ಚಂದನವನದಲ್ಲಿ ಮತ್ತೆ ಸಂಗೀತಾ ಕಾರ್ಯಕ್ರಮ
Team Udayavani, Nov 10, 2019, 4:11 AM IST
ಕಳೆದ ವರ್ಷ ಮಿಟೂ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಕನ್ನಡದ ನಟಿಯರಲ್ಲಿ ಸಂಗೀತಾ ಭಟ್ ಕೂಡ ಒಬ್ಬರು. ಅದಾದ ಬಳಿಕ ಚಿತ್ರರಂಗದಲ್ಲಿ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಸಂಗೀತಾ ಭಟ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಈ ಬಾರಿ ಯಾವುದೋ ಕಾಂಟ್ರವರ್ಸಿಯಿಂದ ಸಂಗೀತಾ ಸುದ್ದಿಯಾಗಿಲ್ಲ. ಬದಲಾಗಿ ತನ್ನ ಸಿನಿಮಾದ ವಿಷಯದಿಂದ ಸುದ್ದಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಿಟೂ ಆರೋಪ ಜೋರಾಗಿ ಕೇಳಿಬಂದ ಸಮಯದಲ್ಲಿ ನಟಿ ಸಂಗೀತಾ ಭಟ್ ಹಾಕಿದ ಪೋಸ್ಟ್‌ವೊಂದು ಜೋರಾಗಿ ಸದ್ದು ಮಾಡಿತು. ಆಕೆಯ ಹೇಳಿಕೆಗೆ ಪರ-ವಿರೋಧಗಳು ಕೇಳಿಬಂದಿದ್ದವು. ಅಂತಿಮವಾಗಿ ಸಂಗೀತಾ, “ನಾನು ಇನ್ನು ನಟಿಸುವುದಿಲ್ಲ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ’ ಎಂದು ಹೇಳಿ ಚಿತ್ರರಂಗದಿಂದ ದೂರ ಉಳಿದಿದ್ದರು.
ಇದರಿಂದ ಸಹಜವಾಗಿಯೇ ಸಿನಿಪ್ರಿಯರು ಮತ್ತು ಚಿತ್ರರಂಗದ ಅನೇಕರಿಗೆ ಮತ್ತೆ ಸಂಗೀತಾ ಚಿತ್ರರಂಗಕ್ಕೆ ಬರುತ್ತಾರಾ? ಈಗಾಗಲೇ ಅಭಿನಯಿಸಿರುವ ಚಿತ್ರಗಳ ಪ್ರಮೋಶನ್ಸ್‌ಗೆ ಬರುತ್ತಾರಾ? ಅಥವಾ ಚಿತ್ರರಂಗದ ಸಹವಾಸವೇ ಸಾಕು ಅಂಥ ದೂರ ಉಳಿಯುತ್ತಾರಾ ಎಂಬ ಹತ್ತಾರು ಪ್ರಶ್ನೆಗಳು ಮೂಡಿದ್ದವು. ಆದರೆ, ಈಗ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಟಿ ಸಂಗೀತಾ ಭಟ್ ನಿಧಾನವಾಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗುವ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಸಂಗೀತಾ ಭಟ್ ಅಭಿನಯಿಸಿರುವ ಕಪಟನಾಟಕ ಪಾತ್ರಧಾರಿ ಚಿತ್ರ ಬಿಡುಗಡೆಯಾಗಿ ತೆರೆಗೆ ಬಂದಿದೆ. ಇನ್ನು ಈ ಚಿತ್ರದ ಪ್ರಮೋಶನ್ ಕಾರ್ಯಗಳಲ್ಲೂ ಕಾಣಿಸಿಕೊಂಡಿದ್ದ ಸಂಗೀತಾ, ಕಪಟನಾಟಕ ಪಾತ್ರಧಾರಿ ನಾನು ತುಂಬಾ ಇಷ್ಟಪಟ್ಟ ಸಿನಿಮಾ. ಬೇರೆ ಜಾನರ್‌ನಲ್ಲಿರುವ ಚಿತ್ರ ಹಾಗೂ ಪಾತ್ರ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಕ್ರಿಶ್ ಅವರ ಕನಸಿದು ಎಂದು ಹಾಡಿ ಹೊಗಳಿದ್ದರು. ಒಟ್ಟಾರೆ ಈ ಮೂಲಕ ಸಂಗೀತಾ ಭಟ್ ಚಿತ್ರರಂಗದಿಂದ ದೂರವುಳಿಯುತ್ತಾರೆ ಅನ್ನೋ ಮಾತುಗಳಿಗೆ ಸದ್ಯದ ಮಟ್ಟಿಗೆ ಫುಲ್‌ಸ್ಟಾಪ್ ಬಿದ್ದಿದ್ದು, ಸಂಗೀತಾ ಭಟ್ ಇನ್ನೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ಆಸಕ್ತರಾಗಿದ್ದಾರೆ ಅನ್ನೋ ಅಂಶ ಈ ಮೂಲಕ ಖಾತ್ರಿಯಾದಂತಾಗಿದೆ.