ಕರಾವಳಿಯ ಜಾನಪದ ಅಧ್ಯಯನದ ಕೈಮರ
Team Udayavani, Jan 5, 2019, 12:05 PM IST
ಕರ್ನಾಟಕ ಜಾನಪದ ಅಧ್ಯಯನಕ್ಕೆ, ಅದರಲ್ಲೂ ವಿಶೇಷವಾಗಿ ತುಳು ಭಾಷೆಯ ಅಧ್ಯಯನಕ್ಕೆ ಹೊಸ ಮುಖ ತೋರಿದವರು ಪೀಟರ್ ಜೆ. ಕ್ಲಾಸ್. ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಕಿ-ಹೇವರ್ಡ್‌ನಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಪೀಟರ್ ಜೆ. ಕ್ಲಾಸ್ ವಿಧಿವಶರಾಗಿದ್ದಾರೆ.
1967ರಿಂದ ತೊಡಗಿ ಸುಮಾರು ಮೂವತ್ತು ವರ್ಷಗಳ ಕಾಲ ತುಳುನಾಡಿನಲ್ಲಿ, ಮತ್ತೆ ಸ್ವಲ್ಪ ಕಾಲ ಕುವೆಂಪು ವಿಶ್ವವಿದ್ಯಾನಿಲಯ, ಅನಂತಪುರ ವಿಶ್ವವಿದ್ಯಾನಿಲಯದಲ್ಲಿ ಕೂಡ ನೆಲೆಸಿ, ಜಾನಪದ ಅಧ್ಯಯನಕ್ಕೆ ಹೊಸ ವಿನ್ಯಾಸ ರೂಪಿಸಿದರು, ಹೊಸಬಗೆಯ ಫಲಿತವನ್ನು ಪಡೆಯುವಲ್ಲಿ ಯಶಸ್ವಿಯಾದರು. ಕ್ಲಾಸ್ ಭಾರತಕ್ಕೆ ಬಂದು ತುಳುವರ ವಿವಿಧ ಗುತ್ತಿನ ಮನೆಗಳಲ್ಲಿ ನೆಲೆಸಿ ಬಂಟ, ನಾಡವ ಜಾತಿ ಸಂಕೀರ್ಣದ ಬಂಧುತ್ವ ವ್ಯವಸ್ಥೆಯನ್ನು ವ್ಯಾಪಕ ಅಧ್ಯಯನ ನಡೆಸಿ, 1970ರಲ್ಲಿ ಅಮೆರಿಕದ ಡ್ನೂಕ್ ವಿಶ್ವವಿದ್ಯಾನಿಲಯದಿಂದ ಪಿ. ಎಚ್‌ಡಿ ಪದವಿ ಪಡೆದರು. ಅವರು ಅಮೆರಿಕದಿಂದ ಬರುವಾಗಲೇ ಎಂ. ಜಿ. ಕೃಷ್ಣಮೂರ್ತಿ, ಎ. ಕೆ. ರಾಮಾನುಜನ್ ಅವರಿಂದ ಕನ್ನಡ ಕಲಿತುಕೊಂಡು ಬಂದಿದ್ದರು. ಇಲ್ಲಿಗೆ ಬಂದ ಬಳಿಕ ತುಳುಭಾಷೆಯಲ್ಲಿ ಸಹಜವಾಗಿ ಮಾತನಾಡುವಷ್ಟು ಪರಿಣತರಾದರು.
1978-79ರ ಕಾಲಾವಧಿಯಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಜವಾಹರಲಾಲ್ ಹಂಡೂ ಅವರೊಂದಿಗೆ Folklore Fellows of India ಎಂಬ ಸಂಘಟನೆಯನ್ನು, ಹಾ ಮಾ ನಾ ಹಾಗೂ ಜಿ. ಶಂ. ಪರಮಶಿವಯ್ಯ ಅವರೊಂದಿಗೆ ಕಟ್ಟಿ ಜರ್ನಲ್ ಆಫ್ ಫೋಕ್‌ಲೋರಿಸ್ಟಿಕ್ಸ್ ಎನ್ನುವ ವಿದ್ವತ್ ಪತ್ರಿಕೆಯನ್ನು ಹೊರತಂದರು. ಕು. ಶಿ. ಹರಿದಾಸ ಭಟ್ಟರು ನಿರ್ದೇಶಕರಾಗಿದ್ದ ಉಡುಪಿಯ ರೀಜನಲ್ ರಿಸೋರ್ಸಸ್ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್ – ಆರ್‌ಆರ್‌ಸಿ ಗೆ ಅನೇಕ ಬಗೆಯ ದಾಖಲಾತಿ ಯೋಜನೆಗಳನ್ನು ರೂಪಿಸಿಕೊಟ್ಟರು. ಆ ಸಂಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಕಲ್ಪಿಸಿಕೊಟ್ಟರು. 1988-89ರ ಕಾಲಾವಧಿಯಲ್ಲಿ ಕು.ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ಕರ್ನಾಟಕದ ತರುಣ ಜಾನಪದ ವಿದ್ವಾಂಸರಿಗೆ ನಾಲ್ಕು ಹಂತಗಳಲ್ಲಿ 100 ದಿನಗಳ ಅಂತಾರಾಷ್ಟ್ರೀಯ ಜಾನಪದ ಕಮ್ಮಟವನ್ನು ಸಂಘಟಿಸಿದರು. ಪುರುಷೋತ್ತಮ ಬಿಳಿಮಲೆ, ಹಿ. ಶಿ. ರಾಮಚಂದ್ರೇ ಗೌಡ. ತೀ. ನಂ. ಶಂಕರನಾರಾಯಣ, ಎ. ವಿ. ನಾವಡ, ವಾಮನ ನಂದಾವರ, ವೀರಣ್ಣ ದಂಡೆ, ಬಿ. ಶಿವರಾಮ ಶೆಟ್ಟಿ ಈ ಕಮ್ಮಟದಲ್ಲಿ ಪಾಲ್ಗೊಂಡವರಲ್ಲಿ ಕೆಲವರು. ಈ ಕಮ್ಮಟ ಮುಂದೆ ಕರ್ನಾಟಕದಲ್ಲಿ ಜಾನಪದ ಅಧ್ಯಯನವನ್ನು ಮುನ್ನಡೆಸಲು ಒಂದು ಕಾರ್ಯಪಡೆಯಾಗಿ ರೂಪುಗೊಂಡಿತು. ಈ ಕಮ್ಮಟದಲ್ಲಿ ಉಪನ್ಯಾಸಕರಾಗಿ ಅಲೆನ್ ಡಂಡೆಸ್, ಪೀಟರ್ ಕ್ಲಾಸ್, ಎ.ಕೆ. ರಾಮಾನುಜನ್, ನಾರಾಯಣ ರಾವ್, ಸ್ಟುವರ್ಟ್ ಬ್ಯಾಕ್‌ಬರ್ನ್, ಫ್ರಾಂಕ್ ಕೋರಂ, ಬ್ರೆಂಡಾ ಬೆಕ್, ಚಂದ್ರಶೇಖರ ಕಂಬಾರ, ಕೆ. ವಿ. ಸುಬ್ಬಣ್ಣ ಬಂದಿದ್ದರು. ಅನೇಕರು ನೀಡಿದ ಹೊಸ ಬಗೆಯ ಆಲೋಚನೆಗಳಿಂದಾಗಿ ಜಾನಪದವನ್ನು ಕುರಿತ ನೆಲೆಸಿದ ತಿಳುವಳಿಕೆಗಳು ಬುಡಮೇಲಾದವು. ಹೊಸ ಸಂಕಥನಗಳು ಹುಟ್ಟಿಕೊಂಡವು. ಸಂದರ್ಭ, ಬಹುಪಠ್ಯ, ಮಾನಸಿಕ ಪಠ್ಯ, ಪ್ರದರ್ಶನ, ಸೂತ್ರಾತ್ಮಕ ಅಭಿವೃದ್ಧಿ, ಮೌಖೀಕ ಕಾವ್ಯಸಂಯೋಜನೆ ಪ್ರಕ್ರಿಯೆ, ಅಧಿಜಾನಪದ, ಜನಪದ ವ್ಯಾಖ್ಯಾನ, ಮೌಖೀಕ ಕವಿ, ಬಹುತ್ವ ಮುಂತಾದ ಪರಿಭಾಷೆಗಳನ್ನು ಕನ್ನಡ ಮತ್ತು ತುಳು ಜಾನಪದ ಅಧ್ಯಯನದ ಸಂದರ್ಭದಲ್ಲಿ ಅನುಸಂಧಾನಗೊಳಿಸುವ ಪ್ರಯತ್ನವನ್ನು ಪೀಟರ್ ಮಾಡಿದರು.
ಅಧ್ಯಯನದ ಅಗಾಧತೆ
ಅವರ ಅಧ್ಯಯನ ತುಳುವಿಗಷ್ಟೇ ಸೀಮಿತವಾಗಿರಲಿಲ್ಲ. ನಾನಿದ್ದ ಕುಂದಾಪುರದ ಮನೆಗೆ ಆಗಾಗ್ಗೆ ಬರುತ್ತಿದ್ದರು. ನಾನು ಅವರನ್ನು ಉಡುಪಿ ಜಿಲ್ಲೆಯ ಕುಂದಾಪುರ ಪರಿಸರದ ಪಾಣರಾಟ, ಢಕ್ಕೆಬಲಿ, ನಾಗಮಂಡಲಗಳಿಗೆ ಕರೆದೊಯ್ದಿದ್ದೆ. ಅಲ್ಲಿನ ಹಾಡ್ಗತೆಗಳನ್ನು ತುಳುವಿನ ಪಾಡªನಗಳೊಂದಿಗೆ ತೌಲನಿಕವಾಗಿ ಪರಿಶೀಲಿಸುವ ಪ್ರಯತ್ನ ನಡೆಸಿದರು. ಸಂಶೋಧಕನು ತನ್ನದಲ್ಲದ ಅನ್ಯಸಂಸ್ಕೃತಿಯ ಅಧ್ಯಯನಕ್ಕೆ ತೊಡಗುವುದು ಹೆಚ್ಚು ಸೂಕ್ತ ಎನ್ನುವ ಮಾನವಶಾಸ್ತ್ರೀಯ ತಿಳಿವಳಿಕೆಯಂತೆ ಅವರು ತುಳುನಾಡಿನ ಮಾತೃಮೂಲೀಯ ಕುಟುಂಬ ವ್ಯವಸ್ಥೆ, ತುಳು ಮೌಖೀಕ ಕಾವ್ಯರಚನೆಗಳನ್ನು ಸಂಸ್ಕೃತಿನಿಷ್ಠ ಮನಸ್ಸಿನಿಂದ ಅಧ್ಯಯನ ಮಾಡಿದರು. ಅವರದು ಮಾಹಿತಿ ಸಂಗ್ರಹಾಧಾರಿತ ಅಧ್ಯಯನ ವಿಶ್ಲೇಷಣೆ ಅಲ್ಲ. ತಾನು ಯಾರನ್ನು ಕುರಿತು ಅಧ್ಯಯನ ಮಾಡುತ್ತಿದ್ದೇನೋ ಅವರ ನಡುವೆಯೇ ವಾಸಿಸುತ್ತ ಒಂದಾಗಿ ಬಾಳಿದರು. ಉಡುಪಿ ಜಿಲ್ಲೆಯ ಹಿರಿಯಡ್ಕದ ಅಂಜಾರು ಗ್ರಾಮದಲ್ಲಿ ಮುಂಡಾಲ ಸಮುದಾಯದವರ ಕೇರಿಯ ಸಣ್ಣ ಮುಳಿಹುಲ್ಲಿನ ಮನೆಯಲ್ಲಿ ಹಲವಾರು ವರ್ಷ ಕಳೆದಿದ್ದರು. ಅಧ್ಯಯನದ ಬಳಿಕವೂ ಆ ಕುಟುಂಬದ ಜತೆ ಸಂಬಂಧ ಇರಿಸಿಕೊಂಡು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರೆಂದು ನನ್ನಲ್ಲಿ ಕರ್ಗಿ ಮುಂಡಾಲ್ತಿ ಹೇಳಿದ್ದುಂಟು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಉಳಿಯದೆ ದೂರದ ಹಳ್ಳಿ ಜೋಪಡಿ ಮನೆಯಲ್ಲೇ ಉಳಿದಿದ್ದರು. ಇದು ಅವರ ವ್ಯಕ್ತಿವಿಶಿಷ್ಟ ಗುಣವಷ್ಟೇ ಅಲ್ಲ; ಅಧ್ಯಯನದ ಖಚಿತತೆಗೆ ಅನ್ಯಸಂಸ್ಕೃತಿಯ ಪರಕಾಯ ಪ್ರವೇಶ ಅಗತ್ಯವೆಂದು ಭಾವಿಸಿದ್ದರು. ಪೀಟರ್ ಅವರು ಫ್ರಾಂಕ್ ಕೋರಂ ಜೊತೆಗೆ ಬರೆದ Folkloristics and Indian Folklore ಭಾರತೀಯ ಜಾನಪದ ಅಧ್ಯಯನಕ್ಕೆ ಹೊಸದಾರಿ ಸೂಚಿಸಿದ ಗ್ರಂಥ (ಆರ್‌ಆರ್‌ಸಿ ಪ್ರಕಟಣೆ). Indian Folklore Vol. I and II, Folktales of India, Oral Epics in India- ಈ ಗ್ರಂಥಗಳ ಸಂಪಾದಕರಾಗಿ ಗ್ರಂಥಗಳನ್ನು ಹೊರತಂದಿದ್ದಾರೆ. ತುಳುವ ಸಂಸ್ಕೃತಿಯ ಸಂಶೋಧನೆಗೆ ಅವರ ಕೊಡುಗೆಯನ್ನು ಮನ್ನಿಸಿ 2004ರಲ್ಲಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಅವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ತುಳುವ ಜಾನಪದವನ್ನು ಕುರಿತು ಅವರು ಪಾಶ್ಚಾತ್ಯ, ಪೌರಾತ್ಯ ದೇಶಗಳ ವಿದ್ವತ್ ಪತ್ರಿಕೆಗಳಲ್ಲಿ ಬರೆದ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು. ಅವುಗಳಲ್ಲಿ ಆಯ್ದ ಎಂಟು ಲೇಖನಗಳನ್ನು ಉಡುಪಿಯ ಪ್ರೊ. ಸುಭಾಶ್ಚಂದ್ರ ಅವರೊಂದಿಗೆ ಅನುವಾದಿಸಿ ತುಳುವ ದರ್ಶನ ಎಂಬ ಹೆಸರಲ್ಲಿ 1987ರಲ್ಲಿ ಪ್ರಕಟಿಸಿದೆ. ಕರ್ನಾಟಕ ಜಾನಪದ ಅಧ್ಯಯನದಲ್ಲಿ ಈ ಗ್ರಂಥ ಒಂದು ಮಹತ್ವದ ಮೈಲಿಗಲ್ಲು ಎಂದು ಅದಕ್ಕೆ ಮುನ್ನುಡಿ ಬರೆದ ಜಿ. ಶಂ. ಪರಮಶಿವಯ್ಯ ಹೇಳಿದ್ದಾರೆ. ಅಲ್ಲಿನ ಲೇಖನಗಳು ತುಳುವ ಜಗತ್ತಿನ ಜಾನಪದವನ್ನು ಸೂಕ್ಷ್ಮ ಅಧ್ಯಯನಕ್ಕೆ ಒಡ್ಡಿ ಬರೆದಂಥವು, ಇದೀಗ ಪೀಟರ್ ಅವರ ಕೋರಿಕೆಯಂತೆ ನಾನು ಮತ್ತೆ ಏಳು ಲೇಖನಗಳನ್ನು ಕನ್ನಡಕ್ಕಿಳಿಸಿ ಒಟ್ಟು ಹದಿನೈದು ಲೇಖನಗಳುಳ್ಳ ಬೃಹತ್ ಸಂಪುಟವೊಂದನ್ನು ತುಳುವ ಲೋಕದರ್ಶನ ಎಂಬ ಶೀರ್ಷಿಕೆಯಲ್ಲಿ ಸಿದ್ಧಗೊಳಿಸುತ್ತಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಶೀಘ್ರದಲ್ಲಿ ಪ್ರಕಟವಾಗಲಿದೆ.
ಕೇರಳದ ನಾಯರ್ ಸಮಾಜದ ಕುಟುಂಬ ರಚನೆಯನ್ನು ದೇಶ-ವಿದೇಶಗಳ ಮಾನವಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದರೂ ತುಳುವರ ಮಾತೃಮೂಲೀಯ ಕುಟುಂಬ ವ್ಯವಸ್ಥೆಯು ಅದಕ್ಕಿಂತ ಹೇಗೆ ಭಿನ್ನ ಎನ್ನುವುದರ ಅಧ್ಯಯನ ನಡೆದುದು ಪೀಟರ್ ಅವರಿಂದ. ದ್ರಾವಿಡ ಬಂಧುತ್ವ ವ್ಯವಸ್ಥೆಯ ಬಗ್ಗೆ ಡ್ಯುಮಾಂಟ್, ರಾಡ್‌ಕ್ಲಿಫ್ ಬ್ರೌನ್, ಯಾಲ್ಮನ್, ಕಾರ್ಟರ್, ಕಾಸ್ಟೇìರ್ ಮಾಡಿರುವ ಅಧ್ಯಯನಗಳನ್ನು ಗಮನದಲ್ಲಿರಿಸಿಕೊಂಡು ತುಳುವ ಬಂಧುತ್ವ ವ್ಯವಸ್ಥೆಯ ಅನನ್ಯತೆಯನ್ನು ಅವರು ತಮ್ಮ ಲೇಖನಗಳಲ್ಲಿ ಹೇಳುತ್ತಾರೆ. ಕ್ಲಾಸ್ ಅವರ ತುಳುವ ಸಂಸ್ಕೃತಿಯನ್ನು ಕುರಿತ ಬರಹಗಳನ್ನು ಕಂಡಾಗ ಅವರು ಎಲ್ಲೂ ಅದರ ಚಾರಿತ್ರಿಕ ಪ್ರಾಚೀನತೆಯನ್ನು ನಿರ್ಧರಿಸುವ ಹಳಹಳಿಕೆಯ ದೃಷ್ಟಿಕೋನವನ್ನು ಕಾಣೆವು. ಅದನ್ನು ವೈಭವೀಕರಿಸುವಲ್ಲೂ ಅವರಿಗೆ ಆಸಕ್ತಿಯಿಲ್ಲ. ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ಬೆಳಕಿನಲ್ಲಿ ಮೌಖೀಕ ರಚನೆಗಳಾದ ಪಾಡªನಗಳಲ್ಲಿ ನಿರೂಪಿತವಾಗಿರುವ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆ, ಆರಾಧನಾ ಪ್ರಪಂಚಗಳ ಮಾನಸಿಕ ಹಿನ್ನೆಲೆ ಒಟ್ಟಿನಲ್ಲಿ ತುಳುವ ಸಂಸ್ಕೃತಿಯ ಪರಿಕಲ್ಪನಾತ್ಮಕ ಚೌಕಟ್ಟನ್ನು ಅವರ ಬರವಣಿಗೆಗಳಿಂದ ಪುನಾರಚಿಸಬಹುದಾಗಿದೆ.
ತುಳುವ ಅಧ್ಯಯನದ ಧಾರೆಯನ್ನು ಹೊಸದಿಕ್ಕಿನಲ್ಲಿ ಹರಿಯಿಸಿದ ಪೀಟರ್ ಕ್ಲಾಸ್ ಅವರ ಚಿಂತನೆಗಳಿಗೆ ಇನ್ನು ಹೊಸ ಕವಲುಗಳನ್ನು ಜೋಡಿಸಬೇಕಾದುದು ತುಳುವ ಅಧ್ಯಯನಕಾರರ ಮುಂದಿನ ಕೆಲಸ ಆಗಬೇಕು.
ಎ. ವಿ. ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.