ಎಳ್ಳು ಬೆಲ್ಲ ಒಳ್ಳೇ ಮಾತು


Team Udayavani, Jan 14, 2018, 5:30 PM IST

sap-sam-7.jpg

ಹಳೆಯ ದ್ವೇಷ, ಅಸೂಯೆ, ವೈಮನಸ್ಯ ತೊಡೆದು ಹೊಸವರ್ಷದಲ್ಲಿ ಒಳಿತಾಗಲಿ, ಒಳ್ಳೆಯ ಆಲೋಚನೆಗಳು ಬರಲಿ ಎನ್ನುವ ಶುಭಕಾಮನೆಗಳಿಂದ ಮುನ್ನುಡಿ ಬರೆದು ಆಚರಿಸುವ ಹಬ್ಬವೇ ಮಕರ ಸಂಕ್ರಾಂತಿ. ಭಗವಾನ್‌ ಸೂರ್ಯದೇವ ತನ್ನ ರಾಶಿಗತಿ ಬದಲಾಯಿಸಿ, ಧನುರಾಶಿಯಿಂದ ಮಕರರಾಶಿಗೆ ಪ್ರಯಾಣಿಸುವ ದಿನವೇ ಮಕರ ಸಂಕ್ರಾಂತಿ. ಮೈ ಕೊರೆಯುವ ಚಳಿಗೆ ವಿದಾಯ ಹೇಳಲು ಬಯಸಿ ಚೈತ್ರಾಗಮನಕ್ಕೆ ಕಾತರಿಸುವ ಶುಭಗಳಿಗೆ ಇದು. 

ಮಕರಸಂಕ್ರಾಂತಿ ಸೌರಮಾನದ ಹಬ್ಬ. ಈ ಹಬ್ಬದಲ್ಲಿ ಸೂರ್ಯದೇವನಿಗೆ ಆದ್ಯತೆ. ಸೂರ್ಯ ನಮಗೆ ಶಾಖ, ಬೆಳಕು ಶಕ್ತಿ ಕೊಡುವುದರಿಂದ ಆತನಿಗೆ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ಹಬ್ಬ. ಧಾರ್ಮಿಕವಾಗಿ ಕೂಡ ಮಹತ್ವಗಳಿಸಿರುವ ಉತ್ತರಾಯಣದ ಪ್ರಾರಂಭ. ಮಕರಸಂಕ್ರಾಂತಿ ಹಾಗೂ ಅನಂತರದ ದಿನಗಳಲ್ಲಿ ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಮಂಗಲ ಕಾರ್ಯಗಳನ್ನು ಮಾಡಿದರೆ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ. ಮಕರಸಂಕ್ರಾಂತಿಯ ದಿನದಿಂದ ಮುಂದಿನ ಆರು ತಿಂಗಳು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಕಾಲದಲ್ಲಿ ದೇಹತ್ಯಾಗ ಮಾಡಿದರೆ ಮೋಕ್ಷಪ್ರಾಪ್ತಿಯಾಗುತ್ತದೆಂಬ ನಂಬಿಕೆಯೂ ಇದೆ. ಮಹಾಭಾರತದಲ್ಲಿ ಇಚ್ಛಾಮರಣಿ ಭೀಷ್ಮ ಶರಶಯೆÂಯಲ್ಲಿ ಮಲಗಿ ಪ್ರಾಣತ್ಯಾಗ ಮಾಡಲು ಉತ್ತರಾಯಣ ಪುಣ್ಯಕಾಲಕ್ಕೆ ಕಾದಿದ್ದನ್ನು ನೆನಪು ಮಾಡಿಕೊಳ್ಳಬಹುದು. ಮಕರಸಂಕ್ರಾಂತಿಯ ನಂತರ ಹಗಲಿನ ಅವಧಿ ಹೆಚ್ಚಾಗಿ ರಾತ್ರಿಯ ಅವಧಿ ಕಡಿಮೆಯಾಗುತ್ತದೆ.

ಸಮೃದ್ಧಿಯ ಕಾಲ
ಸಂಕ್ರಾಂತಿ ಸುಗ್ಗಿಯ ಕಾಲ; ಸಮೃದ್ಧಿಯ ಕಾಲ. ಕೃಷಿಕರಿಗಂತೂ ಸಂತಸ ಸಂಭ್ರಮದ ಕಾಲ. ಹೊಸಬೆಳೆ ಕೊಯಿಲಿಗೆ ಬಂದಿರುತ್ತದೆ. ಅದನ್ನು ಕಟಾವುಮಾಡಿ ಒಟ್ಟುಗೂಡಿಸಿ ಧಾನ್ಯರಾಶಿಗೆ ಪೂಜೆಮಾಡುವ ಕಾಲ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ತಮಿಳುನಾಡುಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ “ಮಕರಸಂಕ್ರಾಂತಿ’ ಎಂದೂ, ತಮಿಳುನಾಡಿನಲ್ಲಿ “ಪೊಂಗಲ್‌’ ಎಂದೂ, ಆಂಧ್ರದಲ್ಲಿ “ಸಂಕ್ರಾಂತಿ’ ಅಥವಾ “ಕನುಮ ಪಂಡುಗ’ ಎಂದೂ ಕರೆಯುತ್ತಾರೆ. ಕೇರಳದಲ್ಲಿ ಶಬರಿಮಲೆಗೆ ಈ ಹಬ್ಬಕ್ಕೆ ಅವಿನಾಭಾವ ಸಂಬಂಧ ಕಲ್ಪಿಸಿದ್ದಾರೆ. 

ಉತ್ತರಇಂಡಿಯಾದಲ್ಲಿ ಈ ಹಬ್ಬವು ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತದೆ. ಗುಜರಾತ್‌ನಲ್ಲಿ ಉತ್ತರಾಯಣವೆಂದೂ, ಹರಿಯಾಣ ಮತ್ತು ಹಿಮಾಚಲಪ್ರದೇಶಗಳಲ್ಲಿ ಮಾಗಿ ಎಂದೂ, ಉತ್ತರಪ್ರದೇಶದಲ್ಲಿ ಕಿಚಡಿ ಎನ್ನುವ ಹೆಸರುಗಳಲ್ಲೂ ಆಚರಿಸುತ್ತಾರೆ. ಈ ಹಬ್ಬದಲ್ಲಿ ಉತ್ತರಭಾರತದ ಜನರು ಗಾಳಿಪಟ ಹಾರಿಸುವುದನ್ನು ಒಂದು ಪದ್ಧತಿಯನ್ನಾಗಿ ರೂಢಿಸಿಕೊಂಡಿದ್ದಾರೆ. 

ಕರ್ನಾಟಕದಲ್ಲಿ ಹಬ್ಬದ ದಿನ ಮನೆಯನ್ನು ಶುಚಿಗೊಳಿಸಿ ರಂಗವಲ್ಲಿಯನ್ನಿಟ್ಟು, ಅದರ ಮೇಲೆ ಹೂಗಳಿಂದ ಅಲಂಕರಿಸುತ್ತಾರೆ. ತಳಿರು ತೋರಣಗಳಿಂದ ಮನೆಗಳನ್ನು ಶೃಂಗರಿಸುತ್ತಾರೆ. ಅಕ್ಕಿ ಹೆಸರುಬೇಳೆ, ಬೆಲ್ಲ ಬೆರೆಸಿದ ಸಿಹಿ ಪೊಂಗಲ್‌ ತಯಾರಿಸಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಸಾಮಾನ್ಯ ಜನಗಳಲ್ಲಿ ಎಳ್ಳು ಕೊಡುವುದಕ್ಕೆ ನಿಷೇಧವಿದೆ. ಆದ್ದರಿಂದ ಈ ಹಬ್ಬದಲ್ಲಿ ಹುರಿದ ಎಳ್ಳಿನ ಜೊತೆ ಕೊಬ್ಬರಿ, ಬೆಲ್ಲ, ಕಡಲೆಬೀಜ, ಹುರಿಗಡಲೆ ಬೆರೆಸಿ ಅದರ ಜೊತೆ ಕಬ್ಬು ಬಾಳೆಹಣ್ಣು, ಸಕ್ಕರೆ ಅಚ್ಚುಗಳನ್ನಿಟ್ಟು ಬಂಧುಬಳಗಕ್ಕೆ ಮತ್ತು ಸ್ನೇಹಿತರಿಗೆ ಹಂಚುತ್ತಾರೆ. ಎಳ್ಳು ಕೊಡುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಶಿಶಿರದ ಚಳಿ ಅನುಭವಿಸಿದವರಿಗೆ ಎಳ್ಳಿನ ಸೇವನೆ ದೇಹದ ಉಷ್ಣತೆಯನ್ನು ಕಾಪಾಡುವು ದರ ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. 

ಸಂಕ್ರಾಂತಿಯ ದಿನ ಮನೆಮಕ್ಕಳನ್ನು ಕೂಡಿಸಿ ಆರತಿಮಾಡಿ, ಕಬ್ಬಿನ ಚೂರು, ಎಲಚೀಹಣ್ಣು, ಕಾಸುಗಳನ್ನು ಬೆರೆಸಿ ಪಾವಿನಲ್ಲಿ ತುಂಬಿಕೊಂಡು ತಲೆಯ ಮೇಲೆ ಸುರಿದು ಶುಭಹಾರೈಸುತ್ತಾರೆ. ಪೂಜೆಯ ನಂತರ ಹಿರಿಯರು ಮಕ್ಕಳಿಗೆ ಬೆರೆಸಿದ ಎಳ್ಳುಬೆಲ್ಲವನ್ನು ಕೊಟ್ಟು “ಎಳ್ಳು ತಿಂದು ಒಳ್ಳೆಯ ಮಾತನಾಡಿ’ ಎಂದು ಹರಸುತ್ತಾರೆ. 

ಸಂಕ್ರಾಂತಿಯ ದಿನಗಳಲ್ಲಿ ಕೃಷಿಕರು, ಕಾವಾಡಿಗರು ರಾಸುಗಳಿಗೆ ಮೈತೊಳೆದು ಬಣ್ಣಬಣ್ಣದ ಬಟ್ಟೆ ಹೊದಿಸಿ, ಕೊಂಬುಗಳಿಗೆ ಬಣ್ಣಬಳಿದು, ಗೆಜ್ಜೆಗಳಿಂದ ಅಲಂಕರಿಸುತ್ತಾರೆ. ಕೊರಳಿಗೆ ಹಾರಹಾಕಿ ಗಂಟೆಗಳನ್ನು ಕಟ್ಟಿ ಗೋಪೂಜೆ ಮಾಡಿ ಅವುಗಳಿಗೆ ಕೊಬ್ಬರಿ-ಬೆಲ್ಲ-ಅಕ್ಕಿಯ ಜೊತೆ ಮನೆಯಲ್ಲಿ ಮಾಡಿರುವ ತಿಂಡಿತಿನಿಸುಗಳನ್ನು ಉಣಿಸಿ, ಊರಿನಲ್ಲಿ ಮೆರವಣಿಗೆಯನ್ನು ಮಾಡುತ್ತಾರೆ. ಸಾಯಂಕಾಲವಾಗುತ್ತಿದ್ದಂತೆ ರಾಸುಗಳಿಂದ ಕಿಚ್ಚು ಹಾಯಿಸುತ್ತಾರೆ. ಅದುವರೆಗೂ ಹೊಲಗದ್ದೆಗಳಲ್ಲಿ ದುಡಿದ ರಾಸುಗಳ ಮೈಯಲ್ಲಿ, ಪಾದಗಳಲ್ಲಿ ಸೇರಿದ್ದ ಸೂಕ್ಷ್ಮಜೀವಿಗಳು ಕಿಚ್ಚು ಹಾಯಿಸುವುದರಿಂದ ನಾಶವಾಗುತ್ತವೆ.  ಆಂಧ್ರಪ್ರದೇಶದಲ್ಲಿ ಈ ಹಬ್ಬವನ್ನು ಮೂರುದಿನಗಳ ಕಾಲ ಆಚರಿಸುತ್ತಾರೆ.

 ಮೊದಲ ದಿನ ಭೋಗಿಹಬ್ಬ : ಸೂರ್ಯ ಮೂಡುವ ಮುನ್ನವೇ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಅಂದರೆ ಪೊರಕೆ, ಬುಟ್ಟಿ, ಮುರಿದ ಮರದ ಸಾಮನುಗಳನ್ನು, ನಾಲ್ಕು ರಸ್ತೆಗಳು ಕೂಡುವಲ್ಲಿ ಪೇರಿಸಿ ಬೆಂಕಿ ಹಚ್ಚುತ್ತಾರೆ. ಹೊಸವಸ್ತುಗಳಿಂದ ಹೊಸಜೀವನ ಆರಂಭಿಸುವ ಉದ್ದೇಶದಿಂದ ಆಚರಿಸುವ ಈ ದಿನವನ್ನು ಭೋಗಿಮಂಟ ಎಂದು ಕರೆಯುತ್ತಾರೆ. 

ಸಂಕ್ರಾಂತಿಯ ಎರಡನೆಯ ದಿನ ಜನರು ಹೊಸಬಟ್ಟೆ ಧರಿಸಿ, ಮನೆಯಲ್ಲಿ ಹಾಲು ಉಕ್ಕಿಸಿ, ಅದರಿಂದ ಸಿಹಿತಿಂಡಿಗಳನ್ನು ತಯಾರಿಸಿ ಮನೆಮಂದಿಯೆಲ್ಲ ತಿನ್ನುತ್ತಾರೆ. ಅಂದು ಸಾಮಾನ್ಯವಾಗಿ ಪಿತೃತರ್ಪಣವನ್ನು ಅರ್ಪಿಸುವ ರೂಢಿಯೂ ಕಂಡುಬರುತ್ತದೆ. 

ಮೂರನೆಯ ದಿವಸ ಕನುಮ ಪಂಡುಗ ಎಂದು ಕರೆಯುವ ಈ ಹಬ್ಬದಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ ಅದರ ಮಧ್ಯೆ ಸೆಗಣಿಯಿಟ್ಟು ಕುಂಬಳ ಹೂವಿನಿಂದ ಅಲಂಕರಿಸುತ್ತಾರೆ ಅವುಗಳನ್ನು ಗೊಬ್ಬೆಮ್ಮ ಅಥವಾ ಗೊಬ್ಬಿಳ್ಳು ಎಂದು ಕರೆಯುತ್ತಾರೆ. ಅವುಗಳನ್ನು ಹಸುಗಳಿಂದ ತುಳಿಸುತ್ತಾರೆ. ಈ ದಿನ ವರ್ಷಪೂರ್ತಿ ಬೇಸಾಯಕ್ಕೆ ಸಹಾಯಮಾಡಿದ ಪಶುಪಕ್ಷಿಗಳಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್‌ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ.  ಮೊದಲನೆಯ ದಿನ ಭೋಗಿಹಬ್ಬ. ಮನೆಯನ್ನು ಅಲಂಕರಿಸಿ ಹೊಸಬಟ್ಟೆ ಧರಿಸಿ ಅರಸಿನ ಅಥವಾ ಸಗಣಿ ಬಳಸಿ ಪಿಳ್ಳಾರಿ (ಗಣಪ) ಮಾಡಿ, ಪೂಜಿಸಿ ಹುಗ್ಗಿ ನೈವೇದ್ಯ ಮಾಡುತ್ತಾರೆ.

ಎರಡನೆಯ ದಿನ ಸೂರ್ಯಪೊಂಗಲ್‌. ಮನೆಯ ಹೊರಗಡೆಯ ಜಾಗವನ್ನು ಶುಚಿಮಾಡಿ, ಬಣ್ಣಬಣ್ಣದ ರಂಗೋಲಿಹಾಕಿ, ಹೊಸ ಮಣ್ಣಿನ ಪಾತ್ರೆಗೆ ಅರಸಿನದ ಕೊಂಬು, ಶುಂಠಿ ಕಟ್ಟಿ ಹೂಗಳಿಂದ ಅಲಂಕರಿಸಿ, ಆ ಪಾತ್ರೆಯಲ್ಲಿ ಪೊಂಗಲ್‌ ತಯಾರಿಸುತ್ತಾರೆ. ಮೊದಲು ಸೂರ್ಯನಿಗೆ ನೈವೇದ್ಯಮಾಡಿ ನಂತರ ಹಸುಗಳಿಗೆ ತಿನ್ನಿಸುತ್ತಾರೆ. ಆ ಪೊಂಗಲನ್ನು ಮನೆಯವರು ಪ್ರಸಾದದ ರೀತಿಯಲ್ಲಿ ಸ್ವೀಕರಿಸುತ್ತಾರೆ. 

ಮೂರನೆಯ ದಿನ ಮಟ್ಟುಪೊಂಗಲ್‌ ರಾಸುಗಳ ಹಬ್ಬ. ರಾಸುಗಳಿಗೆ ಹೂವು, ಮಣಿಸರಗಳಿಂದ ಅಲಂಕಾರ ಮಾಡಿ, ಕೊಂಬುಗಳಿಗೆ ಬಣ್ಣ ಬಳೆದು ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳ ಓಟದ ಸ್ಪರ್ಧೆ, ಹೋರಾಟದ ಸ್ಪರ್ಧೆ(ಜಲ್ಲಿಕಟ್ಟು) ನಡೆಸುತ್ತಾರೆ. 

ನಾಲ್ಕನೆಯ ದಿನ ಕನುಪೊಂಗಲ್‌. ಮೊದಲೆಲ್ಲಾ ಅಣ್ಣತಮ್ಮಂದಿರ ಶ್ರೇಯಸ್ಸಿಗಾಗಿ ಪೂಜೆಮಾಡಿ ಬಗೆಬಗೆಯ ಪಕ್ವಾನ್ನಗಳನ್ನು ತಯಾರಿಸಿಕೊಂಡು ಬಂಧುಬಳಗದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗ ಎಲ್ಲರೂ ಒಟ್ಟಿಗೆ ಸೇರಿ ಯಾವುದಾದರೂ ಸ್ಥಳಕ್ಕೆ ಪ್ರವಾಸ ಹೋಗಿ ಕಾಲಕಳೆಯುತ್ತಾರೆ. 

ಕೇರಳದಲ್ಲಿ ಸಂಕ್ರಾಂತಿಗೂ ಶಬರಿಮಲೆಗೆ ಸಂಬಂಧ ಕಲ್ಪಿಸಲಾಗಿದೆ. ಮಕರಸಂಕ್ರಾಂತಿಯ ದಿನ ಸಾವಿರಾರು ಭಕ್ತಾದಿಗಳು ಶಬರಿಮಲೆಯಲ್ಲಿ ಸೇರುತ್ತಾರೆ. ಸ್ವಾಮಿ ಅಯ್ಯಪ್ಪನ ದರ್ಶನಮಾಡಿ ದೇವಾಲಯದಿಂದ ಹೊರಗೆ ಬಂದು ಪೂರ್ವದಿಗಂತದಲ್ಲಿ ಕಾಣಿಸುವ ಮಕರಜ್ಯೋತಿಯ ದರ್ಶನಕ್ಕಾಗಿ ಕಾತರಿಸುತ್ತಾರೆ. ಮಕರಜ್ಯೋತಿಯ ದರ್ಶನವಾದ ನಂತರ ಜನರು ಹರ್ಷೋದ್ಗಾರ ಮಾಡುತ್ತ ನಿರ್ಗಮಿಸುತ್ತಾರೆ. ಇದನ್ನು ಮಕರವಿಳೈಕು ಎಂದು ಕರೆಯುತ್ತಾರೆ. 

ಮಕರಜ್ಯೋತಿ
ಭಾರತದಲ್ಲಿ ಮಕರಜ್ಯೋತಿಯ ಸಂದರ್ಭದಲ್ಲಿ ಅನೇಕ ಮೇಳಗಳನ್ನು ಆಯೋಜಿಸುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಹರಿದ್ವಾರ, ಪ್ರಯಾಗ, ಉಜ್ಜಯಿನಿ, ನಾಸಿಕ್‌ಗಳಲ್ಲಿ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಜನರು ಪವಿತ್ರ ನದಿಗಳಲ್ಲಿ ಮುಳುಗಿ ದೇವರಿಗೆ ನಮಸ್ಕರಿಸುತ್ತಾರೆ. ಪ್ರಯಾಗದಲ್ಲಿ ಪ್ರತಿವರ್ಷ ಮಾಘಮೇಳವನ್ನೂ, ಗಂಗಾನದಿಯ ಪಾತ್ರಗಳಲ್ಲಿ ಗಂಗಾಸಾಗರ ಮೇಳಗಳನ್ನೂ ಆಯೋಜಿಸುತ್ತಾರೆ. 
ಮಕರ ಸಂಕ್ರಾಂತಿ ಜನರ ಹಬ್ಬ. ಈ ಹಬ್ಬದಿಂದ ಹೊಸ ಜೀವನ, ಹೊಸ ಆಲೋಚನೆಗಳು, ಅದೃಷ್ಟ ಆರಂಭವಾಗುತ್ತವೆ.

ಸಿ. ಎನ್‌. ಮುಕ್ತಾ

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.