ಶಾಮಿಯಾನ
Team Udayavani, Sep 3, 2017, 6:10 AM IST
ಇದ್ಯಾವ್° ಕಟ್ಟಿದವ್ನು? ಒಳ್ಳೆ ಬ್ರಹ್ಮಗಂಟು ಬಿಗಿದವ್°’ ಎಂದು ಏರಿದ ಸ್ವರದಲ್ಲಿ ತನ್ನ ಅಸಮಾಧಾನ ಹೊರ ಹಾಕುತ್ತ ಸತೀಶ ಶಾಮಿಯಾನ ಬಿಚ್ಚುತ್ತಿದ್ದ. ಅದು ಉದ್ದ-ಅಗಲಗಳ ಅಳತೆಯಲ್ಲಿ ಸರಿಯಾಗಿ ಮೈಚಾಚಿಕೊಂಡಿತ್ತು. ಕಾರ್ಯಕ್ರಮ ದೊಡ್ಡದಾದ್ದರಿಂದ ಒಂದು ದಿನ ಮುಂಚಿತವಾಗಿಯೇ ಕೆಲಸ ಶುರು ಮಾಡಿದ್ದರು. ಈ ಕೆಲಸದ ಪ್ರಾರಂಭದಲ್ಲಿ ಸತೀಶ ಇರಲಿಲ್ಲ. ಅವನ ಉಳಿಕೆ ಸಹೋದ್ಯೋಗಿಗಳು ಮಾಲೀಕನ ಆಜ್ಞೆಯಂತೆ ತಮ್ಮ ಕಲಿತ ಅನುಭವಗಳನ್ನೆಲ್ಲ ಉಪಯೋಗಿಸಿದವರೇ ಶಾಮಿಯಾನದ ವ್ಯವಸ್ಥೆ ಮಾಡಿದ್ದರು. ನೋಡ ನೋಡುತ್ತಲೇ ಬಯಲಿನ ಮಧ್ಯದಲ್ಲಿ ಪುಟ್ಟ ಛತ್ರಿಯಂತೆ ಈ ಶಾಮಿಯಾನ ಎದ್ದು ನಿಂತಿತ್ತು. ಅದಕ್ಕೆ ಆಧಾರವಾಗಿ ನಿಂತಿದ್ದ ಕಬ್ಬಿಣದ ಕಂಬಗಳು ಮತ್ತು ಅದರ ಉದ್ದ-ಅಗಲದ ಸಾಲುಗಳಲ್ಲಿ ಶಾಮಿಯಾನದ ತುದಿಗಳನ್ನು ಎಷ್ಟೇ ಬಲವಾಗಿ ಎಳೆದು ಕಟ್ಟಿದರೂ ಅವರಿಗೆ ಅದು ಸತೀಶನಷ್ಟು ಕರಾರುವಾಕ್ಕಾಗಿ ಇರಲಿಲ್ಲವೇನೋ ಎಂಬ ಅನುಮಾನವಿತ್ತು. ಸತೀಶನೂ ಈ ಕೆಲಸದಲ್ಲಿ ಬಹು ವರ್ಷಗಳಿಂದ ಪಳಗಿದ ಕೈ. ಕಬ್ಬಿಣದ ಕಂಬಗಳ ಏರಿದರೆ ಸಾಕು, ಈ ತುದಿಯಿಂದ ಆ ತುದಿಯ ತನಕ ಚಕಚಕನೆ ಹಗ್ಗದ ತುದಿಯನ್ನ ಕಂಬಿಗಳಿಗೆ ಬಿಗಿದು ಶಾಮಿಯಾನದ ಸುಕ್ಕುಗಳು ಚೂರೂ ಕಾಣದಂತೆ ಚಂದವಾಗಿಸುತ್ತಾನೆ. ಅವನ ಮಾತಿನಲ್ಲಿ ಹೇಳುವಂತೆ ಈ ಶಾಮಿಯಾನದ ಅಂಗಡಿಗೆ ಕೆಲಸಕ್ಕೆ ಬಂದಾಗ 10 ವರ್ಷದವನಾಗಿದ್ದ. ಹಾಗೆ ಶಾಮಿಯಾನದ ಪರಂಪರೆ ಅವನ ಊರಿನ ಸುತ್ತಮುತ್ತ ಆಗತಾನೆ ನಿಧಾನವಾಗಿ ವ್ಯಾಪಿಸುತ್ತಿತ್ತು. ಮಾಲೀಕ ಶ್ಯಾಮಪ್ಪ ಒಂದಷ್ಟು ಬಂಡವಾಳವನ್ನು ತಂದು ಶಾಮಿಯಾನದ ಅಂಗಡಿಗೆ ಹೊದಿಕೆ ಮಾಡಿದ್ದ. ಅವನಲ್ಲಿಗೆ ಮೊದಲ ಕೆಲಸಗಾರರಾಗಿ ಒಂದಿಬ್ಬರ ಜೊತೆಗೆ ಸತೀಶನೂ ಸೇರಲು ಕಾರಣವೆಂದರೆ ಅವನಪ್ಪ. ಶಾಲೆ ಎಂದರೆ ಮಾರು ದೂರ ನಿಲ್ಲುತ್ತ ಸುಮ್ಮನೆ ಸಿಕ್ಕ, ಸಿಕ್ಕಲ್ಲಿ ಆಟವಾಡಿಕೊಂಡು ಪೋಲಿ ತಿರುಗುವ ಮಗನ ಒಮ್ಮೆ ಹಿಡಿದು ನಾಲ್ಕು ಬಿಗಿದು ಈ ಹೊಸ ಅಂಗಡಿಗೆ ತಂದು ಎಸೆದಿದ್ದ. “ಇದ್ಯೆ ಅಂತೂ ಹತ್ತಲಿಲ್ಲ. ಯಾಪಾರ ಕಲ್ತು ನಾಲ್ಕು ಕಾಸಾದ್ರು ಸಂಪಾದೆ° ಮಾಡು’ ಎಂದ್ಹೇಳಿ ಹೋಗಿದ್ದ.
ಸತೀಶನಿಗೆ ಹೇಗೋ ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಂಡೆನೆಂಬ ಸಮಾಧಾನ ಒಂದೆಡೆಯಾದರೆ, ಮತ್ತೂಂದೆಡೆ ಈ ಹೊಸ ಬಂಧನದ ಹಿಂಸೆ ಸಹಿಸಿಕೊಳ್ಳಲಾರದಂತಿತ್ತು. ಸರಿಯಾಗಿ ಒಂಬತ್ತಕ್ಕೆಲ್ಲ ಮನೆಬಾಗಿಲಿಗೆ ಬಂದು ಶ್ಯಾಮಪ್ಪ ಸತೀಶನ ಜೊತೆಯಲ್ಲಿ ತನ್ನ ಅಂಗಡಿಗೆ ಹೋದರೆ ರಾತ್ರಿ ಒಂಬತ್ತರ ತನಕ ಅವನ ಠಿಕಾಣಿ ಅಲ್ಲೇ ! ಛೇರು, ಟೇಬಲ್‌ಗಳ ಎಣಿಸುತ್ತ, ಜೋಡಿಸುತ್ತ ಇತರೆ ಸಣ್ಣ-ಪುಟ್ಟ ಕೆಲಸಗಳ ಮಾಡುತ್ತಿರಬೇಕಿತ್ತು. ಬಿಡುವು ಸಿಕ್ಕರೆ ಹೊರಗೆ ಹೋಗುವಂತಿರಲಿಲ್ಲ. ಶ್ಯಾಮಪ್ಪ ಬೆನ್ನ ಹಿಂದೆ ಬರುವ! ಇದರಿಂದ ಅವನ ಬಾಲ್ಯದ ಆಟಾಟೋಪಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿತ್ತು. ಆದರೂ, ಕಣ್ಣು ತಪ್ಪಿಸಿ ಹೊಳೆಯಲ್ಲಿ ಗೆಳೆಯರ ಜೊತೆ ಈಜಿ ಬರುತ್ತಿದ್ದ. ಅದು ಮಧ್ಯಾಹ್ನದ ಸಮಯವಾಗಿದ್ದರಿಂದ ಊಟದ ನೆಪ ಹೇಳಿ ಬಂದವನು ಸಂಜೆಯ ಮೇಲೆ ಹಿಂತಿರುಗಲು, ಶ್ಯಾಮಪ್ಪ , “”ಇÇÉೇನು ನಿಮ್ಮಪ್ಪನ್ನ ಬಂಡವಾಳ ಬಿದ್ದಿದೆ ಅನ್ಕಂಡಿದ್ಯಾ?” ಎಂಬ ಅವನ ಗಟ್ಟಿ ಧ್ವನಿಗೆ ಸತೀಶನ ಕೈ-ಕಾಲುಗಳು ಸಣ್ಣಗೆ ನಡುಗುತ್ತ ಅವನ ಮನದೊಳಗೆ ಈ ಸಾಹುಕಾರನ ಮೇಲೆ ಸಿಟ್ಟು ಶುರುವಾಗಿತ್ತು. ಸೇರಿದ ಶಾಮಿಯಾನದ ಅಂಗಡಿಯಲ್ಲಿ ವರ್ಷಗಳು ಉರುಳುತ್ತ ಸತೀಶ ಹೊಸ-ಹೊಸ ಕೆಲಸಗಳ ಕಲಿತು, ಜವಾಬ್ದಾರಿಗಳ ಹೆಚ್ಚಿಸಿಕೊಳ್ಳಲು ಅವನಿಗೆ ಕೆಲಸ ಕಲಿಸಿದವರೆಲ್ಲರೂ ನಿವೃತ್ತರಾಗಿದ್ದರು. ಹಾಗೆ ಈ ಶಾಮಿಯಾನದ ಅಂಗಡಿಗೆ ಸತೀಶನೇ ಆಧಾರವಾಗಿದ್ದು ಬಹು ಮುಖ್ಯ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಶಾಮಿಯಾನದ ಅಂಗಡಿಯು ಕಾಲ ಬದಲಾದಂತೆ ತಾನು ಕೂಡ ಹೊಸ ವಿನ್ಯಾಸ, ವಸ್ತುಗಳೊಂದಿಗೆ ಬದಲಾವಣೆ ಕಂಡಿತ್ತು. ಶ್ಯಾಮಪ್ಪನಿಗೆ ವಯಸ್ಸಾಗಿದ್ದರೂ ವ್ಯವಹಾರವನ್ನು ಇತರರಿಗೆ ವಹಿಸದೆ ತಾನೇ ಖುದ್ದು ನೋಡಿಕೊಳ್ಳುತ್ತಿದ್ದ. ಅವನ ಮಕ್ಕಳು ಇದರ ಮೇಲೆ ಆಸಕ್ತಿ ತೋರಿಸದೆ ತಮ್ಮ ವೃತ್ತಿಯಲ್ಲಿ ತಲ್ಲೀನರಾಗಿದ್ದರು. ಈ ಇಳಿವಯಸ್ಸಿನಲ್ಲೂ ಶ್ಯಾಮಪ್ಪ ಅಂಗಡಿ ವ್ಯವಹಾರವನ್ನು ಅಚ್ಚುಕಟ್ಟಾಗಿ ಮಾಡುತ್ತ ಸತೀಶನ ಹೆಗಲಿಗೆ ಹೆಚ್ಚು ಜವಾಬ್ದಾರಿ ಕೊಟ್ಟಿದ್ದ. ಸತೀಶ ಮತ್ತು ಶ್ಯಾಮಪ್ಪನ ನಡುವಿನ ಮನಸ್ತಾಪ, ಕಲಹಗಳೇನೂ ತಪ್ಪಿರಲಿಲ್ಲ.
ಸತೀಶ ಎಷ್ಟೇ ಶ್ರಮವಹಿಸಿ ದುಡಿದರೂ ಅಲ್ಲಿ ಶ್ಯಾಮಪ್ಪನದೊಂದು ಕೊಂಕು ಮಾತಿರುತ್ತಿತ್ತು. ಹೀಗೆ ಆ ಮಾತಿಗೆ ಪ್ರತಿಯಾಗಿ ಸತೀಶ ಅಂಗಡಿಯಿಂದ ಹೊರ ನಡೆದವನು ಮುಂದಿನ ಮೂರ್‍ನಾಲ್ಕು ದಿನಗಳ ತನಕ ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ. ಈ ಬಂಡವಾಳಗಾರನ ಎದುರಾಗಿ ತಾನು ಏನಾದರೂ ಮಾಡಬೇಕೆಂಬ ಛಲ ಅವನೊಳಗೆ ಹುಟ್ಟುತ್ತಿತ್ತು. ತಾನು ಇಂಥಾದ್ದೇ ಒಂದು ಶಾಮಿಯಾನದ ಅಂಗಡಿ ತೆರೆಯುವ ಅವನ ಎಷ್ಟೋ ವರ್ಷಗಳ ಬಯಕೆ ಕೂಡ ಇಲ್ಲಿ ಚಿಗುರೊಡೆಯಿತಾದರೂ ಮುಂದಿನ ಬೆಳವಣಿಗೆ ಸಾಧ್ಯವಾಗಿರಲಿಲ್ಲ. ಮತ್ತೆ ಬಂದು ಹಳೆಯ ಅಂಗಡಿ ಸೇರಿಕೊಂಡು ಕೆಲಸ ಮಾಡುತ್ತಿದ್ದ.
ಸತೀಶ ಮತ್ತು ಶ್ಯಾಮಪ್ಪನ ನಡುವೆ ಯಾವುದೋ ರಾಜಕೀಯ ಕಾರ್ಯಕ್ರಮ ಒಂದಕ್ಕೆ ಶಾಮಿಯಾನ-ಟೆಂಟು-ಕುರ್ಚಿಗಳ ಒದಗಿಸುವ ಕಾರ್ಯಕ್ಕೆ ಎರಡು ದಿನ ಬಾಕಿ ಇರುವಂತೆ ಸಣ್ಣಗೆ ಜಗಳ ಪ್ರಾರಂಭವಾಗಿತ್ತು. ಅದು ಮುಂದುವರಿದು ಮಾತಿಗೆ ಮಾತು ಬೆಳೆದಿದ್ದೇ ಸತೀಶ, “”ಸತ್ತ ಮೇಲೆ ಎÇÉಾ ನಿನ್ನ ಎದೆ ಮೇಲೆ ಹಾಕ್ಕೊಂಡು ಹೋಗು. ನಿನ್ನಂಗೆ ನಾ ಒಂದ್ ಅಂಗಡಿ ತಗ್ತಿàನಿ ನೋಡ್ತೀರು. ಆಗ ಗಿರಾಕಿಗಳು ನನ್ನ ಹತ್ರ ಬರ್ತಾರ ಇಲ್ಲ ನಿನ್ನತ್ರ ಬರ್ತಾರ ನೋಡುವೆ” ಎಂದು ಅಬ್ಬರಿಸಿ ಹೋಗಿದ್ದ. ಇದಾಕಂಡ ಶ್ಯಾಮಪ್ಪನಿಗೆ ಇದು ಎಂದಿನ ಎಷ್ಟೋ ಜಗಳಗಳಲ್ಲಿ ಒಂದು ಎಂದುಕೊಂಡರೂ ಒಳಗೆ ಸಣ್ಣ ಭಯವಿತ್ತು. ಇವನು ಹೇಳಿದಂತೆ ಇನ್ನೊಂದು ಅಂಗಡಿ ತೆಗೆದರೆ ತನ್ನ ವ್ಯವಹಾರಕ್ಕೆ ಹೊಡೆತ ಖಂಡಿತವೆಂದು. ಜನಸಂಪರ್ಕದಲ್ಲಿ ಶ್ಯಾಮಪ್ಪನ ಮೀರಿಸುವಂತೆ ಸತೀಶ ಪ್ರತಿಯೊಬ್ಬರಿಗೂ ಹತ್ತಿರವಾಗಿದ್ದ. ಹಾಗೆ ಅವನೂ ಒಂದಷ್ಟು ಬಂಡವಾಳ ಹೂಡಿ ಅಂಗಡಿ ತೆಗೆದರೆ ಲಾಭವಂತೂ ಖಂಡಿತವಾಗಿತ್ತು. ಆದರೆ, ಅದಕ್ಕೆ ಬೇಕಾದ ಬಂಡವಾಳವೇ ಸತೀಶನಿಗೆ ದೊಡ್ಡ ಸಮಸ್ಯೆ. ಎಲ್ಲರಿಗೂ ಪರಿಚಿತನಾದವನು ಒಳ್ಳೆಯ ಶಿಸ್ತಿನ ಕೆಲಸಗಾರನೆಂಬ ಹೆಸರು ಪಡೆದವನಿಗೆ ಆಧಾರವಿರದೆ ಸಾಲ ಕೊಡಲು ಯಾರೂ ಒಪ್ಪಿರಲಿಲ್ಲ. ಅವನ ಬಳಿ ಆಧಾರವೆಂದರೆ ತನ್ನ ಅಪ್ಪನ ಮನೆಯ ಒಂದು ಪಾಲು ಅಷ್ಟೇ. ಅದಕ್ಕೆ ಲಕ್ಷಗಳ ಸಾಲ ಹುಟ್ಟುವುದು ಆಗದ ಮಾತಾಗಿತ್ತು.
ಇನ್ನು ಕುಟುಂಬದಲ್ಲಿ ತಂಗಿಯ ಮದುವೆ ಮಾಡಿದ್ದು ಅಣ್ಣ-ತಮ್ಮಂದಿರಿಬ್ಬರು ಬೇರೆಡೆ ಒಳ್ಳೆ ಕೆಲಸದಲ್ಲಿದ್ದರು. ಅವರಿಂದ ಸತೀಶ ನಿರೀಕ್ಷಿಸಿದ ಯಾವುದೇ ಭರವಸೆಯ ಮಾತುಗಳು ಬರದೇ ಇದ್ದಿದ್ದು ನಿರಾಶೆ ಎನಿಸಿತ್ತು. ಎಲ್ಲರೂ ಸ್ವಾರ್ಥಿಗಳು ಎಂದುಕೊಳ್ಳುತ್ತಲೇ ಸತೀಶ ಬೇಕಾದ ಬಂಡವಾಳದ ಸಾಲಕ್ಕಾಗಿ ಹೊರಗಡೆ ವಿಚಾರಿಸತೊಡಗಿದ. ಅವನ ಶಾಮಿಯಾನ ಅಂಗಡಿಯ ಕನಸು ಕೇಳಲು ಅಚ್ಚರಿಯಾಗಿದ್ದರೂ ಅದಕ್ಕೆ ಬೇಕಾದ ಬಂಡವಾಳದ ಪ್ರಮಾಣ ಮಾತ್ರ ಸ್ವಲ್ಪ ಹೆಚ್ಚಿಗೆಯೇ ಇತ್ತು. ಎಷ್ಟೇ ಆತ್ಮೀಯವಾಗಿ ಇವನ ಮಾತನಾಡಿಸಿದರೂ ಅವನಿಗೆ ಸಾಲ ಕೊಡಲು ಹಿಂದೇಟು ಹಾಕುತ್ತ ಬೇರೆ ನೆಪಗಳ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಇನ್ನೂ ಸತೀಶ ಇಷ್ಟು ವರ್ಷಗಳ ಕಾಲ ತಾನು ಸಂಪಾದಿಸಿದ ಹಣವೇನಾಯಿತೆಂದರೆ ಅದಕ್ಕೆ ಅಪ್ಪನ ಅನಾರೋಗ್ಯ, ಅವ್ವನ ಒಂದು ಜೊತೆ ಎಮ್ಮೆ, ಶಿಥಿಲಗೊಂಡ ಮನೆಯ ದುರಸ್ತಿ, ತಂಗಿಯ ಮದುವೆ ಎಂದೆಲ್ಲ ಅನಾಯಾಸವಾಗಿ ಖರ್ಚಾಗಿದ್ದೇ ಮಿಕ್ಕಿದ್ದು ಕಲಿತ ಚಟಗಳಾದ ಕುಡಿತ ಮತ್ತು ಇತರೆ ಸಂಗತಿಗಳಿಗೆ ಸರಿಯಾಗಿತ್ತು. ಇದೊಂದು ಮುಖ್ಯ ಕಾರಣವಾಗಿ ಸತೀಶನಿಗೆ ಇತರರ ಬಳಿ ಅಷ್ಟು ಸುಲಭವಾಗಿ ಸಾಲ ಗಿಟ್ಟಿಸಲು ಸಾಧ್ಯವಾಗಿರಲಿಲ್ಲ. ಬೆಳಗ್ಗೆಯೆಲ್ಲ ಬಿಸಿಲು, ಮಳೆ ಎನ್ನದೆ ಬೆವರಿಳಿಸಿ ದುಡಿದವನು ಸಂಜೆಯಾಗುತ್ತಲೇ ಬಳಲಿದ ದೇಹಕ್ಕೆ ಟಾನಿಕ್‌ನಂತೆ ಕುಡಿತದ ಚಟ ಮೈಗಂಟಿಸಿಕೊಂಡಿದ್ದ. ಅದು ಅವನ ದೇಹಕ್ಕೆ ಬೀಳದೆ ಹೋದರೆ ಅವನಿಗೆ ನಿದ್ರೆ, ನೆಮ್ಮದಿ ಯಾವುದೂ ಇರಲಿಲ್ಲ. ಕುಡಿದ ನಶೆಯಲ್ಲಿ ತನ್ನ ಮಾಲೀಕ ಶ್ಯಾಮಪ್ಪನಿಗೆ ಬೈಯ್ಯುತ್ತ ತನ್ನ ಅಧಿಕಾರದ ದರ್ಪದಿಂದ ಅಡಿಯಾಳಾಗಿಸಿಕೊಂಡು ಬೆಳೆಯಲು ಅವಕಾಶ ಕೊಡದಿರುವ ಎಂದೆಲ್ಲ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದ.
ಶಾಮಿಯಾನದ ಅಂಗಡಿ ತೆರೆಯಬೇಕೆಂಬ ಅವನ ಆಸೆ ಅವನಿಗೆ ಕೆಲಸಕ್ಕೆ ಸೇರಿದಾಗಿನಿಂದಲೂ ಜೊತೆಯಾಗಿತ್ತು. ಆದರೆ, ಸತೀಶನಿಗೆ ಎಷ್ಟೋ ಸಾರಿ ಕಾರ್ಯಕ್ರಮಗಳು ಇದ್ದ ಕಡೆ ನಾಯಿಕೊಡೆಯಂತೆ ಎದ್ದು ನಿಲ್ಲುವ ಈ ಪೆಂಡಲ್‌ಗಳು ಸುಖ-ದುಃಖ ಎರಡಕ್ಕೂ ಒಂದೇ ಆಗಿರುವುದು ಆಶ್ಚರ್ಯಕರವಾಗಿತ್ತು. ಅದೆಷ್ಟೋ ಮಂದಿ ಮಡಿ, ಮೈಲಿಗೆ, ಸೂತಕ ಎಂದೆಲ್ಲ ಒದರಾಡುವವರು ಈ ಪೆಂಡಲ್‌ಗಳ ಕೆಳಗೆ ಅವುಗಳನ್ನೆಲ್ಲ ಮರೆತು ಅದ್ಹೇಗೆ ಕುಳಿತು ಬಿಡುತ್ತಿದ್ದರು! ಸಾವಿಗೆ ಹಾಕಿದ ಕುರ್ಚಿ ಮರುದಿನ ನಾಮಕರಣದ ಮನೆಮುಂದೆ ಸ್ಥಾನ ಪಡೆಯುತ್ತ ಯಾವುದೇ ಮಡಿ, ಮೈಲಿಗೆಗಳಿಗೆ ಒಳಗಾಗದೆ ಏಕವಾಗಿದ್ದು ಅವನಿಗೆ ಒಳಗೊಳಗೇ ನಗು ತಂದಿತ್ತು. ಹೇಳಿದವರ ಮನೆ ಅಥವಾ ತೋರಿದ ಜಾಗಕ್ಕೆ ಶಾಮಿಯಾನವ ಬಿಗಿಯುತ್ತ ಅದರ ಕೆಳಗೆ ನೆರವೇರಬಹುದಾದ ಕಾರ್ಯಗಳಿಗೆ ಸತೀಶನ ಮನಸ್ಸು ಹೆಚ್ಚು ಆಕರ್ಷಿತವಾಗುತ್ತಿತ್ತು. ಪ್ರತಿಯೊಂದನ್ನು ತನ್ನದೇ ದೃಷ್ಟಿಕೋನದ ಮೂಲಕ ನೋಡುವ ಪರಿಪಾಠ ಬೆಳೆಸಿಕೊಂಡಿದ್ದ.
ಎಲ್ಲೇ ಶಾಮಿಯಾನಗಳನ್ನು ಹಾಕಿ ಬಿಚ್ಚಿದ ನಂತರ ಆ ಮನೆಯವರ ಮುಂದೆ ತಲೆ ಕೆರೆದು ಕೈ ಚಾಚಿ ನಿಲ್ಲುವ ಪಾಠವನ್ನು ಅವನಿಗೆ ಆರಂಭದÇÉೆ ಯಾರೋ ಕಲಿಸಿ ಕೊಟ್ಟು ಬಿಟ್ಟಿದ್ದರು. ಕಾರ್ಯಕ್ರಮ ಯಾವುದಾದರೂ ಸರಿಯೇ, “ಇಲ್ಲಿನ ಕೆಲಸ ಮುಗಿಸದೇ ಬೇರೆ ಕಡೆ ನೋಡ್ಲಿಲ್ಲ’ ಎಂದು ಬೇಡುವ ಸ್ವರದಲ್ಲಿ ಕಿರುನಗೆ ಬೀರಲು ಅವನ ಕೈಗೆ 20, 50, 100ಗಳ ತನಕ ಬಕ್ಷೀಸು ಸಿಗುತ್ತಿತ್ತು. ಸತೀಶ ಅದನ್ನ ನೇರವಾಗಿ ತನ್ನ ಕುಡಿತಕ್ಕೆ ಬಳಸುತ್ತಿದ್ದ. ಇನ್ನೂ ಬರುವ ಸಂಬಳ ಅವನ ಸಾಲ, ಇತರೆ ಖರ್ಚುಗಳಿಗೆ ಮುಗಿದು ಉಳಿತಾಯವೆಂದರೆ ಶೂನ್ಯವಾಗಿತ್ತು. ಎಷ್ಟೇ ಒಳ್ಳೆಯವನೆಂದು ಹೆಸರು ಪಡೆದರೂ ಕುಡಿತದ ಚಟ ಅದನ್ನು ಕಿತ್ತುಕೊಂಡಿತ್ತು. ಈ ಕಾರಣಕ್ಕೆ ಅವನ ಕನಸುಗಳಿಗೆ ಸಾಧಿಸಿಕೊಳ್ಳುವ ಕಸುವಿರಲಿಲ್ಲ.
ಎಷ್ಟೇ ದೃಢ ನಿರ್ಧಾರ ಕೈಗೊಂಡರೂ ಅದು ನಿಧಾನವಾಗಿ ಕೆಳಗೆ ಇಳಿದು ಬಿಡುತ್ತ ಬಂಡವಾಳಗಾರನ ಅಧೀನಕ್ಕೆ ದೂಡುತ್ತಿತ್ತು. ಶ್ಯಾಮಪ್ಪನ ಕೊಳೆಯುತ್ತಿರುವ ಕೋಟಿ ಆಸ್ತಿಯಲ್ಲಿ ತನಗೆ ಈ ಶಾಮಿಯಾನದ ಅಂಗಡಿಯ ಚೂರು ಪಾಲು ಕೊಡಬಾರದೆ ಎಂದು ಕೇಳಿಕೊಂಡರೆ ಅದು ಅಸಾಧ್ಯವಾಗಿತ್ತು. ಸತೀಶ ಇನ್ನೂ ಹೆಚ್ಚಿಗೆ 10 ವರ್ಷಗಳ ಕಾಲ ಕೆಲಸ ಮಾಡಿದರೂ ಅಲ್ಲಿನ ಮಾಲೀಕ, ಕಾರ್ಮಿಕನ ಭೇದ ತೊಳೆಯಲಾಗುತ್ತಿರಲಿಲ್ಲ. ಅದು ಮುಂದುವರಿದಂತೆ ಶ್ಯಾಮಪ್ಪನ ಜಾಗಕ್ಕೆ ಅವನ ಮಕ್ಕಳು ಬರಲಿದ್ದರು. ಇದನ್ನು ಊಹಿಸಿಕೊಂಡೇ ಸತೀಶನ ಪಿತ್ತ ನೆತ್ತಿಗೇರುತ್ತ, “”ನಾ ಜೀತಕ್ಕಾಗೆ ಹುಟ್ಟಿದ್ದೀನಾ? ನಾ ಸಾಹುಕಾರ ಆಗಬಾರª?” ಎಂದು ಕೂಗಿ, ಕೂಗಿ ಕೇಳಿಕೊಳ್ಳುತ್ತಿದ್ದ. ಇದರಿಂದ ಅವನ ಕಣ್ಣುಗಳು ನೀರು ತುಂಬಿಕೊಳ್ಳುತ್ತಿದ್ದವು.
ಇದೆಲ್ಲ ಸತೀಶನ ರಾತ್ರಿಯ ನೋವುಗಳಾಗಿ ಬೆಳಗ್ಗೆ ಎದ್ದು ಜೇಬು ಖಾಲಿಯಾಗಿ ಹೊಟ್ಟೆ ಹಸಿಯುತ್ತಲೇ ಅವನಿಗೆ ತನ್ನ ವೃತ್ತಿ ನೆನಪಾಗುವುದು. ಗಾಳಿ, ಮಳೆ, ಬಿಸಿಲುಗಳಿಗೆ ಎದುರಾಗಿ ಶಾಮಿಯಾನ ಟೆಂಟ್‌ಗಳ ಬಲವಾಗಿ ಬಿಗಿಯುವ ಕಾರ್ಯದಲ್ಲಿ ಇವನಿಗೇನೋ ತೃಪ್ತಿ. ಅದರ ಕೆಳಗೆ ನಿರ್ಜೀವ ಸ್ಥಿತಿಯಲ್ಲಿಯೇ ಮತ, ಪಂಕ್ತಿ, ಭೇದಗಳ ಮರೆತಂತೆ ಅಲೆದಾಟ ನಡೆಸಿ ಮಾಂಸಾಹಾರ, ಸಸ್ಯಾಹಾರಗಳ ಎಲ್ಲವನ್ನು ಕಂಡ ಕುರ್ಚಿ, ಟೇಬಲ್‌ಗಳು! ಕೆಟ್ಟು ನಿಲ್ಲುವಂತೆ ಕಾಣುವ ಇವುಗಳನ್ನು ಹೊತ್ತು ತಂದ ಆಟೋ. ಹೊಟ್ಟೆಪಾಡಿನ ನೆಪದಿಂದ ಕೆಲಸಕ್ಕಾಗಿ ಬಂದ ಕಾರ್ಮಿಕರು, ಅವರ ತಲೆ- ಮನಸ್ಸುಗಳನ್ನೆಲ್ಲ ಆವರಿಸಿದ ಚಿಂತೆಗಳ ನಡುವೆಯೇ ಆಕಾಶಕ್ಕೆ ಮುಖ ಮಾಡಿ ನಿಲ್ಲುತ್ತದೆ ಶಾಮಿಯಾನ.
– ಆರ್. ಪವನ್ ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.