“ರೂಪಾಯಿ – ಡಾಲರ್‌ ಸಂಘರ್ಷವು’


Team Udayavani, Sep 9, 2018, 6:00 AM IST

x-11.jpg

ಅಮೆರಿಕದಲ್ಲಿ ಟ್ರಂಪ್‌ ಅಧ್ಯಕ್ಷರಾಗಿ ಬಂದ ಲಾಗಾಯ್ತು ಜಾಗತಿಕ ಮಟ್ಟದಲ್ಲಿ ಹಲವಾರು ವಿಚಾರಗಳು ಮೊದಲಿನಂತಿಲ್ಲ. ಒಂದು ರೀತಿಯ ಲಿಬರಲ್‌ ಅನ್ನಿಸುತ್ತಿದ್ದ ಅಮೆರಿಕದ ಧೋರಣೆ ಗಡುಸಾಗಿದೆ. ದೇಶೀಯ ಪ್ರಾಬಲ್ಯದ ದೃಷ್ಟಿಕೋನದಿಂದ ಮುನ್ನಡೆಸುವ ಒಂದು ಹೊಸ ರೀತಿಯ ಆಡಳಿತ ಕಾರ್ಯ ಪ್ರಣಾಳಿಕೆ ಅಮೆರಿಕದ ಕಡೆಯಿಂದ ಹೊರಹೊಮ್ಮುತ್ತಿದೆ. ಸ್ವಂತ ನೆಲ, ಸ್ವಂತ ಜನ ಇತ್ಯಾದಿ ಪರಿಕಲ್ಪನೆಗಳನ್ನು ವಿಸ್ತರಿಸುತ್ತ ಜಾಗತಿಕ ಮಟ್ಟದಲ್ಲೂ ಕೊರಿಯಾ, ಇರಾನ್‌, ಚೀನಾ, ಟರ್ಕಿ ಇತ್ಯಾದಿ ದೇಶಗಳ ಮೇಲೆ ಆಗಾಗ್ಗೆ ಹರಿಹಾಯುತ್ತ, ಕೆಲವೊಮ್ಮೆ ರಾಜಿ ಮಾಡುತ್ತ ಒಟ್ಟಾರೆ ದೊಡ್ಡಣ್ಣನ ಧೋರಣೆಯನ್ನು ಹರಿಬಿಡುತ್ತ ಎಲ್ಲರಿಗೂ ತಲೆನೋವಾಗಿ ಒಂದು ನಮೂನೆಯ ಆತಂಕವನ್ನು ಸೃಷ್ಟಿಸುತ್ತ ಮುಂದುವರಿಯುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. 

ಜೊತೆ ಜೊತೆಗೆ ಚೀನಾದಿಂದ ಆಮದಾಗುವ ಸರಕಿನ ಮೇಲೂ ಯದ್ವಾತದ್ವಾ ಆಮದು ಸುಂಕ ಏರಿಸಿ ಅದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡ ಅಮೆರಿಕಾ ಸರಕುಗಳಿಗೆ ಆಮದು ಸುಂಕ ಏರಿಸಿ ಪರಸ್ಪರ ಒಂದು ವಾಣಿಜ್ಯ ರೂಪದ ಶೀತಲ ಸಮರವನ್ನು ಸಾರಿ ಅಮೆರಿಕ ತನ್ನ ಸ್ಥಾನವನ್ನು ಭದ್ರಪಡಿಸುತ್ತಿದೆ.  ಆದರೆ, ತೀರಾ ಇತ್ತೀಚೆಗೆ ಎಂಬಂತೆ ಟರ್ಕಿ ದೇಶದ ವಿರುದ್ಧ ಟ್ರಂಪುರಾಯರ ಚಿತ್ತ ವಕ್ರಯಿಸಿದೆ. ಕಳೆದ ತಿಂಗಳು ಅಮೆರಿಕ ಟರ್ಕಿಯಿಂದ ಆಮದಾಗುವ ಸ್ಟೀಲ್‌, ಅಲ್ಯುಮಿನಿಯಮ್‌ ಇತ್ಯಾದಿ ಸರಕುಗಳ ಮೇಲಿನ ಆಮದು ಸುಂಕವನ್ನು ಸಿಕ್ಕಾಪಟ್ಟೆ ಏರಿಸಿದೆ. ಇದರಿಂದ ರಫ್ತು ಬಾಧಿತ ಟರ್ಕಿ ಮೊದಲೇ ಬೆಲೆಯೇರಿಕೆಯ ಮಬ್ಬಿನಲ್ಲಿ ಬಳಲುತ್ತಿದ್ದು , ಇದೀಗ ಇನ್ನಷ್ಟು ತೊಂದರೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ಅಮೆರಿಕ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ.

ಇರಾನಿನಿಂದ ಆಮದಾಗುವ ತೈಲವನ್ನು ಕೂಡ ಅಮೆರಿಕ ಈಗಾಗಲೇ ನಿರ್ಬಂಧಿಸಿ ಇರಾನಿನ ಮೇಲೆ ಒತ್ತಡ ಉಂಟುಮಾಡಿದೆ. ಈ ಒತ್ತಡದಿಂದಾಗಿ ಮಾರುಕಟ್ಟೆ ಕಳೆದುಕೊಂಡ ಇರಾನ್‌ ಭಾರತದಂತಹ ಬಡಪಾಯಿ ರಾಷ್ಟ್ರಗಳ ಮೇಲೆ ತನ್ನ ತೈಲದ ಬೆಲೆಯನ್ನು ಏರಿಸಿದೆ. ಇನ್ನೊಂದೆಡೆ ಸೌದಿ ಅರೇಬಿಯಾ ತೈಲಬೆಲೆಯನ್ನು ಹೆಚ್ಚಿಸಲು ಅಹರ್ನಿಶಿ ಹೆಣಗಾಡುತ್ತಿದೆ. ಕಳೆದ ಹದಿನೈದು ದಿನಗಳಲ್ಲಿಯೇ ತೈಲಬೆಲೆ ಸುಮಾರು 10 ಡಾಲರುಗಳಷ್ಟು ಏರಿ ಬಾರೆಲ್ಲಿಗೆ 78ರ ಮಟ್ಟಕ್ಕೆ ಬಂದು ನಿಂತಿದೆ. ಇದು ಭಾರತದ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರಿದೆ. ಈ ಎಲ್ಲಾ ಜಾಗತಿಕ ಒತ್ತಡಗಳ ಪರಿಣಾಮವಾಗಿ ರೂಪಾಯಿ ವಿನಿಮಯ ದರ ಕಳೆದ ಕೆಲದಿನಗಳಲ್ಲಿ ತೀರಾ ಕುಸಿದು ರೂ. 72ರ ಆಸುಪಾಸಿನಲ್ಲಿ ತಂದಿರಿಸಿದೆ. 

ಏನಿದು ವಿನಿಮಯ ದರ?
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸ್ವಂತ ಕರೆನ್ಸಿ ಎಂದಿರುತ್ತದೆ- ಅಮೆರಿಕಕ್ಕೆ ಡಾಲರ್‌ ಇದ್ದಂತೆ, ಯುರೋಪಿಗೆ ಯೂರೋ, ಜಪಾನಿಗೆ ಯೆನ್‌ ಹಾಗೂ ಭಾರತಕ್ಕೆ ರೂಪಾಯಿ. ಅಲ್ಲದೆ ಆಯಾ ಕರೆನ್ಸಿಗಳು ಆಯಾ ದೇಶದೊಳಗೆ ಮಾತ್ರ ಚಲಾವಣೆಯಲ್ಲಿರುತ್ತದೆ. ಬೇರೆ ದೇಶಕ್ಕೆ ಹೋದರೆ ನಮ್ಮ ಕರೆನ್ಸಿಯನ್ನು ಅಲ್ಲಿನ ಕರೆನ್ಸಿಗೆ ಬದಲಾಯಿಸಿದರೇನೇ ವ್ಯವಹಾರ ಸಾಧ್ಯ. ಅಲ್ಲದೆ, ಪ್ರತಿಯೊಂದು ದೇಶದ ಕರೆನ್ಸಿ ಕೂಡ ಆ ದೇಶದ ಆರ್ಥಿಕತೆಯನ್ನು ಪ್ರತಿನಿಧಿಸುತ್ತದೆ. ಒಂದು ದೇಶದ ಆರ್ಥಿಕ ಪ್ರಾಬಲ್ಯ ಹೆಚ್ಚಿದಂತೆ, ಆ ದೇಶದ ಕರೆನ್ಸಿ ಕೂಡ ಪ್ರಾಬಲ್ಯ ಪಡೆಯುತ್ತದೆ.

ಎರಡನೆಯ ಮಹಾಯುದ್ಧದ ಬಳಿಕ ಅಮೆರಿಕದ ಪ್ರಾಬಲ್ಯದಿಂದಾಗಿ ಅದರ ಡಾಲರ್‌ ವಿಶ್ವದಾದ್ಯಂತ ಮನ್ನಣೆ ಪಡೆದು ಒಂದು ರೀತಿಯ ಸಮನ್ವಯ ವಿನಿಮಯ ಕರೆನ್ಸಿಯಾಗಿ ಸ್ಥಾನ ಪಡೆದಿದೆ. ಹಾಗಾಗಿ ಎಲ್ಲ ಕರೆನ್ಸಿಗಳೂ ಡಾಲರ್‌ ವಿರುದ್ಧ ತಮ್ಮ ವಿನಿಮಯ ದರವನ್ನು ಕಂಡುಕೊಳ್ಳುತ್ತವೆ. ಉದಾ: 1 ಡಾಲರ್‌ ಅಂದರೆ 69 ರೂಪಾಯಿಗಳು ಅಥವಾ 70 ಯೆನ್‌ಗಳು… ಇತ್ಯಾದಿ. ಉಳಿದೆಲ್ಲ ಕರೆನ್ಸಿಗಳ ವಿನಿಮಯ ದರಗಳೂ ಆ ಬಳಿಕ ಡಾಲರ್‌ ಮೂಲಕ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ಯಾವುದೇ ದೇಶದ ಕರೆನ್ಸಿಗೂ ಡಾಲರ್‌ ವಿರುದ್ಧ ಇರುವ ವಿನಿಮಯ ದರ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣದ್ದಾಗಿರುತ್ತದೆ. 

ವಿನಿಮಯ ದರ ಮತ್ತು ರೂಪಾಯಿ ಮೌಲ್ಯ
ಒಂದು ಕರೆನ್ಸಿಯ ಮೌಲ್ಯ ಮತ್ತು ಇನ್ನೊಂದರೊಡನೆ ಅದು ಪಡೆಯುವ ವಿನಿಮಯ ದರ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಕರೆನ್ಸಿ ಮೌಲ್ಯ ಕುಸಿದಾಗ ವಿನಿಮಯ ದರದಲ್ಲಿ ಏರಿಕೆ ಹಾಗೂ ಮೌಲ್ಯ ವೃದ್ಧಿಯಾದಾಗ ವಿನಿಮಯ ದರದಲ್ಲಿ ಇಳಿಕೆ ಉಂಟಾಗುತ್ತದೆ. ಹಾಗಾಗಿ, ಒಂದು ಡಾಲರಿಗೆ ರೂಪಾಯಿಯ ವಿನಿಮಯ ದರ ರೂ. 60ರಿಂದ ರೂ 70ಕ್ಕೆ ಏರಿದರೆ ರೂಪಾಯಿಯ ಮೌಲ್ಯ ಕುಸಿಯಿತು ಎಂದರ್ಥ. ಬೆಲೆ ಏರಿಸಿಕೊಂಡ ಡಾಲರ್‌ ಖರೀದಿಸಲು ನಮಗೆ ಈಗ ಜಾಸ್ತಿ ರೂಪಾಯಿಗಳು ಬೇಕಾಗುತ್ತವೆ. 

ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಒಂದು ಅಮೆರಿಕ ಡಾಲರಿಗೆ ವಿನಿಮಯ ದರ ಒಂದು 1 ರೂಪಾಯಿ ಇತ್ತಂತೆ. ನಾವು ನೋಡಿಲ್ಲ. ಈ ಮಾಹಿತಿಯ ಬಗ್ಗೆಯೂ ಗೊಂದಲವಿದೆ. ಆದರೆ, ಎಪ್ಪತ್ತರ ದಶಕದಲ್ಲಿ ಒಂದು ಡಾಲರ್‌ ಅಂದರೆ ಸರಕಾರ ನಿಗದಿಪಡಿಸಿದಂತೆ ಏಳೂವರೆ ರೂಪಾಯಿಗಳು ಎಂದು ಶಾಲೆಯಲ್ಲಿ ಬಾಯಿಪಾಠ ಮಾಡಿದ್ದು ಈಗಲೂ ನೆನಪಿದೆ. ಆಮೇಲೆ ವಿನಿಮಯ ದರ ಜಾಸ್ತಿಯಾಗುತ್ತಲೇ ಹೋಗಿ ತೊಂಬತ್ತರ ದಶಕದಲ್ಲಿ ಉದಾರೀಕರಣದ ಬಳಿಕ ಮಾರುಕಟ್ಟೆ ಪ್ರೇರಿತ ಬೆಲೆ ರೂಪಾಯಿ 40ರ ಆಸುಪಾಸಿಗೆ ತಲುಪಿತು. 2000 ಇಸವಿಯ ಬಳಿಕ ಅದು ಸುಮಾರಿಗೆ 46-47ರ ಮಟ್ಟದಲ್ಲಿ ಸುಳಿದಾಡುತ್ತಿತ್ತು. ಆಮೇಲೆ ಪುನಃ ಏರುತ್ತ ಬಂದ ರೂಪಾಯಿ ದರ ಕೆಲ ವರ್ಷಗಳ ಹಿಂದೆ ಡಾಲರ್‌ ಒಂದರ 55 ತಲುಪಿತ್ತು. 

ಆ ಬಳಿಕ ನಿರಂತರವಾಗಿ ರೂಪಾಯಿಯದ್ದು ಕೆಳಮುಖ ಹಾದಿ. 2017-18ರ ಹೊತ್ತಿಗೆ ರೂಪಾಯಿ ಮೌಲ್ಯ ಮತ್ತಷ್ಟೂ ಕುಸಿದು ಒಂದು ಡಾಲರ್‌ ಕೊಳ್ಳಲು ವಿನಿಮಯ ದರ ರೂ 68-69ರ ಮಟ್ಟ ತಲುಪಿ ಇದೀಗ ಮೇಲೆ ಹೇಳಿದ ವಿದ್ಯಮಾನಗಳ ಪರಿಣಾಮವಾಗಿ ರೂ. 72ರ ಮಟ್ಟ ತಲುಪಿದೆ. 

ರೂಪಾಯಿ ಕುಸಿತದ ಪರಿಣಾಮ
ಇದೊಂದು ಅತ್ಯಂತ ಭೀಕರವಾದ ಆರ್ಥಿಕ ಬಿಕ್ಕಟ್ಟು ಎನ್ನುವುದರಲ್ಲಿ ಸಂಶಯವಿಲ್ಲ. ರೂಪಾಯಿ ಕುಸಿತದಿಂದ ಆಮದು ಮಾಡುವ ಎಲ್ಲ ಸರಕುಗಳಿಗೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಮತ್ತು ರಫ್ತು ಮಾಡುವ ಎಲ್ಲ ಸರಕುಗಳಿಗೂ ಹೆಚ್ಚಿನ ಬೆಲೆ ಸಿಗುತ್ತದೆ. ಆದರೆ, ಭಾರತ ಒಂದು ನಿವ್ವಳ ಆಮದುಗಾರ ದೇಶವಾದ ಕಾರಣ ನಮಗೆ ರೂಪಾಯಿ ಅಪಮೌಲ್ಯದಿಂದಾಗಿ ಲಾಭಕ್ಕಿಂತ ನಷ್ಟವೇ ಜಾಸ್ತಿ. 

1    ರೂಪಾಯಿ ಮೌಲ್ಯ ಇಳಿದು ವಿನಿಮಯ ದರ ಹೆಚ್ಚಿದಂತೆಲ್ಲ ಡಾಲರ್‌ ಬೆಲೆಯಲ್ಲಿ ಖರೀದಿ ಮಾಡುವ ಎಲ್ಲ ಸರಕುಗಳಿಗೂ ಜಾಸ್ತಿ ಮೊತ್ತ ತೆರಬೇಕಾಗುತ್ತದೆ. ಚಿನ್ನ , ಇಲೆಕ್ಟ್ರಾನಿಕÕ…, ಗೊಬ್ಬರ ಇತ್ಯಾದಿ ಆಮದಿತ ಸರಕುಗಳು ಹಾಗೂ ಡಾಲರ್‌ ಬೆಲೆಯಲ್ಲಿ ನಡೆಯುವ ವಿದೇಶೀ ಪ್ರವಾಸದ ವೆಚ್ಚ , ಫಾರಿನ್‌ ವಿದ್ಯಾಭ್ಯಾಸ ಈ ರೀತಿ ಎಲ್ಲೆಲ್ಲಿ ಡಾಲರ್‌ ಇದೆಯೋ ಅÇÉೆಲ್ಲ ಜಾಸ್ತಿ ರೂಪಾಯಿ ಹರಿಸಬೇಕಾಗುತ್ತದೆ. ಇದು ವಿನಿಮಯ ದರದಿಂದ ಆಗುವ ತೊಂದರೆ. 

 ಅದಲ್ಲದೆ, ಕೆಲ ಆಮದಿತ ಸರಕು ಉದಾಹರಣೆಗೆ ತೈಲ, ಒಂದು ಮೂಲಭೂತ ಸರಕು. ಅಂತಹ ಮೂಲಭೂತ ಸರಕುಗಳ ಬೆಲೆ ಹೆಚ್ಚಳವಾದರೆ ಆದನ್ನು ಅವಲಂಬಿಸಿರುವ ಎಲ್ಲ ಸರಕುಗಳ ಬೆಲೆಯೂ ಹೆಚ್ಚಳವಾಗುತ್ತದೆ. ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಇತ್ಯಾದಿ ಇಂಧನಗಳ ಬೆಲೆ ಏರಿದಂತೆಲ್ಲ ಇಡೀ ಆರ್ಥಿಕತೆಗೆ ಬೆಲೆಯೇರಿಕೆಯ ಬಿಸಿ ತಟ್ಟುತ್ತದೆ.

2 ರೂಪಾಯಿ ಕುಸಿತದಿಂದ ಸಾಫ್ಟ್ವೇರ್‌, ಕೃಷಿ ಉತ್ಪನ್ನ ಚಾ, ಕಾಫಿ, ಸಂಬಾರ, ಮೀನು ಇತ್ಯಾದಿ ರಫ್ತು ಆಗುವ ಸರಕುಗಳಿಗೆ ಹೆಚ್ಚಿನ ಬೆಲೆ ಬರುತ್ತದೆ. ರಫ್ತುದಾರರಿಗೆ ಇದು ಸಹಕಾರಿ. ಆದರೆ, ರೂಪಾಯಿ ಕುಸಿದ ಸಂದರ್ಭಗಳÇÉೆಲ್ಲವೂ ಪೈಪೋಟಿಯಿಂದಾಗಿ ಮಾರಾಟ ದರದಲ್ಲಿ ಕಡಿತ ಕಂಡುಬರುವುದರಿಂದ ಇದರ ಸಂಪೂರ್ಣ ಫ‌ಲ ಅನುಭವಿಸುವುದು ಸಾಧ್ಯವಾಗುವುದಿಲ್ಲ.

3 ಹಲವಾರು ಕಂಪೆನಿಗಳು ವಿದೇಶೀ ಸಾಲಗಳನ್ನು ಪಡೆದಿದ್ದು ಅವುಗಳ ಮರುಪಾವತಿ ಮಾಡುತ್ತಿರುತ್ತವೆ. ಅಸಲು ಮತ್ತು ಬಡ್ಡಿ ಪಾವತಿಯು ಈ ವಿನಿಮಯ ದರದ ಹೆಚ್ಚಳದಿಂದಾಗಿ ಜಾಸ್ತಿಯಾಗುತ್ತದೆ. ಇದರಿಂದಾಗಿ ಈ ಕಂಪೆನಿಗಳ ಲಾಭಾಂಶ ಕಡಿಮೆಯಾಗಿ ನಮ್ಮ ಆರ್ಥಿಕತೆ ಕುಂಟುತ್ತದೆ.

4 ಎನ್ನಾರೈ ಅಥವಾ ಅನಿವಾಸಿ ಭಾರತೀಯರು ಮನೆಗೆ ಕಳುಹಿಸುವ ದುಡ್ಡಿಗೆ ಜಾಸ್ತಿ ರೂಪಾಯಿ ಮನೆಯವರ ಕೈಸೇರುತ್ತದೆ. ಇದೊಂದು ದೊಡ್ಡ ಲಾಭ. ರೂಪಾಯಿ ಕುಸಿದಂತೆಲ್ಲ ಅನಿವಾಸಿಗಳು ಜಾಸ್ತಿ ಮೊತ್ತವನ್ನು ಭಾರತಕ್ಕೆ ಕಳುಹಿಸಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ “ಗಲ್ಫ್ ಮನಿ’ ಕಾರಣಕ್ಕೆ ನಮ್ಮೂರಲ್ಲಿ ಭೂಮಿ ಬೆಲೆ ಏರುವುದನ್ನು ಕಾಣಬಹುದು.

5 ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಈಗಾಗಲೇ ಭಾರತದಲ್ಲಿ ಮಾಡಿರುವ ಹೂಡಿಕೆಯ ಮೇಲೆ ಈ ಕುಸಿತದಿಂದ ನಷ್ಟವಾಗುತ್ತದೆ. ವಿನಿಮಯ ದರ ಏರಿದ್ದು, ಹೂಡಿಕೆಯನ್ನು ಹಿಂಪಡೆಯುವಾಗ ವಾಪಾಸು ಡಾಲರಿಗೆ ಪರಿವರ್ತನೆ ಮಾಡಿಕೊಳ್ಳುವಾಗ ಕಡಿಮೆ ಡಾಲರ್‌ ಸಿಗುತ್ತದೆ. ಹಾಗಾಗಿ, ರೂಪಾಯಿ ಕುಸಿಯಲಾರಂಭಿಸಿದಾಕ್ಷಣ ಇನ್ನಷ್ಟು ನಷ್ಟವನ್ನು ತಪ್ಪಿಸಲು ಭೀತಿಗೊಂಡ ವಿದೇಶಿ ಹೂಡಿಕೆದಾರರು ಶೇರು ಮತ್ತು ಬಾಂಡುಗಳನ್ನು ಮಾರಿ ಇಲ್ಲಿಂದ ಹೊರಹೋಗುತ್ತಾರೆ. ಆವಾಗ ಶೇರು ಹಾಗೂ ಬಾಂಡುಗಳ ಬೆಲೆ ಕುಸಿಯುತ್ತದೆ. ಮಾರುಕಟ್ಟೆಯಲ್ಲಿ ಹೂಡಿದ್ದ ನಮಗೆಲ್ಲ ಇದರಿಂದ ನಷ್ಟ. ಈ ಡಾಲರ್‌ ಹೊರಹರಿವು ರೂಪಾಯಿ ಮೌಲ್ಯವನ್ನು ಮತ್ತಷ್ಟು ಕೆಳತಳ್ಳುತ್ತದೆ. ಮುಂದೆ ಮತ್ತಷ್ಟು ಶೇರು/ಬಾಂಡು ಮಾರಾಟ- ಇದೊಂದು ವಿಷ ವರ್ತುಲ.   

6 ರೂಪಾಯಿ ಕುಸಿತ, ಬೆಲೆಯೇರಿಕೆಯ ಸಾಧ್ಯತೆ ಹಾಗೂ ವಿದೇಶೀ ಹೂಡಿಕೆಯಲ್ಲಿ ಆಗುವ ನಷ್ಟವನ್ನು ಗಮನಿಸಿ ವಿದೇಶೀ ರೇಟಿಂಗ್‌ ಏಜೆನ್ಸಿಗಳು ಭಾರತದ ಮೇಲೆ ಹಾಕಿದ ರೇಟಿಂಗ್‌ ಅನ್ನು ಕಡಿತಗೊಳಿಸುತ್ತದೆ. ಇದು ಹೂಡಿಕೆಯ ಭದ್ರತೆಯ ಬಗ್ಗೆ ಇರುವ ರೇಟಿಂಗ್‌ ಮತ್ತು ಇದನ್ನು ಕಳಕೊಂಡರೆ ಭಾರತಕ್ಕೆ ವಿದೇಶೀ ಸಾಲ ಕಷ್ಟವಾಗುತ್ತದೆ ಹಾಗೂ ಬಡ್ಡಿದರ ಹೆಚ್ಚುತ್ತದೆ ಹಾಗೂ ಹೊಸ ಹೂಡಿಕೆಯ ಸಂಭಾವ್ಯ ಕಡಿಮೆಯಾಗುತ್ತದೆ.    

ಭಾರತವೇಕೆ ಸುಮ್ಮನಿದೆ? 
ನಮ್ಮ ದೇಶದಲ್ಲೂ ಮೋದಿ ಸರಕಾರ ಬಂದ ಮೇಲೆ ಒಂದು ರೀತಿಯ ಬದಲಾವಣೆ ಉಂಟಾಗಿದೆ. ದೇಶವು ಸರಕಾರಿ ಕೃಪಾಪೋಷಿತ ಧೋರಣೆಯ ಬದಲಾಗಿ ಮಾರುಕಟ್ಟೆ ನೀತಿಯತ್ತ ವಾಲುತ್ತಿದೆ. ಸಬ್ಸಿಡಿಯ ಬಗ್ಗೆ ಮೋದಿ ಸರಕಾರದ ಒಲವು ಕಡಿಮೆ ಇರುವುದು ಬಹುತೇಕರ ಗಮನಕ್ಕೆ ಬಂದಿದೆ. ಮಾರುಕಟ್ಟೆಯೇ ತನ್ನ ಮಟ್ಟವನ್ನು ಕಂಡುಕೊಂಡು ಬೆಲೆ ನಿಗದಿ ಮಾಡಿಕೊಳ್ಳಬೇಕು ಎನ್ನುವ ವಿಚಾರ ಸರಕಾರದ ಮನಸ್ಸಿನಲ್ಲಿದೆ ಅನಿಸುತ್ತದೆ. ವಿನಿಮಯ ದರದ ವಿಚಾರದಲ್ಲೂ, ಪೆಟ್ರೋಲ್‌ ಬೆಲೆ ವಿಚಾರದಲ್ಲೂ ಈ ಸರಕಾರ ಒಂದು ರೀತಿಯ ನಿಧಾನ ಹೆಜ್ಜೆಯನ್ನು ಇರಿಸುತ್ತಿದೆ. ರಿಸರ್ವ್‌ ಬ್ಯಾಂಕ್‌ ಅತಿಯಾಗಿ ಡಾಲರ್‌ ಮಾರಿ ರೂಪಾಯಿ ಮೌಲ್ಯವನ್ನು ಹೆಚ್ಚಿಸುವ ತರಾತುರಿಯಲ್ಲಿ ಇದ್ದಂತಿಲ್ಲ. ಆದರೆ, ಚುನಾವಣೆ ಹತ್ತಿರ ಬಂದಂತೆಲ್ಲ ಯಾವುದೇ ಸರಕಾರ ತೀರಾ ಸುಮ್ಮನಾಗುವುದು ಸಾಧ್ಯವಿಲ್ಲ ಎನ್ನುವುದು ಅನುಭವದ ಮಾತು. ಅಷ್ಟಕ್ಕೂ ವಿನಿಮಯ ದರಕ್ಕೆ ಕಡಿವಾಣ ಹಾಕುವುದು ಯಾವುದೇ ಸರಕಾರಕ್ಕಾದರೂ ಸುಲಭದ ಮಾತಲ್ಲ. ಆದರೂ ಶೀಘ್ರವೇ ಸರಕಾರ ವಿನಿಮಯ ದರವನ್ನು ಸಮತೋಲನಕ್ಕೆ ತರುವ ಹೆಜ್ಜೆ ಹಾಕಲೇ ಬೇಕಿದೆ.    
        
ವಿನಿಮಯ ದರದ ಸಮತೋಲನ
ಡಾಲರ್‌ ಬೇಡಿಕೆ ಮತ್ತು ಪೂರೈಕೆಯ ಅಸಮತೋಲನವೇ ವಿನಿಮಯ ದರವನ್ನು ಏರಿಳಿಸುತ್ತದೆ. ರೂಪಾಯಿ ಕುಸಿತಕ್ಕೆ ಚಾಲ್ತಿ ಖಾತೆಯಲ್ಲಿ ಡಾಲರ್‌ ಕೊರತೆಯೇ ಕಾರಣ ಎನ್ನುವುದು ಲಾಗಾಯ್ತಿನಿಂದ ಎಲ್ಲರೂ ನಂಬಿಕೊಂಡು ಬಂದಂತಹ ಸತ್ಯ. ಏನಿದು ಚಾಲ್ತಿ ಖಾತೆ? ವಿದೇಶಗಳೊಡನೆ ಹಣದ ಕೊಡು-ಕೊಳ್ಳುವ ವ್ಯವಹಾರಗಳೆಲ್ಲವೂ ಎರಡು ಮುಖ್ಯ ಖಾತೆಗಳ ಮೂಲಕವೇ ನಡೆಯುತ್ತದೆ. 
1.     ಕ್ಯಾಪಿಟಲ್‌ ಎಕೌಂಟ್‌ (ಬಂಡವಾಳ ಖಾತೆ) ಮತ್ತು
2. ಕರೆಂಟ್‌ ಅಕೌಂಟ್‌ (ಚಾಲ್ತಿ ಖಾತೆ)
ಬಂಡವಾಳ ಖಾತೆಯಲ್ಲಿ ಭಾರತಕ್ಕೆ ಹೂಡಿಕೆಯ ರೂಪದಲ್ಲಿ ಬಂಡವಾಳ ಬರುತ್ತದೆ. ಇವು ಭಾರತದ ಬಿಸಿನೆಸ್‌ಗಳಲ್ಲಿ ಹೂಡಲು ಬರುವ ಎಫ್ಡಿಐ (Foreign Direct Investment) ಇರಬಹುದು, ಶೇರುಕಟ್ಟೆಯಲ್ಲಿ ಬಾಂಡು ಮಾರುಕಟ್ಟೆಯಲ್ಲಿ ಹೂಡಲು ಬರುವ ಎಫ್ಪಿಐ (Foreign Portfolio Investors) ಇರಬಹುದು ಅಥವಾ ಭಾರತೀಯ ಕಂಪೆನಿಗಳೇ ತೆಗೆದುಕೊಳ್ಳುವ ಡಾಲರ್‌ ಸಾಲಗಳ (External Commercial Borrowings)  ರೂಪದಲ್ಲಿ ಇರಬಹುದು. ಅವೆಲ್ಲವೂ ಬಂಡವಾಳ ಖಾತೆಯೊಳಕ್ಕೆ ಹೊರಗಿನಿಂದ ಬರುವ ಡಾಲರ್‌ ಪೂರೈಕೆ. ಅದೇ ರೀತಿಯಲ್ಲಿ ಬಂಡವಾಳ ಖಾತೆಯಿಂದ ಡಾಲರ್‌ ಹೊರದೇಶಕ್ಕೆ ಹೋಗುವಂತಹ ಕಾರಣಗಳೂ ಇರುತ್ತವೆ. ವಿದೇಶದಲ್ಲಿ ಭಾರತೀಯ ಕಂಪೆನಿಗಳ ಹೂಡಿಕೆ, ವಿದೇಶೀ ಮಶೀನುಗಳ ಆಮದು… ಇತ್ಯಾದಿ. ಇವು ಡಾಲರ್‌ಗೆ ಬರುವ ಬೇಡಿಕೆ.

ಇದೇ ರೀತಿ ಚಾಲ್ತಿ ಖಾತೆಯಲ್ಲೂ ಡಾಲರ್‌ನ ಪೂರೈಕೆ ಹಾಗೂ ಬೇಡಿಕೆಗಳಿರುತ್ತವೆ. ರಫ್ತು (ಸಂಬಾರ, ಕೃಷಿ ಉತ್ಪನ್ನ, ತಂತ್ರಾಂಶಗಳು ಇತ್ಯಾದಿ) ಮಾಡುವಲ್ಲಿ ಡಾಲರ್‌ ಒಳಬಂದು ಈ ಖಾತೆಗೆ ಪೂರೈಕೆಯಾಗುತ್ತದೆ. ಆಮದಿತ ಸರಕುಗಳು (ತೈಲ, ಚಿನ್ನ, ಕೆಮಿಕಲ್‌ ಇತ್ಯಾದಿಗಳು) ಡಾಲರ್‌ ಬೇಡಿಕೆಯನ್ನು ಉಂಟುಮಾಡುತ್ತವೆ.

ಈ ಎರಡೂ ಖಾತೆಗಳಲ್ಲೂ ಡಾಲರ್‌ನ ಕೊರತೆ ಅಥವಾ ಮಿಗತೆ ಆಗಬಹುದು. ಬಂಡವಾಳ ಖಾತೆ ಸರಕಾರದ ನಿಯಂತ್ರಣದಲ್ಲಿ ಇರುವ ಕಾರಣ ಅದರಲ್ಲಿ ಬಹುತೇಕ ಮಿಗತೆಯೇ ಉಂಟಾಗುತ್ತದೆ. ಆದರೆ, ತೈಲ-ಚಿನ್ನ ಇತ್ಯಾದಿಗಳ ಆಮದು ಜಾಸ್ತಿ ಇದ್ದು ನಮ್ಮ ಒಟ್ಟಾರೆ ರಫ್ತು ಕಡಿಮೆ ಇರುವ ಕಾರಣ ಚಾಲ್ತಿ ಖಾತೆಯಲ್ಲಿ ಯಾವತ್ತೂ ಕೊರತೆಯೇ ಇರುತ್ತದೆ. ಈ ಕೊರತೆಯಿಂದ ಡಾಲರ್‌ ಬೇಡಿಕೆ ಹೆಚ್ಚಾಗಿ ವಿನಿಮಯ ದರ ಏರುತ್ತದೆ; ರೂಪಾಯಿ ಮೌಲ್ಯ ಕುಸಿಯುತ್ತದೆ ಎಂದು ಹೇಳಲಾಗುತ್ತದೆ. ಇದನ್ನೇ ಚಾಲ್ತಿ ಖಾತೆಯ ಕೊರತೆ ಅಥವಾ ಕರೆಂಟ್‌ ಅಕೌಂಟ್‌ ಡೆಫಿಸಿಟ್‌ (ಸಿಎಡಿ) ಎನ್ನುತ್ತಾರೆ. 
ಸದ್ಯಕ್ಕೆ ನಮ್ಮ ದೇಶದ ಚಾಲ್ತಿ ಖಾತೆ ಕೊರತೆ ಸುಮಾರು 170 ಬಿಲಿಯನ್‌ ಡಾಲರ್‌. ಇದು ತೀರಾ ಜಾಸ್ತಿಯೆನಿಸುವ ಸಂಖ್ಯೆ. ಇದನ್ನು ತುರ್ತಾಗಿ ಕಡಿಮೆಯಾಗಿಸಬೇಕು. ಚಾಲ್ತಿ ಖಾತೆಯಲ್ಲಿ ಕೊರತೆ ಭಾರತವನ್ನು ಲಾಗಾಯ್ತಿನಿಂದಲೂ ಕಾಡಿಕೊಂಡು ಬಂದಂತಹ ಒಂದು ಪೆಡಂಭೂತ !                        
ಜಯದೇವ ಪ್ರಸಾದ್‌ ಮೊಳೆಯಾರ

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.