ಸರ್ಕಸ್‌ ಬಂದಿದೆ ಊರಿಗೆ ಆದರೆ ಬೇಕಿದೆ ಯಾರಿಗೆ!


Team Udayavani, Apr 16, 2017, 3:45 AM IST

Home-Slideshow_Clowns3-(1).jpg

ಕಾಲ ಬದಲಾಗುತ್ತಿದೆ, ಮನಸ್ಸು ಬದಲಾಗುತ್ತಿದೆ, ರಂಜನೆಯ ವಿಧಾನಗಳು ಬದಲಾಗುತ್ತಿವೆ. ಮನೋರಂಜನೆಯ ಮಾಧ್ಯಮಗಳು ಬದಲಾಗುತ್ತಿವೆ! ಒಂದು ಕಾಲದಲ್ಲಿ ಕಂಪೆನಿ ನಾಟಕಗಳಿದ್ದವು; ಈಗ ಎಲ್ಲಿವೆ ಹೇಳಿ? ಸಿನೆಮಾ ನೋಡಲು ಟಾಕೀಸುಗಳಿಗೆ ಹೋಗುವ ಕಾಲವಿತ್ತು. ಈಗ ಅಂಗೈಯಲ್ಲಿ ಪರದೆ ಇರುವಾಗ ಟಾಕೀಸುಗಳಿಗೆ ಹೋಗುವವರಾರು? ಸರ್ಕಸ್‌ ಊರಿಗೆ ಬಂತೆಂದರೆ ಸಂಭ್ರಮವೇ ಸಂಭ್ರಮ. ಬೋನಿನೊಳಗೆ ಗರ್ಜಿಸುವ ಹುಲಿಗಳು, ಬಲೆಯ ಗೋಲದೊಳಗೆ ತಲೆಕೆಳಗಾಗಿ ಬೈಕು ಓಡಿಸುವವರು, ಸೋಡಾಬಾಟಲುಗಳ ಮೇಲೆ ನಿಲ್ಲುವ ಶ್ವೇತಸುಂದರಿ, ಹಗ್ಗದಲ್ಲಿ ಜೋತಾಡುವ ಜೋಕರ್‌… ಸರ್ಕಸ್‌ನ ಆಕರ್ಷಕ ಸಂಗತಿಗಳು ಒಂದೇ ಎರಡೇ? ಜನ, ಮನೆ, ಪ್ರಾಣಿ, ಸರಂಜಾಮುಗಳೊಂದಿಗೆ ಸಣ್ಣದೊಂದು ಊರೇ ಒಂದೆಡೆಯಿಂದ ಮತ್ತೂಂದೆಡೆಗೆ ಚಲಿಸುತ್ತಿರುತ್ತದೆ. 

ಈಗ ಸರ್ಕಸ್‌ ಸಂಭ್ರಮ ಮಸುಕಾಗುತ್ತ ಬಂದಿದೆ. ಹುಲಿ, ಸಿಂಹಗಳನ್ನು ಸಾಕಲು ಸರಕಾರದ ಅನುಮತಿ ಇಲ್ಲ. ಚಮತ್ಕಾರಗಳನ್ನು ಮಾಡಲು ಜನ ಸಿಗುವುದಿಲ್ಲ. ಕಲಾವಿದರಿಗೆ ಸಂಬಳ ಕೊಡಲು ಹಣ ಗಿಟ್ಟುವುದಿಲ್ಲ. ಜನ ಟೆಂಟಿನ ಬಳಿಗೆ ಸುಳಿಯುವುದಿಲ್ಲ. ಮನೆಯ ಟಿ. ವಿ.ಯಲ್ಲಿ, ಅಂಗೈಯ ಮೊಬೈಲ್‌ನಲ್ಲಿ ಎಂತೆಂಥದೋ ಚಮತ್ಕಾರ ಸಂಗತಿಗಳು ಬರುವಾಗ ಈ ಟೆಂಟಿನೊಳಗೆ ಒಂದೆರಡು ಗಂಟೆ ಕೂರುವ ಆವಶ್ಯಕತೆಯಾದರೂ ಏನು? 

ಸರ್ಕಸ್‌, ಸರ್ಕಸ್‌! ಗ್ರೇಟ್‌ ಇಂಡಿಯನ್‌ ಸರ್ಕಸ್‌! ಗೋಲದೊಳಗೆ ಮೋಟಾರ್‌ ಸೈಕಲ್‌, ಫ‌ುಟ್‌ಬಾಲ್‌ ಆಡೋ ಆನೆ, ಸೈಕಲ್‌ ಹತ್ತೋ ಗಿಳಿ, ನಗಾರಿ ಬಾರಿಸೋ ಗೋರಿಲ್ಲಾ ! ರಷ್ಯಾದ ಬಾಲೆಯರ ಬೆಡಗು ನೋಡಿ, ಬೆಂಕಿಯ ರಿಂಗ್‌ ಹಾರೋ ಸಿಂಹ ನೋಡಿ! ಡೆಲ್ಲಿ, ಬಾಂಬೇ, ಹೈದ್ರಾಬಾದ್‌ಗಳಲ್ಲಿ ಮೂರು ತಿಂಗಳು ನಡೆದ ಸರ್ಕಸ್‌, ನಿಮ್ಮೂರಿಗೆ ಬಂದಿದೆ, ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಬಾರದೇ ಹೋದಿರಿ ತಪ್ಪಿಸಿಕೊಂಡೀರಿ ಜೀವಮಾನದ ಅನುಭವ!” ಎಂದು ಝವಾರಿ ಹಿಂದಿಯಲ್ಲಿ ನಮ್ಮೂರ ಮಣ್ಣಿನ ರಸ್ತೆಗಳಲ್ಲಿ ಸೈಕಲ್ಲಿಗೆ ಸ್ಪೀಕರ್‌ ಕಟ್ಟಿ ಕೂಗಿಕೂಗಿ ಹೇಳುತ್ತ, ಕುತೂಹಲ ತಾಳದೆ ಬೀದಿಗೆ ಬಂದವರಿಗೆಲ್ಲ ಸರ್ಕಸ್ಸಿನ ವಿಶೇಷಗಳನ್ನು ವಿವರಿಸುವ ತೆಳು ಕಾಗದದ ಜಾಹೀರಾತು ಪತ್ರವನ್ನು ರಾಮನವಮಿಯ ಕೋಸಂಬ್ರಿಯಂತೆ ಹಂಚುತ್ತ ಹೋಗುತ್ತಿದ್ದ ಆ ದಿನಗಳು ನೆನಪಾಗುತ್ತವೆ. ಬೇಸಗೆ ಬಂದರೆ ಸಾಕು, ನಮ್ಮೂರ ಬಯಲಿನಲ್ಲಿ ಗ್ರೇಟ್‌ ಇಂಡಿಯನ್‌, ಬಾಂಬೆ, ಅಪೋಲೋ, ಜಂಬೋ ಹೆಸರಿನ ಸರ್ಕಸ್‌ ಕಂಪೆನಿಗಳು ಬಂದು ಬೀಡುಬಿಡುತ್ತಿದ್ದವು. ಒಂದೇ ಕಂಪೆನಿಯವರು ಬೇರೆ ಬೇರೆ ಹೆಸರುಗಳಲ್ಲಿ ಬಂದಿಳಿಯುತ್ತಾರೋ ಅಥವಾ ಅವೆಲ್ಲ ನಿಜವಾಗಿಯೂ ವಿಭಿನ್ನ ಕಂಪೆನಿಗಳ್ಳೋ ಗೊತ್ತಾಗುತ್ತಿರಲಿಲ್ಲ. ಆದರೆ, ಸರ್ಕಸ್‌ ನೋಡಲಿಕ್ಕೆಂದೇ ತಿಂಗಳೆಲ್ಲ ದುಡ್ಡು ಕೂಡಿಟ್ಟು ಅಪ್ಪ-ಅಮ್ಮನಿಗೆ ದಮ್ಮಯ್ಯ ಹಾಕಿ ಸರ್ಕಸ್‌ ಅಂಗಳಕ್ಕೆ ಬಿಜಯಂಗೈಯ್ಯುತ್ತಿದ್ದ ಆ ದಿನಗಳ ನೆನಪು ಮಾತ್ರ ಸದಾ ಹಸಿರು. 

ಸರ್ಕಸ್‌ ಕಂಪೆನಿ ಊರಿಗೆ ಬಂದರೆ ಅದು “ಟಾಕ್‌ ಆಫ್ ದ ಟೌನ್‌’ ಆಗುತ್ತಿತ್ತು. ಮನೆಗೆ ಬಂದುಹೋಗುವ ಅತಿಥಿಗಳ ಜೊತೆಗೂ ಅದೇ ಮಾತು. ಮದುವೆಮನೆಯಲ್ಲಿ ಊಟಕ್ಕೆ ಕೂತ ಅಭ್ಯಾಗತರದ್ದೂ ಅದೇ ಮಾತು. “”ಒಳ್ಳೇದುಂಟಂತೆ. ಮೂವತ್ತಕ್ಕೂ ಹೆಚ್ಚು ಪ್ರಾಣಿಗಳುಂಟಂತೆ. ನಮ್ಮ ನಾಗ್ರಾಜನದ್ದು ಒಂದೇ ವರಾತ. ಸರಿ, ಆ ಪ್ರಾಣಿಗಳನ್ನಾದ್ರೂ ನೋಡಿದ ಹಾಗೆ ಆಗುತ್ತದಲ್ಲಾ ಅಂತ ಹೋದೆವು ಮೊನ್ನೆ” ಎನ್ನುವಂಥ ಬಾಯಿಂದ ಬಾಯಿಗೆ ಹರಡುತ್ತಿದ್ದ ಪ್ರಚಾರದಿಂದಲೇ ಸರ್ಕಸ್‌ ಪ್ರದರ್ಶನಗಳು ಭರ್ಜರಿ ಹೌಸ್‌ಫ‌ುಲ್‌ ಶೋ ಕಾಣುತ್ತಿದ್ದವು. ಸರ್ಕಸ್‌ ನಡೆಯುತ್ತಿದ್ದ ಜಾಗಕ್ಕೆ ಹೋದಾಗ ಅದರ ಎತ್ತರದ ದೀರ್ಘ‌ವೃತ್ತಾಕಾರದ ಟೆಂಟ್‌ ಕಂಡು ಮೈನವಿರೇಳುತ್ತಿತ್ತು. ಸರ್ಕಸ್‌ ಅಂಗಳದಲ್ಲಿ ಕುದುರೆಗಳ ಸೆಗಣಿ ವಾಸನೆ ಜೋರಾಗಿ ಹೊಡೆಯುತ್ತಿದ್ದರೆ ನಮಗೆಲ್ಲ ಖುಷಿ; ಬಹಳ ಪ್ರಾಣಿಗಳಿದ್ದಾವೆ ಅಂತ! ಸಂಜೆಯ ಶೋಗೆ ಹೋದವರಿಗೆ, ಅಲ್ಲಿನ ವೃತ್ತಾಕಾರದ ಮರದ ಬೆಂಚುಗಳಲ್ಲಿ ಕೂತು ಸರ್ಕಸ್‌ ನೋಡುವಾಗ, ಕೈಕಾಲುಗಳಿಗೆ ಸೊಳ್ಳೆಗಳ ಕಡಿತವೂ ಉಚಿತ! ಬಹುಶಃ ಸರ್ಕಸ್‌ ನೋಡುನೋಡುತ್ತ ಎಲ್ಲರ ಮೈರೋಮಗಳೂ ನವಿರೆದ್ದು ಕೂರುತ್ತಿದ್ದುದರಿಂದ ಆರಾಮಾಗಿ ರಕ್ತ ಹೀರಬಹುದೆಂಬ ಸೂಚನೆ ಸಿಕ್ಕಿಯೇ ಸೊಳ್ಳೆಗಳು ಅಲ್ಲಿ ದೌಡಾಯಿಸುತ್ತಿದ್ದವೇನೋ! ಸೊಳ್ಳೆಗಳ ಕಡಿತ ಬಿಡಿ, ಆ ಸಮಯದಲ್ಲಿ ಪಕ್ಕದಲ್ಲೊಬ್ಬ ಕಿರಾತಕ ನಮ್ಮ ಪ್ಯಾಂಟಿನ ಜೇಬಿಗೆ ಕೈ ಹಾಕಿ ಪರ್ಸು ಎಗರಿಸುತ್ತಿದ್ದರೂ ನಾವು ಗಮನಿಸುತ್ತಿದ್ದೆವೋ ಇಲ್ಲವೋ!

ಸರ್ಕಸ್ಸಿನಲ್ಲಿ ಎಲ್ಲವೂ ಪೂರ್ವನಿರ್ಧರಿತ. ಸಿನೆಮಾದಲ್ಲಿ ಬಂದುಹೋಗುವ ದೃಶ್ಯಗಳಂತೆ ಎಲ್ಲವೂ ಕರಾರುವಾಕ್ಕು. ಹಾರುವ ಎತ್ತರದಲ್ಲಿ ಒಂದಿಂಚು ಅತ್ತಿತ್ತವಾದರೂ ಆಟಗಾರರು ಕೆಳಗೆ ಬಿದ್ದು ಮುಖಭಂಗ ಅನುಭವಿಸಬೇಕಾದ ಅನಿವಾರ್ಯತೆ. ಕಬ್ಬಿಣದ ಗೋಲಾಕಾರದ ರಚನೆಯೊಳಗೆ “ಡುರ್‌ಡುರ್‌’ ಎನ್ನುತ್ತ ಐದಾರು ನಿಮಿಷ ಕಿವಿಗಡಚಿಕ್ಕುವ ಸದ್ದಿನೊಂದಿಗೆ ಬೈಕ್‌ ಸವಾರ ಸುತ್ತಾಡುವುದನ್ನು ನೋಡುತ್ತಿದ್ದರೆ ನಾವೂ ಅಂಥಾದ್ದೊಂದು ಸಾಹಸ ಮಾಡಿ ಚಪ್ಪಾಳೆ ಗಿಟ್ಟಿಸಬೇಕಲ್ಲ ಎಂಬ ಆಸೆ ಮನಸ್ಸಿನೊಳಗೆ ಮೊಳಕೆಯೊಡೆಯುತ್ತಿತ್ತು. ಇನ್ನು ಸರ್ಕಸ್‌ ವೇದಿಕೆಯಲ್ಲಿ ಪುಟ್ಟಪುಟ್ಟ ಚಡ್ಡಿ ತೊಟ್ಟ ಬಿಳಿ ತೊಗಲಿನ ವಿದೇಶೀ ಕನ್ಯೆಯರು ಬಂದರೋ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋದ ದೊಡ್ಡವರಿಗೆಲ್ಲ ಒಂದು ಬಗೆಯ ಮುಜುಗರ. ಬಾಯಿ ಕಳೆದು ನೋಡುವಂತೆಯೂ ಇಲ್ಲ, ನೋಡದಿರುವಂತೆಯೂ ಇಲ್ಲ ಎಂಬ ಸಂದಿಗ್ಧ! “”ಅಪ್ಪಾ , ಅವರ್ಯಾಕೆ ಹಾಗಿದ್ದಾರೆ! ಅದ್ಯಾಕೆ ಅಷ್ಟೊಂದು ಬೆಳ್ಳಗಿದ್ದಾರೆ! ಅವರ ಮೈಯಲ್ಲಿ ಮೂಳೆ ಇಲ್ಲವಾ?” ಎಂದೆಲ್ಲ ಮಕ್ಕಳು ಪೆದ್ದು ಪ್ರಶ್ನೆಗಳನ್ನು ಕೇಳಿದರೆ ದೊಡ್ಡವರು, “”ಅವರೆಲ್ಲ ಫಾರಿನ್‌ನಿಂದ ಬಂದೋರು, ಫಾರಿನ್‌ನವರೆಲ್ಲ ಹಾಗೇ ಇರೋದು” ಎನ್ನುತ್ತಿದ್ದರು. ಅವರ್ಯಾರೂ ಮಾತಾಡುತ್ತಿರಲಿಲ್ಲ; ಆದರೆ ತಮ್ಮ ಬಳುಕುವ ದೇಹದ ಮೂಲಕವೇ ನಮ್ಮನ್ನು ಮೂಕವಿಸ್ಮಿತಗೊಳಿಸುತ್ತಿದ್ದರು. ಅವರ ಗಂಭೀರ ಪ್ರದರ್ಶನದ ನಡುನಡುವೆ ಜೋಕರೊಬ್ಬ ; ಕೆಲವೊಮ್ಮೆ ಇಬ್ಬರು ಬಂದು ಜನರನ್ನು ನಗೆಗಡಲಲ್ಲಿ ಮುಳುಗಿಸುತ್ತಿದ್ದರು. ಸಾಹಸಮಯ ಪ್ರದರ್ಶನ ನೋಡುತ್ತ ಉಸಿರು ನಿಲ್ಲಿಸಿದ್ದ ಎಷ್ಟೋ ಜನ ಮತ್ತೆ ಉಸಿರಾಡಲು ಶುರು ಮಾಡುತ್ತಿದ್ದದ್ದೇ ಈ ಜೋಕರ್‌ಗಳು ಬಂದಾಗ! ಅವರ ಜೊತೆಗೆ ಕೆಲವೊಮ್ಮೆ ಮೂರು-ನಾಲ್ಕಡಿಯ ಕುಳ್ಳಪ್ಪುಗಳು ಬೇರೆ! “”ಇಂಥೋರನ್ನೆಲ್ಲ ಎಲ್ಲೆಲ್ಲಿಂದ ಹುಡುಕಿ ತರುತ್ತಾರಪ್ಪ”$ಎಂದು ಪ್ರೇಕ್ಷಕರು ಮೂಗ ಮೇಲೆ ಬೆರಳಿಡುತ್ತಿದ್ದರು.

ಕೆಲವು ಕವಿತೆಗಳು ನಮ್ಮ ವಿವಿಧ ಪ್ರಾಯಗಳಲ್ಲಿ ವಿವಿಧ ಅರ್ಥಗಳನ್ನು ಹೊಳೆಯಿಸುತ್ತವೆ ಎನ್ನುತ್ತಾರೆ. ಯೌವನದಲ್ಲಿ ಓದಿದಾಗ ರೋಮ್ಯಾಂಟಿಕ್‌ ಅನ್ನಿಸಿದ ಕವಿತೆಯೇ ವಾರ್ಧಕ್ಯದಲ್ಲಿ ಓದಿದಾಗ ತಣ್ಣಗಿನ ವಿಷಾದ ಭಾವವನ್ನು ನಮ್ಮಲ್ಲಿ ಹುಟ್ಟಿಸಬಹುದು. ಬಹುಶಃ ಸರ್ಕಸ್ಸಿಗೂ ಅಂಥ ವಿಶೇಷ ಗುಣ ಇದೆಯೋ ಏನೋ. ಬಹಳ ಚಿಕ್ಕವನಿದ್ದಾಗ, ಅಂದರೆ ಹತ್ತರ ಹರೆಯದಲ್ಲಿ ನೋಡಿದ್ದ ಸರ್ಕಸ್ಸಿನಲ್ಲಿ ನನಗೆ ಕಂಡಿದ್ದು ಕೇವಲ ವಿಸ್ಮಯವೊಂದೇ. ಅದೊಂದು ಅದ್ಭುತ, ಮಾಂತ್ರಿಕ ಜಗತ್ತು. ಕಣ್ಣುಕೋರೈಸುವ ಬೆಳಕಿನಲ್ಲಿ ಕಳೆದುಹೋಗುವಂಥ ಅಚ್ಚರಿಗಳನ್ನು ಮೊಗೆದುಕೊಡುವ, ನಮ್ಮನ್ನು ಕನಸಿನ ಮೋಡದಲ್ಲಿ ತೇಲಾಡಿಸುವ ಭ್ರಮಾಲೋಕ ಅದು. ಆದರೆ, ಅಲ್ಲಿಂದಾಚೆ ಐದಾರು ವರ್ಷಗಳ ನಂತರ ಅದೇ ಸರ್ಕಸ್‌ ಪ್ರದರ್ಶನವನ್ನು ದುಡ್ಡು ತೆತ್ತು ಕೂತು ನೋಡಿದಾಗ ಹಿಂದಿನ ವಿಸ್ಮಯ, ಆಶ್ಚರ್ಯಗಳು ಇರಲಿಲ್ಲ. ಸರ್ಕಸ್‌ ಮಾಡಿ ತೋರಿಸುತ್ತಿದ್ದ ಪ್ರಾಣಿಗಳ ಕಣ್ಣಲ್ಲಿ ಸಣ್ಣದೊಂದು ನೋವಿನ ಛಾಯೆ ಕಾಣಿಸುತ್ತಿತ್ತು. ಅವುಗಳ ಹೆಜ್ಜೆಗಳಲ್ಲಿ ಆಯಾಸ, ಸುಸ್ತು ಕಾಣಿಸುತ್ತಿತ್ತು. ಸಾವಿನ ಬಾವಿಯಲ್ಲಿ ಮೋಟಾರ್‌ ಸೈಕಲ್ಲನ್ನು ಗರಗರ ತಿರುಗಿಸಿ ಹೊರಬರುತ್ತಿದ್ದ ಯುವಕನ ನಗುಮುಖದಲ್ಲೂ ಬೆವರ ಹನಿಗಳು ಕಾಣಿಸುತ್ತಿದ್ದವು. ರಷ್ಯನ್‌ ಬಾಲೆಯರ ಬಿಳಿ ಹೊಕ್ಕಳು ಕಂಡಾಗ ಕಸಿವಿಸಿಯಾಗುತ್ತಿತ್ತು. ಜೋಕರ್‌ನ ಜೋಕುಗಳು ಯಾಕೋ ತುಸು ಯಾಂತ್ರಿಕವಾಗಿಯೂ ಇವೆಯಲ್ಲ ಅನ್ನಿಸುತ್ತಿತ್ತು. ಈ ಪ್ರದರ್ಶನ, ಈ ನಟನೆ, ಈ ನಗೆಹನಿ ಅವನಿಗೆ ಅದೆಷ್ಟು ಸಾವಿರದ ಸಲಧ್ದೋ ಏನೋ; ಪಾಪ ಹೊಟ್ಟೆಪಾಡಿಗಾಗಿ ಹಾಡಿದ್ದೇ ಹಾಡೋ ದಾಸಯ್ಯನಂತೆ ಮತ್ತೆ ನಮ್ಮೆದುರು ಬಿನ್ನವಿಸಿಕೊಂಡು ನಮ್ಮನ್ನೆಲ್ಲ ನಗಿಸುತ್ತಿದ್ದಾನೆ ಎನ್ನಿಸಿ ಬೇಸರ ಮೂಡುತ್ತಿತ್ತು. ನಾನು ಬೆಳೆದೆನೋ, ಸರ್ಕಸ್ಸೇ ಸೊರಗಿತೋ ತಿಳಿಯಲಿಲ್ಲ.

ಕಳೆದ ವರ್ಷ ನಮ್ಮ ಬೆಂಗಳೂರಿಗೂ ಒಂದು ಸರ್ಕಸ್‌ ಬಂದಿತ್ತು. ಅಂಥಾದ್ದೊಂದು ಬಂದಿದೆ ಎಂದು ಗೊತ್ತಾದದ್ದೇ ಪತ್ರಿಕೆಯಲ್ಲಿ ಪುಟ್ಟದೊಂದು ಜಾಹೀರಾತು ಬಂದಾಗ. ಹಳೆಯ ನೆನಪುಗಳಲ್ಲಿ ಅದೆಷ್ಟನ್ನು ಇದು ಚಿಲುಮೆ ಎಬ್ಬಿಸುತ್ತದೋ ನೋಡೋಣ ಎಂದು ಅರ್ಧ ಕುತೂಹಲ, ಅರ್ಧ ಸಂಶಯದಿಂದ ಆ ಪ್ರದರ್ಶನಕ್ಕೆ ಹೋದೆ. ಟಿಕೆಟಿನ ದರ 300, 500 ರೂಪಾಯಿಗಳಿದ್ದದ್ದು ಕಂಡು ಹೌಹಾರಿದರೂ, ಪರವಾಗಿಲ್ಲ, ಅವರೂ ಬದುಕಬೇಕಲ್ಲ ಎಂದು ಟಿಕೇಟು ಕೊಂಡು ಒಳಹೋಗಿ ಕೂತೆವು. ಸಣ್ಣವನಿದ್ದಾಗ ದೊಡ್ಡದಾಗಿ ಇಂದ್ರನಗರಿಯಂತೆ ಕಾಣಿಸುತ್ತಿದ್ದ ಸರ್ಕಸ್‌ ವೇದಿಕೆ ಈಗ ಉಪ್ಪಿನಲ್ಲಿಟ್ಟ ಮಿಡಿಯಂತೆ ಸುರುಟಿಹೋಗಿತ್ತು. ಬಾಲ್ಯದಲ್ಲಿ ನೂಕುನುಗ್ಗಲಿನಲ್ಲಿ ಸಿಕ್ಕಸಿಕ್ಕವರನ್ನು ತಳ್ಳಾಡಿಕೊಂಡು ಹೇಗೋ ಬೆಂಚಿನಲ್ಲಿ ಪೃಷ್ಟ ಊರಲು ಜಾಗ ಗಿಟ್ಟಿಸಿಕೊಂಡು ಜಾತ್ರೆಯಂಥ ಗೌಜಿನ ವಾತಾವರಣದಲ್ಲಿ ನೋಡಿದ್ದ ಸರ್ಕಸ್ಸಿಗೂ, ಸಂಡೇ ಆದರೂ ಅರ್ಧವೂ ತುಂಬದ ಪ್ರೇಕ್ಷಕಾಂಗಣದಲ್ಲಿ ಆರಾಮಾಗಿ ಕೂತು ನೋಡುತ್ತಿದ್ದ ಇಂದಿನ ಸರ್ಕಸ್ಸಿಗೂ ಅಜಗಜಾಂತರ. ಪ್ರದರ್ಶನ ಕೊಡುತ್ತಿದ್ದ ಕಲಾವಿದರೆಲ್ಲ ಅಗತ್ಯಕ್ಕೆ ಮೀರಿದ ಮೇಕಪ್‌ ಬಳಿದುಕೊಂಡಿದ್ದರು. ಯಾರ ಮೈಯೂ ತುಂಬಿಕೊಂಡಿರಲಿಲ್ಲ. ಕೆಲವರ ಮೈಯೋ ಸಡಿಲ ಪೋಷಾಕಿನಲ್ಲಿ ಅಸ್ಥಿಪಂಜರಗಳಂತೆ ತಳಬಳ ಆಡುತ್ತಿದ್ದವು. ಆದರೂ ಅವರೆಲ್ಲ ತಮ್ಮ ಸಾಮರ್ಥ್ಯವನ್ನು ಪೂರ್ತಿ ಬಸಿದು ಸಾಹಸ ಪ್ರದರ್ಶಿಸಿದರು. ಜೋಕರ್‌, ಮೂವತ್ತು ವರ್ಷಗಳ ಹಿಂದೆ ಮಾಡಿದ್ದ ಜೋಕುಗಳನ್ನೇ ಮತ್ತೆ ಮಾಡಿ, ನಮ್ಮನ್ನೆಲ್ಲ ನಗಿಸಿದ. ದೀಪಾವಳಿಯ ಮಾಲೆಪಟಾಕಿಯಂತೆ ಬಿಟ್ಟೂಬಿಡದೆ ಚಪ್ಪಾಳೆ ಹೊಡೆಯುತ್ತ ನೋಡಿದ್ದ ಸರ್ಕಸ್‌ ಎಲ್ಲಿ, ಹೊಡೀರಿ ಹೊಡೀರಿ ಎಂದು ಒತ್ತಾಯಿಸಿ ಬೀಳಿಸಿಕೊಂಡ ನಾಲ್ಕು ಚಪ್ಪಾಳೆಯ ಈ ಸರ್ಕಸ್‌ ಎಲ್ಲಿ ! ಇನ್ನು , ಸರಕಾರ ನಿಷೇಧ ಹೇರಿದ್ದರಿಂದ ಪ್ರಾಣಿಗಳೇ ಇರಲಿಲ್ಲ! ಸರ್ಕಸ್‌ ಮುಗಿದಾಗ, ಪ್ರೇಕ್ಷಕರು ಯಾವ ರೋಮಾಂಚನವೂ ಇಲ್ಲದೆ, ಕನಿಷ್ಠ ಸೀಟಿಯನ್ನೂ ಹೊಡೆಯದೆ ಸೀಟಿನಿಂದ ಮೌನವಾಗಿ ಎದ್ದುಹೋದರು. ವೇದಿಕೆಯಲ್ಲಿ ಚಪ್ಪಾಳೆಗಾಗಿ ಹಸಿದು ನಿಂತಿದ್ದ ಕಲಾವಿದನಂತೆ ನಾನು ಹೊಟ್ಟೆಯಲ್ಲಿ ವಿಚಿತ್ರ ತಳಮಳ ಅನುಭವಿಸಿದೆ. 

ಚಿಕ್ಕಂದಿನಲ್ಲಿ ನಾವು ನೋಡುತ್ತಿದ್ದ ಫಾರಿನ್‌ ಕಲಾವಿದರು ನಿಜಕ್ಕೂ ವಿದೇಶಿಯರಲ್ಲ; ಅವರೆಲ್ಲ ಇಲ್ಲಿಯವರೇ. ಅಸ್ಸಾಂ, ಮಣಿಪುರ, ಪಶ್ಚಿಮ ಬಂಗಾಳದಂಥ ರಾಜ್ಯಗಳಿಂದ; ನೇಪಾಳ, ಬಾಂಗ್ಲಾ ದೇಶಗಳಿಂದ ಬಂದು ಸರ್ಕಸ್‌ ಕಂಪೆನಿ ಸೇರುವ ಬಡವರು. ಈಗಿನ ಸರ್ಕಸ್ಸುಗಳಲ್ಲಿ ನೂರಕ್ಕೆ 60 ಮಂದಿ ಮಹಿಳೆಯರೇ ತುಂಬಿದ್ದಾರೆ. ತಮ್ಮ ಪ್ರದರ್ಶನಕ್ಕೆ ಸರಿಯಾದ ಕಮಾಯಿ ಗಿಟ್ಟಿಸಬೇಕಾದರೆ ತಮ್ಮ ಪರ್‌ಫಾರ್ಮೆನ್ಸ್‌ ಅನ್ನು ಒಂದೇ ಎತ್ತರದಲ್ಲಿ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಅವರು ಬಿದ್ದಿದ್ದಾರೆ. ದಿನಕ್ಕೆ ನಾಲ್ಕು ಗಂಟೆಗಳ ಕಠಿಣ ತರಬೇತಿ ಇಂದೂ ಮುಂದುವರಿದಿದೆ. ಆದರೆ, ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮೂವತ್ತು ವರ್ಷಗಳ ಹಿಂದೆ ದಿನಕ್ಕೆ ನಾಲ್ಕು ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದ್ದ ಕಂಪೆನಿಗಳಲ್ಲಿ ಇಂದು ವಾರಾಂತ್ಯದಲ್ಲಿ, ಬೇಸಗೆ ರಜೆಯಲ್ಲಿ ಕೂಡ ತುಂಬಿದ ಮನೆಯ ಪ್ರದರ್ಶನಗಳು ಸಾಧ್ಯವಾಗುತ್ತಿಲ್ಲ. ಮೊದಲೆಲ್ಲ ಭರ್ತಿ ಪುಟದ ಜಾಹೀರಾತು ಕೊಡುತ್ತಿದ್ದವರು ಇಂದು ಸಣ್ಣ ಕಾಲಮ್‌ ಜಾಹೀರಾತುಗಳಿಗೆ ಸೀಮಿತರಾಗಬೇಕಿದೆ. ನಲವತ್ತು ವರ್ಷಗಳ ಹಿಂದೆ ಭಾರತದಲ್ಲಿ 20,000 ಸರ್ಕಸ್‌ ಕಲಾವಿದರಿದ್ದರು. ಸರ್ಕಸ್‌ನವರದ್ದೇ ರಾಷ್ಟ್ರೀಯ ಸಂಘವೂ ಇತ್ತು! ಇಂದು ಹೇಳಿಕೇಳಿ ಇಡೀ ದೇಶದಲ್ಲಿ 300 ಕಲಾವಿದರಿದ್ದರೆ ಅದೇ ಹೆಚ್ಚೇನೋ! ಪ್ರಾಣಿಗಳನ್ನು ಬಳಸುವಂತಿಲ್ಲ ಎಂದು ಕಟ್ಟುನಿಟ್ಟಾದ ಮೇಲಂತೂ ಹಲವು ಕಂಪೆನಿಗಳವರು ತಮ್ಮ ಟೆಂಟಿನ ಕೊನೆಯ ಕಂಬವನ್ನು ಕೂಡ ಮಾರಿಕೊಂಡು ದೇಶಾಂತರ ಹೋಗಿಬಿಟ್ಟಿದ್ದಾರೆ. 

ಹಿಂದೆಲ್ಲ ಸರ್ಕಸ್‌ ಕಂಪೆನಿಗಳಲ್ಲಿ ಕಲಾವಿದರಾಗಿ ದುಡಿಯುತ್ತಿದ್ದವರು ತಮ್ಮತಮ್ಮಲ್ಲೇ ಮದುವೆಯಾಗುತ್ತಿದ್ದರು. ಹುಟ್ಟಿದ ಮಕ್ಕಳು ಅಲ್ಲೇ ಟೆಂಟಿನ ನಾಲ್ಕು ಗೋಡೆಗಳನ್ನೇ ಜಗತ್ತೆಂದು ಭ್ರಮಿಸುತ್ತ ಬೆಳೆಯುತ್ತಿದ್ದವು. ದೊಡ್ಡವರಾಗಿ ತಾವೂ ಅದೇ ಸರ್ಕಸ್‌ ಕಂಪೆನಿಗೆ ಕಲಾವಿದರಾಗಿ ಸಲ್ಲುತ್ತಿದ್ದರು. ಆದರೀಗ? ಅಳಿವಿನಂಚಿನ ತಳಿಯಾದ ಕಲಾವಿದರು ತಮ್ಮ ಮಕ್ಕಳನ್ನು ಅದೇ ಪರಿಸರದಲ್ಲಿ ಬೆಳೆಸಿಯಾರೆ? ಬೆಳೆಸಿದರೂ ಆ ಮಕ್ಕಳು ದೊಡ್ಡವರಾಗುವ ಕಾಲಕ್ಕೆ ಈ ದೇಶದಲ್ಲಿ ಸರ್ಕಸ್‌ ಅಸ್ತಿತ್ವದಲ್ಲಿರಬಹುದೆ? ದಿನಕ್ಕೆ ನಾಲ್ಕು ಟ್ಯಾಲೆಂಟ್‌ ಕಾರ್ಯಕ್ರಮಗಳು ಟಿವಿಯಲ್ಲೇ ಬರುತ್ತಿರುವಾಗ, ಹಳೇ ಕಾಲದ ಪಳೆಯುಳಿಕೆಯಂತೆ ಕಾಣುವ ಸರ್ಕಸ್‌ ಕಂಪೆನಿಗಳ ಮಾಸಿದ ಟೆಂಟುಗಳಿಗೆ ಹೋಗುವವರು ಯಾರು? ಇತ್ತ, ಸರ್ಕಸ್‌ ಕಂಪೆನಿಯನ್ನು ನಡೆಸುತ್ತಿರುವ ಮಾಲಿಕರ ಬವಣೆಗಳ್ಳೋ ನೂರೆಂಟು. ಒಂದೂರಿಂದ ಇನ್ನೊಂದಕ್ಕೆ ತಮ್ಮ ಎಲ್ಲ ಸರಕು-ಸರಂಜಾಮುಗಳನ್ನು ಹೇರಿ ಸಾಗಿಸುವುದೇ ಈಗ ಅವರಿಗೆ ದೊಡ್ಡ ಸಾಹಸ. ವ್ಯಾನುಗಳಿಗೆ ವಿಪರೀತ ಬಾಡಿಗೆ.

ಹೋದಲ್ಲೆಲ್ಲೂ ವಿಶಾಲ ಮೈದಾನಗಳು ಕಡಿಮೆ ಬಾಡಿಗೆಗೆ ಸಿಗುವುದಿಲ್ಲ. ದುಬಾರಿ ಬೆಲೆ ತೆತ್ತು ಡೇರೆ ಬಿಚ್ಚಿದ ಮೇಲೆ ದುಬಾರಿ ಟಿಕೇಟು ಇಡದಿದ್ದರೆ ಮಾಲಿಕನಿಗೇನೂ ಗಿಟ್ಟುವುದಿಲ್ಲ. ಅವನಿಗೇ ಗಿಟ್ಟಲಿಲ್ಲವೆಂದ ಮೇಲೆ ಕಲಾವಿದರ ಹೊಟ್ಟೆಗೆ ರೊಟ್ಟಿಯಾದರೂ ಹೇಗೆ ಬೀಳಬೇಕು? ಸರಕಾರದ ಆದೇಶಕ್ಕೆ ತಲೆಬಾಗಿ ಆನೆಗಳನ್ನು ಕಾಡಿಗೋ ಮೃಗಾಲಯಕ್ಕೋ ಸಾಗಿಸಿದ ಮೇಲೆ ಮಾಲಿಕನಿಗೆ ತನ್ನ ಕಂಪೆನಿಯೇ ದೊಡ್ಡ ಬಿಳಿಯಾನೆಯಾಗಿಬಿಟ್ಟಿದೆ. ದಿನಕ್ಕೆ 5ರಿಂದ 25 ಸಾವಿರ ರೂಪಾಯಿ ಡಿಮ್ಯಾಂಡ್‌ ಮಾಡುವ ಬಿಳಿತೊಗಲಿನ ರಷ್ಯನ್‌ ಚೆಲುವೆಯರನ್ನು ಅವನಾದರೂ ಹೇಗೆ ತಂದು ಸಂಭಾಳಿಸಿಯಾನು? ಅದೂ ಅಲ್ಲದೆ ಅವರ ವೀಸಾ ಪರಿಷ್ಕರಣೆಯ ನೂರೆಂಟು ರೇಜಿಗೆಗಳು ಬೇರೆ! ಒಟ್ಟಲ್ಲಿ, “ಸರ್ಕಸ್‌ ಕಂಪೆನಿ ನಡೆಸುವುದು ಎಲ್ಲಕ್ಕಿಂತ ದೊಡ್ಡ ಸರ್ಕಸ್‌ ಆಗಿಬಿಟ್ಟಿದೆ ಸಾರ್‌’ ಎಂದ ಅಪೋಲೋ ಸರ್ಕಸ್ಸಿನ ಯಜಮಾನ. 70ರ ದಶಕದಲ್ಲಿ ಅವನಿಗೆ ಗರಿಗರಿಯಾದ ಹುರಿಮೀಸೆ ಇತ್ತಂತೆ. ಈಗ ಅದು ಬಿಳಿಚಿ ಜೋತುಬಿದ್ದಿದೆ. 

ಸರ್ಕಸ್‌ ಎಂಬ ವರ್ಣಮಯ ಫ್ಯಾಂಟಸಿ ಪ್ರಪಂಚವನ್ನು ಈಗಿನ ಪೀಳಿಗೆಯ ಪುಟಾಣಿಗಳು ಮಿಸ್‌ ಮಾಡ್ಕೊಳ್ಳುತ್ತಾರಲ್ಲ ಎಂಬ ನನ್ನ ಎದೆಯ ನೋವೂ ಚಪ್ಪಾಳೆಗಾಗಿ ಹಂಬಲಿಸುತ್ತ ನಿಂತ ಜೋಕರ್‌ನ ನಿಟ್ಟುಸಿರಿನಷ್ಟೇ ದೊಡ್ಡದು.

– ರೋಹಿತ್‌

ಟಾಪ್ ನ್ಯೂಸ್

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.