ಕಾವ್ಯದ ಮರ್ಯಾದಾಪುರುಷೋತ್ತಮ ಬಿ. ಸಿ. ರಾಮಚಂದ್ರ ಶರ್ಮ
Team Udayavani, Mar 17, 2019, 12:30 AM IST
ಬೋಗಾದಿ ಚಂದ್ರಶೇಖರ ರಾಮಚಂದ್ರಶರ್ಮರಂಥ ತೀವ್ರ ಕಾವ್ಯ ವ್ಯಾಮೋಹಿ ಕನ್ನಡದಲ್ಲಿ ಇನ್ನೊಬ್ಬರಿಲ್ಲ. ವಯಸ್ಸಲ್ಲಿ ನನಗಿಂತ ಇಪ್ಪತ್ತು ವರ್ಷದಷ್ಟು ಹಿರಿಯರು. ಆದರೆ, ಯಾವತ್ತೂ ಹಿರಿತನದ ಜಬುì ತೋರದೆ ನನ್ನನ್ನು ಗೆಳೆಯನಂತೆ ನೋಡಿಕೊಂಡವರು. ಅವರ ಮನೆಗೆ ಹೋದಾಗ, ಅವರೊಂದಿಗೆ ಅವರದ್ದೇ ಕಾರಲ್ಲಿ ಮತ್ತೆ ಮತ್ತೆ ಚಿಂತಾಮಣಿಯಲ್ಲಿ ಲಕ್ಷ್ಮಣರಾವ್ ಗೆಳೆಯರ ಬಳಗದ ಹೆಸರಲ್ಲಿ ನಡೆಸುತ್ತಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪಯಣಿಸುತ್ತಿದ್ದಾಗ, ಅವರೊಂದಿಗೆ ಆಗಾಗ ನಡೆಯುತ್ತಿದ್ದ ಇರುಳ ಜಾಗರಣೆಗಳಲ್ಲಿ ನಾವು ಹೆಚ್ಚಾಗಿ ಮಾತಾಡುತ್ತಿದ್ದದ್ದು ಕಾವ್ಯದ ಬಗ್ಗೆ. ಅದರಲ್ಲೂ ವಿಶೇಷವಾಗಿ ಸಮಕಾಲೀನ ಕನ್ನಡ ಕಾವ್ಯದ ಬಗ್ಗೆ. ಹೊಸದಾಗಿ ಏನು ಬಂದರೂ ಅದನ್ನು ಓದುವ, ಅದಕ್ಕೆ ತೀವ್ರವಾಗಿ ಸ್ಪಂದಿಸುವ ಕಾವ್ಯದ ಹುಚ್ಚು ಅವರಿಗೆ. ಹೊಸ ಕವಿಗಳ ಬಗ್ಗೆ ತುಂಬ ಆಸಕ್ತಿ. ತಮ್ಮ ಸಮಕಾಲೀನರ ಬಗ್ಗೆ ಕೆಲವೊಮ್ಮೆ ತಳಮಳ, ಕೆಲವೊಮ್ಮೆ ಕಟು ವಿಮರ್ಶೆ- ಆದರೆ ಯಾವತ್ತೂ ಅಸಹನೆ ತೋರದ ಕಾವ್ಯಪ್ರೀತಿ. ನಮ್ಮ ನಡುವೆ ನಡೆದ ಕಾವ್ಯಕೋಲಾಹಲಗಳಿಗೆ ಲೆಕ್ಕವೇ ಇಲ್ಲ ! ಏರು ಧ್ವನಿಯಲ್ಲಿ ನಡೆದ ಬಿಸಿಬಿಸಿ ಮಾತಿನ ಚರ್ಚೆ ಕೆಲವೊಮ್ಮೆ ಜಗಳಬಂದಿಯವರೆಗೂ ಹೋಗುತ್ತಿದ್ದ ಕ್ಷಣಗಳು ಅನೇಕ. ಆದರೆ, ಮತ್ತೆ ಅವರು ಸಿಕ್ಕಾಗ ಅದೇ ಬೆಚ್ಚನೆಯ ಪ್ರೀತಿ. ಈ ಶರ್ಮರನ್ನು ದ್ವೇಷಿಸುವುದು ಸಾಧ್ಯವೇ ಇಲ್ಲ ಎನ್ನಿಸುವಂಥ ಕಲಕಿಯೂ ಬಗ್ಗಡಗೊಳ್ಳದ ನಿರ್ಮಲ ಸ್ನೇಹ.
ಈಗ ಮತ್ತೆ ಆ ಪ್ರೀತಿಯ ಜೀವವನ್ನು ಇರುಳ ತುದಿಯ ನಸುಕಿನ ಏಕಾಂತದಲ್ಲಿ ನೆನಪಿಸಿಕೊಳ್ಳುತ್ತ ಕೂತಿದ್ದೇನೆ. ಶರ್ಮರಿಗೆ ಕಾವ್ಯವೆಂಬುದು ಹೇಗಿರಬೇಕು ಎಂಬ ಬಗ್ಗೆ ತಮ್ಮದೇ ಆದ ನಿಷ್ಠುರ ನಿಲುವುಗಳಿದ್ದವು. ಸಿದ್ಧ ಸೂತ್ರಗಳೂ ಇದ್ದವು. ತಮಗೆ ತಾವೇ ಹಾಕಿಕೊಂಡ ಲಕ್ಷ್ಮಣರೇಖೆಯನ್ನು ಈ ಮರ್ಯಾದಾ ರಾಮಚಂದ್ರ ಎಂಥ ಸಂದರ್ಭದಲ್ಲೂ ಮೀರುವ ಪೈಕಿಯಲ್ಲ. ಕಾವ್ಯ ಕಥೆ ಹೇಳಬಾರದು, ಕಾವ್ಯ ಹಾಡಿಗೆ ಒಗ್ಗುವಂತೆ ಇರಬಾರದು, ಅಸಲಿ ಕಾವ್ಯವನ್ನು (ಕವಿತೆಗಳನ್ನು) ಹಾಡಲೇ ಬಾರದು, ಹಾಡುವಂಥ ಕಾವ್ಯ ಬರೆದರೆ ಕಾವ್ಯನಿಷ್ಠೆಯ ವ್ರತಭಂಗವಾದಂತೆಯೇ, ಕಾವ್ಯವು ಜಾಳಾಗುವುದಕ್ಕೆ ಗೀತೆಗಳ ರಚನೆ ಕಾರಣವಾಗುವುದು ಎಂದು ಶರ್ಮರು (ನಾನು ಅವರನ್ನು ಶರ್ಮಾಜಿ ಎಂದೇ ಕರೆಯುತ್ತಿದ್ದೆ) ದೃಢವಾಗಿ ನಂಬಿದ್ದವರು. “ಒಳ್ಳೆಯ ಕಾವ್ಯ ಬರೆಯುವ ನೀವು, ಲಕ್ಷ್ಮಣ ರಾವ್ ಹಾಡು ಬರೆದು ಯಾಕೆ ಹಾಳಾಗುವಿರಿ’ ಎಂದು ಅವಕಾಶ ಸಿಕ್ಕಾಗಲೆಲ್ಲ ಬೈಯುತ್ತಿದ್ದರು. ಆದರೆ, ಚಿಂತಾಮಣಿಯಲ್ಲಿ ನಡೆದ ನಮ್ಮ ಹಾಡುಗಳ ಸಂಗ್ರಹವನ್ನು ಬಿಡುಗಡೆ ಮಾಡಲು ಶರ್ಮರನ್ನೇ ನಾವು ಆಹ್ವಾನಿಸಿದ್ದೆವು. ಆಗ ಅವರು ಒಂದು ಲೇಖನವನ್ನೇ ಬರೆದು ತಂದು ಓದಿದರು. ಆ ಲೇಖನದಲ್ಲಿ ನಮ್ಮಿಬ್ಬರ ಬರವಣಿಗೆಯನ್ನು ವಿಶ್ಲೇಷಣಾತ್ಮಕವಾಗಿ ಚರ್ಚಿಸಿ, ಕಾವ್ಯಗುಣವನ್ನು ಮನಸಾರೆ ಮೆಚ್ಚಿ , ಜೊತೆಗೆ ಯಥಾಪ್ರಕಾರ ಹಾಡು ಬರೆಯುವುದರ ವಿರುದ್ಧ ಎಚ್ಚರಿಕೆಯ ಕಿವಿಮಾತನ್ನೂ (ಲೌಡ್ ಸ್ಪೀಕರ್ ಮೂಲಕವೇ) ಹೇಳಿದ್ದರು. ಶರ್ಮರ ಕಟೂಕ್ತಿಗೆ ಅವರ ಅಲಂಘನೀಯ ಕಾವ್ಯ ಸಿದ್ಧಾಂತ ಮತ್ತು ಅನನ್ಯವಾದ ಕಾವ್ಯಪ್ರೀತಿಯೇ ಕಾರಣವೆಂಬುದು ತಿಳಿದಿದ್ದರಿಂದ ಅವರ ಟೀಕೆ ಯಾವತ್ತೂ ನಮ್ಮ ಸ್ನೇಹಸಂಬಂಧಕ್ಕೆ ಅಡ್ಡಬರಲಿಲ್ಲ.
ನಿನ್ನಂಥ ಕವಿತೆಗೂ ರಾಗ ಬೇಕೆ? ಎಂಬ ಶರ್ಮರ ಕವಿತೆಯನ್ನು ನಾನೀಗ ನೆನಪಿಸಿಕೊಳ್ಳುತ್ತೇನೆ. ಆಗ ಆಕಾಶವಾಣಿಯವರು ಸಂಭ್ರಮದ ಯುಗಾದಿ ಸಮಾರಂಭ ಏರ್ಪಡಿಸುತ್ತಿದ್ದರು. ಆ ವರ್ಷ ಚೌಡಯ್ಯ ಮೆಮೊರಿಯಲ್ ಹಾಲಲ್ಲಿ ಯುಗಾದಿ ಕಾರ್ಯಕ್ರಮ. ಎಲ್ಲ ಪ್ರಮುಖ ಕವಿಗಳೂ ಆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರು. ಕವಿಗಳು ಬರೆದ ಗೀತೆಗಳನ್ನು ಪ್ರಸಿದ್ಧ ಗಾಯಕರು ಹಾಡುವವರಿದ್ದರು. ಅಂದರೆ ಹಾಡುವಂಥ ಕವಿತೆ ಬರೆಯಬೇಕೆಂಬುದು ಅಲಿಖೀತ ಸೂಚನೆ. ಶರ್ಮರಿಗೂ ಗೀತೆಯನ್ನು ರಚಿಸಲು ಆಹ್ವಾನ ಹೋಗಿತ್ತು. ಶರ್ಮರಿಗೆ ತಮ್ಮ ಸ್ವ-ಧರ್ಮವನ್ನು ಕಳೆದುಕೊಳ್ಳಲಾಗದ ಹಠ. ಆಗ ಅವರು ಬರೆದದ್ದು ನಿನ್ನಂಥ ಕವಿತೆಗೂ ರಾಗಬೇಕೆ? ಎಂಬ ಕವಿತೆ. ಕಾರ್ಯಕ್ರಮಕ್ಕೆ ಶರ್ಮರು ಬಂದಿದ್ದರು. ಅವರ ಕವಿತೆಯನ್ನು ಹಾಡಲು ಹಾಡುಗಾರ ಪಡುತ್ತಿದ್ದ ಶ್ರಮವನ್ನು ಕಣ್ಣಾರೆ ಕಂಡು ಅವರಿಗೆ ಒಂದು ವಿಲಕ್ಷಣ ಖುಷಿ !
ಕೊನೆಯವರೆಗೂ ತಮ್ಮ ಕಾವ್ಯಸಿದ್ಧಾಂತದ ಮಾರ್ಗಸೂಚಿಯಂತೆಯೇ ಶರ್ಮಾಜಿ ನಡೆದರು. ಅವರ ಏಳುಸುತ್ತಿನ ಕೋಟೆ ಮರೆಯಲಿಕ್ಕೇ ಸಾಧ್ಯವಿಲ್ಲ. ಕಾಮದ ಎಳಮೆ, ಪ್ರೌಢತೆ, ಉಲ್ಬಣಗಳನ್ನು ಅತ್ಯಂತ ಧ್ವನಿಪೂರ್ಣವಾಗಿ ಒಂದು ಜಾನಪದ ಕಥೆಯ ಅಲಿಗರಿಯ ಮೂಲಕ ಶಕ್ತವಾಗಿ ಧ್ವನಿಸುವ ಕವಿತೆ ಅದು. ಶರ್ಮರ ಕಾವ್ಯದ ಸ್ವರೂಪ ಖಾಸಗಿ ಪ್ರತಿಮೆಗಳ ಹೊಂಚಿನಿಂದ ಕಿಕ್ಕಿರಿದಿರುವ ಕಾರಣ ಸುಲಭಾಸ್ವಾದ್ಯವಲ್ಲ. ಕಾವ್ಯ ಸುಲಭಕ್ಕೆ ದಕ್ಕಬೇಕೆಂಬ ನಿಲುವೂ ನನ್ನದಲ್ಲ. ಶರ್ಮರು ಏನು ಬರೆದಿದ್ದರೂ ಗಂಭೀರವಾಗಿ ಅದನ್ನು ಹಚ್ಚಿಕೊಂಡು ಓದಿ ಅವರೊಂದಿಗೆ ಮುಕ್ತವಾಗಿ ಚರ್ಚಿಸುವುದು ಸಾಧ್ಯವಿತ್ತು. ಅವರೊಂದಿಗೆ ನಡೆಯುವ ವಾಗ್ವಾದದ ಫಲವಾಗಿ ಸ್ನೇಹ ಕಳೆದುಕೊಳ್ಳುವ ಭಯವಿರಲಿಲ್ಲ.
ಒಮ್ಮೆ ಅಶ್ವತ್ಥರು ಭಾವಗೀತೆಗಳ ಧ್ವನಿಸುರುಳಿಯೊಂದನ್ನು ಕನ್ನಡದ ಮುಖ್ಯ ಕವಿಗಳಿಂದ ಬರೆಸಿ ಹೊರತರುವ ಯೋಜನೆ ಹಾಕಿಕೊಂಡರು. ಕನ್ನಡವೇ ಸತ್ಯ ಎಂಬ ಹೆಸರಲ್ಲಿ ರಾಜಕುಮಾರರು ಹಾಡಿದ ಭಾವಗೀತೆಯ ಸಂಗ್ರಹ ಆಗಾಗಲೇ ಅಶ್ವತ್ಥರ ಸಂಗೀತದಲ್ಲಿ ಹೊರಬಂದಿತ್ತು. ಕುವೆಂಪು, ಪುತಿನ, ಮಾಸ್ತಿ ಮೊದಲಾದ ನವೋದಯದ ಕವಿಗಳ ಗೀತೆಗಳು ಅವು. ಈಗ ಸಮಕಾಲೀನರಿಂದ ಗೀತೆಗಳನ್ನು ಬರೆಸಿ ರಾಜಕುಮಾರರ ಎರಡನೆಯ ಭಾವಗೀತೆಯ ಸುರುಳಿ ಹೊರತರುವ ಆಸೆ ಅಶ್ವತ್ಥರಿಗೆ. ಈ ಧ್ವನಿಸುರುಳಿಗೆ ಶರ್ಮರಿಂದ ಗೀತೆ ಬರೆಸಿದರೆ ಚೆನ್ನಾಗಿರುತ್ತದೆ ಎಂದು ಯಾವ ಪುಣ್ಯಾತ್ಮ ಅವರ ಕಿವಿಯಲ್ಲಿ ಊದಿದನೋ ತಿಳಿಯದು. ಅಶ್ವತ್ಥ “ಏನಾದರೂ ಮಾಡಿ ಶರ್ಮರಿಂದ ಒಂದು ಗೀತೆಯನ್ನು ಬರೆಸಿಕೊಡಿ’ ಎಂದು ನನಗೆ ದುಂಬಾಲು ಬಿದ್ದರು. ಮರುದಿನ ಮುಂಜಾನೆ ನಾನು ಶರ್ಮರಿಗೆ ಫೋನು ಹಚ್ಚಿ “ಶರ್ಮಾಜಿ… ದಯವಿಟ್ಟು ಒಂದು ಭಾವಗೀತೆ ಬರೆದುಕೊಡಿ… ಇದು ಅಶ್ವತ್ಥರ ಅಪೇಕ್ಷೆ’ ಎಂದೆ. “ಸಂಜೆಯವರೆಗೆ ಸಮಯ ಕೊಡಿ’ ಎಂದರು ಶರ್ಮ. ಅವರ ಮೃದುವಾದ ಧ್ವನಿ ಕೇಳಿ ಅವರು ಬರೆದುಕೊಟ್ಟರೂ ಕೊಟ್ಟಾರು ಅನ್ನಿಸಿತು ನನಗೆ. ಸಂಜೆ ಶರ್ಮರಿಂದ ಫೋನ್, “ಎಚ್ಚೆಸ್ವಿ… ಈ ವಿಷಯದಲ್ಲಿ ನನ್ನ ಬಲವಂತಮಾಡಬೇಡಿ. ನನ್ನ ಕಾವ್ಯಧರ್ಮಕ್ಕೆ ನಾನು ಭಂಗ ತರಲಾರೆ!’ ಇದು ಶರ್ಮರ ಸ್ವಭಾವ. ಗಟ್ಟಿ ನಿಲುವು. ನನಗೆ ಅವರು ಹಾಗೆ ಹೇಳಿದ್ದು ಸಂತೋಷವೇ ಆಯಿತು. ನಮ್ಮ ನಂಬಿಕೆಯ ವಿರುದ್ಧವಾಗಿ ನಾವು ಏನನ್ನೂ ಮಾಡಬಾರದಲ್ಲವೇ? ಅದರಲ್ಲೂ ನಮ್ಮ ಕಾವ್ಯನಿಷ್ಠೆ ಯಾವತ್ತೂ ಸಡಿಲವಾಗಬಾರದಲ್ಲ! ನಾನು ಕನ್ನಡ ಕಾವ್ಯ ಪರಂಪರೆಯಿಂದ ಪ್ರಭಾವಿತನಾದವನು. ಹಾಡುಗಬ್ಬ , ಓದುಗಬ್ಬ ಕೇಳಿ ಓದಿ ಬೆಳೆದವನು. ನನಗೆ ಭಾವಗೀತೆಯ ರಚನೆ ಅಪರಾಧವೆನಿಸಲಿಲ್ಲ. ಶರ್ಮರ ಸ್ಫೂರ್ತಿಕೇಂದ್ರಗಳೂ, ಕಾವ್ಯ ತಾತ್ವಿಕತೆಯೂ ಭಿನ್ನವಾದದ್ದು. ಅವರು ತಮ್ಮ ಪಟ್ಟುಬಿಡದೆ ನಡೆಯುವುದರಲ್ಲಿ ಅವರ ಗೆಲುವು ಮಾತ್ರವಲ್ಲ, ಕಾವ್ಯಾರಾಧಕರಾದ ನಮ್ಮೆಲ್ಲರ ಗೆಲುವೂ ಇತ್ತು.
ಬಂಡಾಯದ ಆವೇಶದಲ್ಲಿ ತಮ್ಮ ಕಾವ್ಯರಚನೆ ಶುರುಮಾಡಿದ ಶರ್ಮಾಜಿ, ಎರಡನೆಯ ಘಟ್ಟದಲ್ಲಿ ಸಮಷ್ಠಿಯ ನೆಲೆಯಿಂದ ವ್ಯಷ್ಠಿಯ ನೆಲೆಗೆ ಹೊರಳಿದರು. ಗಹನವಾದ ಕೆಲವು ನವ್ಯ ಕವಿತೆಗಳನ್ನು ಬರೆದರು. ಕಾಮದ ಮೂಲಕ ಅನುಭವದ ಶೋಧಮಾಡಿದರು. ತಮ್ಮ ದೇಶಾಂತರದ ಅನುಭವಗಳನ್ನು ಕನ್ನಡಕ್ಕೆ ದಕ್ಕಿಸಲು ತಮ್ಮ ಕಾವ್ಯಜೀವನದ ಉದ್ದಕ್ಕೂ ಪಟ್ಟುಬಿಡದೆ ಹೋರಾಡಿದರು. ಒಂದೊಂದು ಕವಿತೆಯೂ ಭರವಸೆಯ ವ್ಯವಸಾಯ; ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ- ಎಂದು ನಂಬಿ ಬರೆದರು. ಕವಿತೆಯ ರಚನೆಯನ್ನು ಸಮುದ್ರದಾಳಕ್ಕೆ ಮುಳುಗಿ ಮುತ್ತು ತರುವ ಮುಳುಗುಗಾರ ಕುಂಗನ ನಿಷ್ಠೆಗೆ ಹೋಲಿಸಿಕೊಂಡು ಅರ್ಥಪೂರ್ಣ ಕಾವ್ಯ ಕಟ್ಟಿದರು. ಅವರ ಏಳು ಸುತ್ತಿನ ಕೋಟೆಯ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಹೇಸರಗತ್ತೆ ಅಸಹಜ ಬೆರಕೆಯಿಂದ ನಿರ್ವೀರ್ಯಗೊಳ್ಳುವ ಜೀವದ ವಿಫಲತೆಯನ್ನು ಆವತ್ತಿನ ಸಾಮಾಜಿಕ ವಿಷಮತೆಯ ಹಿನ್ನೆಲೆಯಲ್ಲಿ ಧ್ವನಿಪೂರ್ಣವಾಗಿ ಕಟ್ಟಿಕೊಟ್ಟರು. ಯಾವತ್ತೂ ಅವರ ಕಾವ್ಯ ಲಯ ತಪ್ಪಲಿಲ್ಲ. ಪ್ರತಿಮಾ ಮಾರ್ಗವನ್ನು ಬಿಟ್ಟುಕೊಡಲಿಲ್ಲ. ಅವರ ವಾಚನದ ಏರುಧ್ವನಿ, ಅತಿ ನಾಟಕೀಯತೆ ಕೆಲವೊಮ್ಮೆ ಅವರ ಕಾವ್ಯದ ಸೂಕ್ಷ್ಮತೆಗೆ ತದ್ವಿರುದ್ಧವಾಗಿ ನಿಲ್ಲುತ್ತ ಇತ್ತು. ಆದರೆ, ಕಾವ್ಯದಲ್ಲಿ ಮಾತಿನ ರೆಟರಿಕ್ಕನ್ನು ಅವರು ಯಾವತ್ತೂ ಬಳಸಲಿಲ್ಲ. ಕೆಲವೇ ಮಾತುಗಳಲ್ಲಿ ಹೃದಯ ಝಲ್ಲೆನ್ನುವಂತೆ ಹೃದ್ಯವಾದ ಅನುಭವವನ್ನು ಕಟ್ಟಿಕೊಡುವ ಅವರ ಕ್ರಮ ಅತ್ಯಂತ ವಿಧಾಯಕವಾದದ್ದು. ತಕ್ಷಣ ನನಗೆ ಅವರ ಯುದ್ಧದ ಶೀತಲ ಅನುಭವವನ್ನು ಚಿತ್ರಿಸುವ ಕಿರುಗವನವೊಂದು ನೆನಪಾಗುತ್ತದೆ.
ಹಠಾತ್ತನೆ ಬಿಸಿಲು
ತಗುಲಿ ಥಳ ಥಳ ಹೊಳೆದ
ಪಿಸ್ತೂಲು ಕಂಡು
ಯೋಧ ಕೂಗಿದ
ನೆಲಕ್ಕೆಸೆದು ಕೈಯೆತ್ತಿ ನಿಲ್ಲು
ಮಾತು ಕೇಳದೆ ನಡೆದ
ಹುಟ್ಟು ಕಿವುಡ ಹುಡುಗನೆದೆ ಹೊಕ್ಕ ಗುಂಡು
ಬೆನ್ನಿಂದ ಹೊರಬಂತು
ಮುಗ್ಗುರಿಸಿ ಓಡೋಡಿ ಬಂದ ಮುದಿಉಕಿ ಕೆಂಪು ತಿರುಗುತ್ತಿದ್ದ ಹುಲ್ಲೊಳಗೆ ಹುಡುಕಿ ಹಬ್ಬಕ್ಕೆ ಕೊಂಡು ತಂದಿದ್ದ ನಿಗಿನಿಗಿ ಗೊಂಬೆ
ಹಿಡಿದೆದ್ದು ನಿಂತು ತಲೆಯೆತ್ತಿದಾಗ ಸೂಜಿ ಬಿಸಿಲು ಚುಚ್ಚಿ ಕಣ್ಣಲ್ಲಿ ನೀರೊಡೆಯಿತು ಅವಳ ಮುಖದ ಹತ್ತು ಕಾಲುವೆ ತುಂಬ ಕೋಡಿ ಹರಿಯಿತು. ಈ ಕವಿತೆಯಲ್ಲಿ ಕಾಣುವ ಮಾತಿನ ಸಂಯಮ, ಚಿತ್ರದ ಜೀವಂತಿಕೆ, ಯುದ್ಧದ ಕ್ರೌರ್ಯ, ಆವರಿಸುವ ದುರಂತವ್ಯಂಗ್ಯ ಅಸಾಮಾನ್ಯವಾದುದು. ಶರ್ಮರ ಈ ಅದ್ಭುತ ಕವಿತೆಯನ್ನು ನಾನು ಯಾವತ್ತೂ ಮರೆಯಲಾರೆ. ಶರ್ಮರ ಕೊನೆಯ ಕಾವ್ಯ ಸಂಗ್ರಹ ಸಪ್ತಪದಿ ಗಂಡು-ಹೆಣ್ಣಿನ, ಅದರಲ್ಲೂ ಪತಿ-ಪತ್ನಿಯ ಸಂಬಂಧದ ಸಂಕೀರ್ಣತೆಯನ್ನು ಚಿತ್ರವತ್ತಾಗಿಯೂ ಹೃದ್ಯವಾಗಿಯೂ ಚಿತ್ರಿಸುವ ಬಹಳ ಸೊಗಸಾದ ಸಾನೆಟ್ಟುಗಳ ಸಂಗ್ರಹ (ಶರ್ಮ ಮತ್ತು ಸೂಕ್ಷ್ಮ ಸಾಹಿತ್ಯ ಸಂವೇದನೆಯ ಪದ್ಮಾ ರಾಮಚಂದ್ರಶರ್ಮರ ಸುದೀರ್ಘ ದಾಂಪತ್ಯ ಜೀವನದ ಪಕ್ವ ಫಲ ಈ ಕಾವ್ಯ ಎನ್ನಬಹುದು).
ಶರ್ಮರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರಕಿಸಿದ ಕವಿತಾಸಂಗ್ರಹವಿದು.ನಲವತ್ತು ವರ್ಷಗಳ ಸುದೀರ್ಘ ಪ್ರಯಾಣ ಕೊನೆಯಾಗಿ ಇಲ್ಲಿ ಈಗ ಬೆಳ್ಳಿà ಮರಳಲ್ಲಿ ನಿಂತ ನಾವಿಕ ನಾನು. ಮಂಜಾದ ಮುದಿಗಣ್ಣ ಕೆಣಕುವ ಹಾಗೆ ಎಗ್ಗಿಲ್ಲದಂತೆ ಮೈಚೆಲ್ಲಿ ಮಲಗಿದ ಕಡಲು ನೀನು. ಇಂಥ ಸಾಲುಗಳನ್ನು ಸಪ್ತಪದಿಯಲ್ಲಿ ಓದಿದಾಗ ಶರ್ಮರ ಕಾವ್ಯದ ಅಸಲಿ ಕಸುಬಿನ ಬಗ್ಗೆ ಯಾರಿಗೆ ತಾನೆ ಗೌರವ ಮೂಡುವುದಿಲ್ಲ?
.
ಶರ್ಮರನ್ನು ನೆನೆದಾಗ ಕೆಲವು ಬಿಡಿಚಿತ್ರಗಳು ಥಟ್ಟನೆ ನನ್ನ ಕಣ್ಮುಂದೆ ಪ್ರಜ್ವಲಿಸುತ್ತವೆ:
ಚಿತ್ರ 1: ಚಿಂತಾಮಣಿಯ ಕಾರ್ಯಕ್ರಮವೊಂದಕ್ಕೆ ನಾವೆಲ್ಲ ಹೋಗಿದ್ದಾಗ ಕಾರ್ಯಕ್ರಮ ಶುರುವಾಗುವ ಮುನ್ನ ಬಳಗದ ಸಂಪ್ರದಾಯದಂತೆ ದೇವಾಲಯಕ್ಕೆ ಸಂಜೆಯ ಆರತಿಗೆ ಹೋದಾಗ, ಶರ್ಮ, “ನಾನು ಗುಡಿಯ ಒಳಗೆ ಬರಲಾರೆ’ ಎಂದು ದೇವಾಲಯದ ಹೊರಗೆ ಜಗಲಿಯ ಮೇಲೆ ಕೂತ ಚಿತ್ರ.
ಚಿತ್ರ 2: ಪಾರ್ಟಿಯೊಂದು ಮುಗಿದಾಗ ಸರಿರಾತ್ರಿಯಲ್ಲಿ ಪರ್ಸಿಗಾಗಿ ಜೇಬು ತಡಕಿ “ಮೈಗಾಡ್ ನನ್ನ ಪರ್ಸ್ ಮರೆತು ಬಂದಿದ್ದೇನಲ್ಲ’ ಎಂದು ಕೈ ಕೊಡವಿ ಪೇಚಾಡುತ್ತ ನಿಂತ ಕಸಿವಿಸಿಯ ಚಿತ್ರ.
ಚಿತ್ರ 3: ಧರ್ಮಸ್ಥಳದಲ್ಲಿ ನಾವು ಉಳಿದಿದ್ದ ಮೂರಂತಸ್ತಿನ ಮಹಡಿಯಿಂದ ಅವರ ಕೈಜಾರಿ ಕನ್ನಡಕ ಕಿಟಕಿಯಾಚೆ ಬಿದ್ದಾಗ, ನಾವೆಲ್ಲಾ ಕೆಳಕ್ಕೆ ಹೋಗಿ ಶರ್ಮರ ಕನ್ನಡಕವನ್ನು ಅವರೊಂದಿಗೆ ಸೇರಿ ಟಾರ್ಚಿನ ಬೆಳಕಲ್ಲಿ ಹುಡುಕುವ ಚಿತ್ರ!
ಚಿತ್ರ 4: ಶರ್ಮರನ್ನು ಕಾಣಲು ನಾವು ಕೆಲವರು ಅವರ ಮನೆಗೆ ಹೋದಾಗ ಅವರು ಲಾನ್-ಟೆನ್ನಿಸ್‌ನ ವೀಕ್ಷಣೆಯಲ್ಲಿ ಮಗ್ನರಾಗಿ ಮೈಮರೆತಿದ್ದವರು, ಕಾವ್ಯಕ್ಕೆ ಬದಲು ಟೆನ್ನಿಸ್‌ನ ಬಗ್ಗೆ ನಮಗೆ ಅರ್ಧ ತಾಸು ಕಾಮೆಂಟರಿ ಕೊಟ್ಟ ಚಿತ್ರ!
ಹೋಳು ಮುಖ, ಚೂಪುಗಣ್ಣು, ಬಾಯಿಂದ ಉಗುಳುವ ಸಿಗರೇಟಿನ ಹೊಗೆ, ಮೆಟ್ಟಿಲು ಮೆಟ್ಟಿಲು ಕ್ರಾಪು, ಆಗಾಗ ಎದೆಯನ್ನೊತ್ತಿಕೊಂಡು ಉಸಿರಾಟದ ಸಿಕ್ಕು ಬಿಡಿಸಿಕೊಂಡು ಸಲೀಸು ಮಾಡಿಕೊಳ್ಳುವಾಗ ಅವರ ಕಣ್ಣಲ್ಲಿ ಹೊರಳುವ ನೀರಪಸೆ, ಹರಟೆ ಮುಗಿಸಿ ಮನೆಗೆ ಹೊರಡುವಾಗ ಗಟ್ಟಿಯಾಗಿ ಕೈಹಿಡಿದು ಬೀಳ್ಕೊಡುವ ಸ್ನೇಹದ ಬಿಸಿ ಮರೆಯಲಿಕ್ಕಾಗದ್ದು. ಕನ್ನಡದ ಈ ಗಟ್ಟಿಕವಿ ರಾಮಚಂದ್ರಶರ್ಮ ನನ್ನನ್ನು ಸದಾ ಕಾಡುವ ಕಾವ್ಯಪ್ರತಿಮೆ.
– ಎಚ್. ಎಸ್. ವೆಂಕಟೇಶಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.