ಗೆಳೆಯ ಗಿರಡ್ಡಿ ಗೋವಿಂದರಾಜರ ನೆನೆದು
Team Udayavani, May 20, 2018, 10:12 AM IST
ಕನ್ನಡದ ಪ್ರಮುಖ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜ ಇತ್ತೀಚೆಗೆ ತೀರಿಕೊಂಡಿದ್ದಾರೆ. ಧಾರವಾಡದ ಪರಿಸರದಲ್ಲಿ ಕೀರ್ತಿನಾಥ ಕುರ್ತಕೋಟಿಯವರ ಬಳಿಕ ವಿಮರ್ಶನ ಪರಂಪರೆಯನ್ನು ಮುಂದುವರಿಸಿದ ಗಿರಡ್ಡಿ ಗೋವಿಂದರಾಜ ಅವರು “ಸಾಹಿತ್ಯಸಂಭ್ರಮ’ದಂಥ ಹೊಸಮಾದರಿಯ ಸಾಹಿತ್ಯಸಮ್ಮೇಳನವನ್ನು ಆಯೋಜಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದವರು. ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿ ಎಂಬ “ತ್ರಿಮೂರ್ತಿಗಳು’ ಕನ್ನಡ ಸಾಹಿತ್ಯ ವಲಯದಲ್ಲಿಯೂ ತುಂಬ ಜನಪ್ರಿಯ. ಸ್ನೇಹ-ಮುನಿಸುಗಳೊಂದಿಗೆ ಸದಾಕಾಲ ಜಾಗೃತ ಮನಸ್ಥಿತಿಯಲ್ಲಿದ್ದ ಇವರು “ಸಂಕ್ರಮಣ’ ದಂಥ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದವರು. ಈ ಮೂವರ ಸ್ನೇಹಕ್ಕೆ 60 ವರ್ಷಗಳ ಚರಿತ್ರೆ ! ಗಿರಡ್ಡಿ ಗೋವಿಂದರಾಜ ಈಗಿಲ್ಲ. ಈಗಲೂ ಸಾಹಿತ್ಯವಲಯದಲ್ಲಿ ಕ್ರಿಯಾಶೀಲರಾಗಿರುವ ಚಂದ್ರಶೇಖರ ಪಾಟೀಲರನ್ನು ಉಲ್ಲೇಖೀಸಿಕೊಂಡು, ಸಿದ್ಧಲಿಂಗ ಪಟ್ಟಣಶೆಟ್ಟಿಯವರು ತಮ್ಮ “ತ್ರಿ-ಕೂಟ’ ಸಾಗಿಬಂದ ಹಾದಿಯನ್ನೊಮ್ಮೆ ತಿರುಗಿನೋಡುತ್ತಿದ್ದಾರೆ…
(ಸಿದ್ಧಲಿಂಗ ಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ)
ಗಿರಡ್ಡಿ ಎಂದೂ ಯಾರನ್ನೂ ನೋಯಿಸಿದವನಲ್ಲ. ಅವನ ಮಾತು, ನಡತೆ, ಧ್ವನಿಯಲ್ಲಿ, ಗೆಳೆತನ ಮತ್ತು ಸಾಹಿತ್ಯಿಕ ಸಂಬಂಧಗಳ ನಿರ್ವಹಣೆಯಲ್ಲಿ ಸಹ, ಒಂದು ಬಗೆಯ ನಿರ್ಲಿಪ್ತತೆ ಕಂಡುಬರುತ್ತಿತ್ತು. ಕೆಲವು ಪ್ರಸಂಗಗಳಲ್ಲಿ ತನಗಾದ ನೋವನ್ನು ಹೇಳುವಾಗಲೂ ಯಾರಿಗೂ ಬೇಸರವಾಗದ ಹಾಗೆಯೇ, ಅದನ್ನು ಸ್ಪಷ್ಟವಾಗಿ, ದಟ್ಟವಾಗಿ ನಮೂದಿಸುವ ಪದಾವಳಿಯನ್ನು ಅವನು ರೂಢಿಸಿಕೊಂಡಿದ್ದ. ನಮ್ಮ ಸಮಕಾಲೀನರಲ್ಲಿ ಇಂಥ ಸಾಮಾಜಿಕ ನೇರ ನಡತೆಗೆ, ಶಬ್ದಸಂಯಮಕ್ಕೆ ಹೆಸರಾಗಿದ್ದ ಗಿರಡ್ಡಿ ಮೊನ್ನೆ ಮೇ 11ರಂದು ಮೂರುಸಂಜೆಯ ಹೊತ್ತು ದಿಢೀರಾಗಿ ಯಾರಿಗೂ ಏನೂ ಹೇಳದೇ ಮೌನವಾಗಿ ನಿರ್ಗಮಿಸಿದ ರೀತಿ ಮಾತ್ರ ಅವನ ಸ್ವಭಾವಕ್ಕೆ ವಿರುದ್ಧವಾದುದಾಗಿತ್ತು, ಆಘಾತಕರವಾಗಿತ್ತು.
ಅವನೊಂದಿಗೆ ನಿಕಟ ಒಡನಾಟ ಹೊಂದಿದ್ದ ಧಾರವಾಡದ ಅವನ ಕೆಲವು ಶಿಷ್ಯರು, ಯುವ ಸಾಹಿತಿಗಳು ಸಹ ಅವನ ಜೊತೆ ಮುಕ್ತವಾಗಿ ಚರ್ಚಿಸಲು, ಮಾತಾಡಲು ಸಾಧ್ಯವಾಗದಂಥ ವಿದ್ವತ್ತು, ಓದಿನ ವ್ಯಾಪ್ತಿ, ವಿಮರ್ಶನ ಬುದ್ಧಿ, ಮಿತಭಾಷೆ, ಸ್ವಭಾವದ ಗಾಂಭೀರ್ಯ ಅವನನ್ನು ಆವರಿಸಿದ್ದುವು. ಆದರೆ ಒಮ್ಮೊಮ್ಮೆ ತನ್ನ ವಿಶ್ವಾಸಿಕರ, ಆತ್ಮೀಯರ ಬಳಗದಲ್ಲಿ ಕುಳಿತಾಗ, ತಾನಾಗಿ ಯಾರ ಬಗೆಗಾದರೂ ನಿರ್ದುಷ್ಟ ಚೇಷ್ಟೆ ಮಾಡಿ ಮನಸಾರೆ ನಗುತ್ತಿದ್ದ. ಭಾವುಕತೆ, ಚಾಂಚಲ್ಯಗಳು ತನ್ನ ಕತೆ, ಕವಿತೆಗಳಲ್ಲಿ ಸಹ ಸುಳಿಯದಂತೆ ನೋಡಿಕೊಂಡಿದ್ದ.
ಕಳೆದ ಐದು ದಶಕಗಳಲ್ಲಿ ಕತೆ, ಕಾದಂಬರಿ, ಲಲಿತಪ್ರಬಂಧ, ಕಾವ್ಯ, ಪ್ರಾಚೀನ ಸಾಹಿತ್ಯ, ವಿಮಶಾìಲೋಕ, ವಚನ ವಾಯ, ನಾಟಕಸಾಹಿತ್ಯ, ಭಾರತೀಯ ಮತ್ತು ಪಾಶ್ಚಿಮಾತ್ಯ ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ತನ್ನ ವಿಶಿಷ್ಟ ಧ್ವನಿಯನ್ನು ಬಿತ್ತರಿಸಿದ್ದ ಗಿರಡ್ಡಿಗೆ ಈಚೆಗೆ ತನ್ನ ಚಿಂತನೆ, ಭಾಷೆ ಮತ್ತು ವಿಮರ್ಶೆಯ ಪರಿಭಾಷೆಗಳು ಸಮಕಾಲೀನಪ್ರಜ್ಞೆಯ ಜೊತೆಗೆ ಹೆಜ್ಜೆ ಹಾಕಲು ಸೋಲುತ್ತಿವೆ ಅನಿಸತೊಡಗಿತ್ತು. ಹೀಗಾಗಿ, ತನ್ನ ಅಭಿವ್ಯಕ್ತಿಯ ಹೊಸ ಹಾದಿಗಳಿಗಾಗಿ ತಡಕಾಡುತ್ತಿದ್ದ ಅನಿಸುತ್ತದೆ. ಆ ಕಾರಣವಾಗಿಯೇ ಅಜಮಾಸು ಒಂದು ವರ್ಷದ ಹಿಂದಿನಿಂದ ಫೇಸ್‌ಬುಕ್ ಎಂಬ ನವಮಾಧ್ಯಮವನ್ನು ಬಳಸುತ್ತ ಸಮಕಾಲೀನರು ಮತ್ತು ತನ್ನನ್ನು ಒಪ್ಪುವ ಕೆಲ ಯುವ ಮಿತ್ರರೊಂದಿಗೆ ಸಲೀಸಾಗಿ ಸಂವಾದದಲ್ಲಿ ತೊಡಗಿದ್ದ.
ಆದರೆ ತನ್ನ ಕಾಲದಲ್ಲಿ ಅವನು ಸವೆಸಿದ ಹಾದಿಗಳು, ಕಲ್ಪಿಸಿದ ಪಂಥಗಳು, ಗಳಿಸಿದ ಸಿದ್ಧಿಗಳು ಮಾತ್ರ ಐತಿಹಾಸಿಕವಾಗಿ ಮಹತ್ವದ ಸಾಧನೆಗಳೇ ಆಗಿದ್ದುವು ಎಂಬುದನ್ನು ನಿರಾಕರಿಸಲಾಗದು. ಒಬ್ಬ ಲೇಖಕ ಬದುಕಿ¨ªಾಗ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅವನು ನೀಡಿದ ಕೊಡುಗೆಯನ್ನು ನೇರವಾಗಿ, ನಿಷ್ಠುರವಾಗಿ ವಿಮರ್ಶಿಸುವುದು, ಬರೆಯುವುದು ಸ್ವಲ್ಪ ಕಷ್ಟದ ಕೆಲಸವೆನಿಸುತ್ತದೆ. ಆದರೆ, ಅವನು ಗತಿಸಿದ ನಂತರದ ಕಾಲದಲ್ಲಿ ಅವನನ್ನು ಕುರಿತು ಬರೆಯುವವರನ್ನು, ವಿಮರ್ಶಿಸುವವರನ್ನು ಯಾರೂ ತಡೆಯಲಾಗದು.
ಕನ್ನಡ ಸಾರಸ್ವತ ಲೋಕದಲ್ಲಿ ಉತ್ತರಕರ್ನಾಟಕ ಭಾಗದಿಂದ ಬಂದ ಗಿರಡ್ಡಿಗೆ ಸಿಕ್ಕಷ್ಟು ಘನ ಪ್ರಶಸ್ತಿ ಉಳಿದವರಿಗೆ ಸಿಕ್ಕಿದ್ದು ಕಡಿಮೆ. ರಾಜ್ಯಮಟ್ಟದ ಮತ್ತು ಕೇಂದ್ರ ಸ್ತರದ ಸಾಹಿತ್ಯಿಕ ಸಂಸ್ಥೆಗಳ ಸದಸ್ಯತ್ವಗಳು, ಅಧ್ಯಕ್ಷ ಪದಗಳು, ಉನ್ನತ ಪುರಸ್ಕಾರಗಳಿಗಾಗಿ ಇರುವ ಸಮಿತಿಗಳ ನೇತೃತ್ವಗಳು ಮುಂತಾದುವು ಅವನಿಗೆ ಲಭಿಸಿದ್ದುವು. ಅಲ್ಲಿ ನಿರಾತಂಕವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಮಾಧಾನ ಅವನಿಗಿತ್ತು. ಅದಕ್ಕೆ ಪ್ರತಿಫಲವಾಗಿ ಸಾಕಷ್ಟು ಉನ್ನತ ಪ್ರಶಸ್ತಿ, ಪುರಸ್ಕಾರಗಳೂ ಅವನಿಗೆ ಸಿಕ್ಕಿದ್ದುವು.
ಕಳೆದ 5-6 ವರ್ಷಗಳಲ್ಲಿ ಮನೋಹರ ಗ್ರಂಥಮಾಲೆಯ ಸಹಕಾರ, ಸಹಾಯದೊಂದಿಗೆ ಅವನು ನಿರ್ವಹಿಸಿದ ಧಾರವಾಡ ಸಾಹಿತ್ಯ ಸಂಭ್ರಮ ಮಾತ್ರ ಗಿರಡ್ಡಿಗೆ ಅಪಾರ ಖ್ಯಾತಿ ನೀಡಿತ್ತು. ಅಲ್ಲಿ ಸಹ ತನ್ನ ಸಂಗಾತಿಗಳು, ಹಿರಿಯರು, ಶಿಷ್ಯಮಂಡಳಿ ಕೂಡಿದ ಒಂದು ಪ್ರಬುದ್ಧ ಸಲಹಾ ಸಮಿತಿಯನ್ನು ರಚಿಸಿಕೊಂಡು, ಎಲ್ಲರ ಅಭಿಪ್ರಾಯಗಳನ್ನು ಮನ್ನಿಸುತ್ತಲೇ ತನ್ನ ಸೂತ್ರಗಳನ್ನು ಹೆಣೆಯುವ ಕೌಶಲವನ್ನು ಮೆರೆಯುತ್ತಿದ್ದ. ಸಂಭ್ರಮವು ಕನ್ನಡ, ಕರ್ನಾಟಕದ ಗಡಿಗಳನ್ನು ದಾಟಿ, ಜೈಪುರ ಸಾಹಿತ್ಯೋತ್ಸವಕ್ಕಿಂತ ಭಿನ್ನ ಬಗೆಯ ತನ್ನತನವನ್ನು ತೋರಿದ ನಮ್ಮ ದೇಶದ ಮಹತ್ವದ ಸಂಸ್ಥೆಯಾಗಿ ಬೆಳೆದಿತ್ತು. ಅದರಿಂದ ಆರ್ಥಿಕವಾಗಿ ಯಾವುದೇ ಹೆಚ್ಚಿನ ಅನುಕೂಲ ಅಥವಾ ನೆರವು ಸರಕಾರದಿಂದ, ಇತರ ಮೂಲಗಳಿಂದ ಸಿಗದಿ¨ªಾಗಲೂ ಮನೋಹರ ಗ್ರಂಥಮಾಲೆಯ ಸಮೀರ ಜೋಶಿ ಮತ್ತು ಅವನ ಬೆಂಬಲಕ್ಕಿದ್ದ ಗೆಳೆಯರ ಸಹಾಯವನ್ನು ಅವನು ಬಹುವಾಗಿ ನಂಬಿದ್ದ.
ಮನೋಹರ ಗ್ರಂಥಮಾಲೆಯ ಒಡನಾಟವನ್ನು ಮೊದಲಿನಿಂದಲೂ ಹೊಂದಿದ್ದ ಗಿರಡ್ಡಿ ನಮ್ಮ ಭಾಗದಲ್ಲಿ ಕೀರ್ತಿನಾಥ ಕುರ್ತಕೋಟಿಯವರ ನಂತರ, ಭಿನ್ನ ರೀತಿಯ ಒಬ್ಬ ಸಮತೂಕದ ವಿಮರ್ಶಕನಾಗಿ ರೂಪುಗೊಂಡಿದ್ದ. ಜಿ.ಬಿ. ಜೋಶಿ ಇ¨ªಾಗಲೇ ಮನ್ವಂತರ ನಿಯತಕಾಲಿಕದಲ್ಲಿ ತನ್ನ ವೈಚಾರಿಕ ವಿಮಶಾì ಲೇಖನಗಳನ್ನು ಪ್ರಕಟಿಸುತ್ತಿದ್ದ. ಅದಕ್ಕಾಗಿ ಅವನು ಸಾಕಷ್ಟು ಶ್ರಮವಹಿಸಿ ತನ್ನ ಓದಿನ ಹಿನ್ನೆಲೆಯನ್ನು ಬಳಸಿಕೊಳ್ಳುತ್ತಿದ್ದ. ವಿದ್ಯಾರ್ಥಿ ಜೀವನದಿಂದಲೇ ಇಂಥ ಗಂಭೀರ ಓದು, ಬರವಣಿಗೆಯ ಕಡೆಗೆ ಅವನಿಗೆ ಒಲವಿತ್ತು. ಅತ್ಯಂತ ವಿರಳ ಪುಸ್ತಕಗಳನ್ನು ಕೊಳ್ಳುವ, ಸಂಗ್ರಹಿಸುವ ಅಭ್ಯಾಸ ಮೊದಲಿನಿಂದಲೂ ಇತ್ತು. ಈಗಲೂ ಧಾರವಾಡದಲ್ಲಿ ಯಾವುದೇ ಸಾಹಿತಿಯ ಮನೆ ಅಥವಾ ಗ್ರಂಥಾಲಯದಲ್ಲಿ ಇರದಂಥ ಅಪರೂಪದ ಶ್ರೇಷ್ಠ ವಿರಳ ಕೃತಿಗಳು ಅವನ ಸಂಗ್ರಹದಲ್ಲಿವೆ.
ಕೊನೆಯ ಭೇಟಿ
ಗಿರಡ್ಡಿ ತನ್ನ ಆರೋಗ್ಯದ ಬಗ್ಗೆ ಮನೆಯಲ್ಲಿ ಸಹ ನೇರವಾಗಿ ಹೇಳಿದವನಲ್ಲ. ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಬಾಧಿಸುವ ರಕ್ತದೊತ್ತಡಕ್ಕೆ, ಮಧುಮೇಹಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ಆದರೂ ಈಚೆಗೆ ನಡೆಯುವಾಗ ಸ್ವಲ್ಪ ಜೋಲಿ ಹೋಗುತ್ತದೆ ಎನ್ನುತ್ತಿದ್ದ. ಒಮ್ಮೆ “”ನೀ ಹೆಂಗ ಅದಿ?” ಎಂದು ಕೇಳಿದ. “”ನನಗೂ ಆಗಾಗ ಹಾಗೇ ಆಗುತ್ತದೆ, ಆದರೆ ನಾನು ಈಗ ಒಂದು ಕೋಲು ಹಿಡಿದು ನಡೆಯುವುದನ್ನು ರೂಢಿಸಿಕೊಂಡಿದ್ದೇನೆ” ಅಂದೆ. “”ಅದೆಲ್ಲ ಆಗೂದಿಲ್ಲ ತಗಿ, ನನಗ ಸಂಜೀ ಮುಂದ ಮಾತ್ರ ಜಾಸ್ತಿ ಜೋಲಿ ಹೋಗತೈತಿ. ಅದಕ್ಕಾಗಿ ಸಂಜಿ ಆದ ಮ್ಯಾಲ ನಾ ಹೊರಗ ಹೋಗೂದ— ಬಿಟ್ಟೇನಿ” ಅಂದ. ಒಂದು ವರ್ಷದ ಈಚೆಗೆ ಎಲ್ಲಿ ಹೋದರೂ ಮಧ್ಯಾಹ್ನದ ಒಳಗಾಗಿ ಮನೆಯಲ್ಲಿ ಉಳಿಯುವುದನ್ನು ರೂಢಿಸಿಕೊಂಡಿದ್ದ. ನಡೆಯುವಾಗ ದೇಹ ಒಂದು ಕಡೆ ವಾಲುವ ತೊಂದರೆಗೆ ಇದು ಗಿರಡ್ಡಿ ಕಂಡುಕೊಂಡಿದ್ದ ಉಪಾಯವಾಗಿತ್ತು.
ಎರಡು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ತಂಗಿದ್ದ ಅಪರ್ಣಾ ಮತ್ತು ನಾಗರಾಜ ವಸ್ತಾರೆ ಅಪೇಕ್ಷೆ ಪಟ್ಟಿದ್ದರಿಂದ, ಅವರೊಂದಿಗೆ ಗಿರಡ್ಡಿಯ ಮನೆಗೆ ಹೋಗಿ¨ªೆವು. ಆ ನಂತರ ಅಲ್ಪ ಸಮಯದ ನಂತರವೇ ಮಿತ್ರರೊಬ್ಬರು ಆಯೋಜಿಸಿದ್ದ ಔತಣಕೂಟದಲ್ಲಿ ಕೂಡಿ ಊಟ ಮಾಡಿ¨ªೆವು. ಇದಾದ ನಂತರ ಏಪ್ರಿಲ್ 1ರಂದು ನನ್ನ ಪುಸ್ತಕ ಗಿರಿಜವ್ವನ ಮಗ ಬಿಡುಗಡೆಗೆ ಬಂದಿದ್ದ. ಇವು ನಮ್ಮ ಕೊನೆಯ ಮೂರು ಮುಖತಃ ಭೆಟ್ಟಿಗಳಾಗಿದ್ದುವು. ನಾನು ಕಳಿಸಿದ ಪುಸ್ತಕ ತಲುಪಿದ್ದುದನ್ನು ಹೇಳಿ, ಬರೊಬ್ಬರಿ ಒಂದು ತಿಂಗಳಿಗೆ, ಮೇ 2ರಂದು ಫೋನ್‌ಸಂದೇಶ ಕಳಿಸಿದ್ದ. ಇದು ನಮ್ಮ ಕೊನೆಯ ಕೊಂಡಿ.
ಕೆಲಕಾಲದಿಂದ ಅವನಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಅದಕ್ಕೆ ಒಂದು ಉತ್ತಮ ಶ್ರವಣಯಂತ್ರವನ್ನು ಕೊಂಡು ಬಳಸುತ್ತಿದ್ದ. ಅದು ಅಗತ್ಯಕ್ಕಿಂತ ಹೆಚ್ಚು ದನಿ ಮಾಡಿ ಕೇಳಿಸುತ್ತದೆ ಎಂದು ಅದನ್ನು ಬಳಸುವುದನ್ನೇ ಕಡಿಮೆ ಮಾಡಿದ. ಒಮ್ಮೆ ನಮ್ಮ ಚಂಪಾ ಇದನ್ನು ತನ್ನ ಚೇಷ್ಟೆಗೆ ಬಳಸಿ, “”ಶೆಟ್ಟಿಗೆ ಕಣ್ಣು ಕಾಣಿಸುವುದಿಲ್ಲ, ನಿನಗೆ ಕಿವಿ ಕೇಳಿಸುವುದಿಲ್ಲ” ಎಂದು ಹೇಳಿದ್ದ. ತತ್‌ಕ್ಷಣ ಗಿರಡ್ಡಿ, ಚಂಪಾನಿಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿದ್ದುದನ್ನು ನೆನೆಸಿ, “”ನಿನಗೆ ಹೃದಯವೇ ಇಲ್ಲ” ಎಂದು ಗಂಭೀರ ಚೇಷ್ಟೆಯನ್ನೇ ಮಾಡಿದ್ದ. ನಮ್ಮ ನಡುವೆ ಆಗಾಗ ಇಂಥ ಮಾತು, ವಿಮರ್ಶೆ, ಚೇಷ್ಟೆ, ತಿವಿತಗಳು ನಡೆಯುತ್ತಿದ್ದರೂ ನಮ್ಮ ನಡುವಣ ಸ್ನೇಹ ಮಾತ್ರ ಅಬಾಧಿತವಾಗಿತ್ತು. ಮೊನ್ನೆ ಗಿರಡ್ಡಿ ಗತಿಸಿದ ಸುದ್ದಿ ತಿಳಿದ ಕೆಲವೇ ಕ್ಷಣಗಳಲ್ಲಿ ಅತ್ಯಂತ ಖನ್ನನಾಗಿ, ಚಂಪಾ ನನಗೆ ಫೋನಿಸಿದ. ತಾಸಿಗೊಮ್ಮೆ ವಿಚಾರಿಸುತ್ತಿದ್ದ. ಕೊನೆಗೆ, 12ರಂದು ಅಬ್ಬಿಗೇರಿಗೆ ಹೋಗಿ ತನ್ನ ಶ್ರದ್ಧಾಂಜಲಿ ಸಲ್ಲಿಸಿ ಬಂದ.
ಒಂದೆರಡು ಪ್ರಸಂಗಗಳು
ರೋಣ ತಾಲೂಕಿನ ಅಬ್ಬಿಗೇರಿಯ “ಗೋವಿಂದಪ್ಪ ಅಂದಾನೆಪ್ಪ ಗಿರಡ್ಡಿಯವರ’ ಎಂಬ ನನ್ನ ಗೆಳೆಯ “ಗಿರಡ್ಡಿ ಗೋವಿಂದರಾಜ’ ಎಂಬ ಹೆಸರಿನಿಂದ ಕನ್ನಡ ಸಾರಸ್ವತ ಲೋಕದ ಒಂದು ಒಂದು ಮಹತ್ವದ ಬೆಳಕಾಗಿ ಹೊಳೆದ ವಿವರಗಳನ್ನು ನಾನು ಇಲ್ಲಿ ಚರ್ಚಿಸುವುದಿಲ್ಲ. ಬದಲಾಗಿ ಅವನೊಡನೆ ನನ್ನ ಒಡನಾಟದ ಒಂದೆರಡು ಪ್ರಸಂಗಳನ್ನು ಮಾತ್ರ ಹೇಳುತ್ತೇನೆ.
ಕಳೆದ ಅರವತ್ತೂಂದು ವರ್ಷಗಳಿಂದ ನಾವು ಹತ್ತಿರದ ಗೆಳೆಯರು. 1957ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ನಾನು, ಗಿರಡ್ಡಿ ಎಫ್ವೈ ಆರ್ಟ್ಸ್ ಕ್ಲಾಸಿನಲ್ಲಿ ಕಲಿಯುತ್ತಿ¨ªೆವು. ಚಂಪಾ ನಮಗಿಂತ ಒಂದು ವರ್ಷ ಮುಂದೆ, ಇಂಟರ್‌ಆರ್ಟ್ಸ್ದಲ್ಲಿದ್ದ. ಮೂವರೂ ಒಂದೇ ವಯಸ್ಸಿನವರು, ಸಮಾನ ಮನಸ್ಕರು ಆಗಿದ್ದರಿಂದ ಬೇಗ ಹತ್ತಿರ ಬಂದೆವು. ಕರ್ನಾಟಕ ಕಾಲೇಜಿನ ಆಗಿನ ಸಾಹಿತ್ಯಿಕ ವಾತಾವರಣದಲ್ಲಿ ಬೇಗ ಬೆಳಕಿಗೆ ಬರತೊಡಗಿದೆವು. ವಿ.ಕೃ. ಗೋಕಾಕರು ನಮ್ಮ ಪ್ರಾಚಾರ್ಯರು. ಅವರು ಮತ್ತು ವಿ.ಎಂ. ಇನಾಮದಾರ, ಸ.ಸ. ಮಾಳವಾಡ, ಎಸ್.ಆರ್. ಮಳಗಿ, ಟಿ.ಆರ್. ರಾಜಶೇಖರಯ್ಯ, ಎಂ.ಕೆ. ನಾಯಕ, ಪ್ರೊ. ಆರ್ಮಾಂದೊ ಮೆನೆಝಿಸ್ ಮುಂತಾದವರು ನೀಡಿದ ಪ್ರೋತ್ಸಾಹ ನಮಗೆ ಈವರೆಗೂ ದಾರಿದೀಪವಾಗಿದೆ ಎಂಬುದನ್ನು ನಾವು ಮೂವರೂ ಕೃತಜ್ಞತೆಯಿಂದ ನೆನೆಯುತ್ತೇವೆ. ಕಾಲೇಜು ದಿನಗಳಲ್ಲಿ ಗೋಕಾಕರು ಮತ್ತು ಮಳಗಿಯವರು ತೋರಿದ ಪ್ರೀತಿಯಿಂದಾಗಿ ಪ್ರತಿವಾರವೂ ಗೋಕಾಕರ ಮನೆಯಲ್ಲಿ ಕಾವ್ಯವಾಚನ, ಚರ್ಚೆ ನಡೆಯುತ್ತಿದ್ದುವು. ನಮ್ಮ ಕಾಲೇಜಿನ ಕರ್ನಾಟಕ ಸಂಘದ ಅಡಿಯಲ್ಲಿ ಆ ಅವಧಿಯಲ್ಲಿ ಗೋಕಾಕರು ಆರಂಭಿಸಿದ ಕಮಲಮಂಡಲವನ್ನು ಸುಸೂತ್ರವಾಗಿ, ನಿಯಮಿತವಾಗಿ ಸಂಚಾಲಿಸಿದ್ದು ಚಂಪಾ ಮತ್ತು ಗಿರಡ್ಡಿ. ಆಗ ಅವರು ಪ್ರಕಟಿಸಿದ ಭೃಂಗನಾದ ಮುಂತಾದ ಕೃತಿಗಳಲ್ಲಿ ಇಂದು ಕನ್ನಡದಲ್ಲಿ ಬರೆಯುತ್ತಿರುವ ಉತ್ತರ ಕರ್ನಾಟಕದ ಅನೇಕರ ಮೂಲಗಳು ಸಿಗುತ್ತವೆ. ಅಲ್ಲಿಂದ ನಿಧಾನವಾಗಿ ಸಾಹಿತ್ಯಿಕ ಪರಿಸರವನ್ನು ಆವರಿಸತೊಡಗಿದ ನಾವು ನಮ್ಮ ನಮ್ಮ ರೀತಿಯಲ್ಲಿ ಆ ವೇಗವನ್ನು ಉಳಿಸಿಕೊಂಡು ಬಂದಿದ್ದೇವೆ.
ಶ್ರೀರಂಗ, ಎಚ್‌ಕೆ ರಂಗನಾಥ್, ಶಂಬಾ ಜೋಶಿ, ಸಾಲಿ ರಾಮಚಂದ್ರರಾಯ, ಗಂಗಪ್ಪ ವಾಲಿ, ಎನೆ ಕುಲಕರ್ಣಿ, ದ.ರಾ. ಬೇಂದ್ರೆ, ಶಾಂತಿನಾಥ ದೇಸಾಯಿ, ಶಂಕರ ಮೊಕಾಶಿ-ಪುಣೇಕರ, ಕಣವಿ ಮುಂತಾದ ಅಂದಿನ ಧಾರವಾಡದ ಪ್ರತಿಭೆಗಳ ಮುಂದೆ ನಮ್ಮನ್ನು ನಿರ್ಮಿಸಿಕೊಳ್ಳುವ ಗುಪ್ತ ಹಂಬಲವನ್ನು ಪೋಷಿಸಿಕೊಂಡು ನಮ್ಮ ದಾರಿಗಳನ್ನು ಹುಡುಕುತ್ತಿದ್ದೆವು.
ಕಾಲೇಜಿನ ವಾರ್ಷಿಕ ಪತ್ರಿಕೆಗಳಲ್ಲಿ ಬರೆಯುವುದು, ಚರ್ಚಾಸ್ಪರ್ಧೆಗಳಲ್ಲಿ, ಯುವಜನಮಹೋತ್ಸಗಳಲ್ಲಿ, ವಾರ್ಷಿಕೋತ್ಸವಗಳಲ್ಲಿ ಮುಂದಾಳ್ತನ ವಹಿಸುವುದು ಇತ್ಯಾದಿ ದಾರಿಗಳಲ್ಲಿ ಸಾಗಿದ್ದೆವು. ಆಗ ನಮಗೆ ನಾಲ್ಕು ವರ್ಷದ ಕಾಲೇಜು. ಎಫ್ವೈ, ಇಂಟರ್, ಜೂನಿಯರ್ ಬಿಎ, ಸೀನಿಯರ್ ಬಿಎ. ಬಿಎಗೆ ಬಂದಾಗ ಚಂಪಾನದ್ದು ಅರ್ಥಶಾಸ್ತ್ರ, ಗಿರಡ್ಡಿಯದ್ದು ಇಂಗ್ಲಿಷ್, ನನ್ನದು ಹಿಂದೀ ಪ್ರಧಾನ ವಿಷಯ. ಆದರೆ ನಾವೆಲ್ಲರೂ ಎರಡನೆಯ ಮತ್ತು ಕಡ್ಡಾಯ ವಿಷಯಗಳಲ್ಲಿ ಇಂಗ್ಲಿಷನ್ನೇ ಆಯ್ದುಕೊಂಡಿದ್ದೆವು. ಆ ಹೊತ್ತಿಗೆ ದಿನಾಲು ಎಲ್ಲರೂ ಒಂದೇ ಕ್ಲಾಸಿನಲ್ಲಿ ಕೂಡುತ್ತಿದ್ದೆವು. ಕ್ಲಾಸಿನಲ್ಲಿ ಅಧ್ಯಾಪಕರ ನಿರಂತರ ವಾಕlರಿಯನ್ನು ಗಿರಡ್ಡಿ, ಪಿಎಂ ಹೆಗಡೆ ಅಚ್ಚುಕಟ್ಟಾಗಿ ಬರೆದುಕೊಳ್ಳುತ್ತಿದ್ದರು. ನನಗೆ ಅದು ಕಷ್ಟವಾಗುತ್ತಿತ್ತು. ವಾರಕ್ಕೆರಡು ಬಾರಿ ನಾನು ಅವರ ನೋಟ್ಸ್ ಇಸಿದುಕೊಳ್ಳುತ್ತಿದ್ದೆ. ನನ್ನ ನೋಟ್ಸ್ ತಿದ್ದಿಕೊಂಡು ಮರಳಿಸುತ್ತಿದ್ದೆ. 1961ರಲ್ಲಿ ನಾನು ಬಿಎ ಪ್ರಥಮ ವರ್ಗದಲ್ಲಿ ಪಾಸಾಗಿದ್ದ ಶ್ರೇಯಸ್ಸು ಈ ಮಿತ್ರರು ಕೊಟ್ಟ ನೋಟ್ಸ್‌ಗೆ ಸಲ್ಲುತ್ತದೆ ಎಂದು ನಗುತ್ತ ಹೇಳುತ್ತಿದ್ದೆ.
1963ರಲ್ಲಿ ಎಂಎ ಮುಗಿಸಿದ ಗಿರಡ್ಡಿ ಒಂದು ವರ್ಷ ರಾಣಿಬೆನ್ನೂರ ಹತ್ತಿರದ ಹನುಮನಮಟ್ಟಿಯಲ್ಲಿ ಕೆಲಸ ಮಾಡಿದ. ನಂತರ ಕರ್ನಾಟಕ ಕಾಲೇಜಿಗೆೇ ಬಂದ. ನಂತರ ಗುಲಬರ್ಗಾ ಮತ್ತು ಕವಿವಿಯಲ್ಲಿ ಸೇವೆ ಸಲ್ಲಿಸಿ, ಯಶಸ್ವಿ ಅಧ್ಯಾಪಕನೆನಿಸಿಕೊಂಡು, ನಿವೃತ್ತನಾದ. 1964ರಲ್ಲಿ ನಾನು ಮತ್ತು ಚಂಪಾ ಕೂಡಿ ಸಂಕ್ರಮಣ ಎಂಬ ಹೆಸರಿನ ದ್ವೆ çಮಾಸಿಕ ಸಾಹಿತ್ಯ ಸಂಕಲನವನ್ನು ಪ್ರಾರಂಭಿಸಲು ನಿರ್ಧರಿಸಿ¨ªೆವು. ಆಗ ಗಿರಡ್ಡಿ ತಾನೂ ಅದರಲ್ಲಿ ಸೇರುತ್ತೇನೆ ಎಂದು ಬಂದದ್ದು ನಮಗೂ ಸಂತೋಷವಾಗಿತ್ತು. ನಾವು ಮೂವರೂ ತಲಾ ಹತ್ತು ರೂಪಾಯಿ ಹಾಕಿ ನಡೆಸಿದ್ದ ಸಂಕ್ರಮಣ ಕನ್ನಡ ಸಾಹಿತ್ಯ ಹಾಗೂ ಪತ್ರಿಕಾವಲಯದಲ್ಲಿ ಮೂಡಿಸಿದ್ದ ಸಂಚಲನ ಈಗ ಚರಿತ್ರೆಯ ಭಾಗವಾಗಿದೆ. 11 ವರ್ಷ ನಾವು ಕೂಡಿ ಸಂಪಾದಿಸಿದ ಪತ್ರಿಕೆಯ ಜೊತೆಗೇ ನಾವೂ ಬೆಳೆಯುತ್ತಿದ್ದೆವು. ಕಾವ್ಯ, ಲಲಿತಪ್ರಬಂಧ, ನಾಟಕ, ವಿಮರ್ಶೆ ಮುಂತಾದ ಲೇಖನಗಳನ್ನು ನಾವು ಹಂಚಿಕೊಂಡು ಓದಿ ಚರ್ಚಿಸಿ ನಿರ್ಧರಿಸುತ್ತಿದ್ದೆವು. ಯಾರ ಮುಲಾಜಿಗೂ, ಹಂಗಿಗೂ ಒಳಗಾಗುತ್ತಿರಲಿಲ್ಲ. ವಿಮರ್ಶೆಯ ಲೇಖನ ಬರೆಯುವವರ ಕೊರತೆ ನಮ್ಮನ್ನು ಬಹಳ ಕಾಡುತ್ತಿತ್ತು. ಆಗ ಮೊದಲು ಇಂಗ್ಲಿಷ್ ಲೇಖನಗಳ ಅನುವಾದ ಮಾಡಿದ ಗಿರಡ್ಡಿ ನಂತರ ಸ್ವತಂತ್ರವಾಗಿ ಅಂಥ ಲೇಖನಗಳನ್ನು ಬರೆಯತೊಡಗಿದ. ಸಂಕ್ರಮಣಕ್ಕೆ ಕೊರತೆಯಾಗದ ಹಾಗೆ ಸಕಾಲದಲ್ಲಿ ಕೊಡುತ್ತಿದ್ದ. ನಾವು “ಸಂಕ್ರಮಣ ಪ್ರಕಾಶನ’ವನ್ನು ಸಹ ಆರಂಭಿಸಿ ನಮ್ಮ ಖರ್ಚಿನಲ್ಲಿಯೇ ಪ್ರಕಟಿಸುತ್ತಿದ್ದೆವು. ಕನ್ನಡ ಸಣ್ಣಕತೆಗಳನ್ನು ಕುರಿತು ಅವನು ಶ್ರಮವಹಿಸಿ ಬರೆದ ಲೇಖನಗಳು ಪುಸ್ತಕವಾಗಿ ಬಂದು ಅವನಿಗೆ ಬಹಳ ಖ್ಯಾತಿ ನೀಡಿದುವು. ಸಂಕ್ರಮಣದ ಮೂಲಕವೇ ಅವನು ನಮ್ಮ ಹೆಮ್ಮೆಯ “ಗಿರಡ್ಡಿ ಗೋವಿಂದರಾಜ’ನಾಗಿ ವಿಜೃಂಭಿಸಿದ.
ಈ ಮಧ್ಯೆ ಚಂಪಾ, ಗಿರಡ್ಡಿ ಹೆಚ್ಚಿನ ಅಧ್ಯಯನಕ್ಕಾಗಿ ಹೈದ್ರಾಬಾದ್, ಇಂಗ್ಲೆಂಡ್ ಎಂದು ಹೋಗಿದ್ದರು. ಆಗಲೂ ನಾನು ಅವರಿಬ್ಬರ ಹೆಸರು ಇಟ್ಟುಕೊಂಡೇ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿ¨ªೆ. ಅದು ಯಾರಿಗೂ ತಿಳಿಯದ ಹಾಗೆ ನಮ್ಮ ಮೈತ್ರಿ ಹಾಗೂ ಒಗ್ಗಟ್ಟು ಕೆಲಸ ಮಾಡುತ್ತಿತ್ತು. 1974ರ ಹೊತ್ತಿಗೆ ಬಂದ ಬರಹಗಾರರ ಒಕ್ಕೂಟ ಮತ್ತು ಶೂದ್ರ ಚಳುವಳಿಯ ಪರಿಣಾಮವಾಗಿ ನಮ್ಮಲ್ಲಿ ಭಿನ್ನಮತಗಳು ಮೂಡತೊಡಗಿದುವು. ಒಮ್ಮೆಯಂತೂ ಚಂಪಾ, ಗಿರಡ್ಡಿಯನ್ನು ಟೀಕಿಸಿ ಬರೆದ ಲೇಖನ ಸಂಕ್ರಮಣದಲ್ಲಿಯೇ ಬಂದಾಗ ಆಘಾತಗೊಂಡ ಗಿರಡ್ಡಿ ಪತ್ರಿಕೆಯೊಂದಿಗೆ ಸಂಬಂಧ ಕಡಿದುಕೊಂಡ. ಆದರೆ, ಸಾಹಿತ್ಯಿಕ ಭಿನ್ನಾಭಿಪ್ರಾಯಗಳು ನಮ್ಮ ಗೆಳೆತನ ಮತ್ತು ಇತರ ಸಂಬಂಧಗಳನ್ನು ಎಂದೂ ಕದಡದಂತೆ ನಾವು ಮೂವರೂ ನೋಡಿಕೊಂಡಿದ್ದೇವೆ. ಆ ಸ್ನೇಹದ ಫಲವಾಗಿಯೇ ನಮ್ಮನ್ನು “ಕನ್ನಡದ ತ್ರಿವಳಿಗಳು’ ಎಂದು ಸಾಹಿತ್ಯ, ಸಂಸ್ಕೃತಿಯ ಪೋಷಕರು ಈಗಲೂ ಕರೆಯುತ್ತಾರೆ.
ಹೌದು, ನಾವು ತ್ರಿಮೂರ್ತಿಗಳೇ. ಈಗಲೂ. ಮೇ 11ರ ರಾತ್ರಿ ಗೋವಿಂದ ನಮ್ಮನ್ನು ತೊರೆದುಹೋದ ಸುದ್ದಿ ತಿಳಿದ ಕೂಡಲೇ ನಾನು ಚಂಪಾನ್ನ ಕೇಳಿದೆ, “”ಸೀಬಿ, ನಮ್ಮಲ್ಲಿ ವಯಸ್ಸಿನಲ್ಲಿ ನೀನು ಸ್ವಲ್ಪ ದೊಡ್ಡವನು. ಗಿರಡ್ಡಿ ನಿನಗಿಂತ 4-6 ತಿಂಗಳು ಸಣ್ಣವ. ನಾನು ಅವನಿಗಿಂತ 3-4 ತಿಂಗಳು ಚಿಕ್ಕವ. ಈಗ ನಡುವಿನವ ಹೋದ. ಇನ್ನು ಮುಂದಿನ ಪಾಳೆ ಯಾರದು?”
ಚಂಪಾ ಬಿಕ್ಕಳಿಸತೊಡಗಿದ…
ಸಿದ್ಧಲಿಂಗ ಪಟ್ಟಣಶೆಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.