ತಂತ್ರಜ್ಞಾನದ ಮಡಿಲಿನಲ್ಲಿ ಪಂಪನ ಕಲರವ
Team Udayavani, Sep 22, 2019, 5:57 AM IST
ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ ಸ್ನೇಹಿಯಾದ ಮಾದರಿಗಳು ನಮ್ಮಲ್ಲಿ ಈವರೆಗೆ ಇರಲಿಲ್ಲ. ಆದರೆ, ಇಂಥ ಬಹು ದೀರ್ಘಕಾಲದ ಕೊರತೆಯೊಂದು ದೂರವಾಗುವ ದಿನಗಳು ಬರುತ್ತಿವೆ.
ಕ್ರಿ. ಶ. 10ನೇ ಶತಮಾನದಲ್ಲಿದ್ದ ಕನ್ನಡದ ಆದಿಕವಿ ಪಂಪ ಬರೆದ ವಿಕ್ರಮಾರ್ಜುನ ವಿಜಯಂ ಮತ್ತು ಆದಿಪುರಾಣ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಹಳಗನ್ನಡದಲ್ಲಿ ಬರೆದಿರುವ ಈ ಕಾವ್ಯಗಳು ಅಕ್ಷರ ಛಂದಸ್ಸಿನಲ್ಲಿದೆ. ಸಾಹಿತ್ಯಾಭ್ಯಾಸದಲ್ಲಿ ತೀವ್ರ ಪರಿಶ್ರಮವಿಲ್ಲದ ಓದುಗರಿಗೆ ಕಬ್ಬಿಣದ ಕಡಲೆಯಂತಿರುವ ಈ ಕಾವ್ಯಗಳು ವಿದ್ವಾಂಸರ ಗಮನಸೆಳೆದು ಹಲವು ವ್ಯಾಖ್ಯಾನ, ವಿಮರ್ಶೆಗಳನ್ನು ಹುಟ್ಟುಹಾಕಿಸಿದರೂ, ಆರಂಭಿಕ ಹಂತದ ಓದುಗರನ್ನು ಕಾವ್ಯವು ಕ್ಲಿಷ್ಟತೆಯ ಕಾರಣದಿಂದ ಸಮೀಪಕ್ಕೆ ಬಿಟ್ಟುಕೊಳ್ಳದಂತಿದೆ. ಸುಮಾರು ಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಾದ ಈ ಕವಿಯ ಕಾವ್ಯಗಳು 21ನೇ ಶತಮಾನದ ಓದುಗರನ್ನು ತಲುಪುದಾದರೂ ಹೇಗೆ? ಹಳಗನ್ನಡದ ವಿದ್ವಾಂಸರಿಗೆ ಈ ಕಾವ್ಯವು ಸುಲಲಿತವಾಗಿ ತಲುಪಿದಂತೆ ಹೊಸ ತಲೆಮಾರಿನ ಓದುಗರಿಗೂ ತಲುಪುವಂತಾದರೆ ಕನ್ನಡದ ಕಂಪು ಎಲ್ಲೆಡೆಯೂ ಪಸರಿಸಿದಂತಾಗುವುದರಲ್ಲಿ ಸಂಶಯವಿಲ್ಲ.
ಪಂಪ ಭಾರತ ಎಂದಾಗ ನಮ್ಮೆಲ್ಲರ ಸ್ಮರಣೆಗೆ ಬರುವುದು ಮುಳಿಯ ತಿಮ್ಮಪ್ಪಯ್ಯನವರ ನಾಡೋಜ ಪಂಪ, ಡಿ. ಎಲ್. ನರಸಿಂಹಾಚಾರ್ಯರ ಪಂಪ ಭಾರತ ದೀಪಿಕೆ ಎಲ್. ಬಸವರಾಜರ ಸರಳ ಪಂಪ ಭಾರತ ಮೊದಲಾದ ಕೃತಿಗಳು. ಈ ಕೃತಿಗಳು ವಿದ್ವತ್‌ಪೂರ್ಣ ನಿರೂಪಣೆಗಳು, ಸಂಶೋಧನಾಪೂರ್ಣ ಜಿಜ್ಞಾಸೆ, ಪದ-ಪರಿಕಲ್ಪನೆಗಳ ಬಗೆಗಿನ ಸೂಕ್ಷ್ಮ ವಿವೇಚನೆಗಳನ್ನು ಹೊಂದಿದೆ. ಪಾರಂಪರಿಕ ಶೈಲಿಯ ಓದುಗರಿಗೆ ಇಂದಿಗೂ ಇವುಗಳೇ ಆಕರ ಗ್ರಂಥಗಳು.
21ನೆಯ ಶತಮಾನವನ್ನು ತಂತ್ರಜ್ಞಾನ ಯುಗ ಎಂದು ಕರೆಯಲಾಗಿದೆ. ಪ್ರತಿಯೊಂದೂ ವಿಷಯಗಳೂ ತಂತ್ರಜ್ಞಾನ ಸ್ನೇಹಿಯಾಗಿ ಬೆಳೆಯುತ್ತಿರುವ ಕಾಲವಿದು. ಪುಸ್ತಕ ಓದುವ ಕಾಲ ಸರಿದು ಪುಸ್ತಕ ಕೇಳುವ ಯುಗವಿದು ಎಂದರೂ ಆಚ್ಚರಿಯಿಲ್ಲ. ಹಾಗಾಗಿ, ಮುದ್ರಿತ ಪುಸ್ತಕಗಳು ಮುದ್ರಿತ ಪ್ರತಿಯ ಜತೆಗೆ ಆಡಿಯೋ ಸಿ.ಡಿಗಳನ್ನೂ ಹೊರತರುವ ಕಾಲವಿದು. ಹೀಗಿದ್ದರೂ ನಮ್ಮ ಹಳಗನ್ನಡದ ಪಠ್ಯಗಳು ಓದುಗರಿಗೆ ಹತ್ತಿರವಾಗುವ ಬದಲು ದೂರವಾಗುತ್ತಿದೆ. ಈ ಹಿಂದೆ ಶಾಲಾ- ಕಾಲೇಜು ಪಠ್ಯಗಳಲ್ಲಿ ಕಡ್ಡಾಯ ವೆಂಬಂತಿದ್ದ ಹಳೆಗನ್ನಡದ ಪಠ್ಯಗಳು ಇತ್ತೀಚಿನ ದಿನಗಳಲ್ಲಿ ಓದುವುದು ಕಷ್ಟ, ಪಾಠ ಮಾಡಲು ಅಧ್ಯಾಪಕರಿಗೆ ಕಷ್ಟ … ಮೊದಲಾದ ಕಾರಣಗಳಿಂದ ಪಠ್ಯಪುಸ್ತಕಗಳಿಂದಲೂ ಮರೆಯಾಗುತ್ತಿದೆ. ಪರಿಸ್ಥತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಕನ್ನಡದ ಅಮೂಲ್ಯ ನಿಧಿಗಳಂತಿರುವ ಈ ಮಹಾಕಾವ್ಯಗಳನ್ನು ಓದುವ, ಓದಿ ಅರ್ಥೈಸುವ ವ್ಯಕ್ತಿಗಳೇ ಇಲ್ಲದಂತಾಗಬಹುದು ! ಒಂದೆಡೆ ಹೊಸ ತಲೆಮಾರು ಕನ್ನಡದಿಂದಲೇ ದೂರವಾಗುತ್ತಿರುವಾಗ, ಹಳೆಗನ್ನಡದಂತಹ ಕ್ಲಿಷ್ಟ ಕಾವ್ಯ ಪಠ್ಯಗಳಿಗೆ ಪ್ರವೇಶ ಪಡೆಯ ಬಲ್ಲರೇ? ಪಡೆಯಬಲ್ಲರು ಎಂದಾದರೆ ಅದಕ್ಕೆ ಪೂರಕವಾದ ವ್ಯವಸ್ಥೆಗಳಿವೆಯೇ? ಎನ್ನುವ ಪ್ರಶ್ನೆಗಳೂ ಕಣ್ಮುಂದೆ ಇದೆ. ಕನ್ನಡದ ತರಗತಿಯೊಳಗೆ ಪಾಠ ಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾರೆ ತಂತ್ರಜ್ಞಾನಸ್ನೇಹಿಯಾದ ಮಾದರಿಗಳು ನಮ್ಮಲ್ಲಿ ಈ ವರೆಗೆ ಇರಲಿಲ್ಲ. ಆದರೆ, ಇಂತಹ ಬಹು ದೀರ್ಘಕಾಲದ ಕೊರತೆಯೊಂದು ದೂರವಾಗುವ ದಿನಗಳು ಬರುತ್ತಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಮಾಧವ ಪೆರಾಜೆಯವರು ಇತ್ತಿಚೆಗೆ MadhavaPereje on Pampa ಹೆಸರಿನ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದು ಪಂಪನ ವಿಕ್ರಮಾರ್ಜುನ ವಿಜಯಂ ಕಾವ್ಯದ ವಾಚನ ಹಾಗೂ ವ್ಯಾಖ್ಯಾನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರೇ ಹೆಳಿಕೊಳ್ಳುವಂತೆ ಚಾನೆಲ್ ಉದ್ದೇಶವೆಂದರೆ, “ಕನ್ನಡ ಸಾಹಿತ್ಯ ವಿದ್ಯಾರ್ಥಿಗಳ ಹೊರತಾದ ಪತ್ರಿಕೋದ್ಯಮ, ಇಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ ಮೊದಲಾದ ಕ್ಷೇತ್ರದ ವ್ಯಕ್ತಿಗಳು ಇತ್ತೀಚೆಗೆ ಪಂಪನ ಕಾವ್ಯಗಳ ಅಧ್ಯಯನ ಮಾಡಲು, ಓದಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಅವರಿಗೆ ಸಧ್ಯಕ್ಕೆ ಈ ಕುರಿತು ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಕೊರತೆಯನ್ನು ಹೋಗಲಾಡಿಸಿ ಅಂತರ್ಜಾಲದಲ್ಲಿಯಾವುದೇ ಮಾಹಿತಿ ಲಭ್ಯವಿಲ್ಲ. ಈ ಕೊರತೆಯನ್ನು ಹೋಗಲಾಡಿಸಿ ಅಂತರ್ಜಾಲದ ಮೂಲಕವೇ ಪಂಪನನ್ನು ಓದುವ, ಅರ್ಥೈಸುವ ಅವಕಾಶ ಲಭ್ಯವಾಗಬೇಕು. ಅದಕ್ಕಾಗಿ ಪಂಪನ ವಿಕ್ರಮಾರ್ಜುನ ವಿಜಯಂ ಕಾವ್ಯದ ವಾಚನ, ಪದಾರ್ಥ ವಿವರಣೆ, ಭಾವಾರ್ಥ ಹಾಗೂ ಸಾಂದರ್ಭಿಕವಾಗಿ ವಿಶೇಷ ವಿಚಾರಗಳನ್ನು ಪ್ರತಿಯೊಂದು ಪದ್ಯಗದ್ಯ ಭಾಗಕ್ಕೆ ಅನುಸಾರವಾಗಿ ಅಂತರ್ಜಾಲದಲ್ಲಿ ಅಳವಡಿಸುವ ಪ್ರಯತ್ನವಿದು’ ಎನ್ನುತ್ತಾರೆ.
1931ರಲ್ಲಿ ಬೆಳ್ಳಾವೆ ವೆಂಕಟ ನಾರಣಪ್ಪ ಸಂಪಾದಿಸಿರುವ ಪಂಪ ಭಾರತಂ ಎಂಬ ವಿಕ್ರಮಾರ್ಜುನ ವಿಜಯಂ ಪಠ್ಯವನ್ನು ಆಕರವಾಗಿ ಇರಿಸಿಕೊಂಡು, ಡಿ. ಎಲ್. ನರಸಿಂಹಾಚಾರ್ಯರ ಪಂಪ ಭಾರತ ದೀಪಿಕೆಯನ್ನು ವ್ಯಾಖ್ಯಾನಕ್ಕೆ ಪೂರಕ ಸಾಮಗ್ರಿಯಾಗಿ ಬಳಸಿಕೊಳ್ಳಲಾಗಿದೆ. ಇಲ್ಲಿನ ವಾಚನ ಎನ್ನುವುದು ಗೇಯ ಕವಿಗಳ ಕಾವ್ಯದ ವಾಚನದಂತಿಲ್ಲ. ಕಾರಣವೆಂದರೆ, ಪಂಪನದ್ದು ಮಾರ್ಗ ಶೈಲಿಯ ಕಾವ್ಯ. ಹೀಗಾಗಿ, ಗಮಕ ಮಾದರಿಯ ವಾಚನ ಇಲ್ಲಿಲ್ಲ, ಪಂಪನ ಕಾವ್ಯವನ್ನು ಮೊದಲ ಬಾರಿಗೆ ಕೇಳಿಸಿಕೊಳ್ಳುವ, ಓದುಗ ವರ್ಗ ಹಾಗೂ ತರಗತಿಯಲ್ಲಿ ಪಾಠ ಮಾಡುವ ಅಧ್ಯಾಪಕರನ್ನು ಗಮನದಲ್ಲಿರಿಸಿಕೊಂಡು ಅರ್ಥವನ್ನು ಅನುಸರಿಸಿಕೊಂಡು ಓದುವ ಕ್ರಮವನ್ನು ಇಲ್ಲಿ ಪಾಲಿಸಲಾಗಿದೆ.
ಆರಂಭಿಕ ಸಂಚಿಕೆಯಲ್ಲಿ ಪಂಪನ ಕಾವ್ಯ ಛಂದಸ್ಸಿನ ವಿವರಣೆ, ಕಾವ್ಯದಲ್ಲಿ ಪಾಲಿಸಲಾದ ಪ್ರಾಸ ಪದ್ಧತಿಯ ವಿವರಣೆ, ಕಾವ್ಯ ವೈಶಿಷ್ಟ್ಯ, ಕಾವ್ಯ ಬಂಧಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಪೆರಾಜೆಯವರೇ ವಾಚನವನ್ನು ಮಾಡಿದ್ದು ಕಾವ್ಯದ ವಾಚನವನ್ನು ಮಾಡುತ್ತಿರುವಾಗಲೇ ಚಾನೆಲ್‌ನ ಪರದೆಯ ಮೇಲೆ ಕಾವ್ಯದ ಸಾಲುಗಳೂ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ವಾಚನವನ್ನು ಕೇಳುತ್ತಿರುವಾಗಲೇ ಕೇಳುಗನು ತಾನೇ ಪಠ್ಯವನ್ನು ಓದುತ್ತ ಅನುಸರಿಸಲು ಸಹಾಯಕವಾಗಿದೆ.
ರೋಹಿಣಾಕ್ಷ ಶಿರ್ಲಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ