ಛೆ! ದೊಡ್ಡವನಾಗಬಾರದಿತ್ತು!
Team Udayavani, Aug 11, 2019, 5:22 AM IST
ಎಷ್ಟೋ ಬಾರಿ ಅನ್ನಿಸಿದ್ದಿದೆ, ಈ ಬಾಲ್ಯವನ್ನು ನೆನೆದು, ನಾನು ಯಾಕೆ ದೊಡ್ಡವನಾದೆನೋ ಅಂತ ! ನಾನು ಪುಟ್ಟ ಹುಡುಗನಾಗಿರುವಾಗ ಅಮ್ಮ ಹೇಳುತ್ತಿದ್ದರು, “ಈ ಹಣ್ಣನ್ನು ತಿಂದರೆ ನೀನು ಬೇಗ ದೊಡ್ಡವನಾಗಬಹುದು. ನೀನು ಚೆನ್ನಾಗಿ ಊಟ ಮಾಡು. ಆಗ ನನ್ನಷ್ಟು ಎತ್ತರಕ್ಕೆ ಬೆಳೆಯಬಹುದು’
ಈಗ ಅನ್ನಿಸುತ್ತಿದೆ, ದೊಡ್ಡವನಾದ ಮೇಲೆ ಇಂದಿನ ಧಾವಂತದ ಬದುಕನ್ನು ಎದುರಿಸಬೇಕಾಗುತ್ತದೆ ಎಂದು ಅಂದೇ ತಿಳಿದಿದ್ದರೆ ಅವುಗಳನ್ನು ನಾನು ತಿನ್ನುತ್ತಲೇ ಇರಲಿಲ್ಲವೇನೋ!
ಈ ಬಾಲ್ಯವನ್ನು ನೆನಪು ಮಾಡಿಕೊಳ್ಳುವ ಸುಖ ನನಗೊಬ್ಬನಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಭಾವಿಸುತ್ತೇನೆ. ಅವರವರ ನೆನಪಿನ ಸೌಧ ಅವರವರಿಗೆ.
ನಮ್ಮ ದೊಂದು ಹಳ್ಳಿಯ ಮನೆ. ಮನೆಯ ತುಂಬೆಲ್ಲ ಜನ. ಅಪ್ಪ , ಅಮ್ಮ, ಅಣ್ಣ, ತಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ- ಹೀಗೆ ವಿವಿಧ ಬಗೆಯ ಸಂಬಂಧದ ಪಾತ್ರಗಳು ಅಲ್ಲಿದ್ದವು. ಒಟ್ಟೂ ಕುಟುಂಬದ ಅಕ್ಕರೆಯ ಬದುಕು. ಒಂಟಿ ತನ ಎಂದಿಗೂ ಕಾಡದೇ ಇರುವ ಗಾಢತೆ ಅದು. ಯಾವುದೋ ಕಾರಣಕ್ಕೆ ಅಪ್ಪನೋ ಅಮ್ಮನೋ ಹೊಡೆದಾಗ ಮನೆಯ ಮೂಲೆಯಲ್ಲಿ ಕುಳಿತು ಅಳುತ್ತಿದ್ದವನನ್ನು ಚಿಕ್ಕಪ್ಪನೋ ಚಿಕ್ಕಮ್ಮನೋ ಬಂದು ಸಮಾಧಾನಪಡಿಸುತ್ತಿದ್ದರು.
ಯಾರೂ ಇಲ್ಲದಿದ್ದರೆ ನಾಯಿ-ಬೆಕ್ಕುಗಳೂ ಜೊತೆಗಾರರೇ. ಒಮ್ಮೆ ಮನೆಯ ದನವನ್ನು ಮಾರುವ ಸಂದರ್ಭ ಬಂದಾಗ, ಮಾರಾಟ ಮಾಡದಂತೆ ರಂಪಾಟ ಮಾಡಿದ್ದ ನನ್ನನ್ನು ಅಪ್ಪ ಗದರಿಸಿ ಬೆನ್ನ ಮೇಲೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದು ಇನ್ನೂ ನೆನಪಿನಲ್ಲಿದೆ. ನಮ್ಮ ಲೆಕ್ಕದಲ್ಲಿ ಪ್ರೀತಿಪಾತ್ರರಾದ ಯಾರೂ ನಮ್ಮನ್ನು ತೊರೆಯಬೇಕಾದವರಲ್ಲ , ಮಾರಾಟದ ವಸ್ತುಗಳಾಗತಕ್ಕವರೂ ಅಲ್ಲ!
ನಮಗೆ ಆ ದಿನಗಳಲ್ಲಿ ಬೀದಿಯಲ್ಲಿಯೂ ಸ್ನೇಹಿತರೇ. ನಿಜ ಹೇಳಬೇಕೆಂದರೆ, ಮನೆಯಲ್ಲಿ ಇದ್ದದ್ದಕ್ಕಿಂತ ಹೆಚ್ಚಾಗಿ ಬೀದಿಯಲ್ಲಿ ಇದ್ದಿದ್ದೇ ಹೆಚ್ಚು. ಯಾರ ಮನೆಯಲ್ಲಿ ಏನು ಆಗುತ್ತಿದೆ, ಎಷ್ಟು ಮಂದಿ ನೆಂಟರು ಬಂದಿದ್ದಾರೆ. ಮೇಲಿನಮನೆಯ ಕೊಟ್ಟಿಗೆಯಲ್ಲಿ ಗೌರಿ ಯಾವ ಕರು ಹಾಕಿದೆ, ಕೆಳಗಿನಮನೆಯ ಮಂಜಣ್ಣ ಎಲ್ಲಿಗೆ ಹೋಗಿದ್ದಾರೆ ಎಂಬ ಎಲ್ಲ ಮಾಹಿತಿಗಳು ನಮಗೆ ತಿಳಿದಿರುತ್ತಿದ್ದವು. ಗೆಳೆಯರೊಂದಿಗೆ ಆಟ ಆಡಿದ್ದಕ್ಕಿಂತ ಅಲ್ಲಿ ಸಂಭವಿಸುವ ಜಗಳ, ರಾಜಿಗಳಂಥ ಘಟನೆಗಳೇ ಹೆಚ್ಚು ಮಜಾವಿರುತ್ತಿದ್ದವು. ನಮ್ಮ ವಯಸ್ಸಿನ ತಕ್ಕಂತೆ ಹಾಗೂ ಲಭ್ಯವಿರುವ ಸ್ನೇಹಿತರನ್ನು ಆಧರಿಸಿ ಆಟಗಳನ್ನು ಆಯು ತ್ತಿ ದ್ದೆವು. ಮೊದಮೊದಲು ಬಸ್-ರೈಲು ಆಟ, ನಂತರ ಬುಗರಿ-ಗೋಲಿ, ಕೈಕಾಲಿಗೆ ಶಕ್ತಿ ಬಂದಾಗ ಚಿನ್ನಿ-ದಾಂಡು. ಹುಡುಗಿಯರಿದ್ದರೆ ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ. ಸ್ವಲ್ಪ ಹಿರಿಯರಿದ್ದರೆ ಕಳ್ಳ-ಪೊಲೀಸ್! ಜನ ಜಾಸ್ತಿ ಇದ್ದರೆ ಲಗೋರಿ, ಮರ ಕೋತಿ! ಒಬ್ಬನೇ ಇದ್ದರೆ ಸೈಕಲ್ ಟಯರ್! ಒಮ್ಮೆ ಚಿನ್ನಿ ದಾಂಡು ಆಟವಾಡುತ್ತಿರುವಾಗ, ಸ್ನೇಹಿತನ ತಲೆಗೆ ಚಿನ್ನಿ ಹೊಡೆದು ಸಣ್ಣ ಗಾಯವಾಯಿತು. ಮನೆಯವರಿಗೆ ತಿಳಿದರೆ ಹೊಡೆತ ತಿನ್ನಬೇಕು! ಅದಕ್ಕಾಗಿ ಮನೆಯಿಂದ ಮೆಲ್ಲನೆ ಕಾಫಿ ಪೌಡರ್ ತಂದು ಆ ಗಾಯಕ್ಕೆ ಹಚ್ಚಿದ್ದೆವು. ಗಾಯವೂ ವಾಸಿಯಾಗಿತ್ತು ಅನ್ನಿ !
ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಆಸಕ್ತಿ. ಅಂದರೆ, ಓದಿನಲ್ಲಿ ಉತ್ಸಾಹವಿದೆ ಎಂದರ್ಥವಲ್ಲ. ಹಾಗೆಂದು, ಶಾಲೆಗೆ ಹೋಗಲೇಬೇಕೆಂದು ಎಂದು ಮನೆಯಲ್ಲಿ ಕಟ್ಟಪ್ಪಣೆ ಮಾಡುವವರೂ ಇರಲಿಲ್ಲ. ಮನೆಯಲ್ಲಿಯೇ ಉಳಿದರೆ ಕೆಲಸ ಮಾಡಬೇಕಲ್ಲ ! ಅದಕ್ಕೆ ಶಾಲೆಯ ದಾರಿ ! ನಾಲ್ಕೈದು ಮೈಲಿ ನಡೆದೇ ಶಾಲೆಗೆ ಹೋಗಬೇಕು. ನೇರವಾದ ರಸ್ತೆಯಲ್ಲಿ ನಮ್ಮ ಪ್ರಯಾಣವೇ ಇಲ್ಲ. ಬೆಳಗ್ಗೆ 10 ಗಂಟೆಗೆ ಶಾಲೆ ಶುರು. ನಮ್ಮದು 8 ಗಂಟೆಗೆ ಪ್ರಯಾಣ ಆರಂಭ. ಇನ್ನೇನು ಶಾಲೆಯ ಬೆಲ್ಲು ಹೊಡೆಯುತ್ತೆ ಎನ್ನು ವಾಗ ಶಾಲೆಯೊಳಗೆ ಧಾವಿಸುತ್ತಿದ್ದೆವು.
ನಮ್ಮದು ಸರ್ಕಾರಿ ಶಾಲೆ. ಎಲ್ಲ ಪಾಠಗಳಿಗೆ ಪ್ರತ್ಯೇಕ ಮೇಷ್ಟ್ರುಗಳು ಇರುತ್ತಿರಲಿಲ್ಲ. ನೂರು ಮಕ್ಕಳಿಗೆ ಇಬ್ಬರು ಅಥವಾ ಮೂವರು ಗುರುಗಳು ಇದ್ದರೆ ಅದೇ ಹೆಚ್ಚು. ಇದ್ದವರೇ ಎಲ್ಲ ವಿಷಯಗಳನ್ನು ಹೇಳಿಕೊಡಬೇಕಿತ್ತು. ಪಾಪ ! ಮಕ್ಕಳಿಗೆ ಹೇಳಿಕೊಡಬೇಕು ಅನ್ನುವ ಘನ ಉದ್ದೇಶದಿಂದ ತಮಗೆ ಗೊತ್ತಿರುವುದನ್ನು ಹೇಳುತ್ತಿದ್ದರು. ಹೆಚ್ಚು ಕಲಿತು ಏನು ಮಾಡುವುದಕ್ಕಿದೆ ಎಂಬುದು ಮೊದಲೇ ನಮ್ಮ ತಲೆಯಲ್ಲಿ ತ್ತು ! ಹಳ್ಳಿಯಾದ ಕಾರಣ “ಬಾಡಿಗೆ ಮನೆ’ ಎಂಬ ಕಲ್ಪನೆಗಳಿರಲಿಲ್ಲ.
ಮೇಸ್ಟ್ರೆಗಳು ಅಲ್ಲಿಯೇ ಯಾರದ್ದೋ ಮನೆಯ ಒಂದು ಭಾಗದಲ್ಲಿ ಉಳಿದುಕೊಳ್ಳಬೇಕಿತ್ತು. ಮೇಷ್ಟ್ರುಗಳ ಮನೆಯ ನಿರ್ವಹಣೆ ನಮ್ಮದೇ. ಅವರ ಮನೆಗೆ ಬೇಲಿ ಹಾಕುವುದು, ಸೋರುವ ಮನೆಯ ಹಂಚು ಸರಿಮಾಡುವುದು, ಅವರಿಗೆ ನೀರು ತಂದುಕೊಡುವುದು… ಇತ್ಯಾದಿ. ಗುರುಗಳು ನಮ್ಮ ಬಗ್ಗೆ ಅನುಕಂಪ ತಳೆದರೆ ಕ್ಲಾಸ್‌ನಲ್ಲಿ ಪೆಟ್ಟು ತಿನ್ನುವುದು ಕಡಿಮೆಯಾಗುತ್ತದೆ ಎನ್ನುವುದು ನಮ್ಮ ದೂರಾಲೋಚನೆ. ಆದರೆ, ಆ ಯೋಜನೆ ಅಷ್ಟು ಪ್ರಯೋಜನಕಾರಿಯಾಗಿರಲಿಲ್ಲ. ಬಹುಶಃ ಮನೆಯಲ್ಲೂ ಯಾವಾಗಲು ಪೆಟ್ಟು ಬೀಳುತ್ತಿದ್ದ ಕಾರಣದಿಂದ ಶಾಲೆಯಲ್ಲಿ ಪೆಟ್ಟು ತಿನ್ನು ವುದು ಕೂಡ ದೊಡ್ಡ ಸಂಗತಿಯಾಗಿರಲಿಲ್ಲ.
ನಾವು ಕ್ಲಾಸ್ ನಲ್ಲಿ ಮೊದಲ ಸ್ಥಾನದಲ್ಲಿರಲಿಲ್ಲ. ಆದರೆ, ಕ್ಲಾಸ್‌ಲೀಡರ್ ಕೊಡುವ “ಮಾತನಾಡಿದವರ ಚೀಟಿ’ಯಲ್ಲಿ ಯಾವಾಗಲೂ ಮೊದಲು ನಮ್ಮದೇ ಹೆಸರು. ಅವನಿಗಾದರೋ ನಮ್ಮ ಮೇಲೆ ಯಾವ ಹಗೆಯೋ ಗೊತ್ತಿಲ್ಲ. ಸನಿಹ ಕುಳಿತವನಲ್ಲಿ “ಪೆನ್ ಕೊಡು’ ಅಂದರೂ ಅವನು ಹೆಸರು ಬರೆದಿಡುತ್ತಿದ್ದ. ಯಾವಾಗಲೂ ನಮ್ಮ ಹೆಸರುಗಳನ್ನೇ ನೋಡಿ ಬೇಸತ್ತ ಗುರುಗಳು, “ನಿಮಗೆ ಯಾವ ಶಿಕ್ಷೆ ಕೊಡಲಿ?’ ಎಂದು ನಮ್ಮಲ್ಲಿಯೇ ಕೇಳುತ್ತಿದ್ದರು !
ಮನೆಯಲ್ಲಿ ಬಡತನ. ಹಾಗಂತ ಊಟಕ್ಕೆ ಕೊರತೆಯೇನಿರಲಿಲ್ಲ. ನಮ್ಮ ಬೇಡಿಕೆಯನ್ನು ಪೂರೈಸುವಷ್ಟು ಶ್ರೀಮಂತಿಕೆಯಿರಲಿಲ್ಲ. ನಮ್ಮದೇನೂ ದೊಡ್ಡ ಬಂಗಲೆಯ ಬೇಡಿಕೆಯಲ್ಲ. ಒಂದು ರಬ್ಬರ್ ಚೆಂಡು, ಗೋಲಿಗಳು, ಹರಿದ ಚಡ್ಡಿಗಾಗಿ ಹೊಸ ಚಡ್ಡಿ. ಅಷ್ಟೇ. ಆದರೆ ಬೇಡಿಕೆ ಸಲ್ಲಿಸುವುದೇ ಒಂದು ಸವಾಲಿನ ಕೆಲಸ. ಅಮ್ಮನಲ್ಲಿ ಹೇಳಿ, ಅವಳು ಹೇಳಿದ ಕೆಲಸವನ್ನು ಪೂರೈಸಬೇಕು. ಅಮ್ಮ, ಅಪ್ಪನ ಒಳ್ಳೆಯ ಮೂಡ್ ನೋಡಿ ನಮ್ಮ ಬೇಡಿಕೆಯ ಬಗ್ಗೆ ಶಿಫಾರಸ್ಸು ಮಾಡಬೇಕು. ಬೇಡಿಕೆಗಳನ್ನು ಇಟ್ಟ ಮರುಗಳಿಗೆಯಲ್ಲಿ ಅಮ್ಮನಿಗೂ ನಮಗೂ ಇಬ್ಬರಿಗೂ ಅಪ್ಪನ ಬೈಗುಳ ! “ನಿನ್ನ ಕಾರಣದಿಂದ ಇವರು ಮಿತಿಮೀರಿ ಹೋಗುತ್ತಿದ್ದಾರೆ. ಕೊಟ್ಟ ಸಲುಗೆ ಜಾಸ್ತಿಯಾಯಿತು’ ಎಂಬ ಆರೋಪ.
ಹೀಗೆ ನೆನಪಿನ ಬುತ್ತಿ ಸಾಗುತ್ತ ಹೋಗುತ್ತದೆ. ಹೇಳುವುದಕ್ಕೆ ಹೋದರೆ ಕಾದಂಬರಿಯಾಗುತ್ತದೆ. ಈಗ ಕಾಣುವ ಮೊಬೈಲ್, ಲೆಕ್ಕವಿಲ್ಲದಷ್ಟು ಟಿವಿ ಚಾನೆಲ್ ಗಳು, ಇಂಟರ್‌ನೆಟ್, ತರಾವೇರಿ ಕಾರು-ಬೈಕ್‌ಗಳು, ಮನೋರಂಜನ ಮಾಧ್ಯಮಗಳು ಯಾವುದೂ ಇರಲಿಲ್ಲ. ಆದರೆ ಎಂದೂ ನಮ್ಮ ಆತ್ಮಸಂತೋಷಕ್ಕೆ ಬರಗಾಲವಿರಲಿಲ್ಲ. ಇಲ್ಲ ಅನ್ನುವುದು ಕೊರತೆಯಾಗಿರಲಿಲ್ಲ. ಆ ಬಗ್ಗೆ ಯೋಚನೆಯೇ ಇರಲಿಲ್ಲ. ಒಂದರ್ಥದಲ್ಲಿ ಇಲ್ಲ ಅನ್ನುವುದೇ ನಮ್ಮನ್ನು ಒಟ್ಟುಗೂಡಿಸಿತ್ತು. ಸಂಬಂಧಗಳನ್ನು ಬಿಗಿಯಾಗಿಸಿತ್ತು. ಈಗ ಎಲ್ಲವೂ ಇದೆ, ಆದರೆ ಏನೂ ಇಲ್ಲದೆ ಇರುವ ಹಾಗೆ ಮನಸ್ಸು ಶುಷ್ಕವಾಗುತ್ತದೆ. ಜ್ಞಾನವಿದೆ ಸಹನೆಯಿಲ್ಲ. ಧನವಿದೆ ದಾನವಿಲ್ಲ. ಸಂಸಾರವಿದೆ ಸಮಯವಿಲ್ಲ ಎಂಬ ಕವಿಯೊಬ್ಬರ ಮಾತು ನಿಜವೆನಿಸುತ್ತದೆ. ಮತ್ತೂಮ್ಮೆ ಬಾಲ್ಯದ ದಿನಗಳನ್ನು ಜೀವಿಸೋಣ ಎಂದು ತವಕವಾಗುತ್ತಿದೆ.
ರವಿ ಮಡೋಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.