ರಾಗಿಣಿ ಶಾಸ್ತ್ರ
Team Udayavani, May 13, 2018, 6:00 AM IST
ವಿಧಾನ ಸಭೆ ಚುನಾವಣೆಗಳಿಗೂ ಮುನ್ನ ನಡೆದ ಪ್ರಚಾರದಲ್ಲಿ ಸುದೀಪ್, ದರ್ಶನ್, ಗಣೇಶ್, ಯಶ್ ಸೇರಿದಂತೆ ಕನ್ನಡದ ಹಲವು ಕಲಾವಿದರು ಭಾಗವಹಿಸಿದ್ದರು. ಆದರೆ, ಅಲ್ಲೆಲ್ಲೂ ರಾಗಿಣಿ ಕಾಣಿಸಲಿಲ್ಲಿ. ಇದಕ್ಕೂ ಮುನ್ನ ರಾಗಿಣಿ ಸಹ ಕೆಲವರ ಪರ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿಯೊಂದು ಇತ್ತು. ಆದರೆ, ಅಂತಿಮವಾಗಿ ರಾಗಿಣಿ ಯಾರ ಪರವಾಗಿಯೂ ಪ್ರಚಾರ ನಡೆಸಲೇ ಇಲ್ಲ. ಇಷ್ಟಕ್ಕೂ ರಾಗಿಣಿ ಯಾಕೆ ಪ್ರಚಾರ ಮಾಡಲಿಲ್ಲ? ಅವರಿಗೆ ಅವಕಾಶ ಸಿಗಲಿಲ್ಲವಾ ಅಥವಾ ಅವರೇ ಪ್ರಚಾರದಿಂದ ದೂರವಿದ್ದರಾ ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಎಲ್ಲರನ್ನೂ ಕಾಡಬಹುದು. ಈ ಕುರಿತು ರಾಗಿಣಿ ಅವರನ್ನು ಕೇಳಿದರೆ, “ಎಲ್ಲಾ ಪಕ್ಷಗಳಿಂದಲೂ ಆಹ್ವಾನ ಬಂದಿದ್ದುಂಟು. ಆದರೆ, ನಾನು ಹೋಗುವುದಿಲ್ಲ. ಸಿನಿಮಾ ಕೆಲಸ ಜಾಸ್ತಿ ಇದೆ. ಇಲ್ಲೇ ಬಿಝಿ ಇರುವಾಗ, ಪ್ರಚಾರಕ್ಕೆಲ್ಲಿ ಹೋಗಲಿ?’ ಎಂಬ ಉತ್ತರ ಬರುತ್ತದೆ.
ಇಷ್ಟಕ್ಕೂ ರಾಗಿಣಿ ಯಾವುದರಲ್ಲಿ ಬಿಝಿಯಾಗಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ಕಳೆದ ವಾರ ಅವರ ಅಭಿನಯದ ಕಿಚ್ಚು ಎಂಬ ಚಿತ್ರ ಬಿಡುಗಡೆಯಾಗಿದ್ದು ಬಿಟ್ಟರೆ, ಕಳೆದ ಒಂದೂವರೆ ವರ್ಷಗಳಿಂದ ಅವರ ಅಭಿನಯದ ಯಾವ ಚಿತ್ರಗಳೂ ಬಿಡುಗಡೆ ಯಾಗಿಲ್ಲ. ಇದನ್ನು ಒಪ್ಪಿಕೊಳ್ಳುವ ಅವರು, ತಾವು ಇಷ್ಟು ದಿನ ಏನು ಮಾಡುತ್ತಿದ್ದರು ಎಂಬುದನ್ನು ಬಿಚ್ಚಿಡುತ್ತಾರೆ. “ಕಳೆದ ಒಂದೂವರೆ ವರ್ಷದಿಂದ ಯಾವ ಚಿತ್ರಗಳೂ ಬಂದಿಲ್ಲ. ಆದರೆ, ನಾನು ನಿರಂತರವಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಅದರ ಪರಿಣಾಮ, ಈ ವರ್ಷ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕಿಚ್ಚು ಬಿಡುಗಡೆಯಾಗಿದೆ. ಮುಸ್ಸಂಜೆ ಮಹೇಶ್ ನಿರ್ದೇಶನದ ಎಂಎಂಸಿಎಚ್ ಎಂಬ ಚಿತ್ರ ಪೂರ್ಣವಾಗಿದೆ. ಅವರದೇ ನಿರ್ದೇಶನದ ಇನ್ನೊಂದು ಚಿತ್ರ ನಾನೇ ನೆಕ್ಸ್ಟ್ ಸಿಎಂ ಕೂಡ ಬಿಡುಗಡೆಯ ಹಾದಿಯಲ್ಲಿದೆ. ಪಿ.ಸಿ. ಶೇಖರ್ ನಿರ್ದೇಶನದ ದಿ ಟೆರರಿಸ್ಟ್ ಚಿತ್ರೀಕರಣ ಇತ್ತೀಚೆಗೆ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಶರಣ್ ಜೊತೆಗೆ ಅಧ್ಯಕ್ಷ ಇನ್ ಅಮೇರಿಕ ಎಂಬ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದು ಮಲಯಾಳಂನ ಟು ಕಂಟ್ರೀಸ್ ಚಿತ್ರದ ರಿಮೇಕ್. ಇನ್ನು, ಪ್ರೇಮ್ ಜೊತೆಗೆ ಗಾಂಧಿಗಿರಿ ಚಿತ್ರವೂ ಇದೆ. ಇನ್ನು ಕಿರುತೆರೆಯಲ್ಲಿ ಈಗಷ್ಟೇ ಒಂದು “ಕಾಮಿಡಿ’ ಶೋ ಮುಗಿಸಿದ್ದೇನೆ. ಇನ್ನೂ ಎರಡೂರು ಚಾನೆಲ್‌ಗಳ ಜೊತೆ ಮಾತುಕತೆ ನಡೆಯುತ್ತಿದೆ. ಒಳ್ಳೆಯ ಕಾರ್ಯಕ್ರಮವಿದ್ದರೆ ಮಾಡುತ್ತೀನಿ’ ಎಂದು ಪಟ್ಟಿ ಕೊಡುತ್ತಾರೆ ಅವರು.
ಅಧ್ಯಕ್ಷ ಇನ್ ಅಮೆರಿಕ ಚಿತ್ರವೊಂದನ್ನು ಹೊರತುಪಡಿಸಿದರೆ, ಇತ್ತೀಚೆಗೆ ರಾಗಿಣಿ ಅಭಿನಯಿಸುತ್ತಿರುವುದೆಲ್ಲಾ ನಾಯಕಿ ಪ್ರಧಾನ ಚಿತ್ರಗಳಲ್ಲೇ. ಯಾಕೆ, ರಾಗಿಣಿಗೆ ಹೀರೋ ಜೊತೆಗೆ ಮರ ಸುತ್ತುವುದು ಸಾಕಾಗಿದೆಯಾ ಎಂಬ ಪ್ರಶ್ನೆ ಅವರ ಮುಂದಿಟ್ಟರೆ, “ನಾನು ಬೇಕೂ ಅಂತೇನೂ ನಾಯಕಿ ಪ್ರಧಾನ ಚಿತ್ರ ಮಾಡುತ್ತಿಲ್ಲ. ಹೀರೋ ಜೊತೆ ಮಾಡುವುದಿಲ್ಲ ಅಂತ ಎಲ್ಲೂ ಹೇಳಿಲ್ಲ. ನನಗೆ ಬಂದ ಒಳ್ಳೆಯ ಕಥೆಗಳನ್ನು ಒಪ್ಪಿಕೊಂಡು ಅಭಿನಯಿಸುತ್ತಿದ್ದೇನೆ. ಬಂದವೆಲ್ಲವೂ ನಾಯಕಿ ಪ್ರಧಾನ ಚಿತ್ರಗಳೇ ಆದ್ದರಿಂದ, ಅಂತಹ ಚಿತ್ರಗಳಲ್ಲೇ ಹೆಚ್ಚು ನಟಿಸಿದೆ. ಸುಮ್ಮನೆ ಯಾವುದೋ ಸಿನೆಮಾ ಮಾಡಬೇಕು, ದೊಡ್ಡ ಹೀರೋ, ದೊಡ್ಡ ನಿರ್ದೇಶಕರ ಚಿತ್ರದಲ್ಲಿ ನಾನಿರಬೇಕು ಅಂತ ಬಯಸುವುದಿಲ್ಲ. ನನಗೆ ಸಿಕ್ಕ ಅವಕಾಶಗಳಲ್ಲಿ ಚೆನ್ನಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂಬ ಉತ್ತರ ಅವರಿಂದ ಬರುತ್ತದೆ.
ಇನ್ನು ರಾಗಿಣಿ ಕನ್ನಡವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳ ಚಿತ್ರಗಳಲ್ಲೂ ನಟಿಸಿದ್ದರು. ಆದರೆ, ಈಗ ಸದ್ಯ ಬೇರೆ ಭಾಷೆಯ ಚಿತ್ರಗಳಿಲ್ಲವಂತೆ. “ನನಗೆ ಭಾಷೆ ಮುಖ್ಯವಲ್ಲ. ಒಳ್ಳೆಯ ಚಿತ್ರ ಮಾಡಬೇಕೆಂಬ ಉದ್ದೇಶವಿದೆ. ಈಗ ಬಿಡುಗಡೆಗೆ ಒಂದಿಷ್ಟು ಒಳ್ಳೆಯ ಚಿತ್ರಗಳಿವೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಬೇರೆ ಭಾಷೆಗಳಲ್ಲೂ ಅಭಿನಯಿಸುತ್ತೇನೆ’ ಎನ್ನುತ್ತಾರೆ ಅವರು.