ಚಿಕ್ಕಚಿಕ್ಕ ಕತೆಗಳು
Team Udayavani, Mar 10, 2019, 12:30 AM IST
ವ್ಯವಹಾರ
ಮುಲ್ಲಾ ನಸ್ರುದ್ದೀನನಿಗೆ ಹೊಸ ಅಂಗಿ ಹೊಲಿಸಿಕೊಳ್ಳುವ ಆಸೆಯಾಯಿತು. ದರ್ಜಿಯ ಬಳಿ ಹೋದ. ಅಳತೆ ತೆಗೆದದ್ದಾಯಿತು. ಎಲ್ಲ ಅಂಕೆ-ಸಂಖ್ಯೆಗಳನ್ನೂ ಒಪ್ಪವಾಗಿ ಪುಸ್ತಕದಲ್ಲಿ ಬರೆದು ಕೊಂಡದ್ದಾಯಿತು. “”ಮುಲ್ಲಾ ಅವರೇ, ಮುಂದಿನ ವಾರ ಬನ್ನಿ. ದೇವರ ದಯೆಯಿದ್ದರೆ ಅಷ್ಟು ಹೊತ್ತಿಗೆ ಅಂಗಿ ತಯಾರಾಗಿರುತ್ತೆ” ಎಂದ ದರ್ಜಿ. ಆ ಒಂದು ವಾರವನ್ನು ಬಹಳ ಕಷ್ಟಪಟ್ಟು ಕಳೆದ ಮುಲ್ಲಾ, ಹೇಳಿದ್ದ ದಿನದಂದು ಬೆಳಬೆಳಗ್ಗೆಯೇ ಹೋದ. ಆದರೆ, ದರ್ಜಿ ಮುಲ್ಲಾನನ್ನು ನೋಡಿ ಜೋಲುಮೋರೆ ಮಾಡಿದ. “”ಕ್ಷಮಿಸಿ ಮುಲ್ಲಾ ಅವರೇ. ಅಂಗಿ ಇನ್ನೂ ಆಗಿಲ್ಲ. ನಾಳೆ ಬನ್ನಿ. ದೇವರ ದಯೆಯಿದ್ದರೆ ಆಗಿರುತ್ತೆ” ಎಂದು ಸಾಗಹಾಕಿದ. ಮರುದಿನ ಹೋದಾಗಲೂ ದರ್ಜಿಯ ಉತ್ತರ ಬದಲಾಗಲಿಲ್ಲ; ಮುಖದ ಹಾವಭಾವವೂ. “”ಕ್ಷಮಿಸಿ ಮುಲ್ಲಾ. ಅದೊಂದು ಕೆಲಸ ಮುಗಿಸಲು ಆಗಲಿಲ್ಲ. ಇನ್ನೂ ಸ್ವಲ್ಪ ಬಾಕಿಯುಂಟು. ನಾಳೆ ಬನ್ನಿ. ದೇವರ ದಯೆಯಿದ್ದರೆ ಆಗಿರುತ್ತೆ” ಎಂದ. ಮುಲ್ಲಾ ಹೇಳಿದ, “”ಮಹಾರಾಯ ! ಆ ದೇವರನ್ನು ಈ ವ್ಯವಹಾರದಿಂದ ಬದಿಗಿಟ್ಟು ಹೇಳುವುದಾದರೆ ಹೇಳು, ಅಂಗಿ ಮಾಡಿಕೊಡಲು ಎಷ್ಟು ದಿನ ಬೇಕಾಗಬಹುದು?”
ಗುಜರಿ ಅಂಗಡಿ
ಮುಲ್ಲಾ ಒಂದು ಗುಜರಿ ಅಂಗಡಿಗೆ ಹೋದ. ಅಲ್ಲಿ ಎಲ್ಲಾ ಸಾಮಾನುಗಳನ್ನೂ ರಾಶಿ ಹಾಕಲಾಗಿತ್ತು.
“”ಈ ಅಂಗಡಿಯಲ್ಲಿ ಮೊಳೆಗಳು ಸಿಗುತ್ತಾ?” ವಿಚಾರಿಸಿದ ಮುಲ್ಲಾ.
“”ಹೌದು. ನಿಮಗೆ ಯಾವ ಸೈಜಿನದ್ದು ಬೇಕಾದರೂ ಸಿಗುತ್ತೆ” ಎಂದ ಅಂಗಡಿಯಾತ.
“”ಚರ್ಮದ ಹಾಳೆಗಳೇನಾದರೂ ಸಿಗತಾವೋ?”
“”ಹೌದು. ಅದೂ ಸಿಗುತ್ತೆ”
“”ಮತ್ತೆ ಗೋಂದು?”
“”ಹೌದು”
“”ಹಾಗೇನೆ ದಬ್ಬಣ? ನೂಲು?”
“”ಹೌದು, ಅದು ಕೂಡ ಇದೆ”
“”ಮತಾöಕಯ್ಯ ಸುಮ್ಮನೆ ಕೂತಿದ್ದೀ? ಒಂದು ಒಳ್ಳೆಯ ಚಪ್ಪಲಿ ಹೊಲಿಯಬಾರದಾ?” ಎಂದ ಮುಲ್ಲಾ.
ಬದನೆಕಾಯಿ
ಊಟದ ಮೇಜಿನ ಒಂದು ಕಡೆಯಲ್ಲಿ ರಾಜ ಕೂತಿದ್ದರೆ ಇನ್ನೊಂದು ಬದಿಯಲ್ಲಿ ಕೂತಿದ್ದವನು ರಾಜನ ನೆಚ್ಚಿನ ಸಚಿವನಾದ ಮುಲ್ಲಾ ನಸ್ರುದ್ದೀನ. ಅಂದು ಊಟಕ್ಕೆ ವಿಶೇಷವಾಗಿ ಬದನೆಕಾಯಿಯ ಪಲ್ಯ ಮಾಡಲಾಗಿತ್ತು. ಅದು ಎಷ್ಟು ರುಚಿಯಾಗಿತ್ತೆಂದರೆ ರಾಜ ಅದನ್ನು ಹೊಗಳಿ ಹೊಗಳಿ ತನ್ನ ತಟ್ಟೆಗೆ ಹಾಕಿಸಿಕೊಂಡ. “”ಬದನೆಕಾಯಿ! ಆಹಾ,ಲ್ಲಾ ಅದರ ರುಚಿಗೆ ಸಮನಾದ ತರಕಾರಿ ಯಾವುದಿದೆ” ಎಂದ ರಾಜ. “”ಹೌದು ಮಾಲಿಕ್! ಜಗತ್ತಿನಲ್ಲೇ ಅತ್ಯಂತ ರುಚಿಕಟ್ಟಾದ ತರಕಾರಿಯೆಂದರೆ ಬದನೆಕಾಯಿ” ಎಂದು ಮುಲ್ಲಾನೂ ದನಿಗೂಡಿಸಿದ. ರಾಜ ಮೆಚ್ಚಿದ ಎಂದ ಮೇಲೆ ಕೇಳಬೇಕೆ? ಮರುದಿನವೂ ಅವನ ತಟ್ಟೆಯಲ್ಲಿ ಬದನೆಕಾಯಿಯ ಪಲ್ಯ ಬಂತು. ಮೂರನೆಯ ದಿನವೂ ಬಂತು. ವಾರವಾಗುವಷ್ಟರಲ್ಲಿ ರಾಜನಿಗೆ ಬದನೆಕಾಯಿಯ ಮೋಹ ಇಳಿಯಿತು. ಅದು ಈಗ ಅಷ್ಟೇನೂ ರುಚಿಸಲಿಲ್ಲ ಅವನಿಗೆ. “”ಈ ಬದನೆ ಅಷ್ಟೇನೂ ರುಚಿಕಟ್ಟಾದ ತರಕಾರಿ ಅಲ್ಲ ಬಿಡಯ್ಯ” ಎಂದ ಉದಾಸೀನದಿಂದ. ಕೂಡಲೇ ಮುಲ್ಲಾ “”ಅದೇನ್ ಹೇಳ್ತೀರಿ! ಅದೊಂದು ದರಿದ್ರ ತರಕಾರಿ. ರುಚಿಯೋ ಮಣ್ಣಿನ ಹಾಗಿರುತ್ತೆ. ಯಾರು ತಿಂತಾರೆ ಅದನ್ನು” ಎಂದ. ರಾಜನಿಗೆ ಆಶ್ಚರ್ಯವಾಯಿತು. “”ಮುಲ್ಲಾ, ಒಂದು ವಾರದ ಹಿಂದೆ ಅದನ್ನು ಜಗತ್ತಿನ ಸರ್ವಶ್ರೇಷ್ಠ ತರಕಾರಿ ಅಂದದ್ದು ತಾವೇ ಅಲ್ಲವೆ?” ಎಂದು ವಿಚಾರಿಸಿದ. “”ಇರಬಹುದು. ಆದರೆ ನಾನು ನಿಮ್ಮ ಸೇವಕನೇ ಹೊರತು ಆ ಬದನೇಕಾಯಿ ಸೇವಕ ಅಲ್ಲವಲ್ಲ” ಎಂದು ಮುಲ್ಲಾ ಅನುಮಾನ ಪರಿಹರಿಸಿದ.
ಜಾಗರೂಕತೆ
ಮುಲ್ಲಾ ನಸ್ರುದ್ದೀನನನ್ನು ಒಂದು ಮದುವೆಗೆ ಆಮಂತ್ರಿಸಲಾಗಿತ್ತು. ಮದುವೆ ನಡೆಯುತ್ತಿದ್ದ ಛತ್ರದಲ್ಲಿ ಹಿಂದೊಮ್ಮೆ ಮುಲ್ಲಾನಿಗೆ ಒಂದು ಕೆಟ್ಟ ಅನುಭವವಾಗಿತ್ತು. ಏನೆಂದರೆ, ಅಲ್ಲಿ ಛತ್ರದ ಹೊರಗೆ ಬಿಟ್ಟಿದ್ದ ಅವನ ಚಪ್ಪಲಿಗಳನ್ನು ಯಾರೋ ಕದ್ದೊಯ್ದಿದ್ದರು. ಹಾಗಾಗಿ, ಈ ಸಲ ಮುಲ್ಲಾ ಛತ್ರ ಸೇರಿದವನೇ ತನ್ನ ಚಪ್ಪಲಿಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿ ಕುರ್ತಾದ ಜೇಬಿನಲ್ಲಿ ತುರುಕಿಸಿಕೊಂಡ. ಒಳಗೆ ನಡೆದ.
ಮದುವೆಗೆ ಕರೆದಿದ್ದ ಆತಿಥೇಯ ಮುಲ್ಲಾನನ್ನು ತುಂಬಾ ಚೆನ್ನಾಗಿ ಉಪಚರಿಸಿದ. ಕುಡಿಯಲು ಪಾನೀಯ ಕೊಟ್ಟ. ಗಾಳಿ ಹಾಕಿದ. ನಂತರ ಮಾತಾಡುತ್ತ ಅವನ ಗಮನ ಜೇಬಿನ ಬಟ್ಟೆಯ ಗಂಟಿನತ್ತ ಹೋಯಿತು. “”ಮುಲ್ಲಾ ಅವರೇ, ಅದೇನದು ಅಷ್ಟು ದೊಡ್ಡ ಗಂಟು?” ಪ್ರಶ್ನಿಸಿದನಾತ.
ಮುಲ್ಲಾನಿಗೆ ಪೇಚಿಗಿಟ್ಟುಕೊಂಡಿತು. ನಿಜ ಹೇಳಿದರೆ ಮರ್ಯಾದೆ ಹೋಗುತ್ತದೆ! “”ಓಹ್ ಅದಾ! ಅದೊಂದು ಪುಸ್ತಕ. “ಜಾಗರೂಕತೆ’ ಅಂತ ಹೆಸರು” ಎಂದ ಮುಲ್ಲಾ.
“”ಹೌದೇ! ಬಹಳ ಒಳ್ಳೆಯ ವಿಷಯ. ಎಲ್ಲಿ ಕೊಂಡಿರಿ ಆ ಪುಸ್ತಕವನ್ನು?” ಆತಿಥೇಯನ ವಿಚಾರಣೆ ಮುಂದುವರಿಯಿತು.
ಮುಲ್ಲಾ ಸ್ವಲ್ಪ ಮುಂದಕ್ಕೆ ಬಾಗಿ ಗುಟ್ಟು ಹೇಳುವವನಂತೆ ಹೇಳಿದ, “”ನಾನು ತಗೊಂಡದ್ದು ಒಂದು ಚಪ್ಪಲಿ ಅಂಗಡಿಯಲ್ಲಿ”
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.