ಸಂಯುಕ್ತಾ ಕಿರಿಕ್
Team Udayavani, Jan 28, 2018, 2:25 PM IST
ಬಿಗ್ ಬಾಸ್’ ಮನೆಯಿಂದ ಬಂದ ಮೇಲೆ ಸಂಯುಕ್ತಾ ಹೆಗ್ಡೆ ಏನು ಮಾಡುತ್ತಿದ್ದಾರೆ? ಮೊದಲು ಶ್ರೀಲಂಕಾಗೆ ಒಂದು ಪ್ರವಾಸ ಹೋಗಿ ಬಂದರು. ಆ ನಂತರ ಜಿಮ್, ಫ್ರೆಂಡ್ಸ್ ಎಂದು ಬಿಝಿಯಾಗಿದ್ದಾರೆ. ಹಾಗಾದರೆ, ಸಿನಿಮಾ? ಸದ್ಯಕ್ಕೆ ಯಾವ ಆಫರ್ ಬಂದಿಲ್ಲ ಮತ್ತು ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ ಎಂದು ಸಂಯುಕ್ತಾ ಸ್ವತಃ ಹೇಳಿಕೊಂಡಿದ್ದಾರೆ.
ಹಾಗಾದರೆ, ಸಂಯುಕ್ತಾ ಅವರ ಸಿನಿಮಾ ಕೆರಿಯರ್‌ನ ಕಥೆ? ಸದ್ಯಕ್ಕೆ ಗೊತ್ತಿಲ್ಲ. ಒಂದೇ ಒಂದು ವರ್ಷದ ಹಿಂದೆ, ಸಂಯುಕ್ತ ಬೇಡಿಕೆಯ ನಟಿಯಾಗಿದ್ದರು. ಆದರೆ, ಈಗ ಅವರಿಗೆ ಬೇಡಿಕೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ, ಕಳೆದ ವರ್ಷ ಆದ ಹಲವು ಘಟನೆಗಳು ಮತ್ತು ವಿವಾದಗಳು. ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಕಾರಣ, ಸಂಯುಕ್ತ ಹೆಗ್ಡೆಗೆ ಕಿರಿಕ್ ಪಾರ್ಟಿ ಎಂದು ಸಂಬೋಧಿಸಲಾಯಿತು. ಅದ್ಯಾರು, ಅದ್ಯಾವ ಘಳಿಗೆಯಲ್ಲಿ ಸಂಯುಕ್ತ ಅವರನ್ನು “ಕಿರಿಕ್ ಹುಡ್ಗಿ’ ಎಂದು ಕರೆದರೋ, ವರ್ಷದ ಕೊನೆಯ ಹೊತ್ತಿಗೆ, ಸಂಯುಕ್ತ ಅಕ್ಷರಶಃ “ಕಿರಿಕ್ ಹುಡುಗಿ’ಯೇ ಆಗಿಬಿಟ್ಟರು. ಅದಕ್ಕೆ ಕಾರಣ, ಹಲವು ವಿವಾದಗಳು. ಹೌದು, “ಕಿರಿಕ್ ಪಾರ್ಟಿ’ಯಲ್ಲಿ ಲವಲವಿಕೆಯಿಂದ ಕಾಣಿಸಿಕೊಂಡ ಸಂಯುಕ್ತ, ಆ ನಂತರ ತಮ್ಮ ಅಭಿನಯ ಮತ್ತು ಪ್ರತಿಭೆಗಳಿಂದ ಗುರುತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಕಿರಿಕ್‌ನಿಂದಲೇ
ಗುರುತಿಸಿಕೊಂಡಿರುವುದು ಮತ್ತು ಅದೇ ಕಾರಣಕ್ಕೆ ಎಲ್ಲರಿಂದಲೂ “ಕಿರಿಕ್ ಹುಡುಗಿ’ ಎಂಬ ಹಣೆಪಟ್ಟೆ ಕಟ್ಟಿಕೊಂಡಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಯಾದ ಮೇಲೆ ಎಲ್ಲವೂ ಚೆನ್ನಾಗಿಯೇ ಇತ್ತು. ಚಿತ್ರ ಬಿಡುಗಡೆಯಾಗಿ ಮೂರ್‍ನಾಲ್ಕು ತಿಂಗಳಾದ ಮೇಲೆ ಸಂಯುಕ್ತಾ, ಕಾಲೇಜ್ ಕುಮಾರ್ ಮತ್ತು ವಾಸು – ಪಕ್ಕಾ ಲೋಕಲ್ ಎಂಬ ಎರಡು ಚಿತ್ರಗಳನ್ನು ಒಪ್ಪಿಕೊಂಡರು. ಆದರೆ, ಕೆಲವೇ ದಿನಗಳಲ್ಲಿ ಪರಭಾಷಾ ಚಿತ್ರವೊಂದರಲ್ಲಿ ಅವಕಾಶ ಸಿಕ್ಕ ಕಾರಣಕ್ಕೆ ಕನ್ನಡ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಸುದ್ದಿಯಾಯಿತು.
ಈ ಬೆಳವಣಿಗೆಯಿಂದ ಬೇಸರಗೊಂಡ ಅನೀಶ್, ಸಂಯುಕ್ತಾ ಅವರನ್ನು ಬಿಟ್ಟು, ಇನ್ನೊಬ್ಬ ನಾಯಕಿಯನ್ನು ಹಾಕಿಕೊಂಡು ಚಿತ್ರ ಮುಂದುವರೆಸಿದರು. ಆದರೆ, ಕಾಲೇಜ್ ಕುಮಾರ್ ಚಿತ್ರದವರು ಕರಾರಿನ ಪ್ರಕಾರ ಸಂಯುಕ್ತಾ ನಟಿಸಬೇಕೆಂದು ಪಟ್ಟು ಹಿಡಿದಿದ್ದರಿಂದ, ಸಂಯುಕ್ತ ನಟಿಸಬೇಕಾಯಿತು. ಚಿತ್ರದಲ್ಲೇನೋ ಸಂಯುಕ್ತ ನಟಿಸಿದರು. ಆ ನಂತರ ಪ್ರಚಾರಕ್ಕೆ ಹೋಗದೆ ಚಿತ್ರತಂಡದವರನ್ನು ವಿಪರೀತ ಆಟ ಆಡಿಸಿದರಂತೆ. ಸಂಯುಕ್ತಾ ಅವರ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತು, ಕಾಲೇಜ್ ಕುಮಾರ್ ನಿರ್ಮಾಪಕ ಪದ್ಮನಾಭ್ ಕೊನೆಗೆ ಅಳಲು ತೋಡಿಕೊಂಡಿದ್ದೂ
ಆಯಿತು. ಆದರೆ, ಅದರಿಂದ ಚಿತ್ರಕ್ಕೂ ಪ್ರಯೋಜನವಾಗಲಿಲ್ಲ, ಸಂಯುಕ್ತಾ ಸಹ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ಇದೆಲ್ಲಾ ಆಗುತ್ತಿದ್ದಂತೆಯೇ, “ಬಿಗ್ ಬಾಸ್’ ಮನೆಗೆ ಹೋದರು ಸಂಯುಕ್ತಾ. ಒಂದೆರಡು ದಿನಗಳಲ್ಲೇ ಜಗಳಗಂಟಿ ಎಂಬ ಪಟ್ಟ ಹೊತ್ತ ಸಂಯುಕ್ತ, ಸಮೀರ್ ಆಚಾರ್ಯ ಅವರ ಜೊತೆಗೆ ಜಗಳ ಆಡಿ, ಮನೆಯಿಂದ ಹೊರಬರಬೇಕಾಯಿತು.
ಇಷ್ಟೆಲ್ಲಾ ಘಟನೆಗಳಿಂದ ಸಂಯುಕ್ತಾಗೆ ವಿವಾದಿತ ನಟಿ ಎಂಬ ಹಣೆಪಟ್ಟಿ ಬಿದ್ದುಬಿಟ್ಟಿದೆ. ಅದರಿಂದ ಹೊರ ಬಂದು, ಆಕೆ ತಾನು ಬರೀ ವಿವಾದಕ್ಕೆ ಮಾತ್ರವಲ್ಲ, ಒಳ್ಳೆಯ ಅಭಿನಯಕ್ಕೂ ಸೈ ಎಂದು ತೋರಿಸುವುದಕ್ಕೆ, ಒಂದೊಳ್ಳೆಯ ಕಥೆ ಮತ್ತು ಪಾತ್ರದ ಅವಶ್ಯಕತೆ ಇದೆ. ಅಂಥಾದ್ದೊಂದು ಅವಕಾಶವನ್ನು ಅದ್ಯಾರು ಕೊಟ್ಟು, ಸಂಯುಕ್ತಾ ಮೇಲಿರುವ ಅಪವಾದಗಳನ್ನು ತೊಡೆದು ಹಾಕುತ್ತಾರೋ ನೋಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.