ರಬ್ಬಿಲ್‌ ಅವ್ವಲ್‌ ಹದಿನಾಲ್ಕರ ಇರುಳು


Team Udayavani, Nov 17, 2019, 5:48 AM IST

nn-5

ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು ಕೇಳಬೇಡಿ. “ಎಲ್ಲಿಂದ? ಎಲ್ಲಿಗೆ? ಯಾವಾಗ? ಏಕೆ? ಹೇಗೆ? ಎಂಬಿತ್ಯಾದಿ ರಗಳೆ ಹುಟ್ಟಿಸುವ ಪ್ರಶ್ನೆಗಳನ್ನು ಮಕ್ಕಳು ದೊಡ್ಡವರಲ್ಲಿ ಕೇಳಬಾರದು’ ಎಂದು ಮಹಾನುಭಾವರು ಬಾಲ್ಯದಲ್ಲಿಯೇ ನಮಗೆ ಕಟ್ಟಪ್ಪಣೆ ಹೊರಡಿಸಿದ್ದರು. ಹಾಗಾಗಿ, ಇಂತಹ ಪ್ರಶ್ನೆಗಳಿಂದ ನಾನು ಈಗಲೂ ದೂರವೇ ಇರುತ್ತೇನೆ. ಇದ್ದೆ. ಹಾಗಾಗಿ ಈಗ ಹೀಗೆ ಇರುವೆ. ಹೊರಟೆ. ಹಾಗಾಗಿ ಹೊರಟಿರುವೆ. ಎಲ್ಲಿಗೆ ಎಂಬುದು ನನಗೂ ಗೊತ್ತಿಲ್ಲ. ಹಾಗಾಗಿ,ಎಲ್ಲಿಗೆ ಎಂದು ಯಾರೂ ಕೇಳಬಾರದು ಎಂಬ ಅವರ ಮಾತುಗಳನ್ನು ನಾನೂ ಅನ್ವಯಿಸಿಕೊಂಡು ಓಡಾಡುತ್ತಿರುವೆ. ಹಾಗಾಗಿ, ಎಲ್ಲಿಗೋ ಯಾಕೋ ಏನೋ ಸಣ್ಣದೊಂದು ಹಡಗು ಹತ್ತಿ ಹೊರಟವನು ಈಗ ಅದೇ ಸಣ್ಣ ಹಡಗು ಹಿಡಿದು ವಾಪಸು ನನ್ನ ಬಿಲದಂತಿರುವ ದ್ವೀಪಕ್ಕೆ ಹೊರಟಿದ್ದೆ. ಎಲ್ಲಿಗೆ ತೆರಳಿದರೂ ಮತ್ತೆ ಅಲ್ಲಿಗೇ ಮರಳಬೇಕೆಂಬ ಹುಚ್ಚು ವ್ಯಾಮೋಹ ಹುಟ್ಟಿಸಿರುವ ಪುಟ್ಟದೊಂದು ಹವಳ ದ್ವೀಪ. ಹಾಗೆ ನೋಡಿದರೆ ಇಲ್ಲಿ ನನ್ನದೆಂಬುದು ಏನೂ ಇಲ್ಲ. ಆದರೆ, ಶತಶತಮಾನಗಳಿಂದ ಇಲ್ಲೇ ಬದುಕುತ್ತಿರುವೆ ನಾನು ಎಂಬ ಬ್ರಾಂತು ಹುಟ್ಟಿಸುವ ನನ್ನದಲ್ಲದ ಈ ದ್ವೀಪಕ್ಕೆ ಮರಳಿ ಮತ್ತೆ ತೆರಳುತ್ತಿರುತ್ತೇನೆ.

ರಬ್ಬಿಲ್‌ ಅವ್ವಲ್‌ ಎಂಬುದು ಬಹುಮಾನ್ಯರಾದ ಪ್ರವಾದಿ ಮಹಮ್ಮದರು ಉದಯಿಸಿದ ಹಾಗೂ ಅಸ್ತಮಿಸಿದ ಪವಿತ್ರ ತಿಂಗಳು. ಹಾಗಾಗಿ, ಈ ತಿಂಗಳ ಮೊದಲ ಪಾಕ್ಷಿಕದಲ್ಲಿ ಹಡಗುಗಳು ಬಹುತೇಕ ಖಾಲಿಯಾಗಿಯೇ ಓಡಾಡುತ್ತಿರುತ್ತವೆ. ತಾವು ಜೀವಕ್ಕಿಂತಲೂ ಪ್ರೀತಿಸುವ ಪ್ರವಾದಿಗಳ ನಾಮಸ್ಮರಣೆಯ ಈ ದಿನಗಳಲ್ಲಿ ದ್ವೀಪವಾಸಿಗಳು ತಾವು ಸ್ವರ್ಗವೆಂದೇ ತಿಳಿದಿರುವ ತಮ್ಮ ತಮ್ಮ ದ್ವೀಪಗಳನ್ನು ಬಿಟ್ಟು ಎಲ್ಲಿಗೂ ಕದಲುವುದಿಲ್ಲ. ಹೊರಗಿದ್ದವರು ಎಲ್ಲಿದ್ದರೂ ಬಂದು ಅದಾಗಲೇ ತಮ್ಮ ದ್ವೀಪಗಳನ್ನು ಸೇರಿಕೊಂಡಿರುತ್ತಾರೆ. ಹೊಳೆವ ದೀಪಗಳಿಂದಲೂ, ಹಸಿರು ಬಾವುಟಗಳಿಂದಲೂ, ಮೌಲೂದ್‌ ರಾತೀಬ್‌ ಪಾರಾಯಣಗಳಿಂದಲೂ, ತುಪ್ಪದ ಅನ್ನ, ಆಡಿನ ಸಾರಿನ ಪರಿಮಳದಿಂದಲೂ ಈ ಹತ್ತು ದ್ವೀಪಗಳ ಒಂಬತ್ತು ದ್ವೀಪಗಳು ಕಳೆಗಟ್ಟಿಕೊಂಡಿರುತ್ತದೆ. ಒಂದೇ ಒಂದು ದ್ವೀಪ ಮಾತ್ರ ಎಂದಿನಂತೆ ಒಣಗಾಂಭೀರ್ಯದಿಂದ ಮೌನವಾಗಿರುತ್ತದೆ. ಅದಕ್ಕೆ ಕಾರಣವೂ ಇದೆ. ಈ ದ್ವೀಪವಾಸಿಗಳು ಅಪ್ಪಟ ದೈವ ಭಕ್ತರು. ಪಡೆದ ಅಲ್ಲಾಹುವನ್ನಲ್ಲದೇ ಮತ್ತೆ ಯಾರನ್ನೂ ಆರಾಧಿಸಬಾರದು, ಅಲ್ಲಾಹುವಿನ ಪ್ರವಾದಿಯನ್ನೂ ಕೂಡ ಅನಗತ್ಯವಾಗಿ ಭಾವಪ್ರಧಾನವಾಗಿ ಹಾಡಿ ಹೊಗಳಬಾರದು ಎಂಬುದು ಅಲ್ಲಿನವರ ನಂಬಿಕೆ. ಉಳಿದ ಒಂಬತ್ತೂ ದ್ವೀಪಗಳ ಮಂದಿ ಪ್ರವಾದಿಗಳನ್ನೂ ಸಾಧುಸಂತರನ್ನೂ ಸೂಫಿವರೇಣ್ಯರನ್ನೂ ಹಾಡುತ್ತ, ಡೋಲು ಬಡಿಯುತ್ತ, ಕುಣಿಯುತ್ತ, ಕೊಂಡಾಡುತ್ತಾರೆ ಮತ್ತು ಹೊಟ್ಟೆ ತುಂಬ ತಿಂದುಂಡು ಕಾಸನ್ನು ನೀರಿನಂತೆ ಖರ್ಚು ಮಾಡಿ ಸಂಭ್ರಮಿಸುತ್ತ¤ ಖುಷಿಯಾಗಿರುತ್ತಾರೆ. ನನಗೆ ಯಾಕೋ ಮುಗುಮ್ಮಾಗಿರುವ ಅದೊಂದು ದ್ವೀಪಕ್ಕಿಂತ ಉಳಿದ ಈ ದ್ವೀಪಗಳಲ್ಲಿ ಓಡಾಡುವುದೇ ಖುಷಿಯ ವಿಷಯ. ಕಣ್ಣಿಗೆ ಕಾಣುವ ಸಂತ ಫ‌ಕೀರರಿಲ್ಲದ ಕಣ್ಣಿಗೆ ಕಾಣಿಸದ ಭಗವಂತ ಮಾತ್ರ ವ್ಯಾಪಿಸಿರುವ ಅದೊಂದು ದ್ವೀಪ ಯಾವಾಗಲೂ ಖಾಲಿ ಖಾಲಿಯಾಗಿರುತ್ತದೆ. ಅದಕ್ಕೆ ಕಾರಣ, ಈ ದ್ವೀಪದ ಬಹುತೇಕ ಗಂಡಸರು ದೂರದೂರದ ಕಾಣದ ಕಡಲುಗಳಲ್ಲಿ ಓಡಾಡುವ ನೌಕೆಗಳಲ್ಲಿ ನಾವಿಕರಾಗಿದ್ದಾರೆ. ಯಾವಾಗಲೋ ಊರಿಗೆ ಮರಳಿದವರು ಮನೆಯ ಬಾಗಿಲು ಹಾಕಿಕೊಂಡು ದೀರ್ಘ‌ ಸುಷುಪ್ತಿಯಲ್ಲಿ ಮಲಗಿರುತ್ತಾರೆ. ಈ ದ್ವೀಪದ ಸ್ತ್ರೀಯರು ಸುಂದರಿಯರು. ಆದರೆ, ಬೇರೆ ಎಲ್ಲೂ ಕಾಣದ ಒಂದು ತರಹದ ನಿರ್ಭಾವುಕ ಗಡಸುತನ ಅವರ ಸೌಂದರ್ಯಕ್ಕೆ ಒಂದು ಬಗೆಯ ಉಕ್ಕಿನ ಚೌಕಟ್ಟು ಹಾಕಿರುವಂತೆ ಕಾಣಿಸುತ್ತದೆ. ನಿದ್ದೆಯಿಂದೆದ್ದ ಗಂಡಸರು ಒಂದು ಹೊತ್ತೂ ತಪ್ಪದೆ ದಿನಕ್ಕೆ ಐದು ಬಾರಿ ಪ್ರಾರ್ಥನೆಯಲ್ಲಿ ಮುಳುಗಿರುತ್ತಾರೆ. ಏನು ಪ್ರಶ್ನೆ ಕೇಳಿದರೂ ಅವರ ಉತ್ತರ ಭಗವಂತನ ಕರುಣೆಯ ಕುರಿತ ಮಾತುಗಳಿಂದ ಆರಂಭವಾಗುತ್ತದೆ. ತಮ್ಮ ಖಾಸಗಿ ಸುಖದುಃಖಗಳು ಹೇಳಿಕೊಳ್ಳಲು ಇರುವುದಲ್ಲ ಎಂಬ ಅರಿವನ್ನು ಇವರು ಹುಟ್ಟಿನಿಂದಲೇ ಪಡೆದಿರುವಂತೆ ಅನಿಸುತ್ತದೆ. ಹಾಗಾಗಿ, ನಾನೂ ಇವರನ್ನು ಹೆಚ್ಚು ಪ್ರಶ್ನಿಸಲು ಹೋಗುವುದಿಲ್ಲ. ದೇವರನ್ನು ಬಹಳ ಅತಿಯಾಗಿ ಹಚ್ಚಿಕೊಳ್ಳುವ ಮಂದಿ ಜಗತ್ತನ್ನು ಲಾಭನಷ್ಟಗಳ ದೃಷ್ಟಿಯಿಂದಲೇ ನೋಡುತ್ತಾರೆ ಎಂಬುದು ಇವರನ್ನು ನೋಡಿದಾಗ ನನಗೂ ಅನಿಸುತ್ತದೆ. ಇದೆಲ್ಲ ಒಂದು ರೀತಿಯ ಕೆಲಸಕ್ಕೆ ಬಾರದ ಗಹನ ಚಿಂತನೆಗಳು. ತಿಂದುಂಡು ಹಾಸಿ ಹೊದ್ದು ಮಲಗಿ ಬೆಳಗೆ ಹಸಿವಾಗಿ ಆಹಾರವನ್ನು ಅರಸುತ್ತ ಓಡಾಡುವ ನನ್ನಂತಹ ಚಿರಪಾಪಿಗೆ ಇದೊಂದು ದ್ವೀಪದ ಜನರು ಸ್ವಲ್ಪ ಬೋರು ಹೊಡೆಸುತ್ತಾರೆ.

ಹಾಗಾಗಿ, ಹಡಗು ಇಳಿದು ಈ ದ್ವೀಪದಲ್ಲಿ ಓಡಾಡಿದವನು ಯಾರಲ್ಲೂ ಹೆಚ್ಚು ಮಾತಾಡದೆ ದೊಡ್ಡದೊಂದು ಸುಷುಪ್ತಿಯಂತಹ ನಿದ್ದೆ ಹೊಡೆದು ಬೆಳಗ್ಗೆ ಎದ್ದವನೇ ಇನ್ನೊಂದು ಹಡಗು ಹತ್ತಿ ಹತ್ತಿರದ ಇನ್ನೊಂದು ದ್ವೀಪಕ್ಕೆ ತೆರಳಿದ್ದೆ. ಕಡಲ ತುಂಬ ಪರವ ಎಂದು ಕರೆಯಲ್ಪಡುವ ಹಾರು ಮೀನುಗಳು. ನೀರ ಒಳಗಿಂದ ಬುಳಕ್ಕನೆ ಹೊರಬರುವ ಇವು ಕಡಲ ಒಳಗಿಂದ ಯಾರೋ ಗುರಿಯಿಟ್ಟ ಬಾಣದಂತೆ ಕಡಲ ಮೇಲೆ ಸುಮಾರು ದೂರ ಹಾರಿ ಮತ್ತೆ ಕಡಲೊಳಗೆ ಮುಳುಗಿ ಮರೆಯಾಗುತ್ತವೆ. ಡಾಲ್ಫಿನ್‌ ಮೀನು ಕುಟುಂಬಗಳು ಕಡಲಲ್ಲಿ ಹಡಗು ಎಬ್ಬಿಸುವ ಅಲೆಗಳ ಮೇಲಿಂದ ಜಿಗಿದು ಒಂದಿಷ್ಟು ದೂರ ಹಿಂಬಾಲಿಸಿ ಹಿಂದೆ ಉಳಿಯುತ್ತವೆ. ಇವು ಮನುಷ್ಯರ ಹಾಗೆಯೇ ಹೆರುವ, ಮರಿಗಳಿಗೆ ಹಾಲೂಡಿಸುವ ನಮ್ಮ ಹಾಗೆಯೇ ಕೌಟುಂಬಿಕ ಸಂಬಂಧಗಳಿರುವ ಮತ್ಸé ಜೀವಗಳು. ತಂದೆಮೀನು, ತಾಯಿಮೀನು, ಮಗ ಮೀನು, ಮಗಳು ಮೀನು. ನಾವೂ ಮನುಷ್ಯರಾದ ನಿಮಗೇನೂ ಕಡಿಮೆ ಇಲ್ಲವೆಂಬಂತೆ ತಮ್ಮದೇ ಭಾಷೆಯಲ್ಲಿ ಸಂಭಾಷಿಸುತ್ತ ಬದುಕುತ್ತಿರುವ ಮತ್ಸ್ಯ ಜೀವಿಗಳು. ಹಳದಿ ಬಣ್ಣದ ಒಂಟಿ ಹಕ್ಕಿಯೊಂದು ಹಡಗನ್ನೇ ಮನೆ ಮಾಡಿಕೊಂಡು ಅತ್ತ ಇತ್ತ ಹಾರಾಡುತ್ತ ನಮ್ಮ ಜೊತೆಗೇ ತನ್ನ ಗಮ್ಯವನ್ನು ಸೇರಲು ಪಯಣಿಸುತ್ತದೆ. ಹಡಗಿನ ತುಂಬ ತಮಿಳುನಾಡಿನ, ಒರಿಸ್ಸಾದ, ಉತ್ತರ ಪ್ರದೇಶದ, ಬಿಹಾರದ ಕೂಲಿಯ ಗಂಡಸರು ಹೊಟ್ಟೆಪಾಡಿಗೆ ದ್ವೀಪದಲ್ಲಿ ಉದ್ಯೋಗ ಅರಸಿಕೊಂಡು ಹಡಗಲ್ಲಿ ಕುಳಿತಿದ್ದಾರೆ. ಅವರಲ್ಲಿ ಬಹುತೇಕರಿಗೆ ಇದು ಮೊದಲ ಸಮುದ್ರ ಪಯಣ. ಕಡಲ ಅಸೌಖ್ಯದಿಂದ ಬವಳಿ ಬಂದು ಗರ್ಭಿಣಿ ಸ್ತ್ರೀಯರಂತೆ ಹೊಟ್ಟೆ ಹಿಡಿದುಕೊಂಡು ಕರುಳು ಕಿತ್ತುಬರುವಂತೆ ವಾಂತಿ ಮಾಡಿಕೊಂಡು ಬಿಸಿಲಲ್ಲಿ ಬಸವಳಿದು ಕಂದಮ್ಮಗಳ ಹಾಗೆ ನಿದ್ದೆ ಹೋಗಿದ್ದಾರೆ. ಯಾವುದೋ ದ್ವೀಪದಿಂದ ಪರಾರಿಯಾಗಿ ಹಡಗು ಹತ್ತಿರುವ ಪ್ರೇಮಿಗಳಿಬ್ಬರು ಹಡಗಿನ ಮಂದಿಯ ಮಾತಿಗೆ ಆಹಾರವಾಗಿ ವಿಹ್ವಲಗೊಂಡು ಮೂಲೆಯೊಂದರಲ್ಲಿ ಕುಕ್ಕುರುಗಾಲಲ್ಲಿ ಕುಳಿತುಕೊಂಡಿದ್ದಾರೆ. ತಮಗಿಬ್ಬರಿಗೂ ನಿಖಾ ಆಗಿರುವುದಾಗಿಯೂ, ಆದರೆ, ದ್ವೀಪದ ಮಂದಿಗೆ ಮದುವೆಯ ಊಟ ಹಾಕಿಸಲು ಕಾಸಿಲ್ಲದಿರುವುದರಿಂದ ತಾವಿಬ್ಬರೂ ಕೆಲಸ ಅರಸಿಕೊಂಡು ಸುತ್ತುತ್ತಿರುವುದಾಗಿಯೂ ಅವರು ಹೇಳುತ್ತಿರುವ ಸಬೂಬನ್ನು ನಂಬದ ಹಡಗಿನ ಮಂದಿ ಮೂಗಿನ ತುದಿಯಲ್ಲಿ ನಗುತ್ತ ಅವರಿಬ್ಬರ ಚಲನವಲನಗಳನ್ನು ವಾರೆಗಣ್ಣಿನಿಂದ ಗಮನಿಸುತ್ತಲೇ ತಮ್ಮ ಹರಟೆಗಳಲ್ಲಿ ಮುಳುಗಿದ್ದಾರೆ. ಚಲಿಸಿದರೂ ಚಲಿಸಿದರೂ ಮುಗಿಯದ ಕಡಲು. ಕಾಣದ ನೆಲ. ದೂರದಲ್ಲೆಲ್ಲೋ ಚಲಿಸುತ್ತಿರುವ ಸರಕಿನ ಹಡಗುಗಳ ಮಿಣುಕು ದೀಪ. ಯಾವುದೋ ದ್ವೀಪವೊಂದರ ದ್ವೀಪಸ್ತಂಭದಿಂದ ಹಾದುಬರುವ ಬೆಳಕ ಚುಕ್ಕಿ. ಹಡಗನ್ನು ಹಿಂಬಾಲಿಸುತ್ತಲೇ ಆಕಾಶದ ನಡು ಎತ್ತರಕ್ಕೆ ಬಂದು ತಲುಪಿರುವ ಹುಣ್ಣಿಮೆಯ ಪೂರ್ಣಚಂದ್ರ. ಮೊರೆಯುತ್ತಲೇ ಇರುವ ಹಡಗಿನ ಯಂತ್ರದ ಮರ್ಮರ.

ಒಂದಿನಿತೂ ಕಣ್ಣುಮುಚ್ಚದೆ ಎಲ್ಲವನ್ನೂ ಗಮನಿಸುವ ಇವನ ಹುಚ್ಚುವ್ಯಾಧಿಗೆ ಮದ್ದಿಲ್ಲ. “ಇವನಿಂದ ನಿಮಗೆ ಯಾರಿಗೂ ಸುಖವಿಲ್ಲ. ಇವನು ನಿಮ್ಮ ಯಾರ ಕಷ್ಟಗಳಿಗೆ ಒದಗುವವನೂ ಅಲ್ಲ. ಇವನನ್ನು ಯಾರೂ ಹಚ್ಚಿಕೊಳ್ಳಬೇಡಿ’ ಎಂದು ಬಾಲ್ಯದ ಮಹಾನುಭಾವರು ಎಲ್ಲರಿಗೂ ತಾಕೀತು ಮಾಡಿದ್ದರು. ಖುರಾನು ಓದುವವನು ನೋಡಬೇಕಾಗಿರುವುದು ಖೀತಾಬಿನ ಅಕ್ಷರಗಳನ್ನು. ಆದರೆ, ಇವನು ಖೀತಾಬು ನೋಡುವುದ ಬಿಟ್ಟು ಓದಿಸುವ ಮುಲ್ಲಾಖನ ಮುಖವನ್ನೂ, ಗಡ್ಡವನ್ನೂ, ಮತ್ತು ಗಡ್ಡದ ನಡುವಿನಿಂದ ತುಂತುರಾಗಿ ಹೊರಬರುತ್ತಿರುವುದನ್ನೂ ನೋಡುತ್ತ ತನ್ನೊಳಗೆ ತಾನು ನಗುತ್ತಿರುವನು ಎಂಬುದು ಅವರ ಸಿಟ್ಟಿಗೆ ಕಾರಣವಾಗಿತ್ತು. ಅದಕ್ಕಾಗಿ ಅವರು ನನ್ನನ್ನು ನಾನಾ ಬಗೆಯಲ್ಲಿ ಶಿಕ್ಷಿಸಿಯೂ ಆಗಿತ್ತು. ಎರಡೂ ಹಸ್ತಗಳನ್ನು ಅಂಗಾತವಾಗಿ ಹಿಡಿಯಲು ಹೇಳಿ ಬೆರಳುಗಳ ಹಿಂಭಾಗಕ್ಕೆ ಬೆತ್ತದಿಂದ ಲಘುವಾಗಿ ಹೊಡೆಯುವುದು, ಚಡ್ಡಿಯನ್ನು ಸ್ವಲ್ಪ ಜಾರಿಸಲು ಹೇಳಿ ಪೃಷ್ಠದ ಹಿಂಭಾಗದಲ್ಲಿ ಬರೆ ಮೂಡಿಸುವುದು, ಕಾಲ ಉಂಗುಷ್ಠಗಳ ಮೇಲೆ ತಮ್ಮ ಪಾದಗಳನ್ನು ಬಲವಾಗಿ ಒತ್ತಿ ಹಿಡಿದು ನೋಯಿಸುವುದು, ಕಂಕುಳನ್ನು ಜಿಗುಟುವುದು. ಏನು ಮಾಡಿದರೂ ಅವರ ಮುಖದಿಂದ ಕದಲದ ನನ್ನ ಕಣ್ಣುಗಳು. ಅವರಿಗೆ ಸಾಕಾಗಿ ಹೋಗಿತ್ತು. ಇನ್ನು ಇವನಿಗೆ ಖುರಾನು ಕಲಿಸಲು ಸಾಧ್ಯವಿಲ್ಲ. ಯಾವುದಾದರೂ ಇಬಿಲೀಸನ ಗ್ರಂಥಗಳನ್ನು ಓದಿ ಸೈತಾನನ ಸೈನ್ಯದಲ್ಲಿ ಸೇರಿಕೊಂಡು ಹಾಳಾಗಿ ಹೋಗು ಎಂದು ಅವರು ನನಗೆ ಶಾಪ‌ವನ್ನೂ ಕೊಟ್ಟಿದ್ದರು.

“ನೀನು ಹೀಗೆ ಒಂಟಿ ಸೈತಾನನ ಹಾಗೆ ಎಲ್ಲಿಯೂ ನೆಲೆ ನಿಲ್ಲದೆ ಓಡಾಡುತ್ತಿರುವುದು ಆ ಬಾಲ್ಯದ ಮಹಾನುಭಾವರಾದ ಉಸ್ತಾದರ ಶಾಪದಿಂದಲೇ’ ಎಂದು ನನ್ನ ಉಮ್ಮ ಈಗಲೂ ಅನ್ನುತ್ತಾರೆ. ಅವರ ಧ್ವನಿಯಲ್ಲಿ ಈ ಕುರಿತು ಒಂದು ತರಹದ ಮೆಚ್ಚುಗೆಯೂ ಇರುತ್ತದೆ. ಎಲ್ಲರಿಗೂ ಬೇಕಾದವನಾಗಿ ಬದುಕುವುದು ಎಲ್ಲ ಕಾಲದಲ್ಲೂ ಸಾಧ್ಯವಿಲ್ಲ ಎಂದು ಅವಳೂ ನಂಬಿದ್ದಾಳೆ. ನಾನು ಮಹಾನುಭಾವರ ಪಿಂಗಾಣಿ ಬಟ್ಟಲಿನ ರಹಸ್ಯ ಹುಡುಕಿಕೊಂಡು ಹೋಗಿರುವುದು ಒಂದು ನೆಪ ಮಾತ್ರ. ಇದರ ಹಿಂದೆ ಯಾರಿಗೂ ಗೊತ್ತಿರದ ಅವನ ಕಳ್ಳತನವೊಂದಿದೆ ಎಂಬುದನ್ನು ಅವಳೂ ರೂಕ್ಷವಾಗಿ ಅಲ್ಲದಿದ್ದರೂ ಸೂಕ್ಷ್ಮವಾಗಿ ಅಲ್ಲಲ್ಲಿ ಹೇಳಿದ್ದಾಳೆ. ಅವಳಿಗೆ ಮತ್ತು ನನಗೆ ಮಾತ್ರ ಗೊತ್ತಿರಬಹುದಾದ ಸತ್ಯ ಅನ್ನುವ ಹಾಗೆ. ಪಾಪ. ಅವಳಿಗೂ ಗೊತ್ತಿಲ್ಲದ ನನ್ನ ಒಳಗಿನ ಉಸಾಬರಿಗಳು. ಪಿಂಗಾಣಿ ಬಟ್ಟಲಿನ ಹುಡುಕಾಟದಂತೆ ಕಾಣುವ ನನ್ನ ಪ್ರಯಾಣದ ನೆಪ ನಿಜವಾಗಿಯೂ ಏನು ಎಂಬುದು ನನಗೂ ಗೊತ್ತಿಲ್ಲ. ಆದರೆ, ಈ ಓಡಾಟದಲ್ಲಿ ಹಲವು ಪರದಾಟಗಳ ನಡುವೆ ಮನುಷ್ಯರ ಮುಖಗಳನ್ನೂ, ಅದರ ಓರೆಕೋರೆಗಳನ್ನೂ, ಅವರ ಕಣ್ಣುಗಳ ನಿಷ್ಠುರ ಕಾಠಿಣ್ಯವನ್ನೂ, ಕೆಲವೊಮ್ಮೆ ಅಪರಿಮಿತ ಸೌಂದರ್ಯವನ್ನೂ, ಬಹಳ ಸಾರಿ ವಿನೋದಮಯವಾಗಿರುವ ಅವರ ಜೀವಿತ ಕಥೆಗಳನ್ನೂ, ಮನುಷ್ಯ ಬದುಕಿನ ನಿರರ್ಥಕತೆಯನ್ನು ಸಾರಿ ಹೇಳುವ ಘಟನಾವಳಿಗಳನ್ನೂ ನೋಡುತ್ತ ಕೇಳುತ್ತ ನಿರುಕಿಸುತ್ತ ಬದುಕುವುದು ನಮ್ಮ ಈ ಜನ್ಮದ ಭಾರವನ್ನು ಹಗುರಗೊಳಿಸುವುದು ಮತ್ತು ಅನಗತ್ಯ ಪಾಂಡಿತ್ಯ ಪ್ರದರ್ಶನಗಳಿಂದ ನಮ್ಮನ್ನು ಪಾರುಗೊಳಿಸುವುದು ಎನ್ನುವುದು ನನ್ನ ಅನುಭವ. ಹಾಗಾಗಿ, ಮುಗಿಯುವುದೇ ಇಲ್ಲವೇನೋ ಎಂದು ಅನಿಸುವ ಈ ಕಡಲ ಪಯಣದಲ್ಲಿ ಸುಮ್ಮನೇ ಎಲ್ಲವನ್ನೂ ನೋಡುತ್ತ ಪಯಣಿಸುತ್ತಿದ್ದೆ.

ಇಂತಹದೇ ಅಂತಹದೊಂದು ಹಡಗು ಪಯಣದಲ್ಲಿ ನಾನು ಮಹಾನುಭಾವರ ಒಂದು ಕಾಲದ ಹಿಂಬಾಲಕನಾಗಿದ್ದ ಆಡು ಮಾಂಸದ ಅಂಗಡಿಯವನೂ, ಸರಕು ವ್ಯಾಪಾರಿಯೂ, ಕಥೆಗಾರನೂ ಆದ ಮುದುಕನನ್ನು ನೋಡಿದ್ದು. ನಡುಗುವ ಧ್ವನಿಯವನೂ ನಡುಗುವ ಬೆರಳುಗಳುಳ್ಳವನೂ ಆದ ಇವರ ಕುರಿತು ಈ ಹಿಂದೆ ಬರೆದಿದ್ದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮೊದಲ ಹೆಂಡತಿಯನ್ನು ತ್ಯಜಿಸಿ, ಪ್ರಾಣಕ್ಕಿಂತ ಮಿಗಿಲಾಗಿ ನೋಡಿಕೊಳ್ಳುವವಳನ್ನು ಎರಡನೆಯ ಹೆಂಡತಿಯಾಗಿ ವರಿಸಿದ ಮುದುಕನ ಕಥೆ ಅದು. ಓದಿದ್ದರೆ ಅದು ನಿಮಗೆ ನೆನಪಿರಬಹುದು. ತಾವು ಮೊದಲನೆಯ ಮಡದಿಯನ್ನು ತ್ಯಜಿಸಲು ಕಾರಣವಾದ ಕಥೆಯನ್ನು ಅರುಹದೆಯೇ ಅವರು ಕೇರಳದ ರಾಜನೊಬ್ಬನ ಮಡದಿಯ ಪ್ರೇಮವಂಚನೆಯ ಕಥೆಯನ್ನೂ, ಅದರಿಂದ ವೈರಾಗ್ಯವುಂಟಾಗಿ ಆ ಕಾರಣದಿಂದಾಗಿ ಆತ ಗುಪ್ತವಾಗಿ ಹಾಯಿ ಹಡಗನ್ನೇರಿ ಅರಬ್‌ ಪ್ರಾಂತ್ಯಕ್ಕೆ ತೆರಳಿ ಅಲ್ಲಿದ್ದ ಪವಿತ್ರ ಪ್ರವಾದಿಯವರ ಪಾದಗಳನ್ನು ಚುಂಬಿಸಿ ಸತ್ಯವಿಶ್ವಾಸಿಯಾಗಿ ಮರಳಿದ ಕಥೆಯನ್ನೂ ಹೇಳಿದ್ದರಷ್ಟೇ. ಆದರೆ, ಹಾಗೆ ಮರಳಿದ ಆ ರಾಜ ತನ್ನ ರಾಜ್ಯ ತಲುಪದೆ ಕಡಲಿನ ನಡುವಲ್ಲಿ ಯಾವುದೋ ವ್ಯಾಧಿಗೆ ಸಿಲುಕಿ ಮರಣಿಸಿದ್ದರು. ಹಾಗೆ ಮರಣವಪ್ಪಿದ ಅವರ ಪವಿತ್ರ ಸಮಾಧಿ ಅರಬ್‌ ಪ್ರಾಂತ್ಯದ ಇನ್ನೊಂದು ಭಾಗದಲ್ಲಿ ಈಗಲೂ ಇದೆಯಂತೆ. ಪವಿತ್ರ ಪ್ರವಾದಿ ಬದುಕಿದ್ದ ಮಕ್ಕಾವನ್ನು ಸಂದರ್ಶಿಸುವ ದ್ವೀಪವಾಸಿಗಳಲ್ಲಿ ಕೆಲವರು ಮರಣ ಹೊಂದಿದ ರಾಜನು ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಯಮನ್‌ ದೇಶದ ಪಟ್ಟಣವೊಂದರಲ್ಲಿರುವ ಆತನ ಸಮಾಧಿಯನ್ನು ನೋಡಿ ತಲೆಬಾಗಿ ಬರುತ್ತಾರೆ.

ಹಾಗೆ ಮಕ್ಕಾವನ್ನೂ ಸಂದರ್ಶಿಸಿ, ಆ ಪಟ್ಟಣಕ್ಕೂ ಭೇಟಿ ಕೊಟ್ಟು ಕೊಚ್ಚಿಯಲ್ಲಿ ವಿಮಾನವಿಳಿದು ವಾಪಸು ತಮ್ಮ ದ್ವೀಪಕ್ಕೆ ಹಡಗಲ್ಲಿ ಹೊರಟಿದ್ದ ಅವರು ಕೈಯಲ್ಲೊಂದು ತಸಿº ಜಪಮಾಲೆಯನ್ನು ಹಿಡಿದು ತಲೆಯಾಡಿಸುತ್ತ ಕುಳಿತಿದ್ದರು. ವರುಷಗಳಿಂದ ಜಪಮಾಲೆಯ ಮಣಿಗಳನ್ನು ಎಣಿಸಿ ಎಣಿಸಿ ಕೈಬೆರಳುಗಳೇ ನಡುಗುವಂತಾಗಿ ಹೋಗಿರುವ ಆಡು ಕೊಯ್ಯುವ ಮುದುಕ. ಸಾವಿರಾರು ವರ್ಷಗಳ ಹಿಂದೆ ಪತ್ನಿಯ ವಂಚನೆಗೆ ಒಳಗಾಗಿ ಪರದೇಶಿಯಾಗಿ ಪ್ರಾಣ ಬಿಡಬೇಕಾಗಿ ಬಂದ ತಮ್ಮ ಪೂರ್ವಜರ ರಾಜನ ಕುರಿತ ಚಿಂತೆ ಸಾವಿರಾರು ವರ್ಷಗಳ ನಂತರವೂ ಅವರ ಕಣ್ಣೊಳಗೆ ಸುಳಿದಾಡುತ್ತಿರುವಂತೆ ಕಾಣಿಸುತ್ತಿತ್ತು. ಆದರೆ, ಈ ಹಿನ್ನೆಲೆಯೇನೂ ಗೊತ್ತಿಲ್ಲದ ನಾನು ಅವರನ್ನು ಸುಮ್ಮನೆ ದೇಶಾವರಿಯಾಗಿ ಮಾತನಾಡಿಸಿಬಿಟ್ಟಿದ್ದೆ. ಆದರೆ, ಕಡಲ ನಡುವಲ್ಲಿ ಮೊರೆಯುತ್ತ ಸಾಗುತ್ತಿರುವ ಹಡಗಿನ ಪಯಣದ ವೇಳೆಯಲ್ಲಿ ಅವರು ಇಂಚಿಂಚಾಗಿ ಸಡಿಲಗೊಳ್ಳುತ್ತ ಇಡೀ ಲಕ್ಷದ್ವೀಪ ಸಮೂಹದ ಉಗಮವನ್ನೂ, ಮನುಷ್ಯವಾಸದ ಇತಿಹಾಸವನ್ನೂ ಮತ್ತು ಭಗ್ನಗೊಂಡ ತಮ್ಮ ಮೊದಲ ವಿವಾಹದ ಕೆಲವು ಸುಳಿವುಗಳನ್ನೂ ನೀಡಿದ್ದರು. ಆನಂತರ ದ್ವೀಪ ತಲುಪಿದ ಮೇಲೆ ಇನ್ನಷ್ಟು ವಿವರಗಳನ್ನೂ ನೀಡಿದ್ದರು. ಆ ವಿವರಗಳಿಂದ ನಾನು ಅರಿತ ವಿಷಯವೆಂದರೆ ಅವರ ಮೊದಲ ವಿವಾಹ ನೈರಾಶ್ಯದ ಹಿನ್ನೆಲೆಯಲ್ಲಿ ಖಳನಾಯಕನಂತೆ ಗೋಚರಿಸುತ್ತಿದ್ದವನು ನನ್ನ ಕಥಾನಾಯಕನಾದ ಮಹಾನುಭಾವರ ಹಾಗೆಯೇ ಇರುವುದು.

ಆ ಕಥೆಯ ವಿವರಗಳು ದೇವರ ದಯೆ ಇದ್ದರೆ ಮುಂದಿನವಾರ.

ಅಬ್ದುಲ್‌ ರಶೀದ್‌

ಟಾಪ್ ನ್ಯೂಸ್

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.