ರೈಟ್, ಹೋಲ್ಡಾನ್!
Team Udayavani, Jul 15, 2018, 6:00 AM IST
ಚಿಕ್ಕವರಿದ್ದಾಗ ಮಕ್ಕಳೆಲ್ಲ ಸೇರಿ ಬಸ್ಸಿನ ಆಟ ಆಡುತ್ತಿದ್ದುದನ್ನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಅದರಲ್ಲೂ ಕಂಡಕ್ಟರ್ ಆಗುವುದೆಂದರೆ ಎಲ್ಲಿಲ್ಲದ ಖುಷಿ. ಅಪ್ಪನ ಒಂದು ಹಾಫ್ ತೋಳಿನ ಶರ್ಟ್ ಹಾಕಿಕೊಂಡು, ಬಗಲಿಗೆ ಉದ್ದನೆಯ ಒಂದು ಚೀಲ ಏರಿಸಿಕೊಂಡು, ಆ ಹಳೆಯ ಚೀಲದಲ್ಲಿ ಒಂದಿಷ್ಟು ನೋಟ್‌ಬುಕ್ಕಿನ ಹಾಳೆಗಳನ್ನು ಸಣ್ಣದಾಗಿ ಹರಿದಿಟ್ಟುಕೊಂಡು “ಟಿಕೆಟ್, ಟಿಕೆಟ್’ ಅಂತ ಪ್ರತಿಯೊಬ್ಬರ ಹತ್ತಿರ ಹೋಗಿ, “ಎಲ್ಲಿಗೆ ಹೋಗಬೇಕಮ್ಮಾ?’ ಎಂದು ವಿಚಾರಿಸಿ, ಅವರೆಲ್ಲ ಬೆಂಗಳೂರು, ಮಂಗಳೂರು, ಶಿವಮೊಗ್ಗ ಎಂದು ಒಂದಕ್ಕೊಂದು ಸಂಬಂಧವೇ ಇಲ್ಲದ ಊರುಗಳ ಹೆಸರನ್ನು ಹೇಳಿ “ಟಿಕೆಟ್ ಕೊಡಿ’ ಎಂದು ಕೇಳುತ್ತಿದ್ದರು. ಐದು ರೂಪಾಯಿ ಕೊಡು, ಹತ್ತು ರೂಪಾಯಿ ಕೊಡು, ಚಿಲ್ಲರೆ ತೆಗೆದುಕೋ, ಟಿಕೆಟ್ ತೊಗೋ ಎಂದು ಕೊಡುತ್ತಿ¨ªೆ. ಕೈಯಲ್ಲಿದ್ದ ಪೀಪಿ ಊದಿ “ರೈಟ್ ರೈಟ್’ ಅಂತ ಮುಂದೆ ಡ್ರೈವರ್ ಸ್ಥಾನದಲ್ಲಿ ಕುಳಿತ ಗೆಳತಿಗೆ ಸಿಗ್ನಲ್ ಕೊಡುವುದು, ಡ್ರೈವರ್ ಕೆಲಸ ಇನ್ನೇನಿರುತ್ತದೆ? ಆಕೆ “ಡುರ್ರ ಡುರ್‌ರ್ ರ್…’ ಅಂತ ಬಾಯಲ್ಲಿ ಶಬ್ದ ಮಾಡುವುದಷ್ಟೇ. ಸ್ವಲ್ಪ ಹೊತ್ತು ಬಿಟ್ಟು “ಹೊಲೆxàನ್’ ಅಂತ ಕೂಗಿ ಮತ್ತೂಬ್ಬರನ್ನು, “ಬೇಗ ಬೇಗ ಹತ್ರೀ’ ಎಂದು ಹತ್ತಿಸಿಕೊಳ್ಳುವ ಆಟ ಅದೆಂಥ ಖುಷಿ ಕೊಡುತ್ತಿತ್ತು. ಡ್ರೈವರ್, ಪ್ರಯಾಣಿಕರಾಗಲು ಯಾರಿಗೂ ಇಷ್ಟವಿರುತ್ತಿರಲಿಲ್ಲ. ಆದರೆ, ಕಂಡಕ್ಟರ್ ಆಗುವುದಿದೆಯಲ್ಲ ! ಅದರ ಮಜಾನೇ ಬೇರೆ. ಸರದಿ ಪ್ರಕಾರ ಒಬ್ಬೊಬ್ಬರೇ ಕಂಡಕ್ಟರ್ ಆಗುತ್ತಿ¨ªೆವು. ಕಮಲ್ ಹಾಸನ್ ಕಂಡಕ್ಟರ್ ಆಗಿ ಪಾತ್ರಕ್ಕೆ ಜೀವ ತುಂಬಿದ್ದ ಬೆಂಕಿಯಲ್ಲಿ ಅರಳಿದ ಹೂಗಳು ಚಿತ್ರದ ಮುಂದೆ ಬನ್ನಿ ಹಾಡನ್ನು ಯಾರಾದರೂ ಮರೆಯುವುದುಂಟೆ? ಕಂಡಕ್ಟರ್ ವೃತ್ತಿಗೆ ಒಂದು ವಿಶೇಷ ಇಮೇಜ್ ತಂದುಕೊಟ್ಟ ಆ ಹಾಡಿಗೆ, ನಟಿಸಿದ ನಟನಿಗೆ ಹ್ಯಾಟ್ಸ್‌ಆಫ್.
ಆದರೆ, ಕಂಡಕ್ಟರ್‌ಗಳ ಕೆಲಸ ಮಕ್ಕಳಾಟದಷ್ಟು ಸುಲಭವಲ್ಲ. ಪ್ರತಿ ಪ್ರಯಾಣವೂ ಅವರಿಗೆ ಅದೆಷ್ಟೋ ಅನುಭವಗಳನ್ನು ಕಟ್ಟಿಕೊಡುತ್ತಿರುತ್ತದೆ. ಕೆಲವು ಸಂತೋಷ ಕೊಡಬಹುದು, ಕೆಲವು ನೋವು ಕೊಡಬಹುದು. ನೆನಪಿರಬೇಕಲ್ಲ? ಬಿಸಿ ಬಿಸಿ ಸುದ್ದಿಯಾಗಿ ಮೊನ್ನೆ ಎಲ್ಲಾ ಮಾಧ್ಯಮಗಳಲ್ಲೂ ಸದ್ದು ಮಾಡಿದ ಕೋಳಿಗಳಿಗೂ ಟಿಕೆಟ್ ನೀಡಿದ ಮಹಿಳಾ ಕಂಡಕ್ಟರ್ ಎಷ್ಟೋ ದಿನಗಳವರೆಗೆ ಎಲ್ಲರ ಗಮನ ತನ್ನೆಡೆ ಸೆಳೆದಿದ್ದಂತೂ ದಿಟ. ಆ ಎರಡು ಕೋಳಿಗಳ ಫೋಟೋ, ಟಿಕೆಟ್ಟಿನ ಹಿಂದೆ ಬರೆದಿದ್ದ “ಕೋಳಿಗಳಿಗೂ ಟಿಕೆಟ್ ನೀಡಲಾಗಿದೆ’ ಬರಹ, ಟಿಕೆಟ್ ನೀಡಿದ ಮಹಿಳಾ ಕಂಡಕ್ಟರ್ ಬಗ್ಗೆ ಪರ-ವಿರೋಧ ಚರ್ಚೆಗಳು ಕಾವೇರಿದ್ದನ್ನು ಯಾರೂ ಮರೆತಿರಲಿಕ್ಕಿಲ್ಲ. ಪಾಪ! ಆಕೆಯದೇನು ತಪ್ಪು , ರೂಲ್ಸ್ ಪ್ರಕಾರ ಕೆಲಸ ಮಾಡಿ¨ªಾಳೆ ಎಂದು ಮೇಲಧಿಕಾರಿಗಳು ಸಮರ್ಥಿಸಿಕೊಂಡ ಮೇಲೆಯೇ ಸ್ವಲ್ಪ ಮಟ್ಟಿಗೆ ಕಾವು ತಣ್ಣಗಾಯಿತು ಎನ್ನಬಹುದು.
ಬಸ್ ಕಂಡಕ್ಟರ್‌ಗಳ ತಾಳ್ಮೆ ಮೆಚ್ಚಲೇಬೇಕು ಬಿಡಿ. ಮೊನ್ನೆ ಹೀಗೇ ಆಯಿತು. ಚಿತ್ರದುರ್ಗದಿಂದ ಯಾರೋ ಹಳ್ಳಿಯವರು ದಾವಣಗೆರೆಗೆ ಹೋಗಲು ರಾಜಹಂಸ ಬಸ್ಸು ಹತ್ತಿದ್ದರು. ಕಂಡಕ್ಟರ್ ಟಿಕೆಟ್ ದುಡ್ಡು ಕೇಳಿದಾಗ, “ಬೇರೆ ಬಸ್ಸಿನಲ್ಲಿ ಅರುವತ್ತು ತೆಗೆದುಕೊಳ್ಳುತ್ತಾರೆ, ನಿಮ್ಮ ಬಸ್ಸಿನಲ್ಲಿ ಎಪ್ಪತ್ತು ಯಾಕೆ?’ ಎಂದು ಅವನ ಜೊತೆ ವಾಗ್ವಾದಕ್ಕೇ ಇಳಿದುಬಿಟ್ಟರು. “ಇದು ಮಾಮೂಲಿ ಬಸ್ಸಲ್ಲ, ರಾಜಹಂಸ, ಅದಕ್ಕೇ ಸ್ವಲ್ಪ ಹಣ ಹೆಚ್ಚು’ ಎನ್ನುತ್ತಿದ್ದಂತೆ, “ನಾವು ಬಸ್ಸು ಹತ್ತುವ ಮೊದಲೇ ಹೇಳಬೇಕಿತ್ತು, ನಾವು ಕೊಡುವುದೇ ಅರುವತ್ತು ರೂಪಾಯಿ’ ಎಂದು ಹಠಹಿಡಿದು ಕೂತರು. “ನಾನೇನೂ ಮಾಡಲು ಆಗುವುದಿಲ್ಲ’ ಎಂಬ ಅವನ ಮಾತು ಅವರ ತಲೆಗೆ ಹತ್ತಲೇ ಇಲ್ಲ. ಕೊನೆಗೆ ಡ್ರೈವರ್ ಬಸ್ ನಿಲ್ಲಿಸಿ ಬಂದು, ಸ್ವಲ್ಪ ಜೋರಾಗಿಯೇ, “ಇಲ್ಲೇ ಇಳಿಸುತ್ತೇನೆ, ಬೇರೆ ಬಸ್ಸಿಗೆ ಹೋಗಿ’ ಎಂದು ಗದರಿದಾಗ, ಆಗಲೇ ಅರ್ಧ ದಾರಿಗೆ ಬಂದಿದ್ದರಿಂದ ತೆಪ್ಪಗೆ ಟಿಕೆಟ್ ಕೊಂಡು ಕುಳಿತರು.
ಹೀಗೆ ಎಷ್ಟೋ ಸವಾಲುಗಳನ್ನು ಪ್ರತಿದಿನ ಬಸ್ ಕಂಡಕ್ಟರ್‌ಗಳು ಎದುರಿಸುತ್ತಲೇ ಇರುತ್ತಾರೆ. ಅದೆಂತೆಂಥ ಜನಗಳನ್ನು ನಿಭಾಯಿಸಬೇಕಾಗುತ್ತದೆಯೋ ಅವರಿಗೇ ಗೊತ್ತು. ಮಹಿಳೆಯರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಾಗಿರುವ ಸೀಟುಗಳಲ್ಲಿ ರಾಜಾರೋಷವಾಗಿ ಕುಳಿತುಕೊಳ್ಳುವ ಪುರುಷರನ್ನು ಸಾಕ್ಷಾತ್ ಬ್ರಹ್ಮನೇ ಬಂದರೂ ಎಬ್ಬಿಸಲು ಸಾಧ್ಯವಿಲ್ಲ. “ಕಂಡಕ್ಟರ್ ಏನಾದರೂ ಸೀಟು ಬಿಟ್ಟುಕೊಡಿ’ ಎಂದು ಹೇಳಿದರಂತೂ ಮುಗಿಯಿತು, ಕುರುಕ್ಷೇತ್ರದ ಆರಂಭವನ್ನೇ ನೋಡಬೇಕಾದೀತು. ಇನ್ನೂ ಜೋರು ಮಾಡಿದರೆ ಆ ಕಂಡಕ್ಟರ್ ಬಗ್ಗೆ ಇಲ್ಲಸಲ್ಲದ್ದನ್ನು ಮೇಲಧಿಕಾರಿಗಳಿಗೆ ಕಂಪ್ಲೇಂಟ್ ಮಾಡಿ ಅವರ ನೌಕರಿಗೆ ಕುತ್ತು ತರುವ ಜನರಿಗೇನು ಕಮ್ಮಿ ಇಲ್ಲ.
ಮೊನ್ನೆ ಹುಬ್ಬಳ್ಳಿಯಲ್ಲಿ ತಮ್ಮ ಮಗಳನ್ನು ಅರ್ಧ ದಾರಿಗೆ ಇಳಿಸಿದ ಮಹಿಳಾ ಕಂಡಕ್ಟರ್ ಮೇಲೆ ಆ ವಿದ್ಯಾರ್ಥಿನಿಯ ಕುಟುಂಬದವರು ಹಲ್ಲೆ ನಡೆಸಿದ್ದನ್ನು ಮರೆಯುವಂತಿಲ್ಲ. ಆ ಹುಡುಗಿ ತಾನು ಪ್ರಯಾಣಿಸುವ ಬಸ್ಸೆಂದು ತಪ್ಪಾಗಿ ತಿಳಿದು ಹತ್ತಿದ್ದರಿಂದ ಮುಂದೆ ಯಾವುದೋ ಸ್ಟಾಪಿನಲ್ಲಿ ಆಕೆಯನ್ನು ಆ ನಿರ್ವಾಹಕಿ ಇಳಿಸಿದ್ದೇ ದೊಡ್ಡ ತಪ್ಪಾಯಿತು.
ಇನ್ನು ಒಳಗೆ ಕುಳಿತುಕೊಳ್ಳಲು ಸ್ಥಳವಿದ್ದರೂ ಫುಟ್‌ಬೋರ್ಡ್‌ನ ಮೇಲೆ ನೇತಾಡುವ ಪಡ್ಡೆ ಹೈಕಳನ್ನು ಒಳಗೆ ಹಾಕುವ ಸಾಹಸ ಕಂಡಕ್ಟರನದೇ. ಹಾಗೆಯೇ, ಬಸ್ ಹತ್ತಿ ಟಿಕೆಟ್ ತೆಗೆದುಕೊಳ್ಳದೆ ಮಳ್ಳರಂತೆ ಹಾಗೇ ಕುಳಿತುಕೊಳ್ಳುವವರು, ನಿದ್ರಿಸುವಂತೆ ನಟಿಸುವವರು, “ಎಲ್ಲೂ ಸೀಟಿಲ್ಲ, ಸುಮ್ಮನೆ ಹತ್ತಿಸಿಕೊಂಡೆಯಲ್ಲ, ಈಗ ಸೀಟು ಮಾಡಿ ಕೊಡು, ಇಲ್ಲಾ ಕೆಳಗಿಳಿಸು’ ಎಂದು ಕಂಡಕ್ಟರ್‌ನ ಮೇಲೆ ರೋಪು ಹಾಕುವವರು, ಪ್ರಯಾಣದ ಅರ್ಧಭಾಗ ಟಿಕೆಟ್ ಕೊಡುತ್ತ ಓಡಾಡುತ್ತಲೇ ಇರುವ ಕಂಡಕ್ಟರ್‌ನ ಕೆಲಸ ನೋಡುತ್ತಿದ್ದರೂ ಅವರಿಗೆ ಮೀಸಲಾಗಿರುವ ಸೀಟಿನಲ್ಲೇ ರಾಜಾರೋಷವಾಗಿ ಕುಳಿತುಕೊಳ್ಳುವವರು, ಐವತ್ತು ರೂಪಾಯಿಯ ಪ್ರಯಾಣಕ್ಕೆ ಐದುನೂರರ ನೋಟನ್ನು ಕೊಟ್ಟು, “ಚಿಲ್ಲರೆ ಇಲ್ಲದಿದ್ದರೆ ನೀನೆಂಥ ಕಂಡಕ್ಟರಯ್ನಾ?’ ಎಂದು ಹೀಯಾಳಿಸುವವರು, ಒಂದೇ, ಎರಡೇ- ಹೀಗೆ ನಾನಾ ಘಟನೆಗಳಿಗೆ ಕಂಡಕ್ಟರ್‌ಗಳು ಪ್ರತಿದಿನ ಸಾಕ್ಷಿಯಾಗುತ್ತಿರುತ್ತಾರೆ. ಕೆಲವೊಮ್ಮೆ ಮಕ್ಕಳ ವಯಸ್ಸನ್ನು ಇರುವುದಕ್ಕಿಂತ ಕಡಿಮೆಯಾಗಿ ಸುಳ್ಳು ಹೇಳಿ ಅರ್ಧ ಟಿಕೆಟ್ಟು ಮಾಡಿಸುವವರು, ರಶ್ ಇದ್ದ ಬಸ್ಸಿನಲ್ಲಿ ಮಕ್ಕಳನ್ನು ಸೀಟಿನ ಕೆಳಗೆ ಅವಿತಿಟ್ಟು ಟಿಕೆಟ್ಟಿನ ದುಡ್ಡು ಉಳಿಸುವವರು, ಇವರ ಜೊತೆಗೆ ಕಂಡಕ್ಟರ್‌ಗಳು ಹೋರಾಡಬೇಕು! ಮಹಿಳಾ ಕಂಡಕ್ಟರುಗಳ ಅನುಭವಗಳೇ ಬೇರೆ. ಪರಿಸ್ಥಿತಿಯನ್ನು ಸಂಯಮದಿಂದ ನಿವಾರಿಸಿಕೊಂಡು ಬದುಕು ಮತ್ತು ಬಸ್ಸುಗಳೆಂಬ ಎರಡು ತೇರುಗಳನ್ನು ನಿಭಾಯಿಸಬೇಕು.
ಟಿಕೆಟಿನ ಮಂದಿ ಒಂದು ಕಡೆಯಾದರೆ, ಪಾಸ್ ಹೊಂದಿರುವವರು ಮತ್ತೂಂದೆಡೆ. ನೌಕರಿಗೆ, ಶಾಲೆಗೆ, ಪ್ರತಿದಿನ ಪ್ರಯಾಣಿಸುವವರು ಕಂಡಕ್ಟರಿಗೆ ಪರಿಚಿತರಾಗಿಬಿಡುತ್ತಾರೆ. ಒಬ್ಬರಿಗೊಬ್ಬರು ವಿಶ್ವಾಸದಿಂದ ಕಷ್ಟ-ಸುಖ ಕೇಳುತ್ತ, ಹೇಳುತ್ತ ಪ್ರಯಾಣದ ಆಯಾಸ, ಹಾದಿ ಸವೆದದ್ದು ಗೊತ್ತಾಗುವುದೇ ಇಲ್ಲ. ಹಿಂದಿನ ಕಾಲದಲ್ಲಿ ಇದ್ದ ಹಾಗೆ ಚಿಕ್ಕ ಸೂಟ್‌ಕೇಸಿನ ಹಾಗಿದ್ದ ಡಬ್ಬಿಯಲ್ಲಿ ಕೆಂಪು, ಹಸಿರು, ನೀಲಿ, ಹಳದಿ- ಹೀಗೆ ಬೇರೆ, ಬೇರೆ ಬಣ್ಣಗಳ, ಬೇರೆ ಬೇರೆ ದರಗಳ ಟಿಕೆಟ್ಟುಗಳನ್ನು ಹರಿದು ಅದರ ಮೇಲೆ ಬಾಲ್‌ಪೆನ್ನಿನಿಂದ ತೂತು ಹೊಡೆದು ಕೊಡುವುದಿತ್ತು. ಕಂಡಕ್ಟರ್ ಅಲ್ಲದೆ ಸಾಮಾನ್ಯ ಮನುಷ್ಯನಿಗೆ ಅದರ ತಲೆಬುಡ ಅರ್ಥವಾಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಅವು ಕಳೆದು, ಉದುರಿಹೋಗುವ ಸಾಧ್ಯತೆಗಳು ಹೆಚ್ಚಿತ್ತು. ಆದರೆ ಈಗ ಸ್ಮಾರ್ಟ್ ಮೆಶೀನ್‌ಗಳ ಆಗಮನವಾಗಿ ಟಿಕೆಟ್ಟಿನ ದರ, ಪ್ರಯಾಣಿಸುವ ದೂರ, ಪ್ರಯಾಣಿಕರ ಸಂಖ್ಯೆ, ಎಲ್ಲಿಂದೆಲ್ಲಿಗೆ ಪ್ರಯಾಣ ಎಲ್ಲವನ್ನೂ ಒಂದೇ ಟಿಕೆಟ್ಟಿನಲ್ಲಿ ನಿಖರವಾಗಿ ನಮೂದಿಸಿ ಕೊಡುವುದರಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಅನುಕೂಲವಾಗಿದೆ.
ಈಗಂತೂ ಇ-ಟಿಕೆಟ್ಟಿನ ಕಾಲ. ದೂರದ ಊರುಗಳಿಗೆ, ರಾತ್ರಿ ಹೊರಡುವ ಬಸ್ಸುಗಳಿಗೆ ಮೊದಲೇ ಆನ್‌ಲೈನ್‌ನಲ್ಲಿ ಬುಕ್ ಮಾಡಿಬಿಡುವುದರಿಂದ ಅದರ ಮೆಸೇಜ್ ನೇರವಾಗಿ ಪ್ರಯಾಣಿಕರ ಮೊಬೈಲಿಗೇ ಬಂದುಬಿಡುತ್ತದೆ. ಹಾಗಾಗಿ, ಅಂಥ ಬಸ್ಸುಗಳ ಕಂಡಕ್ಟರುಗಳಿಗೆ ಟಿಕೆಟ್ ಹರಿಯುವ ಗೊಡವೆಯೇ ಇಲ್ಲ.
ನಳಿನಿ ಟಿ. ಭೀಮಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.