ರಾಯರ ವೃಂದಾವನ
Team Udayavani, Aug 11, 2019, 5:00 AM IST
ಉತ್ತರ ಕರ್ನಾಟಕದ ವಿಜಯಪುರದಲ್ಲಿ ನೆಲಮಾಳಿಗೆಯಲ್ಲಿ ಅಪೂರ್ವವಾದ ರಾಘವೇಂದ್ರ ಸ್ವಾಮಿಗಳ ವೃಂದಾವನವಿದೆ. ಆ. 16ರಿಂದ 18ರವರೆಗೆ ನಡೆಯಲಿರುವ ರಾಯರ ಆರಾಧನೋತ್ಸವದ ಪ್ರಯುಕ್ತ ಈ ಲೇಖನ. ಈ ಅಪೂರ್ವ ರಾಯರ ಮಠವನ್ನು ಪ್ರತಿಷ್ಠಾಪಿಸಿದ ಅವಧೂತತ್ವದಲ್ಲಿ ಪ್ರಸಿದ್ಧರಾದ ಶ್ರೀರಘುಪ್ರೇಮ ತೀರ್ಥರ ಆರಾಧನೋತ್ಸವವೂ ಆ. 30ರಿಂದ ಸೆ.1ರವರೆಗೆ ನಡೆಯುತ್ತಿದೆ. ಇವರಿಬ್ಬರ ಆರಾಧನೆಗೆ ಕೇವಲ 15 ದಿನಗಳ ಅಂತರವಿರುವುದು ವಿಶೇಷ.
ಶ್ರೀರಾಘವೇಂದ್ರಸ್ವಾಮಿಗಳ ಮಠ ಎಂದಾಕ್ಷಣ ಎಲ್ಲರಿಗೂ ಒಂದು ಸಾಮಾನ್ಯ ಚಿತ್ರಣ ಕಣ್ಣಮುಂದೆ ಬರುವುದು ಸಹಜ. ಉತ್ತರಕರ್ನಾಟಕದ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಎಲ್ಲ ರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ಭಿನ್ನವಾದ ಸನ್ನಿಧಾನವಿದೆ. ಇದು ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ತೆರಳುವಾಗ ಮೇಲ್ಮುಖವಾಗಿ ಮೆಟ್ಟಿಲು ಇರುವಂತೆ ಅವರೋಹಣ ಕ್ರಮದಲ್ಲಿ ಮೆಟ್ಟಿಲುಗಳ ಕೆಳಗೆ ಇದೆ.
36 ಅಡಿ ಆಳದಲ್ಲಿ ಗರ್ಭಗುಡಿ
ಭೂಮಿಯ ನೆಲ ಮಟ್ಟಕ್ಕಿಂತ 36 ಅಡಿ ಆಳದ ಗರ್ಭಗುಡಿಯಲ್ಲಿ ವೃಂದಾವನವಿದೆ. ಮೇಲ್ಭಾಗದಿಂದ 23 ಮೆಟ್ಟಿಲುಗಳಿವೆ. ಗರ್ಭಗುಡಿಯ ಗಾತ್ರ 6 -6 ಅಡಿ ಇದೆ. ಎತ್ತರ ಒಂದು ಕಡೆ 6.5 ಅಡಿ, ಇನ್ನೊಂದು ಕಡೆ 6 ಅಡಿ ಇದೆ. ವೃಂದಾವನ 3 ಅಡಿ ಎತ್ತರ, 2 ಅಡಿ ಅಗಲವಿದೆ.
ಆಳದಲ್ಲೂ ಸ್ಪಷ್ಟ ದರ್ಶನ
ಪ್ರತಿನಿತ್ಯ ಅರ್ಚಕರು ಮೆಟ್ಟಿಲುಗಳನ್ನು ಇಳಿದು ಕೆಳಗೆ ಹೋಗಿ ಪೂಜೆ ಸಲ್ಲಿಸಬೇಕು. ನೆಲ ಮಟ್ಟದಲ್ಲಿ ನಿಂತು ಕೆಳಗಿನ ವೃಂದಾವನವನ್ನು ಅತ್ಯಂತ ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಇದು ವಿಜಯಪುರದ ಬಬಲೇಶ್ವರ ರಸ್ತೆಯಲ್ಲಿದ್ದು ಜೋರಾಪುರ್‌ಪೇಟ್ ರಾಯರ ಮಠವೆಂದು ಕರೆಯುತ್ತಾರೆ. ಇದು ಸ್ಥಾಪನೆಯಾದದ್ದು 1930ರಲ್ಲಿ.
ತಹಶೀಲ್ದಾರರಿಗೇ ಕಿರುಕುಳ
ಪೆರೂರು ಗುಂಡೇರಾವ್ 1900-25ರ ವರೆಗೆ ಮಾಮಲಿದಾರ್ (ಈಗ ತಹಶೀಲ್ದಾರ್ ಹುದ್ದೆಗೆ ಸಮ) ಆಗಿದ್ದರು. ಇವರು ಕಾರವಾರದಲ್ಲಿ ಸೇವೆ ಸಲ್ಲಿಸುವಾಗ ಪತ್ನಿಯ ಆರೋಗ್ಯಕ್ಕಾಗಿ ವಿಜಯಪುರಕ್ಕೆ ಬಂದರು. ವಿಜಯಪುರದಲ್ಲಿ ಸರಕಾರದ ಭೂಮಿಯನ್ನು ಖರೀದಿಸಿ ಅಲ್ಲಿ ವಾಸಿಸಲು ತೊಡಗಿದರು. ಆದರೆ ನೆಗೆಟಿವ್ ಶಕ್ತಿಗಳ (ಭೂತ, ಪ್ರೇತ…) ಕಿರುಕುಳ ಅಲ್ಲಿತ್ತು. ಅದೇ ಸಮಯದಲ್ಲಿ ಅನೇಕ ಪವಾಡಗಳನ್ನು ತೋರಿಸಿದ ಅವಧೂತ ವಿರಕ್ತ ಯತಿ ಶ್ರೀರಘುಪ್ರೇಮತೀರ್ಥರಿಗೆ ಪೆರೂರು ಗುಂಡೇರಾಯರಂತಹ ಅನೇಕ ಶಿಷ್ಯರು ಇದ್ದರು. ಅವರು ಸಂಚಾರಕ್ಕೆ ಬಂದಾಗಲೆಲ್ಲ ಗುಂಡೇರಾಯರಲ್ಲಿ ಇರುತ್ತಿದ್ದರು. ಗುಂಡೇರಾಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಸ್ಥಳಶುದ್ಧಿಗಾಗಿ ಪರಿಹಾರಗಳನ್ನು ನಡೆಸಿದರು. ಆಗಲೇ ಗುಹೆಯ ರೀತಿಯಲ್ಲಿದ್ದ ಸ್ಥಳವನ್ನು ಸರಿಪಡಿಸಿ ಸ್ವಾಮೀಜಿಯವರು ಜಪ, ಧ್ಯಾನ ಮಾಡುತ್ತಿದ್ದರು.
ರಾಯರ ಪ್ರೇರಣೆ
ರಾಯಚೂರಿನಿಂದ ಬಂದವರೊಬ್ಬರು ಆಗಲೇ ವಿಜಯಪುರದಲ್ಲಿ ಒಂದು ರಾಘವೇಂದ್ರಸ್ವಾಮಿಗಳ ವೃಂದಾವನವನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ಕಾಲಕ್ರಮೇಣ ಪೂಜೆ-ಪುರಸ್ಕಾರ ಮಾಡಲು ಅನನುಕೂಲವಾದಾಗ ಅವರು ವೃಂದಾವನಕ್ಕೆ ವ್ಯವಸ್ಥೆ ಮಾಡಲು ಗುಂಡೇರಾಯರನ್ನು ಕೇಳಿಕೊಂಡರು. ಅನಂತರ ರಾತ್ರೋರಾತ್ರಿ ವೃಂದಾವನವನ್ನು ಸ್ಥಳದಲ್ಲಿಟ್ಟು ಹೋದರು. 10-12 ದಿನಗಳ ಕಾಲ ಆ ವೃಂದಾವನ ಹಾಗೆಯೇ ಹೊರಗೆ ಇತ್ತು. ಒಂದು ದಿನ ಗುಂಡೇರಾಯರಿಗೆ “ನನ್ನನ್ನು ಎಷ್ಟು ದಿನವೆಂದು ಬಿಸಿಲು, ಮಳೆಯಲ್ಲಿರಿಸುತ್ತಿ?’ ಎಂದು ಸ್ವಪ್ನ ಸೂಚನೆಯಾಯಿತು. ಗುಂಡೇರಾಯರು ಶ್ರೀರಘುಪ್ರೇಮತೀರ್ಥರಿಗೆ ವಿನಂತಿಸಿದ ಮೇರೆಗೆ ನೆಲಮಾಳಿಗೆಗೆ ಶಿಸ್ತುಬದ್ಧವಾದ ಮೆಟ್ಟಿಲು ವ್ಯವಸ್ಥೆ ಮಾಡಿದರು. ತಳಭಾಗದ ಗರ್ಭಗುಡಿ ಭಾಗಕ್ಕೆ ಇಟ್ಟಿಗೆಯಿಂದ ಕೂಡಿದ ಕೋಣೆಯಂತೆ ರಚಿಸಿದರು. ಗರ್ಭಗುಡಿಗೆ ಆಧಾರವಾಗಿ ಸಾಗವಾನಿ ಮರದ ಬೀಮುಗಳನ್ನು ಬಳಸಿದರು. ಅಲ್ಲಿ ರಾಯರ ವೃಂದಾವನವನ್ನು ಪ್ರತಿಷ್ಠಾಪನೆ ಮಾಡಿದರು. ಪೂಜೆಗಾಗಿ ವೃಂದಾವನದ ಹಿಂದೆ ಒಂದು ಬಾವಿಯನ್ನೂ ನಿರ್ಮಿಸಿದರು. “ಈ ಸ್ಥಳದಲ್ಲಿದ್ದ ಸಮಸ್ಯೆಗಳ ನಿವಾರಣೆಗೆ ರಾಯರ ವೃಂದಾವನ ಸ್ಥಾಪನೆಯೂ ಒಂದು ಭಾಗವಾಗಿತ್ತು. ಇವರ ತಪಃಶಕ್ತಿ ಇಂದಿಗೂ ಮಂತ್ರಾಲಯ ಬಳಿ ಅದೋನಿಯಲ್ಲಿರುವ ವೃಂದಾವನ ಸನ್ನಿಧಿಯಲ್ಲಿ ಕಾಣಬಹುದಾಗಿದೆ’ ಎಂದು ಶ್ರೀರಘುಪ್ರೇಮತೀರ್ಥರ ಕುರಿತ ಗ್ರಂಥದ ಸಂಪಾದಕ, ಸಂಶೋಧಕ ಡಾ|ಜಿ.ಕೆ.ನಿಪ್ಪಾಣಿ ಬೆಟ್ಟು ಮಾಡುತ್ತಾರೆ.
ನೆಲಮಾಳಿಗೆಯಲ್ಲಿ ರಾಯರ ಸನ್ನಿಧಾನವಿರುವುದರಿಂದ ಪ್ರದಕ್ಷಿಣೆ ಬರಲು ಆಗುವುದಿಲ್ಲ. ಹೀಗಾಗಿ ನೆಲಮಟ್ಟದಲ್ಲಿ ರಘುಪ್ರೇಮತೀರ್ಥರು ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ ವೃಂದಾವನದ ಒಂದು ಪ್ರತೀಕ ಮಾಡಿದ್ದಾರೆ. ಭಕ್ತರು ದೊಡ್ಡ ಕಿಟಕಿಯಿಂದ ವೃಂದಾವನವನ್ನು ದರ್ಶನ ಮಾಡಿ ಈ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಬರುತ್ತಾರೆ. ಈ ಮೂಲಕ ರಾಯರೊಂದಿಗೆ ಪ್ರತಿಷ್ಠಾಪಕರಿಗೂ ನಮಿಸಿದಂತಾಗುತ್ತಿದೆ.
ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಗುಂಡೇರಾಯರ ಮಗನ ಮಗ ಅಮೃತ್ ಪೆರೂರು ಮಠದ ಆಡಳಿತ ಸಮಿತಿ ಅಧ್ಯಕ್ಷರಾಗಿದ್ದಾರೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.