ಮುಸ್ತಾಫಾನ ಜಾಣ್ಮೆ
Team Udayavani, Jan 20, 2019, 12:30 AM IST
ಮುಸ್ತಫಾ ಎಂಬ ಬಡ ಯುವಕನಿದ್ದ. ತಾನು ದೊಡ್ಡ ಸಾಹಸಿ ಎಂದು ಸದಾ ಬಡಾಯಿ ಕೊಚ್ಚುವುದು ಅವನ ಸ್ವಭಾವ. ಆದರೆ, ಎದೆಯಲ್ಲಿ ಧೈರ್ಯದ ಲವಲೇಶವೂ ಅವನಲ್ಲಿ ಇರಲಿಲ್ಲ. ಆ ದೇಶದ ಸುಲ್ತಾನನ ಮಗಳು ಒಂದು ಉತ್ಸವದ ಸಂದರ್ಭ ಅವನು ಹೇಳುವ ತನ್ನ ಪರಾಕ್ರಮದ ಕಥೆಗಳನ್ನು ಕೇಳಿ ಅವನೊಬ್ಬ ಸಾಹಸವಂತನೆಂದು ನಂಬಿಬಿಟ್ಟಳು. ಅವನನ್ನೇ ಕೈ ಹಿಡಿಯಬೇಕೆಂದು ನಿರ್ಧರಿಸಿ, ಅವನೊಂದಿಗೆ ಮಾತನಾಡಿದಳು. ಮಾತ್ರವಲ್ಲ, ಅವನನ್ನು ಪ್ರೇಮಿಸತೊಡಗಿದಳು. ಇದನ್ನು ತಿಳಿದು ಸುಲ್ತಾನ ಕೋಪಗೊಂಡ. ತನ್ನ ಮಗಳು ಸಾಮಾನ್ಯ ಮನುಷ್ಯನೊಬ್ಬನ ಹೆಂಡತಿಯಾಗುವುದು ಅವನಿಗೆ ಕೊಂಚವೂ ಇಷ್ಟವಿರಲಿಲ್ಲ. ಮುಸ್ತಾಫಾನನ್ನು ತನ್ನ ಸಭೆಗೆ ಕರೆಸಿದ. “”ನನ್ನ ಮಗಳು ನಿನ್ನನ್ನು ಪ್ರೀತಿಸುವಂತೆ ಸುಳ್ಳು ಮಾತುಗಳಿಂದ ಮೋಡಿ ಮಾಡಿರುವೆಯಂತೆ. ನಿನ್ನಲ್ಲಿ ಅಂತಹ ಸಾಧನೆ ಏನಿದೆ?” ಎಂದು ಕೇಳಿದ.
“”ಸಾಧನೆಯೆ? ನಿಮಗೆ ಗೊತ್ತಿಲ್ಲ. ನಾನು ಸಾಹಸಿ, ಧೈರ್ಯವಂತ, ಪರಾಕ್ರಮಿ!” ಎಂದು ಹೇಳಿದ ಮುಸ್ತಾಫಾ. ಸುಲ್ತಾನ ವ್ಯಂಗ್ಯವಾಗಿ ನಗುತ್ತ ಒಂದು ಹರಿತವಿಲ್ಲದ ಚೂರಿಯನ್ನು ತರಿಸಿ ಅವನಿಗೆ ಕೊಟ್ಟ. “”ಅಂತಹ ಸಾಹಸಿ ನೀನಾಗಿದ್ದರೆ ಈ ಚೂರಿಯಿಂದ ಏನು ಸಾಧಿಸಿದೆ ಎಂಬುದನ್ನು ಬಂದು ಹೇಳು” ಎಂದು ಆಜಾnಪಿಸಿದ. ಚೂರಿಯೊಂದಿಗೆ ಮುಸ್ತಾಫಾ ಹೊರಟ. ಒಂದೆಡೆ ಜೇನ್ನೊಣಗಳಿರುವ ಎರಿ ಕಾಣಿಸಿತು. ಚೂರಿಯನ್ನು ಭರದಿಂದ ಎರಿಯ ಮೇಲೆ ಬೀಸಿದ. ಆಗ ಎಪ್ಪತ್ತು ನೊಣಗಳು ಗಾಯಗೊಂಡವು. ಅರುವತ್ತು ನೊಣಗಳು ಸತ್ತುಹೋದವು. ಸಮೀಪದಲ್ಲಿ ಸುಲ್ತಾನನ ಅರಮನೆಗೆ ಆಯುಧಗಳನ್ನು ತಯಾರಿಸುವ ಕಮ್ಮಾರ ತನ್ನ ಕೆಲಸದಲ್ಲಿ ತೊಡಗಿದ್ದ. ಮುಸ್ತಾಫಾ ಅವನನ್ನು ಅಲ್ಲಿಗೆ ಕರೆದ.
“”ನೋಡು, ಮುಂದೆ ನಾನು ಸುಲ್ತಾನರ ಮಗಳ ಕೈ ಹಿಡಿಯುವ ಭಾವಿ ಅಳಿಯ. ಈ ಚೂರಿಯಿಂದ ಎಪ್ಪತ್ತು ಜನರಿಗೆ ಏಕಕಾಲದಲ್ಲಿ ಹೊಡೆದಿದ್ದೇನೆ, ಅರುವತ್ತು ಜನ ಸತ್ತು ಹೋಗಿದ್ದಾರೆ ಎಂದು ಈ ಚೂರಿಯ ಮೇಲೆ ಕೆತ್ತಿ ಕೊಡು” ಎಂದು ಕೇಳಿದ. ಕಮ್ಮಾರ ಅದೇ ರೀತಿ ಕೆತ್ತನೆ ಮಾಡಿ ಕೊಟ್ಟ. ಮುಸ್ತಾಫಾ ಚೂರಿಯನ್ನು ತಂದು ಸುಲ್ತಾನನಿಗೆ ತೋರಿಸಿದ. ತನ್ನ ಕಮ್ಮಾರನೇ ಹೀಗೆ ಕೆತ್ತಿರುವುದು ನೋಡಿ ಸುಲ್ತಾನನಿಗೆ ಅಚ್ಚರಿಯಾಯಿತು. ಆದರೂ ಮಸ್ತಾಫಾನನ್ನು ಅಳಿಯನೆಂದು ಒಪ್ಪಿಕೊಳ್ಳಲು ಅವನು ಮುಂದಾಗಲಿಲ್ಲ.
“”ನೋಡು, ಇದು ಒಂದು ಸಾಹಸವೇ ಅಲ್ಲ. ನಾನಾಗಿದ್ದರೆ ನೂರು ಮಂದಿಯನ್ನು ಒಮ್ಮೆಲೇ ನೊಣಗಳಂತೆ ಉರುಳಿಸಬಲ್ಲೆ. ಹೋಗಲಿ, ನೀನು ಅಂತಹ ಸಾಹಸಿಯಾಗಿದ್ದರೆ ಅರಮನೆಯ ಉಪಯೋಗಕ್ಕೆ ತುಂಬ ನೀರು ಬೇಕಾಗುತ್ತದೆ. ನೀನೊಬ್ಬನೇ ಎಷ್ಟು ಬೇಗ ತಂದು ಪಾತ್ರೆಗಳಿಗೆ ತುಂಬುವೆಯೋ ನೋಡುತ್ತೇನೆ” ಎಂದು ಹೇಳಿದ. ಬಾವಿಯಿಂದ ನೀರು ಸೇದಿ ತರುವುದು ಖಂಡಿತ ಸಾಧ್ಯವಿಲ್ಲವೆಂದು ಮುಸ್ತಾಫಾನಿಗೆ ತಿಳಿದಿತ್ತು.
“”ಅದಕ್ಕೇನಂತೆ, ನನಗೆ ನಾಲ್ವರು ಸೇವಕರು ಮತ್ತು ಒಂದು ಹಗ್ಗವನ್ನು ಕೊಟ್ಟರೆ ಇಡೀ ಬಾವಿಯನ್ನು ತಂದು ಅರಮನೆಯೊಳಗೆ ಇಡುತ್ತೇನೆ” ಎಂದು ಮೀಸೆ ತಿರುವಿದ.ಸುಲ್ತಾನನು ಸೇವಕರ ಜೊತೆಗೆ ಹಗ್ಗವನ್ನು ನೀಡಿದ. ಮುಸ್ತಾಫಾ ಬಾವಿಯ ದಂಡೆಯಲ್ಲಿದ್ದ ಕಲ್ಲಿಗೆ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ತನ್ನ ಬೆನ್ನಿಗೆ ಬಿಗಿದುಕೊಂಡ. ತಾನು ಎಳೆಯುವ ಭಂಗಿಯಲ್ಲಿ ನಿಂತು ಸೇವಕರೊಂದಿಗೆ ಬಾವಿಯನ್ನು ಮುಂದೆ ದೂಡಲು ಹೇಳಿದ. ಈ ಸಾಹಸ ಮಾಡುವಾಗ ಇಬ್ಬರು ಸೇವಕರು ಕಾಲು ಜಾರಿ ಬಾವಿಗೆ ಬಿದ್ದು ಮುಳುಗಿ ಹೋದರು. ಇದನ್ನು ಕಂಡು ಸುಲ್ತಾನನು, “”ಬಾವಿಯನ್ನು ತರುವ ಕೆಲಸ ಸಾಕು, ಅರಮನೆಗೆ ಒಂದು ವರ್ಷಕ್ಕೆ ಬೇಕಾಗುವ ಕಟ್ಟಿಗೆಯನ್ನು ತಂದು ತುಂಬಿಸು” ಎಂದು ಆಜಾnಪಿಸಿದ.
“”ಅದು ಕಷ್ಟವಿಲ್ಲ. ಒಂದು ಗುದ್ದಲಿ ಕೊಡಿ” ಎಂದು ಕೇಳಿಕೊಂಡ ಮುಸ್ತಫಾ. ಗುದ್ದಲಿ ಕೈಗೆ ಬಂದ ಕೂಡಲೇ ಅರಮನೆಯ ಹೆಬ್ಟಾಗಿಲನ್ನು ಕೀಳತೊಡಗಿದ. ಸುಲ್ತಾನನು ಕೋಪದಿಂದ, “”ಕಟ್ಟಿಗೆ ತರಲು ಹೇಳಿದರೆ ಹೆಬ್ಟಾಗಿಲನ್ನು ಯಾಕೆ ಕೀಳುತ್ತಿರುವೆ?” ಎಂದು ಪ್ರಶ್ನಿಸಿದ. “”ಅಯ್ಯೋ ದೇವರೇ, ನಾನು ಒಂದು ಕಟ್ಟಿಗೆ ತರುತ್ತೇನಾ? ಅರಮನೆ ಮುಂದಿರುವ ಇಡೀ ಕಾಡನ್ನೇ ಒಮ್ಮೆಲೇ ಒಳಗೆ ತರಬೇಕು. ಅದಕ್ಕೆ ಬಾಗಿಲು ಕಿರಿದಾಗಿದ್ದರೆ ಕಷ್ಟವಾಗುತ್ತದೆ” ಎಂದ ಮುಸ್ತಾಫಾ. ಸುಲ್ತಾನನು ಆ ಕೆಲಸವನ್ನು ನಿಲ್ಲಿಸಲು ಹೇಳಿದ.ಸುಲ್ತಾನನು ಜಗಜಟ್ಟಿಯೊಬ್ಬನನ್ನು ಕರೆಸಿ ಮುಸ್ತಾಫಾನಿಗೆ, “”ಅವನನ್ನು ಸೋಲಿಸು” ಎಂದು ಆಜ್ಞೆ ಮಾಡಿದ. ಜಟ್ಟಿಯ ಕಟ್ಟುಮಸ್ತಾದ ಶರೀರ ಕಂಡು ಭಯಗೊಂಡ ಮುಸ್ತಾಫಾ, “”ಅಣ್ಣ, ನಿನ್ನೊಂದಿಗೆ ಹೋರಾಡಲು ನನಗೆ ಎಲ್ಲಿದೆ ಬಲ? ಒಮ್ಮೆ ನಿನ್ನ ಕಾಲು ಮುಟ್ಟಿ ನಮಸ್ಕರಿಸಲು ಬಿಡು” ಎಂದು ಪಿಸುದನಿಯಿಂದ ಕೇಳಿಕೊಂಡ. ಜಟ್ಟಿ ಒಪ್ಪಿಕೊಂಡ. ಅವನ ಕಾಲು ಹಿಡಿಯಲು ಬಾಗಿದ ಮುಸ್ತಾಫಾ ತೊಡೆಯನ್ನು ಹಿಡಿದು ಅನಾಮತ್ತಾಗಿ ಉರುಳಿಸಿಬಿಟ್ಟ. ಜಟ್ಟಿಗೆ ಮೇಲೇಳಲು ಆಗಲಿಲ್ಲ. ಸುಲ್ತಾನ ಮುಸ್ತಾಫಾನನ್ನು ಕೊಲ್ಲಲು ರಾತ್ರೆ ಅವನ ಗುಡಿಸಲಿನ ಛಾವಣಿಯ ಮೇಲಿನಿಂದ ಕುದಿಯುವ ನೀರನ್ನು ಒಳಗೆ ಹಾಕಿಸಿದ.
ಚಳಿ ತಡೆಯುವುದಿಲ್ಲ ಎಂದು ಮುಸ್ತಾಫಾ ಬಚ್ಚಲಿನ ಒಲೆಯ ಒಳಗೆ ಮಲಗಿದ್ದ ಕಾರಣ ನೀರೆಲ್ಲವೂ ಹಂಡೆಯ ಒಳಗೆ ತುಂಬಿಕೊಂಡಿತು. ಬೆಳಗ್ಗೆ ಅವನು ಸತ್ತಿರುವುದನ್ನು ನೋಡಲು ಬಂದ ಸುಲ್ತಾನನ ಸೇವಕರು ಅವನು ಬಿಸಿನೀರಿನ ಸ್ನಾನ ಮಾಡಿ ಖುಷಿಯಾಗಿರುವುದನ್ನು ಕಂಡರು. ಆ ದಿನ ರಾತ್ರೆ ಮತ್ತೆ ಸುಲ್ತಾನನು ಕಬ್ಬಿಣದ ಗುಂಡುಗಳನ್ನು ಛಾವಣಿಯಲ್ಲಿ ಒಳಗೆ ಹಾಕಿಸಿಬಿಟ್ಟ. ಮುಸ್ತಾಫಾನಿಗೆ ಸುಲ್ತಾನನ ಮೇಲೆ ಅನುಮಾನವಿರುವ ಕಾರಣ ನೆಲಮಾಳಿಗೆಯೊಳಗೆ ಬಚ್ಚಿಟ್ಟುಕೊಂಡು ಗುಂಡುಗಳ ಏಟಿನಿಂದ ಪಾರಾದ.ಬೆಳಗಾದಾಗ ಮತ್ತೆ ಸುಲ್ತಾನನ ಸೇವಕರು ಮುಸ್ತಾಫಾನ ಮನೆಗೆ ಬಂದರು. ಮುಸ್ತಾಫಾ ಕಣ್ಣುಗಳನ್ನು ಹೊಸಕಿಕೊಳ್ಳುತ್ತ ಬಾಗಿಲು ತೆರೆದ. “”ಇಡೀ ರಾತ್ರೆ ಇಲಿಗಳ ಕಾಟ! ಕಿಚ್ ಕಿಚ್ ಅನ್ನುತ್ತ ಛಾವಣಿಯಿಂದ ಕೆಳಗೆ ಬೀಳುತ್ತ ಇದ್ದವು. ನಿದ್ರೆ ಅನ್ನುವುದು ಬರಲಿಲ್ಲ” ಎಂದು ಹೇಳಿದ. ಸೇವಕರು ಮುಸ್ತಾಫಾ ಆರಾಮವಾಗಿರುವ ಸುದ್ದಿ ತಂದಾಗ ಅವನನ್ನು ಏನು ಮಾಡುವುದೆಂದು ತಿಳಿಯದೆ ಸುಲ್ತಾನ ಚಿಂತೆಗೊಳಗಾದ.ಆಗ ಮಂತ್ರಿಗಳು, “”ಇಷ್ಟೆಲ್ಲ ಪರೀಕ್ಷೆಗಳಲ್ಲೂ ಅವನು ಗೆದ್ದಿದ್ದಾನೆ. ಕಡೆಯದಾಗಿ ಒಂದು ಕಠಿಣ ಪರೀಕ್ಷೆ ಮಾಡಿ ನೋಡೋಣ. ಇದರಲ್ಲಿ ಗೆದ್ದರೆ ಮತ್ತೆ ನೀವು ಅವನನ್ನು ಅಳಿಯನೆಂದು ಒಪ್ಪಿಕೊಳ್ಳಬೇಕು” ಎಂದು ಸಲಹೆ ನೀಡಿದರು.
“”ಅದೇನು ಹೇಳಿ” ಎಂದ ಸುಲ್ತಾನ. “”ಒಂದು ಕರಡಿ ಬಹು ಕಾಲದಿಂದ ಪ್ರಜೆಗಳಿಗೆ ತೊಂದರೆ ಕೊಡುತ್ತ ಇದೆ. ಅದನ್ನು ಕೊಲ್ಲಲು ಅವನಿಗೆ ಹೇಳಿ” ಎಂದರು ಮಂತ್ರಿಗಳು.ಕರಡಿಯನ್ನು ಕೊಲ್ಲುವ ಕೊನೆಯ ಪರೀಕ್ಷೆಯನ್ನು ಸುಲ್ತಾನ ಹೇಳಿದಾಗ ಮುಸ್ತಾಫಾನಿಗೆ ಜಂಘಾಬಲವೇ ಉಡುಗಿಹೋಯಿತು. ಆದರೂ ತೋರಿಸಿಕೊಳ್ಳಲಿಲ್ಲ. “”ನನಗೊಂದು ವೇಗವಾಗಿ ಓಡುವ ಕುದುರೆಯನ್ನು ಕೊಡಿ. ನಾನು ಕರಡಿಯ ಕಾಟ ಪರಿಹರಿಸುತ್ತೇನೆ” ಎಂದು ಕೋರಿದ. ಕುದುರೆಯ ಮೇಲೆ ಕುಳಿತು ಊರು ಬಿಟ್ಟು ಹೋಗುವ ಅವನ ಯೋಚನೆ ಸುಲ್ತಾನನಿಗೆ ಅರ್ಥವಾಗಲಿಲ್ಲ. ಕುದುರೆಯನ್ನು ಕೊಡಿಸಿದ. ಅದರ ಮೇಲೇರಿಕೊಂಡು ಮುಸ್ತಾಫಾ ಸಾಗತೊಡಗಿದ. ಕಾಡುದಾರಿಯಲ್ಲಿ ಓಡುತ್ತಿರುವ ಕುದುರೆಯ ಮುಂದೆ ಇದ್ದಕ್ಕಿದ್ದಂತೆ ಕರಡಿ ಪ್ರತ್ಯಕ್ಷವಾಗಿ ಸನಿಹಕ್ಕೆ ಓಡಿ ಬಂದಿತು.ಭಯಗ್ರಸ್ಥವಾದ ಕುದುರೆ ಹಿಂಗಾಲುಗಳ ಮೇಲೆ ನಿಂತು ಮುಂದೆ ಜಿಗಿಯಿತು. ಆಗ ಕರಡಿ ಅದರ ಕಾಲುಗಳ ನಡುವೆ ಸಿಲುಕಿ ನೆಲಕ್ಕುರುಳಿತು. ಇದೇ ಸಮಯ ನೋಡಿ ಮುಸ್ತಾಫಾ ಕೆಳಗೆ ಧುಮುಕಿದ. ತನ್ನ ಮುಂಡಾಸಿನ ಬಟ್ಟೆಯನ್ನು ಕರಡಿಯ ಕೊರಳಿಗೆ ಬಿಗಿಯಾಗಿ ಕಟ್ಟಿ ಹಿಡಿದುಕೊಂಡ. ಮತ್ತೆ ಕುದುರೆಯ ಬೆನ್ನ ಮೇಲೇರಿ ಕರಡಿಯನ್ನು ಅರಮನೆಯ ಅಂಗಳಕ್ಕೆ ಎಳೆದು ತಂದ.
ಮುಸ್ತಾಫಾ ತಂದ ಕರಡಿಯನ್ನು ಕಂಡು ಸುಲ್ತಾನ ವಿಸ್ಮಿತನಾದ. ಇವನು ಸಾಧಾರಣನಲ್ಲ, ಸಾಹಸಿ ಎಂಬುದರಲ್ಲಿ ಅನುಮಾನವಿಲ್ಲ ಎಂದು ನಿರ್ಧರಿಸಿದ. ಕರಡಿಯನ್ನು ಅರಮನೆಯ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿದ. ಮುಸ್ತಾಫಾನನ್ನು ಆದರದಿಂದ ಮಾತನಾಡಿಸಿದ. ತನ್ನ ಮಗಳ ಜೊತೆಗೆ ಅವನ ವಿವಾಹ ನೆರವೇರಿಸಿದ. ಮುಂದೆ ಅವನೇ ರಾಜ್ಯದ ಉತ್ತರಾಧಿಕಾರಿಯೆಂದು ಸಾರಿದ.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.