ಕವಿ-ವಿಮರ್ಶಕ
Team Udayavani, Mar 18, 2018, 6:00 AM IST
ಕವಿ ಗೋಪಾಲಕೃಷ್ಣ ಅಡಿಗರ ನೂರರ ನೆನಪಿನ ವರ್ಷವಿದು. ಅಡಿಗರದೊಂದು “ವಿಮರ್ಶಕ’ ಎನ್ನುವ ಪದ್ಯವಿದೆ. ಕವಿ-ವಿಮರ್ಶಕ ಸಂಬಂಧವನ್ನು ಕುರಿತದ್ದು. ಅಂದರೆ ಸೃಷ್ಟಿಶೀಲ ಮನೋಧರ್ಮ ಮತ್ತು ವಿಮರ್ಶೆಯ ಮನೋಧರ್ಮಗಳ ನಡುವಣ ಅತಿ ನಾಜೂಕಿನ-ಪರಸ್ಪರ ಮಿಡಿಯುವ-ದ್ವಂದ್ವಾತ್ಮಕ ಸಂಬಂಧವನ್ನು ಕುರಿತದ್ದು. ನಮ್ಮ ದೊಡ್ಡ ಕವಿಗಳಾದ ಬೇಂದ್ರೆ ಮತ್ತು ಕುವೆಂಪು, ವಿಮರ್ಶೆಯ ಕುರಿತು ಯಾವ ನಿಲುವು ತಳೆದಿದ್ದಾರೆಂಬುದು ಸುಮಾರಾಗಿ ಎಲ್ಲರಿಗೂ ವಿದಿತವೇ ಇದೆ. ಈ ಬಗೆಗೆ ಬೇಂದ್ರೆಯವರ ಗಾರುಡಿಗ ಎನ್ನುವ ಪದ್ಯವನ್ನೇ ನೋಡಬಹುದು. ಆ ಪದ್ಯ ಹೀಗಿದೆ:
ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;
ತಾನೆ ತಾನೆ ಸಮರ್ಥ ಛಂದ; ದೃಗ್ಬಂಧ ದಿಗ್ಬಂಧ,
ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ
ಹೆದೆಗೆ ಹೂಡಿದ ಗರಿಯು ಗುರಿಯ ನಿರಿಯಿಟ್ಟು
ಬರುತಿದೆ ತೂರಿ ಲೀಲೆಯನಾಯಾಸ. ಗರುಡ
ನಂತೆರಗಿ ಬಂದಿತು-ಭ್ರಮೆಯೊ? ಹಮ್ಮದವೊ? ನಂಜೊ?
ಮರಣವೊ? ನಿದ್ದೆಯೋ? ಮೋಹನವೋ? ಎಚ್ಚರಕೆ ಕವಿದ
ಮರೆವೋ? ಕನಸೋ ನನಸು- ಎಲ್ಲ ಹಾಲೋಹಾಲು!
ಇದು ಕವಿತೆಯ ಪೂರ್ವಾರ್ಧ. ಇದರಲ್ಲಿ ಕಾವ್ಯವು ಮಂತ್ರಸದೃಶ ಎನ್ನುತ್ತಿದ್ದಾರೆ ಬೇಂದ್ರೆ. ಶಬ್ದಗಳು ಸುಲಭವಾಗಿ ಅರ್ಥಕ್ಕೆ ಒಗ್ಗಲಾರವು. ಅವುಗಳನ್ನು ಒಗ್ಗಿಸಬೇಕಾಗಿದೆ; ಹಾಗೆ ಒಗ್ಗಿಸುವುದು ಒಂದು ತಂತ್ರ ಎನ್ನುತ್ತಾರೆ. ಚಿತ್ರವ ರಚಿಸಬಹುದು; ಪ್ರಾಣವ ರಚಿಸಬಹುದೆ? ಎಂದು ಅಲ್ಲಮ ಕೇಳಿದ್ದ. ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ- ಎನ್ನುತ್ತಾರೆ ಬೇಂದ್ರೆ. ಉಸಿರ ಹೆದೆಗೆ ಹೂಡಿದ್ದು ಒಂದು ಗರಿ; ಆದರೆ ಆ ಗರಿಯೇ ಗುರಿಗೆ ತಾಗಿ ತಾನೇ ಗುರಿಯ ನಿರಿಯಾಗಿ ತಾನು ಗುರಿಯೇ ಆಗಿ ಅನಾಯಾಸ ತೂರಿಬಂದಿತು; ಇದೊಂದು ರೂಪಾಂತರ. ಶಬ್ದಗಳೇ ಅರ್ಥಗಳಾಗಿ ರೂಪಾಂತರಗೊಂಡು ಕಾವ್ಯವಾಗುವುದು! ಗರಿಯು ಗರುಡನಾಗುವುದು! ಗರಿ, ಗರುಡ-ಬೇಂದ್ರೆಯವರಿಗೆ ಒಂದರೊಡನೆ ಇನ್ನೊಂದು ಸದಾ ನೆನಪಾಗುವ ಜೋಡಿಪದಗಳು. ಹೀಗೆ ರೂಪಾಂತರಗೊಂಡು ಬಂದಾಗ, ಗರುಡನಂತೆ ಎರಗಿ ಬಂದಾಗ, ಪಟ್ಟ ಅನುಭವವನ್ನು ಬಣ್ಣಿಸಲು ಒಂದು ಪದ ಸಾಲದು. ಅರ್ಥವು ಈಗ ಶಬ್ದಗಳನ್ನು ಆಯ್ದು ಆಯ್ದು ಒಗ್ಗಿಸಬೇಕಾಗಿದೆ. ಭ್ರಮೆಯೊ? ಹೆಮ್ಮರವೊ? ನಂಜೊ?- ಇತ್ಯಾದಿ. ಪದ್ಯದಲ್ಲಿ ಗರುಡನ ಉಲ್ಲೇಖವಿರುವುದರಿಂದ “ಅಮೃತ’ ಎಂದು ಹೇಳಬೇಕಾಗಿತ್ತು-ಕವಿ. ಆದರೆ ಹಾಲುಕ್ಕಿದಂತೆ ಎನ್ನುತ್ತಾರೆ. “ಎಲ್ಲ ಹಾಲೋ ಹಾಲು’. ಕಾವ್ಯವು ಅಮೃತಕ್ಕೆ ಹಾರುವ ಗರುಡ ಎಂದವರು ಬೇಂದ್ರೆ! ಇಲ್ಲಿ “ಹಾಲು’ ಎನ್ನುತ್ತಾರೆ. ಭೌತಿಕದ ಸ್ಪರ್ಶವನ್ನು ಬಿಟ್ಟುಕೊಟ್ಟಿಲ್ಲ. ಏಕೆಂದರೆ ಗರುಡನಂತೆರಗಿ ಬಂದ ಅನುಭವವು ಆಪ್ಯಾಯಮಾನವೂ ಹೌದು- ಆಘಾತಕಾರಿಯೂ ಹೌದು.
ಪದ್ಯದ ಉತ್ತರಾರ್ಧದಲ್ಲಿ ಹಾವನ್ನು ಉದ್ದೇಶಿಸಿ ಹೇಳಿದ ಮಾತುಗಳಿವೆ. ಆದರದು ಹಾಲು ಕುಡಿದವರ ಮಾತಿನಂತಿಲ್ಲ. ಅಥವಾ ಅಮೃತ ಕುಡಿದವರು ಹೀಗೆ ಮಾತನಾಡಿದರೆನ್ನುವುದು ಒಟ್ಟು ಕವಿತೆಯನ್ನೇ ಕೆಡಿಸುವುದರಿಂದ, ಹಾಲು ಕುಡಿದವರು-ಕನಿಷ್ಠ ಹಾವಿಗೆ ಹಾಲೆರೆದೇನು ಫಲ? ಎಂದು ಕೇಳಬಹುದಾಗಿ-ಈ ಮಾತುಗಳಿವೆ.
ಎಲೆ ಹಾವೆ! ಹೊಟ್ಟೆ ಹೊಸೆಯುವ ಜಂತು! ನಿನಗೆ
ಕಿವಿ ಇಲ್ಲ. ನಾಲಿಗೆ ಎರಡು. ಹಲ್ಲೊಳಿದೆ ವಿಷವು.
ನಿನ್ನನ್ನ ಗಾಳಿಯು. ನೀನು ಪಾತಾಳಕ್ಕಿಳಿದರೂ
ಮತ್ತೆ ಕಾಡುವೆ. ರಸಿಕ ನೆನೆ ಚಂದ ತಲೆದೂಗಿ
ನಾಳೆ ಕಾರುವೆ ಗರಳ. ಬಯಸುತಿರು, ಬಯಸುತಿರು
ಕಂಡಿಲ್ಲವೇನೋ ಅಂಗೈಯ ಗರುಡನ ಗೆರೆಯ!
ಈ ಮಾತುಗಳು ವಿಮರ್ಶೆಯನ್ನು; ವಿಮರ್ಶಕರನ್ನು ಕುರಿತು ಆಡಿದ ಮಾತುಗಳು. ಬೇಂದ್ರೆಯವರಿಗೆ ಗೆಳೆಯರು; ರಸಿಕರು; ಸಹೃದಯರು ಬೇಕು; ಗುಂಪುಗುಂಪಾಗಿ ಬೇಕು. ನಿಜ. ಆದರೆ ವಿಮರ್ಶಕರು ಬೇಕಿಲ್ಲ. ಅಂದರೆ ತಮ್ಮ ಲೋಕಾನುಭವದ ಬಲದಿಂದಲೇ ಕವಿಯ ಅನುಭವ ಎಷ್ಟು ಗಾಢ? ಎಷ್ಟು ಗತಾನುಗತಿಕ? ಎಷ್ಟು ಚಮತ್ಕಾರಿಕ? ಎಷ್ಟು ತನ್ನ ಮಾತಿನ ಬಲದಿಂದ ಇತರರನ್ನು ನಂಬಿಸಹೊರಟದ್ದು? ಎಷ್ಟು ತನ್ನನ್ನೇ ತಾನು ನಂಬಿಸಿಕೊಂಡದ್ದು?- ಇತ್ಯಾದಿ ಪ್ರಶ್ನೆಗಳನ್ನು ಎತ್ತುವವರು ಬೇಕಿಲ್ಲ. “”ಈ ಕವಿತೆಯ ವಸ್ತು ಕವಿ; ಕಾವ್ಯ ಮತ್ತು ಕಾವ್ಯದ ಸ್ವೀಕಾರ” ಎಂದು ಬೇಂದ್ರೆಯವರ ಪ್ರಸಿದ್ಧ ವ್ಯಾಖ್ಯಾನಕಾರರಾದ ಕುರ್ತಕೋಟಿಯವರು ಹೇಳುತ್ತಾರೆ. ಇವೆಲ್ಲ ಹೌದು. ಆದರೆ ಇವೆಲ್ಲದರ ಜೊತೆಗೆ ತಮ್ಮದೇ ಕಾರಣಗಳಿಗಾಗಿ ಕಾವ್ಯವನ್ನು ಪ್ರಶ್ನಿಸುವವರ ಕುರಿತಾದ ಆಕ್ರೋಶವೂ ಇಲ್ಲಿ ದಟ್ಟವಾಗಿದೆ. “”ಗಾರುಡಿಗ ಮತ್ತು ಹಾವು ಇವುಗಳ ಅನ್ಯೋನ್ಯ ಸಂಬಂಧವನ್ನು ಬಳಸಿಕೊಂಡು ಬೇಂದ್ರೆಯವರು ಕವಿತೆಯ ಶಿಲ್ಪವನ್ನು ಅದ್ಭುತವಾಗಿ ನಿರ್ಮಿಸಿದ್ದಾರೆ”- ಎನ್ನುವಾಗ ಕುರ್ತಕೋಟಿಯವರು, ಗಾರುಡಿಗ ಮತ್ತು ಹಾವು ಇವುಗಳ ಸಂಬಂಧ ಇಲ್ಲಿ ಅನ್ಯೋನ್ಯವಾಗಿಲ್ಲ ಎನ್ನುವುದನ್ನು ಗಮನಿಸಿಯೇ ಇಲ್ಲ. ಅನ್ಯೋನ್ಯವಾಗಿರುತ್ತಿದ್ದರೆ; ಕವಿತೆಯ ಉತ್ತರಾರ್ಧ ಬೇರೆಯೇ ರೀತಿ ಇರುತ್ತಿತ್ತು. “ಹಾವಿನ ಹಲ್ಲ ಕಿತ್ತು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ’- ಎಂದು ಅಕ್ಕಮಹಾದೇವಿ ಹೇಳಿದಂತೆ, ಪ್ರಕರಣದ ಬಣ್ಣವೇ ಬೇರೆಯಾಗುತ್ತಿತ್ತು ಎನಿಸುತ್ತದೆ. ಅಂಗೈಯಲ್ಲಿ ಗರುಡನ ಗೆರೆ ಇದೆ ಎಂದರೆ ಅದು ಹಾವಿನಹಲ್ಲು ಕಿತ್ತಂತೆಯೇ ಅಲ್ಲವೆ?
ಬೇಂದ್ರೆಯಂಥವರನ್ನು ಆಕ್ಷೇಪಿಸುತ್ತಿದ್ದೇನೆಂದು ದಯವಿಟ್ಟು ತಿಳಿಯಲಾಗದು. ಆಕ್ಷೇಪವೆಂದು ಕಾಣುವ ಜಿಜ್ಞಾಸೆಯ ಮೂಲಕವೇ ಹಿರಿಯ ಕವಿಯನ್ನು ಅರ್ಥಮಾಡಿಕೊಳ್ಳುವ ವಿನೀತಪ್ರಯತ್ನವಷ್ಟೇ ಇದು. ತೀವ್ರವಾದ ಸೃಷ್ಟಿಶೀಲ ಪ್ರತಿಭೆ ಇರುವಲ್ಲಿ ತೀವ್ರವಾದ ಅಸಹನೆಯೂ ಅಷ್ಟೇ ಸಹಜವೆಂಬಂತೆ ಜೊತೆಗೂಡುವುದು ಒಂದು ಆಶ್ಚರ್ಯವೇ. ಗರುಡನಂತೆ ಬಂದೆರಗುವ “ಮನೋಧರ್ಮ’ ಯಾವುದನ್ನು ಬಯಸುತ್ತದೆ? ಅದರ ವೇಗ, ತೀವ್ರತೆ, ತೀಕ್ಷ್ಣವಾದ ಕಣ್ಣೋಟ, ಗುರಿತಪ್ಪದ ಮೊನಚು- ಇವೆಲ್ಲ ಯಾವುದನ್ನು ಸೂಚಿಸುತ್ತದೆ? ತನ್ನ “ಬಲಿ’ಯನ್ನು ಅದು ತಪ್ಪದೆ ಕೊಳ್ಳುತ್ತದೆ ಎಂಬುದನ್ನಲ್ಲವೆ? ಇದು ಕವಿಯ ಅನುಭವವಾದಾಗ, ಎರಗುವ ಅದಕ್ಕೆ ತನ್ನನ್ನು ಒಪ್ಪಿಕೊಳ್ಳುವುದಲ್ಲದೆ ಬೇರೆ ಹಾದಿಗಳೇ ಕವಿಯ ಸಂವೇದನೆಗೆ ತೋಚದು. “ನಾನ್ಯಃ ಪಂಥಾ ಅಯನಾಯೆ ವಿದ್ಯತೇ’- ಅದನ್ನರಿಯಲು ಬೇರೆ ದಾರಿಗಳಿಲ್ಲ-ಎಂಬಂಥ ಪರ್ಯಾಪ್ತಸ್ಥಿತಿ ಇದು. ಬೇರೆ ದಾರಿಗಳಿಲ್ಲ ಎಂಬ ಅರಿವು; ಅರಿವಿನ ಅಸಹಾಯಕತೆಯಲ್ಲ. ಅದು ಅನುಭವದ ಗಾಢತೆಯಲ್ಲಿ ಉಂಟಾದ ಬಿರುಕಿಲ್ಲದ ಸ್ಥಿತಿ! ಇಂಥ ಆವೃತ ಮನೋಧರ್ಮದಲ್ಲಿ ತಾನೂ ಇದರಲ್ಲೊಂದಾಗಿ ಸೇರಬಯಸದ, ಸೇರಿದರೂ “ಬಲಿ’ಯಾಗಲೊಲ್ಲದ ವಿಮರ್ಶೆಗೇನು ಕೆಲಸ? ನಿಲ್ಲಲೆಲ್ಲಿ ಜಾಗ? ತನ್ನ ಸೃಷ್ಟಿಶೀಲ ಆವರಣವನ್ನೇ ಭಂಗಗೊಳಿಸುವ ಒಂದು ವಿಕ್ಷೇಪವೆಂಬಂತೆ ಕವಿಯ ಆವೃತ ಮನೋಧರ್ಮ ವಿಮರ್ಶೆಯನ್ನು ನೋಡುತ್ತದೆ. ಶಬಾœರ್ಥಗಳು ರೂಪಾಂತರಗೊಂಡು ಕಾವ್ಯವಾಗುವಲ್ಲಿ, ರೂಪಾಂತರವನ್ನೇ ಸಂದೇಹಿಸುವ ಹಟವಾಗಿ ವಿಮರ್ಶೆ ಕವಿಗೆ ಕಾಣಿಸುತ್ತದೆ. ಭವಭೂತಿಯ ಮಾತನ್ನು ನೆನೆಯುವುದಾದರೆ, ಬೇಂದ್ರೆಯವರಿಗೆ ಬೇಕಿದ್ದುದು ಸಮಾನ ಧರ್ಮರ ಒಡನಾಟ. ಸಹೃದಯತೆಗೇ ಇನ್ನೊಂದು ಪದವಿದು- “ಸಮಾನಧರ್ಮ’ ಎಂಬುದು. ತನ್ನ ಸಮಾನ ಧರ್ಮರನ್ನು ಕಾಣಲು ಎಷ್ಟು ಕಾಲ ಬೇಕಾದರೂ ಕಾಯಬಲ್ಲೆನೆಂದಿದ್ದ ಭವಭೂತಿ. ವಿಮರ್ಶಕರು ಅವನ ಕಣ್ಣಮುಂದೆಯೇ ಇದ್ದರು!
ಕುವೆಂಪು ಅವರನ್ನು ನೋಡಿ ನಾನೇರುವೆತ್ತರಕೆ ನೀನೇರಬಲ್ಲೆಯಾ ಎಂದು ಕವಿ ಕುವೆಂಪು ಕೇಳಿದ್ದು ವಿಮರ್ಶಕರನ್ನೇ. ಇದೊಂದು ಆಹ್ವಾನ. ಸವಾಲು. ಕವಿ ಮತ್ತು ವಿಮರ್ಶಕರ ನಡುವಿನ ಸ್ತರಭೇದವನ್ನು ಸೂಚಿಸುವ ಮಾತು ಕೂಡ. ಈ ಸ್ತರಭೇದ ಅಳಿಯದೆ ನಾವಿಬ್ಬರೂ ಸಮಾನರಂತೆ ಬೆರೆಯಲಾರೆವು; ಆದುದರಿಂದ ಈ ಸ್ತರಭೇದವನ್ನಳಿಸಿ ಹಾಕಿ ಮೇಲೇರಬೇಕಾದ ಹೊಣೆ ನಿನ್ನದು ಎಂದು ವಿಮರ್ಶಕನಿಗೆ ಸೂಚಿಸಿ, ಕವಿಯಾಗಿ ಇಂಥ ಸೂಚನೆಯೊಂದನ್ನು ಮಾತ್ರ ನಾನು ಮಾಡಬಲ್ಲೆನೆಂದ ಮಾತು ಇದು. ಎಲ್ಲ ತರ-ತಮಗಳನ್ನೂ ಅಳಿಸಿ ಹಾಕಿ ಅದರಾಚೆಗಿನ ಬದುಕನ್ನು ತೋರುವ, ನೀರೆಲ್ಲವೂ ತೀರ್ಥ ಎಂದು ಉಗ್ಗಡಿಸಿದ, ಕನ್ನಡದ ಸರ್ವಕಾಲ ಶ್ರೇಷ್ಠ ಕೃತಿಗಳಲ್ಲೊಂದಾದ “ಮಲೆಗಳಲ್ಲಿ ಮದುಮಗಳ’ನ್ನು ಬರೆದ ಕುವೆಂಪು-ವಿಮರ್ಶಕನನ್ನು ನಾನೇರುವೆತ್ತರಕೆ ನೀನೇರಬಲ್ಲೆಯಾ ಎಂದು ಕೇಳಿದರೆಂಬುದು ಕೂಡ ಸೃಜನ ಮನೋಧರ್ಮವು ವಿಮರ್ಶೆಯ ಮನೋಧರ್ಮವನ್ನು ತಿದ್ದುವ ಮಾತಾಗಿ ಕೇಳಿಸುತ್ತದೆ. “”ತನ್ನ ಕಾವ್ಯಕೆ ತಾನ್ ಮಹಾಕವಿ ಮಣಿಯುವಂತೆ” ಎಂದವರು ಕುವೆಂಪು. ಇನ್ನು ವಿಮರ್ಶಕರದೇನು? ಬೇಂದ್ರೆಯವರಂತೆಯೇ, ಸೃಜನ ಮನೋಧರ್ಮದ ಒಂದು ಬಗೆಯ ಆವಿಷ್ಟಸ್ಥಿತಿಯಲ್ಲಿ ಹೊಮ್ಮುವ ಆತ್ಮಪ್ರತ್ಯಯವಿದು.
ಮತ್ತು ಶಿವರಾಮ ಕಾರಂತರು! ಕಾರಂತರು ಕವಿಯಲ್ಲ. ದೊಡ್ಡ ಕಾದಂಬರಿಕಾರರು. ಗದ್ಯ ಬರೆಹಗಾರರು. ವೈಜ್ಞಾನಿಕ ಮನೋಧರ್ಮದ ಪ್ರತಿಪಾದಕರು. ಪ್ರಯೋಗಶೀಲ ಮನಸ್ಸಿನವರು. ಇಂಥ ಕಾರಂತರೂ ಸೃಜನಾತ್ಮಕತೆಯನ್ನು ನೆಚ್ಚುವವರಲ್ಲದೆ-ವಿಮರ್ಶೆಯನ್ನಲ್ಲ !
ಈ ಹಿನ್ನೆಲೆಯಲ್ಲಿ ನೋಡುವಾಗ ಅಡಿಗರ “ವಿಮರ್ಶಕ’ ಕವಿತೆ ಬೇರೆಯೇ ಒಂದು ದಾರಿಯನ್ನು ತೆರೆಯುತ್ತದೆ. ಕುವೆಂಪು ಅವರ ಮಾತನ್ನು ಉದ್ದೇಶಪೂರ್ವಕ ನೆನಪಿಸಿಕೊಳ್ಳುತ್ತಲೇ ಕವಿತೆ ಶುರುವಾಗುವುದು:
ನಾನೇರುವೆತ್ತರಕೆ ನೀನು ಕೂಡ ಏರಿ ನೆಳಲಂತೆ
ನಾನಿಳಿಯುವಾಳಿಕ್ಕು ನುಸುಳಿ ನುಗ್ಗಿ
ದಿಗಂತದೆಡೆಗೆ ನಾ ಬಿಚ್ಚಿದ್ದ ರೆಕ್ಕೆಗೆ ರೆಕ್ಕೆ
ಹಚ್ಚಿ ಹೊಸದಿಗಂತಗಳನ್ನು ಪತ್ತೆಹಚ್ಚಿ
ಏನನ್ನು ಮುಟ್ಟದೆಯೆ ನಿಂತೆ ನಿಸ್ಪೃಹನಾಗಿ
ಕೆಳಕ್ಕೆ ಮೇಲಕ್ಕೆ ಸುತ್ತಮುತ್ತ
ವಿಮರ್ಶಪ್ರಜ್ಞೆ ಕವಿಯ ಜೊತೆಗೇ ಇದೆ ಸದಾ ಒಡನಾಡಿಯಾಗಿ. ಈ ಒಡನಾಟದ ಮೂಲಕವೇ ಅದು ಹೊಸ ದಿಗಂತಗಳನ್ನು ಪತ್ತೆಹಚ್ಚಬಲ್ಲುದು; ಹೊಸ ಸುಳಿವುಗಳನ್ನು ತೋರಿಸಬಲ್ಲುದು. ಆದರೆ ವಿಶೇಷವೆಂದರೆ ಅದು ಏನನ್ನೂ ಮುಟ್ಟದು; ಕೆಳಕ್ಕೆ ಮೇಲಕ್ಕೆ ಸುತ್ತಮುತ್ತ ಸುಳಿದಾಡಿದರೂ ಮುಟ್ಟಿಸಿಕೊಳ್ಳಲೊಲ್ಲದು. ಸುಳಿದಾಡುವ ಮುಕ್ತತೆಗಾಗಿಯೇ ಮುಟ್ಟಿಸಿಕೊಳ್ಳಲೊಲ್ಲದೋ ಏನೋ! ಅದು ಕಾರಣ-ವಿಮರ್ಶಪ್ರಜ್ಞೆ ನೆರಳಂತೆ. ಸೃಜನ ಮನೋಧರ್ಮವಾದರೋ ಮುಟ್ಟಲು ಮುಟ್ಟಿಸಿಕೊಳ್ಳಲು ಹಂಬಲಿಸುತ್ತಿರುತ್ತದೆ. ಈ ಹಂಬಲವಿಲ್ಲದೆ ಸೃಜನ ಮನಸ್ಸೇ ಇಲ್ಲ ಮತ್ತು ಇಂಥ ಹಂಬಲದಿಂದಾಗಿ ಸೃಜನಮನಸ್ಸು ಘಾಸಿಗೊಳ್ಳುತ್ತಲೇ ಇರುತ್ತದೆ!
ಈಗ ಘಾಸಿಗೊಂಡ ಚಿತ್ರ ಕಾಣಿಸಿಕೊಳ್ಳುತ್ತದೆ-ಕವಿತೆಯಲ್ಲಿ. ರಾಮಾಯಣದಲ್ಲಿ ಬರುವ “ಸಂಪಾತಿ’ಯ ಚಿತ್ರವಿದು. “ರೆಕ್ಕೆಗೆ ರೆಕ್ಕೆ ಹಚ್ಚಿ , ಹೊಸದಿಗಂತಗಳನ್ನು ಪತ್ತೆಹಚ್ಚಿ’ ಎಂಬ ಸಾಲುಗಳ ಒಡಲಿನಿಂದಲೇ ಮೂಡಿದ ಚಿತ್ರ.
ಹೊತ್ತಿನ ಮುಖಕ್ಕೆ ನೇರ ನುಗ್ಗಿ ರೆಕ್ಕೆ ಸುಟ್ಟು ಕೆಳಬಿದ್ದದ್ದು
ಬಿದ್ದಲ್ಲೆ ಹುತ್ತ ಕಟ್ಟಿಕೊಂಡು ಗುಹೆಯಾಗಿ
ಗುಹೆಯ ಹೆಗ್ಗತ್ತಲಿನ ದಟ್ಟ ಹೆಪ್ಪಾಗಿ
ಹದಿನಾಲ್ಕು ವರ್ಷ ದಹದಹಿಸಿದ್ದು, ಹುಳಿ ಏರಿ
ಹುಳಿ ಕಳೆದು ಹಣ್ಣಾಗಿ, ಸಿಡಿದು ಕೆಂಗಿಡಿಯಾಗಿ
ಊನಾಂಗ ಚಿಗಿತು ದೃಶ್ಯರೆಕ್ಕೆಯೊಂದು ಅದೃಶ್ಯದ್ದೊಂದು
ಕೂಡಿ ಸಮ ತಾಳಲಯ ಬಡಿದು ಮೂರ್ತದಿಂದ
ಅಮೂರ್ತಕ್ಕೆ ಅಮೂರ್ತದಿಂದ ಮೃತ್ತಿಕೆಗೆ
ಸದಾ ತುಯ್ಯುತ್ತಿದ್ದದ್ದು- ಈ ಎಲ್ಲ
ನೀನು ಕೂಡ ಕಂಡಿದ್ದೆ; ನೆಳಲಿನ ಹಾಗೆ
ಪೂರ್ಣಾಂಗನಾಗಿಯೇ ಉಳಿದುಕೊಂಡೆ
ಸೂರ್ಯನ ಉರಿಗೆ ರೆಕ್ಕೆಸುಟ್ಟು ಊನಾಂಗವಾಗಿ ಮತ್ತೆ ಚಿಗಿತದ್ದರ ಹಿಂದೆ ಸೃಜನ ಮನಃಸ್ಥಿತಿಯ ತಪಸ್ಸೂ ಇದೆ; ಎಂದೂ ಸುಡದ ಅದೃಶ್ಯರೆಕ್ಕೆಯೊಂದರ ಅಮೂರ್ತ ಮಾದರಿಯೂ ಇದೆ. ಪೂರ್ಣಾಂಗದ ಆದುದರಿಂದಲೇ ನಿಸ್ಪೃಹ ಆದರ್ಶದ ವಿಮಶಾìಪ್ರಜ್ಞೆಯ ಹಿನ್ನೆಲೆಯಲ್ಲಿ ಇಲ್ಲಿ ಸೃಜನಸ್ಥಿತಿಯ ಏರುತಗ್ಗುಗಳು ನಡೆಯುತ್ತಿರುವುದು. ಕವಿ ತಾನು ಘಾಸಿಗೊಂಡಾಗ, ವಿಮಶಾìಪ್ರಜ್ಞೆಯು ತಾನು ಘಾಸಿಗೊಳ್ಳದೆ ಪೂರ್ಣಾಂಗವಾಗಿಯೇ ಇದ್ದು; ಉಳಿದು, ಮಾದರಿಯಾಗಿ, ಅಂಗವು ಮತ್ತೆ ಚಿಗಿತುಕೊಳ್ಳುವುದಕ್ಕೆ ಕಾರಣವಾಗುತ್ತದೆ ಎನ್ನುವ ಅಡಿಗರ ಕಾಣೆR ವಿಶಿಷ್ಟವಾಗಿದೆ! ವಿಮರ್ಶೆಯ ನಿಸ್ಪೃಹತೆಯು ಸೃಜನಸ್ಥಿತಿಯ ಸ್ಪೃಹಣೀಯ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ ಎನ್ನುವ ಹೊಳಹು ಬೇಂದ್ರೆ ಮತ್ತು ಕುವೆಂಪು ಅವರು ಬಿಟ್ಟಲ್ಲಿಂದ ಮುಂದುವರೆಸಿರುವಂತೆ ತೋರಿಬರುತ್ತದೆ. ಈಗ ಬರುತ್ತದೆ ಕವಿಯ ಕೊನೆಯ ಭಾಗ. ಸೃಜನಸ್ಥಿತಿಯು ತಾನು ಕ್ರಿಯಾಶೀಲವಾಗಿರುವ ಹೊತ್ತಿನಲ್ಲಿ, ವಿಮಶಾìಪ್ರಜ್ಞೆಯು ತನ್ನ ನಿಸ್ಪೃಹತೆಯನ್ನು ಬಿಟ್ಟುಕೊಡದೆ ತಾನೂ ಚಟುವಟಿಕೆಯಲ್ಲಿರುವ ಚಿತ್ರವಿದು. ಆ ಚಟುವಟಿಕೆ ಮಾತ್ರ-ಸರಳವಾಗಿಲ್ಲ. ತುಂಬ ಸಂಕೀರ್ಣವಾಗಿದೆ. ದ್ವಂದ್ವಾತ್ಮಕವಾಗಿದೆ. ಸೃಜನಸ್ಥಿತಿಯು ಎಲ್ಲಿಯೂ ತಾನು ಆತ್ಮರತವಾಗದಂತೆ ಮೈಮರೆಯಲವಕಾಶ ನೀಡದಂತೆ, ಆವೇಶಕ್ಕೆ ಒಳಗಾಗದಂತೆ, ವಿಮಶಾìಪ್ರಜ್ಞೆಯು ಎಚ್ಚರಿಸುತ್ತಲೇ ಇರುವ ಚಿತ್ರವಿದು.
ಒಳಗಣ್ಣಿನಲ್ಲೋಲದಲ್ಲಿ ಮೂಡುವ ನೀನು
ಹೊರಗಿನವನಂತೂ ಅಲ್ಲ. ನನ್ನೊಳಗಿನವ.
ಒರೆಗಿಕ್ಕುವ ಸಾಣೆ ಹಿಡಿವ, ತೂಗುವ, ಅಳೆವ
ಕಾರುಬಾರೆಲ್ಲವೂ ನಿನ್ನದೇ. ನಿದ್ದೆ ಮಂಪರಿನಲ್ಲಿ
ಸೂಜಿ ಚುಚ್ಚಿ ಎಬ್ಬರಿಸಿದವ, ಇಷ್ಟುದ್ದ ದಬ್ಬಳ ಹಿಡಿದು
ಊದಿಕೊಂಡಾಗ್ಗೆಲ್ಲ ಚುಚ್ಚಿ ಅನವಶ್ಯಕ ಗಾಳಿ
ಹೊರಗಟ್ಟಿದವ. ನೀನು ನನ್ನೊಳದ ನೆಳಲೆ? ಚಿತ್ರಗುಪ್ತರ ಪೈಕಿ
ಬೇಹುಗಾರಿಕೆಗೆ ಬಂದವನೆ? ಭಾವಬದ್ಧ ಪಶು
ತೊಂಡುಮೇಯಲು ಬಿಡದ ಪಶ್ಚಾತ್ತಾಪಕ್ಕೆ ಸರ್ವದಾ ತಿವಿಯುತ್ತ ಪಾಪಪುಣ್ಯಗಳ ಕತ್ತರಿಯಲ್ಲಿ ಸಿಕ್ಕಿಸಿ ಒತ್ತುತ್ತ ಒತ್ತುತ್ತ ಪಶ್ಚಾತ್ತಾಪದುರಿಗಿಕ್ಕಿ, ಸುಟ್ಟವನೆ, ಸುಡುಗಾಡವನೆ,
ನನ್ನ ವಿಗ್ರಹ ಮುಕ್ಕು ಮಾಡಿ ತದನಂತರವೆ
ಬೀದಿಗೆಳೆದವನೆ, ಕೊಂದವನೆ, ಕೊಂದು ಬದುಕಿಸಿದವನೆ,
ಜನ್ಮಶನಿಯೇ, ಜಿಗಣೆಗೆಣೆಯ, ಗುರುವೇ
ಈ ಭಾಗ ಓದುತ್ತಿದ್ದಂತೆ ಬೇಂದ್ರೆ ಪದ್ಯದ ನೆನಪಾಗುವುದು ಮತ್ತೆ. “ಭ್ರಮೆಯೋ, ಹಮ್ಮದವೋ, ನಂಜೋ, ಮರಣವೋ, ನಿದ್ದೆಯೋ, ಮೋಹನವೋ, ಎಚ್ಚರಕೆ ಕವಿದ ಮರವೋ, ಕನಸೋ ನನಸೋ’- ಎಂಬ ಚಿಮ್ಮಿಕೊಂಡು ಬಂದ ಪದಗಳು. ಅಡಿಗ ಈ ಸಾಲುಗಳೊಡನೆ ಓದಿಕೊಂಡಾಗ ಅದೇನೋ ಹೇಳಲಾಗದ ಕುತೂಹಲ ಉಂಟಾಗುವುದು.
ಅಡಿಗರಿಗೆ ಹಾವಿನ ಹಲ್ಲುಕಿತ್ತು ಹಾವನಾಡಿಸಲಾಸಕ್ತಿ ಇಲ್ಲ. ಹಲ್ಲು ಕೀಳದ ಹಾವಿಗೆ ಅದು ಅಂಜುವಂತೆ ಗರುಡನಗೆರೆ ತೋರಿಸಲಾಸಕ್ತಿ ಇಲ್ಲ. ತೋರಿಸಲು ಅಂಗೈಯಲ್ಲಿ ಗರುಡನಗೆರೆಯೂ ಇಲ್ಲ. ಇರಬೇಕಾಗಿಯೂ ಇಲ್ಲ. ತಿಳಿದಿರುವುದೆಲ್ಲ- ರೆಕ್ಕೆಸುಟ್ಟ ಅನುಭವ. ಊನಾಂಗ ಚಿಗಿತ ಅನುಭವ. ನಿಸ್ಪೃಹ ವಿಮಶಾìಪ್ರಜ್ಞೆಯು ತನ್ನದೇ ಇನ್ನೊಂದು ಮಾದರಿಯಂತಿದೆ ಎನ್ನುವ ಅನುಭವ. ಆದುದರಿಂದ ಎಲ್ಲ ಸೃಜನಾತ್ಮಕ ಥ್ರಿಲ್ ಇರುವುದು ಹಲ್ಲುಕೀಳದ ಹಾವಿನೊಡನೆ ಆಡುವುದರಲ್ಲಿ. ಆ ಜೀವನ್ಮರಣ ಎಚ್ಚರದಲ್ಲಿ. ಅದು ಸಂಕಟವೂ ಹೌದು. ತನ್ನ ಹೊಸ ಹುಟ್ಟೂ ಹೌದು. ಹಲ್ಲು ಕೀಳದ ಹಾವಿನೊಡನೆ ಆಡುವವನು ಕೂಡ ಪೊರೆ ಕಳಚಿಕೊಳ್ಳುವನು! ವಿಮರ್ಶಕನೆಂದರೆ ಹಾಗೆ ಕವಿ, ಪೊರೆ ಕಳಚಿಕೊಳ್ಳುವಂತೆ ಮಾಡುವನು! ಪೊರೆ ಕಳಚಿಕೊಳ್ಳುವ ಸಂಕಟ ಮತ್ತು ಥ್ರಿಲ್- ಈ ಕೊನೆಯ ಭಾಗದಲ್ಲಿ ದಟ್ಟವಾಗಿದೆ. ಸಹೃದಯತೆ-ಸಮಾನಧರ್ಮ ಎಂಬ ಪರಿಕಲ್ಪನೆಗಳು ಯಾವೆಲ್ಲ ರೂಪಗಳನ್ನು ಪಡೆದುಕೊಳ್ಳಬಹುದು ನೋಡಿ.
ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.