ಉಡುಪಿಯಲ್ಲಿ ನಾಡಹಬ್ಬ ಪರ್ಯಾಯ
Team Udayavani, Jan 14, 2018, 4:35 PM IST
2018 ಜನವರಿ 18.
ಉಡುಪಿಯ ಮಠಗಳ ಪರ್ಯಾಯ ಪರಂಪರೆಯ 32ನೆಯ ಸುತ್ತಿನ ಮೊದಲನೆಯ ಪರ್ಯಾಯ: ಶ್ರೀ ಪಲಿಮಾರು ಮಠದ ಪರ್ಯಾಯ. ಎರಡು ಕಡೆಯು 18- ಇಸವಿಯಲ್ಲು , ತಾರೀಕಿನಲ್ಲು. 18 ಅಧ್ಯಾತ್ಮದ ಶಿಖರ ಸಂಖ್ಯೆ. ಪಲಿಮಾರು ಶ್ರೀಪಾದರಿಗೆ ಶುಭದ ಯೋಗ. ಶುಕ್ರದೆಸೆ. ನಾನು ಮಠಗಳಿಂದ ದೂರ ನಿಂತವ. ಆದರೂ ನನಗೆ ಪಲಿಮಾರು ಮಠ ತುಂಬ ಆತ್ಮೀಯ, ನಾಲ್ಕು ಕಾರಣಗಳಿಗಾಗಿ.
1ಆಚಾರ್ಯ ಮಧ್ವರ ಕೃತಿಗಳ ಶುದ್ಧ ಪಾಠವನ್ನು ಲಿಪಿಬದ್ಧಗೊಳಿಸಿ ಸಂಶೋಧನಾ ಪ್ರಜ್ಞೆಯ ವಿದ್ವತ್ ಪ್ರಪಂಚಕ್ಕೆ ಮಹೋಪಕಾರ ಮಾಡಿದ ಶ್ರೀ ಹೃಷಿಕೇಶತೀರ್ಥರು ಆಳಿದ ಸಂಸ್ಥಾನವಿದು. ಅಪಪಾಠಗಳ ಒಡ್ಡೋಲಗದ ನಡುವೆಯೂ ಶಾಂತವಾಗಿ, ಏಕಾಂತವಾಗಿ ಈ ಶುದ್ಧ ಪರಂಪರೆಯನ್ನು ಏಳು ಶತಮಾನಗಳ ತನಕವೂ ಉಳಿಸಿಕೊಂಡು ಬಂದ ಏಕಮಾತ್ರ ಮಠ: ಶ್ರೀ ಪಲಿಮಾರು ಮಠ.
2ಹತ್ತಾರು ಮಂಗಳಾಷ್ಟಕಗಳಿದ್ದರೂ ಅವುಗಳೆಲ್ಲವನ್ನು ಮೀರಿ ದೇಶಾದ್ಯಂತ ಪ್ರಸಿದ್ಧವಾದ, ಸ್ಮಾರ್ತ-ವೈಷ್ಣವ ಭೇದವಿಲ್ಲದೆ ಮದುವೆ ಮೊದಲಾದ ಶುಭಕಾರ್ಯಗಳಲ್ಲಿ ಎಲ್ಲರೂ ಪಠಿಸುವ ಸಾಟಿಯಿಲ್ಲದ ಮಂಗಲಾಷ್ಟಕವನ್ನು ನಮಗಿತ್ತ ರಾಜರಾಜೇಶ್ವರ ಯತಿಗಳಿದ್ದ ಮಠ- ಶ್ರೀಪಲಿಮಾರು ಮಠ. ಅವರು ಶ್ರೇಷ್ಠ ವಿದ್ವಾಂಸರಾಗಿದ್ದರು. ಅವರೇ ತನ್ನ ಇನ್ನೊಂದು ಕೃತಿ ರಾಮ ಸಂದೇಶದಲ್ಲಿ ಹೇಳಿಕೊಂಡಂತೆ ಸಮಧಿಗತ ಸಮಸ್ತ ನ್ಯಾಯಶಾಸ್ತ್ರರಾಗಿದ್ದರು. ಶ್ರೇಷ್ಠ ಕವಿಗಳಾಗಿದ್ದರು. ಶ್ರೇಷ್ಠ ಪ್ರವಚನಕಾರರಾಗಿದ್ದರು.
ವಿದ್ವತ್ ಪ್ರಪಂಚದ ದುರ್ದೈವದಿಂದ ಅವರು ಎಳವೆಯಲ್ಲೆ ಪೀಠಾರೋಹಣ ಮಾಡಿ “ತೀರ್ಥ’ ಪದವಿ ಪಡೆಯುವ ಮೊದಲೇ ದೇವರ ಪಾದ ಸೇರಿದರು. ಕಾಂತಾವರ ಅವರ ವಿದ್ವತ್ತಿಗೆ ಸಂದ ಕೊಡುಗೆ. ಅವರ ಕಾಂತಾವರ ಪಲಿಮಾರು ಮಠದ ಸೊತ್ತಾಯಿತು. ಆದರೆ ಅವರು ಪಲಿಮಾರು ಮಠದ ಪೀಠವನ್ನೇರಲೇ ಇಲ್ಲ. ಆದರೂ ಅವರ ಕೊಡುಗೆ ಅಸಾಮಾನ್ಯವಾದದ್ದು. ಅವರು ಪಲಿಮಾರು ಮಠದ ಶ್ರೀ ವಿದ್ಯಾಮೂರ್ತಿತೀರ್ಥರಿಂದ ಸನ್ಯಾಸ ಪಡೆದವರು. ಅದರಿಂದ ಅವರು ಪಲಿಮಾರು ಮಠದ ಕೊಡುಗೆ. ಅದಕ್ಕಾಗಿಯೂ ನನಗೆ ಪಲಿಮಾರು ಮಠ ತುಂಬ ಆತ್ಮೀಯ.
3ಅತ್ಯಂತ ಪ್ರಾಮಾಣಿಕರಾದ, ಅದಕ್ಕಾಗಿಯೆ ಪೀಠ ತ್ಯಾಗ ಮಾಡಿದ ಶ್ರೀ ರಘುವಲ್ಲಭತೀರ್ಥರು (ಈಗಣ ಎಸ್.ಎಲ್. ರಾವ್) ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಕಂಡು ತೊರೆದು ದೂರ ಸರಿದ ಮಠ ಶ್ರೀ ಪಲಿಮಾರು ಮಠ.
ನನಗೆ ತುಂಬ ಇಷ್ಟವಾದದ್ದು ಅವರ ಪಾರದರ್ಶಕ ವ್ಯಕ್ತಿತ್ವ. ಆದರೂ ತನ್ನನ್ನು ಮುಚ್ಚಿಕೊಂಡೇ ಬದುಕಿದ ಆಮೆ ಚಿಪ್ಪಿನ ಬದುಕು. ಅನ್ಯಾದೃಶವಾದ ಸ್ನೇಹಶೀಲತೆ. ಇಂಥ ಒಬ್ಬ ಯತಿಯನ್ನು ಉಡುಪಿ ಕಳಕೊಂಡಿತಲ್ಲ ಎನ್ನುವುದೇ ನೋವಿನ ಸಂಗತಿ.
ಕಳೆದ ಬಾರಿ ಅಮೆರಿಕದಲ್ಲಿ ಅವರ ಮನೆಗೆ ಹೋಗಿದ್ದೆ. ಅದೇ ಪ್ರೀತಿ. ಅದೇ ವಿಶ್ವಾಸ. ಅದೇ ಆತ್ಮೀಯತೆ. ಅವರ ಜತೆಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾಗ ಅವರು, ಕಣ್ಣಂಚಿನಲ್ಲಿ ನೀರು ತುಂಬುತ್ತ- “”ನನಗೆ ನನ್ನ ಭಾರತದಲ್ಲಿ ಸಾಯಬೇಕು ಎಂದು ಆಸೆ ಇದೆ. ಆದರೆ ನಾನು ಯಾವಾಗ ಸಾಯುತ್ತೇನೆ ಗೊತ್ತಿಲ್ಲವಲ್ಲ” ಎನ್ನುತ್ತ ವಿಷಾದದ ನಗೆ ನಕ್ಕರು 82ರ ಹರೆಯದ ಎಸ್.ಎಲ್. ರಾವ್. ಅವರು ಪಲಿಮಾರು ಮಠದ ಪೀಠದಲ್ಲಿದ್ದದ್ದಕ್ಕೂ ಒಂದು ಹಿನ್ನೆಲೆಯಿದೆ. ಅವರು ಆಚಾರ್ಯ ಮಧ್ವರ ಅತ್ಯಂತ ಪ್ರೀತಿಯ ಶಿಷ್ಯರಾದ ತ್ರಿವಿಕ್ರಮ ಪಂಡಿತರ “ಲಿಕುಚ’ ವಂಶದಲ್ಲಿ ಹುಟ್ಟಿದವರು. ಶ್ರೀ ಹೃಷೀಕೇಶತೀರ್ಥರ ಮೂಲಪಾಠದ ಮುದ್ರಣಕ್ಕೆ ನಾಂದಿ ಹಾಡಿದವರು. ಸ್ವಲ್ಪ ಭಾಗ ಮುದ್ರಣವಾಗಿತ್ತು ಕೂಡ. ನಾನೇ ಸಂಪಾದಕನಾಗಿದ್ದೆ. ಅಷ್ಟರಲ್ಲಿ ಪೇಜಾವರ ಶ್ರೀಪಾದರು, “ಅದರ ಮುದ್ರಣವನ್ನು ಮಾಧ್ವ ಮಹಾಮಂಡಲದ ಮೂಲಕ ಮಾಡೋಣ’ ಎಂದರು. ಅದರಿಂದ ರಘುವಲ್ಲಭರು ತೊಡಗಿದ್ದ ಮುದ್ರಣಕಾರ್ಯ ಸ್ಥಗಿತವಾಯಿತು. ಈ ಎಲ್ಲ ಕಾರಣಗಳಿಂದ ನನಗೆ ರಘುವಲ್ಲಭರು ಇಷ್ಟವಾದರು. ಅವರಿಗೆ ಸನ್ಯಾಸಿಯಾಗಿ ಬದುಕು ನೀಡಿದ್ದ ಪಲಿಮಾರು ಮಠ ಕೂಡ.
4ನಾನು ಕಂಡಂತೆ, ನಮ್ಮ ಕಾಲದ ಸಾಟಿಯಿಲ್ಲದ ಮಹಾ ವಿದ್ವಾಂಸ, ಮಗುವಿನಂಥ ಮನಸ್ಸಿನ ಮುಗ್ಧ ವಿದ್ವನ್ಮಣಿ, ಸಂಪ್ರದಾಯದ ಮುಚ್ಚಳದೊಳಗೆ ಹುದುಗಿದ್ದ ಮಹಾ ಕ್ರಾಂತಿಕಾರ, ನನ್ನ ವಿದ್ಯಾಗುರು ಶ್ರೀ ವಿದ್ಯಾಮಾನ್ಯತೀರ್ಥರು ಆಳಿದ ಸಂಸ್ಥಾನ ಶ್ರೀ ಪಲಿಮಾರು ಮಠ. ಅದು ನನ್ನ ಅಂತರಂಗದ ಕಣ್ಣು ತೆರೆಸಿದ ಮಠ. ಶ್ರೀ ವಿದ್ಯಾಮಾನ್ಯತೀರ್ಥರನ್ನು ತನ್ನತ್ತ ಸೆಳೆದು ಕೆಲವರಿಗೆ ಆಘಾತ ನೀಡಿದ, ಕೆಲವರಿಗೆ ತುಂಬ ಖುಷಿ ನೀಡಿದ ಸಂಪ್ರದಾಯಕ್ಕೆ ಹೊಸ ಆಯಾಮವನ್ನಿತ್ತ ಮಠ ಶ್ರೀ ಪಲಿಮಾರು ಮಠ.
ಈ ನಾಕು ಕಾರಣಗಳಿಗಾಗಿ ಶ್ರೀ ಪಲಿಮಾರು ಮಠ ನನಗೆ ಪ್ರಿಯವಾದ ಮಠ. ಪರಂಪರೆಯ ಶುದ್ಧ ಪಾಠಗಳನ್ನು ಉಳಿಸಿದ ಏಕೈಕ ಮಠ. ಆಚಾರ್ಯರ ಒಂಬತ್ತು ಮಂದಿ ಸನ್ಯಾಸಿ ಶಿಷ್ಯರಲ್ಲಿ ಮೊದಲಿಗರಾಗಿ ಆಶ್ರಮ ಜ್ಯೇಷ್ಠರಾಗಿ ಗೌರವ ಪಾತ್ರರಾದ ಶ್ರೀ ಹೃಷೀಕೇಶತೀರ್ಥರ ಮಠ. ಅಸಾಮಾನ್ಯ ವಿದ್ಯಾಮಾನ್ಯರು ಶ್ರೀ ವಿದ್ಯಾಮಾನ್ಯತೀರ್ಥರು ಉಭಯ ಮಠಾಧೀಶರಾಗಿದ್ದರು. ಶ್ರೀ ಭಂಡಾರಕೇರಿ ಮಠ ಮತ್ತು ಶ್ರೀ ಪಲಿಮಾರು ಮಠ. ಇತಿಹಾಸದಲ್ಲಿ ಇಂಥ ಇನ್ನೊಂದು ಉದಾಹರಣೆ ಶ್ರೀ ವಿಷ್ಣುತೀರ್ಥರು. ಅವರು ಶ್ರೀ ಸೋದೇ ಮಠ (ಆಗಣ ಕುಂಭಾಶಿ ಮಠ) ಮತ್ತು ಶ್ರೀ ಸುಬ್ರಹ್ಮಣ್ಯ ಮಠ-ಎರಡೂ ಸಂಸ್ಥಾನಗಳಿಗೆ ಅಧಿಪತಿಗಳಾಗಿದ್ದರು. ವಿದ್ಯಾಮಾನ್ಯರ ಅಸಾಧಾರಣವಾದ ಪ್ರವಚನಪಾಟವ, ಮಗುವಿನಂಥ ಮುಗ್ಧತೆ, ಅವರ ಅರಳುಗಣ್ಣಿನ ಪ್ರೀತಿಯ ಪೂರ ಮತ್ತು ಬಹಳ ಜನಕ್ಕೆ ಗೊತ್ತಿರದ, ಅವರಲ್ಲಿ ಸುಪ್ತವಾಗಿದ್ದ ಕ್ರಾಂತಿಕಾರಿ ಮನೋಭಾವ ಇವೆಲ್ಲವುಗಳಿಂದ ಪ್ರಭಾವಿತನಾಗಿದ್ದೆ, ನಾನು.
ಇಲ್ಲಿ ಒಂದು ಘಟನೆಯನ್ನು ನೆನಪಿಸಿಕೊಳ್ಳಬೇಕು- ಒಮ್ಮೆ ವಿದ್ಯಾಮಾನ್ಯರು ಮುದ್ಗಲ್ಲಿನಲ್ಲಿ ಚಾತುರ್ಮಾಸ್ಯ ಕೂತಿದ್ದರು. ದಿನವೂ ನೂರಾರು ಜನರ ಸಮಾರಾಧನೆ. ಅಲ್ಲಿನ ಜಿನಸಿಯ ಅಂಗಡಿಯ ಮಾಲಕರಾದ ವೈಶ್ಯರು ಪ್ರತಿದಿನವೂ ಅಡಿಗೆಯ ಸಾಮಾನನ್ನು ಸೇವಾ ರೂಪವಾಗಿ ಒದಗಿಸುತ್ತಿದ್ದರು. ಊಟ ಮಾತ್ರ ಮೊದಲು ಬ್ರಾಹ್ಮಣರಿಗೆ, ಅನಂತರ ಅಂಗಡಿಯ ಶೆಟ್ಟರಿಗೆ. ಸ್ವಾಮೀಜಿಗೆ ಈ ಸಂಗತಿ ತಿಳಿಯಿತು. ಅವರು ಸಂಯೋಜಕರನ್ನು ಕರೆದು ಹೇಳಿದರು, “”ಅಂಗಡಿಯ ಶೆಟ್ಟರು ನಮಗೆ ಸಮಾರಾಧನೆಯ ಸಾಮಗ್ರಿಯನ್ನಿತ್ತು ನೆರವಾಗುತ್ತಿರುವವರು. ಅವರಿಗೂ ಮೊದಲ ಸರಿದಿಯಲ್ಲೆ ಬಡಿಸಬೇಕು”. ಸಂಯೋಜಕರು ಒಪ್ಪಿಕೊಂಡರು. ಸ್ವಾಮೀಜಿ ಹೇಳಿದಂತೆಯೆ ವ್ಯವಸ್ಥೆ ಮಾಡಲಾಯಿತು.
ಕೆಲವು ದಿನ ಕಳೆಯಿತು. ವಿದ್ಯಾಮಾನ್ಯರು ಪುನಃ ಸಂಯೋಜಕರನ್ನು ಕರೆದು ಕೇಳಿದರು- “ಎಲ್ಲವೂ ಸರಿಯಾಗಿ ನಡೆಯುತ್ತಿದೆ ತಾನೇ?’ ಸಂಯೋಜಕರೆಂದರು, “ಹೌದು, ಸ್ವಾಮೀಜಿ, ಆದರೆ…’ “ಏನು ಆದರೆ?’ “ಕೆಲವು ಮಡಿವಂತರು ಗುಣುಗುಟ್ಟುತ್ತಿದ್ದಾರೆ; ಮಡಿವಂತರಿಗೂ ಶೆಟ್ಟರಿಗೂ ಒಂದೇ ಪಾಳಿಯಲ್ಲಿ ಬಡಿಸುವುದೆಂದರೇನು? ಕಲಿಗಾಲ’ ಎನ್ನುತ್ತಿದ್ದಾರೆ. ಕೂಡಲೆ ವಿದ್ಯಾಮಾನ್ಯರು ನುಡಿದರು- “ಹೌದು, ಒಟ್ಟಿಗೆ ಬಡಿಸುವುದು ತಪ್ಪು. ಮೊದಲು ಅಂಗಡಿಯ ಶೆಟ್ಟರಿಗೆ ಬಡಿಸಿ. ಆಮೇಲೆ ಮಡಿವಂತರಿಗೆ’. ಸಂಯೋಜಕರು ದಿಗ್ಭ್ರಾಂತರಾದರು! ವಿದ್ಯಾಮಾನ್ಯರಂಥ ಸಂಪ್ರದಾಯವಾದಿ ಸನ್ಯಾಸಿಯ ಬಾಯಲ್ಲಿ ಇಂಥ ಕ್ರಾಂತಿಕಾರಿ ಮಾತು! ಇದು ವಿದ್ಯಾಮಾನ್ಯರ ಒಳ ಬಗೆಯ ತುಡಿತ. ಅದಕ್ಕೆಂದೇ ಅವರು ಅಸಾಮಾನ್ಯರು.
ಕೃಷ್ಣನ ಇಚ್ಛೆಯೆ ಹಾಗಿತ್ತು: ಅವನು ವಿದ್ಯಾಮಾನ್ಯರನ್ನು ಭಂಡಾರಕೇರಿ ಮಠದಿಂದ ಹೃಷೀಕೇಶತೀರ್ಥರ ಸಂಸ್ಥಾನಕ್ಕೆ ಬರಿಸಿಕೊಂಡ. ಅವರ ಕೈಯಲ್ಲಿ ಪೂಜಿಸಿಕೊಂಡ. ಚಿನ್ನದ ರಥ ಮಾಡಿಸಿಕೊಂಡ. ಇಂಥ ಮಹಾನ್ ತಪಸ್ವಿ ಆಳಿದ ಸಂಸ್ಥಾನ ಎಂದು ಪಲಿಮಾರು ಮಠ ನನಗೆ ತುಂಬ ಇಷ್ಟ. ರಾಮರಾಜ್ಯ ಪಲಿಮಾರು ಮಠದ ಪರ್ಯಾಯ ಎಂದರೆ ರಾಮರಾಜ್ಯ ಎಂದು ಖ್ಯಾತಿ. ಕಾರಣ, ಆ ಮಠದ ಮೂಲ ಯತಿಗಳಾದ ಶ್ರೀ ಹೃಷೀಕೇಶತೀರ್ಥರಿಗೆ ಆಚಾರ್ಯ ಮಧ್ವರು ನೀಡಿದ ಪಟ್ಟದ ದೇವರು ಶ್ರೀರಾಮಚಂದ್ರ ಮತ್ತು ಹೃಷೀಕೇಶತೀರ್ಥರು ತಾಡವಾಲೆಯಲ್ಲಿ ಬರೆದಿಟ್ಟ ಸರ್ವ ಮೂಲಗಳ ಶುದ್ಧಪಾಠ. 700 ವರ್ಷಗಳ ಈ ಪುರಾತನ ತಾಡವಾಲೆ ಪಟ್ಟದ ದೇವರ ಜತೆ ದಿನಾ ಪೂಜೆಗೊಳ್ಳುತ್ತಿದೆ.
ನಾನು ಈ ಮಠದ ನಾಕು ಪರ್ಯಾಯಗಳನ್ನು ಕಂಡಿದ್ದೇನೆ. ಎಲ್ಲ ಪರ್ಯಾಯಗಳೂ ರಾಮರಾಜ್ಯವಾದದ್ದು ನಿಜ.
ಈಗಣ ನಗುಮುಖದ ಯತಿ ಶ್ರೀಶ್ರೀ ವಿದ್ಯಾಧೀಶತೀರ್ಥರಂತೂ ಉತ್ಸಾಹದ ಬುಗ್ಗೆ. ತನ್ನದೇ ಪೂರ್ವ ಪರ್ಯಾಯವನ್ನು ಮೀರಿಸುವ ಪರ್ಯಾಯ ಇದಾಗಬೇಕು ಎಂದು ಅವರು ಪಣ ತೊಟ್ಟಿದ್ದಾರೆ. ಅವರ ಸಾತ್ವಿಕತೆ ಇದನ್ನು ಮಾಡಗೊಡುತ್ತದೆ ಎನ್ನುವ ಭರವಸೆ ಜನತೆಗಿದೆ. ಶ್ರೀಕೃಷ್ಣನ ಅಭಯಹಸ್ತ ಅವರನ್ನು ಕಾಪಾಡಲಿ. ಅವರಿಂದ ಅಭೂತಪೂರ್ವ ಕೆಲಸಗಳನ್ನು ಮಾಡಿಸಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.