ಈರುಳ್ಳಿ ಈರುಳ್ಳಿ ಈರುಳ್ಳಿ


Team Udayavani, Dec 15, 2019, 5:39 AM IST

zx-9

ಈಗ ಎಲ್ಲೆಲ್ಲೂ ಈರುಳ್ಳಿಯದ್ದೇ ಸುದ್ದಿ. ವಾಟ್ಸಾಪ್‌ಗ್ಳಲ್ಲಿ ಈರುಳ್ಳಿ ಜೋಕ್‌ಗಳು ಹರಿದುಬರುತ್ತಿವೆ. ಈರುಳ್ಳಿಯ ಬೆಲೆ ಏರಿಕೆಯು ಗ್ರಾಹಕರನ್ನು ಕಂಗಾಲು ಮಾಡಿದೆ. ಲೋಕಸಭೆಯಲ್ಲಿ ಈರುಳ್ಳಿ ಸುದ್ದಿ ಮಾಡುತ್ತಿದೆ. ಕಲಾವಿದರ ಚಿತ್ತ ಈರುಳ್ಳಿ ಸ್ವಾರಸ್ಯದತ್ತ ಹರಿದಿದೆ. “ಈರುಳ್ಯರ್ಥಶಾಸ್ತ್ರ’ ಹೊಸ ರೂಪು ಪಡೆಯುತ್ತಿದೆ. ಓನಿಯನ್ನಿಕನಾಮಿಕ್ಸ್‌ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆದಿದೆ…

ಕರ್ನಾಟಕವನ್ನು ಕೊಚ್ಚಿಕೊಂಡು ಹೋದ ಕಳೆದ ಮಳೆಗಾಲವನ್ನು ನೆನಪಿಸಿಕೊಳ್ಳಿ. ಬಯಲು ಸೀಮೆಯ ಫ‌ಲವತ್ತಾದ ಹೊಲ-ನೆಲಗಳು ಪ್ರವಾಹದಿಂದಾಗಿ ಇನ್ನಿಲ್ಲದ ಅನಾಹುತಕ್ಕೆ ಒಳಗಾಗಿದ್ದವು. ಬದುಕೇ ತೊಳೆದು ಹೋಗಿತ್ತು. ತನ್ನ ಒಂದೆಕರೆ ಹೊಲದಲ್ಲಿ ಅನಾಥನಾದ ರೈತನೊಬ್ಬ ಕೊಚ್ಚಿಕೊಂಡು ಹೋದ ಉಳ್ಳಾಗಡ್ಡಿ ಬೆಳೆಯ ಹಾಳಾದ ಗಿಡವನ್ನು ಕೈಯಲ್ಲಿ ಹಿಡಿದು ಕಣ್ಣೀರು ಸುರಿಸುತ್ತಿದ್ದ. ಅಡುಗೆಮನೆಯೊಳಗೆ ಹೆಚ್ಚುವವರು ಕಣ್ಣೀರು ಸುರಿಸುವಂತೆ ಮಾಡುವ ಈರುಳ್ಳಿ ಮನೆಯ ಹೊರಗೆ ಸಹ ಹೊಲದಲ್ಲಿ ಕಣ್ಣೀರಿಗೆ ಕಾರಣವಾಗಿತ್ತು. ರೈತ ಅಳುವುದನ್ನು ನಿಲ್ಲಿಸಲಾರದೆ ಮೇಲೆ ಕವಿದ ಕಾರ್ಮೋಡದಡಿ ಅನಾಥವಾಗಿ ನಿಂತಿದ್ದ.

ಪ್ರಾಕೃತಿಕ ವಿಕೋಪವೇ ಹಾಗೆ. ನಿರ್ದಯವಾಗಿ ನಿಷ್ಠುರವಾಗಿ ಸೇಡು ತೀರಿಸಿಕೊಳ್ಳಲು ಹೊರಟ ಮಹಾ ಕೋಪಿಷ್ಟ ಮಾರಿಯ ಹಾಗೆ ಬಯಲು ಸೀಮೆಯ ರೈತರ ಬದುಕನ್ನು ನುಂಗಿ ನೀರು ಕುಡಿದಿತ್ತು. ಹತ್ತೋ, ಇಪ್ಪತ್ತೋ ಸಾವಿರ ಹಣವನ್ನು ಪರಿಹಾರವಾಗಿ ಕೊಟ್ಟರೆ ಸರಿಪಡಿಸಬಹುದಾದ ಚಿಲ್ಲರೆ ಅನಾಹುತ ಅದಲ್ಲ.
ಅಂದು ಕೊಚ್ಚಿಹೋದ ಈರುಳ್ಳಿ ಮತ್ತೀಗ ಸುದ್ದಿ ಮಾಡಿದೆ. ಈ ಬಾರಿ ಕಣ್ಣೀರು ಸುರಿಸುತ್ತಿರುವವರು ಈರುಳ್ಳಿಯ ಗ್ರಾಹಕರು, ಹೊಟೇಲಿನವರು, ಈರುಳ್ಳಿ ಬಜ್ಜಿ ಮಾಡಿ ಮಾರಿ ಹೊಟ್ಟೆ ಹೊರೆದುಕೊಳ್ಳುವವರು.

ಬುಡಮೇಲಾದ ಅಡುಗೆ ಮನೆ ಅರ್ಥಶಾಸ್ತ್ರ
ಸಾಮಾನ್ಯವಾಗಿ ಅಡುಗೆಮನೆಗೆ ಸಂಬಂಧಪಟ್ಟ ಮಾರುಕಟ್ಟೆ ಪಲ್ಲಟಗಳಾದರೆ ಅದನ್ನು ಗೃಹಿಣಿಯರ ಜತೆ ತಳುಕು ಹಾಕಿಬಿಡುತ್ತಾರೆ. ಬಜೆಟ್ಟಿನಲ್ಲಿ ಖಾದ್ಯವಸ್ತುಗಳ ಮೇಲೆ, ಅಡುಗೆ ಅನಿಲದ ಮೇಲೆ, ಖಾದ್ಯ ತೈಲಗಳ ಮೇಲೆ ತೆರಿಗೆ ಹೆಚ್ಚಿಸಿದರೆ “ಈ ಬೆಲೆ ಏರಿಕೆಯನ್ನು ಗೃಹಿಣಿಯಾಗಿ ನೀವು ಹೇಗೆ ನಿಭಾಯಿಸುತ್ತೀರಿ?’ ಎಂದು ಮಹಿಳೆಯರಿಗೇ ಕೇಳಲಾಗುತ್ತದೆ. “ನಮ್ಮನೆಯ ಫೈನಾನ್ಸ್‌ ಮಿನಿಸ್ಟರ್‌’ ಎಂದು ತಮ್ಮ ಹೆಂಡತಿಯರನ್ನು ರೇಗಿಸುವ ಗಂಡಂದಿರಿದ್ದಾರೆ. ಬಂಗಾರದ ಬೆಲೆ ಏರಿದರೆ ಒಡವೆ ಖರೀದಿಯನ್ನು ಮುಂದೂಡಬಹುದು. ಒಂದು ವರ್ಷ ಸೀರೆ ಖರೀದಿಸದೆ ಹಳೆಯದರಲ್ಲೇ ನಡೆಸಬಹುದು. ಆದರೆ ದಿನನಿತ್ಯದ ಅಡುಗೆಗೆ ಬೇಕಾದ ಈರುಳ್ಳಿಯೇ ಈ ಪರಿ ಮೇಲೇರಿ ಕೂತರೆ? ಕಳೆದ ಕೆಲ ದಿನಗಳಲ್ಲಿ “ಶತಕ ಬಾರಿಸಿದ ಈರುಳ್ಳಿ’, “ಗೃಹಿಣಿಯರ ಕೈಗೆಟುಕದ ಉಳ್ಳಾಗಡ್ಡಿ’ ಎಂಬ ಶೀರ್ಷಿಕೆಗಳು ಮುಖಪುಟದಲ್ಲಿ ಸುದ್ದಿಯಾಗಿವೆ.

ಕಾಶ್ಮೀರದಿಂದ ಕನ್ಯಾಕುಮಾರಿಯ ತನಕದ ಆಹಾರ ಖಾದ್ಯಗಳನ್ನು ಸಮೀಕ್ಷಿಸುತ್ತ ಹೋದರೆ ಒಂದು ರಾಜ್ಯದ ಆಹಾರ ಇನ್ನೊಂದು ರಾಜ್ಯದಲ್ಲಿ ಇಲ್ಲ. ಉತ್ತರದವರಿಗೆ ಗೋಧಿ ಪ್ರಮುಖ ಆಹಾರವಾದರೆ ದಕ್ಷಿಣದವರಿಗೆ ಅನ್ನವೇ ಪ್ರಧಾನ. ನಡುವೆ ರಾಗಿ ತಿನ್ನುವವರು, ಜೋಳದ ರೊಟ್ಟಿಯವರು, ಪರೋಠಾ ಪಠಾಣರು, ಕುಚ್ಚಲಕ್ಕಿ ಕರಾವಳಿಗರು, ತೆಂಗಿನೆಣ್ಣೆಯ ಹವ್ಯಕರು… ವಿಭಿನ್ನ ಜನಾಂಗ, ವಿಭಿನ್ನ ರುಚಿ. ಮೀನು ತಿಂದು ಬುದ್ಧಿವಂತರಾಗಿರಿ, ಮಾಂಸ ತಿಂದು ಬಲಶಾಲಿಗಳಾಗಿರಿ ಎನ್ನುವವರು. ಎಷ್ಟು ವೈವಿಧ್ಯಮಯ ಆಹಾರ ಕ್ರಮ! ಎಲ್ಲರಿಗೂ ಅವರವರ ಆಹಾರ ಕ್ರಮವೇ ಚೆನ್ನ. ಭಿನ್ನತೆಯಲ್ಲಿ ಏಕತೆ. ಆಗಾಗ ಕೇಳಿಬರುವ ದೇಶೀಯ ಘೋಷಣೆ ಯಷ್ಟೆ?

ಆಹಾರ ಕ್ರಮದ ಭಿನ್ನತೆಯಲ್ಲಿ ಏಕತೆ ಸಾಧಿಸಿದ ಏಕೈಕ ತರಕಾರಿ ಈರುಳ್ಳಿ. ಉತ್ತರ ಭಾರತದ ಆಲೂ ಪ್ರಿಯರಿಗೂ ಈರುಳ್ಳಿ ಬೇಕು. ಚಳಿ ಪ್ರದೇಶದ ಈರುಳ್ಳಿ ಭಜಿಗೂ ಬೇಕು, ಸಾದಾ ಸರಳ ಸಾರು ಹುಳಿ ತಂಬುಳಿ… ಎಲ್ಲರೊಳ ಗೊಂದಾಗುವ ಈ ಈರುಳ್ಳಿಗೆ ಟೊಮೆಟೋ ಜೊತೆ ತಾದಾತ್ಮ.

ಬರೀ ಅಡುಗೆಮನೆಯಲ್ಲಿ ಪಾರುಪತ್ಯ ನಡೆಸುವದಲ್ಲ ಈ ಈರುಳ್ಳಿ. ಎಲ್ಲ ಹೊಟೇಲಿನವರೂ ಸಲಾಮ್‌ ಹಾಕಲೇಬೇಕು. ಹೊಟೇಲ್‌ನಲ್ಲಿ ಊಟಕ್ಕೆ ಆರ್ಡರ್‌ ಕೊಟ್ಟು ಕೂತಾಕ್ಷಣ ನಿಮ್ಮ ಮುಂದೆ ಒಂದು ಪ್ಲೇಟಿನಲ್ಲಿ ಈರುಳ್ಳಿ ಗಾಲಿಗಳು, ಸೌತೆಕಾಯಿ ತುಂಡುಗಳು, ಲಿಂಬೆ ಚೂರುಗಳು ಬಂದು ಕೂಡುತ್ತವೆ. ಯಥಾಪ್ರಕಾರ ಕೆಲವರು ತಿನ್ನುತ್ತಾರೆ ಹಲವರು ಚೆಲ್ಲುತ್ತಾರೆ. ಅಂತೂ ಈರುಳ್ಳಿ ಬೆಳೆಗಾರರನ್ನು ಪೋಷಿಸುವವರು ಅಡುಗೆನಿರತ ಗೃಹಿಣಿಯರು, ಈರುಳ್ಳಿ ಪಕೋಡಾದವರು ಮಾತ್ರವಲ್ಲ ಹೊಟೇಲ್‌ ಉದ್ಯಮವೂ ಈರುಳ್ಳಿಗೆ ಆಧಾರಸ್ತಂಭವೇ.

ಆದರೆ, ಕೆಲದಿನಗಳಿಂದ ಹೊಟೇಲಿನ ಊಟದ ಪ್ಲೇಟುಗಳ ಮೊದಲು ಬರುವ ತಟ್ಟೆಗಳಲ್ಲಿ ಈರುಳ್ಳಿ ಕಾಣೆಯಾಗಿದ್ದು ಬರೀ ಸೌತೆಕಾಯಿ, ಮೂಲಂಗಿ, ಕ್ಯಾರೆಟ್ಟುಗಳ ತೆಳು ಪೀಸುಗಳು ನಿಂಬೆಹಣ್ಣಿನ ಚೂರುಗಳೊಂದಿಗೆ ಪ್ರಕಟವಾಗುತ್ತಿವೆ. ಹೀಗೆ ದೇಶದಲ್ಲಿ ಕರ್ನಾಟಕದ ಮಹಾರಾಷ್ಟ್ರವೂ ಸೇರಿದಂತೆ ಹೊಸದೊಂದು “ಆನಿಯನಾಮಿಕ್ಸ್‌’ ಎಂಬ ಹೊಸ ಈರುಳ್ಯರ್ಥಶಾಸ್ತ್ರ ಸದ್ದು ಮಾಡುತ್ತಿವೆ.
ಇಡೀ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ ಈ ಈರುಳ್ಳಿ ಹೊಸ ಹೊಸ ವ್ಯಾಖ್ಯೆಗಳನ್ನೇ ಬರೆದಿದೆ.

ಬೇಡಿಕೆ ಇದ್ದರೆ ಏರುವ ದರ ಇಳಿದಾಗ ಇಲ್ಲ ಆ-“ದರ’
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ವ್ಯಾಪಾರಿಗಳು ನಡೆಸುವ ಲಾಭದ ಆಟವೊಂದನ್ನು ಇಲ್ಲಿ ಹೇಳಲೇಬೇಕು. ಸರಳ ಅರ್ಥಶಾಸ್ತ್ರದ ನಿಯಮವನ್ನು ಹೇಳಬೇಕೆಂದರೆ ಯಾವುದೇ ವಸ್ತುವಿಗೆ ಬೆಲೆ ಏರುವುದು ಎರಡು ಸಂದರ್ಭಗಳಲ್ಲಿ- ಆ ವಸ್ತುವಿಗೆ ಬೇಡಿಕೆ ಹೆಚ್ಚಾದಾಗ ಅಥವಾ ಆ ವಸ್ತುವಿನ ಪೂರೈಕೆ ಕಡಿಮೆಯಾದಾಗ.

ಸಮೃದ್ಧವಾಗಿ ಈರುಳ್ಳಿ ತಿನ್ನುತ್ತಲೇ ಬಂದ ಭಾರತದಲ್ಲಿ ಈಗ ಒಮ್ಮಿಂದೊಮ್ಮೆಲೇ ಬೇಡಿಕೆ ಜಾಸ್ತಿಯಾಗಲಂತೂ ಸಾಧ್ಯವಿಲ್ಲ. ಹಾಗಾಗಿ, ಎರಡನೆಯದೇ ಕಾರಣ. ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿ ಈರುಳ್ಳಿಯ ಪೂರೈಕೆ ಕುಸಿದಿರುವುದೇ ಈ ಯರ್ರಾಬಿರ್ರಿ ದರ ಏರಿಕೆಗೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಆದರೆ ಇಂಥ ಅವಕಾಶಗಳಿಗೇ ಕಾದು ಕೂತಿರುವ ವ್ಯಾಪಾರಿಗಳ ಒಂದು ವರ್ಗವಿದೆ. ಬೇಡಿಕೆ ಹೆಚ್ಚಿದ ಅಥವಾ ಪೂರೈಕೆ ಕುಸಿದ ಸ್ಥಿತಿಯ ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳಲು ಈ ವರ್ಗ ತುದಿಗಾಲಲ್ಲಿ ನಿಂತಿರುತ್ತದೆ. ಈರುಳ್ಳಿ ಅಥವಾ ಯಾವುದೇ ವಸ್ತುವಿರಲಿ ಅವುಗಳನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಿ ಗೋಡೌನುಗಳಲ್ಲಿ ಅನಧಿಕೃತವಾಗಿ ಶೇಖರಿಸಿಡಲಾಗುತ್ತದೆ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಸಹಜವಾಗಿಯೇ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಈ ಏರಿದ ಬೆಲೆಯಲ್ಲಿ ತಾವು ಅಡಗಿಸಿಟ್ಟುಕೊಂಡ ವಸ್ತುವನ್ನು ಮಾರಿಕೊಂಡು ಎರ್ರಾಬಿರ್ರಿ ಲಾಭವನ್ನು ಅಲ್ಪಾವಧಿಯಲ್ಲೇ ಗಳಿಸಿಕೊಳ್ಳುತ್ತಾರೆ. ವ್ಯಾಪಾರಿಗಳ ಈ ಲಾಭಕೋರತನಕ್ಕೆ ಅರ್ಥಶಾಸ್ತ್ರದಲ್ಲಿ ಏಟಚrಛಜಿnಜ (ಲಾಭಕ್ಕಾಗಿ ಶೇಖರಣೆ) ಎನ್ನುತ್ತಾರೆ. ಈ ವಸ್ತುಗಳು ಇನ್ನೂ ಬೆಲೆ ಏರಿಕೆಯ ಬಿಸಿ ಅನುಭವಿಸುವ ಸ್ಥಿತಿ ಬರಲಿದೆ ಎಂಬ ಸುಳ್ಳು ಸುದ್ದಿಗಳನ್ನು ಮಾರುಕಟ್ಟೆಯಲ್ಲಿ ಹಬ್ಬಿಸಿದಾಗ ಗ್ರಾಹಕರೂ “ಕಂಗಾಲು ಖರೀದಿಗೆ’ ಇಳಿಯುತ್ತಾರೆ. ಕೃತಕ ಅಭಾವದ ಜತೆ ನೈಜ ಅಭಾವವೂ ಸೇರಿ ಒಟ್ಟಾರೆ ಮಾರುಕಟ್ಟೆಯಲ್ಲಿ ಬೆಲೆಗಳು ಮತ್ತೂ ಏರುತ್ತವೆ. ವಸ್ತುವೊಂದರ ಬೆಲೆ ಏರಿಕೆಗೆ ಈ ಮೂವರಲ್ಲಿ ಯಾವುದಾದರೂ ಒಂದು ಕಾರಣ ಸಾಕಾಗುತ್ತದೆ. ಆದರೆ, ನಮ್ಮ ಈರುಳ್ಳಿಯ ವಿಷಯದಲ್ಲಿ ಮೂರೂ ಅಂಶಗಳೂ ಕೆಲಸ ಮಾಡಿವೆ.

“ಈರುಳ್ಳಿ ಬೆಲೆ ಏರಿಕೆಯಿಂದ ಅದನ್ನು ಬೆಳೆದ ರೈತರಿಗೇ ಒಳ್ಳೆದಾಯ್ತಲ್ಲವೆ? ಪಾಪ, ಏರಿದ ರೇಟಲ್ಲಿ ಲಾಭವನ್ನಾದರೂ ಮಾಡಿಕೊಳ್ಳಲಿ ರೈತರು’ ಎಂದೊಬ್ಬರು ಮುಗ್ಧವಾಗಿ ನನ್ನಲ್ಲಿ ಹೇಳಿದರು. ಹಾಗೇ ಆಗಿದ್ದರೆ ಒಳ್ಳೆಯದೇ ಆಗುತ್ತಿತ್ತು ಅನ್ನಿ. ಆದರೆ, ಈ ಏರಿದ ಬೆಲೆಯ ಮೊತ್ತ ಗ್ರಾಹಕರನ್ನು ಮಾತ್ರ ತಟ್ಟಿದೆಯೇ ಹೊರತು ಉತ್ಪಾದಕರಿಗೆ ತಲುಪಿಯೇ ಇಲ್ಲ. ಮಧ್ಯವರ್ತಿಗಳು ಹೆಚ್ಚಿನ ಈರುಳ್ಳಿಯನ್ನು ಕಡಿಮೆ ದರದಲ್ಲಿಯೇ ಖರೀದಿಸಿ, ಅದನ್ನು ಅಡಗಿಸಿಟ್ಟು, ಬಳಿಕ ಹೆಚ್ಚಿನ ಬೆಲೆಗೆ ಮಾರಿ ಲಾಭ ಗಳಿಸಿದ್ದಾರೆ. ಸಹಜವಾಗಿಯೇ ಸರಕಾರ ಕ್ರಮ ಕೈಗೊಳ್ಳುತ್ತದೆ. ಈಜಿಪ್ಟಿನಿಂದ ಟರ್ಕಿಯಿಂದ ಈರುಳ್ಳಿ ಆಮದಾಗಿದೆ, ಪೂರೈಕೆ ಹೆಚ್ಚಿದೆ. ಕೆಜಿಗೆ ನೂರೆಂಬತ್ತು ನಿರೀಕ್ಷಿಸಿ ಲಾರಿಗಟ್ಟಲೆ ಈರುಳ್ಳಿಯನ್ನು ಮಾರುಕಟ್ಟೆಗೆ ತಂದ ರೈತನಿಗೆ , ಬೆಲೆಯು 70ಕ್ಕೆ ಕುಸಿದಿದೆ ಎಂದು ತಿಳಿದಾಗ ಆಘಾತವಾಗಿದೆ. ಲಾಭ ಬೆಳೆದವನಿಗೂ ಇಲ್ಲ, ಬಳಸಿದವನಿಗೂ ಇಲ್ಲ. ಬುದ್ಧಿವಂತ ಮಧ್ಯವರ್ತಿಗೆ ಮಾತ್ರ ದುಪ್ಪಟ್ಟು , ಮೂರು ಪಟ್ಟು ಲಾಭವಾಗಿದೆ. ಇದು ಈ ಬಾರಿಯ ಆನಿಯನ್ನೆಕಾನಾಮಿಕ್ಸ್‌.

ರೈತನ ದುರ್ದೆಸೆ ಇಲ್ಲಿಗೇ ಮುಗಿಯುವುದಿಲ್ಲ. ಈರುಳ್ಳಿಗೆ ಈ ಪಾಟಿ ದರ ಏರಿರುವುದನ್ನು ಕಂಡ ರೈತರು ಈ ಬಾರಿ ಉಳಿದ ತರಕಾರಿಗಳನ್ನು ಕೈಬಿಟ್ಟು ಈರುಳ್ಳಿ ಬಿತ್ತನೆ ಪ್ರಾರಂಭಿಸಿದ್ದಾರೆ. ಇದೂ ಒಂದು ಬಗೆಯ “ಕಂಗಾಲು ಬಿತ್ತನೆ’. ಮುಂದಿನ ಸೀಸನ್ನಿನಲ್ಲಿ ಈರುಳ್ಳಿಯ ಪೂರೈಕೆ ಹೆಚ್ಚಾಗಿ ಬೆಲೆ ಇಳಿಕೆ.

ಟೊಮೆಟೊ ಬೆಳೆ ಈ ಥರದ ಕಂಗಾಲು ಇಳಿಕೆಗೆ ತುತ್ತಾಗಿ ರೈತರು ಲಾರಿಗಟ್ಟಲೆ ಟೊಮೆಟೊವನ್ನು ರಸ್ತೆಯ ಮೇಲೆ ಸುರಿಯುವ ಸುದ್ದಿ ಆಗೀಗ ನೋಡುತ್ತಿರುತ್ತೇವಲ್ಲ? ಹೇಗೆ ನೋಡಿದರೂ ರೈತರಿಗೇ ಪಂಗನಾಮ. “ಮೂರು ಹೊನ್ನು ಪುರಾಣಿಕನಿಗೆ ಮೂರೇ ಹೊನ್ನು’ ಎಂಬುದೊಂದು ಗಾದೆ ಇದೆ. ಅದೇ ಕಥೆ ನಮ್ಮ ರೈತರದ್ದು.

ನಾವು ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಬಿದ್ದವರನ್ನು ನೋಡಿದ್ದೇವೆ. ಆದರೆ, ಕೆಲ ವರ್ಷಗಳ ಹಿಂದೆ ಈರುಳ್ಳಿ ಸಿಪ್ಪೆಯ ಮೇಲೆ ಕಾಲಿಟ್ಟ ದೆಹಲಿಯಲ್ಲಿನ ಮದನ್‌ಲಾಲಾ ಖುರಾನಾ ಸರಕಾರವೇ ಬಿದ್ದು ಹೋಗಿತ್ತು, ಎಂದರೆ ಈರುಳ್ಳಿಗೆ ಅದೆಂಥ ಶಕ್ತಿ ಇರಬೇಡ?

ಈ ಬಾರಿಯೂ ಅದು ಸದನದಲ್ಲಿ ಸಾಕಷ್ಟು ಸದ್ದು ಮಾಡಿದೆ. ಮಹಾಭಾರತದಲ್ಲಿ ದ್ರೋಣಾಚಾರ್ಯರನ್ನು ಗೊಂದಲಕ್ಕೀಡು ಮಾಡಲು ಅಶ್ವತ್ಥಾಮ ಹತಃ ಕುಂಜರ ಎಂಬ ಅರ್ಧ ವಾಕ್ಯ ಹೇಳಿದ ಕತೆಯನ್ನು ನೆನಪಿಸಿದೆ.

ಹಿಂದೆ ವಿದೇಶೀ ಮಂತ್ರಿಯಾಗಿದ್ದಾಗ ಹಲವರ ಜತೆ ಸ್ನೇಹ ಬೆಳೆಸಿದವರು ನಮ್ಮ ಈಗಿನ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌. ಈರುಳ್ಳಿ ಬೆಲೆ ಏರಿಕೆಯ ಬಿಸಿ ಮಿತಿಮೀರಿದಾಗ ಸಹಜವಾಗಿಯೇ ಟರ್ಕಿಯವರಿಗೆ ಫೋನ್‌ ಮಾಡಿ “ಕುಛ… ಆನಿಯನ್‌ ಭೇಜೋ ಭಾಯ್‌’ಎಂದಿರಬೇಕು. ಕೆಂಪು ಮುಖದ ಆಂಗ್ಲೋ ಇಂಡಿಯನ್ನರ ಬಣ್ಣ ನೆನಪಿಸುವ ಟರ್ಕಿ ಉಳ್ಳಾಗಡ್ಡಿ ದಂಡಿಯಾಗಿ ಬಂದಿಳಿಯಿತು. ಅದು ರುಚಿಯಿಲ್ಲ ತೆಂಗಿನಕಾಯಷ್ಟು ದೊಡ್ಡ ಗಾತ್ರದ್ದು. ಎರಡು ಈರುಳ್ಳಿಗೇ ಒಂದು ಕೆ.ಜಿ. ಆಯ್ತು ಎಂಬೆಲ್ಲ ತಕರಾರುಗಳು ಎದ್ದಿವೆ. ಓರ್ವ ಲೋಕಸಭಾ ಸದಸ್ಯರು, ನಿರ್ಮಲಾರಲ್ಲಿ “ನೀವು ಟರ್ಕಿ ಈರುಳ್ಳಿ ತಿಂದು ನೋಡಿದೀರೇನ್ರೀ?’ ಎಂದು ಕೇಳಿದ್ದಾರೆ. ಸಹಜ ಧಾಟಿಯಲ್ಲಿ ನಿರ್ಮಲಾ ಅವರು, “ನಮ್ಮನೇಲಿ ಈರುಳ್ಳಿನೇ ತಿನ್ನೋದಿಲ್ರಿ’ ಅಂದುಬಿಟ್ಟಿದ್ದಾರೆ. ಅದೊಂದೇ ವಾಕ್ಯವನ್ನು ಹಿಡಿದುಕೊಂಡ ಕೆಲ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿವೆ.

ಬೆಲೆ ಏರಿಕೆಯಿಂದಾಗಿ ಈಗ ಅನೇಕರು ಈರುಳ್ಳಿ ತಿನ್ನುವುದನ್ನೇ ಬಿಟ್ಟಿದ್ದಾರೆ. “ಇವರೆಲ್ಲ ನಮ್ಮ ಪಂಗಡಕ್ಕೇ ಸೇರ್ಪಡೆ ಆದರು ನೋಡ್ರೀ’ ಎಂದು ಈರುಳ್ಳಿ ತಿನ್ನದ ಪಂಥದವರು ಹೇಳಿಕೊಂಡರೆ ಹೇಗಿರುತ್ತದೆ? ತಲೆಬುಡವಿಲ್ಲದ ಮಾತುಗಳು ಬರುತ್ತಲೇ ಇರುತ್ತವೆ.

ಎಲ್ಲಿಯ ತನಕ ನಮ್ಮ ದೇಶದ ಸಣ್ಣ , ಮಧ್ಯಮ ಹಿಡುವಳಿದಾರ ಅದರಲ್ಲೂ ಆಹಾರ ಧಾನ್ಯಗಳನ್ನು ಬೆಳೆಯುವ ರೈತರ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಆಳುವವರಿಂದ ಆಗುವುದಿಲ್ಲವೋ ಅಲ್ಲಿಯ ತನಕವೂ ರೈತರ ಗೋಳು ಮುಗಿಯಲಾರದು. ಈರುಳ್ಳಿಯಂಥ ಬೆಳೆಗಳು ಸೂಕ್ತ ಸಂಸ್ಕರಣೆಯ ಸವಲತ್ತುಗಳಿಲ್ಲದೆ “ಹಸಿಬಿಸಿ’ ದರಕ್ಕೆ ಮಾರಾಟವಾಗುತ್ತವೆ. ರೈತನ ಬೆವರಿಗೆ ಬೆಲೆ ಕಟ್ಟುವವ ರೈತನೂ ಅಲ್ಲ , ಗ್ರಾಹಕನೂ ಅಲ್ಲ , ಲಾಭಕೋರ ದಲ್ಲಾಳಿ! ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅತ್ಯಾಧುನಿಕ ಸವಲತ್ತುಗಳ ಬೆಳೆ ಶೇಖರಣಾ ಶೈತ್ಯ ಗೃಹಗಳು ಸ್ಥಾಪನೆಯಾದರೆ ರೈತ ಅವುಗಳ‌ಲ್ಲಿ ತನ್ನ ಬೆಳೆಯನ್ನು ಸಂಸ್ಕರಿಸಿ ಶೇಖರಿಸಿಡಬಹುದು. ತನಗೆ ಅಗತ್ಯವಿದ್ದಾಗ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದು. ಮಧ್ಯವರ್ತಿಗಳ ಹಿಡಿತದಿಂದ ತಪ್ಪಿಸಿಕೊಳ್ಳಬಹುದು. ಬೆಳೆಗಾರ ಹಾಗೂ ಬಳಕೆದಾರರ ನಡುವೆ ನೇರ ಕೊಡುಕೊಳ್ಳುವಿಕೆಗೆ ಕ್ರಮ ಕೈಗೊಂಡರೆ ಸಹಜವಾಗಿಯೇ ಮಧ್ಯವರ್ತಿಗಳ ಹಿಡಿತದಿಂದ ಮುಕ್ತಗೊಂಡು ರೈತರಿಗೂ ಗ್ರಾಹಕರಿಗೂ “ನ್ಯಾಯಬೆಲೆ’ ದೊರಕಿಸಲು ಸಾಧ್ಯವಾಗುತ್ತದೆ.

ನಮ್ಮ ಹೊಲಗದ್ದೆಗಳಲ್ಲಿ ತಂತ್ರಜ್ಞಾನದ ಬಳಕೆ ಸಮರ್ಪಕವಾಗಿ ಆಗಬೇಕು. ಹಾಗೆ ಆದಾಗ “ಬಿತ್ತಿಲ್ಲ ಬೆಳೆದಿಲ್ಲ ಹೊತ್ತು ತಂದಿಲ್ಲ ಲಕ್ಷ ಲಕ್ಷ ಗಳಿಸಿದ ದಲ್ಲಾಳಿ’ ಎಂಬ ಮಾತು ಸುಳ್ಳಾದೀತು. ಬೆಳೆಗಳ ಸಂಸ್ಕರಣೆ, ಪರಿಷ್ಕರಣೆ, ಶೇಖರಣೆಗಳೆಲ್ಲ ಸಮರ್ಪಕವಾಗಿ ಆದರೆ ಇಂತಹ ಕೃತಕ ಬೆಲೆ ಏರಿಕೆ, ಕುಸಿತಗಳಿಂದ ರೈತ ಕಂಗಾಲಾಗಬೇಕಿಲ್ಲ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಆಹಾರ ಪದಾರ್ಥಗಳು ಎಂದಿದ್ದರೂ ನಮ್ಮ ಕೃಷಿ ವಲಯಕ್ಕೆ ಮಾರಕವೇ. ಆದರೆ ಭಾರತದ ರೈತನಿಗೆ ಇವೆಲ್ಲ ಸದ್ಯಕ್ಕಂತೂ ಮರೀಚಿಕೆಯೇ.

ಈರುಳ್ಳಿಯೂ ನಗಿಸಬಲ್ಲದು!
ಕೇವಲ ಕಣ್ಣೀರು ತರಿಸುವುದೇ ಹೆಗ್ಗಳಿಕೆಯಾಗಿರುವ ಈರುಳ್ಳಿ ಇತ್ತೀಚೆಗೆ ಅನೇಕರ ಮುಖದಲ್ಲಿ ನಗುವನ್ನೂ ತರಿಸುತ್ತದೆ. ಇದರಲ್ಲಿ ಈರುಳ್ಳಿ ದಲ್ಲಾಳಿಗಳು ಅಧಿಕ ಲಾಭ ಗಳಿಸಿ ಬೀರುವ ದುಷ್ಟ ನಗುವನ್ನು ಸೇರಿಸುವುದು ಬೇಡ ಬಿಡಿ. ತುಂಬ ಹಿಂದೆಯೇ ಆ ನಮ್ಮ ಲಾಂಗೂಲಾಚಾರ್ಯರು ಈರುಳ್ಳಿಯ ಮಹಿಮೆಯನ್ನು ಕೊಂಡಾಡುತ್ತ,

ಅಡ್ಡ ಕತ್ತರಿಸಿದರೆ ಚಕ್ರ ಉದ್ದ ಸೀಳಿದರೆ ಶಂಖ…
ಮುದ್ರೆಯನ್ನು ಪ್ರದರ್ಶಿಸುವ ಈರುಳ್ಳಿ ವಿಷ್ಣುವಿನ ಆಯುಧಗಳನ್ನೇ ತನ್ನೊಳಗೆ ಅಂತರ್ಗತ ಮಾಡಿಕೊಂಡಿರುವ ದೈವೀ ಗುಣವುಳ್ಳ ಏಕೈಕ ತರಕಾರಿ ಎಂದಿದ್ದಾರೆ. ಆದಾಗ್ಯೂ ವಿಷ್ಣುವಿನ ಪರಮ ಭಕ್ತರು ಕೆಲವರು ಈರುಳ್ಳಿ ವಜ್ಯವೆಂಬ ಕಠೊರ ನಿಲುವು ತಳೆದಿರುವುದೇಕೋ? ನೆಟ್ಟಿಗರು ಸಂಶೋಧನೆಗೆ ತೊಡಗಬಹುದು.

ಇತ್ತೀಚಿನ ಈರುಳ್ಳಿ ಬೆಲೆ ಜಿಗಿತದಿಂದಾಗಿ ವ್ಯಂಗ್ಯ ಚಿತ್ರಕಾರರು, ಕವಿಗಳು, ಕಲಾವಿದರ ಚಿತ್ತ ಈಗ ಈರುಳ್ಳಿಯತ್ತ ಹರಿಯತೊಡಗಿದೆ. “ನಮ್ಮಲ್ಲಿ ಮೊಬೈಲ್‌ ಖರೀದಿಸಿದರೆ ಒಂದು ಕೆ.ಜಿ. ಈರುಳ್ಳಿ ಉಚಿತ’ ಎಂಬ ಬೋರ್ಡುಗಳು, “ದೇವರಿಗೆ ಈರುಳ್ಳಿ ತುಲಾಭಾರದ ಹರಕೆ ಹೊತ್ತ ಶ್ರೀಮಂತ ಭಕ್ತ’, “ನಮ್ಮನೇಲಿರೋ ಚಿನ್ನಬೆಳ್ಳಿ ಎಲ್ಲಾ ಬಿಟ್ಟು ಕಳ್ಳ ಇರೋ ಎರಡು ಕೆ.ಜಿ. ಈರುಳ್ಳಿ ಕದಿದ್ದಾನೆ’ ಎಂದು ದೂರು ಕೊಟ್ಟ ಗ್ರಹಸ್ಥ ಹೀಗೆ ಬಗೆ ಬಗೆಯ ಈರುಳ್ಳಿ ತಮಾಷೆಗಳು ಉರುಳುತ್ತಿವೆ. ಈರುಳುರುಳಲು ನಗಬೇಕೆ? ಅಳಬೇಕೆ? ತಿಳಿಯದಾಗಿದೆ.

ಅತ್ತ ಗ್ರಾಹಕನೂ ಅಲ್ಲದ, ದಲ್ಲಾಳಿಯೂ ಅಲ್ಲದ ಹೊಟ್ಟೆಪಾಡಿಗೆ ತರಕಾರಿಯ ತಳ್ಳುಗಾಡಿಯನ್ನು ಆಶ್ರಯಿಸಿರುವ ಅತಿ ಚಿಕ್ಕ ವ್ಯಾಪಾರಿ ಮಾತ್ರ ಕಂಗಾಲಾಗಿದ್ದಾನೆ. ಅವನು ದಿನಕ್ಕಾಗುವಷ್ಟು ತರಕಾರಿ ಮಾತ್ರ ಖರೀದಿಸಿ ತಂದು ಬೀದಿಯಲ್ಲಿ ಮಾರುತ್ತಾನೆ. ನಿನ್ನೆ ಕೆ.ಜಿ.ಗೆ 200 ರೂಪಾಯಿ ಕೊಟ್ಟು ಖರೀದಿಸಿ ಇಟ್ಟುಕೊಂಡಿದ್ದೆ. ಇವತ್ತೀಗ ರೂ.75ಕ್ಕೆ ಕುಸಿದಿದೆ. ನಮ್ಮ ಗತಿ ದೇವರೇ ನೋಡಬೇಕು ಎನ್ನುತ್ತಿದ್ದಾನೆ. ಈರುಳ್ಳಿಯ ಉರುಳುವಿಕೆ ಬೇಗನೇ ಸುಸ್ಥಿರಗೊಳ್ಳಲಿ ಎಂಬುದೇ ನಮ್ಮ ಮಾರುಕಟ್ಟೆ ಹಾರೈಕೆ.

ಭುವನೇಶ್ವರಿ ಹೆಗಡೆ

ಟಾಪ್ ನ್ಯೂಸ್

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.