ಸಂಕಗಿರಿಯನೇರಿ ಬನ್ನಿ
Team Udayavani, Jun 30, 2019, 5:00 AM IST
ಸಂಕಗಿರಿ ಎಂಬುದು ತಮಿಳ್ನಾಡಿನ ಈರೋಡಿ ನಿಂದ 22 ಕಿ. ಮೀ. ಹಾಗೂ ಸೇಲಂನಿಂದ 38 ಕಿ. ಮೀ. ದೂರದಲ್ಲಿರುವ ಒಂದು ಬೆಟ್ಟ. ತಮಿಳುನಾಡಿನ ಎತ್ತರದ ಬೆಟ್ಟಗಳಲ್ಲಿ ಇದು ಒಂದು. ದೂರದಿಂದ ವೀಕ್ಷಿಸುವಾಗ ಶಂಖಾಕೃತಿಯಲ್ಲಿರುವಂತೆ ಕಾಣುವುದರಿಂದ ಸಂಕಗಿರಿ ಎಂಬ ಅನ್ವರ್ಥನಾಮ ಹೊಂದಿದೆ. ಈ ಗಿರಿಯ ಮೇಲಿರುವ ಕೋಟೆಯು ಐತಿಹಾಸಿಕವಾಗಿ ಪ್ರಮುಖ ತಾಣವಾಗಿದ್ದು ಭಾರತದ ಪುರಾತತ್ವ ಇಲಾಖೆಯ ವಶದಲ್ಲಿದೆ. ಬೆಟ್ಟದ ತಪ್ಪಲಲ್ಲಿ ಸಂಕರಿ ಎಂಬ ಪುಟ್ಟ ಊರಿದೆ.
ಸಂಕಗಿರಿ ಕೋಟೆಯ ನಿರ್ಮಾಣ ಮೊತ್ತ ಮೊದಲಿಗೆ 15ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಆಯಿತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ಥಳೀಯ ರಾಜ ಅಳಗಿರಿ ಮರಾಠ ಹಾಗೂ ಬಿಜಾಪುರ ಸುಲ್ತಾನರ ಜಂಟಿ ದಾಳಿಯಲ್ಲಿ ಸೋತು ಹೋದ, ಮರಾಠ ರಾಜ ವೆಂಕೋಜಿ ಬಿಜಾಪುರ ಸುಲ್ತಾನನಿಂದ ಬೇರ್ಪಟ್ಟು ತಂಜಾವೂರಿನ ಮೇಲೆ ಅಧಿಪತ್ಯ ಹೊಂದಿದ. ಈ ಸಮಯದಲ್ಲಿ ಸ್ಥಳೀಯ ಚೆಟ್ಟಿಯಾರ್ ಜನಾಂಗದವರು ಆಕ್ರಮಣಕಾರರ ವಿರುದ್ಧ ದಂಗೆ ಎದ್ದರು. ಚೆಟ್ಟಿಯಾರ್ ಜನಾಂಗದ ಗಂಡಸರೆಲ್ಲರನ್ನೂ ವಧಿಸುವ ಆದೇಶ ಮರಾಠರಿಂದ ಬಂತು. ವಂಶ ನಾಶವಾಗದಿರಲೆಂದು ತಂಜಾವೂರಿನ ಚೆಟ್ಟಿಯಾರ್ ಹಿರಿಯರು 500 ಮಕ್ಕಳನ್ನು ಗುಪ್ತವಾಗಿ ಸಂಕಗಿರಿಯಲ್ಲಿ ಬಚ್ಚಿಟ್ಟರು. ಅಲ್ಲಿ ಶಿವ ಹಾಗೂ ಅಂಗಯರ್ ನಾಯಕಿಯ ದೇಗುಲಗಳನ್ನು ಕಟ್ಟಿಸಿದರು. ಸಂಕಗಿರಿ ಊರಿನಲ್ಲಿರುವ ದೇವಸ್ಥಾನ ಕಾಲಕ್ರಮೇಣ ಶಿಥಿಲವಾಗಿತ್ತು. ಇದನ್ನು ಸ್ಥಳೀಯರು ಪುನರುಜ್ಜೀವನಗೊಳಿಸಿದ್ದಾರೆ.
ಟಿಪ್ಪು ಸುಲ್ತಾನನ ಕಾಲದಲ್ಲಿ ಇದು ಸೇನೆಯ ಅಡಗುದಾಣವಾಗಿತ್ತು. ಈ ಬೆಟ್ಟದ ಒಂದು ಭಾಗವನ್ನು ಹತ್ತಲು ಅಸಾಧ್ಯವಾಗಿರುವುದರಿಂದ ಇದು ಸೇನೆಯ ಅಡಗುದಾಣಕ್ಕೆ ಪ್ರಶಸ್ತವಾಗಿತ್ತು. ಬ್ರಿಟಿಷರ ಕಾಲದಲ್ಲಿ ಇದು ಕೊಂಗುನಾಡಿನಿಂದ ಸಂಗ್ರಹಿಸಿದ ತೆರಿಗೆಯನ್ನು ಶೇಖರಿಸಿಡುವ ಸ್ಥಳವಾಗಿತ್ತು ಹಾಗೂ ಸೇನೆಯ ನೆಲೆಯಾಗಿತ್ತು. ತಮಿಳುನಾಡಿನ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಚಿನ್ನಮಲೈಯನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಈ ಕೋಟೆಯ ಒಳಗೆಯೇ.
ಕೋಟೆಯ ವೈಭವ
ಒಟ್ಟು ಹದಿನಾಲ್ಕು ಸುತ್ತುಗಳಿರುವ ಈ ಕೋಟೆಯ ಕೊನೆಯ ಮೂರು ಭಾಗಗಳು ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದವು. ಕೋಟೆಯ ವ್ಯಾಪ್ತಿ ಬೆಟ್ಟದ ಒಂದು ಬದಿ ಮಾತ್ರ. ಬೆಟ್ಟದ ಇನ್ನೊಂದು ಬದಿಯನ್ನು ಹತ್ತಲು ಅಸಾಧ್ಯವಾಗಿರುವುದರಿಂದ ನೈಸರ್ಗಿಕ ರಕ್ಷಣೆ ದೊರೆತಿತ್ತು.
ಮುಖ್ಯದ್ವಾರ ದಾಟಿ ಒಳ ಸರಿದಾಗ ಕಾಣುವ ಕೋಟೆಯ ಗೋಡೆಗಳು ಸದೃಢವಾಗಿವೆ. ಮೇಲ್ಮಟ್ಟದ ಗೋಡೆಗಳೂ ಕಣ್ಣಿಗೆ ಗೋಚರಿಸುವಂತೆ ಸುಸ್ಥಿತಿಯಲ್ಲಿವೆ. ನೆಲಮಟ್ಟದಲ್ಲಿ ನೀರು ಆರಿರುವ ಪುಷ್ಕರಿಣಿ, ಪುಟ್ಟಗುಡಿ ಹಾಗೂ ಮುರಿದ ನಂದಿ, ಕಲಾತ್ಮಕ ಕೆತ್ತನೆಗಳುಳ್ಳ ಕಂಬಗಳನ್ನು ಹೊಂದಿದ ಸುಂದರವಾದ ಮಂಟಪಗಳು ಕಾಣಸಿಗುತ್ತವೆ. ಎರಡನೆಯ ದ್ವಾರವನ್ನು ದಾಟಿ ಒಳಹೋದರೆ ಕೋಟೆ ಮಾರಿಯಮ್ಮ, ವರದರಾಜ ಪೆರುಮಾಳ್ ದೇವಸ್ಥಾನಗಳಿವೆ.
ಅಲ್ಲಿ ಸಿಕ್ಕಿದ ಸ್ಥಳೀಯರನ್ನು ವಿಚಾರಿಸಿದಾಗ, ‘ಮಟಮಟ ಮಧ್ಯಾಹ್ನ ಚಾರಣಕ್ಕೆ ಸೂಕ್ತವಾದ ಸಮಯವಲ್ಲ ಹಾಗೂ ಭದ್ರತೆಯ ದೃಷ್ಟಿಯಿಂದ ದೊಡ್ಡ ಗುಂಪುಗಳಲ್ಲಿ ಮೇಲೆ ಸಾಗಿ ವೀಕ್ಷಿಸುವುದು ಒಳಿತು’ ಎಂದರು. ಐತಿಹಾಸಿಕವಾಗಿ ಮುಖ್ಯವಾದ ಈ ಜಾಗವನ್ನು ಸರಿಯಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಪ್ರಯತ್ನಗಳು ನಡೆದೇ ಇಲ್ಲವೆನಿಸುತ್ತದೆ. ಶಿಥಿಲವಾಗುವ ಮೊದಲೇ ಅದನ್ನು ಉಳಿಸಿಕೊಂಡು ಪ್ರವಾಸೀ ತಾಣವಾಗಿ ಮಾಡಬಹುದು.
ಮಾರ್ಗಸೂಚಿ
ಬೆಂಗಳೂರಿನಿಂದ 240 ಕಿ.ಮೀ. ದೂರದಲ್ಲಿರುವ ಈ ಜಾಗಕ್ಕೆ ಸುತ್ತಮುತ್ತಲಿನ ಪ್ರದೇಶಗಳಿಂದ ಬಸ್ಸುಗಳ ಸೌಕರ್ಯವಿದ್ದರೂ ಸ್ವಂತ ವಾಹನದಲ್ಲಿ ಹೋಗುವುದು ಒಳಿತು. ಸೇಲಂ-ಕೊಯಮುತ್ತೂರಿನ ನಡುವಿನ ಹೆದ್ದಾರಿ 544ರಲ್ಲಿ ಪ್ರಯಾಣಿಸಿ ಸೇಲಂನಿಂದ ಸುಮಾರು 30 ಕಿ.ಮೀ. ದೂರದಲ್ಲಿ ಸೇಲಂ-ಸಂಕಗಿರಿ ರಸ್ತೆಯನ್ನು ಹಿಡಿಯಬೇಕು. ರಸ್ತೆಗಳು ಚೆನ್ನಾಗಿವೆ.
-ಉಮಾಮಹೇಶ್ವರಿ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.