ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ !
Team Udayavani, Apr 9, 2017, 3:50 AM IST
ಪ್ರಾಜೆಕ್ಟ್ ಸಬ್‌ಮಿಷನ್ನಿಗೆ ಅಂದೇ ಕೊನೆಯ ಗಡುವಾದ್ದರಿಂದ, ಕಂಪ್ಯೂಟರ್ ಕೀಲಿಮಣೆಗಳನ್ನು ಟಕಟಕಾಯಿಸಿ ಮಲಗುವ ಹೊತ್ತಿಗೆ ಅದಾಗಲೇ ನಡುರಾತ್ರೆ ಕಳೆದು ಎರಡು ತಾಸು. ಬಲವಂತವಾಗಿ ಎಳೆದು ತಂದ ನಿ¨ªೆಯನ್ನು ಪೂರ್ಣವಾಗಿ ಮುಗಿಸುವ ಮೊದಲೇ ಅಲಾರಾಂ ತಲೆಗೊಂದು ಹೊಡೆಯುವ ಹೊತ್ತು. ಉರಿಯುತ್ತಿರುವ ಕಣ್ಣುಗಳನ್ನು ತೆರೆಯುವ ಮನಸ್ಸಿಲ್ಲದಿದ್ದರೂ, ಬೆಳಗ್ಗಿನ ಕೆಲಸವನ್ನಂತೂ ಪೂರೈಸಲೇಬೇಕು. ಮನೆ ಯಜಮಾನನೆನಿಸಿಕೊಂಡ ಪತಿ ಅದಾಗಲೇ ಹೊರಟು ಆಫೀಸಿಗೆ ಹೋಗಿಯಾಗಿತ್ತು. ಸೈಲೆಂಟ್‌ನಲ್ಲಿಟ್ಟ ಮೊಬೈಲನ್ನು ಜೀವಂತಗೊಳಿಸಿ, ಸಂದೇಶಗಳ ಕಡೆಗೊಮ್ಮೆ ಕಣ್ಣು ಹಾಯಿಸಿದರೆ ಗಂಡನ ಸಂದೇಶವೊಂದು ಅಣಕಿಸುತ್ತಿತ್ತು “ಮೀಟಿಂಗ್!’. ಇನ್ನು, ತಾನು ಆಟೋರಿಕ್ಷಾಕ್ಕೆ ಕಾದು ಆಫೀಸು ಸೇರುವುದರೊಳಗಾಗಿ ಬಾಸಿನ ಸ್ವಾಗತಗೀತೆ ಕಾದಿರುತ್ತದೆ ಎಂಬ ಎಚ್ಚರಿಕೆಯ ಗಂಟೆ ಮನಸ್ಸಿನಲ್ಲಿ ಮೊಳಗಿತು. ಕೂಡಲೇ ಕಾರ್ಯಪ್ರವೃತ್ತಳಾದ ಮಾನಸಿ, ಮಂಚ ಬಿಟ್ಟೆದ್ದಳು. ಗುಲಾಬಿ ಬಣ್ಣದ ಟೆಡ್ಡಿಯನ್ನ ಅಪ್ಪಿಕೊಂಡು ಮಲಗಿದ್ದ ಮುದ್ದು ಮಗಳು ಅಹಾನಿಯನ್ನೊಮ್ಮೆ ಮೆದುವಾಗಿ ಸ್ಪರ್ಶಿಸಿ, ಹೊದಿಕೆ ಸರಿಪಡಿಸಿ ಅಡುಗೆ ಮನೆಯತ್ತ ನಡೆದಳು. ಅಲ್ಲಿನ ದೃಶ್ಯ ಕಂಡು ತಲೆಸುತ್ತು ಬಂದಂತೆನಿಸಿತು. ರಾತ್ರಿ ಮಿಕ್ಕುಳಿದ ಅನ್ನದ ಪಾತ್ರೆ ಹಾಗೆಯೇ ತೆರೆದಿತ್ತು. ಊಟದ ತಟ್ಟೆಗಳು, ಪಾತ್ರೆ-ಲೋಟಗಳು ಬೇಸಿನ್‌ನಿಂದ ಹೊರಬರಲು ಹವಣಿಸುತ್ತಿದ್ದವು. ಬೆಳಗ್ಗಿನ ಉಪಹಾರಕ್ಕೆ ಬ್ರೆಡ್-ಆಮ್ಲೆಟ್ ಮಾಡಿದ ಕುರುಹನ್ನು ಗಂಡ ದೀಪಕ್ ಹಾಗೆಯೇ ಉಳಿಸಿದ್ದ. ಕಸದ ಬುಟ್ಟಿಯು ಹೊಟ್ಟೆ ಬಿರಿಯುವಂತೆ ತಿಂದು ಉದಾಸೀನತೆಯಿಂದ ಹೊರಳಾಡುತ್ತಿತ್ತು. ಪಟಪಟನೇ ಸಿಡಿಯುತ್ತಿದ್ದ ತಲೆಯನ್ನು ನಿಯಂತ್ರಣಕ್ಕೆ ತರಲು ಟೀ ತಯಾರಿಸಲು ತಂಗಳ ಪೆಟ್ಟಿಗೆ ತೆರೆದರೆ, ಹೆಸರಿಗೆ ತಕ್ಕಂತೆ ಮಿಕ್ಕುಳಿದ ಎಲ್ಲಾ ಆಹಾರ ಪದಾರ್ಥಗಳೂ ಅದರಲ್ಲಿದ್ದವು. ಹಾಲಿನ ಪ್ಯಾಕೇಟ್‌ಗಾಗಿ ತಡಕಾಡಿದರೆ ಅದರ ಸುಳಿವಿಲ್ಲ. ಇನ್ನು, ಅಂಗಡಿಯಿಂದ ಹಾಲನ್ನ ತಂದು, ಕಾಸಿ, ಉಪಹಾರ ತಯಾರಿಸಿ, ಮಗಳನ್ನೆಬ್ಬಿಸಿ ಆಕೆಯ ಹಠವನ್ನೆಲ್ಲಾ ಸಮಾಧಾನಿಸಿ, ಆಫೀಸಿಗೆ ತಲುಪಿ ಪ್ರಾಜೆಕ್ಟಿನ ಡೆಡ್‌ಲೈನಿಗೆ ಡೆಡ್ ಆಗುವುದಂತೂ ಖಚಿತ. ಗಂಡನಾದರೂ ಸ್ವಲ್ಪ ಸಹಕರಿಸಬಾರದೇ ಮನೆಕೆಲಸಗಳಲ್ಲಿ. ತಾನೂ ಕೂಡಾ ಅವನಷ್ಟೇ “ವರ್ಕ್ ಪ್ರಶರ್’ಗಳನ್ನ ಅನುಭವಿಸಿ ಮೀಟಿಂಗ್‌ಗಳನ್ನು ಅಟೆಂಡ್ ಆಗೋಲ್ಲವೇ, ಎಂಬುದು ಮಾನಸಿಯ ಅಸಮಾಧಾನ.
ಕೆಲವೇ ತಿಂಗಳುಗಳ ಹಿಂದೆ ಹೀಗಿರಲಿಲ್ಲ ಮನೆ ಪರಿಸ್ಥಿತಿ. ಮಾನಸಿಗಂತೂ ಕೇವಲ ಆಫೀಸ್, ಪ್ರಾಜೆಕ್ಟ್, ಮೀಟಿಂಗ್ ಎಂದು ಜಪಿಸುತ್ತಿದ್ದರೆ ಸಾಕಿತ್ತು. ಮಗಳು ಅಹಾನಿಯ ಪ್ಲೇ-ಸ್ಕೂಲ್‌ಗಳ ಕಡೆಗಂತೂ ಗಮನಕೊಡದಿದ್ದರೂ ನಡೆಯುತ್ತಿತ್ತು. ಚೆನ್ನಾಗೇ ಉಂಡು-ತಿಂದ ಮಗುವಿನಂತೆ ದುಂಡಗಿನ ಕೆಂಪುಗುಲಾಬಿಯಂತೆ ಅರಳಿ, ತನ್ನ ಚಿಂತೆಗಳನ್ನ ದೂರವಾಗಿರಿಸಿದ್ದಳು. ಗಂಡ ದೀಪಕ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅವನಾಯಿತು, ಅವನ ಕೆಲಸವಾಯಿತು ಎಂದು ಬಿಟ್ಟಿದ್ದಳು. ಹಾಗಾದರೆ, ಈ ಎರಡು ತಿಂಗಳಲ್ಲಾದ ಬದಲಾವಣೇಗಳೇನು? ಮಾನಸಿಯ ಅಸಮಾಧಾನಗಳಿಗೆ ಕಾರಣಗಳಾದರೂ ಏನು?
.
ದೀಪಕ್, ಮಾನಸಿಯರದು ಪ್ರೇಮವಿವಾಹ. ದೀಪಕ್‌ನ ಮನೆಯಲ್ಲಿ ಅರೆಮನಸ್ಸಿನಿಂದ ಒಪ್ಪಿಗೆಯಿತ್ತಿದ್ದರೂ, ಮಾನಸಿಯು ತವರುಮನೆ ಸಂಬಂಧ ಕಡಿದು ಅದಾಗಲೇ ಆರು ವರ್ಷ. ದಿನ-ನಿತ್ಯದ ಕೆಲಸ ಕಾರ್ಯಗಳ ಧಾವಂತದಲ್ಲಿ ಮಾನಸಿಯ ಗಮನಕ್ಕೆ ಇದು ಬರಲೇ ಇಲ್ಲ. ಗಂಡ-ಹೆಂಡತಿ ಇಬ್ಬರೂ ದುಡಿದು ಸಂಪಾದಿಸುವ ಅನಿವಾರ್ಯತೆ. ಕಾಲೇಜು-ಫೀಸು ಎಂದು ತಿಂಗಳ ಮೊದಲಿಗೇ ಬರುವ ಮಾನಸಿಯ ನಾದಿನಿ, ಮೈದುನಂದಿರು. ಹಿರಿಮಗನಾದ ದೀಪಕ್ ಬೇರೆಯಾಗಿದ್ದರೂ ರಕ್ತಸಂಬಂಧ ಕಡಿಯುತ್ತದೆಯೇ? ಮಲತಾಯಿಯ ಆರೈಕೆಯಲ್ಲಿ ಬೆಳೆದ ದೀಪಕ್‌ಗೆ ಅಪ್ಪನ ಸಾಂತ್ವನವೊಂದೇ ಆಧಾರ. ಇನ್ನು, ತನ್ನ ಸ್ಟೇಟಸ್ಸಿಗೆ ತಕ್ಕುದಾದ ಮನೆ, ಸಾಮಗ್ರಿಗಳನ್ನ ಹೊಂದಿಸುವುದರಲ್ಲೇ ಮಾನಸಿಯ ಸಂಪಾದನೆ ಸರಿಹೊಂದುತ್ತಿತ್ತು. ದೀಪಕ್ ಮಲಮಗನಾದ್ದರಿಂದ ಅತ್ತೆಯ ಕಾಟವಿರದೇ ಮಾನಸಿ ತನ್ನ ಸ್ವಂತಗೂಡಲ್ಲಿ ಉಸಿರಾಡುತ್ತಿದ್ದಳು. ಈ ಸುಖೀ ದಾಂಪತ್ಯದ ಮೂರುವರ್ಷಗಳಲ್ಲಿ ಅರಳಿದವಳೇ, ಅಹಾನಿ. ಮುದ್ದುಕೂಸು.
ಅಹಾನಿ ಹುಟ್ಟುವ ಮೊದಲು ಇಬ್ಬರೇ ಇರುವ ಮನೆಯ ಕೆಲಸ, ಪಾತ್ರೆ, ಬಟ್ಟೆಗಳನ್ನ ಆರಾಮವಾಗಿ ಗಂಡ-ಹೆಂಡಿರು ಪೂರೈಸುತ್ತಿದ್ದರೂ, ದೀಪಕ್‌ಗೆ ಪ್ರಮೋಷನ್ ಆದ ಮೇಲಂತೂ ಆತ ಕೈಗೇ ಸಿಕ್ಕುತ್ತಿಲ್ಲ. ಇನ್ನು, ಬಸುರಿಯಾದ ಮಾನಸಿಯ ಆರೈಕೆಗೆ ಯಾರೂ ಇರಲಿಲ್ಲ. ಸಂಪಾದನೆಯನ್ನು ಬಿಡುವಂತೆಯೂ ಇರಲಿಲ್ಲ. ಅಂತೂ-ಇಂತೂ ವಿಚಾರ ಮಾಡಿ ಮನೆಕೆಲಸದವಳನ್ನು ನೇಮಿಸುವ ತೀರ್ಮಾನವಾಯಿತು. ಹಾಗಂತ ಪರಿಚಿತರನ್ನ ವಿಚಾರಿಸಿದಾಗ ಸಿಕ್ಕಿದವಳೇ “ಸಂಪ್ಯಾ’. ಮಲ್ಲಿಗೇಪುರ ಎಂಬ ಪುಟ್ಟಹಳ್ಳಿಯಿಂದ ಬಂದವಳೆಂದು ಹೇಳಿದ ನೆನಪು. ಹೊಸದಾಗಿ ಕೆಲಸಕ್ಕೆ ಸೇರಿದಾಗ ಅದ್ಯಾಕೋ ಸರಿಬರುತ್ತಿರಲಿಲ್ಲ. ಮಾಸಲು ಸೀರೆ, ತಲೆ ತುಂಬಾ ಎಣ್ಣೆ ಬಳಿದು ಹೆಣೆದ ಮೋಟುಜಡೆ. ತಲೆಯಲ್ಲಿ ಉಕ್ಕುತ್ತಿರುವ ಹೇನು-ಸಂಸಾರ. ಹೊಸ ಸೋಪು, ಶ್ಯಾಂಪು, ಬಾಚಣಿಗೆಗಳನ್ನ ಕೊಟ್ಟು ತಕ್ಕಮಟ್ಟಿಗೆ ಆಕೆಯ ಅವತಾರವನ್ನ ಮಾನಸಿಯು ಬದಲಾಯಿಸಿದ್ದಳು. ಉಡಲು ತನ್ನ ಹಳೆಯ ಸೀರೆಗಳನ್ನ ಕೊಡುವ ಕೃಪೆದೋರಿದ್ದಳು.
ಬಾಯಿಗಿಟ್ಟ ತುತ್ತನ್ನ ನುಂಗಲೇ ಬೇಕಲ್ಲಾ? ಇಲ್ಲದಿದ್ದರೆ , ಬಸಿರು-ಬಾಣಂತನ, ಮನೆಗೆಲಸಕ್ಕೆ ಯಾರಾದರು ಬರುತ್ತಿದ್ದರೆ ? ಹೀಗೆ ಮೂರು ವರ್ಷಕ್ಕೂ ಮೇಲಾಯಿತು, ಸಂಪ್ಯಾ ಈ ಮನೆಯ ಸದಸ್ಯೆಯಾಗಿ. ಆಕೆಗಾದರೂ “ಮನೆ’ ಎಂದು ಹೇಳಿಕೊಳ್ಳಲು ಬೇರೆ ಮನೆಯಿತ್ತೆ? ಮದುವೆಯಾಗಿ ಎರಡೇ ತಿಂಗಳಲ್ಲಿ ಹಣೆಯ ಕುಂಕುಮವನ್ನ ಅಳಿಸಬೇಕಾದ ಸ್ಥಿತಿ. ಆ ಹೊಳೆಯುವ ದೊಡ್ಡಕಣ್ಣುಗಳಿರುವ ಅಗಲವಾದ ಹಣೆಯಿರುವ ದುಂಡುಮುಖಕ್ಕೆ ದೊಡ್ಡ ಕೆಂಪು ಬೊಟ್ಟಿಟ್ಟರೆ ಎಷ್ಟು ಚೆನ್ನ ಎಂದು ಮಾನಸಿಗೆ ಅನ್ನಿಸಿದ್ದಿದೆ. ಹಾಗಂತ ಮನೆಕೆಲಸದವಳಲ್ಲಿ ಸುಖ-ದುಃಖ ಹಂಚಿಕೊಳ್ಳಲು “ಸ್ಟೇಟಸ್’ ಅಡ್ಡಬರುತ್ತಿತ್ತು. ತನ್ನ ಬಲಗೈಯಂತೆ ಎಲ್ಲ ಕೆಲಸಗಳನ್ನ ಪೂರೈಸಿ, ಈಗ ಅಹಾನಿಯ ಪೂರ್ಣ ಜವಾಬ್ದಾರಿಯು ಆಕೆಯ ಮೇಲಿದ್ದರೂ, ಮಾನಸಿ, ಸಂಪ್ಯಾಳಿಂದ ಭಾವನಾತ್ಮಕವಾಗಿ ದೂರವಿದ್ದುದ್ದೇ ಹೆಚ್ಚು ! ಪುಟ್ಟ ಅಹಾನಿಗೆ ಆರೇ ತಿಂಗಳು ಮೊಲೆಯುಣಿಸಿ ಸಂಪ್ಯಾಳ ಮಡಿಲಿಗೆ ಹಾಕಿದ್ದಳು. ನಿಜ ಅರ್ಥದಲ್ಲಿ, ಸಂಪ್ಯಾಳೇ ಮಗುವಿನ ಅಮ್ಮನಾಗಿದ್ದಳು.
ಮಾನಸಿಯಾದರೂ ಏನು ಮಾಡುವಂತಿತ್ತು? ಒಂದಂತೂ ನಿಜ; ತನ್ನೆಲ್ಲಾ ಮನೆಕೆಲಸಗಳನ್ನ ಸರಳೀಕರಿಸುವಲ್ಲಿ ಸಹಕರಿಸುತ್ತಾಳೆ ಎಂದು ಮನೆಕೆಲಸದವಳನ್ನ ತಲೆಮೇಲೆ ಕೂರಿಸುವುದಕ್ಕಾಗುತ್ತದೆಯೇ, ಎಂಬ ಧೋರಣೆ ಮಾನಸಿಯದು. ಇದರಲ್ಲಿ ಆಕೆಯದ್ದೂ ತಪ್ಪಿಲ್ಲ. ಕೈಗೊಂದು, ಕಾಲಿಗೊಂದು ಆಳುಗಳಿದ್ದ ದೊಡ್ಡಮನೆಯಲ್ಲಿ ಬೆಳೆದ ಮಾನಸಿಗೆ ಮದುವೆಯಾಗಿ ತವರು ಸಂಬಂಧ ಕಡಿದ ಮೇಲೆಯೇ ತಿಳಿದದ್ದು, ವಾಸ್ತವ. ಹಾಗೂ-ಹೀಗೂ ಹೊಂದಾಣಿಕೆಯ ಬದುಕಿನೊಂದಿಗೆ ಹೊಂದಿಕೆಯಾಗಿದ್ದರೂ, “ಸಂಪ್ಯಾ’ಳ ಬಗ್ಗೆ ಮೆದುಧೋರಣೆ ಬಂದೇ ಇರಲಿಲ್ಲ.
.
ಮಗಳು ಅಹಾನಿಯು ದೊಡ್ಡವಳಾಗಿ ಡಾಕ್ಟರ್ ಆಗಬೇಕೆಂದು ಮಾನಸಿಯ ಆಸೆ. ಪುಟ್ಟ ಮಗುವಿನಲ್ಲಿ ಯಾರಾದರೂ “ಮುಂದೆ ನೀನೇನಾಗುತ್ತೀಯಾ?’ ಎಂದು ಕೇಳಿದರೆ , ಅದು ತನ್ನ ದುಂಡಗಿನ ಕೆಂಪು ಕೆನ್ನೆಯನ್ನ ಉಬ್ಬಿಸಿ ತೊದಲುನುಡಿಯಲ್ಲಿ “ದಾಕ್ಲು’ ಎಂದರೆ ಮಾನಸಿಗೇನೋ ಖುಷಿ. ದಿನದ ಕೇವಲ ಹತ್ತು ನಿಮಿಷಗಳನ್ನಷ್ಟೇ ಮಗಳಿಗಾಗಿ ಮೀಸಲಿಟ್ಟು “ಟ್ವಿಂಕಲ್, ಟ್ವಿಂಕಲ್ ಲಿಟ್ಲ ಸ್ಟಾರ್’ ಕಲಿಸಿಕೊಟ್ಟಿದ್ದಳು. ಮುಂದೆ ಡಾಕ್ಟರಾಗಲು ಈಗಿನಿಂದಲೇ ಇಂಗ್ಲಿಷ್ ನಾಲೆಡ್ಜ್ ಇಂಪ್ರೂವ್ ಆಗಬೇಡವೆ? ರಾಶಿ ರಾಶಿ ಇಂಗ್ಲಿಷ್ ರೈಮ್ಸ್ ಡಿವಿಡಿಗಳನ್ನ ತಂದು ಸಂಪ್ಯಾಳಿಗೆ ಅದನ್ನ ಹಾಕಿ ಕೇಳಿಸುವುದನ್ನ ಕಲಿಸಿಕೊಟ್ಟಿದ್ದಳು. ಆದರೂ, ಬದನೆಕಾಯಿಯನ್ನ ನಾಲ್ಕು ತುಂಡು ಮಾಡೆಂದರೆ, ಹತ್ತು ತುಂಡು ಮಾಡಿ ಪಲ್ಯ ಮಾಡೋ ಪೆದ್ದು ಮಂಡೆಯ ಸಂಪ್ಯಾಳಿಗೆ ಎಬಿಸಿಡಿ ಬಂದೀತೇ ಎಂಬ ಗುಮಾನಿ. ಏನೇ ಆದರೂ ಸಂಪ್ಯಾ ಮಾಡಿದ ಪಲ್ಯ ರುಚಿಕಟ್ಟಾಗಿಯೇ ಇದ್ದಿದ್ದ ಕಾರಣ, ದೂರಲು ಹೋಗಲಿಲ್ಲ ಮಾನಸಿ. ತಾನು ಹೇಳಿದಂತೇ ಕೇಳಬೇಕು ಎನ್ನುವ ಅಹಂ, ಆಕೇದು. ಕೆಲವೊಮ್ಮೆ ಇದು ಮಿತಿಮೀರಿ ತಲೆಯಲ್ಲಿ ಕುಣಿದಂತಾಗಿ ಬಾಯಲ್ಲಿ ಕೋಪಾಗ್ನಿಯು ಉದುರುತ್ತಿತ್ತು. ಇದನ್ನೆಲ್ಲಾ ಶಾಂತಚಿತ್ತಳಾಗಿಯೇ ಕೇಳುತ್ತಿದ್ದಳು, ಸಂಪ್ಯಾ. ಮನೆಯ ಒಳಗೋಡೆಯಲ್ಲಿ ಹಾಕಲ್ಪಟ್ಟ ಬುದ್ಧನ ಚಿತ್ರವನ್ನ ನೋಡಿದಾಗಲೆಲ್ಲ ಸಂಪ್ಯಾಳ ನೆನಪಾಗುತ್ತಿದ್ದುದಂತೂ ಸುಳ್ಳಲ್ಲ.
ಅದೊಂದು ದಿನ ಅಹಾನಿಗೆ ಕೆಂಡಾಮಂಡಲ ಜ್ವರ. ಕೆಲಸದ ಒತ್ತಡದ ಕಾರಣ ರಜೆಯೂ ಸಿಕ್ಕಿರಲಿಲ್ಲ. ಆಗೆಲ್ಲಾ ಹಗಲು-ರಾತ್ರಿಯೆನ್ನದೆ ಮಗುವಿನ ಆರೈಕೆಯನ್ನ ಮಾಡಿದವಳು, ಸಂಪ್ಯಾ. ತನ್ನ ಮಡಿಲಲ್ಲಿ ಒಂದು ಕೂಸು ಅರಳಿರದಿದ್ದರೂ, ಅಹಾನಿಯನ್ನು ತನ್ನ ಮಗುವಿನಂತೇ ನೋಡಿಕೊಳ್ಳುತ್ತಿದ್ದಳು. ಇತ್ತೀಚೆಗೆ ಮಗು ಅಹಾನಿಯೂ ಸಂಪ್ಯಾಳನ್ನೇ ತನ್ನ ತಾಯಿ ಎಂದು ತಿಳಿದಂತೇ ತೋರುತ್ತಿತ್ತು. ಮಗುವಿನ ಮೊದಲ ನುಡಿ “ಅಮ್ಮಾ’ ಎಂದಾಗ ಮಾನಸಿಗೆ ಬೆಟ್ಟದಷ್ಟು ಸಂತೋಷವಾಗುತ್ತಿದ್ದರೂ, ಅದು ಸಂಪ್ಯಾಳ ಕಡೆ ಬೆಟ್ಟು ಮಾಡಿ ಕೂಗುತ್ತಿತ್ತು. ವಾರದ ಆರು ದಿನವೂ ಜೊತೆಯಿರುವ ಸಂಪ್ಯಾ; ಭಾನುವಾರದಂದು ಮಾತ್ರ ಅದೆಲ್ಲೋ ಹೊರಹೋಗುತ್ತಿದ್ದಳು. “ಎಲ್ಲಿಗೆ’ ಎಂದು ಕೇಳುವ ಕುತೂಹಲವಿದ್ದರೂ, ಕೆಲಸದಾಕೆ ಎಂಬ ಅಸಡ್ಡೆ. ವಾರಪೂರ್ತಿ ಅಳು ಕೇಳದೇ, ಭಾನುವಾರದಂದು ಮಾತ್ರ ಮಗು ಹಠ ಹಿಡಿದು ಅರಚುತ್ತಿತ್ತು ಎಂಬುದು ನೆರೆಮನೆಯ ವಿಶಾಲೂ ಆಂಟಿಯ ಸಂದೇಹ. ಇದಕ್ಕೆ ಪೂರಕವಾಗಿ ಸಹೋದ್ಯೋಗಿ ಶಾಲಿನಿ ಹೇಳಿದ ಮಕ್ಕಳಿಗೆ ನಿ¨ªೆಬರುವ ಇಂಜೆಕ್ಷನ್ ನೀಡಿ ಭಿಕ್ಷೆ ಬೇಡುವವರಿಗೆ ಕೊಡುತ್ತಾರೆ ಎಂಬ ಮಾಹಿತಿ. ಸಂಪ್ಯಾ ಮತ್ತು ಅಹಾನಿ ಬೆರೆಯುವಿಕೆಯನ್ನು ನೋಡಿದರೆ ಅಂಥ ಸಂದೇಹ ಬಾರದಿದ್ದರೂ, ಒಂದು ದಿನ ಆಫೀಸಿನಿಂದ ಬೇಗನೆ ಬಂದು ಪರಿಶೀಲಿಸಲು ಮಾನಸಿ ನಿರ್ಧರಿಸಿದಳು.
ಪ್ರತೀ ಭಾನುವಾರ ಮಗುವಿನ ಸಂಪೂರ್ಣ ಜವಾಬ್ದಾರಿ ಮಾನಸಿಯದು. ಮಗು, ಬೇಕು-ಬೇಡ ಎಂಬ ತೀರ್ಮಾನದ ಗೊಂದಲಗಳಲ್ಲಿ ಹುಟ್ಟಿದವಳು, ಅಹಾನಿ. ದೀಪಕ್‌ನ ಒತ್ತಾಯವಿರದಿರುತ್ತಿದ್ದರೆ ಇನ್ನೂ ಕೂಡಾ ಅಹಾನಿ ಹುಟ್ಟುತ್ತಿರಲಿಲ್ಲವೇನೋ! ಸಂಪ್ಯಾಳಿಗೆ ಮದುವೆಯಾಗಿಯೂ ಮಗುವಿನ ಭಾಗ್ಯವಿರಲಿಲ್ಲ. ಆದರೂ, ತಾಯೊಡಲ ಪ್ರೀತಿಧಾರೆಗೆ ಕಡಿಮೆಯಿರಲಿಲ್ಲ. ಸಂಸಾರ ಸುಖ ಕಾಣೋ ಮೊದಲೇ ಕರಗಿ ಹೋದ ಕನಸುಗಳಿಗೆ ಆಕೆ ಹೊಣೆಯೇ? ಮದುವೆಯಾಗಿ ಗಂಡನನ್ನು ನುಂಗಿದಳೆಂಬ ಹೀಯಾಳಿಕೆಗೆ ತುತ್ತಾಗಿ ಗಂಡನ ಮನೆಯವರು ದೂರವಿರಿಸಿದ್ದರು. ಅದ್ಯಾವುದೋ ವಾಸಿಯಾಗದ ಕಾಯಿಲೆಯಿಂದ ನರಳುತ್ತಿದ್ದ ಎಂಬುದನ್ನ ಹೇಳಿರಲೇ ಇಲ್ಲ. ಜೊತೆಗೆ ಕುಡಿತದ ಚಟ. ಒಂದೆಕರೆ ಭೂಮಿಯಲ್ಲಿ ಹಾಗೂ ಹೀಗೂ ನಿಭಾಯಿಸಿಕೊಂಡು ಹೋಗುತ್ತಿದ್ದ ತವರ ಸಂಸಾರದಲ್ಲಿ ಸಂಪ್ಯಾಳೊಬ್ಬಳು ಹೆಚ್ಚಾಗಿದ್ದಳೆ? ತಾನಾಯಿತು, ತನ್ನ ಕೆಲಸವಾಯಿತು ಎಂದಿದ್ದಳಲ್ಲವೆ? ಆದರೂ ಅತ್ತಿಗೆಗೆ ಒಗ್ಗಲಿಲ್ಲ.
ಯಾರ ಹಂಗೂ ಇಲ್ಲದೇ ದುಡಿದು ತನ್ನ ಪಾಡಿಗೆ ತಾನಿದ್ದರಾಯಿತು ಎಂದವಳಿಗೆ ಆಸರೆಯಾದದ್ದೇ ಶ್ರೀಪತಿ ರಾಯರು. ನಿವೃತ್ತಿ ಕಾಲದಲ್ಲಿ ಆಸರೆಯಾಗಬೇಕಿದ್ದ ಮಕ್ಕಳೆಲ್ಲ ಉದ್ಯೋಗ ನಿಮಿತ್ತ ದೂರದೇಶಕ್ಕೆ ಹೋಗಿ , ಅಲ್ಲಿಯೇ ನೆಲೆಯೂರಿದ್ದರು. ಹತ್ತು ವರ್ಷಗಳ ಹಿಂದೆಯೇ ತೀರಿಹೋದ ಹೆಂಡತಿ ಕಮಲಾಕ್ಷಿ. ಜೊತೆ ಇರದೇ ಒಬ್ಬಂಟಿಯಾಗಿ ಇರುವ ವಿದುರನ ಮನೆಕೆಲಸ, ಆರೈಕೆಗಾಗಿ ಮನೆಯಾಳಿನ ಅಗತ್ಯವಿತ್ತು. ಹೆಣ್ಣುಮಕ್ಕಳಿಲ್ಲದ ರಾಯರು ಸಂಪ್ಯಾಳನ್ನ ಮಗಳ ರೀತಿಯಲ್ಲಿ ನೋಡಿಕೊಂಡರು. ಹೊರಹೋಗುವಾಗಲೆಲ್ಲ ಸಂಪ್ಯಾಳನ್ನ ಕಾರಿನಲ್ಲಿ ಕೂರಿಸಿ ಕರೆದೊಯ್ಯುತ್ತಿದ್ದರು. ತನಗೊಬ್ಬ ಮಗಳಿದ್ದಿದ್ದರೆ ಏನೇನು ಕೊಡಿಸಬಹುದಿತ್ತೋ ಅದನ್ನೆಲ್ಲಾ ಕೊಡಿಸಿದರು. ಸಂಪ್ಯಾಳ ಬೋಳುಹಣೆಯನ್ನ ನೋಡುವಾಗಲೆಲ್ಲಾ ಮರುಗುತ್ತಿದ್ದ ರಾಯರು, ಆಕೆಗೆ ಮರುಮದುವೆ ಮಾಡಿ ಕನ್ಯಾದಾನದ ಫಲ ಸಂಪಾದಿಸಲು ಮನಸ್ಸು ಮಾಡಿದ್ದರು. ಸಂಪ್ಯಾಳೂ ಕೆಲಸದವಳು ಎಂಬುದನ್ನು ಮರೆತು ಮನೆಮಗಳಂತೆ ತಂದೆಯಸ್ಥಾನದಲ್ಲಿದ್ದ ರಾಯರ ಸೇವೆ ಮಾಡುತ್ತಿದ್ದಳು. ಊರ ಜನರ ದೃಷ್ಟಿಗೆ ಇದು ಸರಿಬರಲಿಲ್ಲವೇನೋ. ತಂದೆ-ಮಗಳಂತಿದ್ದ ಸಂಬಂಧವನ್ನ ಕೆಟ್ಟದಾಗಿ ಅರ್ಥೈಸಿ ರಾಯರ ಗಂಡು ಮಕ್ಕಳಿಗೂ ತಿಳಿಸಿದರು. ಯಾವತ್ತೂ ಮನೆಗೆ ಬಾರದ ಮಕ್ಕಳು ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷವಾಗಿ, ರಾದ್ಧಾಂತ ಮಾಡಿ ಸಂಪ್ಯಾಳನ್ನ ಹೊರಗಟ್ಟಿದರು. ಮತ್ತೂಮ್ಮೆ ಅನಾಥೆಯಾದ ಸಂಪ್ಯಾ, ಸೇರಿಕೊಂಡಿದ್ದು ಮಾನಸಿಯ ಮನೆಗೆ. ಆದರೂ ಪ್ರತೀ ಭಾನುವಾರದಂದು ರಾಯರ ಮನೆಗೆ ಹೋಗಿ ಸುಖ-ದುಃಖ ವಿಚಾರಿಸಲು ಮರೆತಿರಲಿಲ್ಲ. ತವರುಮನೆ ಎಂದು ಇದ್ದಿದ್ದು ಅದೊಂದೇ.
ಮಾನಸಿಯು ಅಹಾನಿಯನ್ನ ಪ್ಲೇ-ಸ್ಕೂಲಿಗೆ ಸೇರಿಸಿದ್ದಳು. ಎಲ್ಲಾ ಮಕ್ಕಳಿಗಿಂತ ಅಹಾನಿಯು ಚುರುಕಾಗಿ ಮಾತನಾಡುತ್ತಿದ್ದಳು ಎಂಬುದು ಟೀಚರ್‌ನ ಹೊಗಳಿಕೆ. ಅದೊಂದು ದಿನ ಗೆಳತಿಯರ ಮುಂದೆ “ಚಂದಿರನೇತಕೆ ಓಡುವನಮ್ಮ’ ಎಂದು ಮು¨ªಾಗಿ ಹಾಡಿ ಕುಣಿದು ಎಲ್ಲರ ಮೆಚ್ಚುಗೆ ಗಳಿಸಿದ್ದರೂ, ತಾನು ಕಲಿಸಿದ “ಟ್ವಿಂಕಲ್, ಟ್ವಿಂಕಲ್….’ ಹೇಳಲಿಲ್ಲವೆಂಬ ಅಸಮಾಧಾನ ಮಾನಸಿಯದ್ದು. ತನ್ನನ್ನ “ಮಮ್ಮಿ’ ಎಂದು ಕರೆಯಲು ಒತ್ತಾಯಿಸುತ್ತಿದ್ದಂತೆಯೇ ಸಂಪ್ಯಾಳನ್ನ “ಅಮ್ಮಾ’ ಎನ್ನಲು ಮಗು ಕಲಿತಿತ್ತು. “ಮಮ್ಮಿ’ ಎಂದರೆ ಆಫೀಸು, “ಅಮ್ಮಾ’ ಎಂದರೆ ಕೈಗೂಸು.
ಇತ್ತೀಚೆಗೆ ಅಹಾನಿಯು ಸಂಪ್ಯಾಳನ್ನೇ ಹೆಚ್ಚು ಹಚ್ಚಿಕೊಂಡಿರುವುದು ಮಾನಸಿಯ ಗಮನಕ್ಕೆ ಬಂದಿತ್ತು. ಹೈ ಸ್ಟೇಟಸ್ ಮೈಂಟೇನ್ ಮಾಡಲು ಮಾನಸಿ ಹೆಣಗುತ್ತಿದ್ದರೆ, ಮಗು ಮನೆಕೆಲಸದವಳಲ್ಲಿ ಬೆರೆಯುವುದು ಅಸಾಧ್ಯದಲ್ಲಿ ಅಸಾಧ್ಯವಾದ ಮಾತಾಗಿತ್ತು. ಹೇಗಿದ್ದರೂ ಮಗು ಶಾಲೆಗೆ ಹೋಗಲು ಪ್ರಾರಂಭಿಸಿತು. ಹೆಚ್ಚಿಗೆ ದುಡ್ಡು ಕೊಟ್ಟರೆ ಇಡೀ ದಿನ ಮಗುವನ್ನ ಶಾಲೆಯಲ್ಲಿಯೇ ನೋಡಿಕೊಳ್ಳುವ ವ್ಯವಸ್ಥೆಯೂ ಇದೆ. ಮನೆಕೆಲಸವನ್ನ ಹಾಗೂ ಹೀಗೂ ನಿಭಾಯಿಸಬಹುದು ಎಂಬ ಹುಚ್ಚು ಧೈರ್ಯ. ಅನುಕೂಲತೆಗಳ ಲೆಕ್ಕಾಚಾರಗಳು ಅದಾಗಲೇ ಮಾನಸಿಯ ಮನಸ್ಸನ್ನ ಹೊಕ್ಕಿರುವಾಗ ಮನೆಕೆಲಸಕ್ಕೆ ಸಂಪ್ಯಾಳ ಅಗತ್ಯವಾದರೂ ಏನು? ಬಸುರು-ಬಾಣಂತನ ಬೇಕಿಲ್ಲದ ಮಾನಸಿಗೆ ಈಗ ಮಗುವನ್ನ ಎಲ್ಲಿ ಸಂಪ್ಯಾ ಕಸಿದುಕೊಳ್ಳುತ್ತಾಳ್ಳೋ ಎಂಬ ಭಯ. ಮನೆ-ಮಠ, ಗಂಡ-ಮಕ್ಕಳು ಇಲ್ಲದವಳು ಬೇರೆ.
ಹೇಳದೇ-ಕೇಳದೇ ಮಗುವನ್ನ ಎತ್ತಿಕೊಂಡು ಹೋಗಿಬಿಟ್ಟರೆ? ಸ್ನಾನದ ಮನೆಯಲ್ಲಿ ಕಳಚಿಟ್ಟ ಚಿನ್ನದ ಸರ ಕಾಣೆಯಾದುದ್ದನ್ನೇ ನೆಪವಾಗಿಸಿಕೊಂಡು ಸಂಪ್ಯಾಳನ್ನು ಮನೆಯಿಂದ ಹೊರಗಟ್ಟಿಯೇಬಿಟ್ಟಳು. ದೀಪಕ್ ಇದನ್ನ ನಂಬದೇ ಇದ್ದರೂ, ಮನಃಶಾಂತಿಗೆ ಈ ನಿರ್ಧಾರ ಸರಿಯಾಗಿಯೇ ಇತ್ತು. ಮಾರನೇ ದಿನವೇ ತಾನು ಧರಿಸಿದ ಶಾಲಿನಲ್ಲಿ ಕಳೆದು ಹೋಗಿದ್ದ ಚಿನ್ನದ ಸರ ಸಿಕ್ಕಿದನ್ನ ಮಾನಸಿ ಯಾರಲ್ಲೂ ಹೇಳಿಯೇ ಇರಲಿಲ್ಲ.
ಸಂಪ್ಯಾ ಮನೆಬಿಟ್ಟ ದಿನದಿಂದ ಮಗು ಅಹಾನಿ ತನ್ನ “ಅಮ್ಮ’ನಿಗಾಗಿ ಮನೆತುಂಬಾ ಹುಡುಕಾಡತೊಡಗಿತು. ಊಟ ಮಾಡಲು, ಆಟ ಆಡಲು ಹಠ ಮಾಡುತ್ತಿತ್ತು. ಆ ಕೂಡಲೇ ತುಸು ಹೆಚ್ಚೇ ಎನಿಸುವಷ್ಟು ಸಂಬಳ ಕೊಟ್ಟು ಹೊಸ ಕೆಲಸದಾಕೆಯನ್ನ ನೇಮಿಸಿ¨ªಾಗಿತ್ತು. ಒರಟಾಗಿಯೇ ಇದ್ದ ಆಕೆಯೊಂದಿಗೆ ಹೊಂದಾಣಿಕೆ ಮಾನಸಿಯ ಅನಿವಾರ್ಯತೆಯಾಗಿತ್ತು. ದಿನೇ ದಿನೇ ಬಾಡಿಹೋಗುತ್ತಿದ್ದ ಅಹಾನಿಯನ್ನ ಮನೆಕೆಲಸದಾಕೆ ಹೊಡೆದು ಬಡಿದು ಶಾಲೆಗೆ ಕಳುಹಿಸುತ್ತಿದ್ದಳು ಎಂಬುದನ್ನ ವಿಶಾಲೂ ಆಂಟಿಯೂ ಹೇಳಿದ್ದರು. ಇಷ್ಟು ದಿನ ಚೊಕ್ಕಟವಾಗಿದ್ದ ಮನೆ ಈಗ ಅಸ್ತವ್ಯಸ್ತವಾಗಿತ್ತು. ತಂಗಳು ಪೆಟ್ಟಗೆಯಲ್ಲಿ ಮಾಡಿದಡುಗೆ ತುಂಬಿ, ಅದನ್ನೇ ಬಿಸಿ ಮಾಡಿ ಉಣ್ಣುವ ಪರಿಸ್ಥಿತಿ. ಹೇಳದೇ-ಕೇಳದೆ ಕೆಲಸಕ್ಕೆ ರಜೆ ಹಾಕುವ ಕೆಲಸದಾಕೆಯಿಂದಾಗಿ ಮಾನಸಿಗೆ ಕಿರಿಕಿರಿಯುಂಟಾಗುತ್ತಿತ್ತು. ಸಂಪ್ಯಾಳಿ¨ªಾಗಲೇ ಎಷ್ಟೋ ಚೆನ್ನಾಗಿತ್ತು ಎಂದು ಮಾನಸಿಗೆ ಅನ್ನಿಸಿದ್ದೂ ಇದೆ. ದೀಪಕ್ ಅದಾಗಲೇ ಬಾಯಿಬಿಟ್ಟು ಹೇಳಿಯೂ ಆಗಿತ್ತು. ಹೆಂಗರುಳು ಕುಡಿಯ ಮಮತೆಗಾಗಿ ಹಂಬಲಿಸಿದ್ದು ತಪ್ಪಲ್ಲವಲ್ಲ. ತಾನೊಂದು ಹೆಣ್ಣಾಗಿ, ಸಂಪ್ಯಾಳನ್ನ ಗೌರವಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ತನ್ನ ತಪ್ಪು ಎಂದು ಅರಿವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ.
ಆಫೀಸಿಗೆ ಒಂದು ವಾರದ ರಜೆ ಬರೆದು, ಸಂಪ್ಯಾಳನ್ನು ಪುನಃ ಕರೆತರಲು ಹೊರಟಳು ಮಾನಸಿ. ಮಲ್ಲಿಗೇಪುರಕ್ಕೆ ತೆರಳಿ ಹುಡುಕಿದರೆ ಆಕೆಯನ್ನ ಏಳು ವರ್ಷಗಳಿಂದೀಚೆಗೆ ನೋಡಿದವರೇ ಇರಲಿಲ್ಲ. ಮಾನಸಿಗೆ ತಿಳಿದಿದ್ದು ಅದೊಂದೇ ವಿಳಾಸ. ಕೊನೆಗೆ, ಊರವರ ಹೇಳಿಕೆಯಂತೆ ಶ್ರೀಪತಿರಾಯರ ಮನೆಯನ್ನರಸಿ ಹೋದರೆ ಅಲ್ಲೂ ಸಂಪ್ಯಾಳ ಪತ್ತೆ ಇರಲಿಲ್ಲ. ಆಕೆ ಹೋಗಿ¨ªಾದರೂ ಎಲ್ಲಿಗೆ? ಯಾರೂ ಇಲ್ಲ ಎಂಬ ಭಾವನೆಯೊಂದಿಗೆ ಜಗತ್ತನ್ನೇ ಬಿಟ್ಟಿದ್ದರೆ? ಮಾನಸಿಗೆ ಪಶ್ಚಾತ್ತಾಪ! ತನಗೆ ನೆರಳಾಗಿದ್ದ ಸಂಪ್ಯಾಳನ್ನ ಹೇಗಾದರೂ ಮಾಡಿ ಪತ್ತೆಹಚ್ಚಲೇ ಬೇಕೆಂಬ ಹುಚ್ಚು ಹಠ. ವಾರಪೂರ್ತಿ ಸಂಪ್ಯಾಳ ಹುಡುಕಾಟದಲ್ಲಿ ಕಳೆದ ಮಾನಸಿ ಕೊನೆಗೆ ಶರಣು ಎಂಬಂತೆ ದೇವರಿಗೆ ಮೊರೆಹೋದಳು.
ಅದೊಂದು ಭಾನುವಾರ ಸೂರ್ಯ ಉದಯಿಸುವ ಮೊದಲೇ ಮನೆಬಾಗಿಲಲ್ಲಿ ಕರೆಗಂಟೆ! ಬೆಳಗಾತ ಯಾರಿರಬಹುದು ಎಂದು ಯೋಚಿಸುತ್ತಾ ಬಾಗಿಲು ತೆರೆದ ಮಾನಸಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಸಂಪ್ಯಾ, ತನ್ನ ಪುಟ್ಟ ಬ್ಯಾಗಿನೊಂದಿಗೆ ಪ್ರತ್ಯಕ್ಷಳಾಗಿದ್ದಳು. ಏನು, ಎತ್ತ ಎಂದು ಪ್ರಶ್ನಿಸಲು ಹೋಗದೇ ಸಂಪ್ಯಾಳನ್ನ ಬರಮಾಡಿಕೊಂಡಳು. ಆಮೇಲೆ ತಿಳಿದುದೇನೆಂದರೆ, ಮನೆಬಿಟ್ಟು ಹೋದ ಸಂಪ್ಯಾ ಸೀದಾ ನದಿ ಹಾರಲು ಹೋಗಿ ಯಾರೋ ಪುಣ್ಯಾತ್ಮರು ಆಶ್ರಮವನ್ನ ಸೇರಿಸಿದ್ದರಂತೆ. ಅಲ್ಲೂ ತಿಂಗಳುಗಳನ್ನ ಕಳೆದ ಸಂಪ್ಯಾಳಿಗೆ ಮಗು ಅಹಾನಿಯ ನೆನಪು ಕಾಡಲು ಶುರುವಾಗಿ, ಮಾನಸಿಯ ಬೈಗುಳ-ಅವಮಾನಗಳನ್ನ ಮರೆತು ವಾಪಾಸಾದಳು. ಕರುಳ ಸಂಬಂಧಕ್ಕಿಂತ ಹಿರಿದಾದ ಮಾನವ ಪ್ರೀತಿಯ ಎಳೆಯೊಂದು ಅವರಿಬ್ಬರಲ್ಲೂ ಬೆಳೆದಿತ್ತು.
ಸಂಪ್ಯಾಳ ಆಗಮನದಿಂದ ಮಾನಸಿಗೆ ಮನಸ್ಸಮಾಧಾನವಾಗಿ, ಅಹಾನಿಯನ್ನ ಅವಳೊಂದಿಗೆ ಮಲಗಲು ಬಿಟ್ಟಳು. ಇರುಳ ಸೆರಗಿನಲ್ಲಿ ಪವಡಿಸಲು ಹೊರಟ ಮಾನಸಿಗೆ ಯಾರೋ ಹಾಡುತ್ತಿರುವುದು ಕೇಳಿಸಿತು. ತನ್ನ ಕೋಣೆಯಿಂದ ಹೊರಬಂದು ಪರಿಶೀಲಿಸಿದರೆ ಅದು ಸಂಪ್ಯಾಳ ಪುಟ್ಟಕೋಣೆಯಿಂದಾಗಿತ್ತು. ಮಗಳು ಅಹಾನಿ “ಅಮ್ಮಾ, ಅಮ್ಮಾ’ ಎಂದು ನಗುತ್ತಿದ್ದರೆ, ಸಂಪ್ಯಾಳು “ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ’ ಎಂದು ಮಗುವನ್ನ ಮಲಗಿಸುವ ಪ್ರಯತ್ನದಲ್ಲಿದ್ದಳು.
– ಪ್ರಜ್ಞಾ ಜಿ. ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.