ನೆರೆಕರೆಯ ಸಹಯಾತ್ರಿಗಳು


Team Udayavani, Dec 15, 2019, 5:01 AM IST

zx-4

ಆಚೀಚೆ ಕಣ್ಣು ಹಾಯಿಸಿದರೆ ಅದಮ್ಯ ಚೈತನ್ಯದ ಈ ಮುಂಬಯಿ ಮಹಾನಗರದಲ್ಲಿ ತರತರದ ಜೀವನಶೈಲಿಗಳ ಜನರನ್ನು ಕಾಣಬಹುದು. ಬದುಕಿಗೊಂದು ಆವರಣವನ್ನು ಕಲ್ಪಿಸಿ, ನಮ್ಮನ್ನು ಸುತ್ತುಮುತ್ತಣ ಜಗತ್ತಿನ ಭಾಗವನ್ನಾಗಿ ಮಾಡುವ ಈ ನೆರೆಹೊರೆಯವರೆಂದರೆ- ಆತ್ಮೀಯರು ಮತ್ತು ಅಪರಿಚಿತರ ನಡುವಿನ ಜಾಗವನ್ನು ಆಕ್ರಮಿಸಿರುವವರು; ಬದುಕಿನ ಹಾದಿಯಲ್ಲಿ ನಮ್ಮೊಂದಿಗಿದ್ದಾರೆ ಎಂಬ ಮಾನಸಿಕ ನೆಲೆಯ ಸಮಾಧಾನದ ಬೆಂಬಲ ಕೊಡುವವರು!

ನಮ್ಮ ಒತ್ತಿನ ರಸ್ತೆಯಲ್ಲಿ ಬೆಳಗಿನ ಹೊತ್ತು ಕಿಟಿಕಿಯೊಂದರ ಮುಂದೆ ಜನರು ಸಾಲುಗಟ್ಟಿ ನಿಲ್ಲುವುದನ್ನು ನೋಡಬಹುದು. ಕಿಟಿಕಿಯ ಹಿಂದೆ ಪೂರಿಬಾಜಿ ಮುನ್ನಿಬಾಯಿ ತನ್ನ ಒಂದು ಕೋಣೆಯ ಮನೆಯ ಅಡುಗೆ ಚಿಟ್ಟೆಯ ಮೇಲೆ ಚಟ್ಟಮುಟ್ಟ ಹಾಕಿ ಕುಳಿತು, ಪಂಪು ಸ್ಟವ್‌ಗೆ ಗಾಳಿ ಹಾಕುತ್ತಿರುತ್ತಾಳೆ. ತೆಳ್ಳಗಿನ ದೇಹ, ದೊಡ್ಡ ಉರುಟಿನ ಕುಂಕುಮ, ನೆತ್ತಿಯ ಮೇಲೆ ನಿಲ್ಲಿಸಿಟ್ಟ ಪುಟ್ಟ ಅಂಬಡೆ; ಸೀರೆಯ ಸೆರಗನ್ನು ಸೊಂಟಕ್ಕೆ ಬಿಗಿದು, ಅವಡುಗಚ್ಚಿ ಗಾಳಿ ಹಾಕುತ್ತಿರುವಾಗ, ಅವಳ ಕಣ್ಣಲ್ಲಿ ಅರಳುವ ಆತ್ಮವಿಶ್ವಾಸದ ಬೆಳಕು ನಸುಕತ್ತಲಿನ ಆ ರಸ್ತೆಯುದ್ದಕ್ಕೂ ಚೆಲ್ಲಿದಂತೆ ಭಾಸವಾಗುತ್ತದೆ. ದೊಡ್ಡ ಡಬರಿಯಲ್ಲಿ ಬಟಾಟೆ ಪಲ್ಯ, ಪರಾತದಲ್ಲಿ ಪೂರಿ ಹಿಟ್ಟಿನ ಉಂಡೆಗಳು, ಪಕ್ಕದಲ್ಲೇ ಲಟ್ಟಣಿಗೆ-ಮಣೆ.ಮುನ್ನಿಬಾಯಿಯ ಬಿಸಿಬಿಸಿ ಪೂರಿಗಾಗಿ ಜನ ಸಾಲುಗಟ್ಟಲು ಸುರುಮಾಡಿದರೆಂದರೆ, ಮತ್ತೆರಡು ಗಂಟೆ ಅವಳ ಕೈಗಳಿಗೆ ಬಿಡುವಿಲ್ಲ. ಸಾಲಿನುದ್ದಕ್ಕೂ ಇರುವ ಅಷ್ಟೂ ಮಂದಿಯ ದೃಷ್ಟಿ , ಕುದಿಯುವ ಎಣ್ಣೆಯಲ್ಲಿ ಸರ್ರನೆ ಉಬ್ಬಿ ಮೇಲೆ ಬರುವ ಪೂರಿಗಳ ಮೇಲೇ ನೆಟ್ಟಿರುತ್ತದಾದರೆ, ಮುನ್ನಿಬಾಯಿಯ ದೃಷ್ಟಿ ನಾಲ್ಕು ಸುತ್ತಲೂ. ಸಮವಸ್ತ್ರ ಧರಿಸಿ ಶಾಲೆಗೆ ತಯಾರಾಗುತ್ತಿರುವ ಮಕ್ಕಳನ್ನು ಗದರುತ್ತ, ಕಹಿಬೇವಿನ ದಂಟನ್ನು ಬಾಯಲ್ಲಿಟ್ಟುಕೊಂಡು ಮನೆಮೆಟ್ಟಲಲ್ಲಿ ಕುಳಿತ ಗಂಡನಿಗೆ ಆದೇಶಗಳನ್ನೀಯುತ್ತ, ಗಿರಾಕಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ, ಪೂರಿ ಲಟ್ಟಿಸಿ, ಕಾಯಿಸಿ, ಪೇಪರಿನಲ್ಲಿ ಕಟ್ಟಿಕೊಡುವುದರಿಂದ ಹಿಡಿದು, ಹಣ ಲೆಕ್ಕಮಾಡಿ, ಚಿಲ್ಲರೆ ವಾಪಸ್ಸು ಕೊಡುವುದರವರೆಗೆ ಅವಳ ಕೆಲಸ ಸಾಗಿರುತ್ತದೆ. ಹಳೆಯ ವೃತ್ತಪತ್ರಿಕೆಯಲ್ಲಿ ಕಟ್ಟಿಕೊಡುತ್ತಾಳೆಂದೋ, ಅದೇ ಅದೇ ಎಣ್ಣೆಯಲ್ಲಿ ಕರಿಯುತ್ತಾಳೆಂದೋ ಮೂಗುಮುರಿದರೂ, ಅವಳ ಪೂರಿಬಾಜಿಯ ರುಚಿ ಒಮ್ಮೆ ನೋಡಿದಿರೆಂದರೆ ಪುನಃ ಪುನಃ ಬೇಕೆನಿಸದೆ ಇರದು.

ಇಗರ್ಜಿಯ ಹೊರಗೆ ಹೂ ಮಾರುವ ಹುಡುಗಿ ಫ್ಲೇವಿಯನ್ನು ಹುಡುಗಿಯೆಂದರೂ ನಡೆದೀತು. ಹೆಂಗಸೆಂದರೂ ಅಡ್ಡಿಯಿಲ್ಲ, ಮುದುಕಿ ಎಂದರೆ ಅದೂ ಹೌದೇನೋ! ಜೀವಮಾನವಿಡೀ ಹೂಕಟ್ಟುತ್ತ ಕುಳಿತಂತಹ ಭಂಗಿ. ಹೂ ಹರಡಿದ ಬಿದಿರಿನ ಮೊರವನ್ನು ಮಡಿಲಲ್ಲಿ ಇಟ್ಟುಕೊಂಡ ಅವಳು ಸರಸರನೆ ಹೂ ನೇಯುತ್ತ, ಬದಿಯಲ್ಲಿ ಕುಳಿತವರೊಡನೆ ಪರಪರನೆ ಹರಟುತ್ತ, ನಡುನಡುವೆ ಇಗರ್ಜಿಗೆ ಹೋಗುವವರನ್ನೂ, ರಸ್ತೆಯಲ್ಲಿ ಹಾಯುವವರನ್ನೂ ಹೂ ಖರೀದಿಸುವಂತೆ ಒತ್ತಾಯಿಸುತ್ತ, ಪ್ರತಿ ಮಾಲೆ ಕಟ್ಟಿ ಮುಗಿಯುತ್ತಲೂ ಹಣೆ-ಎದೆ-ಭುಜಗಳನ್ನು ಮುಟ್ಟಿ ಶಿಲುಬೆಯ ಗುರುತನ್ನು ಮಾಡುತ್ತ, ಕಟ್ಟಿದ ಮಾಲೆಗಳನ್ನು ಎದುರು ಹಾಸಿದ ವೃತ್ತಪತ್ರಿಕೆಯ ಹಾಳೆಯ ಮೇಲೆ ಸಾಲಾಗಿ ಜೋಡಿಸಿಡುತ್ತಿರುತ್ತಾಳೆ. ಹತ್ತಿರದಲ್ಲೇ ಅತ್ತಿತ್ತ ತಿರುಗುವ ಪುಗ್ಗೆ ಮಾರುವ ಹುಡುಗನಲ್ಲಿ, “ಮುಝೆ ಏಕ್‌ ದೇದೋರೆ’ ಎಂದು ಚಿಕ್ಕ ಮಗುವಿನಂತೆ ಅಂಗಲಾಚುವ ಅವಳೇ, ಮೇಣದ ಬತ್ತಿ ಮಾರುವಾಕೆ ಎಲ್ಲಿ ತನ್ನ ಜಾಗವನ್ನು ಆಕ್ರಮಿಸುತ್ತಾಳ್ಳೋ ಎಂಬ ಅಂಜಿಕೆಯಲ್ಲಿ, ತನ್ನ ಹಕ್ಕಿನ ರಕ್ಷಣೆಗಾಗಿ ಅನುಭವಿ ಹೆಂಗಸಿನಂತೆ ವಾಚಾಮಗೋಚರವಾಗಿ ಬೈದಾಳು.ಇನ್ನು, ಬ್ಯಾಂಡ್‌ಸ್ಟಾಂಡಿನತ್ತ ಧಾವಿಸುವ ಆಧುನಿಕ ಯುವಜೋಡಿಗಳನ್ನೋ, ಭರ್ರನೆ ಕಾರಿನಲ್ಲಿ ಸಾಗುವ ಸಿನೆಮಾ ಮಂದಿಗಳನ್ನೋ ನೋಡಿ, “”ಈ ಪರ್ಪಂಚವೇ ಹೀಗೆ, ಎಲ್ಲ ಬದಲಾಗಿ ಹೋಗಿದೆಯಪ್ಪ” ಎಂದು ಪ್ರಾಯ ಸಂದ ಮುದುಕಿಯಂತೆ ಉದ್ಗಾರ ತೆಗೆದಾಳು. ಹೂ ಕೊಳ್ಳುವಾಗ ಚರ್ಚೆ ಮಾಡುತ್ತ ಕೆಲವರು, “”ಮೊನ್ನೆ ನಿನ್ನ ಅಮ್ಮನಾದರೆ ಕಡಿಮೆಗೆ ಕೊಟ್ಟರು” ಎನ್ನುವುದಿತ್ತು. “”ಅಮ್ಮನೇ? ಅವಳು ಯಾವಾಗಲೋ ಏಸುವಿನ ಪಾದ ಸೇರಿಯಾಗಿದೆ” ಎಂದು ಶಿಲುಬೆಯ ಗುರುತು ಮಾಡಿ ಬಾಯಿ ಅಗಲಿಸುತ್ತಿದ್ದಳು. ಇನ್ನು ಕೆಲವರು, “”ನಿನಗಿಂತ ನಿನ್ನ ಮಗಳೇ ವಾಸಿ, ಅರ್ಧ ಕ್ರಯಕ್ಕೆ ಕೊಟ್ಟಿದ್ದಳು” ಎಂದರೆ, “”ಹೇ ದೇವಾರೆದೇವಾ, ಮದುವೆಯೇ ಆಗಿಲ್ಲ ಮ್ಯಾಡಮ…” ಎಂದು ಬಾಯಿ ಮೇಲೆ ಕೈ ಇರಿಸಿ, ಮಡಿಲಲ್ಲಿದ್ದ ಹೂವೆಲ್ಲ ಹಾರುವಂತೆ ಮೈಕುಲುಕಿಸಿ ನಕ್ಕಾಳು. ಹೀಗೆ ಮೂರು ತಲೆಮಾರುಗಳ ಅವಳ ಅವತಾರಗಳ ಅವಾಂತರಗಳು.

ಹಾಲು ಮಾರುವ ಮಂದಾರಳದು ತನ್ನದೇ ಆದ ಒಂದು ವಿಶಿಷ್ಟ ಉಡುಪಿನ ಕಲ್ಪನೆ. ಫ್ಯಾಶನ್‌ ರಾಜಧಾನಿಯೆನಿಸಿದ ಮುಂಬಯಿಯಲ್ಲಿ, ಅದೂ ಸಿನೆಮಾಮಂದಿಗಳೇ ಸುತ್ತಮುತ್ತ ಇರುವ ಬಾಂದ್ರಾದ ವಾತಾವರಣದಲ್ಲಿ ಮಂದಾರಳ ಉಡುಪೆಂದರೆ- ಮೊಣಕಾಲ ಕೆಳಗಿನವರೆಗೆ ಬರುವ ಸಣ್ಣ ಸಣ್ಣ ಹೂಗಳಿರುವ ಚೀಟಿ ಲಂಗ, ಸೊಂಟಕ್ಕಿಂತ ಕೆಳಗೆ ಬರುವ ಉದ್ದದ ದೊಗಳೆ ರವಕೆ. ಕೈಯ್ಯಲ್ಲಿ, ಹೆಗಲಲ್ಲಿ, ಬೆನ್ನ ಮೇಲೆ ಹಾಲಿನ ಪ್ಯಾಕೇಟು ತುಂಬಿದ ಚೀಲಗಳು. ಅವಳ ಹಾಲಿನ ಸಾಟೆಯ ಮನೆಗಳು ಸುಮಾರು ಎಪ್ಪತ್ತರ ಮೇಲೆ ಇದ್ದೀತು. ಹಿಲ್‌ ರಸ್ತೆ, ಟರ್ನರ್‌ ರಸ್ತೆಗಳ ನಡುವಿನ ಅಷ್ಟೂ ಮನೆಗಳಿಗೆ ಹಾಲು ಸರಬರಾಜು ಮಾಡುತ್ತ ಅದೇ ಸುತ್ತಳತೆಯಲ್ಲಿ ಓಡಿಯಾಡುವಾಗ, ಬೆಳಗಿನ ನಡಿಗೆಯ ಸಮಯ ಕಡಿಮೆ ಪಕ್ಷ ಮೂರು ಬಾರಿಯಾದರೂ ಎದುರಾಗಿಯೇ ಆಗುತ್ತಾಳೆ. “ಗುಡ್‌ ಮಾರ್ನಿಂಗ್‌’ ಎಂದು ಒಮ್ಮೆ, “ಮಗ ಹೇಗಿ¨ªಾನೆ’ ಎಂದು ಇನ್ನೊಮ್ಮೆ, “ಮಗಳು ಬಂದಿದ್ದಾಳೆಯೆ?’ ಎಂದು ಮಗುದೊಮ್ಮೆ- ಹೀಗೆ ಕುಶಲೋಪರಿ ನಡೆದೇ ಇರುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಹಾಲಿನ ಕಲಬೆರಕೆಯ ಗೋಟಾಳದಿಂದಾಗಿ ಅವಳಿಗೆ ಕಷ್ಟವಾಗಿದೆ. ಅವಳಿಂದ ಹಾಲು ಖರೀದಿಸುವುದನ್ನು ನಿಲ್ಲಿಸಿ, ಟೆಟ್ರಾಪೇಕ್‌ ತರಿಸಲು ಸುರುಮಾಡಿದ ಮೇಲೆ, ಅಪರಾಧೀಭಾವ ಕಾಡತೊಡಗಿದ ನನಗಂತೂ ಅವಳ ಪ್ರತಿಯೊಂದು ಮಾತಿಗೂ ಸರಿಯಾಗಿ ಉತ್ತರಿಸುವ, ದಾಕ್ಷಿಣ್ಯದ ಉಮೇದು. ಆದರೆ, ಮಂದಾರಳ ದೃಷ್ಟಿಯೆಲ್ಲ ರಸ್ತೆಯ ಮೇಲೆ. ಪ್ರಶ್ನೆಯೇನೋ ಕೇಳುತ್ತಾಳಾದರೂ ಉತ್ತರ ಕಿವಿಗೆ ಬಿದ್ದಿದೆ ಎನ್ನುವುದರ ಮಟ್ಟಿಗೆ ಅನುಮಾನವೇ. ಅಂದರೆ ಅವಳಿಗೊಂದು ಗೀಳು- ಇಂಗ್ಲೀಷಿನಲ್ಲಿ “ಓಸಿಡಿ’ ಎನ್ನುತ್ತಾರಲ್ಲ,- ಎರಡು ಹೆಜ್ಜೆಗಳಿಗೊಮ್ಮೆ ಬದಿಗೆ ಕಾಲಿಡಬೇಕೆನ್ನುವ ಆತುರ. ಬಲಗಾಲನ್ನು ಬಲಕ್ಕಿಟ್ಟು ಎರಡು ಹೆಜ್ಜೆ ಸೀದಾ ನಡೆದು, ಎಡಗಾಲನ್ನು ಎಡಕ್ಕೆ ಎತ್ತಿ ಮತ್ತೆರಡು ಹೆಜ್ಜೆ ಸೀದಾ…

ಉರ್ದು ಕತೆಗಾರ ಸಾದತ್‌ ಹಸನ್‌ ಮಂಟೊ (1951ರಲ್ಲಿ) ಮುಂಬಯಿಯ ಬಗ್ಗೆ ಬರೆಯುತ್ತ ಹೀಗೆ ಹೇಳಿದ್ದ: “”ಮುಂಬಯಿಯಲ್ಲಿ ನೀನು ದಿನಕ್ಕೆ ಎರಡು ಪೈಸೆಯಲ್ಲೂ ಸಂತೋಷದಲ್ಲಿರಬಹುದು ಅಥವಾ ಹತ್ತು ಸಾವಿರದಲ್ಲೂ. ಅಥವಾ ನಿನಗೆ ಮನಸ್ಸಿದ್ದರೆ, ಆ ಎರಡೂ ಬೆಲೆಯಲ್ಲೂ ಜಗತ್ತಿನ ಅತ್ಯಂತ ದುಃಖದ ವ್ಯಕ್ತಿಯಾಗಲೂಬಹುದು. ಇಲ್ಲಿ ನೀನು ಏನು ಬೇಕಾದರೂ ಮಾಡಬಹುದು, ಯಾರೂ ನಿನ್ನನ್ನು ವಿಚಿತ್ರವಾಗಿ ನೋಡುವುದಿಲ್ಲ. ಯಾರೂ ನಿನಗೆ ಹೀಗೇ ಮಾಡೆಂದು ಹೇಳುವುದೂ ಇಲ್ಲ. ಎಂತಹ ಕಷ್ಟದ ಕೆಲಸವಿದ್ದರೂ ನಿನ್ನಷ್ಟಕ್ಕೆ ಮಾಡಬೇಕಾಗುತ್ತದೆ, ಯಾವುದೇ ಮುಖ್ಯ ನಿರ್ಧಾರಗಳಿದ್ದರೂ ನೀನೇ ತೆಗೆದುಕೊಳ್ಳಬೇಕಾಗುತ್ತದೆ”.

ಮಿತ್ರಾ ವೆಂಕಟ್ರಾಜ್‌

ಟಾಪ್ ನ್ಯೂಸ್

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

America-Congress

House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.