ಹೊರಜಗತ್ತು ಮತ್ತು ಒಳಜಗತ್ತು
Team Udayavani, May 26, 2019, 6:00 AM IST
ಉಪನಿಷತ್ತಿನ ಮನೋಧರ್ಮವನ್ನು ಅನುಭವದ ಶೋಧನೆಯ ಮನೋಧರ್ಮ ಎನ್ನಬಹುದು. ಅನುಭವದ ಶೋಧನೆಯೂ ಅನುಭವವೇ. ಆಳದ ಅನುಭವ ಎನ್ನಬಹುದು. ಮೇಲ್ನೋಟದ, ಮೇಲ್ ಪದರದ ಅನುಭವದಲ್ಲಿ ತಂಗುವುದು ಸಾಮಾನ್ಯವಾಗಿ ಲೋಕದ ರೀತಿ. ಆದರೆ, ಆಳದಿಂದ ಕರೆಯೊಂದು ಕೇಳಿಬಂದಂತೆ, ಆ ಕರೆಗೆ ಓಗೊಡದಿರುವುದು ಅಸಾಧ್ಯವೆಂಬಂತೆ ಅನುಭವದ ಆಳಕ್ಕೆ ಇಳಿಯುವುದು, ಅದರಲ್ಲಿ ಮುಳುಗುವುದು ಉಪನಿಷತ್ತಿನ ರೀತಿ.
ಅಂದರೆ ತನ್ನಲ್ಲಿ ತಾನು ಮುಳುಗುವುದು!
ಇದರಲ್ಲೇನು ವಿಶೇಷ ಎಂದು ನಾವು ಕೇಳಬಹುದು. ಏಕೆಂದರೆ, ಲೋಕವೆಲ್ಲ ಹೀಗೇ ಇದೆ. ಈಗಾಗಲೇ ಲೋಕವೆಲ್ಲ ತನ್ನಲ್ಲಿ ತಾನು ಮುಳುಗಿದೆ. ತನ್ನ ಹಿತಾಸಕ್ತಿಯ ಚಿಂತನೆಯಲ್ಲಿ, ತನ್ನ ಸ್ವಾರ್ಥವನ್ನು ಸಾಧಿಸುವುದು ಹೇಗೆಂಬ ಚಿಂತೆಯಲ್ಲಿ , ಇನ್ನೊಂದು ಜೀವವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದು ಹೇಗೆಂಬ ಚಿಂತೆಯಲ್ಲಿ ಲೋಕ ಮುಳುಗಿದೆ. ಎಚ್ಚರದಲ್ಲೂ ಕನಸಿನಲ್ಲೂ ಇದೇ ಚಿಂತೆ. ಆದುದರಿಂದ ತನ್ನಲ್ಲಿ ತಾನು ಮುಳುಗಿದಂತೆಯೇ ಇದೆ. ಇದೊಂದು ರೀತಿಯ ಸಮಾಧಿ ಸ್ಥಿತಿಯೇ ಸೈ!
ಇದನ್ನೇ ಏನು ಉಪನಿಷತ್ತು ಹೇಳವುದು- ಎಂದರೆ, ಉಪನಿಷತ್ತು ಲೋಕದ ಈ ಸ್ಥಿತಿಯನ್ನು ಕಂಡದ್ದು ಹೌದು. ಲೋಕವನ್ನು ಕಾಣದೆ ಇರಲಾಗುತ್ತದೆಯೆ? ಕಂಡು, ಹೀಗೆ ಮನುಷ್ಯಜೀವ ಒಂದು ಚಿಂತೆಯಲ್ಲಿ ಮುಳುಗಬಲ್ಲ ಶಕ್ತಿಯನ್ನು ನೋಡಿ ಮೆಚ್ಚಿದ್ದೂ ಹೌದು. ಇದು ದೊಡ್ಡಮಟ್ಟದ ಏಕಾಗ್ರತೆ ಎಂದು ಅದಕ್ಕೆ ಅರ್ಥವಾದದ್ದೂ ಹೌದು. ಆದರೆ, ಹೀಗೆ ತನ್ನ ಚಿಂತೆಯಲ್ಲೇ ಲೋಕ ಮುಳುಗಿದ್ದರೂ ಲೋಕ ಕೊರಗುತ್ತಿದೆಯಲ್ಲ! ಕೊರಗಿನಲ್ಲೇ ಮುಳುಗಿದಂತಾಗಿದೆ. ಅದು ಸುಖವಾಗಿಲ್ಲ. ಇನ್ನೊಬ್ಬರನ್ನು ನೋಡಿ ತಾನು ಅವರಂತೆ ಆಗಬೇಕೆಂಬ, ಅವರಲ್ಲಿದ್ದುದು ತನ್ನಲ್ಲೂ ಇರಬೇಕೆಂಬ; ನಿಮಗೆ ಸರಿ ನಾವೆಂಬ, ಸಾಧ್ಯವಾದರೆ ನಿಮ್ಮನ್ನು ಮೀರಿಸಬೇಕೆಂಬ ಚಿಂತೆ ಲೋಕವನ್ನು ಕಾಡುತ್ತಿದೆ. ನಿರಂತರ ಇನ್ನೊಬ್ಬರ ಜೊತೆ ತನ್ನನ್ನು ಹೋಲಿಸಿಕೊಳ್ಳುತ್ತಿದೆ. ಹೋಲಿಸಿಕೊಂಡು ಕೊರಗುತ್ತಿದೆ ಅಥವಾ ಬೀಗುತ್ತಿದೆ. ಬೀಗುವುದೆಂದರೆ ಇನ್ನೊಬ್ಬರ ದುಃಖವೇ ನಮ್ಮ ಸುಖವೆಂದುಕೊಂಡಂತೆ! ಇದರಿಂದ, ನಿಜವಾದ ಸುಖವೇನೆಂಬುದರ ಗುರುತೂ ನಮಗೆ ಸಿಗದಂತಾಯಿತು. ಕೊರಗಿಗೆ ನಾವು ಮುಡಿಪಾಗಿಬಿಟ್ಟೆವು. ‘ಇದೇನು ಪಾಡು’ ಎಂದು ಉಪನಿಷತ್ತು ಗುರುತಿಸಿತು. ತನ್ನಲ್ಲಿ ತಾನು ಮುಳುಗಿಯೇ ಉಪನಿಷತ್ತು ಈ ವಿಪರ್ಯಾಸವನ್ನು ಗುರುತಿಸಿತು!
ಮನುಷ್ಯ ಜೀವದಲ್ಲಿ ಎಲ್ಲವೂ ಇದೆ, ಏಕಾಗ್ರತೆಯ ಸಾಮರ್ಥ್ಯವಿದೆ; ಆದರೆ, ಎಲ್ಲವೂ ಇದ್ದು ಎಲ್ಲೋ ಒಂದು ಎಳೆ ತಪ್ಪಿಹೋದ ಸ್ಥಿತಿ, ಒಂದು ಎಡವಟ್ಟು, ಒಂದು ಸಣ್ಣ ದಿಕ್‌ಚ್ಯುತಿ ನಡೆದುಬಿಟ್ಟಿದೆ. ಹೊಸದಾಗಿ ಏನು ಸೃಷ್ಟಿಸಬೇಕಿಲ್ಲ, ದಿಕ್ಕನ್ನು ಸರಿಪಡಿಸಿದರೆ ಸಾಕು ಎಂಬ ರೀತಿಯ ಪರಿಸ್ಥಿತಿಯೊಂದು ನಿರ್ಮಾಣವಾಗಿದೆ ಎಂದು ಉಪನಿಷತ್ತು ಗುರುತಿಸಿತು. ಬೇರೆ ಮಾತುಗಳಲ್ಲಿ ಹೇಳಬೇಕಾದರೆ- ಮನುಷ್ಯ ಜೀವ ಇಂದ್ರಿಯಾನುಭವಗಳನ್ನು ನೆಚ್ಚಿಕೊಂಡಿತು. ಇದನ್ನೇ ನಿಜವಾದ ಅನುಭವವೆಂದು ಬಗೆಯಿತು. ಬುದ್ಧಿ , ಮನಸ್ಸುಗಳಿಂದ ಈ ಅನುಭವಗಳನ್ನೇ ಸ್ವಾನುಭವವೆಂದು ಸಮರ್ಥಿಸುತ್ತ ಹೋಯಿತು! ಪರಿಣಾಮವಾಗಿ ಅನುಭವವನ್ನು ಶೋಧಿಸಲಾರದೆ ಹೋಯಿತು. ಹೊರಗಿನಿಂದ ಕಂಡದ್ದರ, ಕೇಳಿದ್ದರ ಪ್ರಭಾವಕ್ಕೆ ಒಳಗಾಗಲೇಬೇಕಾದಂಥ ಲೋಕದಲ್ಲಿ ತಾನು ಕಣ್ತೆರೆದಿದ್ದೇನೆ, ಹೀಗೊಂದು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿನ್ನೆಲೆಯನ್ನು ಅರಿಯಲಾರದೆ ಹೋಯಿತು. ಕಂಡದ್ದರ ಹಿಂದೆ ಕಾಣದೆ ಇದ್ದದ್ದು ಅಡಗಿದೆ ಎಂದರೆ ಕಣ್ಣುಬಿಟ್ಟು ಲೋಕವನ್ನು ನೋಡಿದ ಸಂಭ್ರಮದಲ್ಲಿ ಮುಳುಗಿ ಕಾಣದೆ ಇದ್ದದ್ದು ಇರಬಹುದು ಎಂದು ನಂಬಲಾರದೇ ಹೋಯಿತು. ಕಣ್ಣು ಬಿಡುವುದಕ್ಕೂ ಲೋಕವು ತನಗೆ ಕಾಣುವುದಕ್ಕೂ ಸಂಬಂಧವಿರುವಂತೆ, ತಾನು ಕಣ್ಣುಮುಚ್ಚುವುದಕ್ಕೂ ಕಾಣದೇ ಇದ್ದುದರ ಅರಿವು ಆಗುವುದಕ್ಕೂ ಒಂದು ಆಂತರಿಕ ಸಂಬಂಧವಿರಬಹುದು ಎಂಬ ಸರಳ ಸಮೀಕರಣವನ್ನೂ ಅರಿಯಲಾರದೆ ಹೋಯಿತು. ಕಣ್ಣು ಮುಚ್ಚುವುದೆಂದರೆ ಇಂದ್ರಿಯವು ವಿಕಲಗೊಂಡಂತೆ ಎಂದು ಭಾವಿಸುವಷ್ಟು ದೂರ ಹೋಯಿತು. ಬದುಕಿನ ಪರ ಎಂದು ಹೇಳುತ್ತಲೇ ಬದುಕಿನಲ್ಲಿ ಪ್ರಯೋಗ ಪರತೆಗೇ ಎರವಾಗಿಬಿಟ್ಟಿತು!
ಉಪನಿಷತ್ತು ಪ್ರಯೋಗಪರ. ಅದು ಇಂದ್ರಿಯ ವಿರೋಧಿಯಲ್ಲ. ಬದಲಾಗಿ ಇಂದ್ರಿಯ ಪ್ರಪಂಚವೇ ಸರ್ವಸ್ವ ಎಂದು ಬಗೆಯುವುದೇ ನಿಜವಾಗಿ ಇಂದ್ರಿಯ ವಿರೋಧಿಯಾದ್ದು- ಏಕೆಂದರೆ, ಈ ನಿಲುವು ಇಂದ್ರಿಯಗಳ ನಿಜವಾದ ಸಾಮರ್ಥ್ಯವನ್ನು ಅಲ್ಲಗಳೆದಂತೆ ಎಂಬ ನಿಲುವು- ಉಪನಿಷತ್ತಿನದು. ಇಂದ್ರಿಯಗಳು ಹೊರಮುಖವಾಗಿರುವಂತೆ ಒಳಮುಖವೂ ಆಗಬಲ್ಲುದು. ನಿಜಕ್ಕಾದರೆ, ಅವು ಒಳಮುಖವೇ ಆಗಿದ್ದವು; ಈ ಲೋಕಕ್ಕೆ ಬಂದ ಮೇಲೆ ಹೊರಮುಖವಾದವು, ಹೊಸಮುಖವಾಗಿ ಇರುವುದೇ ಅವುಗಳ ಸ್ವಭಾವವೆನ್ನುತ್ತಾರಲ್ಲ- ಒಳಮುಖವಾಗಿರುವುದೂ ಅವುಗಳ ಸ್ವಭಾವವೇ ಎಂದು ಉಪನಿಷತ್ತು ಅರ್ಥಮಾಡಿಕೊಂಡಿದೆ. ‘ಸ್ವಭಾವ’ ಎನ್ನುವಲ್ಲಿ ಯಾವುದನ್ನು ನೋಡಿದುವೋ ಅದನ್ನು ಕನ್ನಡಿಯಂತೆ ಪ್ರತಿಫಲಿಸುವುದು ಈ ಇಂದ್ರಿಯ, ಮನಸ್ಸುಗಳ ಸ್ವಭಾವ ಎನ್ನುವುದೇ ಉಪನಿಷತ್ತಿಗೆ ತಿಳಿದುಬಂದ ಮೊದಲ ನಿಜ. ಇವು ಪ್ರತಿಫಲನ ಮಾಡುವ ಯಂತ್ರಗಳೇ ನಿಜ. ಲೋಕವನ್ನು ನೋಡಿ ಅದರಂತೆ ಆಗಬೇಕೆಂಬ ಪ್ರೇರಣೆ ಹುಟ್ಟುವಲ್ಲಿ- ‘ಅದರಂತೆ’ ಅಂದರೇನು? ನಮ್ಮ ಕಣ್ಣು ನೋಡಿದ್ದು ಒಂದು ‘ದೃಶ್ಯ’ವನ್ನು. ‘ದೃಶ್ಯ’ವೆಂದರೆ ನೋಡುವುದಕ್ಕೆ ಯೋಗ್ಯವಾದದ್ದು ಎಂದೇ ಅರ್ಥ. ಅಂದರೆ- ಕಣ್ಣುಬಿಟ್ಟರೆ ಕಾಣುತ್ತದೆ ಎಂದು! ಈ ದೃಶ್ಯದ ‘ಚಿತ್ರ’ ನಮ್ಮಲ್ಲಿ ನೆಲಸಿತು. ಅಂದರೆ ನೋಡಿದ್ದ ಪ್ರತಿಫಲನ! ನೋಡಿದ್ದರ ನೆರಳು! ಮನಸ್ಸೆಂದರೆ ಇಂಥ ಚಿತ್ರಗಳು! ಚಿತ್ರಶಾಲೆ! ಯಾವುದನ್ನು ನೋಡಿದೆವೋ ಅದರಂತೆ ಆಗುವೆವು ಎನ್ನುತ್ತಾರಲ್ಲ- ಅಂದರೆ ಏನು ನೋಡಿದೆವೋ ಅದರ ಚಿತ್ರಗಳು ನಾವು.copyಗಳು ! ಪ್ರತಿಗಳು! ನಾವು ಸ್ವತಂತ್ರ ವ್ಯಕ್ತಿಗಳೆಂದುಕೊಳ್ಳುವ ಪ್ರತಿಗಳು- ಅಷ್ಟೆ. ಹೊರಲೋಕದ ಈ ಪ್ರತಿಫಲನ ವ್ಯಾಪಾರದಂತೆಯೇ ಒಳಲೋಕದ್ದೂ ಪ್ರತಿಫಲನವೇ. ಅಂದರೆ, ಒಳಗಿನ ಪ್ರೇರಣೆಗೆ ಸ್ಪಂದಿಸುವುದೆಂದರೆ ಅದನ್ನು ತನ್ನಲ್ಲಿ ಪ್ರತಿಫಲಿಸುವುದೇ.
ಒಳಗಿನ ಪ್ರೇರಣೆಗೆ ಸ್ಪಂದಿಸುವಾಗ ಮಾತ್ರ ನಿಜದ ಅರಿವು. ನಿಜದ ಅರಿವಾದಾಗ ಮಾತ್ರ ನಿಜ ಹೇಳುವ ಉತ್ಸಾಹ. ಏಕೆನ್ನುವಿರೋ- ಹೊರಲೋಕದಲ್ಲಿ ನಾವು ಸ್ವತಂತ್ರ ವ್ಯಕ್ತಿಗಳೆಂದು ಭಾವಿಸಿಕೊಂಡಿಲ್ಲವೆ? ಹಾಗಲ್ಲವೆಂದು ಸ್ವಲ್ಪ ಮಟ್ಟಿಗೆ ತಿಳಿದಿದ್ದರೂ ಸ್ವತಂತ್ರ ವ್ಯಕ್ತಿಗಳೆಂದೇ ನಟಿಸುತ್ತಿಲ್ಲವೆ? ಹೊರಲೋಕದಲ್ಲಿ, ಸ್ವತಂತ್ರರಲ್ಲವೆನ್ನುವ ಸ್ಥಿತಿ ದುಃಖ ದಾಯಕವಲ್ಲವೆ? ಆದುದರಿಂದಲೇ, ಹೊರಲೋಕದ ಅರಿವು ನಿಜವಾದ ಅರಿವಲ್ಲ. ಅದು ನಾಟಕೀಯವಾದ ಅರಿವು. ಒಳಗಿನ ಪ್ರೇರಣೆಗೆ ಒಳಗಾಗಿ ಅದನ್ನು ಪ್ರತಿಫಲಿಸುವಲ್ಲಿ , ತಾನು ಪ್ರತಿಫಲನ, ತಾನು ಸ್ವತಂತ್ರನಲ್ಲ, ತಾನೊಂದು ನೆರಳಿನಂತೆ, ಗೊಂಬೆಯಂತೆ ಎಂಬ ಅರಿವು ಬಂದಾಗ- ಹಾಗೆಂದೇ ಅದನ್ನು ಉಗ್ಗಡಿಸುವ ಉತ್ಸಾಹ. ತಾನು ಸ್ವತಂತ್ರನಲ್ಲ ಎಂದು ಸಾರುವ ಉತ್ಸಾಹ. ತನ್ನ ಅಸ್ವಾತಂತ್ರ್ಯವನ್ನು ಸಾರುವ ಮೂಲಕವೇ ‘ಸ್ವತಂತ್ರ’ವಾದದ್ದು ಇನ್ನೊಂದಿದೆ ಎಂದು ಸೂಚಿಸುವ ಉತ್ಸಾಹ! ಈ ಸಂಭ್ರಮವನ್ನು ಏನೆನ್ನೋಣ!
ಇದೊಂದು ಸಂಭ್ರಮವೇ ನಿಜ. ಏಕೆಂದರೆ, ಈಗ ಇಂದ್ರಿಯಗಳಿಗೆ ಲೋಕ ಅವುಗಳ ಮೇಲೆ ಹೇರಿದ ಮಿತಿಯಿಂದ ಬಿಡುಗಡೆ. ಉಪನಿಷತ್ತೆಂದರೆ- ಬಿಡುಗಡೆಗೊಂಡ ಇಂದ್ರಿಯಗಳ ಹಾಡು. ಹಾಗೆ ಕೇಳಿದರೆ ಇಂದ್ರಿಯಗಳನ್ನು ಬಿಡುಗಡೆಗೊಳಿಸಬಲ್ಲ ಹಾಡು ಕೂಡ. ಕೇನೋಪನಿಷತ್ತು ಅಥವಾ ತಲವಕಾರೋಪನಿಷತ್ತು ಎಂದು ಪ್ರಸಿದ್ಧವಿರುವ ಉಪನಿಷತ್ತಿನ ಮೊದಲ ನುಡಿ ಇದು:
ಕೇನೇಷಿತಂ ಪತತಿ ಪ್ರೇಷಿತಂ ಮನಃ
ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ
ಕೇನೇಷಿತಾಂ ವಾಚಮಿಮಾಂ ವದಂತಿ
ಚಕ್ಷುಃ ಶ್ರೋತ್ರಂ ಕ ಉ ದೇವೋ ಯುನಕ್ತಿ
ಮನಸ್ಸು ವಿಷಯಗಳತ್ತ ಹರಿಯುತ್ತದಲ್ಲ, ಯಾರ ಇಷ್ಟದಂತೆ, ಯಾರು ಪ್ರೇರಿಸುವಂತೆ ಇದು ನಡೆದುಕೊಳ್ಳುತ್ತಿದೆ? ಈ ಉಸಿರಾಟ? ಯಾರು ನಡೆಸುತ್ತಿರುವುದು? ಮತ್ತು ಮಾತು? ಯಾರು ಮಾತನಾಡಿಸುತ್ತಿರುವುದು? ಇದು ಯಾರ ಇಚ್ಛೆ? ನಮ್ಮ ಕಣ್ಣು-ಕಿವಿಗಳಿಂದ ಕೆಲಸ ತೆಗೆದುಕೊಳ್ಳುತ್ತಿರುವ ದೇವನಾರು?
ನಮ್ಮ ಮನಸ್ಸು-ಇಂದ್ರಿಯಗಳು ಅದಾವುದೋ ಇನ್ನೊಂದರಿಂದ ಪ್ರೇರಿಸಲ್ಪಡುತ್ತಿವೆ ಎಂಬ ಅನುಭವದಿಂದ ಹುಟ್ಟಿಕೊಂಡ ನುಡಿ ಇದು. ಇಂದ್ರಿಯ ವ್ಯಾಪಾರಗಳು ನಡೆಯುತ್ತಿರುವಂತೆಯೇ ಈ ಒಳಗಿನ ಪ್ರೇರಣೆಯನ್ನು ಅನುಭವಿಸುತ್ತಿರುವ ಮಾತು ಇದು. ಇದು ಪುಲಕಗೊಳಿಸುವ ಸಂಗತಿ. ಅಂದರೆ ಅನುಭವಿಸುತ್ತಿರುವಂತೆಯೇ- ಈ ಪ್ರಕ್ರಿಯೆಯನ್ನೆ ಉಪನಿಷತ್ತು ಹೇಳುತ್ತಿದೆ. ಅನುಭವದ ಜೊತೆಗೆ ಇದರ ಹಿನ್ನೆಲೆಯ ಕುರಿತಾದ ಎಚ್ಚರವೂ ಇಲ್ಲಿ ಕಾಣುತ್ತಿದೆ. ಕೇನೇಷಿತಾಂ ವಾಚಮಿಮಾಂ ವದಂತಿ ಎಂಬ ಮಾತಿದೆ. ಜನ ಮಾತನಾಡುತ್ತಿರುವುದು ಯಾರ ಇಷ್ಟದಂತೆ? ಈ ಮಾತು, ಜನದ ಮಾತನ್ನು ಯಾವ ರೀತಿಯಲ್ಲೂ ನಿರಾಕರಿಸದೆ, ಆದರೆ ಅದರ ಹಿಂದಿನ ಪ್ರೇರಣೆಯ ಕುರಿತು ಎಚ್ಚರಗೊಳಿಸುವ ಮಾತು. ಮಾತಿನ ಅರ್ಥವನ್ನು ಹುಡುಕಬೇಕಾದುದೆಲ್ಲಿ? ಹೊರ ಜಗತ್ತಿನಲ್ಲಿಯೆ? ಅಥವಾ ಅದನ್ನು ಪ್ರೇರಿಸುತ್ತಿರುವ ಒಳಜಗತ್ತಿನಲ್ಲಿಯೆ? ಮಾತಿನ ಒಳ ಸೂತ್ರಗಳೆಲ್ಲಿವೆ?
ಉಪನಿಷತ್ತಿನ ಈ ಮಾತು ತನ್ನ ಬಗೆಯೇ ಹೇಳಿಕೊಂಡ ಮಾತು. ತನ್ನ ಬಗ್ಗೆ ಹೇಳುತ್ತಲೇ ತನ್ನನ್ನು ನಿರಾಕರಿಸುವ ಮಾತೂ ಹೌದು. ತನ್ನನ್ನು ನಿರಾಕರಿಸುತ್ತಲೇ ಇನ್ನೊಂದನ್ನು ಸೂಚಿಸುವ ಮಾತೂ ಹೌದು. ಒಳಜಗತ್ತಿನ ಒಂದು ವಿಲಕ್ಷಣವಾದ ಒಡನಾಟವನ್ನು ಸೂಚಿಸುವ ಮಾತು. ಈ ಒಡನಾಟವೇ ಈ ಮಾತಿನ ಅರ್ಥ. ಅದನ್ನು ಅರ್ಥ. ಅದನ್ನು ಅರ್ಥ ಎನ್ನುವುದಕ್ಕಿಂತ ಅನುಭವ ಎನ್ನುವುದೇ ಸರಿ!
-ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.