ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ


Team Udayavani, Sep 15, 2024, 5:58 PM IST

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಅಗಾಧವಾದ ಸೈನ್ಯ ಗಾಂಧಾರವನ್ನು ಪ್ರವೇಶಿಸಿತು! ಬಂದವನು ಹಸ್ತಿನಾವತಿಯ ರಾಜಸಿಂಹಾಸನದ ಹಿತೈಷಿಯಾದ ಭೀಷ್ಮ! ಅಪ್ಪ ಸುಬಲನೆದುರಲ್ಲಿ ಭೀಷ್ಮ ಧೃತರಾಷ್ಟ್ರನ ಮದುವೆಯ ಪ್ರಸ್ತಾವವನ್ನು ಇಡುವಾಗಲೇ ಅಪ್ಪನಿಗೆ ಅರಿವಾಗಿ ಹೋಯ್ತು. ಒಂದೋ ಹೆಣ್ಣು ಕೊಡಬೇಕು; ಇಲ್ಲವೇ ಯುದ್ಧಕ್ಕೆ ಸಿದ್ಧರಾಗಬೇಕು. ಭೀಷ್ಮರ ದೊಡ್ಡ ಸೇನೆಯನ್ನು ಎದುರಿಸುವ ಸಾಮರ್ಥ್ಯ ಪುಟ್ಟ ರಾಜ್ಯವಾದ ಗಾಂಧಾರಕ್ಕೆ ಇರಲಿಲ್ಲ! ಗಾಂಧಾರದ ಒಳಿತಿಗಾಗಿ ನಾನು ನನ್ನ ಜೀವನದ ಅಧಿಕಾರವನ್ನು ಭೀಷ್ಮರ ಕೈಗೆ ಒಪ್ಪಿಸುವುದಕ್ಕೆ ಮಾನಸಿಕಳಾಗಿ ಸಿದ್ಧಳಾಗತೊಡಗಿದೆ! ಆದರೆ…

ಹಸ್ತಿನಾವತಿ ತಲುಪಿದಾಗಲೇ ನಾನು ಮದುವೆಯಾಗಬೇಕಿರುವುದು ಜನ್ಮಾಂಧನನ್ನು ಎಂಬ ವಿಷಯ ತಿಳಿದದ್ದು. ಕಾಲನ್ನು ಗಾಂಧಾರದಿಂದ ಹಸ್ತಿನಾವತಿಯೆಡೆಗೆ ಇಟ್ಟಾಗಿತ್ತು! ನನಗೆ ಬೇರೆ ಆಯ್ಕೆ ಇರಲಿಲ್ಲ. ಆದರೆ ಮನಸ್ಸಿನೊಳಗೆ ಕ್ರೋಧ! ದ್ವೇಷ! ಯಾರ ಮೇಲೆ ಕ್ರೋಧಗೊಳ್ಳಲಿ? ಯಾರೊಡನೆ ದ್ವೇಷ ಸಾಧಿಸಲಿ? ಕ್ರೋಧ-ದ್ವೇಷಗಳು ಕರುಳ ಸಂಕಟವಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

“ದೃಷ್ಟಿಹೀನ ಧೃತರಾಷ್ಟ್ರನಿಗೆ ಕಣ್ಣಾಗಿ ಹಸೆಮಣೆಯೇರು ಬಾ’ ಎಂದರು ಕುರುಕುಲದ ಪಿತಾಮಹ ಭೀಷ್ಮ! ಅವರ ಆಹ್ವಾನವನ್ನು ಮನಸಾ ಸ್ವೀಕರಿಸುವ ಮನಸ್ಥಿತಿಯಲ್ಲಿ ನಾನಿರಲಿಲ್ಲ! ಬಲವನ್ನು ಉಪಯೋಗಿಸಿಕೊಂಡು ನನ್ನ ಬಾಳಿನ ಸೂತ್ರವನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಭೀಷ್ಮರ ಮೇಲೆ ನನಗೆ ಒಳಗೊಳಗೇ ಅಸಮಾಧಾನ! ಆದರೆ ಹೊರಗೆ ತೋರಿಸಿಕೊಳ್ಳಲಾಗದ ಅಸಹಾಯಕತೆ! ಯಾವುದಾದರೊಂದು ರೀತಿಯಲ್ಲಿ ನನ್ನ ಅಸಮಾಧಾನವನ್ನು ಹೊರಹಾಕುವ ಮಾರ್ಗ ಹುಡುಕುತ್ತಿದ್ದಾಗ ಬಂದದ್ದೇ “ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವ’ ಯೋಚನೆ! ಕಾರ್ಯರೂಪಕ್ಕೂ ತಂದುಬಿಟ್ಟೆ. ನಾನು ಮಾಡಿದ್ದು ತಪ್ಪಾಯಿತೇ?

ಬಾಲ್ಯದಲ್ಲಿಯೇ ಶಿವನ ಆರಾಧನೆ ಮಾಡಿ ನೂರು ಮಕ್ಕಳಾಗುವ ವರವನ್ನು ಪಡೆದವಳಲ್ಲವೇ ನಾನು? ನನ್ನ ಮಕ್ಕಳನ್ನು ಕೇವಲ ಸ್ಪರ್ಶ ಮಾತ್ರದಿಂದ ಅರಿಯುವ ಅನಿವಾರ್ಯತೆ ಇತ್ತೇ? ಎತ್ತಿ ಮುದ್ದಾಡಿ, ಪೋಷಿಸಿ, ತಪ್ಪುಗಳನ್ನು ತಿದ್ದಿ-ತೀಡಿ ಮಕ್ಕಳನ್ನು ಬೆಳೆಸುವ ಹೊಣೆ ಹೊರಬಹುದಿತ್ತಲ್ಲವೇ? ಯಾಕೆ ನನ್ನ ಕರ್ತವ್ಯ ನಿರ್ವಹಣೆಯಲ್ಲಿ ಹಿಂದುಳಿದುಬಿಟ್ಟೆ? “ನನ್ನದೇ ಸಂಸಾರವನ್ನು ನೋಡಿಕೊಳ್ಳುವ ಹೊಣೆಯನ್ನೂ ನಾನು ಬೇರೆಯವರಿಗೆ ವರ್ಗಾಯಿಸಿ ತಪ್ಪು ಮಾಡಿಬಿಟ್ಟೆನೇ?’ ಎಂಬ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡಿದ್ದಿದೆ.

ಧೃತರಾಷ್ಟ್ರನ ಕೈ ಹಿಡಿಯುವಾಗ ಕಟ್ಟಿಕೊಂಡಿದ್ದ ಕಣ್ಣುಪಟ್ಟಿಯನ್ನು ಬಿಚ್ಚದಂತೆ ಅದ್ಯಾವ ಶಕ್ತಿ ನನ್ನನ್ನು ತಡೆಯಿತು? “ಧೃತರಾಷ್ಟ್ರ ಮಹಾರಾಜನನ್ನು ಮದುವೆಯಾದ ನಮ್ಮ ಮಹಾರಾಣಿ ದೊಡ್ಡ ಪತಿವ್ರತೆ! ಗಂಡನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವ ವ್ರತವನ್ನು ಸ್ವೀಕರಿಸಿದ್ದಾರಂತೆ’ ಎಂದು ಹಸ್ತಿನಾವತಿಯ ಪ್ರಜೆಗಳು ಹಾಡಿಹೊಗಳಿದರು! ಆದರೆ… ನನ್ನೊಳಗಿನ ಸಂಕಟ ನನಗೊಬ್ಬಳಿಗೇ ಗೊತ್ತಿತ್ತು! ಗಾಂಧಾರದಿಂದ ನನ್ನನ್ನು ಎಳೆದು ತಂದು, ಕುರುಡನಿಗೆ ಕಟ್ಟಿರುವ ಭೀಷ್ಮರ ಕ್ರಮದ ಬಗ್ಗೆ ಇದ್ದ ಅಸಮಾಧಾನವನ್ನು ತೋರಿಸಿಕೊಳ್ಳಲು ನಾನು ಆಯ್ದುಕೊಂಡಿದ್ದ ಮಾರ್ಗವದು! ಅಥವಾ ಹಸ್ತಿನಾವತಿಯ ಪ್ರಜೆಗಳು ಕೊಟ್ಟ “ಮಹಾಪತಿವ್ರತೆ’ ಬಿರುದಿಗೆ ತಪ್ಪಿ ನಡೆಯಲು ನನಗೆ ಹಿಂಜರಿಕೆ ಕಾಡಿತೇ? ಗಂಡನಿಗೆ ತಕ್ಕ ಹೆಂಡತಿಯಾದೆ. ಆದರೆ ಮಕ್ಕಳನ್ನು ತಿದ್ದಿ ಬೆಳೆಸುವ ಆದರ್ಶ ತಾಯಿಯಾಗಲಿಲ್ಲ; ಹಸ್ತಿನಾವತಿಗೆ ತಕ್ಕ ಸಾಮ್ರಾಜ್ಞೆಯೂ ಆಗಲಿಲ್ಲ…

ದಿನಗಳು ಕಳೆದಂತೆ ಪಿತಾಮಹರ ಮೇಲಿನ ಕೋಪ ತಣ್ಣಗಾಯಿತು. ಅವರು ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ಹಸ್ತಿನಾವತಿಯ ದೃಷ್ಟಿಯಲ್ಲಿ ಸಮಂಜಸವಾಗಿಯೇ ಇರುತ್ತಿದ್ದವು. ಅವರ ಸ್ಥಾನದಲ್ಲಿ ನಿಂತು ಯೋಚಿಸುವಾಗ ಅವರ ನಿರ್ಧಾರ ಸರಿಯೆಂದೇ ತೋರುತ್ತಿತ್ತು. ಆದರೂ ಮನದೊಳಗೆ ಯಾವುದೋ ಅಸಮಾಧಾನ! ವಿಧಿ ನನ್ನ ಜೀವನವನ್ನು ನನ್ನಿಚ್ಛೆಯಂತೆ ಬದುಕಗೊಡದಿದ್ದರ ಬಗ್ಗೆ ಈ ಪ್ರಪಂಚದ ಬಗ್ಗೆಯೇ ದ್ವೇಷ-ಕೋಪ-ಸಂಕಟ-ದುಃಖ! ಒಂದು ದಿನವಾದರೂ ಮಕ್ಕಳಿಗೆ ಉಣ್ಣಿಸಲಿಲ್ಲ, ಎತ್ತಿ ಆಟವಾಡಿಸಲಿಲ್ಲ. ಮಕ್ಕಳನ್ನು ಬೆಳೆಸುವ, ತಿದ್ದಿತೀಡುವ ಕರ್ತವ್ಯವನ್ನು ಅಣ್ಣ ಶಕುನಿಯ ಕೈಗಿಟ್ಟು ಬದುಕಿನಲ್ಲಿ ನಿಜಕ್ಕೂ ಕುರುಡಿಯಾಗಿಬಿಟ್ಟೆ. ಒಬ್ಬ ಸಾಮಾನ್ಯ ಹೆಣ್ಣು ಸಹ ತನ್ನ ಮಕ್ಕಳಿಗಾಗಿ ಮಾಡಬಲ್ಲ ಕರ್ತವ್ಯಗಳಿಂದ ಹಿಂದುಳಿದುಬಿಟ್ಟೆ.

ನನ್ನ ಅಸಹಾಯಕತೆ ಕೋಪವಾಗಿ ಜ್ವಲಿಸುತ್ತಿತ್ತು. ಕುರುಕ್ಷೇತ್ರದ ಯುದ್ಧ ಮುಗಿದೇ ಹೋಗಿತ್ತು. ಹದಿನೆಂಟೇ ದಿನದಲ್ಲಿ ನನ್ನ ನೂರು ಗಂಡುಮಕ್ಕಳು, ಅಳಿಯ ಜಯದ್ರಥ, ಅಣ್ಣ ಶಕುನಿ ಎಲ್ಲರೂ ಯಮನ ಅತಿಥಿಗಳಾಗಿದ್ದರು. ಸೊಸೆಯಂದಿರ ಆಕ್ರಂದನ ಮುಗಿಲುಮುಟ್ಟಿತ್ತು. ಯಾರು ಯಾರಿಗೆ ಸಮಾಧಾನ ಹೇಳುವುದು? “ಪಾಂಡವರ ಪರವಹಿಸಿ ಈ ಯುದ್ಧ ಮಾಡಿಸಿದವನು ಕೃಷ್ಣ, ಅವನು ಮನಸ್ಸು ಮಾಡಿದ್ದರೆ ಈ ಯುದ್ಧವನ್ನು ತಪ್ಪಿಸಲು ಆಗುತ್ತಿರಲಿ ಲ್ಲವೇ? ದುರ್ಯೋಧನನ ಮನಸ್ಸನ್ನು ಪರಿವರ್ತಿಸಲು ಆಗುತ್ತಿರಲಿಲ್ಲವೇ? ಅವನಿಗೆಲ್ಲಿ ಮನಸ್ಸಿತ್ತು? ಪಕ್ಷಪಾತಿ…’ ಎಂದೇ ನನ್ನ ಮನಸ್ಸು ತರ್ಕಿಸುತ್ತಿತ್ತು. ಕೃಷ್ಣನ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಹಪಹಪಿಸತೊಡಗಿತು.

ನನ್ನನ್ನು ಕಾಣಲು ಬಂದ ಕೃಷ್ಣನನ್ನು ಸಹೃದಯತೆಯಿಂದ ಮಾತನಾಡಿಸಲು ಸಾಧ್ಯವಾಗಲೇ ಇಲ್ಲ. ಕೃಷ್ಣ ಕಾಲಿಗೆರಗಿ “ಆಶೀರ್ವದಿಸು ಮಾತೆ’ ಎಂದಾಗ ಉರಿದುಬಿದ್ದೆ. “ಕೃಷ್ಣಾ, ತೃಪ್ತಿಯಾಯಿತೇ ನಿನಗೆ? ಸಾಯುವ ಕಾಲಕ್ಕೆ ನನ್ನ ಬಾಯಿಗೆ ಗಂಗೋದಕ ಬಿಡುವುದಕ್ಕೆ ಒಬ್ಬ ಮಗನೂ ಉಳಿಯದಂತೆ ಎಲ್ಲರನ್ನೂ ಕೊಲ್ಲಿಸಿಬಿಟ್ಟೆಯಲ್ಲ. ಪಾಪಿ. ನಿನ್ನ ಕುಲವೂ ಇದೇ ರೀತಿ ತಮ್ಮತಮ್ಮಲ್ಲೇ ಬಡಿದುಕೊಂಡು ನಿನ್ನ ಕಣ್ಣೆದುರೇ ನಷ್ಟವಾಗಿ ಹೋಗಲಿ. ನಿನಗೆ ವೀರಮರಣವೂ ದಕ್ಕದೇ ಹೋಗಲಿ. ಇದು ನನ್ನ ಶಾಪ’ ಎಂದೆ.

ಕೋಪದಲ್ಲಿ ಕುದಿಯುತ್ತಿದ್ದ ನನ್ನನ್ನು ಕೈಹಿಡಿದು ಕರೆತಂದು ಆಸನವೊಂದರಲ್ಲಿ ಕುಳ್ಳಿರಿಸಿದ ಕೃಷ್ಣ. ನಾನಿನ್ನೂ ಕುದಿಯುತ್ತಿದ್ದೆ. ಕೋಣೆಯಲ್ಲಿ ಒಂದಿಷ್ಟು ಹೊತ್ತು ಗಾಢಮೌನ. ಕೃಷ್ಣನ ದೃಷ್ಟಿ ನನ್ನ ಮೇಲೆಯೇ ಇತ್ತೇ? ಮನಸ್ಸು ನಿಧಾನವಾಗಿ ಸ್ಥಿಮಿತಕ್ಕೆ ಬರತೊಡಗಿತು. ನಿಟ್ಟುಸಿರು ಬಿಟ್ಟು ಆಸನಕ್ಕೆ ಒರಗಿ ಕುಳಿತೆ. ನಾನು ಕೃಷ್ಣನಿಗೇ ಶಾಪ ಕೊಟ್ಟದ್ದನ್ನು ನೆನಪಿಸಿಕೊಂಡು ಕಸಿವಿಸಿಯಾಗತೊಡಗಿತು. ಇದೆಂತಹ ಹುಚ್ಚುತನವಾಯಿತು ನನ್ನದು? ಪಶ್ಚಾತ್ತಾಪವಾಗತೊಡಗಿತು. “ನನ್ನ ಮಕ್ಕಳು ಪಡೆದು ಬಂದದ್ದನ್ನು ಅನುಭವಿಸಿ ಹೊರಟುಹೋದರು. ಅದಕ್ಕಾಗಿ ನಾನು ಕೃಷ್ಣನನ್ನೇಕೆ ದೂಷಿಸಿದೆ? ಛೇ!’ ಅನ್ನಿಸತೊಡಗಿತು. “ಕೋಪದ ಭರದಲ್ಲಿ ಏನೇನೋ ಹಲುಬಿಬಿಟ್ಟೆ. ಕ್ಷಮಿಸು ಕೃಷ್ಣಾ. ಹೆತ್ತ ಒಡಲಿನ ಉರಿ ಹೀಗೆಲ್ಲ ಮಾತನಾಡಿಸಿಬಿಟ್ಟಿತು’ ಎಂದೆ.

ಕೃಷ್ಣ ನನಗೆ ಸಮೀಪದಲ್ಲೇ ಬಂದು ಕುಳಿತ. ನನ್ನ ಕೈಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡ. “ಮಾತೆ, ನಿನ್ನ ಮೇಲೆ ನನಗೆ ಮುನಿಸೇ? ಅದು ಹೇಗೆ ಸಾಧ್ಯ? ನಿನ್ನ ಶಾಪವನ್ನು ಸ್ವೀಕರಿಸುತ್ತೇನೆ. ನಿನ್ನ ಮಾತು ನನಗೆ ಆಶೀರ್ವಾದ. ಒಂದು ಮಾತು ಹೇಳುತ್ತೇನೆ, ಕೇಳುವೆಯಾ ತಾಯಿ?’ ಎಂದ.

“ಹೇಳು ಮಾಧವಾ’ ಎಂದೆ.ಕೃಷ್ಣ ಹೇಳತೊಡಗಿದ: “ಮಕ್ಕಳನ್ನು ಧರ್ಮದ ಪಥದಲ್ಲಿ ನಡೆಯುವಂತೆ ಬೆಳೆಸುವುದು ತಾಯಿಯಾಗಿ ನಿನ್ನ ಕರ್ತವ್ಯವಾಗಿತ್ತಲ್ಲವೇ? ಕಡೇಪಕ್ಷ ಮಕ್ಕಳು ಅಧರ್ಮದ ಹಾದಿ ತುಳಿದಾಗ ಎಚ್ಚರಿಸಿದ ಸಮಾಧಾನವಾದರೂ ನಿನ್ನದಾಗುತ್ತಿತ್ತಲ್ಲವೇ? ನಿನ್ನದೇ ತಪ್ಪಿಟ್ಟುಕೊಂಡು ನನ್ನಲ್ಲಿ ದೋಷವನ್ನು ಹುಡುಕುತ್ತಿರುವೆಯಲ್ಲ ಮಾತೆ! ಇರಲಿ ಬಿಡು. ಮಕ್ಕಳನ್ನು ಕಳೆದುಕೊಂಡವಳ ದುಃಖವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನನ್ನ ಯಾದವ ವಂಶ ನಿನ್ನ ಶಾಪದಂತೆಯೇ ಅಳಿಯಲಿದೆ. ನಾನಿನ್ನು ಹೋಗಿಬರಲೇ?’

ಹೇಳಲು ನನ್ನಲ್ಲಿ ಏನಿತ್ತು? ಅಂದು ಕೃತಕ ಕುರುಡುತನವನ್ನು ಆವಾಹಿಸಿ­ಕೊಂಡಂತೆ ಇಂದು ಮೂಕತ್ವವನ್ನೂ ಆವಾಹಿಸಿಕೊಂಡೆ. ಮತ್ತೆ ಕಾಲಿಗೆರಗಿದ ಕೃಷ್ಣ ಹೊರಟೇ ಹೋದ.

-ಸುರೇಖಾ ಭೀಮಗುಳಿ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.