ಈಗ ಓಟಿನ ಸಮಯ


Team Udayavani, May 6, 2018, 6:00 AM IST

10.jpg

ಯಾರು ಗೆಲ್ಲಲಿ ಬಿಡಲಿ, ಚುನಾವಣೆ ಎಂಬುದು ಹೊಸ ಆಶೋತ್ತರಗಳು, ಭರವಸೆಗಳು ಚಿಗಿತುಕೊಳ್ಳುವ ಕಾಲ ಎಂದು ಅಮೆರಿಕನ್‌ ಉದ್ಯಮಿ-ರಾಜಕಾರಣಿಯಾಗಿದ್ದ ಗ್ಯಾರಿ ಜಾನ್ನವ್‌ಸನ್‌ ಹೇಳಿದ್ದಾನೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದು ವರಕವಿ ಹಾಡಿದ್ದರು. ಹಾಗೆಯೇ ನಮ್ಮಲ್ಲಿ ಯುಗಯುಗಾದಿ ಕಳೆದರೂ ಚುನಾವಣೆಗಳು ಮರಳಿ ಬರುತ್ತವೆ. ಹೊಸ ಭರವಸೆಗಳನ್ನು, ಆಶ್ವಾಸನೆಗಳನ್ನು ತರುತ್ತವೆ. ಕೆಲವು ಆಶ್ವಾಸನೆಗಳು ಹಳತಾಗಿ, ಹಳಸಲಾಗಿ ವಾಸನೆ ಹೊಡೆಯುತ್ತಿದ್ದರೂ ಅವನ್ನು ಮತ್ತೆ ಪೇಂಟ್‌ ಹೊಡೆದು ರಾಜಕಾರಣಿಗಳು ಜನರ ಮುಂದಿಡುತ್ತಾರೆ. ನಮ್ಮ ನಾಯಕರು ತಾವು ಪ್ರಣಾಳಿಕೆಯಲ್ಲಿ ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ನೆರವೇರಿಸಿದ್ದರೆ ಬಹುಶಃ 1960ರ ನಂತರ ಚುನಾವಣೆ ಪ್ರಚಾರ ಭಾಷಣಗಳಿಗೆ ವಿಷಯವೇ ಇರುತ್ತಿರಲಿಲ್ಲ! ಯಾಕೆಂದರೆ, ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಬಂದುಬಿಡುತ್ತಿತ್ತು; ದೇಶದ ಉದ್ಯೋಗ ಸಮಸ್ಯೆ, ಬಡತನ, ಅನಕ್ಷರತೆ ಎಲ್ಲವೂ ನಿವಾರಣೆಯಾಗಿಬಿಡುತ್ತಿದ್ದವು. ರಾಜಕಾರಣಿಗಳು ಭರವಸೆ ಕೊಟ್ಟ ವೇಗದಲ್ಲಿ ದೇಶ ಪ್ರಗತಿ ಸಾಧಿಸಿದ್ದರೆ ಬಹುಶಃ ಈಗಿನ ಚುನಾವಣೆ ಹೊತ್ತಿಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಚಂದ್ರಯಾನ, ಮಂಗಳಯಾನ ಮಾಡಿಸುತ್ತೇವೆ ಎಂಬಲ್ಲಿಯವರೆಗೆ ಹೋಗಬೇಕಾಗಿರುತ್ತಿತ್ತು. ಆದರೆ ಸುದೈವ, ಅಷ್ಟು ರಿಸ್ಕ್ ತೆಗೆದುಕೊಳ್ಳಲು ಅವಕಾಶ ಕೊಡದಂತೆ ದೇಶ ಕುಂಟುತ್ತಲೇ ಸಾಗಿದೆ ! ನಿರುದ್ಯೋಗ, ಅನಕ್ಷರತೆ, ಬಡತನ, ನೀರಿಲ್ಲದ ನಲ್ಲಿಗಳೇ ಇನ್ನೂ ನಮ್ಮ ಪಕ್ಷಗಳ ಚುನಾವಣಾ ವಿಷಯಗಳಾಗಿ ಕೂತಿವೆ. 

ಗೆಲ್ಲಬಹುದು ಇಲ್ಲವೇ ಸೋಲಬಹುದು !
ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ. ನೀಲ್‌ ಆರ್ಮ್ಸ್ಟ್ರಾಂಗ್‌ ಮತ್ತು ಅವನ ಇಬ್ಬರು ಸಹಯಾತ್ರಿಗಳು ಚಂದ್ರನಂಗಳಕ್ಕೆ ಹೋದಾಗ ಅಮೆರಿಕದ ಅಧ್ಯಕ್ಷ ನಿಕ್ಸನ್‌ ಎರಡು ಚೀಟಿಗಳನ್ನು ಕಿಸೆಯಲ್ಲಿ ಇಟ್ಟುಕೊಂಡಿದ್ದರಂತೆ. ಒಂದು – ಗಗನಯಾತ್ರೆ ಯಶಸ್ವಿಯಾದರೆ ಓದಲು; ಇನ್ನೊಂದು – ವಿಫ‌ಲವಾದರೆ ಓದಲು! ಹಾಗೆ, ಈ ಸಲದ ಚುನಾವಣೆ ನಡೆದು ಮೂರು ದಿನಗಳ ನಂತರ ಪ್ರಕಟವಾಗುವ ಫ‌ಲಿತಾಂಶದ ದಿನ ನಮ್ಮ ಎಲ್ಲ ರಾಜಕಾರಣಿಗಳ ಕಿಸೆಗಳಲ್ಲೂ ಎರಡು ಚೀಟಿಗಳಿರುವುದಂತೂ ಖಾತ್ರಿ. ಎಲ್ಲ ಪಕ್ಷಗಳೂ ಅಂದಿಗೆ ಎರಡು ಬಗೆಯ ಪತ್ರಿಕಾ ಹೇಳಿಕೆಗಳನ್ನು ಮೊದಲೇ ತಯಾರಿಸಿಟ್ಟುಕೊಂಡಿರುತ್ತವೆ. ಫ‌ಲಿತಾಂಶವನ್ನು ನೋಡಿಕೊಂಡು ರಾಜಕಾರಣಿಗಳು ತಮ್ಮ ಚೀಟಿ ತೆಗೆಯುತ್ತಾರೆ! ಗೆದ್ದರೆ ಜನರ ಆಶೀರ್ವಾದ; ನಮ್ಮ ಸಾಧನೆ ಮೆಚ್ಚಿ ಓಟು ಕೊಟ್ಟಿ¨ªಾರೆ ಎಂಬ ವರಸೆ. ಸೋತರೆ ಮತದಾರಪ್ರಭುವಿನ ಆಜ್ಞೆಗೆ ಶಿರಬಾಗುತ್ತೇವೆ; ನಮ್ಮ ಸಾಧನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಮತದಾರರು ವಿಫ‌ಲರಾಗಿರಬಹುದು ಎಂಬ ಸಮಾಧಾನಕರ ಹೇಳಿಕೆ. ಏನೇ ಇರಲಿ, ಒಮ್ಮೆ ಮತದಾರ ತನ್ನ ಅಂತಿಮ ತೀರ್ಪು ಕೊಟ್ಟನೋ ಮುಗಿಯಿತು. ಆಮೇಲೆ ಐದು ವರ್ಷಗಳ ಕಾಲ ಯಾರೂ ಕಮಕ್‌ ಕಿಮಕ್‌ ಎನ್ನುವಂತಿಲ್ಲ ಎಂಬುದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ!

ಒಂದು ಓಟಿನ ಕತೆ !
ಮತದಾನದ ಸಮಯದಲ್ಲಿ ಎಲ್ಲ ಮಾಧ್ಯಮಗಳೂ ತಪ್ಪದೆ ಕೊಡುವ ಎಚ್ಚರಿಕೆ – ಪ್ರತಿಯೊಂದು ಮತವೂ ಅಮೂಲ್ಯ. ಮತದಾನ ಮಾಡದೆ ಮನೆಯಲ್ಲಿ ಕೂರಬೇಡಿ. ಅದು ಪ್ರಜೆಯಾಗಿ ಪ್ರತಿಯೊಬ್ಬನ ಕರ್ತವ್ಯ – ಎಂಬುದು. ಪ್ರತಿ ಓಟು ಕೂಡ ಮುಖ್ಯ ಎಂಬ ಸವಕಲು ಮಾತಿಗೆ ನಿಜಾರ್ಥದಲ್ಲಿ ಕಳೆಗಟ್ಟಿದ್ದು ಮಾತ್ರ 2004ರ ಅಸೆಂಬ್ಲಿ ಚುನಾವಣೆಯಲ್ಲಿ. ಚಾಮರಾಜನಗರದ ಸಂತೇಮರಹಳ್ಳಿ ಆಗ ಮೀಸಲು ಕ್ಷೇತ್ರವಾಗಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳ ರಣಾಂಗಣ ಅದು. ಮಾಜಿ ರಾಜ್ಯಪಾಲ ರಾಚಯ್ಯನವರ ಮಗ ಎ.ಆರ್‌. ಕೃಷ್ಣಮೂರ್ತಿ ಜೆಡಿಎಸ್‌ನಿಂದ, ಆರ್‌. ಧ್ರುವನಾರಾಯಣ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕೃಷ್ಣಮೂರ್ತಿಗೆ 40,751 ಮತ ಬಂದರೆ ಧ್ರುವನಾರಾಯಣ ಅದಕ್ಕಿಂತ ಒಂದೇ ಒಂದು ಹೆಚ್ಚಿಗೆ ಓಟು – ಅಂದರೆ 40,752 – ಪಡೆದು ಜಯಮಾಲೆಯನ್ನು ಕೊರಳಿಗೆ ಹಾಕಿಕೊಂಡರು! ಕೃಷ್ಣಮೂರ್ತಿ ಸೋಲುತ್ತಾರೆಂದು- ಅದೂ ಏಕೈಕ ಮತದ ಅಂತರದಿಂದ ಸೋಲುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಕೃಷ್ಣಮೂರ್ತಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಆ ಕ್ಷೇತ್ರದಿಂದ ಇನ್ನಿಬ್ಬರು ಕೃಷ್ಣಮೂರ್ತಿಗಳನ್ನು ಕಣಕ್ಕಿಳಿಸಲಾಗಿತ್ತು! ಆ ಒಂದು ಓಟಿನ ಸೋಲು ಅದು ಯಾವ ಪರಿ ಕೃಷ್ಣಮೂರ್ತಿಯವರನ್ನು ಆಟವಾಡಿಸಿತೆಂದರೆ, ಮುಂದೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಾಗಲಿ ಲೋಕಸಭೆ ಚುನಾವಣೆಯಲ್ಲಾಗಲಿ ಅವರಿಗೆ ಗೆಲುವಿನ ನಗೆ ಬೀರುವುದಕ್ಕೆ ಸಾಧ್ಯವೇ ಆಗಲಿಲ್ಲ. ಅವರು ನಂತರ ಬಿಜೆಪಿ ಅಭ್ಯರ್ಥಿಯಾಗಿ ನಿಂತರೂ 2009, 2014ರ ಎರಡೂ ಲೋಕಸಭೆ ಚುನಾವಣೆಗಳಲ್ಲಿ ಸೋತುಹೋದರು. 

ಪಕ್ಷಕ್ಕೆ ಅಂಟಿಕೊಂಡ ಕ್ಷೇತ್ರ
ಕೆಲವೊಮ್ಮೆ ಯಾರಾದರೊಬ್ಬ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆದ್ದುಬಂದರೆ ನಂತರ ಫೆವಿಕಾಲ್‌ ಹಚ್ಚಿದಂತೆ ಸೀಟಿಗೆ ಅಂಟಿಕೊಂಡುಬಿಡುತ್ತಾರೆ. ಒಳ್ಳೆಯ ಉದಾಹರಣೆ ಎಂದರೆ ಯಾದಗೀರ ಜಿಲ್ಲೆಯ ಗುರುಮಟಕಲ್‌ ಕ್ಷೇತ್ರ. ಇದನ್ನು 1962ರಲ್ಲಿ ಸಿ. ರಾಜಗೋಪಾಲಾಚಾರಿಯವರ ಸ್ವತಂತ್ರ ಪಕ್ಷ ಗೆದ್ದುಕೊಂಡಿತ್ತು. ಆ ಪಕ್ಷದ ವಿದ್ಯಾಧರ ಗುರೂಜಿ ಸಾಯಣ್ಣ ಗುರುಮಟಕಲ್‌ ಅನ್ನು ಪ್ರತಿನಿಧಿಸಿದ್ದರು. ಆದರೆ ನಂತರದ ಚುನಾವಣೆಯಲ್ಲಿ ಎನ್‌. ಯಂಕಪ್ಪ ಅವರ ಮೂಲಕ ಕಾಂಗ್ರೆಸ್‌ ತೆಕ್ಕೆಗೆ ಬಿದ್ದ ಈ ಕ್ಷೇತ್ರ ಇಂದಿಗೂ ಕೈ ಪಕ್ಷದ ಭದ್ರಕೋಟೆ. 1972ರಿಂದ 2004ರವರೆಗೆ, ಗುರುಮಟಕಲ್‌ ಮೀಸಲು ಕ್ಷೇತ್ರವಾಗಿದ್ದ ಸಮಯದವರೆಗೆ ಅಲ್ಲಿ ಆರಿಸಿಬರುತ್ತಿದ್ದವರು ಪ್ರತಿಸಲವೂ ಮಲ್ಲಿಕಾರ್ಜುನ ಖರ್ಗೆಯವರೇ. ಅಲ್ಲಿಂದ ಆಮೇಲೂ ಆ ಕ್ಷೇತ್ರ ತನ್ನ ಪಕ್ಷನಿಷ್ಠೆಯನ್ನು ಬಿಟ್ಟುಕೊಟ್ಟಿಲ್ಲ. ಅದೇ ಬಗೆಯ ಇನ್ನೊಂದು ಕ್ಷೇತ್ರವೆಂದರೆ ಧರಮ್‌ ಸಿಂಗ್‌ ಪ್ರತಿನಿಧಿಸುತ್ತಿದ್ದ ಜೇವರ್ಗಿ. 

1972ರಲ್ಲಿ ಮಹದೇವಪ್ಪ ರಾಂಪುರೆಯವರ ವಿರುದ್ಧ ಗೆದ್ದ ಧರಮ್‌ ಸಿಂಗ್‌ 2008ರವರೆಗೆ ಜೇವರ್ಗಿಯನ್ನು ತನ್ನ ಮತ್ತು ಕಾಂಗ್ರೆಸ್‌ನ ಭದ್ರಕೋಟೆ ಮಾಡಿಬಿಟ್ಟಿದ್ದರು. ಇನ್ನು ಬಿಜೆಪಿಯ ವಿಷಯದಲ್ಲಿ ಹೇಳುವುದಾದರೆ ಅದು ಕರ್ನಾಟಕದಲ್ಲಿ ಖಾತೆ ತೆರೆದದ್ದೇ 1983ರಲ್ಲಿ. ಆ ವರ್ಷ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಿತು. ಆ ನಂತರದ ಚುನಾವಣೆಗಳಲ್ಲಿ ಅವುಗಳಲ್ಲಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡದ್ದೂ ಉಂಟು. ಆದರೆ, ಅಂದಿನಿಂದ ಇಂದಿನವರೆಗೆ ಬಿಜೆಪಿ ಕೈಯಿಂದ ಜಾರಿಬೀಳದ ಕ್ಷೇತ್ರವೆಂದರೆ ದಕ್ಷಿಣ ಕನ್ನಡದ ಸುಳ್ಯ. ಅಂದಿನಿಂದ ಇಂದಿನವರೆಗೂ ಈ ಮೀಸಲು ಕ್ಷೇತ್ರವನ್ನು ಬಿಜೆಪಿಯ ಅಂಗಾರ ಅವರೇ ಪ್ರತಿನಿಧಿಸುತ್ತಿದ್ದಾರೆ. 

ಇದಕ್ಕೆ ವಿರುದ್ಧವೆಂಬಂತೆ ಕೋಲಾರದ ಗೋಲ್ಡ್‌ ಫೀಲ್ಡ್‌ (ಕೆಜಿಎಫ್) ವಿಧಾನಸಭಾ ಕ್ಷೇತ್ರ ಯಾರೊಬ್ಬರಿಗೂ ಪರ್ಮನೆಂಟಾಗಿ ಮಣೆ ಹಾಕಿಸಿ ಕೂರಿಸಿಲ್ಲ. ಇಲ್ಲಿ ನಡೆದ 12 ಚುನಾವಣೆಗಳಲ್ಲಿ ಇದುವರೆಗೆ 8 ಬೇರೆ ಬೇರೆ ಪಕ್ಷಗಳು ಗೆದ್ದುಬಂದಿವೆ. ಅಂದರೆ, ರಾಜ್ಯದ ಅತ್ಯಂತ ಅನಿಶ್ಚಿತ ಕ್ಷೇತ್ರ ಈ ಕೆಜಿಎಫ್! ಎಂಟು ಪಕ್ಷಗಳು ಇಲ್ಲಿ ತಮ್ಮ ಹಕ್ಕುಸ್ಥಾಪನೆ ಮಾಡಿಹೋದರೂ, ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಮಾತ್ರ ಇಲ್ಲಿ ಇನ್ನೂ ತನ್ನ ಖಾತೆ ತೆರೆಯಲಾಗಿಲ್ಲ ಎಂಬುದೊಂದು ವಿಶೇಷ.

 ಅದೇ ರೀತಿ, ಬೆಳಗಾವಿ ಖಾನಾಪುರದಲ್ಲಿ ಇದುವರೆಗೆ ಕಾಂಗ್ರೆಸ್‌ ಪಕ್ಷಕ್ಕೆ ತನ್ನ ಪ್ರಾಬಲ್ಯವನ್ನು ತೋರಿಸಲು ಸಾಧ್ಯವಾಗಿಲ್ಲ. ಇದುವರೆಗೆ ನಡೆದಿರುವ 13 ಚುನಾವಣೆಗಳ ಪೈಕಿ 8 ಸಲ ಈ ಕ್ಷೇತ್ರ ಸ್ವತಂತ್ರ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಿದೆ ಎಂಬುದು ವಿಚಿತ್ರ. 2008ರಲ್ಲಿ ಖಾನಾಪುರ ಬಿಜೆಪಿಯ ತೆಕ್ಕೆಗೆ ಬಿತ್ತು. ಕನ್ನಡದ ಭಾಗವಾದರೂ ಬಹುತೇಕ ಮರಾಠಿಗರ ಪ್ರಭಾವವೇ ಢಾಳಾಗಿ ಮೆರೆಯುವ ಈ ಕ್ಷೇತ್ರವನ್ನು 1962ರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕೂಡ ಪ್ರತಿನಿಧಿಸಿತ್ತು ಎಂದರೆ ಅಚ್ಚರಿಪಡಬೇಡಿ. 

ಕೋಲಾರದ ಶ್ರೀನಿವಾಸಪುರದ ವರಸೆ ಸ್ವಲ್ಪ ಬೇರೆ ಬಗೆಯದು. ಇಲ್ಲಿನ ಚುನಾವಣೆಗಳಲ್ಲಿ ಇಬ್ಬರೇ ಇಬ್ಬರು ಅಭ್ಯರ್ಥಿಗಳು ಒಮ್ಮೆ ನೀನು ಒಮ್ಮೆ ನಾನು ಎಂಬ ಒಳ ಒಪ್ಪಂದ ಮಾಡಿಕೊಂಡಂತೆ ಅವರೊಮ್ಮೆ ಇವರೊಮ್ಮೆ ಗೆದ್ದುಬರುತ್ತ ಸಾಗಿದ್ದಾರೆ! 1978, 1985, 1994, 2004, 2013 – ಈ ಐದು ಚುನಾವಣೆಗಳಲ್ಲಿ ಶ್ರೀನಿವಾಸಪುರ ಗೆಲ್ಲಿಸಿದ್ದು ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ಅವರನ್ನು. ಹಾಗೆಂದು ಅವರೇನೂ ಆ ಕ್ಷೇತ್ರದ ಪ್ರಶ್ನಾತೀತ ನಾಯಕರಲ್ಲ. 1983, 1989, 1999, 2008 – ಈ ನಾಲ್ಕು ಚುನಾವಣೆಗಳಲ್ಲಿ ಅಲ್ಲಿನ ಜನತೆ ರಮೇಶ್‌ ಕುಮಾರ್‌ ಅವರನ್ನು ಸೋಲಿಸಿ ವೆಂಕಟಶಿವಾರೆಡ್ಡಿಯವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿತ್ತು. ಮನುಷ್ಯ ತಾನೊಂದು ಬಗೆದರೆ ದೈವ ಬೇರೊಂದು ಬಗೆವುದು ಎಂಬ ಮಾತಿದೆ. ಹಾಗೆಯೇ, ಕೆಲವೊಮ್ಮೆ ಅಭ್ಯರ್ಥಿ ತಾನೊಂದು ಬಗೆದರೆ ಮತದಾರ ಬೇರೆಯೇ ಯೋಜನೆ ಹಾಕಿರುತ್ತಾನೆ. 

ಚುನಾವಣೆಯಲ್ಲಿ ಇಂಥವರೇ ಗೆದ್ದು ಬರುತ್ತಾರೆ ಎಂದು ಭವಿಷ್ಯ ಹೇಳುವುದು ಸಾಧ್ಯವಿಲ್ಲ. ಯಾರು ಗೆದ್ದು ಬರುತ್ತಾರೆಂದು ಎಲ್ಲರೂ ಭಾವಿಸಿರುತ್ತಾರೋ ಅಂಥವರು ಸೋತು ಮಕಾಡೆ ಮಲಗಿರುವ ನಿದರ್ಶನಗಳು ಬೇಕಾದಷ್ಟಿವೆ. ಸೋಲೇ ಇಲ್ಲದ ಸರದಾರ ಎಂದು ಕರೆಸಿಕೊಳ್ಳುತ್ತಿದ್ದ ಬಂಗಾರಪ್ಪ ಸೊರಬದಲ್ಲಿ ಆಯನೂರು ಮಂಜುನಾಥರಿಗೆ ಸೋತದ್ದು, ರಾಮಕೃಷ್ಣ ಹೆಗಡೆ ಬಾಗಲಕೋಟೆಯಲ್ಲಿ ಸಿದ್ದು ನ್ಯಾಮಗೌಡರಿಗೆ ಸೋತದ್ದು, ಜೆ.ಎಚ್‌. ಪಟೇಲರು ಚನ್ನಗಿರಿ ಕ್ಷೇತ್ರದಲ್ಲಿ ವಡ್ನಾಳ್‌ ರಾಜಣ್ಣ ಅವರಿಗೆ ಸೋತದ್ದು ಕೆಲವು ನಿದರ್ಶನಗಳಷ್ಟೆ. ಕಾಂಗ್ರೆಸ್‌ ಪಕ್ಷದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದು, ಡಿ. ದೇವರಾಜ ಅರಸು ಅವರನ್ನು ಬದಿಗಿಟ್ಟು ಮುಖ್ಯಮಂತ್ರಿಯೂ ಆಗಿ ಮೆರೆದ ಗುಂಡೂರಾಯರನ್ನು 1983ರಲ್ಲಿ ಸೋಲಿಸಿದ್ದು ಆ ಕಾಲಕ್ಕೆ ಯಾವ ಹೆಸರೂ ಮಾಡಿರದೆ ಇದ್ದ ಬಿ.ಎ. ಜೀವಿಜಯ ಅವರು. 

ಗೆದ್ದು ಸಾಧನೆ ಮೆರೆದವರು ಸರಿ, ಗೆಲ್ಲದೆಯೇ ಸಾಧನೆ ಮಾಡಿದವರೂ ಇದ್ದಾರೆ! ಹೊಟ್ಟೆಪಕ್ಷದ ರಂಗಸ್ವಾಮಿ ತನ್ನ ಜೀವಿತಾವಧಿಯಲ್ಲಿ ಒಟ್ಟು 85 ಸಲ ಚುನಾವಣೆಗೆ ನಿಂತು ಗಿನ್ನೆಸ್‌ ದಾಖಲೆ ಬರೆದರು. ಅಷ್ಟೇ ಅಲ್ಲ, ಯಾವೊಂದು ಚುನಾವಣೆಯಲ್ಲೂ ಗೆಲ್ಲದೆ ಕೂಡ ಮತ್ತೂಂದು ದಾಖಲೆ ಬರೆಸಿಕೊಂಡರು! ಇಂದಿರಾಗಾಂಧಿಯಿಂದ ಹಿಡಿದು ಪಿ.ವಿ. ನರಸಿಂಹ ರಾವ್‌, ರಾಜೀವ್‌ ಗಾಂಧಿ, ಎಸ್‌.ಎಂ. ಕೃಷ್ಣ, ಕೆಂಗಲ್‌ ಹನುಮಂತಯ್ಯ – ಹೀಗೆ ಘಟಾನುಘಟಿಗಳ ವಿರುದ್ಧ ರಂಗಸ್ವಾಮಿ ಚುನಾವಣೆ ಎದುರಿಸುತ್ತಿದ್ದರು. ರಂಗಸ್ವಾಮಿ ಇದ್ದರೆ ಯಾವ ಪಕ್ಷಕ್ಕೂ ಭಯವಾಗುತ್ತಿರಲಿಲ್ಲ. ಬದಲಿಗೆ ಅವರು ಚುನಾವಣಾ ಕಣದಲ್ಲಿ ಇಲ್ಲದಿದ್ದರೆ ಅದೇನೋ ಒಂದು ಕೊರತೆ ಅನ್ನಿಸುತ್ತಿತ್ತು! 1957ರ ಚುನಾವಣೆಯಲ್ಲಿ ಸೇಡಮ್‌ ಕ್ಷೇತ್ರದಿಂದ ಜೆ. ಸರ್ವೇಶ್‌ ಮತ್ತು ಕಾರ್ಕಳದಿಂದ ಮಂಜಪ್ಪ ಉಳ್ಳಾಲ ಚುನಾವಣಾ ಅಭ್ಯರ್ಥಿಗಳಾಗಿದ್ದರು. ಇವರು ಕೂಡ ರಂಗಸ್ವಾಮಿಯವರಂತೆ ಒಂದು ಅಪರೂಪದ ಸಾಧನೆ ಮಾಡಿ¨ªಾರೆ. ಅದೇನೆಂದರೆ, ಇಬ್ಬರೂ ಚುನಾವಣೆಯಲ್ಲಿ ಗಳಿಸಿದ ಮತಗಳು: ಸೊನ್ನೆ! ಬೇರೆಯವರ ಮತ ಬೀಳುವುದು ಹೋಗಲಿ, ತಮ್ಮ ಮತವನ್ನೂ ಇವರು ತಮಗೆ ಹಾಕಿಕೊಳ್ಳದ ನಿಸ್ವಾರ್ಥಿಗಳು! 

301 ಮಂದಿ ಅಭ್ಯರ್ಥಿಗಳು ! 
ಚುನಾವಣೆ ಅಂದರೇನೇ ಅಲ್ಲಿ ಸ್ಪರ್ಧೆ ಇರಬೇಕು ಎಂದು ನಾವು ಬಯಸುತ್ತೇವೆ. ಕನಿಷ್ಠ ಇಬ್ಬರು ಸ್ಪರ್ಧಿಗಳು ಕಣದಲ್ಲಿ ಇರಲೇಬೇಕು. ಮೂರು ಜನ ಇರುವುದು, ಅವರ ಮಧ್ಯೆ ತ್ರಿಕೋಣ ಸ್ಪರ್ಧೆ ಏರ್ಪಡುವುದು ಸರ್ವೇಸಾಮಾನ್ಯ. ಆದರೆ, 1985ರ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದವರು ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 301 ಮಂದಿ. ಇವರಲ್ಲಿ 49 ಮಂದಿ ಮಹಿಳೆಯರೂ ಇದ್ದರು. ಬಹುಶಃ ಆ ಕ್ಷೇತ್ರದ ಮತದಾರರಿಗೆ ತಂತಮ್ಮ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಮತ ಒತ್ತಬೇಕಾದರೆ ಸಾಕುಸಾಕಾಗಿರಬೇಕು. ಆದರೆ, ಈ ಪರಿಸ್ಥಿತಿಗೆ ವಿರುದ್ಧವೆನ್ನುವಂತೆ, ಕರ್ನಾಟಕದಲ್ಲಿ ಮೂರು ಬಾರಿ – 1957, 62 ಮತ್ತು 67ರಲ್ಲಿ ಅವಿರೋಧ ಆಯ್ಕೆಗಳೂ ಆಗಿವೆ. 1957ರ ಚುನಾವಣೆಯಲ್ಲಿ ಆರು ಮಂದಿ ಹುರಿಯಾಳುಗಳು ತಮ್ಮ ಕ್ಷೇತ್ರದಲ್ಲಿ ಬೇರಾರೂ ಪ್ರತಿಸ್ಪರ್ಧಿಗಳಿಲ್ಲದೆ ಅರೋಧವಾಗಿ ಆಯ್ಕೆಯಾಗಿಬಿಟ್ಟಿದ್ದರು! ಹಾಗೆಯೇ 62 ಮತ್ತು 67ರ ಚುನಾವಣೆಗಳಲ್ಲಿ ತಲಾ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿ ಅಸೆಂಬ್ಲಿ ಪ್ರವೇಶಿಸಿದ್ದರು. ಇದರಲ್ಲಿ 67ರ ಚುನಾವಣೆಯನ್ನು ನಾವು ನೆನಪಿಸಿಕೊಳ್ಳ ಬೇಕು. ಯಾಕೆಂದರೆ, ಆ ವರ್ಷ ಎಸ್‌. ನಿಜಲಿಂಗಪ್ಪನವರಿಗೆ ಮಾಡು ಇಲ್ಲವೇ ಮಡಿ ಎಂಬಂಥ ರಾಜಕೀಯ ಪರಿಸ್ಥಿತಿ ಉದ್ಭವವಾಗಿಬಿಟ್ಟಿತ್ತು. ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದ ಅವರನ್ನು ಹೇಗಾದರೂ ಸೋಲಿಸಲೇಬೇಕೆಂದು ವಿರುದ್ಧಶಕ್ತಿಗಳು ಒಟ್ಟಾಗಿಬಿಟ್ಟಿದ್ದವು. ಆ ವರ್ಷದ ಚುನಾವಣೆಯಲ್ಲಿ ನಿಜಲಿಂಗಪ್ಪ ಸೋತರೆ ರಾಜಕೀಯ ವಾಗಿ ಅವರ ಜೈತ್ರಯಾತ್ರೆ ಕೊನೆಗೊಳ್ಳುತ್ತದೆ, ಅವರ ರಾಜಕೀಯ ಭವಿಷ್ಯ ಮಂಕಾಗುತ್ತದೆ ಎಂದೇ ಭಾವಿಸಲಾಗಿತ್ತು. ಸ್ವಕ್ಷೇತ್ರವಾದ ಬಾಗಲಕೋಟೆಯಲ್ಲಿ ವಿರೋಧಿಗಳ ಅಲೆ ಜೋರಾಗಿದ್ದುದರಿಂದ ಸೇಫ್ ಆದ ಕ್ಷೇತ್ರ ಯಾವುದು ಎಂದು ನಿಜಲಿಂಗಪ್ಪ ತಲಾಶೆಗೆ ತೊಡಗಿದ್ದರು. ಆಗ ಅವರ ಕಣ್ಣಿಗೆ ಬಿದ್ದದ್ದು ಶಿಗ್ಗಾಂವ. ಶಿಗ್ಗಾಂವದಲ್ಲಿ ಆಗ ಇನ್ನೂ ನವಾಬರ ಮಾತು ನಡೆಯುತ್ತಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಇದ್ದರೂ ನವಾಬರಿಗೆ ಆ ಪ್ರಾಂತ್ಯದಲ್ಲಿ ದೊಡ್ಡ ಗೌರವ ಇತ್ತು. ನವಾಬರ ಆಸ್ಥಾನದಲ್ಲಿ ಒಂದು ರಾಜಿಪಂಚಾಯಿತಿ ನಡೆಯಿತು. ನಿಜಲಿಂಗಪ್ಪ ಅವರ ವಿರುದ್ಧ ಚುನಾವಣಾ ಕಣಕ್ಕಿಳಿದಿದ್ದ 13 ಮಂದಿ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಪುಸಲಾಯಿಸಲಾಯಿತು. ಆ ಹದಿಮೂರು ಮಂದಿ ಆಗ ತಮ್ಮ ಬಿಸುಪು ತೋರಿಸಬೇಕೆಂದು, ಸವಣೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡುವುದಾದರೆ ತಮ್ಮ ಅಭ್ಯರ್ಥಿತನವನ್ನು ಕೈಬಿಡುತ್ತೇವೆಂದು ಆಮಿಷ ಒಡ್ಡಿದರು. ಅದಕ್ಕೆ ನಿಜಲಿಂಗಪ್ಪ “ಹೂಂ’ ಅಂದದ್ದೂ ಆಯಿತು. ಅಂತೂ ಇಂತೂ ನಿಜಲಿಂಗಪ್ಪನವರಿಗೆ ಎದುರಾಗಿದ್ದ ದೊಡ್ಡದೊಂದು ಆತಂಕ ಮಂಜಿನಂತೆ ಕರಗಿಹೋಯಿತು. ಅವರು ಕೊನೆಗೆ ಆ ವರ್ಷ ಶಿಗ್ಗಾಂವದಿಂದ ಅವಿರೋಧವಾಗಿ ಆಯ್ಕೆಯಾಗಿ ಬಂದರು. ಮತ್ತೆ ಅಧಿಕಾರಕ್ಕೇರಿ, ಮುಖ್ಯಮಂತ್ರಿಯಾಗಿ ಮುಂದುವರೆದರು; ಕೊಟ್ಟ ಮಾತಿನಂತೆ ಸವಣೂರನ್ನು ತಾಲೂಕಾಗಿ ಘೋಷಣೆ ಮಾಡಿದರು!

ಚುನಾವಣೆ ಎಂದರೆ ಇಂಥ ನೂರಾರು ಸಮೀಕರಣಗಳ, ಗೋಜಲು ಗೊಂದಲಗಳ, ಯಾರಿಗೂ ಸುಲಭಕ್ಕೆ ಅರ್ಥವಾಗದ ಸಾಪೇಕ್ಷ ಸಿದ್ಧಾಂತಗಳ ಗುತ್ಛ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲ ತಂತ್ರಕ್ಕೂ ಮಾಫಿಯಿದೆ ಎಂಬ ಮಾತಿದೆ. ಆ ಪಟ್ಟಿಗೆ ಧಾರಾಳವಾಗಿ ಚುನಾವಣೆಯನ್ನೂ ಸೇರಿಸಿಕೊಳ್ಳಬಹುದು! ಎಚ್‌.ಎಲ್‌. ಮೆಂಕನ್‌ ಹೇಳಿಬಿಟ್ಟಿದ್ದಾನೆ: Every election is a sort of advance auction sale of stolen goods.

ಎ. ಕೆ. ಬ್ರಹ್ಮಪುತ್ರ 

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.