ರಜೆಯ ಭಜನೆ ನಿರಂತರ
Team Udayavani, Mar 23, 2019, 12:44 PM IST
ಒಂದು ಕಾಲ್ಪನಿಕ ಕಥನ ನೆನಪಾಗುತ್ತದೆ. ಓರ್ವ ವಿಜ್ಞಾನಿ ತನ್ನ ಸುತ್ತ ಜನರನ್ನೆಲ್ಲ ಒಟ್ಟುಗೂಡಿಸಿ ಪ್ರಪಂಚದ ಉಷ್ಣಾಂಶ ಏರಿಕೆಯ ಪರಿಣಾಮದ ಕುರಿತು “”ಇದೇ ರೀತಿ ಪರಿಸರ ವಿನಾಶ ಮುಂದುವರಿದರೆ ಇನ್ನು ಹತ್ತು ವರುಷಗಳಲ್ಲಿ ಒಂದು ದಿನ ಈ ಭೂಮಿಯೇ ತಾಪಮಾನದ ಏರಿಕೆಯಿಂದ ಉರಿದು ಹೋಗುತ್ತದೆ” ಎಂದು ವಿವರಿಸುತ್ತಿದ್ದನಂತೆ. ಅದನ್ನು ಕೇಳಿದ ಸಭಾಸದರಲೋರ್ವ ಎದ್ದು ನಿಂತು, “”ಸ್ವಾಮಿ, ಹಾಗಾದರೆ ಆ ದಿನ ಸರಕಾರಿ ರಜೆ ಕೊಡಬಹುದಲ್ಲವೆ?” ಎಂದು ಪ್ರಶ್ನೆ ಕೇಳಿದನಂತೆ!
ಇದು ರಜೆಯ ಕುರಿತಾಗಿ ಭಾರತೀಯ ಮನೋಭಾವದ ಜೋಕು. ಭಾರತವನ್ನು “ಸಾರ್ವಜನಿಕ ರಜೆ ಸಾರ್ವತ್ರಿಕವಾಗಿರುವ ಭೂಪ್ರದೇಶ’ (A land of public holidays) ಎಂದು ಬಣ್ಣಿಸಲಾಗುತ್ತಿದೆ. ಇಲ್ಲಿ ಹುಟ್ಟಿದ್ದಕ್ಕೆ , ಸತ್ತಿದ್ದಕ್ಕೆ , ಹಬ್ಬ-ಹರಿದಿನಗಳಿಗೆ ಯಾವುದೂ ಅಲ್ಲದಿದ್ದರೆ ಆಯಾ ಊರಿನ, ಆಯಾ ಸಮುದಾಯದ ಯಾವುದಾದರೂ ಹಬ್ಬದ ಆಚರಣೆಗೆ ನಿಗದಿತ ರಜೆಗಳೂ ಇವೆ. ಪ್ರತೀವರ್ಷ ಸಾಮಾನ್ಯವಾಗಿ ಎಪ್ರಿಲ್ ತಿಂಗಳು ಅಥವಾ ಅಕ್ಟೋಬರ್ ಬಂತೆಂದರೆ ಸಾಕು, ಸಾಲು ಸಾಲು ರಜೆಗಳು, ಅದರೊಟ್ಟಿಗೆ ಹೊಂದಿಕೊಂಡು ಬರುವ ಎರಡನೆಯ ಶನಿವಾರ ಮತ್ತು ಬ್ಯಾಂಕುಗಳಿಗೆ ಎರಡು ಮತ್ತು ನಾಲ್ಕನೆಯ ಶನಿವಾರ ಹೀಗೆ ಸರಕಾರೀ ಕಚೇರಿ, ಬ್ಯಾಂಕುಗಳೆಲ್ಲ ಬಂದಾಗುವದನ್ನು ನೋಡುತ್ತಲೇ ಇರುತ್ತೇವೆ. ಪತ್ರಿಕೆಗಳಲ್ಲಿ ಈ ಕುರಿತು ಬರೆದು ಅದರ ಕುರಿತು ಚರ್ಚೆ-ಒಣಹರಟೆಗಳೆಲ್ಲ ಆಗಿ ಮತ್ತೆ ಮುಂದಿನ ರಜೆಗಾಗಿ ಕಾಯುವ ರೀತಿ ಸಾಮಾನ್ಯ. ಭಾರತದಲ್ಲಿ ಮಾತ್ರ ಹೀಗೆ ರಜೆ ನೀಡುತ್ತಾರೆ ಎಂದುಕೊಳ್ಳಬೇಡಿ, 1917 ಎಪ್ರಿಲ್ ತಿಂಗಳಲ್ಲಿ ದಕ್ಷಿಣ ಆಪ್ರಿಕಾದಲ್ಲಿ ಸಾಲು ಸಾಲಾಗಿ ನಾಲ್ಕು ಸಾರ್ವತ್ರಿಕ ರಜೆ ಬಂದು ಇಡೀ ದೇಶವೇ ಮೋಜು-ಮಸ್ತಿಯಲ್ಲಿ ಮುಳುಗಿರುವುದನ್ನು ನೋಡಿ ಅಲ್ಲಿಗೆ ವ್ಯವಹಾರಕ್ಕೆಂದು ಹೋದ ಭಾರತೀಯ ಉದ್ದಿಮೆದಾರರೊಬ್ಬರು ಮೂಗಿನ ಮೇಲೆ ಬೆರಳಿಟ್ಟುಕೊಂಡರಂತೆ. ಆ ಮಟ್ಟಿಗೆ ನಮ್ಮ ದೇಶವೇ ಆದೀತು ಎಂದು ಅವರಿಗೆ ಅನಿಸಿರಬೇಕು.
ರಜೆ ಶುರುವಾದದ್ದು ಯಾವಾಗ?
ಜಗತ್ತಿನ ಇತಿಹಾಸದಲ್ಲಿ ರಜೆ ಎಂಬ ಕಲ್ಪನೆ ಯಾವಾಗಿನಿಂದ ಬಂತು ಎಂಬುದನ್ನು ಅನೇಕರು ಅನೇಕ ರೀತಿ ವಿವರಿಸುತ್ತಾರೆ. ಆದರೆ, ಭಾರತೀಯರ ಇತಿಹಾಸದಲ್ಲಿ ಗುರುಕುಲದಲ್ಲಿ ವಿದ್ಯೆ ಕಲಿಸುವಾಗ ಪ್ರತೀಪಕ್ಷದ ಪ್ರದೋಷ ಸಾಮಾನ್ಯವಾಗಿ ಚತುರ್ದಶಿಯಿಂದ ಪ್ರತಿಪದೆಯವರೆಗೆ ಅನಧ್ಯಯನವಿರುತ್ತಿತ್ತು. ಇದು ಈಗಲೂ ಇದೆ. ಇನ್ನು ಜನಸಾಮಾನ್ಯರಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಆಡಿಕೆಯ (ಬಿಡುವಿನ) ದಿನಗಳು. ಪಾಶ್ಚಾತ್ಯರಲ್ಲಿ ಆದಿತ್ಯವಾರ ರಜೆ ಎಂಬುದು ರೂಢಿಗೆ ಬಂದಿದ್ದು ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ “ದೇವರು ಈ ಜಗತ್ತನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಮತ್ತು ಏಳನೆಯ ದಿನ ಆತ (Sabbath) ವಿಶ್ರಾಂತಿ ತೆಗೆದುಕೊಂಡ’ ಎನ್ನುವಲ್ಲಿ ಗಮನಿಸಬಹುದು. ನಂತರ ರೋಮ್ ಸಾಮ್ರಾಜ್ಯದ ದೊರೆ ಕಾನಸ್ಟಂಟಿನೈನ್ (ಕ್ರಿ. ಪೂ. 300) ಕ್ರಿಸ್ತನ ಅನುಯಾಯಿಯಾದ ಮೇಲೆ ತನ್ನ ಸಾಮ್ರಾಜ್ಯದ ಎಲ್ಲದರ ಮೇಲೂ ಕ್ರಿಶ್ಚಿಯಾನಿಟಿಯನ್ನು ಹೇರಲು ಆರಂಭಿಸಿದ. ಈ ಮೊದಲು ಆತ ಸೂರ್ಯನ ಉಪಾಸಕನಾಗಿದ್ದವನು ಜನ ರಿಗೆ ರವಿವಾರವನ್ನು ವಾರದ ಮೊದಲನೆಯ ದಿನವನ್ನಾಗಿ ಆಚರಿಸುವಂತೆ ಒತ್ತಾಯಿಸಿ ಅದನ್ನು ವಿರಾಮದ ದಿನವೆಂದು ಘೋಷಿಸಿದ. ಆ ದಿನವನ್ನು ದೇವರ ಪ್ರಾರ್ಥನೆಯ ದಿನವನ್ನಾಗಿ ಆಚರಿಸುವಂತೆ ಕಠೊರ ನಿಯಮಗಳನ್ನು ಜಾರಿಗೆ ತಂದ. ಈ
ಕುರಿತು ಇನ್ನೂ ಅನೇಕ ವಿವರಣೆಗಳೂ ಇವೆ. 1843ರ ಔದ್ಯಮಿಕ ಕ್ರಾಂತಿಯ ಹೊತ್ತಿಗೆ ಬ್ರಿಟನ್ ಸರಕಾರ ಅಧಿಕೃತವಾಗಿ ಆದಿತ್ಯವಾರವನ್ನು ವಿರಾಮದ ದಿನವಾಗಿ ಘೋಷಿಸಿತು. ನಂತರ ಇದು ಯುರೋಪ್ ಮತ್ತು ಜಗತ್ತಿನಾದ್ಯಂತ ರಜೆಯ ದಿನವಾಗಿ ಬಳಕೆಗೆ ಬಂತು. ಭಾರತದಲ್ಲಿ ರಜಾಪರ್ವ ಭಾರತದಲ್ಲಿ ಅಷ್ಟು ಸುಲಭವಾಗಿ ರಜೆ ಘೋಷಣೆಯಾಗಲಿಲ್ಲ. ಇಲ್ಲಿನ ಗಿರಣಿಯ ಕಾರ್ಮಿಕರು ವಾರದ ಏಳೂ ದಿನಗಳೂ ಕಠಿಣ ದುಡಿಮೆ ಮಾಡಬೇಕಾಗಿತ್ತು. ಅವರಿಗೆ ರಜೆಗಿಜೆಯ ಯಾವ ಸೌಲಭ್ಯಗಳೂ ಇರಲಿಲ್ಲ. ಅದೇ ಅಲ್ಲಿನ ಬ್ರಿಟಿಷ್ ಅಧಿಕಾರಿಗಳಿಗೆ ಮತ್ತು ಕೆಲಸಗಾರರಿಗೆ ಭಾನುವಾರದ ಪ್ರಾರ್ಥನೆಯ ಸಲುವಾಗಿ ರಜೆ ಇತ್ತು. ಅಂತಹ ಯಾವ ನಿಬಂಧನೆಗಳೂ ಭಾರತೀಯರಿಗೆ ಇಲ್ಲದ ಕಾರಣದಿಂದ ಇವರುಗಳಿಗೆ ಯಾವ ರಜೆ ಮತ್ತು ವಿರಾಮದ ದಿನಗಳೂ ಇರಲಿಲ್ಲ. ಈ ಹೊತ್ತಿನಲ್ಲಿ ನಾರಾಯಣ ಮೇಘಜಿ ಲೋಖಂಡೆ ಎನ್ನುವವರು ಆ ಮಿಲ್ಲಿನ ಕಾರ್ಮಿಕರ ನೇತಾರರಾಗಿದ್ದರು. ಅವರು ಬ್ರಿಟಿಷರೊಡನೆ ಈ ಕುರಿತು ಸಾಕಷ್ಟು ಹೋರಾಟ ನಡೆಸಿದರು. ಅವರು ಇದಕ್ಕೆ ಕೊಟ್ಟ ಕಾರಣ “ಆದಿತ್ಯವಾರ ಕಾರ್ಮಿಕರ ದೇವರಾದ ಖಂಡೋಬಾನ ಸ್ಮರಣೆ ಮಾಡುವ ದಿನ. ಆ ಕಾರಣದಿಂದ ಆದಿತ್ಯವಾರ ಕಾರ್ಮಿಕರಿಗೆ ರಜೆ ನೀಡಬೇಕು’ ಎನ್ನುವುದಾಗಿತ್ತು. ಅವರ ಕೋರಿಕೆಯನ್ನು ಬ್ರಿಟಿಷರು ಪುರಸ್ಕರಿಸಲಿಲ್ಲ. ಲೋಖಂಡೆಯವರು ತಮ್ಮ ಹೋರಾಟವನ್ನು ಸುಮಾರು ಏಳು ವರ್ಷಗಳ ಕಾಲ ಎಡೆಬಿಡದೇ ಮುಂದುವರಿಸಿದರು. ಕೊನೆಗೆ 1880 ಜೂನ್ ತಿಂಗಳ 10 ರಂದು ಬ್ರಿಟಿಷ್ ಸರಕಾರ ರವಿವಾರವನ್ನು ರಜಾ ದಿನವನ್ನಾಗಿ ಘೋಷಿಸಿತು. ಇಲ್ಲೊಂದು ಆಸಕ್ತಿಯ ವಿಷಯವೆಂದರೆ ಈ ಕುರಿತು ಭಾರತ ಸರಕಾರ ಇದುವರೆಗೂ ರವಿವಾರವನ್ನು ಅಧಿಕೃತವಾಗಿ ರಜೆಯೆಂದು ಘೋಷಿಸಿಲ್ಲ. ಒಂದು ನಡಾವಳಿಯಾಗಿ ಈ ದಿನದ ರಜೆ ಮುಂದುವರಿದಿದೆ. ನಂತರ ಸಾರ್ವಜನಿಕ ರಜೆಗಳೆಲ್ಲ ಒಂದೊಂದಾಗಿ ಸೇರಿರುವದು ಮುಂದಿನ ಇತಿಹಾಸ.
ಜಗತ್ತಿನಾದ್ಯಂತ ರಜಾದಿನಗಳನ್ನು ಬೇರೆ ಬೇರೆ ವಿಧವಾಗಿ ಪಡೆಯುತ್ತಾರೆ. ಜಪಾನಿನಲ್ಲಿ ಓರ್ವ ವ್ಯಕ್ತಿ ದಿನಕ್ಕೆ ಸುಮಾರು 13 ತಾಸುಗಳ ಕಾಲ ಅಂದರೆ ಮುಂಜಾನೆ 7 ಗಂಟೆಯಿಂದ ಸಾಯಂಕಾಲ ಸುಮಾರು 8 ಗಂಟೆಗಳ ಕಾಲ ದುಡಿದರೆ, ಚೀನಾ ಹಾಗೂ ಇನ್ನಿತರ ಹೆಚ್ಚಿನ ರಾಷ್ಟ್ರಗಳಲ್ಲಿ 8 ತಾಸು ಕೆಲಸ ಮಾಡುವ ನಿಯಮಗಳಿವೆ. ಆದರೆ, ಇಲ್ಲೆಲ್ಲ ವಾರಕ್ಕೆ ಐದು ದಿನಗಳ ಕೆಲಸ ಮತ್ತು ಎರಡು ದಿನಗಳ ವಿರಾಮವಿದೆ. ಪಾಶ್ಚಾತ್ಯರಲ್ಲಿಯೂ ಐದು ದಿನಗಳ ಕೆಲಸದ ರೂಢಿಯಿದೆ. ಆದರೆ, ಇಲ್ಲೆಲ್ಲ ವೀಕೆಂಡ್ ಬಂತೆಂದರೆ ಸಾಕು, ಎಲ್ಲವನ್ನೂ ಬದಿಗಿಟ್ಟು ಪ್ರವಾಸಕ್ಕೆ ಹೊರಡುತ್ತಾರೆ.
ವಿಶ್ವದಲ್ಲಿ ಭಾರತೀಯರು ಮಾತ್ರ ಹೆಚ್ಚಿನ ರಜೆಯ ಮಜಾ ಅನುಭವಿಸುತ್ತಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ. ವಿವಿಧ ದೇಶಗಳಲ್ಲಿ ವಾರ್ಷಿಕವಾಗಿ ಎಷ್ಟು ರಜೆ ಇದೆ ಎಂಬುದನ್ನು ಗಮನಿಸೋಣ : ಕಾಂಬೋಡಿಯಾ-28, ಶ್ರೀಲಂಕಾ-25, ಭಾರತ ಮತ್ತು ಕಝಕಿಸ್ಥಾನ-21, ಕೊಲಂಬಿಯಾ ಮತ್ತು ಫಿಲಿಪೈನ್ಸ್ 18, ಥೈಲ್ಯಾಂಡ್ ಮತ್ತು ಪಾಕಿಸ್ತಾನ-16, ಸಿಂಗಾಪುರ-11 ಭಾರತೀಯರ ಮಾಮೂಲಿನ ರಜೆ ವಿಶ್ವ ಮಟ್ಟಕ್ಕೆ ಹೋಲಿಸಿದರೆ ನ್ಯಾಯಯುತವಾಗಿ ಇದೆ ಎನ್ನಬಹುದು. ಇದಲ್ಲದೆ, ಅಮೆರಿಕ ಮತ್ತು ಯುರೋಪ್‌ಗ್ಳಲ್ಲಿ ಡಿಸೆಂಬರ್ ಬಂತು ಎಂದರೆ ಸಾಕು, ಸಾಮಾನ್ಯ ಎರಡನೆಯ ವಾರದಿಂದ ಜನವರಿ ಎರಡನೆಯ ವಾರದವರೆಗೆ ಆತ ಕೆಲಸದ ಕಡೆ ಮುಖವನ್ನೇ ಹಾಕುವುದಿಲ್ಲ. ಭಾರತದಲ್ಲಿಯೂ ಬಹುರಾಷ್ಟ್ರೀಯ ಕಂಪೆನಿಗಳು ಕ್ರಿಸ್‌ಮಸ್ ರಜೆಯೆಂದು ಡಿಸೆಂಬರ್ ಕೊನೆಯ ವಾರದಿಂದ ಜನವರಿ 2ರವರೆಗೆ ರಜೆಯನ್ನು ನೀಡುವ ರೂಢಿಯನ್ನು ಬಳಕೆಗೆ ತಂದಿವೆ. ಚೀನಾದಲ್ಲಿ ಏಷಿಯಾ ಖಂಡದ ಕೆಲಸಗಾರರಿಗೆ ಆರು ದಿನಗಳ ವಾರವಾದರೆ, ಪಾಶ್ಚಾತ್ಯ ಕೆಲಸಗಾರರಿಗೆ ಐದು ದಿನಗಳ ವಾರ.
ರಜೆ ಎಂಬ ಪರಿಹಾರ
ಈಚೆಗಿನ ಜಾಗತೀಕರಣದ ಕಾರಣದಿಂದ ಉಂಟಾಗುವ ಒತ್ತಡ, ಮಾನಸಿಕ ಅಸಮತೋಲನಗಳಿಗೆಲ್ಲ ರಜೆ ಎಂಬುದು ಒಂದು ಪರಿಹಾರ ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಸರಕಾರಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಕೆಲಸಗಾರರ ಇನ್ನಿತರ ರಜೆಗಳಾದ ಸಿ.ಎಲ್. ಮತ್ತು ಗಳಿಕೆಯ ರಜೆಗಳು ವೈಯಕ್ತಿಕವಾಗಿರುವುದರಿಂದ ಅವು ಜನಸಾಮಾನ್ಯರಿಗೆ ಅಷ್ಟೇನೂ ತೊಂದರೆ ಉಂಟುಮಾಡುವುದಿಲ್ಲ. ಜಪಾನಿನಲ್ಲಿ ರಜೆ ತುಂಬಾ ಕಡಿಮೆ. ಅಲ್ಲಿ ವಾರದಲ್ಲಿ ಏಳೂ ದಿನಗಳಲ್ಲೂ ಕೆಲಸ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಿನ ಕೆಲಸಗಾರರಲ್ಲಿ ಮಾನಸಿಕ ಒತ್ತಡ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ ಯುರೋಪ್‌ಗ್ಳಲ್ಲಿ ವಾರದಲ್ಲಿ ನಾಲ್ಕುದಿನ ಕೆಲಸ ಮಾಡಿದರೆ ಸಾಕು, ಎನ್ನುವ ಕೂಗು ಎದ್ದಿದೆ. ಅಲ್ಲಿನವರು ರಜೆಯನ್ನು ಅನುಭವಿಸಲು ಒಂದು ಸುಲಭ ಉಪಾಯ ಕಂಡುಕೊಂಡಿದ್ದಾರೆ. ಸ್ವೀಡನ್ನಿನ ಓರ್ವ ಜರ್ಮನಿಗೆ ಬಂದು ವರ್ಷದಲ್ಲಿ 179 ದಿನ ಕೆಲಸಮಾಡಿ ಮತ್ತೆ ಆರು ತಿಂಗಳು ಸ್ವೀಡನ್ನಿಗೇ ವಾಪಾಸಾಗುತ್ತಾನೆ. ಅದಕ್ಕೆ ಕಾರಣವಿದೆ. ವರ್ಷದಲ್ಲಿ 180 ದಿನಗಳಲ್ಲಿ ಕೆಲಸ ಮಾಡಿದರೆ ಆದಾಯ ತೆರಿಗೆ ತುಂಬಬೇಕು ಎಂಬ ನಿಯಮ ಯುರೋಪಿನಲ್ಲಿದೆ. ರಜೆ ಹಾಕಿದ ತತ್‌ಕ್ಷಣ ತಾನು ತುಂಬಿದ ಆದಾಯ ತೆರಿಗೆ ಹಣವನ್ನು ವಾಪಾಸು ಪಡೆಯಲು ಅರ್ಜಿಹಾಕಿ ಅದನ್ನು ಪಡೆದುಕೊಂಡು ಉಳಿದ ಆರುತಿಂಗಳು ಮಜಾ ಉಡಾಯಿಸುತ್ತ ಇರುತ್ತಾನೆ. ಇದು ರಜಾದ ಅತಿಯಾದ ಮತ್ತೂಂದು ಮುಖ.
ಸತ್ತ ದಿನವೂ ರಜೆ ಹುಟ್ಟುಹಬ್ಬಕ್ಕೂ ರಜೆ !
ಭಾರತೀಯರು ರಜಾ ಪ್ರಿಯರಾದರೂ ಉಳಿತಾಯದ ಬುದ್ಧಿಯವರಾದದ್ದರಿಂದ ಗಳಿಕೆಯ ರಜೆಯನ್ನು ಖರ್ಚುಮಾಡದೇ ಆ ಮೇಲೆ ಅದನ್ನು ಹಣಕ್ಕಾಗಿ ವಿನಿಮಯ ಮಾಡುವಲ್ಲಿ ಸಿದ್ಧಹಸ್ತರು. ಪೊಲೀಸ್ ಇಲಾಖೆಯಲ್ಲಿ ರಜಾ ಇದ್ದರೂ ಅಂದು ಕೆಲಸಕ್ಕೆ ಬಂದರೆ 400 ರೂಪಾಯಿ ಭತ್ತೆ ಸಂಬಳದ ಹೊರತಾಗಿ ಸಿಗುತ್ತದೆ ಎನ್ನುವ ಕಾರಣದಿಂದ ಹೆಚ್ಚಿನವರು ರಜೆ ಹಾಕದೇ ಕೆಲಸ ಮಾಡುತ್ತ ಮಾನಸಿಕ ಒತ್ತಡದ ಕಾಯಿಲೆಗಳಿಗೆ ತುತ್ತಾಗುತ್ತಿ¨ªಾರೆ ಎನ್ನುವುದು ಅಧ್ಯಯನದ ಮೂಲಕ ತಿಳಿದು ಬಂತು. ಈ ಕಾರಣಕ್ಕಾಗಿ ಇದೀಗ ಬ್ಯಾಂಕ್, ಐಟಿ ಹಾಗೂ ಇನ್ನಿತರ ಕೆಲ ಇಲಾಖೆಗಳಲ್ಲಿ ವರುಷಕ್ಕೆ ಇಂತಿಷ್ಟು ದಿನಗಳ ಕಾಲ ಅತ್ಯವಶ್ಯವಾಗಿ ರಜೆಯ ಮೇಲೆ ತೆರಳಲೇಬೇಕೆನ್ನುವ ನಿಯಮ ಚಾಲ್ತಿಗೆ ಬಂದಿದೆ. ಆದರೆ, ಆಗಾಗ ಸಂಭವಿಸುವ ಮುಷ್ಕರ, ಗಣ್ಯವ್ಯಕ್ತಿಗಳ ಸಾವಿನ ಸೂತಕವಾಗಿ ಕೊಡುವ ರಜೆ ಮಾತ್ರ ಬೇರೆಲ್ಲೂ ಇಲ್ಲ. ವಿದೇಶಗಳಲ್ಲಿ ಹೆಚ್ಚಾಗಿ ಅಂತಹ ಸಂದರ್ಭಗಳಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಶೋಕಾಚರಣೆಯ ಸಂಕೇತವನ್ನು ವ್ಯಕ್ತಪಡಿಸುತ್ತಾರೆ. ಈ ವಿಷಯಗಳಲ್ಲಿ ಮಾತ್ರ ನಾವು ಮತ್ತೂಮ್ಮೆ ರಜೆ ಕೊಡುವ ಕುರಿತು ಆಲೋಚಿಸುವ ಮತ್ತು ಈ ದಿಸೆಯಲ್ಲಿ ಪುನಃವಿಚಾರ ಮಾಡುವ ಆವಶ್ಯಕತೆ ಖಂಡಿತ ಇದೆ.
ಇದೀಗ ನಾವು ಜಾಗತಿಕರಣದ ಹಿನ್ನೆಲೆಯಲ್ಲಿ ಬದುಕಬೇಕಾದ ಅನಿವಾರ್ಯತೆ ಬಂದಿರುವುದರಿಂದ ರಜೆ ಎನ್ನುವುದನ್ನು ಈ ಹಿನ್ನೆಲೆಯಲ್ಲೂ ನೋಡಬೇಕಾಗುತ್ತದೆ. ಅರ್ಥಿಕ ತಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಕೆಲವರ್ಷಗಳ ಹಿಂದೆ ರಜೆ ಎನ್ನುವುದನ್ನು ಆರ್ಥಿಕ ಅಭಿವೃದ್ಧಿಗೆ ಮಾರಕ ಎಂದು ಎತ್ತಿ ಆಡುತ್ತಿದ್ದರು. ಅದು ಆ ಕಾಲಕ್ಕೆ ಸತ್ಯವೂ ಹೌದಾಗಿತ್ತು. ಸಾಲು ಸಾಲು ರಜೆ ಬರುವ ದೀಪಾವಳಿ, ಯುಗಾದಿ ಹಾಗೂ ಭಾನುವಾರದ ಹೊಂದಾಣಿಕೆಯಿಂದ ಬ್ಯಾಂಕು ಮತ್ತು ಸರಕಾರಿ ಸೇವೆಗಳು ಸಮಗ್ರ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ನೀಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಒಂದು ಕಾಲವಿತ್ತು, ಸಾರ್ವಜನಿಕ ರಂಗದ ಬ್ಯಾಂಕುಗಳು ಮುಷ್ಕರ ಹೂಡುತ್ತದೆ ಎಂದು ತಿಳಿದರೆ ಸರಕಾರ ನಡುಗುವ ಪರಿಸ್ಥಿತಿ ಇತ್ತು. ತಿಂಗಳಿನಿಂದಲೇ ಅದರ ಕುರಿತು ಸುದ್ದಿಯಾಗುತ್ತಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ. ಸಾಕಷ್ಟು ಖಾಸಗಿರಂಗದ ಬ್ಯಾಂಕು ಮತ್ತು ಡಿಜಿಟಲ್ ಇಂಟರ್‌ನೆಟ್ ವ್ಯವಹಾರಗಳ ಮೂಲಕ ಆರ್ಥಿಕ ವ್ಯವಹಾರಗಳು ನಡೆಯುವ ಕಾರಣ ಹೆಚ್ಚಿನವರು ಬ್ಯಾಂಕಿನ ಮುಷ್ಕರದ ಕುರಿತು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ ಬ್ಯಾಂಕಿನ ಮುಷ್ಕರದ ಸುದ್ದಿ ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿ ಚಿಕ್ಕ ಸುದ್ದಿಯಾಗಿ ಪ್ರಕಟವಾಗುತ್ತಿರುವುದನ್ನು ಗಮನಿಸಬಹುದು.
ಈಗಂತೂ ಸಾರ್ವಜನಿಕ ರಜೆ ಎಂಬುದು ಆರ್ಥಿಕ ಚಟುವಟಿಕೆಗಳಿಗೆ ಪೂರಕವೆನ್ನುವ ಮಾತುಗಳನ್ನು ಹಣಕಾಸು ಪರಿಣಿತರು ಅಭಿಪ್ರಾಯಪಡುತ್ತಿದ್ದಾರೆ. ಎಲ್ಲಾ ರಂಗದಲ್ಲೂ ಇಂದು ಉದ್ಯೋಗವೆನ್ನುವುದು ಒಂದು ರೀತಿಯ ಮಾನಸಿಕ ಒತ್ತಡವನ್ನು ನಿರ್ಮಾಣ ಮಾಡಿದೆ. ಹಾಗಾಗಿ ರಜೆ ಸಿಕ್ಕಿದರೆ ಸಾಕು, ಅದರಿಂದ ಬಿಡುಗಡೆ ಪಡೆಯಲು ಜನ ಆಶ್ರಯಿಸಿರುವುದು ಪ್ರವಾಸ. ಈ ದಿನಗಳಿಗೆ ಕಾಯುತ್ತಿದ್ದಂತೆ ನಮ್ಮದೇ ರಾಜ್ಯದಲ್ಲಿ ಬೆಂಗಳೂರಿನಿಂದ ಜನ ಹೊರ ಹೋಗುವುದನ್ನು ಕಾಣಬಹುದು. ವಿರಾಮ ಎಂಬುದು ಮಾನಸಿಕ ಒತ್ತಡಗಳಿಂದ ಬಿಡುಗಡೆಗೆ ಒಂದು ಉತ್ತಮ ಮಾರ್ಗ. ಇದು ವ್ಯಕ್ತಿಯ ಮಾನಸಿಕ ಸ್ಥಿರತೆಯನ್ನು ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ತಮ್ಮ ಕುಟುಂಬವೋ ಸ್ನೇಹಿತರೊಂದಿಗೋ ಪ್ರಯಾಣ ಅವರೊಳಗಿನ ಮಾನಸಿಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.
ಇದನ್ನೇ ಮಾನವಿಕ ಶಾಸ್ತ್ರಜ್ಞರು Learning by Leisure Effect ಎಂದು ಕರೆದಿದ್ದಾರೆ. ಹಾಂಕಾಂಗಿನಲ್ಲಿ ತ್ತೈಮಾಸಿಕದಲ್ಲಿ ಒಂದು ಹೆಚ್ಚಿನ ರಜೆ ಕೊಟ್ಟಿರುವುದರಿಂದ ಅಲ್ಲಿನ ಉಪಭೋಗದ ಜಿಡಿಪಿ 0.3% ಹೆಚ್ಚಾಯಿತೆಂದು ವೊಕ್ಸಿ ಹೆನ್ರಿಚ್ ಅಮಾವಿಲ್ಲಾ Can Holiday Boost Consumtion ಎನ್ನುವ ಅಧ್ಯಯನವನ್ನು ಹೊರಹಾಕಿದ್ದಾನೆ. ಬಾಲ್ಯದಲ್ಲಿ ಬೇಸಿಗೆ ರಜೆ ಬಂತೆಂದರೆ ಸಾಕು, ಅಜ್ಜನ ಮನೆಗೆ ಹೋಗುವ, ಗುಡ್ಡ ಬೆಟ್ಟ ಸುತ್ತಾಡುವ ಬಾಲ್ಯತನದ ರಜೆಯ ಮಜಾ ಇದೀಗ ಕಾರ್ಪೊರೇಟ್ ಪ್ರಪಂಚಕ್ಕೆ ರೂಪಾಂತರಗೊಳ್ಳುತ್ತಿದೆ. “ಕಾಲಾಯ ತಸೆ¾„ ನಮಃ’ ಎನ್ನುತ್ತ ಮುಂದಿನ ತಿಂಗಳ ರಜೆಯ ಮಜಾವನ್ನು ಅನುಭವಿಸಲು ಸಿದ್ಧರಾಗಿ.
ರಜೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ
ನಮ್ಮದೇಶದಲ್ಲಿ ರಜಾ ದಿನಗಳೆಂದರೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯಗಳನ್ನು ಸಂಭ್ರಮಿಸುವ ಸಂದರ್ಭ. ಇದೀಗ ದಸರಾ, ದೀಪಾವಳಿ, ಈದ್ ಮುಂತಾದ ಹಬ್ಬಗಳು ಆರ್ಥಿಕ ಲೋಕಕ್ಕೆ ಕೋಟಿ ಕೋಟಿ ವ್ಯವಹಾರ ತರುವ ಸರಕಾಗಿದೆ. ಮೊನ್ನೆ ಮೊನ್ನೆ ಮುಗಿದ ಕುಂಭ ಮೇಳವನ್ನು ಇಲ್ಲಿ ಉಲ್ಲೇಖೀಸಬಹುದು. ಸುಮಾರು 4200 ಕೋಟಿ ರೂಪಾಯಿಯ ಈ ಮೇಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒಂದು ಉತ್ತಮ ಉದಾಹರಣೆ. ತಮ್ಮೆಲ್ಲ ಉಳಿತಾಯದ ಹಣವನ್ನು ತಮ್ಮ ಊರಿಗೆ ತಂದು ಉಪಭೋಗಿಸುವುದರಿಂದ ಹಳ್ಳಿ-ಪಟ್ಟಣಗಳೂ ಇದರ ಲಾಭ ಪಡೆಯುತ್ತಿವೆ. ಕ್ರಿಸ್‌ಮಸ್ ಹಬ್ಬವನ್ನಂತೂ ಜಾಗತಿಕವಾಗಿ ವಾಣಿಜ್ಯೀಕರಣ ದೃಷ್ಟಿಯಿಂದಲೇ ನೋಡಲಾಗುತ್ತಿದೆ.
ರಜಾದಿನಗಳಲ್ಲಿ ವಿದೇಶೀಯರು ಭಾರತದ ಭವ್ಯ ಪರಂಪರೆಯನ್ನು ನೋಡಲಿಕ್ಕಾಗಿಯೇ ಇಲ್ಲಿಗೆ ಬರುತ್ತಾರೆ. ರಾಮಲೀಲಾ, ದೀಪಾವಳಿ, ಗಂಗಾ ಆರತಿ, ಭಾಂಗ್ರಾ ಕುಣಿತ, ಕಾಶ್ಮೀರದ ನಿಸರ್ಗ-ಇದೀಗ ನಮಗೆ ವಿದೇಶಿ ವಿನಿಮಯ ತರುತ್ತಿವೆ. ಇಂದು ರಜೆಯ ಕಾರಣದಿಂದ ನಮ್ಮ ಪ್ರವಾಸೋದ್ಯಮ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ 2000ದಲ್ಲಿ ಸುಮಾರು 200 ಮಿಲಿಯ ಭಾರತೀಯರು ದೇಶದೊಳಗೆ ಪ್ರವಾಸ ಕೈಗೊಂಡಿದ್ದರೆ, 2018 ಡಿಸೆಂಬರ್ ಹೊತ್ತಿಗೆ ಈ ಸಂಖ್ಯೆ 1700 ಮಿಲಿಯದಷ್ಟಾಗಿದೆ. ಇದರಲ್ಲಿ ಅತೀ ಹೆಚ್ಚಿನ ದೇಶಿ ಪ್ರವಾಸಿಗರನ್ನು ಕೊಟ್ಟ ರಾಜ್ಯ ತಮಿಳುನಾಡು-20.9%, ಕರ್ನಾಟಕದ ಪಾಲು 10.9%. ನೌಕರರಲ್ಲದ ರೈತಾಪಿ ವರ್ಗಕ್ಕೆ ರಜೆಯ ಸೌಲಭ್ಯಗಳಿಲ್ಲ ನಿಜ. ಆದರೆ, ಇವರೂ ಬಿಡುವಿನಲ್ಲಿ ಪ್ರವಾಸ ಹೋಗುತ್ತಿದ್ದಾರೆ. ಸಣ್ಣ ಸಣ್ಣ ಹಳ್ಳಿಗಳಲ್ಲೂ ಹೋಂಸ್ಟೇಗಳು ತಲೆಎತ್ತಿವೆ.
ನಾರಾಯಣ ಯಾಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.