ಸಬರ್ಮತಿ ಆಶ್ರಮ ನೂರು ವರ್ಷ
Team Udayavani, Mar 18, 2018, 7:00 AM IST
ಸಬರ್ಮತಿ ನದಿ ದಂಡೆಯ ಮೇಲಿರುವ ಸಬರ್ಮತಿ ಆಶ್ರಮಕ್ಕೀಗ 100 ವರ್ಷ. ಗಾಂಧೀಜಿಯವರು ಸುಮಾರು 12 ವರ್ಷಗಳ ಕಾಲ ಪತ್ನಿ ಕಸ್ತೂರಿ ಬಾ ಗಾಂಧಿಯೊಂದಿಗೆ ಗಾಂಧಿ ಆಶ್ರಮ, ಹರಿಜನ ಆಶ್ರಮ ಎಂದೂ ಕರೆಯಲ್ಪಡುವ ಇದೇ ಆಶ್ರಮದಲ್ಲಿದ್ದರು. ಇಲ್ಲಿಯೇ ಗಾಂಧೀಜಿಯ ಎಲ್ಲ ಪ್ರಮುಖ ಸ್ವಾತಂತ್ರ್ಯ ಚಳುವಳಿಯ ಚಟುವಟಿಕೆಗಳನ್ನು ಮತ್ತು ಸಮಾಜದ ಉನ್ನತಿಯ ಕಾರ್ಯಗಳ ಯೋಜನೆಯನ್ನು ಹಾಕಿದ್ದರು. ಇಲ್ಲಿಂದಲೇ 1930 ಮಾರ್ಚ್ 12ರಂದು ದಂಡೀ ಮಾರ್ಚ್ ಹೊರಟದ್ದು. ದೇಶಕ್ಕೆ ಸ್ವಾತಂತ್ರ್ಯ ಬಾರದೆ ಆಶ್ರಮಕ್ಕೆ ಹಿಂದಿರುಗುವುದಿಲ್ಲ ಎಂಬ ಘೋಷಣೆ ಯನ್ನೂ ಮಾಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದರೂ 1948 ಜನವರಿಯಲ್ಲಿ ಗಾಂಧೀಜಿ ಹತ್ಯೆಯಾಗಿ ಆಶ್ರಮಕ್ಕೆ ಹಿಂತಿರುಗಲಿಲ್ಲ. ಗುಜರಾತಿನ ಅಹಮ ದಾಬಾದಿನ ಆಶ್ರಮ ರೋಡಿನಲ್ಲಿ ರುವ ಆಶ್ರಮವೀಗ ಭಾರತದ ಸ್ವಾತಂತ್ರ್ಯ ಚಳುವಳಿಯ ದ್ಯೋತಕವಾಗಿದೆ, ದಬ್ಟಾಳಿಕೆಯನ್ನು ಎದುರಿಸುವ ಶಕ್ತಿಯ ಮೂಲದಂತಿದ್ದು ಸ್ಫೂರ್ತಿಯ ಮೂಲವಾಗಿದೆ, ಗಾಂಧೀಜಿಯ ಸ್ಮಾರಕ.
ಆಶ್ರಮದ ಹಿಂದಿನ ಸತತ ಶ್ರಮ
ಗಾಂಧೀಜಿಯ ಆಶ್ರಮವು ಮೊದಲಿಗೆ ಗೆಳೆಯ ಹಾಗೂ ಬ್ಯಾರಿಸ್ಟರ್ ಆಗಿದ್ದ ಜೀವನಲಾಲ್ ದೇಸಾಯಿಯ ಕೊಚರಬ್ ಬಂಗ್ಲೊದಲ್ಲಿತ್ತು. ಸ್ವಾತಂತ್ರ್ಯ ಹೋರಾಟವಲ್ಲದೆ ಆಶ್ರಮದಲ್ಲಿ ಬೇಸಾಯ, ಖಾದಿ ಉದ್ಯೋಗ, ಪಶುಸಂಗೋಪನೆಯಂಥ ಚಟುವಟಿಕೆಗಳನ್ನು ಕೈಗೊಳ್ಳಲು ಆಶ್ರಮಕ್ಕೆ ಸಬರ್ಮತಿ ನದಿಯ ದಂಡೆಯಲ್ಲಿರುವ ಅಹಮದಾಬಾದಿನ ಖಾಲಿ ಜಾಗವೇ ಸೂಕ್ತವಾಗಿ ತೋರಿತು. ಪೌರಾಣಿಕವಾಗಿ ಜಾಗವು ನ್ಯಾಯಕ್ಕಾಗಿ ತನ್ನ ಎಲುಬನ್ನೇ ದಾನ ಮಾಡಿದ ಋಷಿ ದಧೀಚಿಯ ಆಶ್ರಮವಾಗಿದ್ದು, ಒಂದು ಕಡೆ ಸಬರ್ಮತಿ ಜೈಲು ಮತ್ತು ಮತ್ತೂಂದು ಕಡೆ ಸ್ಮಶಾನ ಇರುವ ಈ ಜಾಗವನ್ನು ತಮ್ಮ ಆಶ್ರಮಕ್ಕಾಗಿ ಗಾಂಧೀಜಿ ಆಯ್ಕೆ ಮಾಡಿಕೊಂಡರು. ಸುಮಾರು 36 ಎಕರೆ ವಿಸ್ತಾರವುಳ್ಳ ಸಬರ್ಮತಿ ಆಶ್ರಮಕ್ಕೆ ಜೂನ್ 17, 1917ರಂದು ಗಾಂಧೀಜಿಯು ಸಂಗಡಿಗರೊಂದಿಗೆ ತಮ್ಮ ವಸತಿಯನ್ನು ವರ್ಗಾಯಿಸಿದರು.
ಅಹಮದಾಬಾದಿನ ರೈಲ್ವೇ ನಿಲ್ದಾಣದಿಂದ ಸುಮಾರು 7 ಕಿ.ಮೀ. ದೂರ ಹಾಗೂ ವಿಮಾನ ನಿಲ್ದಾಣದಿಂದ 8 ಕಿ.ಮೀ. ದೂರದಲ್ಲಿರುವ ಆಶ್ರಮವು ಬೆಳಿಗ್ಗೆ 8.30ರಿಂದ ಸಂಜೆ 6.30ರವರೆಗೆ ವರ್ಷದ ಎಲ್ಲ ದಿನಗಳೂ ತೆರೆದಿರುತ್ತದೆ. ಪ್ರವೇಶ ಶುಲ್ಕವಿಲ್ಲ. ಆಶ್ರಮ ಪ್ರವೇಶಿಸಲು ಇಂಥದೇ ಉಡುಪು ಧರಿಸಬೇಕೆಂಬ ನಿಯಮವಿಲ್ಲದಿದ್ದರೂ ಆಶ್ರಮಕ್ಕೆ ಮರ್ಯಾದೆ ಕೊಡುವಂತಹ ಉಡುಪು ಧರಿಸಬೇಕೆಂಬ ಕೋರಿಕೆಯಿದೆ. ಆಶ್ರಮದ ಅಂಗಳದಲ್ಲಿ ಸಾಕಷ್ಟು ಮರ-ಗಿಡಗಳಿದ್ದು ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿರುತ್ತದೆ, ನವಿಲುಗಳು ಬಂದು ನಮ್ಮನ್ನು ಮಾತಾಡಿಸಲು ಮರೆಯುವುದಿಲ್ಲ, ಆಶ್ರಮದ ಹಿಂದಿರುವ ಸಬರ್ಮತಿ ನದಿಯಿಂದ ತಣ್ಣನೆಯ ಗಾಳಿಯಂತೂ ಬೀಸುತ್ತಿರುತ್ತದೆ. ಈ ವಾತಾವರಣವೇ ಮನಸ್ಸಿನ ದುಗುಡ, ದುಮ್ಮಾನ ಮತ್ತು ಗಲಿಬಿಲಿಯನ್ನು ಮರೆಸಿ ಶಾಂತಿಯ ಅನುಭೂತಿಯಾಗುವುದು ಖಂಡಿತ. ಆಶ್ರಮದ ಬಲಭಾಗದಲ್ಲಿ ವಿನೋಬಾ-ಮೀರ ಕುಟೀರ, ಉಪಾಸನ ಮಂದಿರ, ಹೃದಯ ಕುಂಜ, ನಂದಿನಿ, ಮಗನ್ ನಿವಾಸ ಮತ್ತು ಸೋಮನಾಥ ಛತ್ರಾಲಯವಿದೆ. ಎಡ ಭಾಗದಲ್ಲಿ ಗಾಂಧಿಸ್ಮಾರಕ ಸಂಗ್ರಹಾಲಯವಿದೆ.
ಹೃದಯ ಕುಂಜ
1917ರಿಂದ 1930ರ ವರೆಗೆ ಮಹಾತ್ಮಾ ಗಾಂಧೀಜಿಯು ತಮ್ಮ ಪತ್ನಿ ಕಸ್ತೂರಿ ಬಾ ಗಾಂಧಿಯೊಂದಿಗೆ ಇಲ್ಲಿಯೇ ವಾಸವಾಗಿದ್ದರು. ನಿವಾಸದಲ್ಲಿ ಅಡಿಗೆಮನೆ, ಕಸ್ತೂರಿ ಬಾ ಮತ್ತು ಗಾಂಧೀಜಿಯ ಕೊಠಡಿ, ಉಗ್ರಾಣ, ಅತಿಥಿಗಳ ಕೊಠಡಿ, ಸಚಿವಾಲಯ, ಹೀಗೆ ಒಟ್ಟು ಆರು ಕೊಠಡಿಗಳಿದ್ದು, ಮುಂಭಾಗದ ಚಾವಡಿ ಬಿಟ್ಟು ಉಳಿದ ಕೊಠಡಿಗಳಿಗೆ ಪ್ರವೇಶವಿಲ್ಲ. ಗಾಂಧೀಜಿ ಉಪಯೋಗಿಸುತ್ತಿದ್ದ ಚರಕ ಮತ್ತು ಮೇಜನ್ನು ಕಿಟಕಿಯಿಂದ ನೋಡಬಹುದು.
ವಿನೋಬಾ-ಮೀರಾ ಕುಟೀರ
ಆಚಾರ್ಯ ವಿನೋಬಾ ಭಾವೆಯನ್ನು ಗಾಂಧೀಜಿ ತುಂಬಾ ಪ್ರಶಂಸಿಸುತ್ತಿದ್ದರು, ಅಲ್ಲದೆ ತಮ್ಮ ಸತ್ಯದ ಚಳುವಳಿಗೆ ಅವರೇ ಗುರುವೆನ್ನುತ್ತಿದ್ದರು. ಆಚಾರ್ಯ ವಿನೋಬಾ ಭಾವೆ 1918ರಿಂದ 1921ರ ವರೆಗೆ ಇಲ್ಲಿದ್ದರು. ಮುಂದೆ ಭೂದಾನ ಚಳುವಳಿ ನೇತೃತ್ವ ವಹಿಸಿದಾಗ ಆಶ್ರಮ ಬಿಟ್ಟರು. ಮೆಡೆಲೀನ್ ಸ್ಲೇಡ್, ಬ್ರಿಟಿಶ್ ಸೇನಾಪತಿಯ ಮಗಳು ಗಾಂಧೀಜಿಯ ಹಿಂಬಾಲಕಳಾಗಿ ಈ ಆಶ್ರಮದಲ್ಲಿ ತಂಗಿದ್ದರು. ಗಾಂಧಿಜಿಯು ಮೆಡೆಲೀನ್ ಸ್ಲೇಡ್‌ಗೆ ಇಟ್ಟ ಹೆಸರು ಮೀರಾ (ಬೇನ್). ಮೀರಾ ಈ ಆಶ್ರಮದಲ್ಲಿ 1925 ರಿಂದ 1933 ವರೆಗೆ ತಂಗಿದ್ದರು.
ಮಗನ್ ನಿವಾಸ: ಗಾಂಧೀಜಿಯ ಸಂಬಂಧಿ, ಅನುಯಾಯಿ ಹಾಗೂ ಆಶ್ರಮದ ವ್ಯವಸ್ಥಾಪಕ ಮಗನ್‌ಲಾಲ್‌ಗಾಂಧಿಯ ನಿವಾಸವಿದು. ಗಾಂಧೀಜಿಯ ಪ್ರಕಾರ ಮಗನ್‌ಲಾಲ್ ಆಶ್ರಮದ ಆತ್ಮ.
ಉಪಾಸನ ಮಂದಿರ: ಹೃದಯ ಕುಂಜ ಮತ್ತು ಮಗನ್ ನಿವಾಸದ ಮಧ್ಯದಲ್ಲಿದೆ. ಈ ಮೈದಾನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆಯ ಸಭೆಗಳು ನಡೆಯುತ್ತಿತ್ತು, ಹಾಗೂ ಎಲ್ಲ ಮತಗಳ ಭಜನೆಗಳನ್ನು ಮಾಡುತ್ತಿದ್ದರು. ಇಲ್ಲಿಯೇ ಗಾಂಧೀಜಿ ಜನರ ಸುಖ-ದುಃಖಗಳನ್ನು ವಿಚಾರಿಸಿಕೊಳ್ಳುತ್ತಿದ್ದರಂತೆ.
ನಂದಿನಿ: ಇದು ಅತಿಥಿಗಳ ಕೊಠಡಿ, ಇಲ್ಲಿ ಅನೇಕ ರಾಷ್ಟ್ರೀಯ ನಾಯಕರು ತಂಗಿದ್ದರು.
ಉದ್ಯೋಗ ಮಂದಿರ: 1918ರಲ್ಲಿ ಅಹಮದಾಬಾದಿನ ಐತಿಹಾಸಿಕ ಗಿರಣಿ ಕಾರ್ಮಿಕರ ಮುಷ್ಕರವಾದಾಗ ಕಟ್ಟಿದ ಕಟ್ಟಡವಿದು, ಗಾಂಧೀಜಿಯೂ ಮೊದಲಿಗೆ ಇಲ್ಲಿಯೇ ಒಂದು ಚಿಕ್ಕ ಕೊಠಡಿಯಲ್ಲಿದ್ದರಂತೆ.
ಸೋಮನಾಥ ಛತ್ರಾಲಯ: ಸುಮಾರು 100 ಕೊಠಡಿಗಳ ಕಟ್ಟಡವಾಗಿದ್ದು ಇದರಲ್ಲಿ ಆಶ್ರಮದ ವಿದ್ಯಾರ್ಥಿಗಳ, ಸ್ವದೇಶಿ ಚಳುವಳಿಗಳಲ್ಲಿ ಭಾಗವಹಿಸುವವರ ತಂಗುದಾಣವಾಗಿತ್ತು ಮತ್ತು ಹಲವು ತರಬೇತಿಗಳಲ್ಲಿ ಪಾಲುಗೊಳ್ಳುವವರೂ ಇಲ್ಲಿದ್ದರು, ಸಾಮುದಾಯಿಕ ಅಡಿಗೆಮನೆಯಿದೆ ಇಲ್ಲಿ. ಈಗ ಇದು ಹೆಣ್ಣು ಮಕ್ಕಳ ವಿದ್ಯಾರ್ಥಿನಿ ನಿಲಯವಾಗಿದ್ದು, 100ಕ್ಕೂ ಹೆಚ್ಚು ಮಕ್ಕಳಿ¨ªಾರೆ.
ಗಾಂಧಿ ಸ್ಮಾರಕ ಸಂಗ್ರಹಾಲಯ
ಮೊದಲು ಸಂಗ್ರಹಾಲಯವು ಗಾಂಧೀಜಿಯ ನಿವಾಸವಾದ ಹೃದಯ ಕುಂಜದಲ್ಲೇ ಇದ್ದು, ಅನಂತರ ಗಾಂಧಿ ಸ್ಮಾರಕ ಸಂಗ್ರಹಾಲಯದ ಕಟ್ಟಡವನ್ನು ಕಟ್ಟಿಸಲಾಯಿತು, ಮೇ 10, 1963ರಲ್ಲಿ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಇದನ್ನು ಉದ್ಘಾಟಿಸಿದರು, ಇದರ ವಾಸ್ತುಶಿಲ್ಪಿ ಚಾಲ್ಸ…ì ಕೊರಿಯಾ. ಆಶ್ರಮದಲ್ಲಿ ವಾಚನಾಲಯವೂ ಇದೆ. ಮಧ್ಯದಲ್ಲಿ ಈಜುಕೊಳವಿದೆ.
ಗಾಂಧಿ ಇನ್ ಅಹಮದಾಬಾದ್ ಗ್ಯಾಲರಿಯಲ್ಲಿರುವ 1915-1930ರವರೆಗೆ ಅಹಮದಾಬಾದಿನಲ್ಲಿ ಗಾಂಧೀಜಿಯ ಜೀವನ ಮತ್ತು ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಗಳಿವೆ. ಪೈಂಟಿಂಗ್ ಗ್ಯಾಲರಿಯಲ್ಲಿ 8 ಆಳೆತ್ತàರದ ವಿವಿಧ ಭಂಗಿಯಲ್ಲಿರುವ ಗಾಂಧೀಜಿಯ ಭಾವಚಿತ್ರಗಳಿವೆ. ಮೈ ಲೈಫ್ ಇಸ್ ಮೈ ಮೇಸೇಜ್ ಗ್ಯಾಲರಿಯಲ್ಲಿ ಇನ್ನೂರೈವತ್ತಕ್ಕೂ ಅಧಿಕ ಗಾಂಧೀಜಿಯ ಜೀವನದ ಮೈಲಿಗಲ್ಲನ್ನು ಬಿಂಬಿಸುವ ಕಪ್ಪು ಬಿಳುಪು ಛಾಯಾಚಿತ್ರಗಳಿವೆ. ಸಂಗ್ರಹಾಲಯದ ಒಳಾಂಗಣದಲ್ಲಿ ಗಾಂಧೀಜಿಯ ಉಲ್ಲೇಖಗಳು, ಗಾಂಧೀಜಿಗೆ ಬಂದ ಮತ್ತು ಗಾಂಧೀಜಿ ಬರೆದ ಪತ್ರಗಳ ಪ್ರದರ್ಶನವಿದೆ.
ಲೈಬ್ರರಿ ಮತ್ತು ದಾಖಲೆಗಳು (Archive): ಲೈಬ್ರರಿಯಲ್ಲಿ ಗಾಂಧೀಜಿಯ ಜೀವನ, ಕಾರ್ಯ ಮತ್ತು ಬೋಧನೆಗಳಿಗೆ ಸಂಬಂಧಪಟ್ಟ 50 ಸಾವಿರ ಪುಸ್ತಕಗಳಿವೆ, ಅವುಗಳಲ್ಲಿ ಮಹಾದೇವಭಾಯಿ ದೇಸಾಯಿ ಸ್ವಂತಕ್ಕೆಂದು ಸಂಗ್ರಹಿಸಿದ ಗಾಂಧೀಜಿಗೆ ಸಂಬಂಧಪಟ್ಟ 4,500 ಪುಸ್ತಕಗಳೂ ಸೇರಿವೆ. ಗಾಂಧೀಜಿ ಉಪಯೋಗಿಸುತ್ತಿದ್ದ ವಿಳಾಸಗಳಿರುವ ಡೈರಿ, ಜೈಲಿನಲ್ಲಿ ಬರೆಯುತ್ತಿದ್ದ ಡೈರಿ, ಗಾಂಧೀಜಿಯ 30 ಸಾವಿರಕ್ಕೂ ಅಧಿಕ ಕಾಗದಪತ್ರಗಳು, ಹಸ್ತಪ್ರತಿಗಳು, ಶುಭಾಶಯ ಗಳು, ಭಾವಚಿತ್ರಗಳ ಪ್ರತಿಗಳಿವೆ. ಅಲ್ಲದೇ ಪತ್ರಿಕೆಗಳಾದ ಯಂಗ್ ಇಂಡಿಯಾ, ನವಜೀವನ್, ಹರಿಜನ, ಗಾಂಧೀಜಿಯ ಬಗ್ಗೆ ಬರೆದ ಲೇಖನಗಳ ಸಂಗ್ರಹವಿದೆ.
ಸಬರ್ಮತಿ ಆಶ್ರಮ ಪ್ರಿಸರ್ವೇಶನ್ ಮತ್ತು ಮೆಮೋರಿಯಲ್ ಟ್ರಸ್ಟ್ ಆಶ್ರಮದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಟ್ರಸ್ಟ್ ಜೂನ್ 17, 2017 ರಂದು ಆಶ್ರಮದ ಶತಮಾನೋತ್ಸವದ ಆಚರಣೆಯ ಅಂಗವಾಗಿ ಸರ್ವಧರ್ಮ ಪ್ರಾರ್ಥನೆಯಲ್ಲದೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಸ್ವಾತಂತ್ರ್ಯ ಚಳುವಳಿಯ ಮುಖ್ಯ ಅಧ್ಯಾಯ ವಾಗಿರುವ “ಸಬರ್ಮತಿ ಆಶ್ರಮ’ಕ್ಕೆ ಸಾಧ್ಯವಾದರೆ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯೂ ಒಮ್ಮೆಯಾದರೂ ಸಂದರ್ಶಿಸಬೇಕು.
ಗೀತಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.