ಬೀದಿಯಲ್ಲ ;ಪುಸ್ತಕ ಕಾಶಿ
ದಿಲ್‌ವಾಲೋಂಕೀ ದಿಲ್ಲಿ
Team Udayavani, Sep 15, 2019, 5:11 AM IST
ನ್ಯಾಯಾಲಯ ಗೆದ್ದಿತು; ಆದರೆ ದಿಲ್ಲಿ ಸೋತಿತು!’
ದಿಲ್ಲಿಯಲ್ಲಿ ಈಚೆಗೆ ನಡೆದ ಮಹತ್ತರ ಬೆಳವಣಿಗೆಯೊಂದರ ಬಗ್ಗೆ ದಿ ಪ್ರಿಂಟ್ ವರದಿ ಮಾಡಿದ್ದು ಹೀಗೆ. ಈ ಸುದ್ದಿಯನ್ನು ಉಳಿದ ಪತ್ರಿಕೆಗಳು ಅದೆಷ್ಟು ವರದಿಮಾಡಿದವೋ! ಆದರೆ, ಪ್ರಿಂಟ್ ಮಾತ್ರ ದಿಲ್ಲಿ ನಿವಾಸಿಗಳ ನಾಡಿಮಿಡಿತವನ್ನು ಅರ್ಥಮಾಡಿಕೊಂಡಂತೆ ‘ಇಂದು ದಿಲ್ಲಿ ಸೋತು ಬಿಟ್ಟಿತು’ ಎಂದು ಮನೋಜ್ಞವಾಗಿ ಬರೆಯಿತು. ಹಳೇ ದಿಲ್ಲಿಯ ದರಿಯಾಗಂಜ್ ಪ್ರದೇಶದ ರಸ್ತೆಬದಿಯ ಪುಸ್ತಕ ಮಳಿಗೆಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂಬ ಸುದ್ದಿಯು ಬರಸಿಡಿಲಿನಂತೆ ಅಪ್ಪಳಿಸುತ್ತಲೇ ಅದೆಷ್ಟೋ ಪುಸ್ತಕ ವ್ಯಾಪಾರಿಗಳ ನೆಮ್ಮದಿಗೂ ಅನ್ನಕ್ಕೂ ಕಲ್ಲುಬಿದ್ದು ಸೃಷ್ಟಿಯಾದ ಅಲ್ಲೋಲಕಲ್ಲೋಲವಿದು. ಇತ್ತ ವಿದ್ಯಾರ್ಥಿಗಳು, ಪ್ರವಾಸಿಗರು, ಪುಸ್ತಕಪ್ರೇಮಿಗಳಿಂದ ಹಿಡಿದು ಜನಸಾಮಾನ್ಯರೂ ಕೂಡ ಮನದಿಚ್ಛೆ ಓದಲು ಸಿಗುವಂತಿದ್ದ ಪುಸ್ತಕಗಳೆಂಬ ಜ್ಞಾನಭಂಡಾರಗಳು ಇನ್ನು ಕೇವಲ ನೆನಪಾಗಿಯಷ್ಟೇ ಉಳಿಯಲಿವೆಯೇನೋ ಎಂದು ನಿರಾಶೆಗೀಡಾದರು. ಹೀಗೆ ತನ್ನ ಒಂದು ತೀರ್ಪಿನಿಂದಾಗಿ ದಿಲ್ಲಿಯ ಉಚ್ಚ ನ್ಯಾಯಾಲಯವು ಹಳೇ ದಿಲ್ಲಿಯ ಪುಸ್ತಕ ವ್ಯಾಪಾರಿಗಳ ಬದುಕನ್ನಷ್ಟೇ ಅಲ್ಲದೆ ಶಹರದ ಓದಿನ ಸಂಸ್ಕೃತಿಯನ್ನೇ ಏಕಾಏಕಿ ಶಿಥಿಲಗೊಳಿಸಿತ್ತು.
ಇಂದಿನ ದುಬಾರಿ ಯುಗದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ಪುಸ್ತಕಗಳನ್ನು ಎಲ್ಲರೂ ಕೊಂಡು ಓದುವಷ್ಟು ಶಕ್ತರೇನಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ಓದುಗರಿಗೂ ಜ್ಞಾನಾರ್ಜನೆಯ ಅಕ್ಷಯಪಾತ್ರೆಯಂತಿದ್ದ, ನಿರಾತಂಕವಾಗಿ ಮುಗಿಬಿದ್ದು ತರುವಂತಿದ್ದ ಪುಸ್ತಕಗಳ ಬ್ರಹ್ಮಾಂಡವಿದು. ಆದರೆ, ಸ್ಮಾರ್ಟ್ ಸಿಟಿಗಳ ಗುಂಗಿನಲ್ಲಿರುವ ಆಡಳಿತಾತ್ಮಕ ವ್ಯವಸ್ಥೆಗಳಿಗೇನು ಹೇಳ್ಳೋಣ? ಹೀಗಾಗಿ, ಸದ್ಯ ಇವರೆಲ್ಲರ ಕಣ್ಣುಗಳಲ್ಲೂ ಮಂಜು. ನಿರಾಶೆಯ ಕಾರ್ಮೋಡಗಳ ನಡುವೆಯೂ ಭರವಸೆಯ ಬೆಳ್ಳಿಕಿರಣವೊಂದು ಇಂದಲ್ಲ ನಾಳೆ ಮೂಡಿಬರಲಿದೆ ಎಂದು ಅಪಾರ ಭರವಸೆಗಳೊಂದಿಗೆ ಕಾಯುವ ಅನಿವಾರ್ಯತೆ.
ದಿಲ್ಲಿಯ ಪುಸ್ತಕಕಾಶಿ
ಕೋಟೆಯ ದೈತ್ಯ ಗೋಡೆಗಳಿಂದ ಆವೃತವಾದ, ಇಂದಿನ ಹಳೇ ದಿಲ್ಲಿಯದ್ದಾದರೂ “ಶಹಜಹಾನಾಬಾದ್’ ಎಂದು ಒಂದು ಕಾಲದಲ್ಲಿ ಪ್ರಖ್ಯಾತವಾಗಿದ್ದ ಪ್ರದೇಶದಲ್ಲಿ ಪ್ರತೀ ಭಾನುವಾರವೂ ಅದ್ಭುತವೊಂದು ಜರುಗುತ್ತದೆ. ಅದೇನೆಂದರೆ ಮಕ್ಕಳು, ವಯಸ್ಕ, ವೃದ್ಧರೆಂಬ ಭೇದವಿಲ್ಲದೆ ಬಹುತೇಕರು ಐತಿಹಾಸಿಕ ಕೆಂಪುಕೋಟೆಯತ್ತ ಸಾಗುವ ಇಲ್ಲಿಯ ನೇತಾಜಿ ಸುಭಾಷ್ ಮಾರ್ಗದಲ್ಲಿ ಜಮೆಯಾಗಿ, ತಮಗೆ ಬೇಕಾಗಿರುವ ಪುಸ್ತಕಗಳ ತಲಾಶೆಯಲ್ಲಿ ಅಲೆಮಾರಿಗಳಂತೆ ಅಲೆದಾಡುತ್ತಿರುತ್ತಾರೆ. ಹೀಗೆ, ಹುಡುಕಾಟಗಳಲ್ಲಿ ಮಗ್ನರಾಗಿರುವ ಅವರತ್ತ ಸುಸ್ತೂ ಸುಳಿಯದು, ನಿರಾಶೆಯೂ ಕಾಣದು. ಇದು ದಿಲ್ಲಿಯ ಪ್ರಖ್ಯಾತ ದರಿಯಾಗಂಜ್. ದಿಲ್ಲಿಯಲ್ಲಿರುವ ಹತ್ತಾರು ಅಪರೂಪದ ಗಲ್ಲಿಗಳಂತೆ ತನ್ನ ವೈಶಿಷ್ಟ್ಯದಿಂದಲೇ ಮನೆಮಾತಾಗಿರುವ ಪುಸ್ತಕಗಳ ಮಹಾಸಾಗರ.
ಇಂದು ದಿಲ್ಲಿಯ ದರಿಯಾಗಂಜ್ ಎಂದರೆ “ಪುಸ್ತಕಗಳು’. ಅಷ್ಟೇ! ಹಾಗೆಂದು, ಈ ಸೊಬಗನ್ನು ನೋಡಲು ನಿತ್ಯವೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಭಾನುವಾರದವರೆಗೂ ಕಾಯಬೇಕು. ಅಂದಾಜು ಒಂದೂವರೆ ಕಿ. ಮೀ. ಗಳಷ್ಟು ರಸ್ತೆಯ ಇಕ್ಕೆಲಗಳಲ್ಲೂ ಹಬ್ಬಿಕೊಂಡಿರುವ ಲಕ್ಷಗಟ್ಟಲೆ ಪುಸ್ತಕಗಳ ವೈವಿಧ್ಯ ಮತ್ತು ಮಾರಾಟದ ಪರಿಯನ್ನು ನೋಡಿಯೇ ಅನುಭವಿಸಬೇಕು. ತರಹೇವಾರಿ ಸ್ಪರ್ಧಾತ್ಮಕ ಪರೀಕ್ಷೆಗಳು, ಕಾನೂನು, ವೈದ್ಯಕೀಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ತತ್ವಶಾಸ್ತ್ರಗಳಿಂದ ಹಿಡಿದು ಕಥೆ, ಕವನ, ಕಾದಂಬರಿ, ಪ್ರಬಂಧ, ಪ್ರವಾಸಕಥನ, ಆತ್ಮಕಥನ, ಬಾಲಸಾಹಿತ್ಯ, ಕಲೆ, ಸಂಗೀತ, ಆಟೋಟ… ಹೀಗೆ ಏನುಂಟು ಏನಿಲ್ಲವೆಂಬಷ್ಟಿನ ವೈವಿಧ್ಯ. ತನ್ನ ಹೆಸರಿನಲ್ಲೇ ದರಿಯಾ ಅನ್ನು ಹೊಂದಿರುವ ಈ “ಜೀವನದಿ’ಯಲ್ಲಿ ಬರೋಬ್ಬರಿ ಐದು ದಶಕಗಳಿಂದ ಜ್ಞಾನದ ನಿರಂತರ ಹರಿವು.
ಒಂದೆರಡು ಚಿನ್ನದ ನಾಣ್ಯಗಳ ತಲಾಶೆಯಲ್ಲಿ ಹೊರಡುವ ಸಾಹಸಿಯೊಬ್ಬ ಆಕಸ್ಮಿಕವಾಗಿ ಕೊಪ್ಪರಿಗೆಯೊಂದಕ್ಕೆ ಎಡತಾಕಿ ಅದ್ಹೇಗೆ ಗಾಬರಿ ಬೀಳುವನೋ, ದರಿಯಾಗಂಜ್ ಪ್ರದೇಶಕ್ಕೆ ಪುಸ್ತಕಗಳ ತಲಾಶೆಯಲ್ಲಿ ಬರುವ ಆಸಕ್ತನೊಬ್ಬ ಇಂಥ ಅಚ್ಚರಿಗಳನ್ನು ಅಪ್ಪಿಕೊಳ್ಳುವ ಮಾನಸಿಕ ತಯಾರಿಯನ್ನಿಟ್ಟುಕೊಂಡೇ ಬಂದಿರುತ್ತಾನೆ. ಏಕೆಂದರೆ, ಮುದ್ರಣವು ನಿಂತು ದಶಕಗಳೇ ಆಗಿರುವ ಅಮೂಲ್ಯ ಪುಸ್ತಕವೊಂದು ದರಿಯಾಗಂಜ್ ಬಜಾರಿನಲ್ಲಿ ಅಚಾನಕ್ಕಾಗಿ “ಹಾಯ…’ ಎನ್ನಬಹುದು. ಸಾವಿರಾರು ರೂಪಾಯಿ ಬೆಲೆಬಾಳುವ, ವಿದೇಶದಿಂದಲೇ ತರಿಸಿಕೊಂಡು ಓದಬೇಕು ಎಂಬಂತಿರುವ ಕೃತಿಗಳು ಬೇರೆ ಯಾವುದೋ ಪುಸ್ತಕಗಳ ರಾಶಿಯಲ್ಲಿ ನಮಗಿಲ್ಲಿ ದಕ್ಕಬಹುದು. ರಸ್ತೆಯ ಬದಿಗಳಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ವ್ಯಾಪಾರಿಗಳು ಉತ್ಸಾಹದಿಂದ ಮಾರುತ್ತಿರುವ, ನಡೆದಷ್ಟೂ ಮುಗಿಯದಂತಿರುವ ಪುಸ್ತಕದಂಗಡಿಗಳ ಸಾಲುಗಳನ್ನು ಕಂಡು ಪುಸ್ತಕಪ್ರೇಮಿಯೊಬ್ಬ ಮಿಠಾಯಿ ಅಂಗಡಿಯೊಂದರಲ್ಲಿ ಗೊಂದಲಕ್ಕೀಡಾಗಿ ನಿಂತ ಮಗುವಿನಂತೆ ಗಲಿಬಿಲಿಯಾಗಬಹುದು. ದರಿಯಾಗಂಜ್‌ಎಂಬ ಪುಸ್ತಕಕಾಶಿಯ ಕಮಾಲ… ಇದು.
ದರಗಳ ಧಮಾಕಾ
ಇಂದು ಹತ್ತು ರೂಪಾಯಿಗೆ ಒಂದು ಸಿಗರೇಟು ಸಿಗದಿರಬಹುದು. ಆದರೆ, ಇನ್ನೂರೈವತ್ತು-ಮುನ್ನೂರು ಪುಟಗಳ ಸೆಕೆಂಡ್-ಹ್ಯಾಂಡ್ ಕಾದಂಬರಿಯೋ, ಆತ್ಮಕಥನವೋ ದರಿಯಾಗಂಜ್‌ನಲ್ಲಿ ಕೇವಲ ಹತ್ತಿಪ್ಪತ್ತು ರೂಪಾಯಿಗಳಿಗೆ ತೀರಾ ಇತ್ತೀಚೆಗಿನವರೆಗೂ ಸಿಕ್ಕಿಬಿಡುತ್ತಿತ್ತು. ತರಕಾರಿಯಂತೆ ಕಿಲೋಗಳ ಲೆಕ್ಕದಲ್ಲಿ ಪುಸ್ತಕಗಳು ಸಿಗುವ, ನೂರು-ನೂರೈವತ್ತು ರೂಪಾಯಿಗಳಿಗೆ ನಾಲ್ಕೈದು ಒಳ್ಳೊಳ್ಳೆಯ ಪುಸ್ತಕಗಳನ್ನು ತನ್ನದಾಗಿಸಿಕೊಳ್ಳುವ ಅವಕಾಶವು ದರಿಯಾಗಂಜ್‌ನಿಂದಾಗಿ ದಿಲ್ಲಿ ನಿವಾಸಿಗಳಿಗೆ ದೊರಕಿತ್ತು. ಹೀಗಾಗಿ, ವರ್ಷದ ಅಷ್ಟೂ ಭಾನುವಾರಗಳಂದು ವಿದ್ಯಾರ್ಥಿಗಳಿಗಿದು ಕೈಗೆಟಕುವ ಬಾಜಾರು, ಪುಸ್ತಕಪ್ರೇಮಿಗಳಿಗೆ ಸ್ವರ್ಗ. ಜನಸಾಮಾನ್ಯರಿಗೆ ಓದನ್ನು ಬದುಕಿಗೆ ಮತ್ತಷ್ಟು ಹತ್ತಿರವಾಗಿಸಿದ ತಾಣ.
ಹೀಗಿದ್ದಾಗ ನ್ಯಾಯಾಲಯದ ತೀರ್ಪು ಸಮಾಜದ ಒಂದಿಡೀ ವರ್ಗವನ್ನು ನಿರಾಶೆಗೆ ದೂಡಿದ್ದು ಸುಳ್ಳಲ್ಲ. ನೇತಾಜಿ ಸುಭಾಷ್ ರಸ್ತೆಯಲ್ಲಿ ಪಾದಚಾರಿಗಳು ಸಾಗುವ ಮಾರ್ಗದಲ್ಲಿ ಪುಸ್ತಕಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಂದಾಗಿ ಟ್ರಾಫಿಕ್ ಸಮಸ್ಯೆಯು ಮಿತಿಮೀರಿದೆ ಎಂಬ ಕಾರಣವಿಟ್ಟುಕೊಂಡು ಸೂಕ್ತ ಮುನ್ಸೂಚನೆಯನ್ನೂ ನೀಡದೆ ಇಂಥ ಐತಿಹಾಸಿಕ ಮಾರುಕಟ್ಟೆಯೊಂದನ್ನು ಏಕಾಏಕಿ ತೆರವುಗೊಳಿಸಿದ ಪ್ರಕ್ರಿಯೆಯು ಪುಸ್ತಕವ್ಯಾಪಾರಿಗಳನ್ನು ಕಂಗಾಲಾಗಿಸಿದೆ. ಇತ್ತ ಹೊಸದಾಗಿ ಬೇರೊಂದು ಪ್ರದೇಶದಲ್ಲಿ ಬದಲಿ ಮಾರುಕಟ್ಟೆಯೊಂದನ್ನು ನಿರ್ಮಿಸಿಕೊಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿದ್ದರೂ ಈಗಾಗಲೇ ಸೃಷ್ಟಿ ಯಾಗಿರುವ ತಲ್ಲಣವು ಪದಗಳಿಗೆ ಮೀರಿದ್ದು. ಸ್ವತಃ ಪುಸ್ತಕ ವ್ಯಾಪಾರಿಗಳೇ ಹೇಳುವಂತೆ ತಾವು ದಿಲ್ಲಿಯ ಯಾವ ಭಾಗಕ್ಕೆ ಹೊಸದಾಗಿ ಹೋದರೂ ದರಿಯಾಗಂಜ್ ಎಂಬ ಅದ್ಭುತವನ್ನು ಮತ್ತೆ ಸೃಷ್ಟಿಸುವುದು ಕಷ್ಟ. ಏಕೆಂದರೆ ದರಿಯಾಗಂಜ್ ದಿಲ್ಲಿಯ “ಸಾಂಸ್ಕೃತಿಕ ಲ್ಯಾಂಡ್‌ಮಾರ್ಕ್’ ಎಂಬಷ್ಟು ಮನೆಮಾತಾಗಿರುವ ಪ್ರದೇಶ.
ದರಿಯಾಗಂಜ್ ಹೀಗೆ ಮುಚ್ಚಲ್ಪಡುವ ಪರಿಸ್ಥಿತಿಗೀಡಾಗಿದ್ದು ಇದೇ ಮೊದಲಲ್ಲ. ಆದರೆ ಈ ಬಾರಿಯ ಹೊಡೆತವು ಕೊಂಚ ಹೆಚ್ಚೇ ಎಂಬಷ್ಟು ಗಾಬರಿಯನ್ನು ಹುಟ್ಟಿಸಿದೆ. ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರ ಮೂಲಗಳಿಂದ ಬಂದಿರುವ ವ್ಯಾಪಾರಿಗಳಷ್ಟೇ ಅಲ್ಲದೆ ಈ ಉದ್ದಿಮೆಯೊಂದಿಗೆ ಸೇರಿಕೊಂಡಿರುವ ದಿನಗೂಲಿಯ ಕಾರ್ಮಿಕರಿಗೂ, ಇತರೆ ವ್ಯಾಪಾರಸ್ಥರಿಗೂ ಇಲ್ಲಿ ಬರೆಬಿದ್ದಿದೆ. ಈ ವೃತ್ತಿಯನ್ನೇ ನಂಬಿಕೊಂಡಿರುವ ಅದೆಷ್ಟೋ ಜೀವಗಳು ಸಾಲ ಮತ್ತು ಜೀವನೋಪಾಯಗಳ ದೃಷ್ಟಿಯಿಂದಾಗಿ ಕಂಗಾಲಾಗಿವೆ. ಇನ್ನು ದರಿಯಾಗಂಜ್ ನ ಬದಲಿ ಸ್ಥಳಗಳೆಂದು ಸುದ್ದಿಯಲ್ಲಿದ್ದ ರಾಮಲೀಲಾ ಮೈದಾನ, ಜಮುನಾಬಾಜಾರ್ ಮತ್ತು ಚೋಕ್‌ಬಾ ಗ್ ಪ್ರದೇಶಗಳು ಕಾರಣಾಂತರಗಳಿಂದ ಹೊಂದಿಕೆಯಾಗದೆ ಜಿಲ್ಲಾಡಳಿತವು ಹೊಸ ಪ್ರದೇಶಗಳ ತಲಾಶೆಯಲ್ಲಿವೆಯಂತೆ. ತೀರ್ಪು ಹೊರಬಿದ್ದ ಆರಂಭದ ದಿನಗಳಲ್ಲಿ ದರಿಯಾಗಂಜ್ ಪ್ರತಿ ಭಾನುವಾರದ ಪುಸ್ತಕ ಬಾಜಾರು ಕಲ್ಯಾಣ ಸಂಘಕ್ಕಷ್ಟೇ ಸೀಮಿತವಾಗಿದ್ದ ಈ ಹೋರಾಟಕ್ಕೆ ನಿಧಾನವಾಗಿ ಇತರೆ ಸಂಘಸಂಸ್ಥೆಗಳೂ ಕೈಜೋಡಿಸುತ್ತಿರುವುದು ಸದ್ಯದ ಆಶಾದಾಯಕ ಸಂಗತಿಗಳಲ್ಲೊಂದು.
“”ಹೊಸ ಹೆದ್ದಾರಿಯ ನಿರ್ಮಾಣಕ್ಕೆ ಅಡ್ಡಿಯಾಗುತ್ತ ದೆಂದು ಊರಿನ ಐತಿಹಾಸಿಕ ಸ್ಮಾರಕವೊಂದನ್ನು ನಿರ್ದಾಕ್ಷಿಣ್ಯ ವಾಗಿ ನೆಲಸಮಮಾಡುವಂತೆ, ನಗರೀಕರಣದ ಭರದಲ್ಲಿ ದಿಲ್ಲಿಯ ಸಂಸ್ಕೃತಿಯನ್ನೇ ನಿರ್ದಯವಾಗಿ ಕಿತ್ತೆಸೆಯುತ್ತಿರುವುದು ಅದೆಷ್ಟು ಸರಿ?”, ಎಂದು ಕೇಳುತ್ತಿದ್ದಾರೆ, ದರಿಯಾಗಂಜ್ ಪ್ರದೇಶದ ಪುಸ್ತಕ ವ್ಯಾಪಾರಿಗಳು. ಇದು ಮಾನವೀಯ ಮತ್ತು ಸಾಮಾಜಿಕ ಕಾಳಜಿಯಿರುವ ಎಲ್ಲರ ಮನದಾಳದ ಮಾತೂ ಹೌದು.
ಪ್ರಸಾದ್ ನಾೖಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.