ಬಾಣಂತಿ ಕೋಣೆಯ ರಹಸ್ಯಗಳು
Team Udayavani, Jun 3, 2018, 6:00 AM IST
ಬಾಲ್ಯದಲ್ಲಿ ನನಗೆ ಮನೆಯಲ್ಲಿನ ಈ ಬಾಣಂತಿ ಕೋಣೆ ಎಂಬ ಜಾಗದ ಬಗ್ಗೆ ಒಮ್ಮೊಮ್ಮೆ ಆಸಕ್ತಿ, ಮತ್ತೂಮ್ಮೆ ಕುತೂಹಲ, ಕೆಲವೊಮ್ಮೆ ಜಿಗುಪ್ಸೆಯೂ ಮೂಡಿಸಿದ್ದಿದೆ. ಹಳೆಯ ಸೊಳ್ಳೆಪರದೆ ಕಟ್ಟಿದ ಮಂಚ, ಮಗುವಿನ ಜೋಲಿಯ ಸ್ಟ್ಯಾಂಡು, ಅದಕ್ಕೆ ಕಟ್ಟಿದ ಮಾಸಲು ಸೀರೆ, ರೂಮಿನ ತುಂಬಾ ಹರಡಿದ ಒಗೆದು ಒಣಗಿ ಹಾಕಿದ್ದರೂ ವಿಚಿತ್ರ ವಾಸನೆ ಹೊಡೆಯುತ್ತಿದ್ದ ಮಗುವಿನ ಉಚ್ಚೆ, ಕಕ್ಕದ ಬಟ್ಟೆಗಳು, ಟೋಪಿ, ಸ್ವೆಟರ್, ಸಾಕ್ಸ್, ಮಫ್ಲರ್‌ಗಳನ್ನು ನೋಡುತ್ತಿದ್ದರೆ ಯಾವುದೋ ರೋಗಿಯ ಕೋಣೆ ಎಂಬ ಭಾವನೆ ಬರುತ್ತಿತ್ತು. ಅಲ್ಲಿನ ಮಂದ ಬೆಳಕು, ಕಿಟಕಿಗಳು ಇದ್ದರೂ ಅದನ್ನು ಮುಚ್ಚಿ ಕತ್ತಲು ಕೋಣೆಯನ್ನಾಗಿ ಮಾಡಿ, ಆ ಕೋಣೆಯನ್ನು ಸದಾ ಬೆಚ್ಚಗಿಡಲು ಮಂಚದ ಕೆಳಗೆ ಕಬ್ಬಿಣದ ಬೋಗುಣಿಯಲ್ಲಿ ಇಡುತ್ತಿದ್ದ ಇದ್ದಿಲಿನ ಕೆಂಡದ ಉಂಡೆಗಳು, ಇತ್ತ ಗಾಳಿಯೂ ಇಲ್ಲ, ಅತ್ತ ಫ್ಯಾನೂ ಹಾಕುವಂತಿಲ್ಲ. ಅದು ಹ್ಯಾಗೆ ಆ ಕೋಣೆಯಲ್ಲಿ ತಮ್ಮ ಬಾಣಂತನದ ಕಾಲದಲ್ಲಿ ಅಮ್ಮ, ಸೋದರತ್ತೆ ಹೊರಬರದೆ ಐದಾರು ತಿಂಗಳು ಇರುತ್ತಿದ್ದರೋ ನನಗಂತೂ ಬಿಡಿಸದ ಕಗ್ಗಂಟಾಗಿತ್ತು. ಅದರ ಒಳಹೊಕ್ಕರೆ ಎರಡೇ ನಿಮಿಷಕ್ಕೆ ಹಣೆಯೆಲ್ಲ ಬೆವರಿ, ಉಸಿರಾಡಲೂ ಸಾಧ್ಯವಾಗದೆ ಹೊರಗೆ ಓಡಿ ಬರುತ್ತಿದ್ದೆ.
ನಿದ್ದೆಯ ಸಮಯ ಬಿಟ್ಟರೆ ಯಾವಾಗಲೂ ಪಾಪುವಿನ ಸೋಬಾನೆ ರಾಗ ಕೋಣೆಯಿಂದ ಕೇಳುತ್ತಲೇ ಇರುತ್ತಿತ್ತು. ಅದನ್ನು ನಿಲ್ಲಿಸಲು ಅಜ್ಜಿ, ಅಮ್ಮನ ಲಾಲಿ ಹಾಡು ಶುರುವಾಗುತ್ತಿತ್ತು. ಒಮ್ಮೊಮ್ಮೆ ಬೇಬಿ ಪೌಡರ್‌ನ ವಾಸನೆ ಘಮ್ಮೆನ್ನುತ್ತಿದ್ದರೆ, ಕೆಲವೊಮ್ಮೆ ಲೋಬಾನದ ವಾಸನೆ, ಬೆಳ್ಳುಳ್ಳಿ ಸುಟ್ಟ ವಾಸನೆ ಗಪ್ಪೆಂದು ಮೂಗಿಗೆ ಬಡಿಯುತ್ತಿತ್ತು. ಊಟದ ಸಮಯದಲ್ಲಂತೂ ಘಮಘಮಿಸುವ ತುಪ್ಪ, ಮೆಣಸಿನ ಸಾರಿನ ಪರಿಮಳ ನಾಲಿಗೆಯ ರುಚಿಮೊಗ್ಗುಗಳನ್ನೆಲ್ಲ ಕೆರಳಿಸುತ್ತಿತ್ತು.
ಆ ರೂಮಿನಲ್ಲಿ ಅಜ್ಜಿ ಹಾಗೂ ಹಿರಿಯ ಹೆಂಗಸರನ್ನು ಬಿಟ್ಟರೆ ಬೇರೆಯವರಿಗೆ ಪೂರ್ತಿ ನಿಷೇಧ. ಅದರಲ್ಲೂ ನಾವು ಮಕ್ಕಳು ಏನಾದರೂ ನೆಪಗಟ್ಟಿಕೊಂಡು ಹೋದರೆ “”ಬಾಣಂತಿಕೋಣೆಯಲ್ಲಿ ನಿಮ್ಮದೇನು ಕೆಲಸ, ಹೊರಗೆ ಆಡಿಕೋ ಹೋಗು” ಎಂದು ಗದರಿಸಿ ಕಳುಹಿಸಿದಾಗ ಸಿಟ್ಟು ನೆತ್ತಿಗೇರುತ್ತಿತ್ತು. ಅಜ್ಜಿಯೇನೂ ಕೆಟ್ಟವಳಿರಲಿಲ್ಲ, ಆದರೆ, ಬಾಣಂತಿ ಕೋಣೆಗೆ ಅನವಶ್ಯಕವಾಗಿ ಹೋದರೆ ಮಾತ್ರ ಬೈಯ್ಯುತ್ತಿದ್ದಳು. ಕೈಕಾಲು ತೊಳೆಯದೆ ಕಾಲಿಟ್ಟರಂತೂ ದೇವರೇ ಗತಿ. ಅದೇ ಹೊರಗಡೆ ಎಲ್ಲೇ ಇದ್ದರೂ ನನ್ನ ಮೇಲೆ ಪ್ರೀತಿಯ ಮಳೆ ಸುರಿಸಿ ನನ್ನ ಊಟ, ಪಾಠ ಎಲ್ಲಾ ವಹಿಸಿಕೊಳ್ಳುತ್ತಿದ್ದುದು ಅಜ್ಜಿಯೇ. ನನ್ನ ಅಮ್ಮನ, ಪುಟ್ಟ ತಮ್ಮನ ಮಾತನಾಡಿಸಲು ಇವರೆಲ್ಲಾ ಅಡ್ಡಿ ಮಾಡುತ್ತಿದ್ದಾರೆ ಎಂದು ಸಿಟ್ಟಾಗಿ ಮುಖ ಊದಿಸಿಕೊಂಡು ಕುಳಿತದ್ದು ನೆನಪಿದೆ. ಸಂಜೆ ಅಪ್ಪ ಆಫೀಸಿನಿಂದ ಬಂದಾಗ ಚಾಡಿ ಹೇಳಲು ಮರೆಯು ತ್ತಿರಲಿಲ್ಲ. ಕೈಕಾಲು ಮುಖ ತೊಳೆದು ಅಪ್ಪ ನನ್ನನ್ನು ರಮಿಸುತ್ತ ಬಾಣಂತಿ ರೂಮಿಗೆ ಕರೆದುಕೊಂಡು ಹೋಗುತ್ತಿದ್ದರು. ಮುದ್ದು ಮುದ್ದಾಗಿ, ಗುಂಡಣ್ಣನಂತೆ ಕೈಕಾಲು ಬಡಿಯುತ್ತ ಮಲಗಿರುವ ತಮ್ಮನನ್ನು ಮುಟ್ಟಿ ಮುಟ್ಟಿ ಖುಷಿ ಪಡುತ್ತಿದ್ದೆ. ಅಮ್ಮನ ಮಡಿಲಿನಲ್ಲಿ ಮಲಗುವ ಆಸೆಯಾಗುತ್ತಿದ್ದರೂ ಅಜ್ಜಿಯ ಗದರುವಿಕೆಗೆ ಹೆದರಿ ಸುಮ್ಮನೆ ನಿಲ್ಲುತ್ತಿದ್ದ ನನ್ನನ್ನು ಅಮ್ಮ ಪ್ರೀತಿಯಿಂದ ತಬ್ಬಿ ತಲೆ ನೇವರಿಸುತ್ತಿದ್ದಳು. ಪಾಪು ಎದ್ದಿದ್ದರೆ ಸ್ವಲ್ಪ ಹೊತ್ತು ನನ್ನ ತೊಡೆಯ ಮೇಲೆ ಮಲಗಿಸುತ್ತಿದ್ದಳು. “”ತಲೆಯನ್ನು ಸರಿಯಾಗಿ ಹಿಡಿದುಕೋ” ಎಂದು ಹೊರಗಿನಿಂದ ಅಜ್ಜಿ ಪದೇ ಪದೇ ಎಚ್ಚರಿಸಿದಾಗ, “ನನ್ನನ್ನೇನು ಸಣ್ಣ ಮಗು ಅಂತ ತಿಳಿದುಕೊಂಡಿ¨ªಾಳೆ’ ಎಂದು ಕೋಪ ಬರುತ್ತಿತ್ತು. ಶಾಲೆಯಿಂದ ಬಂದವಳೇ ಪಾಟೀಚೀಲ ಎಸೆದು ತಮ್ಮನ ಕೋಣೆಗೆ ಓಡಿಹೋಗುವುದೇ ನನ್ನ ಕೆಲಸ. ಒಮ್ಮೊಮ್ಮೆ ಜೋಲಿಯಲ್ಲಿ ಬಾಯಿಗೆ ಬೊಟ್ಟು ಹಾಕಿ ಚೀಪುತ್ತ ಮಲಗಿದ ತಮ್ಮನನ್ನು ಸ್ವಲ್ಪ ಹೊತ್ತು ತೂಗಿಯಾ ದರೂ ಆಸೆ ತೀರಿಸಿ ಕೊಳ್ಳುತ್ತಿ¨ªೆ.
ಹಳೆಯ ಸೀರೆ ಉಟ್ಟು, ಕೆದರಿರುವ ತಲೆಗೆ ಮಫ್ಲರ್ ಕಟ್ಟಿಕೊಂಡು, ಸ್ವೆಟರ್ ಹಾಕಿಕೊಂಡು, ಕಿವಿಗೆ ಹತ್ತಿ ಸಿಗಿಸಿಕೊಂಡು, ಕಾಲಿಗೆ ಯಾವಾಗಲೂ ಚಪ್ಪಲಿ ಹಾಕಿಕೊಂಡಿರುತ್ತಿದ್ದ ಅಮ್ಮನನ್ನು ನೋಡುತ್ತಿದ್ದರೆ, ಯಾವಾಗಲೂ ನೀಟಾಗಿ ತಲೆಬಾಚಿಕೊಂಡು, ಹೂಮುಡಿದು ಕಳಕಳೆಯಾಗಿ ಮನೆತುಂಬ ಓಡಾಡಿಕೊಂಡಿದ್ದ ನನ್ನಮ್ಮ ಹೀಗ್ಯಾಕೆ ಅಲಂಕಾರವಿಲ್ಲದೆ ಇದ್ದಾಳೆ ಎಂದು ಆಶ್ಚರ್ಯವಾಗುತ್ತಿತ್ತು. ಆದರೆ ಅಲಂಕಾರವಿಲ್ಲದೆಯೂ ನನ್ನಮ್ಮನ ಮೊಗ ತಾಯ್ತನದ ಒಂದು ವಿಚಿತ್ರ ಕಳೆಯಿಂದ ಇನ್ನೂ ಸುಂದರವಾಗಿ ಕಾಣುತ್ತಿದೆ ಎನಿಸುತ್ತಿತ್ತು. ಒಮ್ಮೊಮ್ಮೆ ಈ ತಮ್ಮ ಪಾಪು ಬಂದು ನನ್ನನ್ನು ಅಮ್ಮನಿಂದ ದೂರ ಮಾಡಿ¨ªಾನೆ ಎಂಬ ಭಾವನೆಯೂ ಮೂಡುತ್ತಿತ್ತು. ಅಪ್ಪ ಕೋಣೆಗೆ ಹೋಗಿದ್ದನ್ನು ತನ್ನ ಹದ್ದಿನ ಕಣ್ಣುಗಳಿಂದ ಗಮನಿಸುತ್ತಲೇ ಇರುತ್ತಿದ್ದ ಅಜ್ಜಿ ಸ್ವಲ್ಪ ಹೊತ್ತಿಗೆ ಅಡುಗೆ ಮನೆಯಿಂದ ಸೈರನ್ ತರಹ ಮತ್ತೆ ಕೂಗುತ್ತಿದ್ದಳು- “”ಎಷ್ಟು ಹೊತ್ತೋ ಅದು, ಮಗು, ಬಾಣಂತಿಯನ್ನು ನೋಡುವುದು, ದೃಷ್ಟಿಯಾದೀತು, ಹೊರಗೆ ಬನ್ನಿ” ಎನ್ನುತ್ತಿದ್ದಂತೆ ಅಪ್ಪ ನನ್ನನ್ನೆತ್ತಿಕೊಂಡು ನಗುತ್ತ ಅಮ್ಮನಿಗೆ ಕಣ್ಣಲ್ಲೇ ವಿದಾಯ ಹೇಳಿ ಹೊರಬರುತ್ತಿದ್ದರು. ಆಗ ನನಗೆ ಇನ್ನೂ ಮನದಟ್ಟಾಗಿದ್ದು ಏನೆಂದರೆ ಈ ಬಾಣಂತಿ ಕೋಣೆಗೆ ಹೋಗಲು ನನ್ನೊಬ್ಬಳಿಗೆ ಮಾತ್ರವಲ್ಲ ಪಾಪ, ಅಪ್ಪನಿಗೂ ಸಾಧ್ಯವಿಲ್ಲ ಎಂಬುದು. ಅಮ್ಮನನ್ನೂ ಅಜ್ಜಿ ಗದರದೆ ಬಿಡುತ್ತಿರಲಿಲ್ಲ. ಹಾಲೂಡಿಸುತ್ತ ಅಮ್ಮ ಮಗುವನ್ನೇನಾದರೂ ನೋಡುತ್ತಿದ್ದರೆ, “”ಅಯ್ನಾ, ಕೂಸೀನ ಹಂಗ್ ಒಂದೇ ಸಮ ನೋಡಬೇಡ, ತಾಯಿದೃಷ್ಟಿ, ನಾಯಿದೃಷ್ಟಿ ಎರಡೂ ಒಂದೇ” ಎಂದಾಗ ಅಮ್ಮ ತಟ್ಟನೆ ದೃಷ್ಟಿ ಪಕ್ಕಕ್ಕೆ ಹೊರಳಿಸುತ್ತಿದ್ದಳು. ಅಜ್ಜಿ ಹೇಳುವುದನ್ನು ಎಲ್ಲರೂ ಚಾಚೂತಪ್ಪದೆ ಪಾಲಿಸುವುದನ್ನು ಕಂಡಾಗ ಇಡೀ ಮನೆಯನ್ನೇ ಅಜ್ಜಿ ತನ್ನ ಹಿಡಿತದಲ್ಲಿಟ್ಟುಕೊಂಡಿ¨ªಾಳೇನೋ ಎನಿಸುತ್ತಿತ್ತು.
ಪಾಪು ಹುಟ್ಟುವುದಕ್ಕೆ ಒಂದು ವಾರ ಮುಂಚೆಯೇ ಅಜ್ಜಿಯ ಸಡಗರ ಶುರುವಾಗಿತ್ತು. ಬಾಣಂತಿ ಕೋಣೆ ರೆಡಿ ಮಾಡಬೇಕು, ನಿಮ್ಮ ನಿಮ್ಮ ಸಾಮಾನುಗಳನ್ನು ಹೊರಗಿಟ್ಟುಕೊಳ್ಳಿ ಎಂದು ಎಲ್ಲರಿಗೂ ತಾಕೀತು ಮಾಡಿದ್ದಳು. ಹಳೆಯ ಕಾಲದ ಮರದ ಬೀರುವೊಂದನ್ನು ಬಿಟ್ಟು ಎಲ್ಲಾ ಸಾಮಾನುಗಳು ಮತ್ತೂಂದು ರೂಮಿಗೆ, ನಡುಮನೆಗೆ ಟ್ರಾನ್ಸ್‌ಫರ್ ಆಗಿದ್ದವು. ನನ್ನ ಆಟದ ಸಾಮಾನು, ಪಾಟೀಚೀಲ, ಪುಸ್ತಕಗಳೂ ರೂಮಿನಿಂದ ಹೊರಬಿದ್ದಾಗ ಬಾಣಂತಿ ಕೋಣೆಯ ಮೇಲೆ ಕೋಪವುಕ್ಕಿತ್ತು. ಮುಂದೆ ಅಮ್ಮನಿಗೆ ಹೆರಿಗೆ ನೋವು ಶುರುವಾದಾಗ ಅಜ್ಜಿ ಆ ಬಾಣಂತಿ ಕೋಣೆಗೆ ಕರೆದೊಯ್ದು, ಲಗುಬಗೆಯಿಂದ ಹೊರಬಂದು ಅಜ್ಜನಿಗೆ ಹಿಂದಿನ ಬೀದಿಯಲ್ಲಿದ್ದ ಸೂಲಗಿತ್ತಿ ನರಸಮ್ಮನನ್ನು ಕರೆದು ತರುವಂತೆ ಹೇಳಿದರು. ಸೋದರತ್ತೆಯರಿಗೆ ಬಿಸಿನೀರು ಕಾಯಿಸಲು ಹೇಳಿ ಸೂಲಗಿತ್ತಿ ರೂಮಿನ ಒಳಗೆ ಹೋಗಿ ಬಾಗಿಲು ಹಾಕಿಕೊಂಡಾಗ ಅಮ್ಮ ನೋವಿನಿಂದ “ನನೆçಲಾಗೋಲ್ಲಾ, ನಾ ಸತ್ತೇ’ ಎಂದು ಚೀರಾಡುವುದನ್ನು ಕೇಳಿ ಹೆದರಿ ಅಜ್ಜನ ಪಂಚೆ ಹಿಡಿದು ನಿಂತಿದ್ದೆ. ಅಜ್ಜ “ನಿನಗೆ ತಮ್ಮನೋ, ತಂಗಿಯೋ ಬರುತ್ತಾರೆ ಪುಟ್ಟಿ’ ಎಂದಾಗ, ಅಮ್ಮನ ದೊಡ್ಡ ಹೊಟ್ಟೆ ಕುಂಬಳ ಕಾಯಿಯ ಹಾಗೆ ಒಡೆದುಕೊಂಡು ಪಾಪು ಹೊರಬರುತ್ತಿರಬೇಕು, ಪಾಪ ಅದಕ್ಕೇ ಅಮ್ಮನಿಗೆ ಇಷ್ಟು ನೋವಾಗುತ್ತಿರಬೇಕು ಎಂದುಕೊಂಡಿದ್ದೆ. ರಾತ್ರಿ ಎಷ್ಟು ಹೊತ್ತಾದರೂ ಪಾಪು ಬರುವ ಲಕ್ಷಣಗಳೇ ಕಾಣಲಿಲ್ಲ. ಅಮ್ಮನ ಚೀರಾಟ ನಿಲ್ಲಲಿಲ್ಲ. ಮಿಲ್ಲಿನಿಂದ ಬಂದ ಅಪ್ಪನೂ ಕೋಣೆಯಲ್ಲಿ ನೋವು ತಿನ್ನುತ್ತಿದ್ದ ಅಮ್ಮನಿಗೆ ಸರಿಸಮಾನವಾಗಿ ಮನಸ್ಸಿನಲ್ಲಿ ನೋವುಣ್ಣುತ್ತಿದ್ದಾನೇನೋ ಎನಿಸುತ್ತಿತ್ತು. ಯೋಚಿಸುತ್ತ ಹಾಗೆಯೇ ನಿದ್ದೆಗೆ ಜಾರಿದ್ದೆ.
ಮುಂಜಾನೆ ಕಣ್ಣು ಬಿಟ್ಟ ತತ್‌ಕ್ಷಣ ಅಜ್ಜಿ, “”ಪುಟ್ಟಿà, ನಿನಗೆ ತಮ್ಮ ಹುಟ್ಟಿದ್ದಾನೆ ನೋಡು” ಎಂದಾಗ ಓಡಿ ಹೋಗಿದ್ದೆ. ತಮ್ಮನಿಗಿಂತ ಮೊದಲು ಅಮ್ಮನ ಹೊಟ್ಟೆಯ ಮೇಲೆ ಕಣ್ಣಾಡಿಸಿದ್ದೆ. ಅದು ಒಡೆಯದೆ ಹಾಗೆಯೇ ಇತ್ತು. ತಮ್ಮ ಹೊಟ್ಟೆಯಿಂದ ಹೇಗೆ ಹೊರಬಂದ ಎಂಬುದು ಕಗ್ಗಂಟಾಯಿತು. “”ಹೇಗಿ¨ªಾನೆ ಪುಟ್ಟಿà, ನಿನ್ನ ತಮ್ಮ?” ಎಂದು ನಗುತ್ತ ಅಮ್ಮ ಕೇಳಿದಾಗ ರಾತ್ರಿ ನೋವಿನಿಂದ ಸೂರು ಹಾರಿಹೋಗುವಂತೆ ಕಿರಿಚುತ್ತಿದ್ದ ಅಮ್ಮ ಇವಳೇನಾ ಎನಿಸಿತ್ತು. ಅಂದಿನಿಂದ ಕೋಣೆಯಲ್ಲಿನ ನನ್ನ ಹಾಗೂ ಅಪ್ಪನ ಸ್ಥಾನಗಳೂ ಅಲ್ಲಿನ ಸಾಮಾನುಗಳ ಹಾಗೆ ನಡುಮನೆಗೆ ಪಲ್ಲಟವಾಗಿತ್ತು.
ಆ ಸ್ಥಾನವನ್ನು ಪಾಪು ಹಾಗೂ ಅಜ್ಜಿ ಆಕ್ರಮಿಸಿಕೊಂಡಿದ್ದರು. ಸ್ನಾನ, ಶೌಚಕ್ಕೆ ಬಿಟ್ಟರೆ ಅಮ್ಮ ಕೋಣೆಯಿಂದ ಹೊರಬರುತ್ತಲೇ ಇರಲಿಲ್ಲ.
ಕೋಣೆಯಲ್ಲಿದ್ದ ಮರದ ಬೀರುವಿನಲ್ಲಿ ಹಳೆಯ ಹಸುವಿನ ತುಪ್ಪ, ಮೆಂತ್ಯಪುಡಿ, ಒಣಕೊಬ್ರಿ ಚಟ್ನಿಪುಡಿ, ಕೊಬ್ರಿ ಖಾರ, ಅಡಿಕೆ, ಸೋಂಪು, ಸಾಣೆಕಲ್ಲು, ಗ್ರಂಥಿಗೆ ಸಾಮಾನುಗಳು, ಔಷಧಿ ಕುಡಿಸುವ ವಳ್ಳೆ, ಗೆಪ್ ವಾಟರ್, ಔಷಧಿಗಳು- ಹೀಗೆ ಒಂದೊಂದೇ ತುಂಬುತ್ತ ಹೋದವು. ಒಂದೆರಡು ದಿನಗಳ ನಂತರ ಅಜ್ಜಿ ಪಾಪುವಿಗೆ ತೊಡಿಸಲೆಂದು ಯಾರ್ಯಾರೋ ಸಂಬಂಧಿಕರ ಮನೆಗೆ ಹೋಗಿ ಹಳೆಯ ಬಟ್ಟೆಗಳನ್ನು ಗಂಟುಕಟ್ಟಿಕೊಂಡು ತಂದು ಬೀರುವಿಗೆ ಸೇರಿಸಿದ್ದಳು. ಹೊಸಬಟ್ಟೆ ಹಾಕಿದರೆ ಮಗುವಿಗೆ ದೃಷ್ಟಿಯಾಗುತ್ತದೆ ಎನ್ನುವುದು ಅವಳ ಸಿದ್ಧಾಂತ.
ಅಜ್ಜಿ ಪಾಪುವಿಗೆ ಸ್ನಾನ ಮಾಡಿಸುವುದನ್ನು ನೋಡಲು ಬಲು ಖುಷಿಯಾಗುತ್ತಿತ್ತು. ಸ್ನಾನಕ್ಕೆ ನೀರೊಲೆಯ ನೀರು ಕತಕತನೆ ಕುದಿಯುವವರೆಗೆ ಕಾಯಿಸುತ್ತಿದ್ದಳು. ಮಲಗಿದ್ದ ತಮ್ಮನನ್ನು ಅಮ್ಮನ ಕೈಗೆ ಕೊಟ್ಟು, ಹಾಲೂಡಿಸಿದ ಮೇಲೆ, ಯಾವುದೋ ಎಣ್ಣೆ ಹಚ್ಚಿ ನೀವಿ ನೀವಿ, ಕೈಕಾಲು, ಗೋಣುಗಳನ್ನು ಯೋಗಾಸನ ಮಾಡುವ ರೀತಿಯಲ್ಲಿ ಸೊಟ್ಟ ಪಟ್ಟ ಎಳೆದು ಅದು ಅಳುತ್ತಿದ್ದರೂ ಲೆಕ್ಕಿಸದೆ “ನನ್ನ ರಾಜಕುಮಾರ’ ಅಂತ ಲಟಿಕೆ ಮುರಿದು ಸ್ನಾನಕ್ಕೆ ಕರೆದೊಯ್ಯುತ್ತಿದ್ದಳು. ಅಲ್ಲಿ ನೀಳವಾಗಿ ಕಾಲುಚಾಚಿಕೊಂಡು ಮಗುವನ್ನು ಕಾಲಿನ ಮೇಲೆ ಒಮ್ಮೆ ಅಂಗಾತ, ಒಮ್ಮೆ ಬೋರಲು ಮಲಗಿಸಿ ತಿಕ್ಕಿ ತಿಕ್ಕಿ “ನೀರು ಹಾಕು’ ಎಂದು ಸೋದರತ್ತೆಗೆ ಹೇಳುತ್ತಿದ್ದಳು. ಕೊನೆಗೆ, ಅದನ್ನು ಕಾಲಿನ ಮೇಲೆಯೇ ಕುಳ್ಳಿರಿಸಿಕೊಂಡು ತಲೆಯನ್ನು ಎರಡೂ ಕೈಗಳಿಂದ ಹಿಡಿದು ನೆತ್ತಿಗೆ ಬಿಸಿ ಬಿಸಿ ನೀರು ಹಾಕಲು ಹೇಳುತ್ತಿದ್ದಳು. ಕೆೊನೆಗೆ ಚೊಂಬಿನಿಂದ ಪಾಪುವಿಗೆ ಮೂರು ಸಲ ನೀವಾಳಿಸಿದ ಮೇಲೆ ಸ್ನಾನದ ಶಾಸ್ತ್ರ ಮುಗಿಯುತ್ತಿತ್ತು. ಅಷ್ಟರಲ್ಲಾಗಲೇ ಹೊರಗಡೆ ಚಿಕ್ಕಪ್ಪನಿಗೆ ಬೋಗುಣಿಯಲ್ಲಿ ಕೆಂಡವನ್ನು ಬೀಸಿ ಬೀಸಿ ಕೆಂಪಗೆ ಮಾಡಿಡಲು ಹೇಳಿರುತ್ತಿದ್ದಳು. ನಿಗಿನಿಗಿ ಕೆಂಡಕ್ಕೆ ಲೋಬಾನ ಹಾಕಿ ಪಾಪುವನ್ನು ಕೋಳಿಯ ಹಾಗೆ ಎರಡು ಕೈ, ಎರಡು ಕಾಲುಗಳನ್ನು ಜೋಡಿ ಮಾಡಿ ಹಿಡಿದು ಕೆಂಡ ಕಾಯಿಸುತ್ತಿದ್ದಳು. ನಂತರ ಮೈಗೆಲ್ಲ ಪೌಡರ್ ಹಾಕಿ, ಪಾಪುವಿನ ಹಣೆಗೆ ಬೊಟ್ಟಿನ ಅಚ್ಚುಗಳಲ್ಲಿ ಒಂದನ್ನು ಕಾಡಿಗೆಗೆ ತೀಡಿ ಹಣೆ, ಬಲಗೆನ್ನೆ, ಬಲಗಾಲಿಗೆ ಹಚ್ಚಿ ಲೊಚಲೊಚನೆ ಮುತ್ತಿಡುತ್ತಿದ್ದಳು. ಅಷ್ಟು ಹೊತ್ತಿಗಾಗಲೇ ಪಾಪು ಅಜ್ಜಿಯ ವ್ಯಾಯಾಮ, ಸ್ನಾನಕ್ಕೆ ಸುಸ್ತಾಗಿ ಅತ್ತೂ ಅತ್ತೂ ನಿ¨ªೆ ಹೋಗಿರುತ್ತಿದ್ದ.
ಅಮ್ಮನ ಸ್ನಾನಕ್ಕೂ ಅಜ್ಜಿಯದೇ ಪಾರುಪತ್ಯ. ಅಮ್ಮನನ್ನು ಬಚ್ಚಲ ಮನೆಯಲ್ಲಿ ಕರೆದೊಯ್ದು ಬಾಗಿಲು ಹಾಕಿದ ಮೇಲೆ ಗುಸುಗುಸು, ಪಿಸಿಪಿಸಿ ಅಂತಾ ಅದೇನೇನೋ ಹೇಳುತ್ತಿದ್ದಳು. ಸರಿಯಾಗಿ ಕೇಳಿಸುತ್ತಿರಲಿಲ್ಲ. ತಲೆಸ್ನಾನದ ನಂತರ ಅಮ್ಮನ ಉದ್ದನೆಯ ಕೂದಲನ್ನು ಕೆಂಡದ ಮೇಲೆ ಲೋಬಾನ, ಬೆಳ್ಳುಳ್ಳಿ ಸಿಪ್ಪೆ ಹಾಕಿ ನಂತರ ಬಿದಿರಿನ ಬುಟ್ಟಿಯ ಮೇಲೆ ಹರಡಿ ಒಣಗಿಸುತ್ತಿದ್ದಳು. ನಂತರ ಬಿಸಿಬಿಸಿ ತುಪ್ಪ, ಬೆಳ್ಳುಳ್ಳಿಯ ಅಡುಗೆಯನ್ನು ತಟ್ಟೆಯಲ್ಲಿ ಬಡಿಸಿಕೊಂಡು ಅದನ್ನು ಯಾರಿಗೂ ಕಾಣದಂತೆ ತನ್ನ ಸೆರಗನ್ನು ಮುಚ್ಚಿಕೊಂಡು ತಂದು ಕೋಣೆಯಲ್ಲಿ ಅಮ್ಮನಿಗೆ ಕೊಟ್ಟು ಬಿಸಿ ಆರುವ ಮುಂಚೆ ಊಟಮಾಡು ಎಂದು ತಾಕೀತು ಮಾಡುತ್ತಿದ್ದಳು. ಜೊತೆಗೆ ಕುಡಿಯಲು ಬಿಸಿ ಬಿಸಿ ನೀರು ಕೊಡುತ್ತಿದ್ದಳು. ನಂತರ ಒಂದಿಷ್ಟು ಅಜವಾನ, ಹಾಗೆಯೇ ಎಲೆಅಡಿಕೆ ಕೊಟ್ಟು, “ಇನ್ನು ಕೂಸು ಮಲಗಿ¨ªಾಗಲೇ ಮಲಗಿಬಿಡು, ಇಲ್ಲದಿದ್ದರೆ ನಿದ್ರೆ ಆಗುವುದಿಲ್ಲ, ಹೆಚ್ಚಿಗೆ ಮಾತನಾಡಬೇಡ, ಬಾಣಂತಿ ಸನ್ನಿ ಬರುತ್ತದೆ’ ಎಂದು ತಾಕೀತು ಮಾಡಿ ಬಾಗಿಲು ಹಾಕಿ ಹೊರಬರುತ್ತಿದ್ದಳು. ಹಗಲೂ, ರಾತ್ರಿ ನಿದ್ದೆಗೆಟ್ಟು ಅಮ್ಮ, ಪಾಪುವಿನ ಆರೈಕೆ ಮಾಡುತ್ತಿದ್ದ ಈ ಅಜ್ಜಿಯ ಬಾಣಂತನದ ಹುರುಪನ್ನು ನೋಡುತ್ತಿದ್ದರೆ ಇವಳಿಗೆ ಆಯಾಸ, ಸುಸ್ತು ಎನ್ನುವುದು ಆಗುತ್ತಿತ್ತೋ ಇಲ್ಲೋ ಗೊತ್ತಾಗುತ್ತಿರಲಿಲ್ಲ. ಅಮ್ಮನ ಬಾಣಂತನಕ್ಕೆ ಪಣ ತೊಟ್ಟು ನಿಂತಿರುವ ವೀರನಾರಿಯ ಹಾಗೆ ಕಾಣುತ್ತಿದ್ದಳು. ಸೊಸೆಯ ಬಾಣಂತನವನ್ನು ಮಗಳಿಗಿಂತ ಹೆಚ್ಚಾಗಿ ಮಾಡಿದ ಅಜ್ಜಿಯನ್ನು ಅಮ್ಮ ಯಾವಾಗಲೂ ಕೃತಜ್ಞತೆಯಿಂದ ನೆನೆಯುತ್ತಿದ್ದಳು.
ಪಾಪುವಿಗೆ ಐದು ತಿಂಗಳಾಗುತ್ತಿದ್ದಂತೆ ಅಮ್ಮನಿಗೆ ಬಾಣಂತಿ ಕೋಣೆಯಿಂದ ಮುಕ್ತಿ ಸಿಕ್ಕಿತ್ತು. ಅಷ್ಟರಲ್ಲಿ ಸೋದರತ್ತೆ ಹೊಟ್ಟೆಯಲ್ಲಿದ್ದಾಳೆ ಎಂಬ ಸುದ್ದಿ ಹೊತ್ತ ಕಾಗದ ಅಜ್ಜನ ಕೈಸೇರಿತ್ತು. ಮತ್ತೆ ಅಜ್ಜಿಯ ಮೊಗದಲ್ಲಿ ಸಂಭ್ರಮವೋ ಸಂಭ್ರಮ. “ಚೊಚ್ಚಲ ಬಾಣಂತನ ಕಣ್ರೀ, ಏಳು ತಿಂಗಳಿಗೇ ಮಗಳನ್ನು ಕರೆಸಿಬಿಡೋಣ’ ಎಂದು ಅಜ್ಜನಿಗೆ ಗೋಗರೆಯುವುದನ್ನು ನೋಡುತ್ತಿದ್ದರೆ ತಾಯಿ, ತಾಯ್ತನ ಎಂಬುದರ ಮಹತ್ವ ಅರಿವಾಗುತ್ತಿತ್ತು. ಆದರೂ ಅದರ ಸವಿಯನ್ನು ನಾನು ಬಾಣಂತಿಯಾಗಿ ಪಾತ್ರ ವಹಿಸಿದಾಗಲೇ ಗೊತ್ತಾದದ್ದು.
ನಳಿನಿ ಟಿ. ಭೀಮಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.