ಚೀನಾದಲ್ಲಿ ಊರ ಹಬ್ಬದ ನೆನಪು
Team Udayavani, Nov 4, 2018, 6:00 AM IST
ನನ್ನ ಯಾವ ಹಬ್ಬವೂ ಪು. ತಿ. ನರಸಿಂಹಾಚಾರ್ ಅಥವಾ ಚೌರಾಶಿಯಾರ ಕೃಷ್ಣಾಷ್ಟಮಿಯನ್ನು ನೆನಪಿಸುವವಲ್ಲ. ಅತ್ತ ಕಡೆ ಸಂಭ್ರಮಾಚರಣೆಯ ವಿಶೇಷ ಊಟವೂ ನಡೆಯಲಿಲ್ಲ. ಇತ್ತ ಕಡೆ ಭಕ್ತಿ, ಪೂಜೆ, ಉಪವಾಸ, ಪಲ್ಲಕಿ ಆಚರಣೆಯೂ ನಡೆಯಲಿಲ್ಲ. ಹಾಗೆಂದರೆ ಯಾವ ಹಬ್ಬವನ್ನೂ ಆಚರಿಸಿಲ್ಲ ಎಂದಲ್ಲ; ಎಲ್ಲ ಹಬ್ಬವನ್ನೂ ಆಚರಿಸಿದ್ದೇವೆ. ಶಾಸ್ತ್ರಕ್ಕೆ ಎಲ್ಲವೂ ನಡೆದಿದೆ ಎಂದರೆ ಸರಿಯೇ. ನನಗೆ ನೆನಪಿರುವ ಪ್ರಕಾರ ನಮ್ಮೂರಿನಲ್ಲಿ ಶ್ರಾದ್ಧಗಳೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರಿಂದ ಕೆಲವು ಸಲ ಹಬ್ಬದ ಸಂಭ್ರಮಕ್ಕಿಂತ ಶ್ರಾದ್ಧದ ಸಂಭ್ರಮವೇ ಹೆಚ್ಚಾಗುತ್ತಿತ್ತು. ಹೊಸ ಬಟ್ಟೆ ಬೇಕು ಎಂದು ಹಠ ಮಾಡುವ ನಮ್ಮನ್ನು ಪಾಲಕರು, “ಯಾಕೆ ಬೇಕು?’ ಎಂದು ಕೇಳಿದರೆ, “ಮುಂದಿನ ತಿಂಗಳು ಅವರ ಮನೆ ಶ್ರಾದ್ಧಕ್ಕೆ ಧರಿಸಬೇಕು’ ಎನ್ನುತ್ತಿದ್ದೆವು. ಮತ್ತೆ ಎಲ್ಲ ಆಚರಣೆಗೂ ನಾವು “ಪಾಯಸ’ ಎಂದು ಕರೆಯುತ್ತಿದ್ದೆವು. ಎಲ್ಲಿಗೆ ಹೋಗುತ್ತಿದ್ದೀಯ ಎಂದು ಯಾರಾದರೂ ದಾರಿಯಲ್ಲಿ ಕೇಳಿದರೆ “ಪಾಯಸಕ್ಕೆ’ ಎನ್ನುತ್ತಿದ್ದೆವು. ನಮ್ಮಲ್ಲಿ ಇರುವ ಅಂಗಿಗಳನ್ನು ಎರಡು ವಿಭಾಗ ಮಾಡಿ ಒಂದು ಶಾಲೆಗೆ, ಇನ್ನೊಂದು ಪಾಯಸಕ್ಕೆ ಎಂದು ಪ್ರತ್ಯೇಕಿಸುತ್ತಿದ್ದೆವು! ಇದಕ್ಕೆ ಪಕ್ಕದ ತಾಲೂಕಿನಲ್ಲಿರುವ ನಮ್ಮ ಸಂಬಂಧಿಕರೆಲ್ಲ, “ಶ್ರಾದ್ಧವೂ ಪಾಯಸ, ಮದುವೆನೂ ಪಾಯಸ, ದೀಪಾವಳಿಯೂ ಪಾಯಸ ನಿಮಗೆ’ ಎಂದು ಗೇಲಿ ಮಾಡುತ್ತಿದ್ದರು.
ಇವೆಲ್ಲದರ ನಡುವೆ ಸ್ವಲ್ಪವಾದರೂ ಆಚರಿಸಿದ್ದು, ಸಂಭ್ರಮಿಸಿದ್ದು ಗಣೇಶ ಚತುರ್ಥಿ ಮತ್ತು ದೀಪಾವಳಿಯೇ. ಎಲ್ಲ ಹಬ್ಬಗಳಲ್ಲಿ ಮನೆ, ಬೀದಿಗಳನ್ನು ಶುಭ್ರ ಶೃಂಗಾರಗೊಳಿಸುವುದು ಸ್ವಾಭಾವಿಕವೆ. ಆದರೆ, ಬಚ್ಚಲ ಮನೆಗೆ ಶೃಂಗಾರದ ಭಾಗ್ಯ ದೊರಕುವುದು ದೀಪಾವಳಿ ಹಬ್ಬಕ್ಕೇ. ಒಲೆ ಸಾರಿಸಿ ರಂಗೋಲಿ ಹಾಕಿ, ಹಂಡೆಗೆ ಬೂದಿ ಬಳಿದು ಶಿಂಡಲಕಾಯಿ ಸರ ಕುತ್ತಿಗೆಗೆ ಕಟ್ಟಿ ಅಭ್ಯಂಗಕ್ಕೆ ತಯಾರಿ ನಡೆಯುತ್ತಿತ್ತು. ಉಳಿದ ಹಬ್ಬಕ್ಕೆ ಅಕ್ಕಿ ಪಾಯಸ ಇತ್ಯಾದಿ ಸಣ್ಣ ಕಜ್ಜಾಯವಾದರೆ ದೀಪಾವಳಿಗೆ ಮಾತ್ರ ಹೋಳಿಗೆ ತರಹದ ದೊಡ್ಡ ಕಜ್ಜಾಯ. ನಕ್ಷತ್ರ ಬುಟ್ಟಿ ಮಾರುಕಟ್ಟೆಗೆ ಬರುವ ಎರಡು-ಮೂರು ವರುಷಗಳ ಮೊದಲೇ, ನಾಲ್ಕು ಮೂಲೆ ಎಂಟು ಮೂಲೆಯ ಆಕಾಶ ಬುಟ್ಟಿಯನ್ನು ಕೈಯಾರೆ ಮಾಡಿ ಒಳಗೆ ಹಣತೆಯನ್ನಿಟ್ಟು ಕೆಲವು ಬಾರಿ ಬೆಂಕಿ ಕೊಟ್ಟಿದ್ದಿದೆ. ಅದೇ ತರಹದ ಒಳಗೆ ಹಣತೆಗಳನ್ನಿಟ್ಟ ಟೇಬಲ್ ಲ್ಯಾಂಪುಗಳನ್ನು ಈಗ ಕೆಲವು ಬಾರಿ ಫ್ಯಾಬ್ ಇಂಡಿಯಾಗಳಲ್ಲಿ ನೋಡುತ್ತೇನೆ. “ಹುಷಾರು ಬೆಂಕಿ ಹತ್ತಿಕೊಂಡೀತು’ ಎಂದು ಅಲ್ಲಿಯ ಸೇಲ್ಸ್‌ಮನ್ನನಿಗೆ ಹೇಳಬೇಕೆಂದೆನಿಸುತ್ತದೆ. ಜಗುಲಿಯ ಸುತ್ತ ಹಚ್ಚುವಷ್ಟು ಹಣತೆಗಳಿರಲಿಲ್ಲ ಅಥವಾ ಅದು ಆಗ ಹಳೇ ಫ್ಯಾಶನ್ ಆಗಿತ್ತೂ. ಜಗುಲಿಯ ಸುತ್ತ ಸಣ್ಣ ಸಣ್ಣ ಮೇಣದ ಬತ್ತಿ ಹಚ್ಚುತ್ತಿದ್ದೆವು. ಕೊನೆಯದನ್ನು ಹಚ್ಚುವ ವರೆಗೆ ಮೊದಲನೆಯದು ನಂದಿಹೋಗುತ್ತಿತ್ತು. ಆದರೆ, ಈಗ ಮನೆಯಲ್ಲಿರುವ ಮೇಣದ ಬತ್ತಿ ಹಚ್ಚಿದರೆ ನಂದುವುದೇ ಇಲ್ಲ. ಒಳ್ಳೆಯ ಪರಿಮಳ ಬೇರೆ. ರಾತ್ರೆ ನಾವೇ ನಂದಿಸಿ ಮಲಗಬೇಕು. ಎಲ್ಲಾದರೂ ಬೆಂಕಿ ಹತ್ತೀತು ಎನ್ನುವ ಹೆದರಿಕೆ ಬೇರೆ ! ಹೊಸ ಬಟ್ಟೆ, ಸಿಹಿತಿಂಡಿ ವಿನಿಮಯ ಯಾವುದೂ ಇರಲಿಲ್ಲ. ದೇವಸ್ಥಾನದಲ್ಲಿ ಮಾತ್ರ ರಾಶಿ ರಾಶಿ ಹಣತೆಗಳು. ಮತ್ತೆ ದೀಪ ಹಚ್ಚಲು ಸಾಕಾಗಿ ಉಳಿಯುವಷ್ಟು ಎಣ್ಣೆ. ಕಲಶಕ್ಕೇರಿಸಿದ ಬಲ್ಬಿನ ದೀಪವೊಂದನ್ನು ಬಿಟ್ಟರೆ ಇಡೀ ದೇವಸ್ಥಾನವೇ ಹಣತೆಯ ದೀಪದಿಂದ ಕಂಗೊಳಿಸುತ್ತಿತ್ತು. ಒಳಗೆ ಹೊರಗೆ ಎಲ್ಲ ಸ್ತರಗಳಲ್ಲಿ ದೀಪದ ಸಾಲು ಸುತ್ತುವರಿದು ಆಗಲೂ ದೇವಸ್ಥಾನವೇ ಮುಖ್ಯವಾಗಿ ಬೆಳಗಲು ಆ ದೀಪಗಳು ಕೈ ಕೈ ಕಟ್ಟಿ ನಿಲ್ಲುತ್ತಿದ್ದವು. ಈ ಹಬ್ಬದ ನಂತರ ಬರುವ ಕಾರ್ತೀಕಕ್ಕೆ ಇನ್ನೂ ಹೆಚ್ಚು. ಬೀದಿ ದೀಪ, ಮನೆ ದೀಪ, ಸರ್ಕಲ್ ದೀಪ, ಮಾಲ್ ದೀಪ, ಸರ್ಚ್ ಲೈಟ್‌ಗಳಿಲ್ಲದ ಕಾಲದಲ್ಲಿ ನಮಗೂ ಮತ್ತು ನಮ್ಮೂರಿನ ಕೊನೆ ಅಥವಾ ಗುಡ್ಡದ ತುದಿಯಲ್ಲಿರುವ ದೇವಸ್ಥಾನದ ಕಡೆಗೆ ನೆಟ್ಟ ನಮ್ಮ ದೃಷ್ಟಿಗೆ ಅಡ್ಡಬರುವವರೇ ಇರಲಿಲ್ಲ. ಆಗಲೇ ನಮ್ಮ ದೇವಸ್ಥಾನ ಭವ್ಯವಾದದ್ದು ಮತ್ತು ಭಕ್ತಿ ತುಂಬಿದ್ದು. ಆಶ್ಚರ್ಯವೆಂದರೆ ಇವೆಲ್ಲ ಕಾಣುತ್ತಿರುವುದು, ಕಾಡುತ್ತಿರುವುದು, ಭವ್ಯವಾಗುವುದು ಈಗ… ವರ್ತಮಾನದಲ್ಲಿ. ಆಗ ಅದೊಂದು ಸಣ್ಣ ಯಾರೂ ಗಮನಿಸದ ಸಾಮಾನ್ಯ ಆಚರಣೆಯಾಗಿ ಮುಗಿದು ಹೋಯಿತು. ಆಚರಣೆ ತಾಂತ್ರಿಕವೆನಿಸಿದರೂ ಹಬ್ಬ-ಸಂಸ್ಕೃತಿಗಳು ಬದುಕಿದ್ದು, ನೆನಪಿನಲ್ಲಿ ಇದ್ದದ್ದು ಎಲ್ಲವೂ ಇದರಿಂದಲೇ.
ನಾವು ದೊಡ್ಡವರಾಗಿ ಕೆಲಸದ ನಿಮಿತ್ತವೋ ದೀಪಾವಳಿ ಹಬ್ಬದ ರಜೆಯಲ್ಲೋ ಬೇರೆ ಊರಿಗೆ ತಿರುಗಾಡಲು ಹೋದಾಗ ಬೇರೆಯದೇ ಆಶ್ಚರ್ಯ ಕಾದಿತ್ತು. ಭಾರತದ ಹೆಚ್ಚಿನ ರಾಜ್ಯಗಳಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಾರೆ. ಆದರೆ, ಜೈನರು, ಸಿಖರು, ಉತ್ತರದ ರಾಜ್ಯಗಳು ದಕ್ಷಿಣದ ರಾಜ್ಯಗಳು ದೀಪಾವಳಿಯ ಸಂಗಡ ಜೋಡಿಸಿಕೊಂಡ ಹಬ್ಬದ ಪುರಾಣ ಕಥೆ ಬೇರೆ. ದಕ್ಷಿಣದಲ್ಲಿ ಬಲೀಂದ್ರನ ಕಥೆಯಾದರೆ, ಉತ್ತರದಲ್ಲಿ ಹೊಸ ವರುಷ ಲಕ್ಷ್ಮೀ ಪೂಜೆ, ಅಯೋಧ್ಯೆಗೆ ರಾಮ ಮರಳಿದ ದಿನ. ಜೈನರಲ್ಲಿ ಮಹಾವೀರನಿಗೆ ಸಂಬಂಧಿಸಿದ ಕತೆ. ಹಾಗಾಗಿ, ಈ ವಿಶಿಷ್ಟ ಹಬ್ಬ ಈ ಎಲ್ಲ ಕಥೆಗಳ ಹಿಂದಿರುವ ಆ ನಿರ್ದಿಷ್ಟ ಕಾಲದ ಮಹತ್ವವನ್ನು ಎತ್ತಿ ಹಿಡಿಯುತ್ತದೆ.
ನಾವು ಚಿಕ್ಕವರಿರುವಾಗ ಹಬ್ಬಕ್ಕಿಂತಲೂ ಹೆಚ್ಚು ಕಾದಿದ್ದು ರಥ ಸಪ್ತಮಿಯ ದಿನ ನಡೆಯುವ ಇಡಗುಂಜಿ ತೇರಿಗೆ. ನಮಗೆ ಅಲ್ಲಿನ ಚಡಂಗಗಳ ಗೋಜಿಲ್ಲದಿದ್ದರೂ ತೇರು ಪೇಟೆಗೆ ಬರುವ ಹೊಸ ಆಟಿಗೆ ಸಾಮಾನು, ಮಿಠಾಯಿ, ಕುದುರೆ, ಲಕ್ಕಿ ಡ್ರಾ ಇತ್ಯಾದಿ. ನಮ್ಮ ತವಕ-ತಲ್ಲಣಗಳನ್ನು ಗಮನಿಸಿದ ನಮ್ಮ ಮುಂಬೈ ಮಾವ, “ಇದೆಂತಾ ತೇರು… ಮುಂಬೈಯಲ್ಲಿ ದಿನಾಲೂ ತೇರು’ ಎಂದ. ನಾವೆಲ್ಲ ಅಂದರೆ ನಮ್ಮ ಅಣ್ಣ ತಕ್ಷಣ ಕೇಳಿದ ಪ್ರಶ್ನೆ , “ಹಾಗಾದರೆ ಮುಂಬೈಯಲ್ಲಿ ಎಷ್ಟು ದೇವಸ್ಥಾನಗಳಿವೆ?’
ನಾವೆಲ್ಲ ಈಗ ದೊಡ್ಡ ನಗರ ಸೇರಿದ್ದೇವೆ. ನಮ್ಮ ಪ್ರತೀ ಊಟದಲ್ಲೂ ಒಂದು ಸಿಹಿತಿಂಡಿ ಇದೆ. ಇತ್ತೀಚೆಗಿನ ವರ್ಷದ ನನ್ನ ಭೇಟಿ, ವಾಸವೆಲ್ಲ ಏಷಿಯಾದ ದೇಶಗಳು. ಮುಖ್ಯವಾಗಿ ಚೀನಾ ಮತ್ತು ಹಾಂಕಾಂಗ್. ಇಲ್ಲಿ ವರುಷದ ಪ್ರತೀ ದಿನವೂ ಆಕಾಶವನ್ನೂ ಸೀಳಿ ಹೊರಟಿರುವ ಕಟ್ಟಡದ ಪೂರ್ತಿ ದೀಪಗಳೇ. ಕಟ್ಟಡದಿಂದ ಕಟ್ಟಡಕ್ಕೆ ಹಾರುವ ದೀಪಗಳು. ಇಡೀ ಕಟ್ಟಡ ಅಥವಾ ಬೀದಿಯ ಎಲ್ಲ ಕಟ್ಟಡವೆಲ್ಲ ಸೇರಿ ಒಂದು ದೊಡ್ಡ ಟಿವಿಯಂತೇ ಮಾಡಿ ಅದರಲ್ಲಿ ಜಾಹೀರಾತು ಬರುವಂತೇ ಮಾಡುವ ದೀಪಗಳು! ಊರೆಲ್ಲ ದೀಪವೋ, ಊರಿಗೇ ಬೆಂಕಿಯೋ ಗೊತ್ತಾಗದ ದೀಪಗಳು! ಹೀಗಾಗಿ, ನಮ್ಮ ಸ್ವಲ್ಪವೇ ಮೇಲಿರುವ ಚಂದ್ರನನ್ನು ಹುಡುಕುತ್ತಿಲ್ಲ. ಹೋಗಲಿ, ಈ ದೀಪದಲ್ಲಿ ಆತ ನೆನಪಿಗೇ ಬರುತ್ತಿಲ್ಲ. ಭವ್ಯವು ಭವ್ಯವೆನಿಸುತ್ತಿಲ್ಲ. ಎಲ್ಲವೂ ಭವ್ಯವಾಗಿವೆ ! ಪ್ರತಿದಿನವೂ ದೀಪಾವಳಿಯೇ!
ಆಗಲೇ ಪ್ರಸ್ತಾಪಿಸಿದಂತೆ ತಾಯ್ನಾಡಿನ ಒಟ್ಟೂ ಕಲ್ಪನೆ ಮತ್ತು ಕಾಡುವಿಕೆ ತಾಯ್ನಾಡಿನಿಂದ ದೂರ ಬಂದ ಹಾಗೆ. ಆಗಲೇ ನಮ್ಮ ಊರಿನ ದೇವಸ್ಥಾನ ಹತ್ತಿರವಾಗಿದ್ದು, ಭಕ್ತಿ ಬಂದಿದ್ದು. ಹಂಡೆಗೆ ಕಟ್ಟಿದ್ದ ಶಿಂಡ್ಲೆ ಕಾಯಿ ಕಣ್ಣಿಗೆ ಬಿದ್ದಿದ್ದು. ಇಲ್ಲಿ ನಮ್ಮ ದೀಪಾವಳಿ ಹೊಸ ಆಯಾಮವನ್ನು ಪಡೆಯುತ್ತಿದೆ. ಒಂದು ವಾರದ ಮೊದಲೇ ಚಿಕ್ಕ ಚಿಕ್ಕ ಸೃಜನಾತ್ಮಕ ಹಬ್ಬದ ಪ್ರೀತಿ, ಕುಟುಂಬ ಸಂಬಂಧಗಳನ್ನು ವ್ಯಾಖ್ಯಾನಿಸುವ ವಿಡಿಯೋಗಳು, ಶುಭಾಶಯಗಳು ಹರಿದಾಡುತ್ತವೆ. ನಾವು ದೀಪಾವಳಿಯ ದಿನ ಹೊಸ ಬಟ್ಟೆಯನ್ನು ಧರಿಸುತ್ತೇವೆ. ಚಿಕ್ಕವರಿರುವಾಗ ಮಾಡಲಾಗದ ತಿನ್ನಲಾಗದ ಹತ್ತಾರು ತಿಂಡಿಗಳನ್ನು ಮಾಡುತ್ತೇವೆ. ಆನ್‌ಲೈನಿನಲ್ಲಿ ಅಥವಾ ಹಿಂದಿನ ಸಾರಿ ಭಾರತದಿಂದ ಬರುವಾಗ ತಂದ ಹಣತೆ, ಮೇಣದ ಬತ್ತಿಗಳ ಬುತ್ತಿ ಬಿಚ್ಚಿ ಎಲ್ಲವನ್ನೂ ಹಚ್ಚುತ್ತೇವೆ. ಲಕ್ಷ್ಮೀಪೂಜೆ ಕಣ್ಣು ಮಿಟುಕಿಸುವುದರೊಳಗಾಗುತ್ತದೆ. ನೈವೇದ್ಯ ನೆರವೇರಿ ಮಾಡಿದ ಭಕ್ಷವೆಲ್ಲ ಅಡುಗೆ ಮನೆಗೆ ಹೋಗದೇ ಲೈಟಿಂಗ್ ಚೆನ್ನಾಗಿರುವ ಜಾಗ ಸೇರಿ ಫೊಟೊಗೆ ಕಾಯುತ್ತದೆ. ನಾಲ್ಕಾರು ಚೆನ್ನಾಗಿರುವ ದಿಕ್ಕಿನಿಂದ ತೆಗೆದ ಫೊಟೊ, ಹಚ್ಚಿದ ಹಣತೆ ಸುತ್ತ ಹೊಸ ಬಟ್ಟೆ ತೊಟ್ಟ ನಮ್ಮ ಫೊಟೊಗಳು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಆಗುತ್ತವೆ. “ಇನ್ನೂ ಬಂದಿಲ್ಲ, ರಿಫ್ರೆಶ್ ಆಗಿಲ್ಲ, ಯಾರೂ ಇನ್ನೂ ಲೈಕ್ ಮಾಡಿಲ್ಲ’ ಎನ್ನುವ ಧ್ವನಿ ನಮಗೆ ಕೇಳಿಸುತ್ತಿದ್ದರೂ, ಹಸಿದು ಊಟಕ್ಕೆ ಕುಳಿತ ನಮ್ಮ ಮನದಲ್ಲಿ ಕಾಗೆಗೆ ಅನ್ನ ಹಾಕಾಯಿತಲ್ಲ, ಇನ್ನು ಊಟಮಾಡಬಹುದಲ್ಲ ಎಂದು ಅನಿಸುತ್ತಿರುತ್ತದೆ.
ಅದೇ ಸಂಜೆ ಊರಿಗೆ ಫೋನ್ ಮಾಡಿದರೆ ಆ ಕಡೆಯಿಂದ “ಇಂದು ಸ್ನಾನ… ನಿಮ್ಮ ನೆನಪಾಯಿತು… ಮಾವ-ಅತ್ತೆಯೆಲ್ಲ ದೇವಸ್ಥಾನಕ್ಕೆ ದೀಪ ಹಚ್ಚಲಿಕ್ಕೆ ಹೋಗಿದ್ದಾರೆ’ ಎನ್ನುವ ಧ್ವನಿ ಕೇಳಿಸುತ್ತದೆ.
ಸಚ್ಚಿದಾನಂದ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.