಿ¨ªೆವು. ಕಕೋಡದಿಂದ ಕುರ್ಡಿಗೆ ಎತ್ತಿನಗಾಡಿಯಲ್ಲಿ ಪಯಣ. ಎತ್ತುಗಳ ಕುತ್ತಿಗೆಯ ಕಿಣಿಕಿಣಿ ಮೆಲ್ಲನೆ ಕಿವಿಗೆ ಬೀಳುತ್ತಿತ್ತು. ಮಣ್ಣಿನ ಮಾರ್ಗದ ಎರಡು ಕಡೆ ಹೂವು ತುಂಬಿದ ಎತ್ತರದ ಮರಗಳಿಂದ ಪರಿಮಳವಾವುದೋ ಮೂಗಿಗೆ ಮುಟ್ಟುತ್ತಿತ್ತು. ಆ ಪಯಣ ಎಷ್ಟು ಚಂದ. ನಮ್ಮ ಮನೆಯ ಸುತ್ತಮುತ್ತ ಹಣ್ಣಿನ ಮರಗಳು. ಕಲಾವಿದೆಯಾದ ನನ್ನ ಮುತ್ತಜ್ಜಿಯ ಸಮಾಧಿ ಅಲ್ಲಿತ್ತು. ಅದರ ಹತ್ತಿರ ಒಂದು ಸಂಪಿಗೆಯ ಮರ. “ಅಲ್ಲಿ ಹಾವು ಇದೆ ಹೋಗಬೇಡ’ ಎಂದರೂ ಪುಟ್ಟ ಹುಡುಗಿ ನಾನು ಹೋಗುತ್ತಿ¨ªೆ. ಕಲಾವಿದೆಯಾಗಿದ್ದ ನನ್ನ ಮುತ್ತಜ್ಜಿ ಸಮಾಧಿಯೊಳಗೆ ಈಗ ಏನು ಮಾಡುತ್ತಿರಬಹುದು? ಅವಳೇಕೆ ಅಲ್ಲಿಂದ ಹೊರಬರಲಾರಳು? ಈ ನಿಗೂಢತತ್ವವು ನನ್ನ ಮನಸ್ಸನ್ನು ಸೆಳೆಯುತ್ತಿತ್ತು. ನನ್ನ ಸಂಗೀತವು ನಿಗೂಢ ಆಧ್ಯಾತ್ಮದ ಕಡೆಗೆ ಸಾಗಲು ಈ ನನ್ನ ಮನಸ್ಸಿನ ಗುಣವೇ ಕಾರಣವಾಗಿರಬೇಕು.
ಕಿಶೋರಿಯು ತಾಯಿಯ ಹೊಟ್ಟೆಯಲ್ಲಿ ಏಳು ತಿಂಗಳಾಗಿ ಇ¨ªಾಗಲೇ ಅÇÉಾದಿಯಾ ಖಾನರು ಬಸುರಿಗೆ ವಿದ್ಯೆ ಹಂಚತೊಡಗಿದ್ದರು. ಆ ಸಂಗೀತವೂ ಸೇರಿ ಮಗಳಿಗೆ ತಾಯಿಯಿಂದ ಬಂದದ್ದು ಬದುಕಿನ ಸಂಸ್ಕಾರ. ಅವಳು ವೈದ್ಯೆಯಾಗುವ ಕನಸಲ್ಲಿ ಮುಂಬೈಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದಳು. ಮುಂದೆ ಮರಾಠಿ, ಹಿಂದಿ, ಇಂಗ್ಲಿಷಿನಲ್ಲಿ ಸಲೀಸಾಗಿ ವೇದಿಕೆಯಲ್ಲಿ ಮಾತಾಡುವ ವಾಗ್ಮಿಯಾಗಲು ಈ ಶಾಲೆ ಮತ್ತು ಬಾಲ್ಯದಲ್ಲಿ ತಾಯಿ ಕೊಟ್ಟಿದ್ದ ಕಠಿಣ ನಿಯತ್ತೇ ಕಾರಣ. ಯಾವುದೇ ಸರಳ ರಂಜನೆಗೆ ಮನೆಯಲ್ಲಿ ತಾಯಿ ಎಡೆಕೊಡಲಿಲ್ಲ. ಅಮ್ಮನೂ ಗುರುವೂ ಆದ ಮೋಗೂಬಾಯಿಯೊಂದಿಗೆ ಹಾಡಿ, ಸಾಥಿ ಕೊಟ್ಟು , ಜೊತೆಗೆ ಬದುಕಿ, ಅÇÉಾದಿಯಾಖಾನರ ಜೈಪುರ್ ಅತ್ರಾವಲಿ ಘರಾನಾವನ್ನು ಕಿಶೋರಿ ಅರಗಿಸಿಕೊಂಡಳು. “ರೆಕ್ಕೆ ಬೆಳೆದ ಹಕ್ಕಿಯು ತಾಯಿಗೂಡಿನಿಂದ ಒಮ್ಮೆ ಹೊರಗೆ ಹಾರಿದರೆ ಮತ್ತೆ ಬರುವುದಿಲ್ಲ’ ಅನ್ನುತ್ತಿದ್ದ ಮೋಗೂಬಾಯಿ ಸಾಕಷ್ಟು ತಡವಾಗಿಯೆ ಮಗಳನ್ನು ಹಾಡಬಿಟ್ಟಳು. ಮಗಳ ಮನೋಭಾವವು ಗೊತ್ತಿದ್ದ ಅಮ್ಮನ ಮಾತು ನಿಜವಾಯಿತು. ಹೊರಬಂದ ಮಗಳು ತಾಯಿಯ ಪರಂಪರೆಯ ದಾಟಿ ಹಾರಿಹೋದಳು, ಹೊಸದಿಗಂತ ಮುಟ್ಟಿದಳು. ಅರುವತ್ತರ ದಶಕದ ಅಂತ್ಯವಾಗುತ್ತಿದ್ದಂತೆ ಕಿಶೋರಿಯ ಗಾಯನ ಸಭೆಗಳು ಸಾಂಪ್ರದಾಯಿಕರ ಸಿಟ್ಟಿಗೆ ಗುರಿಯಾಗುವ ಲಕ್ಷಣಗಳನ್ನು ಪಡೆಯಿತು. ಅÇÉಾದಿಯಾಖಾನರ ಘರಾನಾ ನಾಶವಾಗುತ್ತಿದೆ ಎಂಬ ಆಕ್ಷೇಪಕ್ಕೆ ಎದುರಾಗಿ ತನ್ನನ್ನು ಸಮರ್ಥಿಸುತ್ತಲೇ ಕಿಶೋರಿ ಹೊಸ ಗಾಯನ ಶೈಲಿಯ ಕಟ್ಟಿಕೊಟ್ಟಳು.
ಇಪ್ಪತ್ತೈದು ವರುಷದ ಸಣಕಲು ಸುಂದರಿಯು ಮದುವೆಯಾದದ್ದು ತಾಯಿ ಆರಿಸಿದ ರವಿ ಅಮೋನ್ಕರ್ ಎಂಬ ಶಿಕ್ಷಕನನ್ನು. ಅವನೋ ಡಿಕ್ಷನರಿಯನ್ನು ಪ್ರೀತಿಸುವ ಭಾಷಾಶಿಕ್ಷಕ. ಹಾಡುವುದಕ್ಕೆ ಹೆಂಡತಿಯನ್ನು ತಡೆಯಲಿಲ್ಲ. ಇಬ್ಬರು ಮಕ್ಕಳು, ಅವರಿಗೆ ಮೊಮ್ಮಕ್ಕಳು. ಹೀಗೆ ಎಲ್ಲ ಇದ್ದರೂ ಕಿಶೋರಿಯ ಸಂಗೀತ ಮಾತ್ರ ಅಂತರ್ಮುಖೀಯಾದುದು, ಒಂಟಿ ಮನಸ್ಸೊಂದು ಅನುಭವಿಸುವ ತೀವ್ರ ನೋವಿಗೆ ರೂಪಕವಾದಂತೆ ಇದ್ದುದು ಆಶ್ಚರ್ಯ. ಸುಕೋಮಲ ಮೃದುಗಾಯನದಲ್ಲಿದ್ದ ಈ ತೀವ್ರ ಭಾವುಕತೆಯೇ ಕಿಶೋರಿತಾಯಿಯ ಎದುರು ಕುಳಿತಿದ್ದ ಲಕ್ಷಾಂತರ ಕೇಳುಗರನ್ನು ಮಕ್ಕಳಾಗಿಸಿ ಬಿಟ್ಟ ಮಾಂತ್ರಿಕತೆಗೆ ಕಾರಣ. ಅಮ್ಮ ಹೇಳಿ ಕೊಟ್ಟ ಕಲಾಪದ್ಧತಿಯಿಂದ ತನಗೆ ಬೇಕಾದ ಶಿಸ್ತು, ಅಚ್ಚುಕಟ್ಟು , ಸ್ವರ ಸಾಧನೆ, ಸಂಕೀರ್ಣ ಸ್ವರವಿನ್ಯಾಸವನ್ನು ಗಾಯನದ ಆಳದಲ್ಲಿ ಬುನಾದಿಯಂತೆ ಅಡಗಿಸಿ ಅದರ ಮೇಲೆ ತನ್ನ ವಿಹಾರ ಸೌಧವನ್ನು ತನಗೆ ಬೇಕಾದಂತೆ ಈ ಮಗಳು ಕಟ್ಟಿಬಿಟ್ಟಳು. ನಿಜ ಏನೆಂದರೆ, “ನನ್ನ ಸಂಗೀತದಿಂದ ಜೈಪುರ ಘರಾನಾವನ್ನು ತೆಗೆದರೆ ನನ್ನ ಸಂಗೀತವೇ ಇರುವುದಿಲ್ಲ’ – ಇದು ಕಿಶೋರಿಯ ತುಂಟತನದಂತೆ ಕಾಣುವ ವಾಸ್ತವದ ಮಾತು. ಅಪಾರವೂ ಸಂಕೀರ್ಣವೂ ಆದಂಥ ಆಲಾಪವನ್ನು ತನ್ನ ಘರಾನಾಕ್ಕೆ ಹೊಸದಾಗಿ ತಂದು, ಪ್ರತಿಸ್ವರಕ್ಕೂ ತೀವ್ರ ಭಾವುಕತೆಯ ಬೆಳಕನ್ನು ಕೊಟ್ಟು, ಸಾಹಿತ್ಯದ ಸಾಲುಗಳಲ್ಲಿರುವ ಭಾವಕ್ಕೆ ಪ್ರಚಂಡ ಬಲ ಕೊಟ್ಟು ಆಕೆಯು ಮಂಡಿಸಿದ ಗಾಯನ ಶೈಲಿಯು ಮನುಕುಲದ ಎದೆಯಾಳದ ಎಲ್ಲ ನೋವನ್ನು ಯಾತನೆಯನ್ನು ಹೊರಗೆಳೆದು ಬಿಡಿಸಿಟ್ಟು ಹಗುರಗೊಳಿಸುವಂತೆ ಮಾಡುತ್ತಿತ್ತು. ನಮ್ಮ ಪುರಾತನ ಸಂಗೀತ ಗ್ರಂಥಗಳನ್ನು ನಾವು ಹೊರಹೊರಗಿನಿಂದ ಅರ್ಥ ಮಾಡಿಬಿಟ್ಟೆವು. ಕೇಳುವ ಕಿವಿಗಳಿಗಾಗಿ ಯಾಂತ್ರಿಕ ಮಂಡನೆ ಮಾಡಿಬಿಟ್ಟೆವು. ಆ ಗ್ರಂಥಗಳು ಹೇಳುವ ವಿಚಾರವನ್ನು ಅದರ ನಿಜವಾದ ಅರ್ಥದಲ್ಲಿ ತಿಳಿದು ಪ್ರಯೋಗಿಸುವ ಹುಡುಕಾಟವನ್ನು ನಾನು ಮಾಡುತ್ತಿದ್ದೇನೆ. ಹೀಗೆ ಕಿಶೋರಿ ತಾಯಿ ತನ್ನ ಸಮರ್ಥನೆಯನ್ನು ಮಹತ್ವದ ಸಂಕಿರಣಗಳಲ್ಲಿ ವಿವರಿಸಿ ಪಂಡಿತರ ಮನಸ್ಸು ಗೆಲ್ಲುತ್ತಿದ್ದಳು. ಆಕೆ ಕಲಾವಿದೆ ಮಾತ್ರವಲ್ಲ, ಸಂಗೀತದ ಮೇಧಾವಿನಿ.
ಎಪ್ಪತ್ತರ ದಶಕದಲ್ಲಿ ಆಕೆಯ ಗಂಟಲು ಒಮ್ಮೆ ಹಿಂಜರಿಯಿತು. ಆಕೆ ಆಧ್ಯಾತ್ಮದ ಮೊರೆಹೋದಳು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತಳಾದ ಆಕೆ ಕನ್ನಡದ ಯತಿಗಳಿಗಾಗಿ ಕನ್ನಡದಲ್ಲಿಯೆ ಹಾಡಿದ್ದು ಇತ್ತು. “ಹೊರಗಡೆ ಹಾಡಲು ಗಂಟಲು ಇಲ್ಲದಿದ್ದರೇನು? ನನ್ನೊಳಗೆ ಹಾಡಬಹುದಲ್ಲ? ಅದನ್ನೇ ಮಾಡುತ್ತಿ¨ªೆ. ಅಂತರಂಗಕ್ಕೆ ಬದ್ಧವಾಗಿ ಹಾಡುವುದು, ನನಗೆ ನಾನು ನಿಷ್ಠಳಾಗಿ ಸ್ವರತೆಗೆಯುವುದು. ಆಗ ಅರ್ಥವಾಯಿತು. ಮುಂದೆ ಸ್ವರ ಬಂದ ಬಳಿಕ ನಾನು ಹಾಡಿದ್ದು ಪ್ರೇಕ್ಷಕರಿಗಾಗಿ ಇರಲಿಲ್ಲ. ಕಛೇರಿ ಮುಗಿದ ಬಳಿಕ ನಾನು ಕೈಜೋಡಿಸುವುದು ಪ್ರೇಕ್ಷಕರೂಪದಲ್ಲಿ ಎದುರು ಕಂಡುಕೊಳ್ಳುವ ರಾಘವೇಂದ್ರ ಮುನಿಗಳಿಗೆ ಆಗಿರುತ್ತಿತ್ತು’ ಕಿಶೋರಿ ತಾಯಿಯ ಈ ಮಾತು- ಆಕೆಯದ್ದು ವಿಕ್ಷಿಪ್ತ ವರ್ತನೆ, ಅವಳ್ಳೋ ಮಹಾಮೂಡಿ ಹೆಂಗಸು, ಸಂಘಟಕರಿಗೆ ಅವಳು ಕಿರಿಕಿರಿ- ಎಂಬ ಎಲ್ಲ ಆಕ್ಷೇಪಗಳಿಗೆ ಉತ್ತರದಂತಿದೆ. ಕಛೇರಿ ಸಿಗಲು ಸಂಘಟಕರ ಯಾವ ಮರ್ಜಿಯನ್ನು ಬೇಕಾದರೂ ಹಿಡಿಯುವ, ಕಲೆಯಲ್ಲಿ ರಾಜಿಮಾಡಿಕೊಂಡು ತಾನು ಗೆಲ್ಲುವ ಅವಕಾಶವಾದಿ ಸಂಗೀತಕ್ಕೆ ಹೋಲಿಸಿದರೆ ಕಿಶೋರಿ ಸಂಪೂರ್ಣ ಬೇರೆ. ಒಂದು ಗಾಯನ ಪ್ರಸ್ತುತಿಗಾಗಿ ತಿಂಗಳ ಹಿಂದೆಯೇ ರಾಗಗಳ ನಿರ್ಧರಿಸಿ ತನ್ನÇÉೇ ತಯಾರಿ ನಡೆಸುವ ಅವಳ ಪ್ರಪಂಚದಲ್ಲಿ ಕಲೆಯಷ್ಟೆ ಮುಖ್ಯ, ಉಳಿದುದೆಲ್ಲ ಅಮುಖ್ಯ. ಇದು ಅಹಂಕಾರದಂತೆ ಕಂಡರೂ ಹಾಗಲ್ಲ, ಇದು ಸೃನಶೀಲತೆಯ ಬಗ್ಗೆ ಆಕೆಯಲ್ಲಿರುವ ಅಂತರ್ಮುಖತೆ.
ಗಂಡನಿಗಿಂತಲೂ ತುಸು ಎತ್ತರ ಎಂಬಷ್ಟು ದೀರ್ಘ ಶರೀರ, ಮುಖದಲ್ಲಿ ಮೂಗು ಪ್ರಧಾನ, ಹೊಳೆಯುವುದು ಕಣ್ಣುಗಳು ಮಾತ್ರ. ದೇಹವು ಎಷ್ಟು ಸಣಕಲೆಂದರೆ ತಂಬೂರಿಯನ್ನು ಆಧರಿಸಲು ಕಷ್ಟವೆನಿಸುವಷ್ಟು ! “”ನಿಮಗೆ ಗೊತ್ತಾ? ನಾನು ಸ್ವರಮಂಡಲ ಬಳಸಲು ತೊಡಗಿದ್ದು ತಾನ್ಪುರ ಹಿಡಿಯಲು ನನಗೆ ತ್ರಾಣವಿಲ್ಲದ್ದರಿಂದ. ಸ್ವರಮಂಡಲದ ಸಣ್ಣ ಸರಿಗೆಗಳ ಮೇಲೆ ಒಮ್ಮೆ ಬೆರಳು ಓಡಿದರಾಯಿತು, ರಾಗದ ಸೂûಾ¾ತಿಸೂಕ್ಷ್ಮ ಸ್ವರಲೋಕಕ್ಕೆ ನಾನು ಸೇರಿಕೊಂಡಾಯಿತು”
ಇದು ಈ ತಾಯಿಯ ಗಾನಗರ್ಭ.
– ಮಹಾಲಿಂಗ ಭಟ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.