Mysore Dasara: ಆನೆ ಮೇಲೆ ಅಂಬಾರಿ ಮೇಲೆ ಜಂಬೂ ಸವಾರಿ!

ಮೈಸೂರು ದಸರಾ... ಎಷ್ಟೊಂದು ಸುಂದರ...

Team Udayavani, Oct 22, 2023, 3:39 PM IST

Mysore Dasara: ಆನೆ ಮೇಲೆ ಅಂಬಾರಿ ಮೇಲೆ ಜಂಬೂ ಸವಾರಿ!

ದಸರಾ ಅಂದಾಗ ಎಲ್ಲರಿಗೂ ನೆನಪಾಗುವುದು ಮೈಸೂರು. ಮಹಾರಾಜರು, ಅವರ ಅಕ್ಕರೆ, ಸೌಜನ್ಯ, ದೂರದೃಷ್ಟಿ , ಅಲ್ಲಿನ ಅರಮನೆ, ಆನೆ ಮತ್ತು ಅಂಬಾರಿ ಕುರಿತು ಇರುವ ಕಥೆಗಳಿಗೆ ಲೆಕ್ಕವಿಲ್ಲ. ಅಂಥ ಚೆಂದದ ಪ್ರಸಂಗಗಳು ಇಲ್ಲಿ ಅಕ್ಷರದ ರಂಗವಲ್ಲಿಯಾಗಿ ಹರಡಿಕೊಂಡಿವೆ…

ಮಾರಾಜ್ರನ್ನ ಬೈಯೋಕೇ ಜನ ಇದ್ರಂತೆ!
ಮರೆಯಲಾಗದ ದ್ರೋಣ

ದಸರಾ ಚಿನ್ನದ ಅಂಬಾರಿಯನ್ನು ಅತಿ ದೀರ್ಘ‌ಕಾಲ ಹೊತ್ತು ನಡೆದವನು ದ್ರೋಣ. ಅವನ ಎತ್ತರ ಮತ್ತು ಗಾತ್ರಕ್ಕೆ ಸರಿಸಮನಾದ ಆನೆ ಮತ್ತೂಂದಿಲ್ಲ. ಅವನ ಮಟ್ಟಸವಾದ ಬೆನ್ನುಭುಜ ಭಾಗ ಅದೆಷ್ಟು ವಿಶಾಲವಾಗಿತ್ತೆಂದರೆ, ತಾಯಿ ಚಾಮುಂಡೇಶ್ವರಿ ಪುತ್ಥಳಿಯ ಅಂಬಾರಿ ಒಂದಿಷ್ಟೂ ಬಾಗದಂತೆ, ಜಾರದಂತೆ ಕೂರುತ್ತಿತ್ತು. ಅರಮನೆಯಿಂದ ಸುಮಾರು ಆರು ಕಿಲೋಮೀಟರ್‌ ದೂರ ಮೆರವಣಿಗೆಯಲ್ಲಿ ನಡೆದು ದ್ರೋಣ ಬನ್ನಿಮಂಟಪ ಮೈದಾನ ಸೇರುತ್ತಿದ್ದ. ಚಿನ್ನದ ಅಂಬಾರಿ ಒಂದಿಷ್ಟೂ ಕೊಂಕಿರುತ್ತಿರಲಿಲ್ಲ.

ಸತತ 19 ವರ್ಷಗಳ ಕಾಲ ಅಂಬಾರಿ ಹೊತ್ತಿದ್ದ ದ್ರೋಣ ಒಂದೇ ಒಂದು ಬಾರಿಯೂ ಕೂಡ ವ್ಯಗ್ರನಾಗಿರಲಿಲ್ಲ. ಭೂಮ್ಯಾಕಾಶ ನಡುಗುವಂತಹ 21 ಕುಶಾಲು ತೋಪುಗಳನ್ನು ಹಾರಿಸಿದಾಗ ಕೊಂಚವೂ ಕೆಂದದ ಸ್ಥಿತಪ್ರಜ್ಞ. ಗಡಚಿಕ್ಕುವ ಫಿರಂಗಿ ಸ್ಫೋಟದ ನಡುವೆಯೂ ಅವನ ಗಾಂಭೀರ್ಯದ ಗತ್ತೇ ಗತ್ತು.

ಹೀಗೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಗಜ ಗಾಂಭೀರ್ಯದಲ್ಲಿ ಸಾಗುತ್ತಿದ್ದ ದ್ರೋಣ ಒಮ್ಮೆ ಗಕ್ಕನೆ ನಿಂತುಬಿಟ್ಟಿದ್ದ. ಕಾರಣವೇ ಇಲ್ಲದೆ ನಿಂತನೇಕೆಂದು ಮಾವುತ ಗಾಬರಿಯಾದ. ಅಂಕುಶದಲ್ಲಿ ಮೃದುವಾಗಿ ಒತ್ತಿ ನೋಡಿದ. ಉಹೂಂ, ದ್ರೋಣ ಅಲ್ಲಾಡಲೊಲ್ಲ. ಚಿನ್ನದ ಅಂಬಾರಿ ಹೊತ್ತಿರುವ ದ್ರೋಣನಿಗೆ ಸಿಕ್ಕಾಪಟ್ಟೆ ಅಂಕುಶ ಒತ್ತುವಂತಿಲ್ಲ. ಎಲ್ಲಾದರೂ ಕೆರಳಿ ಅತ್ತಿತ್ತ ಅಡ್ಡಾಡಿದನೆಂದರೆ ಮುಗಿಯಿತು ಕತೆ. ಇಡೀ ಮೆರವಣಿಗೆ ಅಸ್ತವ್ಯಸ್ತಗೊಳ್ಳುತ್ತದೆ.
ದಿಕ್ಕು ತೋಚದೆ ಮಾವುತ, ಕೆಳಗಡೆ ಇದ್ದ ಕಾವಾಡಿಗಳಿಗೆ (ಆನೆಯ ಸ್ನಾನಪಾನಾದಿ ಮೇವಿನ ಉಸ್ತುವಾರಿ ಮಾಡುವವರು) ಸೂಚನೆ ಇತ್ತ. ಅವರೂ ಬಗ್ಗಿ ನೋಡಿ ಪರಿಶೀಲಿಸಿದರು. ಕಾರಣ ಗೊತ್ತಾಗಲಿಲ್ಲ.

ದ್ರೋಣ ಬಲ ಮುಂಗಾಲನ್ನು ಅಲ್ಲಾಡಿಸಿದ. ಬಿಂದಿಗೆಯಷ್ಟು ರಕ್ತ ನೆಲದ ಮೇಲೆ ಹರಡಿಕೊಂಡಿತು. ಆನೆ ವೈದ್ಯರು , ಪೆರೇಡ್‌ ಕಮಾಂಡರ್‌ ಮರಿಬಾಸೆಟ್ಟಿ ಎಲ್ಲರೂ ಧಾವಿಸಿಬಂದರು. ಸುಮಾರು ಏಳು ಇಂಚಿನಷ್ಟು ಉದ್ದದ ಕಬ್ಬಿಣದ ಮೊಳೆ ಹೊಕ್ಕಿತ್ತು. ತಕ್ಷಣವೇ ಮೊಳೆ ಕಿತ್ತು ಚಿಕಿತ್ಸೆ ನೀಡಿದರು. ಇಷ್ಟಾದರೂ ತನ್ನ ನೋವು ತೋರಿಸಿಕೊಳ್ಳದೆ ದ್ರೋಣ ಬನ್ನಿ ಮಂಟಪಕ್ಕೆ ಬಂದು ಸೇರಿದ. ಬೇರೆ ಯಾವುದೇ ಆನೆಯಾಗಿದ್ದರೂ ನೋವಿಗೆ ಅತ್ತಿತ್ತ ಅಡ್ಡಾಡಿ ರಂಪ ಮಾಡಿಬಿಡು­ತ್ತಿತ್ತೋ ಏನೋ? ದ್ರೋಣನಿಗೆ ಜವಾಬ್ದಾರಿ ಎಂಬುದು ಕರಗತವಾಗಿತ್ತು.

– ಜೆ. ಬಿ. ರಂಗಸ್ವಾಮಿ, ನಿವೃತ್ತ ಪೊಲೀಸ್‌ ಅಧಿಕಾರಿ, ಮೈಸೂರು
**
ವಿವೇಕಾನಂದರ ಸಲಹೆ ಮತ್ತು ಮಹಿಳಾ ಕಾಲೇಜು!
ಚಾಮರಾಜೇಂದ್ರ ಒಡೆಯರ್‌ ಅವರು ದೊರೆಯಾಗಿದ್ದ ಸಂದರ್ಭದಲ್ಲಿ ಮೈಸೂರಿಗೆ ಬಂದ ಸನ್ಯಾಸಿಯೊಬ್ಬ ಲೋಕಾಭಿರಾಮವಾಗಿ ಮಾತಾಡುತ್ತ ಹೇಳಿದ: “ಎಲ್ಲವನ್ನೂ ನಾನಿಲ್ಲಿ ಕಂಡೆ. ಒಂದೇ ಒಂದು ಕೊರತೆ ನನ್ನ ಗಮನಕ್ಕೆ ಬಂತು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಳ್ಳಿ…’

ವಾಣಿವಿಲಾಸ ಸನ್ನಿಧಾನ ಆವತ್ತೇ, ಆ ಕ್ಷಣವೇ ನಿರ್ಧರಿಸಿಬಿಟ್ಟರು. ಭಾರತದಲ್ಲೇ ಮೊತ್ತ ಮೊದಲಬಾರಿಗೆ ಹೆಣ್ಣು ಮಕ್ಕಳಿಗೇ ಮೀಸಲಾದ ಪ್ರಪ್ರಥಮ ಮಹಾರಾಣಿ ಕಾಲೇಜು 1881 ರಲ್ಲಿ ಪ್ರಾರಂಭವಾಯಿತು. ಅದು ಅಸ್ತಿತ್ವಕ್ಕೆ ಬರುವಂತೆ ಪ್ರೇರಣೆ ನೀಡಿದ ಸನ್ಯಾಸಿ – ಸ್ವಾಮಿ ವಿವೇಕಾನಂದರು!
**
ಗ್ರಂಥಗಳ ಕಟ್ಟು ಎತ್ತಿಟ್ಟು ಪಂಡಿತರನ್ನು ಎಬ್ಬಿಸಿದರು!

ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ವಿದ್ವತ್ತಿಗೆ, ಕಲೆಗೆ ಕೊಡುತ್ತಿದ್ದ ಪ್ರಾಧಾನ್ಯತೆ ಹೊರ ರಾಜ್ಯಗಳಿಗೂ ಪಸರಿಸಿತ್ತು. ಹಲವಾರು ವಿದ್ವಾಂಸರು, ಪಂಡಿತರು ನಾನಾ ಕಡೆಗಳಿಂದ ಮೈಸೂರಿಗೆ ಬಂದು ರಾಜಾಶ್ರಯ ಪಡೆದಿದ್ದರು. ಅಂಥವರಲ್ಲಿ ಸುಬ್ರಹ್ಮಣ್ಯ ಶಾಸ್ತ್ರೀ ಗಳೂ ಒಬ್ಬರು. ಇವರು ಚಿಕ್ಕ ವಯಸ್ಸಿನಲ್ಲೇ ವೇದ, ಉಪನಿಷತ್‌, ಭಾಗವತದಂಥ ಪುರಾಣಗಳನ್ನು ಮನನ ಮಾಡಿಕೊಂಡಿದ್ದರು. ಅಪಾರ ಜ್ಞಾಪಕ ಶಕ್ತಿ ಹೊಂದಿದ್ದರು. ದಾಯಾದಿಗಳ ಕಿರುಕುಳ ತಾಳಲಾರದೆ ಕೊಯಮತ್ತೂರು ಜಿಲ್ಲೆಯಿಂದ ಬಂದು ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯಕ್ಕೆ ಸೇರಿದರು. ಇವರ ವಿದ್ವತ್ತು, ಸ್ಮರಣ ಶಕ್ತಿಯ ಬಗ್ಗೆ ತಿಳಿದಿದ್ದ ಮಹಾರಾಜರು, ನಿತ್ಯವೂ ಪಾರಾಯಣಕ್ಕೆ ಬರುತ್ತಿದ್ದ ಆಚಾರ್ಯರನ್ನು ಸಭೆಗೆ ಪರಿಚಯಿಸುವ ಸಲುವಾಗಿ ಒಂದು ದಿನ- “ನಿಧಾನವಾಗಿ ಪಾರಾಯಣ ಆರಂಭಿಸಿ’ ಎಂದು ಆದೇಶಿಸಿದರು.

ಸುಬ್ರಮಣ್ಯ ಶಾಸ್ತ್ರೀಗಳು ಬಿಡುವು ಸಿಕ್ಕಿತೆಂದು ಹಾಗೇ ಕಂಬಕ್ಕೊರಗಿ ನಿದ್ರೆಗೆ ಜಾರಿದರು. ಅದನ್ನು ಗಮನಿಸಿದ ಪ್ರಭುಗಳು, ಇದೇ ಸರಿಯಾದ ಸಮಯವೆಂದು ತೀರ್ಮಾನಿಸಿ, ಶಾಸ್ತ್ರೀಗಳು ಪಕ್ಕದಲ್ಲಿಟ್ಟುಕೊಂಡಿದ್ದ ಗ್ರಂಥಗಳ ಕಟ್ಟನ್ನು ತರಿಸಿಕೊಂಡು ಬಿಟ್ಟರು. ನಂತರ, ಅವರನ್ನು ಎಬ್ಬಿಸುವಂತೆ ಭಟರಿಗೆ ಆದೇಶಿಸಿದರು. ಶಾಸ್ತ್ರೀಗಳು ತಡಬಡಿಸಿ ಎದ್ದು ತಮ್ಮ ಪುಸ್ತಕದ ಕಟ್ಟನ್ನು ಹುಡುಕುತ್ತಾರೆ; ಅದು ಸಿಗದಿದ್ದಾಗ ಸ್ವಲ್ಪವೂ ವಿಚಲಿತರಾಗದೆ ತಾವು ಹಿಂದಿನ ದಿನ ನಿಲ್ಲಿಸಿದ್ದ ಭಾಗದ ಮುಂದಿನ ಭಾಗದಿಂದ ಉಪನ್ಯಾಸ ಪ್ರಾರಂಭಿಸಿ, ನಿರರ್ಗಳವಾಗಿ ಮುಕ್ತಾಯ ಪಡಿಸಿದರು. ನಂತರ ಮಹಾರಾಜರು ಶಾಸ್ತ್ರೀಗಳಿಗೆ ಗ್ರಂಥದ ಕಟ್ಟು ನೀಡಿ ಸಭೆಯಲ್ಲಿ ಅವರನ್ನು ಗೌರವಿಸಿ, ಸತ್ಕರಿಸಿದರು. ಅವರ ಗುಣಗಾನ ಮಾಡಿ ಅವರ ವಿದ್ವತ್ತನ್ನು ಸಭೆಗೆ ಪರಿಚಯಿಸಿದರು.

– ಮಂಗಳ ಶಂಕರ್‌, ಮೈಸೂರು
**


ರಂಗೇಗೌಡ, ಏನು ಮಾಡಿದ್ದಿ ತಗೊಂಡು ಬಾರಪ್ಪ…
ಸೂರಿನ ಕೊನೆಯ ದೊರೆ ಜಯಚಾಮರಾಜ ಒಡೆಯರ್‌ರವರ ಆಸಕ್ತಿಯ ಕ್ಷೇತ್ರಗಳು ಹಲವು. ವನ್ಯ ಸಂಕುಲಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದ ಅವರು, ವನ್ಯಜೀವಿಗಳ ಕೇಂದ್ರೀಯ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಬಹಳ ವರ್ಷಗಳಿಂದ ನಿಂತು­ಹೋಗಿದ್ದ ಆನೆ ಸೆರೆಹಿಡಿದು ಪಳಗಿಸುವ ಖೆಡಾª ಕಾರ್ಯಾಚರಣೆಗೂ ಚಾಲನೆ ಕೊಟ್ಟಿದ್ದರು. ಬಿಳಿಗಿರಿರಂಗನ ಬೆಟ್ಟದ ಹೊನ್ನಮಟ್ಟಿ ಎಸ್ಟೇಟಿನಲ್ಲಿ ತಂಗಿ ಹೋಗುತ್ತಿದ್ದರು. ಈ ಪ್ರದೇಶದಲ್ಲಿ ವಾಸಿಸುವ ಕಾಡು ಜನರನ್ನು ಕಂಡರೆ ಅವರಿಗೆ ಮರುಕವಿತ್ತು. ಹೇಗಾದರೂ ಮಾಡಿ ಅವರನ್ನು ನಾಡಿನಲ್ಲಿ ನೆಲೆಸುವಂತೆ ಮಾಡಬೇಕೆಂದು ತೀರ್ಮಾನಿಸಿ, ಪ್ರಯೋಗಾರ್ಥವಾಗಿ ಕೆಲವು ಸೋಲಿಗ ಕುಟುಂಬಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಅರಮನೆಯ ಪಕ್ಕದಲ್ಲಿ ಇರಲು ವ್ಯವಸ್ಥೆ ಮಾಡಿದ್ದರು.

ಬೆಳಗ್ಗೆ ವಾಕಿಂಗ್‌ ಸಮಯದಲ್ಲಿ ಅರಮನೆ ಆವರಣದಲ್ಲಿ ಸಿಗುವ ಕಡ್ಡಿಪುಳ್ಳೆಗಳನ್ನು ಆಯ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಸೋಲಿಗರನ್ನು ನೋಡಿ ಮಹಾರಾಜರಿಗೆ ಆಶ್ಚರ್ಯವಾಯಿತು. ಹೊಸ ಜಾಗ. ದಿನ ಕಳೆದರೆ ಹೊಂದಿಕೊಳ್ಳುತ್ತಾರೆಂದು­ ಕೊಂಡರೆ ಪ್ರತಿದಿನವೂ ಅದೇ ನೋಟ! ಕಾಡ ಸೋಲಿಗರನ್ನು ನಾಡಿಗೆ ಕರೆತಂದರೆ ಅವರ ಜೀವನ ಶೈಲಿ ಬದಲಾಗುವುದಿಲ್ಲ. ಅವರು ಅಸ್ಮಿತೆ ಬಿಡುವುದಿಲ್ಲವೆಂದು ಅರಿತು ಅವರ ಪಾಡಿಗೆ ಇರುವುದಕ್ಕೆ ಬಿಟ್ಟುಬಿಟ್ಟರು.

ಬಿಳಿಗಿರಿರಂಗನ ಬೆಟ್ಟ ಸಮೀಪದ ಕೆ. ಗುಡಿಗೆ ಅಚಾನಕ್ಕಾಗಿ ಭೇಟಿ ಕೊಟ್ಟಾಗಲೆಲ್ಲಾ -“ರಂಗೇಗೌಡ, ಏನು ಮಾಡಿದ್ದಿ ತಗೊಂಡು ಬಾರಪ್ಪ…’ ಎನ್ನುತ್ತಾ ಅವನು ರುಚಿಕರವಾಗಿ ಮಾಡುವ ತಿಳಿಸಾರನ್ನು ಬಡಿಸಿಕೊಂಡು ಹೊಟ್ಟೆ ತುಂಬ ಸೇವಿಸುತ್ತಿದ್ದರು. ಮಹಾರಾಜರಿಗೆ ಇಷ್ಟವಾಗುವ ವಿಶೇಷತೆ ಆ ತಿಳಿಸಾರಿನಲ್ಲಿ ಏನಿತ್ತು ಎಂದಿರಾ?

ಈ ಸೋಲಿಗ ರಂಗೇಗೌಡನ ಅಪ್ಪ ನಂಜೇಗೌಡ ಅರಮನೆ ಅಡುಗೆಯವರಿಗೆ ಪಾತ್ರೆ ಮುಸುರೆ ತಿಕ್ಕುವುದರಲ್ಲಿ ಸಹಾಯ ಮಾಡುತ್ತಿದ್ದ. ಕಾಡಿನ ಅರಿಶಿನ, ಕಾಡು ಕೊತ್ತಂಬರಿ, ಕಾಡುಜೇರಿಗೆ ಮುಂತಾದ ಉತ್ಪನ್ನಗಳನ್ನ ಹಾಕಿ ರುಚಿಕರವಾದ ಘಮಲಿನ ತಿಳಿಸಾರನ್ನು ಅವರಿಗೆ ಪರಿಚಯಿಸಿದ್ದ. ಈ ರುಚಿಯ ಜಾಡು ಹಿಡಿದ ಮಹಾರಾಜರು ಕೆ. ಗುಡಿಗೆ ಹೋದಾಗ ನಂಜೇಗೌಡನಿಂದ ಅಡುಗೆ ಮಾಡಿಸಿಕೊಂಡು ತಾವು ತಿನ್ನುವುದರ ಜೊತೆಗೆ, ಅಕ್ಕಿ, ಅನ್ನವನ್ನು ಕಾಣದೆ ಇದ್ದ ಸೋಲಿಗರೆಲ್ಲರಿಗೂ ಯಥೇತ್ಛವಾಗಿ ತಿಳಿಸಾರು ಅಡುಗೆ ಮಾಡಿಸಿ ಊಟದ ವ್ಯವಸ್ಥೆ ಮಾಡುತ್ತಿದ್ದರು. ಇವತ್ತಿಗೂ ಸೋಲಿಗ ಹಳೆಯ ತಲೆಗಳು ಮಹಾರಾಜರ ಔದಾರ್ಯದ ಸಂಗತಿಗಳನ್ನು ಮೆಲುಕು ಹಾಕುತ್ತಾರೆ.

– ಸ್ವಾಮಿ, ಪೊನ್ನಾಚಿ
**


ಧರ್ಮರಾಯ ಕೂತ್ಕತಿದ್‌ ಸಿಂಹಾಸನ!

ಶಕಗಳ ಹಿಂದೆ ನಮ್ಮೂರು ಮೇಗಲಹುಂಡಿ ಮೈಸೂರು ಜಿಲ್ಲೆಗೆ ಸೇರಿತ್ತು, ಈಗ ಚಾಮರಾಜನಗರ ಜಿಲ್ಲೆಗೆ ಸೇರಿದೆ. ನನ್ನ ತಂದೆ-ತಾಯಿ ಮೈಸೂರು ನಗರದಲ್ಲೇ ವಾಸವಾಗಿದ್ದರು. ಅರಮನೆ, ಸಯ್ನಾಜಿರಾವ್‌ ರಸ್ತೆ ಸುತ್ತಮುತ್ತ ಜಗಮಗಿಸುವ ದೀಪಾಲಂಕಾರಗಳು, ಚಾಮುಂಡಿ ಬೆಟ್ಟದಿಂದ ಇಡೀ ಮೈಸೂರಿಗೆ ಕಾಣುತ್ತಿದ್ದ ಸುಸ್ವಾಗತ WEL COME ಅನ್ನುವ ದೀಪಾಲಂಕಾರ, ಇವೆಲ್ಲವೂ ಈಗ ಹೇಗಿರುತ್ತವೋ ಆಗಲೂ ಹಾಗೇ ಇದ್ದದ್ದು. ಬಾಲ್ಯದ ಕಣ್ಣುಗಳಿಗೆ, ಹಳ್ಳಿಯ ಮುಗ್ಧ ಮನಸ್ಸಿಗೆ ಅದೇ ಸ್ವರ್ಗ ಅನ್ನುವಂತೆ ಭಾಸವಾಗುತ್ತಿತ್ತು.

ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿ ನೋಡುವುದಕ್ಕೆ ನಿಜವಾಗಿಯೂ ಹಬ್ಬವೆ! ಆದರೆ ನಮ್ಮ ಹಿರಿಯರು ಅದನ್ನು ನೋಡಿ ಸಂಭ್ರಮಿಸುವ ಬದಲು “ಇದ್ಯಾವ್‌ ದಸರ? ಮಾರಾಜ್ರಿದ್ದಾಗ್‌ ನೋಡ್ಬೇಕಿತ್ತು! ಅವ್ರು ಪಟ್ಟುದ್‌ ಕುದ್ರೆ ಮೇಲ್‌ ಕೂತ್ಕೊಂಡ್‌ ಬಂದ್ರು ಅಂದ್ರೆ ಸಾಕ್ಷಾತ್‌ ದೇವ್ರೇ ಬಂದ್ರೇನೋ ಅನ್ನುಸ್ತಿತ್ತು! ಜನಾ ಎಲ್ಲ ಜೈಕಾರ ಹಾಕ್ತಿದ್ರು. ಜನ್ಗಳ್‌ ಹೊಗಳಿಕೆಯಿಂದ ಮಾರಾಜರಿಗೆ ಕಣ್ಣೆಸ್ರಾಗದು (ದೃಷ್ಟಿ). ಅದುಕ್ಕೆ ಮಾಹಾರಾಜರು ಅವರನ್ನ ಬಯ್ಯೋಕೆ ಅಂತಾನೆ ಸಾಂಬ್ಲಕೊಟ್ಟು ಜನ ಇಟ್ಕಂಡಿದ್ರು! ಅವ್ಕು ಕೆಲ್ಸ ಏನಪ್ಪ ಅಂದ್ರೆ, ಮಾರಾಜ್ರ… ಕಂಡೇಟ್ಗೆ ಅವ್ರನ್ನ ಹೀನಾಮಾನವಾಗಿ ಬಯ್ಯೋದೆ ಅವ್ಕ್ ಕೆಲ್ಸ ಅಂತ ಕಥೆ ಹೇಳವ್ರು!!’

ಮಾರಾಜರು ಕೂತ್ಕತಿದ್‌ ಸಿಂಹಾಸನ ಅದಲ್ಲ; ಅದು ಸಾಕ್ಷಾತ್‌ ಧರ್ಮರಾಯ ಕೂತ್ಕತಿದ್‌ ಸಿಂಹಾಸನವಂತೆ! ಅದೂ ಆಕಾಶ್‌ ಮಾರ್ಗವಾಗ್‌ ಬಂದು ಈ ಅರ್ಮನೆ ಸೇರ್ಕತಂತೆ. ಅದುನ್ನ ಯಾರೂ ಮುಟ್ಟಕ್ಕಾಗ… ಬಿಸಿಯಂತೆ. ಮಾರಾಜರು ಆ ಸಿಂಹಾಸನುದ್‌ ಮೇಲ್‌ ಕೂತ್ಕಳ್ಳಾಗ ಒಂದಿಡಿ ಭತ್ವ ತಗ್ದ್ ಅದ್ರ್ ಮ್ಯಾಲ್‌ ಎರುಚಿದ್ರಂತ. ಆ ಭತ್ತ ಯಲ್ಲ ನೋಡ್‌ ನೋಡ್ತಿದ್ದಂಗೆ ಚಟಪಟ್ನ ಸಿಡು ಪುರಿಯಾಗೋಯ್ತಿತ್ತಂತೆ..! ಈ ರೀತಿಯ ಸ್ವಾರಸ್ಯಕರ ಜಾನಪದ ಕಥೆಗಳು ಮೈಸೂರು ಅರಮನೆ ಮತ್ತು ಮಹಾರಾಜರ ಬಗ್ಗೆ ಇವೆ.

– ಪ್ರಕಾಶರಾಜ್‌ ಮೇಹು
(ಸಾಹಿತಿ-ಚಲನಚಿತ್ರ ನಿರ್ದೇಶಕ)
**


ಒಂದು ಅರಮನೆ, ಏಳು ದ್ವಾರಗಳು!
ಸೂರಿನ ಪ್ರಮುಖ ಆಕರ್ಷಣೆ ಎಂದರೆ ಅರಮನೆ. ಈ ಭವ್ಯ ಅರಮನೆಗೆ ಒಟ್ಟು ಏಳು ದ್ವಾರಗಳಿವೆ.
ಜಯಮಾತಾಂಡ ದ್ವಾರ ಜಯಮಾರ್ತಾಂಡ ಎಂಬುದು ಅರಸರಿಗೆ ಪ್ರಿಯವಾಗಿದ್ದ ಆನೆಯ ಹೆಸರು. ದಸರಾ ಸಮಯದಲ್ಲಿ ಮಾತ್ರ ಈ ದ್ವಾರದಿಂದ ಅರಮನೆಗೆ ಪ್ರವೇಶ.

ವರಾಹ ದ್ವಾರ
ಈ ದ್ವಾರದ ಮೂಲಕ ಎಲ್ಲಾ ದಿನಗಳಲ್ಲೂ ಅರಮನೆಗೆ ಪ್ರವೇಶಿಸಬಹುದು. ದ್ವಾರದ ಬಲಗಡೆಗೆ ಶ್ವೇತ ವರಾಹ ಸ್ವಾಮಿ ದೇವಾಲಯವಿದೆ. ತಿರುಚನಾಪಳ್ಳಿಯ ಮಹಾರಾಜರು ಯುದ್ಧದಲ್ಲಿ ಸೋತ ನಂತರ ಮೈಸೂರು ಮಹಾರಾಜರಿಗೆ ಶ್ವೇತ ವರಾಹ ಸ್ವಾಮಿಯ ವಿಗ್ರಹವನ್ನು ನೀಡಿದರು. ಅದನ್ನು ಪ್ರತಿಷ್ಠಾಪಿಸಿದ ಸ್ಥಳವಿದು ಎಂದು ಇತಿಹಾಸ ತಿಳಿಸುತ್ತದೆ.

ಅಂಬಾ ವಿಲಾಸ ದ್ವಾರ
ಅರಮನೆಯಲ್ಲಿ ನಡೆಯುವ ಮಹಾರಾಜರ ಖಾಸಾ ದರ್ಬಾರಿಗೆ ವಿವಿಐಪಿಗಳಿಗೆ ಮಾತ್ರ ಈ ದ್ವಾರ ತೆರೆದಿರುತ್ತದೆ.

ಬ್ರಹ್ಮಪುರಿ ದ್ವಾರ
ಈ ದ್ವಾರದಿಂದ ಮಹಾರಾಜರು ಹಾಗೂ ಗುರುಗಳು ಪರಕಾಲ ಮಠಕ್ಕೆ ಓಡಾಡುತ್ತಿದ್ದರು. ಕರಿಕಲ್‌ ತೊಟ್ಟಿ ಆಗಿನ ಮೋದಿ ಖಾನ್‌ ಅರಮನೆಗೆ ದಿನಸಿ ಸಾಮಾನುಗಳನ್ನು ಸರಬರಾಜು ಮಾಡುತ್ತಿದ್ದ ದ್ವಾರ.

ಬಲರಾಮ ಮತ್ತು ಜಯರಾಮ ದ್ವಾರ
ಬಲರಾಮ ಮತ್ತು ಜಯರಾಮ ಎಂಬುದು ಅಂಬಾರಿ ಹೊರುತ್ತಿದ್ದ ಆನೆಗಳ ಹೆಸರು. ದಸರಾ ಮೆರವಣಿಗೆ, ಜಯ ರಾಮ ದ್ವಾರದಿಂದಲೇ ಹೊರಗಡೆ ಹೋಗುವುದು.

ವೀಣಾ ಶಂಕರ್‌, ಮೈಸೂರು.
**


ಮಹಾರಾಜರ ಅಂಗಡಿಯ ಸಿಹಿ ತಿಂಡಿ!
ಬ್ಯಾಂಕ್ ನೌಕರರಾಗಿದ್ದ ಅಪ್ಪ ಕೆಲಸದ ನಿಮಿತ್ತ ಮೈಸೂರಿಗೆ ಹೋಗಿ ಬಂದಾಗಲೆಲ್ಲಾ ಮೈಸೂರ ಪಾಕ್‌ ತರುತ್ತಿದ್ದರು. ಮಹಾರಾಜರ ಅಂಗಡಿಯಿಂದ ಮೈಸೂರ ಪಾಕ್‌ ತಂದಿದ್ದೇನೆ ಅಂತ ಅಪ್ಪ ಹೇಳುತ್ತಿದ್ದುದರಿಂದ, ಮಹಾರಾಜರು ಮೈಸೂರು ಪಾಕ್‌ ಅಂಗಡಿ ಇಟ್ಟಿದ್ದಾರೆ ಅಂತಾನೇ ನಾ ತಿಳ್ಕೊಂಡಿದ್ದೆ.

ಪಿಯುಸಿಯಲ್ಲಿ ಪಾಠ ಮಾಡ್ತಾ ಇದ್ದ ಡಾ. ಅರ್ಜುನ ಪುರಿ ಅಪ್ಪಾಜಿಗೌಡರು, ಅರಮನೆಯ ಅಡುಗೆ ಭಟ್ಟರಾದ ಮಾದಪ್ಪನವರ ಕಥೆ ಹೇಳಿದಾಗಲೇ ಗೊತ್ತಾಗಿದ್ದು, ಅಣ್ಣ ಯಾವ ಅಂಗಡಿಯಿಂದ ಮೈಸೂರ ಪಾಕ್‌ ತರ್ತಾ ಇದ್ರು ಅಂತ. ನಮ್ಮ ಮೇಷ್ಟ್ರು ಹೇಳಿದ

ಕಥೆ ಇಷ್ಟು:
ನಾಲ್ವಡಿ ಕೃಷ್ಣರಾಜ ಒಡೆಯರ್‌ ಭೋಜನಪ್ರಿಯ­ರಂತೆ. ಸಿಹಿ ಅಂದ್ರೆ ಅವರಿಗೆ ತುಸು ಹೆಚ್ಚೇ ಪ್ರೀತಿಯಂತೆ. ಅದಕ್ಕೆ ತಕ್ಕುದಾಗಿ, ರುಚಿರುಚಿಯಾಗಿ ಅಡುಗೆ ಮಾಡುವ ಬಾಣಸಿಗ ಮಾದಪ್ಪನವರು ಅರಮನೆಯಲ್ಲಿದ್ದರಂತೆ. ನಿತ್ಯವೂ ತರಹೇವಾರಿ ಅಡುಗೆ ಮಾಡಿ ಬಡಿಸ್ತಾ ಇದ್ದ ಮಾದಪ್ಪನವರ ಕೈರುಚಿಯನ್ನು ಮಹಾರಾಜರು ಮನಸಾರೆ ಹೊಗಳುತ್ತಿದ್ದರಂತೆ. ಮಾದಪ್ಪನವರು ಅಡುಗೆಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದರಂತೆ. ಒಮ್ಮೆ ಕಡಲೆ ಹಿಟ್ಟಿನಲ್ಲಿ ಹೊಸ ತಿಂಡಿಯ ಪ್ರಯೋಗ ಮಾಡಲು ಹೋದಾಗ ಅವರು ಅಂದುಕೊಂಡಂತೆ ಆಗದೆ ಅತ್ತ ತೀರಾ ತೆಳುವಲ್ಲದ, ಇತ್ತ ಗಟ್ಟಿಯಲ್ಲದ ಸಿಹಿಯೊಂದು ಉಗಮವಾಯಿತಂತೆ. ಅಂದು ಭಯದಿಂದಲೇ ಮಾದಪ್ಪನವರು ಮಹಾರಾಜರಿಗೆ ಸಿಹಿ ಬಡಿಸಿ ಪ್ರತಿಕ್ರಿಯೆಗಾಗಿ ಕಾದರಂತೆ. ತುಪ್ಪದ ಬಾಣಲೆಯಲ್ಲಿ ಕುದ್ದಿದ್ದ ಆ ಸಿಹಿ ಪದಾರ್ಥವನ್ನು ಬೆರಳಿನಿಂದ ಅದ್ದಿ ರುಚಿ ನೋಡಿದ ಮಹಾರಾಜರು, ಅದ್ಬುತವಾದ ತಿನಿಸು ಎಂದು ಉದ್ಗರಿಸಿದರಂತೆ. ಅದಾದ ನಂತರ ಹಲವು ಬಾರಿ ಬಯಸಿ ಆ ಖಾದ್ಯವನ್ನು ತಯಾರಿಸಲು ಹೇಳುತ್ತಿದ್ದರಂತೆ. ಮಾದಪ್ಪನವರೇ ಸಿಹಿ ತಿಂಡಿಗೆ ಮೈಸೂರು ಪಾಕ ಎಂದು ನಾಮಕರಣ ಮಾಡಿದರಂತೆ.

ಈ ಸಿಹಿ ತಿನಿಸನ್ನು ತಮ್ಮ ಪ್ರಜೆಗಳೂ ತಿನ್ನುವಂತಾ­ಗಬೇಕೆಂದು ನಾಲ್ವಡಿಯವರು ಬಯಸಿದ್ದರಂತೆ. ಪ್ರಭುಗಳ ಆದೇಶದಂತೆ ಮಾದಪ್ಪನವರೇ, ಅಶೋಕ ರಸ್ತೆಯಲ್ಲಿ ಮೈಸೂರು ಪಾಕ ಅಂಗಡಿ ತೆರೆದರಂತೆ.

ಈ ಕಥೆ ಕೇಳಿದ ಮೇಲೆ ಅಲ್ಲಿಯವರೆಗೆ ನಮ್ಮಪ್ಪ ಕಾಪಾಡಿಕೊಂಡು ಬಂದಿದ್ದ ಮೈಸೂರು ಮಹಾರಾಜರ ಸ್ವೀಟ್‌ ಅಂಗಡಿಯ ಗುಟ್ಟು ರಟ್ಟಾಯಿತು.

– ಡಾ. ಶೋಭಾ ರಾಣಿ, ಮೈಸೂರು

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.