ಬಿಡದೆ ಕಾಡುತಾನೆ ಮೂಡಿಗೆರೆಯ ಮಾಯಾವಿ..: ಇಲ್ಲೇ ಇದ್ದಾರೆ ತೇಜಸ್ವಿ!
Team Udayavani, Aug 13, 2023, 9:38 AM IST
ಕನ್ನಡದ ಮನಸ್ಸುಗಳನ್ನು ಮೋಹದಂತೆ ಆವರಿಸಿಕೊಂಡವರು ಕೆ. ಪಿ. ಪೂರ್ಣಚಂದ್ರ ತೇಜಸ್ವಿ- ರಾಜೇಶ್ವರಿ ದಂಪತಿ. ಅವರೀಗ ನಮ್ಮ ಜೊತೆಗಿಲ್ಲ. ಹಾಗಿದ್ದೂ ಮೂಡಿಗೆರೆಯಲ್ಲಿರುವ ಅವರ ತೋಟದ ಮನೆ “ನಿರುತ್ತರ’ ದಲ್ಲಿ ಲವಲವಿಕೆಯಿದೆ. ಸಂಭ್ರಮವಿದೆ. ನಾಡಿನ ಮೂಲೆಮೂಲೆ ಯಿಂದ ಮೂಡಿಗೆರೆಗೆ ಬರುವ ಅಭಿಮಾನಿಗಳು, ನಿರುತ್ತರದ ಅಂಗಳದ ಪರಿಸರದಲ್ಲಿ, ಪುಸ್ತಕಗಳಲ್ಲಿ ತೇಜಸ್ವಿ ದಂಪತಿಯನ್ನು ಕಾಣುತ್ತಿದ್ದಾರೆ. ಅವರು ನಡೆದಾಡಿದ ಅಂಗಳದಲ್ಲಿ ನಿಂತು ಕೈ ಮುಗಿಯುತ್ತಿದ್ದಾರೆ. ಆ ಪರಿಸರದಲ್ಲಿ ಈಚೆಗೆ ಅಡ್ಡಾಡಿಬಂದ ಲೇಖಕರ ಮನದ ಮಾತುಗಳು ಇಲ್ಲಿವೆ. .
ಕೃಷಿ, ತೋಟ ಯಾವಾಗಲೂ ಹೀಗೆಯೇ. ಮಾಲೀಕನ ಉಸಿರನ್ನು ಗಿಡ ಮರಬಳ್ಳಿಗಳು ಬಯಸುತ್ತಲೇ ಇರುತ್ತವೆ. ಬೀಜ- ಬೇರುಗಳಿಗೆ ಯಜಮಾನನ ಬೆವರು ತಾಗಿದ್ರೆ ಅವು ಆಳವಾಗಿ ಬೇರು ಬಿಡುತ್ತವೆ. “ನಿರುತ್ತರ’ದಲ್ಲಿ ಈಗ ತೇಜಸ್ವಿ ಇಲ್ಲ. ಅಮ್ಮ ರಾಜೇಶ್ವರಿ ಇಲ್ಲವಾಗಿ ಒಂದೂವರೆ ವರ್ಷ. ಮಾಲೀಕರಿಲ್ಲದ ಆ ಮನೆ, ಆ ತೋಟವನ್ನು ಊಹಿಸುವುದು ನಿಮಗೆ ಸ್ವಲ್ಪ ಕಷ್ಟವಾಗಬಹುದು. ನನಗೂ ಅದು ಕಷ್ಟವಾಗಿತ್ತು. ಆದರೆ, ಅಲ್ಲಿಗೊಮ್ಮೆ ಹೋದರೆ ಮನಸ್ಸಿಗೆ ಖುಷಿಯಾಗುತ್ತದೆ. ಕಾರಣ, “ನಿರುತ್ತರ’ ಬಸವಳಿದಿಲ್ಲ, ಸೋತಿಲ್ಲ. ಅದನ್ನು ಜತನದಿಂದ ನೋಡಿಕೊಳ್ಳುತ್ತಿರುವ ತೇಜಸ್ವಿ-ರಾಜೇಶ್ವರಿಯವರ ಪ್ರೀತಿಯ ಶಿಷ್ಯನ ಕಾರಣದಿಂದ, ನಿರುತ್ತರದ ಪ್ರತಿ ಕಣದಲ್ಲಿಯೂ ತೇಜಸ್ವಿ-ರಾಜೇಶ್ವರಿಯ ನೆರಳು ಕಾಣಿಸುತ್ತದೆ!
ಹಣಕ್ಕಾಗಿ ತೋಟ ಮಾಡಲಿಲ್ಲ…
ತೇಜಸ್ವಿ ಕೃಷಿಯನ್ನು ಯಾವತ್ತೂ ತುಂಬಾ ಗಂಭೀರವಾಗಿ ಮಾಡಿದವರಲ್ಲ ಎಂಬುದಕ್ಕೆ ಬೇರೆ ಬೇರೆ ಆಯಾಮಗಳಿವೆ. ಒಂದು: ಲಾಭರಹಿತ ತೊಡಗುವಿಕೆಯ ಪ್ರಮಾಣ, ಅಂದರೆ ಕೃಷಿಗೆ ಕೊಡುವ ಸಮಯ. ಎರಡನೆಯದು: ನೆಟ್ಟ ಗಿಡ ದುಡ್ಡು ಸುರಿಯಬೇಕೆಂಬ ಆಸೆ. ಮೂರನೆಯದ್ದು: ತನಗೆ ತನ್ನದೇ ಭೂಮಿ ಬೇಕು, ಅದು ಮಾಲಿನ್ಯಗೊಳ್ಳದ, ಸ್ವತ್ಛ ಗಾಳಿ ಒದಗಿಸಬೇಕು. ಕುಡಿಯಲು ಅಲ್ಲಿ ವಿಷ ರಹಿತ ನೀರಿರಬೇಕು. ಸುತ್ತಲೂ ಹಸಿರು ಕಾಡಿರಬೇಕು. ಪಕ್ಷಿಗಳ ಕಲರವ ಇರಬೇಕು ಎಂಬುವುದಕ್ಕಾಗಿ ತೇಜಸ್ವಿಯವರಿಗೆ ತೋಟ, ಅದರ ನಡುವಿನ “ನಿರುತ್ತರ’ ಇದ್ದುದು. ಆ ಕಾರಣಕ್ಕಾಗಿ ಅವರು ತೋಟ ಖರೀದಿ ಮಾಡುವಾಗ ಬಹುಶಃ ಮೊದಲು ನೋಡಿದ್ದು ಅಲ್ಲಿರುವ ಕಾಫಿ, ಏಲಕ್ಕಿ ಮೆಣಸಿನಂತಹ ಹಣಸುರಿಯುವ ವಾಣಿಜ್ಯ ಗಿಡಗಳನ್ನಲ್ಲ. ಸಹಜವಾಗಿ ಬೆಳೆದ ಕಾಡು, ಗಿಡ ಮರ ಬಳ್ಳಿ, ಹರಿಯುವ ತೊರೆ-ಝರಿ; ಅಲ್ಲಿರುವ ಅಸಂಖ್ಯಾತ ಜೀವ ಜಂತುಗಳು, ಪಕ್ಷಿ ಜಲಚರಗಳನ್ನು ಲೆಕ್ಕ ತಗೊಂಡು, ಅವುಗಳ ಜೊತೆಗೆ ತಾನೂ ಒಬ್ಬನೆಂದು ಭಾವಿಸಿ ಬದುಕತೊಡಗಿದರು.
ಕೊನೆಯಿಲ್ಲದ ಹುಡುಕಾಟ
ತೋಟದಲ್ಲಿರುವ ಗಿಡಗಳ ಬುಡಬುಡಗಳಿಗೆ ಗೊಬ್ಬರ ಸುರಿದು, ಒಳಸುರಿಗಳನ್ನು ಯಥೇತ್ಛವಾಗಿ ಕೊಟ್ಟು ಹೆಚ್ಚು ದುಡ್ಡು ಮಾಡಬೇಕು ಎಂಬ ಹಪಾಹಪಿ ತೇಜಸ್ವಿ ಅವರಲ್ಲಿ ಇರಲಿಲ್ಲ. ದುಡ್ಡಿನ ಆಚೆಯ ಅನೇಕ ಸುಖಕ್ಕಾಗಿ ತೇಜಸ್ವಿ ತಮ್ಮ ತೋಟದ ಮನೆ “ನಿರುತ್ತರ’ವನ್ನು ಬೆಳೆಸಿದರು. ಎಷ್ಟೋ ಬಾರಿ ಆ ತೋಟದ ಹಾದಿಯನ್ನು ಅವರ ಒಂಟಿ ಸೀಟಿನ ಸ್ಕೂಟರಿನ ಹಿಂಭಾಗದಲ್ಲಿ ಕೂತು ನಾನು ಸವಾರಿ ಮಾಡಿದ್ದಿದೆ. ತೇಜಸ್ವಿ ಆ ದಾರಿಯಲ್ಲಿ ಪ್ರತಿಬಾರಿ ಹೋಗುವಾಗಲೂ ಸ್ಕೂಟರ್‌ನ ಹ್ಯಾಂಡಲ್ ಹಿಡಿದು ಇಕ್ಕಡೆಯ ಕಾಡನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ದಿನಾ ನೋಡುವ ಮರಗಿಡ ಬಳ್ಳಿಗಳಲ್ಲಿ ಹೊಸದಾಗಿ ಏನೇನೋ ಹುಡುಕುತ್ತಿದ್ದರು. ದುಡ್ಡಿನ ಆಚೆಗೂ ಗಿಡ ಮರ ಬಳ್ಳಿಗಳು ಏನಾದರೂ ಕೊಡುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು ಅನಿಸುತ್ತದೆ. ಸುಮಾರು ನಾಲ್ಕೈದು ದಶಕಗಳ ಕಾಲ ಆ ಕಾಡಿನಲ್ಲಿ ಏನು ಸಿಕ್ಕಿತೋ ಅದನ್ನು ನಮಗೆ ಅಗೆದು, ಬಗೆದು, ಬರೆದು ತಲುಪಿಸಿದ್ರು. ನಾನು ಮೊದಲೇ ಬರೆಯಬೇಕಾಗಿದ್ದ ಒಂದು ಮಾತು: ತೇಜಸ್ವಿ ಕೃಷಿಯಿಂದ ಎಂದೂ ದೊಡ್ಡ ಮೊತ್ತ ಜೋಡಿಸಿದವರಲ್ಲ. ಅವರಿಗೆ “ನಿರುತ್ತರ’ದ ಒಂದು ಕಾಫಿ ಗಿಡದಷ್ಟೇ, ಆ ಕಾಡಿನ ಒಂದು ಸಹಜ ಮಾಗುವಾನಿ, ಒಂದು ಕೀರಲುಭೋಗಿ, ಹಲಸು, ಮಾವಿನ ಮರ ಕೂಡಾ ಮುಖ್ಯವಾಗಿತ್ತು. ಭಾಗಶಃ ಲೌಕಿಕ ಕಾರಣಕ್ಕಾಗಿ, ಪತ್ನಿ ರಾಜೇಶ್ವರಿ ಅವರ ಒತ್ತಾಯಕ್ಕೆ ನಿಯತ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಈ ವ್ಯತ್ಯಾಸ ನನಗೆ ಗೊತ್ತಾಗಿದ್ದು ತೇಜಸ್ವಿ ಇಲ್ಲದ ಮೇಲೆ ನಾನು ನಿರುತ್ತರಕ್ಕೆ ಅನೇಕ ಬಾರಿ ಹೋದಾಗ.
ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು!
ನಾನು ಕಂಡಂತೆ ರಾಜೇಶ್ವರಿ ಅವರ ಕಾಲದಲ್ಲಿ ತೋಟ ತುಂಬಾ ಬದಲಾಗಿತ್ತು. ಮರಕಸಿ, ಬುಡ ಕ್ಲೀನ್, ಗೊಬ್ಬರ ಕೊಡುವುದು, ಬೇಲಿ ರಿಪೇರಿ, ಹೊಸ ಗಿಡ ಹಾಕುವುದು, ಮೆಣಸು ನೆಡುವುದು… ಹೀಗೆ ಎಲ್ಲವೂ ಕ್ರಮ ಪ್ರಕಾರ ನಡೆಯುತ್ತಿತ್ತು. ಇದನ್ನು ತೇಜಸ್ವಿ ಅವರ ಕಾಲದಲ್ಲಿ ರಾಜೇಶ್ವರಿ ಬಯಸಿದ್ದರೋ ಏನೋ? ತೇಜಸ್ವಿಯವರಿಗೆ ಕೃಷಿಯಲ್ಲಿ ಬೇರೆಯವರದ್ದನ್ನು ಕಾಫಿ ಮಾಡುವುದು ಇಷ್ಟವಿರಲಿಲ್ಲ. ಪಕ್ಕದ ತೋಟದವರು ಏನೋ ಮಾಡಿಸುತ್ತಿದ್ದಾರೆ, ನಾನೂ ಹಾಗೆ ಮಾಡಿಸಬೇಕು ಎಂಬ ಜಾಯಮಾನ ಅವರಿಗೆ ಇರಲಿಲ್ಲ. ಮುಖ್ಯವಾಗಿ ಅವರಿಗೆ ಹೊಸದೇನನ್ನೋ ಬೆಳೆದು ಹಣ ಮಾಡುವ ಉದ್ದೇಶ ಇರಲೇ ಇಲ್ಲ. ಅವರು ನಡೆದದ್ದೇ ದಾರಿ.
ಹಾಗಂತ ತೋಟವನ್ನು ತೇಜಸ್ವಿ ಗಮನಿಸಿದಷ್ಟು ಸೂಕ್ಷ್ಮವಾಗಿ ಮಲೆನಾಡಿನ ಬೇರೆ ಯಾವ ಕಾಫಿ ಕೃಷಿಕನೂ ಗಮನಿಸಿರಲಿಕ್ಕಿಲ್ಲ. ಅವರು ಗಮನಿಸಿದ್ದು ಈ ವರ್ಷ ಕಾಫಿ ಹೇಗೆ ಹೂವು ಬಿಟ್ಟಿದೆ ಕಾಯಿ ಕಚ್ಚಿದೆ? ಪಸಲು ಎಷ್ಟು ಬರಬಹುದು ಎಂಬುದನ್ನಲ್ಲ. ಕಾಫಿ ಹೂವಿಗೆ ಬಂದ ಆ ಹೊಸ ಕೀಟ ಯಾವುದು? ಹಸಿ ಏಲಕ್ಕಿ ಬುಡವನ್ನು ಕಬಳಿಸಿದ ಕಾಡು ಮಿಡತೆ ಯಾವುದು? ಮಾವಿನ ಚಿಗುರು ಎಲೆಯನ್ನು ಚಿವುಟಿ ಸುತ್ತುವ ಜಂತು ಹೇಗಿರುತ್ತೆ? ಹಳ್ಳದಲ್ಲಿ ಇರುವ ಆನೆಯ ಹೆಜ್ಜೆ ಗುರುತು ಯಾವಾಗಿನದ್ದು? ಬೇಲಿಯನ್ನು ಮತ್ತೆ ಗಟ್ಟಿ ಮಾಡುವುದಕ್ಕಿಂತ, ಅದನ್ನು ದಾಟಿ ಬಂದ ಕಾಡು ಹಂದಿಯ ದೇಹ ಬಲ ಎಷ್ಟಿರಬಹುದು ಎಂಬುದೇ ತೇಜಸ್ವಿಯವರ ಕುತೂಹಲವಾಗಿತ್ತು. ಈ ಎಲ್ಲಾ ಕಾರಣಕ್ಕಾಗಿಯೇ ತೇಜಸ್ವಿ ಪಾಲಿಗೆ “ನಿರುತ್ತರ’ ತೋಟ ಪ್ರಕೃತಿ ಸಂಬಂಧಿತ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಜಾಗ.
ಇಬ್ಬರೂ ಇಲ್ಲದ ಮನೆಯಲ್ಲಿ…
ಈಗ ಇಬ್ಬರೂ ಇಲ್ಲದ ಕಾಲಕ್ಕೆ ನಿರುತ್ತರದ ನಿರ್ವಹಣೆ ರಖಾವಳೆ ಶಿವನದ್ದು. ಈತ ಮೂಲತಃ ಕೇರಳದವರು. ತೇಜಸ್ವಿಯವರ ಮನೆಗೆ ಬಂದು ಹೆಚ್ಚು ಕಡಿಮೆ 37 ವರ್ಷವಾಗಿದೆ. 60 ವರ್ಷ ವಯಸ್ಸಿನ ಶಿವ, ಅರ್ಧಕ್ಕಿಂತ ಹೆಚ್ಚು ಕಾಲ ಬದುಕಿದ್ದು “ನಿರುತ್ತರ’ದಲ್ಲಿ. ದಂಪತಿಗಳಿಬ್ಬರು ಕಟ್ಟಿದ ಮನೆ, ಬೆಳಸಿದ ತೋಟವನ್ನು ಅವರಷ್ಟೇ ಮತ್ತು ಅವರಿಗಿಂತಲೂ ಸ್ವಲ್ಪ ಚೆನ್ನಾಗಿ ನಿರ್ವಹಿಸಿದ, ನಿರ್ವಹಿಸುತ್ತಿರುವ ಕೀರ್ತಿ ಶಿವನದ್ದು. ತೇಜಸ್ವಿಯವರ ಮಕ್ಕಳು ಸುಶ್ಮಿತಾ-ಈಶಾನ್ಯ ಬೆಂಗಳೂರಲ್ಲಿ ನೆಲೆಸಿದ್ದಾರೆ. ಆಗಾಗ “ನಿರುತ್ತರ’ಕ್ಕೆ ಬಂದು ತಂದೆ ತಾಯಿಯವರ ನೆನಪು ತುಂಬಿಕೊಂಡು ನಿರ್ಗಮಿಸುತ್ತಾರೆ. ನಿವೃತ್ತಿಯ ನಂತರ ತೋಟಕ್ಕೆ ಬರಬೇಕು ಎಂಬ ಆಸೆಯೂ ಅವರದು. ತೇಜಸ್ವಿ ತೀರಿಕೊಂಡು 16 ವರ್ಷ ಆದಮೇಲೂ ಅವರು ವಾಸವಿದ್ದ ಸ್ಥಳ ನೋಡಲು ಬರುವ ಸಾವಿರಾರು ಜನ ಇಷ್ಟೊಂದು ಸಂಭ್ರಮಿಸುವಾಗ, ನನಗೆ ಇದೊಂದು ವಾರಸುದಾರಿಕೆಯ ಸುಖವಲ್ಲದೆ ಇನ್ನೇನು ಅನ್ನುವುದು ಶಿವ ಅವರ ಪ್ರಶ್ನೆ
ಪವಿತ್ರ ಸ್ಥಳವೆಂಬ ಭಾವ…
ಕನ್ನಡದಲ್ಲಿ ಎಷ್ಟೊಂದು ಅಗಲಿದ ಮಹಾಚೇತನಗಳ ಮನೆಗಳಿವೆ. ಕುವೆಂಪು ಮನೆ, ಬೇಂದ್ರೆ ಮನೆ, ಕಾರಂತರ ಮನೆ, ಪುತಿನ ಮನೆ… ಹೌದು; ಮನೆಗಳನ್ನು ಕಾಯುವುದು, ಬರುವ ಮಂದಿಗೆ ಅವನ್ನು ತೋರಿಸುವುದು ಸುಲಭ. ತೇಜಸ್ವಿ ಇನ್ನೂ ಬೇರೆಯಾಗುವುದು ಬರೀ ಮನೆಯ ಕಾರಣಕ್ಕಲ್ಲ. ಇದು ತೋಟದ ಮನೆ. ಇಲ್ಲಿ ಮನೆಗಿಂತ ತೋಟ ದೊಡ್ಡದು. ಸಾಮಾನ್ಯವಾಗಿ ಕವಿಗಳ ಮನೆ ಕಾಯುವ ಹುಡುಗರಿಗೆ ಆ ಕವಿ ಬರೆದ ಕಾವ್ಯದ ಒಂದು ಸಾಲೂ ನೆನಪಿರುವುದಿಲ್ಲ. ಶಿವ ಹಾಗಲ್ಲ, ತೇಜಸ್ವಿ ನಡೆದ ಈ ಕಾಡಿನ ಹಾದಿಯ ಹೆಜ್ಜೆಗಳ ಮೇಲೆ ಹೆಜ್ಜೆ ಇಟ್ಟವನು. ಬೇಟೆ ನಾಯಿ ಕಿವಿಯ ಕಿವಿ ಹಿಂಡಿದವರು. ಪಕ್ಷಿಗಳ ಫೋಟೋ ತೆಗೆಯಲು ಹಸಿರು ಮನೆ ಕಟ್ಟಿದವರು. ಈ ಇಡೀ ತೋಟದ ಯಾವ ಮೂಲೆಯಲ್ಲಿ ಯಾವ ಮರವಿದೆ, ಬಳ್ಳಿ ಇದೆ, ಎಲ್ಲಿ ಬೇಲಿ ಜಾರಿದೆ, ಎಲ್ಲಿ ಮರ ಮಲಗಿದೆ… ಇದೆಲ್ಲಾ ಮಾಹಿತಿ ಅವರಿಗಿದೆ. ತೇಜಸ್ವಿಯವರ ತೋಟದ ಎಷ್ಟೋ ಗಿಡಗಳನ್ನು ಇದೇ ಶಿವ ನೆಟ್ಟದ್ದಾರೆ. ಮೀನು ಹಿಡಿಯಲೆಂದು ಗಾಳ ಎತ್ತಿಕೊಂಡು ತೇಜಸ್ವಿ ಹೊಳೆಗೆ ಇಳಿಯುವಾಗ ಅದರ ಮುಳ್ಳಿಗಾಗಿ ಎರೆಹುಳು ಎಬ್ಬಿಸಿ ಕೊಟ್ಟವರು ಇದೇ ಶಿವ. “ಎಷ್ಟೋ ಮಂದಿ ಈಗಲೂ ಬಂದ ಕ್ಷಣ ಚಪ್ಪಲಿ ತೆಗೆದು “ನಿರುತ್ತರ’ದ ಜಗಲಿಗೆ ನಮಿಸುತ್ತಾರೆ. ಅದು ತೇಜಸ್ವಿ ಕೂತ ಚೇರ್ ಇರಬಹುದು, ಅಥವಾ ಹಳೆಯ ಅವರ ಸ್ಕೂಟರ್ ಇರಬಹುದು. ಅದೊಂದು ಪೂಜನೀಯ ವಸ್ತು ಎಂದು ಭಾವಿಸುವ ಅವರ ಅಭಿಮಾನಿಗಳನ್ನು ಕಂಡಾಗ, ನಾನೊಂದು ಹೆಮ್ಮೆಪಡುವ ಆಯಕಟ್ಟಿನ ಜಾಗದಲ್ಲಿದ್ದೇನೆ’ ಎನಿಸುತ್ತದೆ ಎನ್ನುತ್ತಾರೆ ಶಿವ
ನರೇಂದ್ರ ರೈ ದೇರ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.