ನಾಮಾಯ ತಸ್ಮೈ ನಮಃ
Team Udayavani, Aug 25, 2019, 5:00 AM IST
ನಮ್ಮ ಪದವಿ ಶಿಕ್ಷಕರೊಬ್ಬರು ಹಾಜರಾತಿ ತೆಗೆದುಕೊಳ್ಳುವಾಗ ಶಕುಂತಲಾದೇವಿ ಬೇಳೂರಕರ್, ನಿರ್ಮಲಾಕುಮಾರಿ ಕೆ. ಎನ್., ಸೌಭಾಗ್ಯಲಕ್ಷ್ಮೀಬಾಯಿ ಎಂಬ ಹೆಸರುಗಳನ್ನು ಕರೆದು “”ಏನ್ರೀ ಇಷ್ಟೊಂದು ಉದ್ದನೆಯ ಹೆಸರಿನವರೇ ಕ್ಲಾಸ್ ತುಂಬಾ ಇದ್ರೆ ಅರ್ಧ ಪೀರಿಯಡ್ ಅಟೆಂಡೆನ್ಸಿಗೇ ಬೇಕು, ನಿಮ್ಮ ಹೆಸರಿನ ಬಾಲಗಳನ್ನು ಕತ್ತರಿಸಿ ಚಿಕ್ಕದು ಮಾಡಿಕೊಳ್ಳಿ” ಎನ್ನುತ್ತಿ ದ್ದ ರು. ಪಾಠ ಕೇಳುವ ಉತ್ಸಾಹವಿಲ್ಲದ ವಿದ್ಯಾರ್ಥಿಗಳು ಇಂತಹ ಜೋಕುಗಳಿಗೆ ನಗುತ್ತ ಕಾಲಹರಣ ಮಾಡುವುದು ಸಾಮಾನ್ಯವಾಗಿತ್ತು. ಆವ ತ್ತೂಮ್ಮೆ ನಮ್ಮ ಶಿಕ್ಷಕರು ಈ ಸಂಬಂಧ ಅವರ ಪೂರ್ವಾಶ್ರಮದ ಕೆಲವು ಅನುಭವಗಳನ್ನು ಅನಾವರಣಗೊಳಿಸಿದರು. ಅವರ ಕಾಲೇಜು ದಿನಗಳಲ್ಲಿ ಅವರ ಗೆಳೆಯನೊಬ್ಬನ ಹೆಸರು “ಪೀರ್ ಅಬ್ದುಲ್ಲಾ ಉರ್‌ರೆಹಮಾನ್ ಶರೀಫ್’ ಎಂದು ಇತ್ತೆಂದೂ ಅವನು ಯಾವುದಾದರೂ ಅಪ್ಲಿಕೇಷನ್ ಫಿಲ್-ಅಪ್ ಮಾಡುವಾಗ ಹೆಸರಿಗಾಗಿ ಮೀಸಲಿರಿಸಿದ ಸ್ಥಳದಲ್ಲಿ ಅವನ ಹೆಸರಿನ ಪೂರ್ವಾರ್ಧವನ್ನೂ ಬರೆಯಲಾಗದೆ ಪರದಾಡುತ್ತಿದ್ದನಂತೆ. ಒಮ್ಮೆ ಅವನು ಇದ್ದಕ್ಕಿದ್ದಂತೆಯೇ ನಾಪತ್ತೆಯಾದನಂತೆ. ಮೂರು ತಿಂಗಳ ನಂತರ ಕಾಲೇಜಿಗೆ ಬಂದಾಗ ತಾನು ಪವಿತ್ರವಾದ ಹಜ್ ಯಾತ್ರೆ ಕೈಗೊಂಡಿದ್ದಾಗಿಯೂ ಇನ್ನು ಮುಂದೆ ತನ್ನ ಹೆಸರಿನ ಪ್ರಾರಂಭದಲ್ಲಿ “ಅಲ್ಹಾಜ್’ ಎಂಬ ಗೌರವಸೂಚಕ ಟೈಟಲ್ ಸೇರ್ಪಡೆಯಾಗಿರುವುದಾಗಿಯೂ ಹೇಳಿ ದ ನಂತೆ. ಗೆಳೆ ಯ ರೆಲ್ಲ ಅವನ ಹೆಸರನ್ನು ಮೊಟಕುಗೊಳಿಸಿ “ಉರ್’ ಎಂದಷ್ಟೇ ಕರೆಯುತ್ತಿದ್ದುದಾಗಿ ತಿಳಿಸಿದರು. ಹೀಗೆ ಹೆಸರಿನ ಮಹಿಮೆಯ ವಿವರಣೆಯಲ್ಲಿ ಒಂದಿಡೀ ಪೀರಿಯಡ್ ಮುಗಿದಿತ್ತು.
ಬಹಳ ಹಿಂದೆ ಮಕ್ಕಳಿಗೆ ಹೆಸರಿಡುವಾಗ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರ ಕುಟುಂಬದಲ್ಲಿ ಚೆನ್ನಾಗಿ ಬಾಳಿ ಬದುಕಿದ ಅಜ್ಜಿ-ತಾತಂದಿರ ಹೆಸರನ್ನು ಮಗುವಿಗಿರಿಸುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಕೆಲ ವರು ಶ್ರೀನಿವಾಸ, ಗಂಗಾಧರ, ಗೌರಿ, ಲಕ್ಷ್ಮಿ, ಪಾರ್ವತಿ ಎಂಬ ದೇವರ ಹೆಸರನ್ನಿರಿಸುತ್ತಿದ್ದರು. ಪ್ರತಿದಿನ ಮಗುವಿನ ಹೆಸರನ್ನು ಕರೆಯುವಾಗ ಭಗವನ್ನಾಮ ಸ್ಮರಣೆಯೂ ಆಗುವುದೆಂಬ ದೂರಾಲೋಚನೆ !
ತೊಂಬತ್ತರ ದಶಕದ ಶುರುವಿನಲ್ಲಿ ಜನಿಸಿದ ನನ್ನ ಮಗನಿಗೆ ಸಾಕಷ್ಟು ತಲಾಷಿ ನಡೆಸಿ ಸಮರ್ಥ್ ಎಂಬ ಹೆಸರನ್ನು ಆರಿಸಿದೆ. ಇಂದು ತುಂಬ ಕಾಮನ್ ಆಗಿರುವ ಆ ಹೆಸರು ಇಪ್ಪತ್ತಾರು ವರ್ಷಗಳ ಹಿಂದೆ ಅಪರೂಪದ್ದಾಗಿತ್ತು. ನಾಮಕರಣದ ಹಿಂದಿನ ದಿನ ವಿಷಯ ತಿಳಿದ ನಮ್ಮ ಮಾವನವರು “ಆ ಮಗೂಗೆ ಅದೇನು ಹೆಸರು ಅಂತ ಆರಿಸಿದ್ದೀಯ, ಉಚ್ಚರಿಸಲು ನಾಲಿಗೆಯೇ ಹೊರಳದು, ಅದರ ಬದಲು ಲಕ್ಷಣವಾಗಿ ರಂಗನಾಥ ಅಂತ ಮನೆದೇವ್ರು ಹೆಸ್ರು ಇಡು’ ಎಂದರು.
“ಅದು ತುಂಬಾ ಹಳೆ ಹೆಸರಾಯ್ತು ಈಗ ಎಲ್ರೂ ಆಧುನಿಕ ಹೆಸ್ರು ಇಡ್ತಾರೆ’ ಎಂದೆ.
“ಅಯ್ಯೋ! ರಂಗನಾಥ ಹಳೆ ಹೆಸ್ರು ಅಂತ ಯಾರು ಹೇಳಿದ್ದು? ನನ್ನ ಹೆಸರು ರಂಗೇಗೌಡ. ಇದು ಹಳೇ ಹೆಸ್ರು. ಹಾಗಾಗಿ, ರಂಗನಾಥ ಮಾರ್ಡರ್ನ್ ಹೆಸರೇ. ಅದನ್ನೇ ಇಡು’ ಎಂದು ತೀರ್ಪು ನೀಡಿದರು. ಈ ವಿಷಯವಾಗಿ ಸರಣಿ ಚರ್ಚೆ ನಡೆಯಿತು. ನಂತರ ಜನ್ಮನಾಮ, ವ್ಯಾವಹಾರಿಕ ನಾಮ ಎಂಬ ಎರಡೂ ಹೆಸರುಗಳೊಂದಿಗೆ ನಾಮಕರಣ ಸುಸೂತ್ರವಾಗಿ ನೆರವೇರಿತು.
ಒಮ್ಮೆ ಹೀಗೆಯೇ ನನ್ನ ಮಗನೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಯಾವುದೋ ಸ್ಟಾಪಿನಲ್ಲಿ ಅಜ್ಜಿಯೊಂದು ಏದುಸಿರು ಬಿಡುತ್ತ ಹತ್ತಿಕೊಂಡಿತು. ಪಾಪ ! ಅದರ ಬೆನ್ನು ಸಂಪೂರ್ಣವಾಗಿ ಗೂನಿಕೊಂಡು ದೇಹ ಶಿಥಿಲಾವಸ್ಥೆಯಲ್ಲಿತ್ತು. ಆದರೆ ಕಣ್ಣು , ಬಾಯಿಯ ಖದರು ಕಮ್ಮಿಯಾದಂತಿರಲಿಲ್ಲ. ಕೋಲಿನ ಆಸರೆಯೊಂದಿಗೆ ನಮ್ಮ ಸೀಟಿನ ಬಳಿ ಬಂದ ಅಜ್ಜಿ, “ಸ್ವಲ್ಪ ಜರ್ಗವ್ವಾ ಅತ್ಲಾಗೆ’ ಎನ್ನುತ್ತ ಕೈಯೂರಿ ಕುಳಿತಿತು. ನಾನು ನನ್ನ ದೇಹವನ್ನು ಆದಷ್ಟು ಕುಗ್ಗಿಸಿಕೊಂಡು ಪಕ್ಕಕ್ಕೆ ಸರಿದೆ. ತೊಡೆಯ ಮೇಲೆ ಕುಳಿತಿದ್ದ ನನ್ನ ಪುಟ್ಟ ಮಗ ವೃದ್ಧೆಯೆಡೆಗೆ ಕಳವಳ, ಕಾತರ, ಸಂತೋಷ, ರೋಮಾಂಚನ- ಇವೆಲ್ಲವುಗಳ ಸಮ್ಮಿಶ್ರ ಭಾವದಿಂದ ನೋಡುತ್ತಿದ್ದ. ಸ್ವಲ್ಪ ಸಮಯದ ನಂತರ ತನ್ನ ಕುಳಿತ ಭಂಗಿಯನ್ನು ಸರಿಪಡಿಸಿಕೊಂಡ ಅಜ್ಜಿ ತನ್ನ ಸೊಂಟದ ಸಂದಿಯಿಂದ ಎಲೆಯಡಿಕೆಯ ಚೀಲವನ್ನು ಹೊರತೆಗೆಯಿತು. ಸಪ್ತವರ್ಣಗಳ ಪ್ಯಾಚ್‌ವರ್ಕ್‌ನಿಂದ ರೂಪುಗೊಂಡ ಆ ಚೀಲದಲ್ಲಿ ಸಾಕಷ್ಟು ಚೇಂಬರುಗಳಿದ್ದವು. ಪ್ರತೀ ಚೇಂಬರಿನೊಳಗೂ ಕೈ ತೂರಿಸುತ್ತಿದ್ದ ಅಜ್ಜಿ ಬ್ರಹ್ಮಾಂಡ ದರ್ಶನವನ್ನೇ ಮಾಡಿಸುತ್ತಿತ್ತು. ಎಲೆ ಅಡಿಕೆ, ಸುಣ್ಣದಡಬ್ಬಿ , ಕಡ್ಡಿಪುಡಿ, ಲವಂಗ, ಕಾಚು, ಹೊಗೆಸೊಪ್ಪು, ಭಜೆ- ಹೀಗೆ ಸಸ್ಯ ಸಂಪತ್ತಿನ ಆಗರವೇ ಅಲ್ಲಿತ್ತು. ಎಲ್ಲ ವಸ್ತುಗಳನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಎಲೆಯ ಮಧ್ಯ ತುಂಬಿದ ಅಜ್ಜಿ ಅದನ್ನು ತನ್ನ ದವಡೆಗೆ ವರ್ಗಾಯಿಸಿತು. ಮಧ್ಯ ಮಧ್ಯ ಸುಣ್ಣದ ಡಬ್ಬಿಯ ಮುಚ್ಚಳ ತೆಗೆದು ಅದಕ್ಕೇ ಅಟ್ಯಾಚ್ ಆಗಿದ್ದ ಒಂದು ಕಡ್ಡಿಯಿಂದ- ಅದೇನು ಚಮಚವೋ, ಗುಗ್ಗೆಕಡ್ಡಿಯೋ, ಹಲ್ಲಿನ ಸಂದಿ ತೂರಿಸುವ ಟೂತ್‌ಪ್ರಿಕ್ಕೋ- ಒಟ್ಟಿನಲ್ಲಿ ಒಂದು ಆಲ್ ಪರ್ಪಸ್ ಕಡ್ಡಿಯಿಂದ ಸುಣ್ಣವನ್ನು ಬಗೆದು ಉಂಡೆ ಮಾಡಿ ಬಾಯಿಗೆಸೆದುಕೊಳ್ಳುತ್ತಿತ್ತು. ಈ ವಿಚಿತ್ರವನ್ನೆಲ್ಲ ಅರಳುಗಣ್ಣಿನಿಂದ ನೋಡುತ್ತಿದ್ದ ನನ್ನ ಮಗನೆಡೆಗೆ ಆಕೆಯ ದೃಷ್ಟಿ ಹರಿಯಿತು. “ಆಗದ ಅಜ್ಜಿಗೆ ಅರವತ್ತು ಊರಿನ ಪಾರುಪತ್ಯ’ ಎಂಬಂತೆ ಅಜ್ಜಿಯ ಕುತೂಹಲ ಗರಿಕೆದರಿತು. ಸರಿ, ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು.
“ಯಾವೂರು? ಮಕ್ಳಷ್ಟು? ಗಂಡೆಷ್ಟು , ಹೆಣ್ಣೆಷ್ಟು? ಆಪರೇಷನ್ ಆಗೈತಾ? ಗಂಡನಿಗೇನು ನೌಕ್ರಿ?’ ನನಗೆ ಉತ್ತರಿಸಲೂ ಆಗದೆ, ಸುಮ್ಮನಿರಲೂ ಆಗದೆ ಉಸಿರುಗಟ್ಟಿದಂತಾಗುತ್ತಿತ್ತು. “ಸರೀ… ಮಗೀಗೇನ್ ಹೆಸ್ರಿಟ್ಟಿದೀಯ?’ ಮತ್ತೂಂದು ಪ್ರಶ್ನೆ ತೂರಿ ಬಂತು.
ಈಗಾಗಲೇ ಅನೇಕ ಕಡೆ “ಸಮರ್ಥ’ ಎಂಬ ಹೆಸರನ್ನು ಹೇಳಿ ಹಳೆತಲೆಗಳಿಂದ ಉಗಿಸಿಕೊಂಡ ಅನುಭವವಿದ್ದುದರಿಂದ ಆ ಅಜ್ಜಿಗೆ ಅವನ ಜನ್ಮನಾಮ ಹೇಳುವುದೇ ಒಳಿತೆನಿಸಿ “ರಂಗನಾಥ’ ಎಂದೆ.
ನನ್ನನ್ನೂ ಮಗುವನ್ನೂ ಅಪಾದಮಸ್ತಕ ನೋಡಿದ ಅಜ್ಜಿ, “ಇಷ್ಟ್ ಚೆನ್ನಾಗಿರೋ ಮಗೀಗೆ ಅದೆಂತ ಹಳೇ ಕಾಲದ್ ಹೆಸ್ರು ಇಟ್ಟಿದೀಯ? ನವೀನ ಅಂತಲೋ ಸಂತೋಸ ಅಂತಲೋ ಇಡಾºರ್ದಾಗಿತ್ತಾ? ಏನ್ ತಾಯಂದ್ರೋ!’ ಅಜ್ಜಿ ಅಸಡ್ಡೆಯಿಂದ ನುಡಿದಾಗ ಬೆಪ್ಪಾಗಿ ಕುಳಿತೆ. ಸುತ್ತಮುತ್ತಲಿನ ಪ್ರೇಕ್ಷಕರೆಲ್ಲ ಮಜಾ ತೆಗೆದುಕೊಳ್ಳುತ್ತಿದ್ದರೆ ಅಜ್ಜಿ ಸುಣ್ಣ ಬಗೆಯುವ ಕಾಯಕದಲ್ಲಿ ನಿರತವಾಗಿತ್ತು.
ಸುಮಾ ರಮೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.