Story: ತಳವಿಲ್ಲದ ಟ್ರಂಕು
Team Udayavani, Nov 19, 2023, 4:33 PM IST
ಎರಡು ಮೂರು ವರ್ಷಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಗಂಡು-ಹೆಣ್ಣು ದೇವರುಗಳೆಲ್ಲ ಮುಗಿದವು. ಗಿಣಿ ಶಾಸ್ತ್ರದವರು, ಅಲೆ ದೇವರುಗಳೂ ಮುಗಿದವು. ಜ್ಯೋತಿಷಿಗಳು ಹೇಳಿದಷ್ಟು ದುಡ್ಡು ಕೊಟ್ಟು ಪೂಜೆ ಪುನಸ್ಕಾರಗಳನ್ನು ಮಾಡಿದ್ದಾಯಿತು. “ಮಗಳ ಕುತ್ತಿಗೀಗೆ ಮೂರ್ ಗಂಟ್ ಹಾಕೂ ಜೋಕುಮಾರ ಎಲ್ಲಿ ಕುಂತೀಯೋ ನಮ್ಮಪ್ಪಾ?’ ಎಂದು ನಿತ್ಯ ನಿಟ್ಟುಸಿರು ಹಾಕುವ ಶಾಂತಾ ವಾರಕ್ಕೆ ನಾಕು ದಿನ ಒಪ್ಪತ್ತು ಮಾಡುತ್ತ ಸಣ್ಣಗಾಗುತ್ತಲೇ ಇದ್ದಾಳೆ. ಶಾರಿಯದೊಂದು ಮುಗಿದರೆ ಸರಸ್ವತಿಯದು ಹೇಗೋ ಆಗುತ್ತದೆ. ಅವಳೂ ಇಪ್ಪತೈದಕ್ಕೆ ಬಂದು ನಿಂತಿದ್ದಾಳೆ. ಮೂವತ್ತನ್ನು ಮುಟ್ಟಲು ತಯಾರಾಗಿರುವ ಶಾರಿಯ ಮದುವೆಯದ್ದೇ ಕಗ್ಗಂಟಾಗಿ ಕುಳಿತಿದೆ ಗಂಡ-ಹೆಂಡತಿಗೂ. ಮಗಳ ಮದುವೆಯ ಚಿಂತೆಯೊಡನೆ ರಾತ್ರಿ ಕಳೆದು ಅದೇ ಚಿಂತೆಯೊಂದಿಗೇ ಬೆಳಗು ಹರಿಯುತ್ತಿತ್ತು ಇಬ್ಬರಿಗೂ.
ಶಾರಿಯ ಮದುವೆಗೆ ಅಡ್ಡವಾಗಿರೋದು ಸರ್ಪ ದೋಷ. ಆ ದೋಷ ಕಳೆದರೆ ಮದುವೆಯ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಸುಬ್ರಹ್ಮಣ್ಯನಿಗೊಂದು ಪೂಜೆ ಮಾಡಿಸಿ ಬಿಡಿ ಎಂದು ಜ್ಯೋತಿಷಿಯೊಬ್ಬರು ಸಲಹೆ ಕೊಟ್ಟಿದ್ದರು. ತಾನೆಂದೂ ಹಾವನ್ನು ಹಿಂಸಿಸಿದ ನೆನಪಿಲ್ಲ. ಕೊಲ್ಲುವುದಂತೂ ದೂರದ ಮಾತು. ಎಂದಾಗ ಈ ಜನ್ಮದ ಪಾಪ ಪುಣ್ಯಗಳಷ್ಟೇ ನಮ್ಮನ್ನು ಆಳುವುದಿಲ್ಲ. ಏಳೇಳು ಜನ್ಮದುದ್ದಕ್ಕೂ ನಾವು ಮಾಡಿದ ಪಾಪಗಳು ಸುತ್ತಿಕೊಂಡು ಕಾಡುತ್ತವೆ ಎಂಬ ಜ್ಯೋತಿಷಿಗಳ ಮಾತಿಗೆ ಯಾಕಿರಬಾರದು ಎಂದುಕೊಂಡೋ, ಪೂಜೆ ಮಾಡಿಸದೇ ನಿರಾಶರಾಗುವುದಕ್ಕಿಂತ, ಮಾಡಿಸಿಯೂ ನಿರಾಶರಾಗುವುದೇ ಒಳ್ಳೆಯದೆನ್ನಿಸಿತ್ತು. ಯಾರಿಗೆ ಗೊತ್ತು? ಯಾವ ದೇವರು ಶಾರಿಯ ಮದುವೆಗೆ ಅಸ್ತು ಎನ್ನುವನೋ, ಯಾವ ಪೂಜೆಯು ಆಕೆಗೆ ಬಾಸಿಂಗ ಬಲವನ್ನು ತರುವುದೋ ಎಂದುಕೊಂಡು ಧರ್ಮಸ್ಥಳದ ಬಸ್ಸನ್ನು ಏರಿದ್ದರು ಸುರೇಶ ಮತ್ತು ಶಾಂತಾ ಗಂಡ-ಹೆಂಡತಿ.
ನಿತ್ಯ ಬೆಳಗಿನ ವಾಯು ವಿಹಾರಕ್ಕೆ ಜೊತೆಯಾಗುವ ದೇಸಾಯಿ ಮಾಸ್ತ್ರು ಇಂದು ಜೊತೆಗಿರದೇ ಬೆಳಗು ನೀರಸ ಎನ್ನಿಸತೊಡಗಿತ್ತು ಸುರೇಶನಿಗೆ. ಸ್ಟೇಡಿಯಮ್ಮಿನ ಒಳಗೆ ಮೂರು ಸುತ್ತು ನಡೆದಾಗ ಸುಸ್ತು ಆವರಿಸತೊಡಗಿತ್ತು. ಅಲ್ಲಿಯೇ ಇದ್ದ ಕಟ್ಟೆಯೊಂದರ ಮೇಲೆ ಕುಳಿತು ಮೋಡದ ಮರೆಯಿಂದ ಹುಟ್ಟುತ್ತಿದ್ದ ಕಿತ್ತಳೆ ಹಣ್ಣಿನಂತಹ ಸೂರ್ಯನನ್ನು ಕಣ್ತುಂಬಿಕೊಳ್ಳತೊಡಗಿದ್ದ ಸುರೇಶ. ಪೋನು ರಿಂಗಣಿಸತೊಡಗಿದಾಗ, “ಸರ್, ಇವತ್ತರ ಧರ್ಮಸ್ಥಳದಿಂದ ಬಂದೀರಿ ಇಲ್ಲೋ? ನಿನ್ನೆ ಸಾಹೇಬರು ಕಣ್ ಕೆಂಪ್ ಮಾಡಿಕೊಂಡು ಆಫೀಸ್ ಕೆಲಸಾ ಪೆಂಡಿಂಗ್ ಉಳ್ಯಾಕತ್ತಾವ. ಆ ಸುರೇಶ್ ಮ್ಯಾಲಿಂದ್ ಮ್ಯಾಲೆ ರಜಾ ತುಗೊಂಡರ ಹೆಂಗ? ಅವರಿಗೊಂದ್ ನೋಟೀಸ್ ಟೈಪ್ ಮಾಡರಿ. ಅಂತ ನನಗ ಹೇಳ್ಯರ್ರಿ ಸರ್’ ಎಂದು ಚಿದಾನಂದ ಒಂದೇ ಉಸಿರಿನಲ್ಲಿ ಹೇಳಿದಾಗ ಸುರೇಶ, “ಬರತೇನೋ ಚಿದಾನಂದ ಇವತ್ತ. ಏನ್ ಮಾಡೂದು. ನಮ್ ಶಾರೀ ಮದವಿ ಆಗೂತನಾ ಈ ನೋಟಿಸ್‌ಗಳು ನನಗ ಲವ್‌ಲೆಟರ್ ಇದ್ದಂಗ್. ಎಷ್ಟ್ ಬರತಾವ ಬರಲಿ ಬಿಡು. ಒಂದ್ ದೇವ್ರೂ ಉಳೀಲಿಲ್ಲ. ಇನ್ ಯಾರ್ ಎಲ್ಲಿ ಹೋಗ್ ಅಂತಾರೋ ಅಲ್ಲಿ ಹೋಗೂದು’ ಎಂದು ಸುರೇಶ ದೊಡ್ಡದೊಂದು ನಿಟ್ಟುಸಿರು ಬಿಟ್ಟು ಫೋನ್ ಕಟ್ ಮಾಡಿದ್ದ.
“ಎಲ್ಲೋ ಹುಡುಕಿದೆ ಇಲ್ಲದ ದೇವರ. ಕಲ್ಲು ಮಣ್ಣಿನ ಗುಡಿಯೊಳಗೆ…’ ಕಣ್ ಮುಂದಿರೂದನ್ನ ಮನುಷ್ಯ ಕಂಡೂ ಕಾಣದಂಗ್ ಇರತಾನ. ಕಾಣದ್ದ ದೇನರ್ ತುಂಬಕೊಳ್ಳಾಕ್ ಕಂಡ್ ಕಂಡಲ್ಲಿ ಅಲದಾಡ್ತಾನ. ಈ ಚಂದನ್ನ ಬೆಳಗನ್ನ, ಅರಳಿ ನಿಂತ ಹೂವನ್ನ, ನಿತ್ಯ ಉದಯಿಸೋ ಈ ಸೂರ್ಯನ್ನ ಕಾಣೂ ಭಾಗ್ಯಾ ಕರುಣಿಸಿರೋ ಹೆತ್ತವರನ್ನ ಮರತ ಬಿಡತೇವಿ. ಹಿರಿಯರ ನಿಟ್ಟುಸರು ಶಾಪ ಇದ್ದಂಗ. “ನಿನ್ನ ಹೆತ್ತ ತಂದಿ-ತಾಯಿ ಸೇವಾ ಮಾಡೋ ತಮ್ಮಾ. ಎಲ್ಲಾ ಒಳ್ಳೇದ್ ಆಕ್ಕತ್ತಿ’ ಎನ್ನುತ್ತ ತನ್ನ ಪಕ್ಕದಲ್ಲಿಯೇ ಕುಳಿತಿದ್ದ ವಯೋವೃದ್ಧರೊಬ್ಬರು ಕೋಲೂರಿಕೊಂಡು ಅಲ್ಲಿಂದ ಎದ್ದು ಹೋದರು. ಆ ವೃದ್ಧರ ಮಾತು ಕಿವಿಯಲ್ಲಿ ರಿಂಗಣಿಸತೊಡಗಿತು.
ಅಪ್ಪ-ಅವ್ವ ಹೋಗಿ ಆಗಲೇ ಹತ್ತು ವರ್ಷ ಕಳೆಯುತ್ತ ಬಂತು. ಸದಾ ದನ-ಕರು, ಹೊಲ ಎಂದು ಕೆಲಸದಲ್ಲಿಯೇ ಮುಳುಗಿ ಹೋಗಿದ್ದ ಅಪ್ಪ ನನಗೆಂದೂ ಆಪ್ತನಾಗಲೇ ಇಲ್ಲ. ಅವನು ಹೇಳಿದ್ದಕ್ಕೆಲ್ಲ ಗೌಲೆತ್ತಿನಂತೆ ಕತ್ತು ಆಡಿಸುತ್ತಿದ್ದ ಅವ್ವನ ಬಗ್ಗೆ ನಾನು ಅಸಡ್ಡೆಯನ್ನು ಬೆಳೆಸಿಕೊಂಡದ್ದೇ ಹೆಚ್ಚು. ದನ-ಕರು, ಹೊಲ-ಮನೆ ನನಗೆಂದೂ ಖುಷಿ ಕೊಡುವ ಸಂಗತಿಗಳಾಗಲೇ ಇಲ್ಲ. ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಹಳ್ಳಿಯೊಂದಿಗಿನ ಬಂಧವನ್ನು ಕಡಿದುಕೊಂಡು ಬಿಟ್ಟಿದ್ದೆ. “ನೀನು ನೌಕರಿ ಹತ್ತಿದ ಮ್ಯಾಲೆ ನಮ್ಮನ್ನ, ಈ ಹಳ್ಳಿನ್ನ ಮರತ ಬಿಟ್ಟಿ’ ಎಂದು ಅವ್ವ ಮುಸು ಮುಸು ಅಳುತ್ತಿದ್ದರೆ, ನನ್ನ ಸಿಟ್ಟು ನೆತ್ತಿಗೇರಿ, “ಸಾಕ್ ನಿಲ್ಲಸಬೇ. ಬಂದರೂ ಅಳತೀ. ಬರದಿದ್ದರೂ ಅಳತೀ. ನಾ ಮನೀಗಿ ಬಂದಿದ್ದ ತಪ್ ಆತು’ ಎಂದು ಹೊರ ನಡೆದು ಗೆಳೆಯರ ಗುಂಪಲ್ಲಿ ಕಳೆದು ಹೋದದ್ದೇ ಹೆಚ್ಚು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ-ಅವ್ವನನ್ನು ಸಿಡಿಲೊಂದು ಬಲಿ ತೆಗೆದುಕೊಂಡಾಗ, ಸತ್ತ ಸುದ್ದಿ ತಿಳಿದು ಅವರನ್ನು ಮಣ್ಣಲ್ಲಿಟ್ಟು, ಅವರ ಆಸ್ತಿ ಆಗಿದ್ದ ಎರಡು ಹಳೆಯ ಟ್ರಂಕು, ನಾಲ್ಕಾರು ಪಾತ್ರೆ ಪಡಗಗಳನ್ನು ತಂದು ಅಟ್ಟದ ಮೇಲೆ ಇಟ್ಟು ಇಳಿದದ್ದೇ ಕೊನೆ. ಮತ್ತೆಂದೂ ಅಟ್ಟವನ್ನೇರಿಲ್ಲ.
“ಹಿರಿಯರ ನಿಟ್ಟುಸುರು ಶಾಪ ಇದ್ದಂಗ್…’ ಎಂಬ ಆ ಹಿರಿಯರ ಮಾತೇ ಈಟಿಯಂತೆ ದಾರಿಯುದ್ದಕ್ಕೂ ಇರಿಯುತ್ತಿದೆ. ಮನೆಗೆ ಬಂದವನೆ, ಅಟ್ಟಕ್ಕೆ ಹೊಂದಿಕೊಂಡಿದ್ದ ಗೋಡೆಗೆ ನಿಚ್ಚಣಿಕೆಯೊಂದನ್ನು ಒರಗಿಸಿ ಅಟ್ಟವನ್ನೇರಲು ಶುರು ಮಾಡಿದ. ಅಟ್ಟವೇರುತ್ತಿದ್ದಂತೆಯೇ, ಅಲ್ಲಿನ ಗಂವ್ ಎನ್ನುವ ಕತ್ತಲು, ಮುಖಕ್ಕೆ ಮೆತ್ತಿದ ಅಂಟು ಅಂಟಾದ ಜೇಡನ ಬಲೆ, ಮೂಗಿಗೆ ಬಡಿದ ಮುಗ್ಗಲು ವಾಸನೆಯಿಂದ ಹೊಟ್ಟೆ ತೊಳೆಸ ತೊಡಗಿತು. ಇಲಿ, ಹಲ್ಲಿ, ಜಿರಳೆಗಳ ಓಡಾಟದ ಸರಪರ ಸದ್ದು ಗಾಬರಿ ಹುಟ್ಟಿಸಿತು. ಹಳ್ಳಿಯಿಂದ ತಂದಿಟ್ಟ ಟ್ರಂಕುಗಳನ್ನು ಯಾವ ಮೂಲೆಯಲ್ಲಿಟ್ಟಿರಬಹುದೆಂಬ ಅಂದಾಜು ಸಿಗಲಿಲ್ಲ. ಶಾರಿಯನ್ನು ಕೂಗಿ, “ಶಾರದಾ ಒಂದೀಟ್ ಬ್ಯಾಟರಿ ಕೊಡು ಇಲ್ಲೆ’ ಎಂದು ಕೂಗಿದ.
ಬ್ಯಾಟರಿಯ ಬೆಳಕಿನಲ್ಲಿ ಹಳೆಯ ಟ್ರಂಕು ಗೋಚರಿಸಿತ್ತು. ಕೈ ಚಾಚಿ ಅದನ್ನು ಮುಂದೆ ಎಳೆದುಕೊಂಡು ಟ್ರಂಕಿನ ಹಿಡಿಕೆಯನ್ನು ಹಿಡಿದೆಳೆದ. ಅದರ ಹಿಡಿಕೆ ಕಿತ್ತು ಕೈಗೆ ಬಂದಾಗ, ಎರಡೂ ಕೈಯಿಂದ ಟ್ರಂಕನ್ನು ಎತ್ತಿಕೊಂಡು ನಿಚ್ಚಣಿಕೆಯಿಂದ ಇಳಿಯತೊಡಗಿದ. ತಳದಲ್ಲಿ ತುಕ್ಕು ಹಿಡಿದ ಟ್ರಂಕು ತಳವಿಲ್ಲದ ಗಡಿಗೆಯಂತಾಗಿತ್ತು. ಅದರಿಂದ ಒಂದೊಂದೇ ಸಾಮಾನು ನೆಲಕ್ಕೆ ಬೀಳುತ್ತಿದ್ದಂತೆಯೇ, ಅಡಿಗೆ ಮನೆಯಿಂದ ಧಾವಿಸಿ ಬಂದ ಶಾಂತಾ “ಏನ್ರಿ ಅದು ಸಪ್ಪಳಾ? ಏನ್ ಹುಡಕಾಕತ್ತೀರಿ ಅಲ್ಲೇ?’ ಎಂದು ನೋಡುತ್ತ ನಿಂತಳು. ನಿಚ್ಚಣಿಕೆಯಿಂದ ಇಳಿದಾಗ ಸುರೇಶನ ಕೈಯ್ಯಲ್ಲಿ ಕೇವಲ ಖಾಲಿ ಟ್ರಂಕು ಉಳಿದಿತ್ತು. ನೆಲದ ಮೇಲೆ ಬಿದ್ದಿದ್ದ ಸರಂಜಾಮುಗಳಲ್ಲಿ ಅಪ್ಪ-ಅವ್ವನ ಫೋಟೋಗಳನ್ನು ಹುಡುಕತೊಡಗಿದ. ಗೆದ್ದಲು ತಿಂದ ಫ್ರೇಮು, ಅದರಲ್ಲಿನ ಇಲಿ ತಿಂದ ರಟ್ಟು, ರಟ್ಟಿಗೆ ಅಲ್ಲಲ್ಲಿ ಅಂಟಿಕೊಂಡಿದ್ದ ಅಪ್ಪ-ಅವ್ವನ ಭಾವಚಿತ್ರದಲ್ಲಿ ಅಳಿದುಳಿದ ಪಳಿಯುಳಿಕೆಗಳಾದ ಬಾಯಿ, ಮೂಗುಗಳಿಲ್ಲದ ಮುಖ. ಅಪ್ಪನ ಕಣ್ಣುಗಳು ಇಲಿಯ ಹಲ್ಲಿಗೆ ಆಹಾರವಾಗಿದ್ದರೆ, ಅವ್ವನ ಕಣ್ಣುಗಳು ಸುಸ್ಥಿತಿಯಲ್ಲಿದ್ದವು. ಸುರೇಶ ಆ ಭಾವಚಿತ್ರವನ್ನು ತದೇಕ ಚಿತ್ತದಿಂದ ಗಮನಿಸುತ್ತಿದ್ದರೆ, ಅವ್ವನ ಕಣ್ಣುಗಳಲ್ಲಿ ಮಡುಗಟ್ಟಿದ ದುಃಖವಿತ್ತು. “ನೀನು ನಮ್ಮನ್ನು ಮರೆತೇ ಬಿಟ್ಟೆ ಸುರೇಶಾ…’ ಎಂದು ಅವ್ವ ಹೇಳುತ್ತಿದ್ದಾಳೇನೋ ಎನ್ನಿಸತೊಡಗಿ ಸುರೇಶನ ಕಣ್ಣುಗಳು ತುಂಬಿ ನಿಂತವು.
-ಗೌರಿ ಚಂದ್ರಕೇಸರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.