ಬಾಲಕಾಂಡದ ಪ್ರಬುದ್ಧ ಮಕ್ಕಳು


Team Udayavani, Jul 29, 2018, 6:00 AM IST

6.jpg

ಇಲ್ಲಿಯವರೆಗೆ…
ಕುಶ ಪೆಚ್ಚಾಗುತ್ತಾನೆ. ಕತ್ತಿನಿಂದ ಸರವನ್ನು ತೆಗೆದು ವಾಲ್ಮೀಕಿಗಳತ್ತ ಚಾಚುತ್ತಾನೆ. ವಾಲ್ಮೀಕಿಗಳು ನಗುನಗುತ್ತ, “ಈಗ ಹಾಕಿಕೊಂಡಿರು. ಅದು ಪಾರಿತೋಷಕ ತಾನೆ. ನಾಳೆ ಕೊಟ್ಟುಬಿಡು ಬಾರದ್ವಾಜನಿಗೆ’ ಎನ್ನುತ್ತಾರೆ. ಲವನಿಗೆ ಮತ್ತೇನೋ ನೆನೆಪಾಗುತ್ತದೆ. ಹೇಳಲೋ ಬೇಡವೋ ಎಂದು ಅನುಮಾನಿಸಿ, ಹೇಳುತ್ತಾನೆ.
“ಗುರುಗಳೇ! ಒಬ್ಬರು-ಅವರು ಬ್ರಾಹ್ಮಣರಂತಿದ್ದರು, ಅಯೋಧ್ಯೆಗೆ ಬಂದುಬಿಡಿ ಅಂದರು’
“ನನಗೂ ಅಂದರು ಗುರುಗಳೇ, ನೀವು ರಾಜಕುವರರು’ ಅಂದರು.
ವಾಲ್ಮೀಕಿಗಳು ಭಾರದ್ವಾಜನತ್ತ ನೋಡುತ್ತಾರೆ.
“ಹೌದು! ಅಯೋಧ್ಯೆಯ ಜನರಿಗೆ ಈಗ ತಿಳಿದಿದೆ, ಇವರು ರಾಜಕುವರರೆಂದು’
“ಮಹಾರಾಜರು ಏನಂದರು?’
ಭಾರದ್ವಾಜ ನಕ್ಕ.
“ಮರ್ಯಾದೆ ಮೀರದಂತೆ ನಡೆದುಕೊಂಡರು’
“ಇವರನ್ನು ಒಳಗೆ ಕರೆ ತಾ, ಎಲ್ಲವನ್ನೂ ವಿವರಿಸಿ ಹೇಳುವ ಕಾಲ ಬಂದಿದೆ’
ವಾಲ್ಮೀಕಿಗಳು ಆಶ್ರಮಕ್ಕೆ ಮರಳಿದರು. ಕಟ್ಟಿಗೆ ಒಟ್ಟುವ ಕೆಲಸವನ್ನು ಇತರೆ ವಟುಗಳಿಗೆ ಒಪ್ಪಿಸಿ, ಭಾರದ್ವಾಜ, ಲವಕುಶರೊಟ್ಟಿಗೆ ಮುನಿಗಳನ್ನು ಹಿಂಬಾಲಿಸಿದ.

ಇದ್ದುದೆಲ್ಲವನ್ನೂ ಇದ್ದಂತೆಯೇ ಹೇಳಿದರು ವಾಲ್ಮೀಕಿ ಮುನಿಗಳು. ಹೇಳಿ ಮಮಕಾರವಿಲ್ಲದೆ ಕೇಳಿದರು. “”ಹೋಗುವಿರೇನು?” ಮಕ್ಕಳು ಅಳತೊಡಗಿದವು. ಸ್ವಲ್ಪ$ಕಾಲ ಅಳಲಿಕ್ಕೆ ಬಿಟ್ಟು ಮಾತು ಮುಂದುವರೆಸಿದರು ವಾಲ್ಮೀಕಿಗಳು.
“”ಅಳಬೇಡಿ! ಈಗ ಹೋಗುವ ಅಗತ್ಯವಿಲ್ಲ. ಶಿಕ್ಷಣ ಪೂರ್ತಿಯಾಗಲಿ. ಇಷ್ಟಕ್ಕೂ, ತಾಯಿಯನ್ನು ಬಿಟ್ಟು ತಂದೆಯ ಹತ್ತಿರ ಹೋಗುವ ಅಗತ್ಯವಾದರೂ ಏನು? ಎಲ್ಲವೂ ಸರಿಹೋದೀತು. ಕಾಲ ಕೂಡಿ ಬರಲಿ”.

ಮಕ್ಕಳು ಕಣ್ಣೊರೆಸಿಕೊಂಡವು. ಮಕ್ಕಳ ಮನಸ್ಸನ್ನು ತಿಳಿಗೊಳಿಸಲೆಂದು ಭಾರದ್ವಾಜ ಬೇಕೆಂದೇ ಮಾತು ಬೇರೆಡೆಗೆ ತಿರುಗಿಸಿದ. “”ಅದೇನೋ ಕೇಳುತ್ತಿದ್ದಿರಲ್ಲ ಪ್ರಭುಗಳನ್ನ ನೀವು, ಏನದು?” ಅವರ ಮುಖದಲ್ಲಿ ಗೆಲುವು ಮೂಡಿತು. ಲವ ಹೇಳಿದ, “”ನಾನೇ ಕೇಳಿದ್ದು . ನೀವು ಶಿವನಬಿಲ್ಲನ್ನು ಮುರಿದದ್ದು ಹೌದೇ” ಎಂದು. ಹೌದೆಂದು ರಾಮ ತಲೆಯಾಡಿಸಿದ್ದನ್ನು ಕಂಡಿದ್ದ ಭಾರದ್ವಾಜ, ಗೊತ್ತಿದ್ದೂ ಗೊತ್ತಿಲ್ಲದವನಂತೆ ನಟಿಸುತ್ತ, ಪ್ರಶ್ನೆ ಮಾಡಿದ.
“”ಏನಂದರು ಪ್ರಭುಗಳು?”
“”ಹೌದು ಅಂದರು” ಕುಶ ಗೆಲುವಿನಿಂದ ನುಡಿದ.
ವಾಲ್ಮೀಕಿಗಳು ಮಾತು ಮುಂದುವರೆಸಿದರು.
“”ನೋಡಿ, ನೀವು ಮುಂದೆ ಏನೂ ಆಗಬಹುದು. ಏನೇ ಆಗಲಿ, ನಿಮ್ಮ ಬೇಕು-ಬೇಡಗಳ ಅರಿವಿರಬೇಕು ನಿಮಗೆ. ಅದು ಮುಖ್ಯ. ರಾಜ ದುರಾಸೆಗೀಡಾದರೆ ರಾಜ್ಯ ದುರಾಸೆಗೀಡಾಗುತ್ತದೆ. ಪ್ರಜೆಗಳು ಸಂಕಟಪಡುತ್ತಾರೆ. ರಾಮ ಚಿನ್ನ ತೊಟ್ಟಿದ್ದನೇನು?”
“”ಇಲ್ಲ ಗುರುಗಳೇ!”
“”ಚಂದ ಕಾಣುತ್ತಿದ್ದನೇನು?”
“”ಕಾಣುತ್ತಿದ್ದರು ಗುರುಗಳೇ!”
“”ಏಕೆ ತೊಟ್ಟಿರಲಿಲ್ಲ ಹೇಳಿ, ಚಿನ್ನ?”
“”ಗೊತ್ತಿಲ್ಲ ಗುರುಗಳೇ”
“”ನೀನು ತೊಟ್ಟಿರುವ ಚಿನ್ನ, ಉಡುಗೊರೆಯ ಸಂಕೇತ. ಉಡುಗೊರೆ ಕೊಟ್ಟ ರಾಮ, ತೊಟ್ಟಿರಲಿಲ್ಲ. ಅದು ರಾಮನ ರೀತಿ. ನೀವು ರಾಮನ ಮಕ್ಕಳು. ಚಿನ್ನದ ಸರ ಬೇಡ ಅನ್ನುವುದನ್ನು ಕಲಿಯಿರಿ. ಆಗ, ಏನುಬೇಕು ಏನುಬೇಡ ಎಂಬುದು ನಿಮಗೇ ತಿಳಿಯತೊಡಗುತ್ತದೆ. ನಿಜಕ್ಕೂ ಬೇಕಾದದ್ದು ಸುಂದರವಾಗಿರುತ್ತದೆ, ಹಸಿದಾಗ ಉಂಡ ಊಟದಂತೆ.”
“”ಹೌದು ಗುರುಗಳೇ”
“”ಅಥವಾ ನಿಮ್ಮ ಕಾವ್ಯವಾಚನದಂತೆ”
ನಕ್ಕರು ವಾಲ್ಮೀಕಿಗಳು. ಮಕ್ಕಳೂ ನಕ್ಕವು, ಇನ್ನೂ ಮಾತನಾಡಲಿ ಎಂದು ಹಂಬಲಿಸುತ್ತ ಗುರುಗಳನ್ನೇ ನೋಡುತ್ತಿದ್ದವು ಅವು.
“”ನೀವು ಒಟ್ಟುತ್ತಿದ್ದ ಕಟ್ಟಿಗೆ ದಪ್ಪವಾಗಲಿಲ್ಲವೇನು?”
“”ಗುರುಗಳೇ!”
“”ಕಟ್ಟಿಗೆ, ಒಲೆಯಮೂತಿಗೆ ಹಿಡಿಸುವುದೇನು?”
ಗಾಬರಿಗೊಂಡು ಪರಸ್ಪರ ಮುಖ ನೋಡಿಕೊಂಡರು ಲವಕುಶರು.
“”ನಾವಲ್ಲ ಒಡೆದದ್ದು ಕಟ್ಟಿಗೆ, ಗುರುಗಳೇ!” ಲವ ಹೇಳಿದ.

“ಗೊತ್ತು ನನಗೆ. ಆದರೆ ನೀವೇನು ಒಟ್ಟುತ್ತಿದ್ದೀರಿ, ಯಾಕಾಗಿ ಒಟ್ಟುತ್ತಿದ್ದೀರಿ, ಒಲೆಯ ಮೂತಿ ಎಷ್ಟು ಅಗಲವಿದೆ ಎಂಬಿತ್ಯಾದಿ ಸಂಗತಿಗಳೆಲ್ಲ ನಿಮಗೆ ತಿಳಿದಿರಬೇಕು. ಆಗಮಾತ್ರ ಒಟ್ಟಿದ ಕಟ್ಟಿಗೆ ವ್ಯರ್ಥವಾಗುವುದಿಲ್ಲ”.
“”ತಪ್ಪಾಯ್ತು ಗುರುಗಳೇ”
“”ತಪ್ಪೇನಾಗಲಿಲ್ಲ! ನಾಳೆ ನೀವು ರಾಜರಾಗಬಹುದು ಅಥವಾ ನನ್ನಂತೆ ಆಶ್ರಮವಾಸಿಗಳಾಗಬಹುದು, ಅಥವಾ ಗ್ರಾಮದಲ್ಲಿಯೇ ಉಳಿದು ಕಟ್ಟಿಗೆ ಒಡೆಯಬಹುದು ಏನೂ ಆಗಬಹುದು. ಏನೇ ಆದರೂ, ಒಡೆದ ಕಟ್ಟಿಗೆ ಒಲೆಯ ಮೂತಿಗೆ ಹಿಡಿಸುತ್ತದೆಯೇ ಎಂಬಂತಹ ಸಂಗತಿಗಳನ್ನು ಗಮನಿಸಿರಿ. ಅದು ಮುಖ್ಯ. 

ರಾಮಕತೆ
ರಾಜ ದಶರಥ ಮೂರು ಮದುವೆ ಮಾಡಿಕೊಂಡರೂ ಮಕ್ಕಳಾಗುತ್ತಿಲ್ಲ. ವೃದ್ಧಾಪ್ಯ ಬೇರೆ ಬಂದು ಬಂದು ಕದತಟ್ಟತೊಡಗಿದೆ. ರಾಜನ ಮಗನೇ ರಾಜನಾಗಬೇಕೆಂಬ ನಿಯಮವು ಜಾರಿಯಲ್ಲಿದ್ದ ಕಾಲಮಾನ ಅದು. ಸಹಜವಾಗಿಯೇ ಚಿಂತಿತನಾಗಿದ್ದ ದಶರಥ.
ಆತನ ಸಾರಥಿ ಸುಮಂತ್ರ-ಮೂರೂ ಹೊತ್ತು ರಾಜನ ಜೊತೆಗಿರಬೇಕಾದವನು ತಾನೆ, ರಾಜನೊಟ್ಟಿಗೆ ಅವನಿಗೆ ಸಲಿಗೆಯಿತ್ತು. ಒಂದು ದಿನ ಧ್ಯೆರ್ಯಮಾಡಿ ಮಾತು ತೆಗೆದ. “”ಪ್ರಭೂ…”
“”ಅದೇನು ಹೇಳು?”
“”ಮುಗ್ಧನೂ, ಪರಿಶುದ್ಧನೂ, ಕಾಡಿನ ಕೂಸೂ ಆಗಿರುವ ಋಷ್ಯಶೃಂಗ ಮುನಿಗಳನ್ನು ರಾಜ್ಯಕ್ಕೆ ಕರೆಯಿಸಿರಿ ಪ್ರಭೂ. ಅವರಿಂದ ಯಜ್ಞ-ಯಾಗಾದಿಗಳನ್ನು ಮಾಡಿಸಿರಿ. ನಿಮಗೆ ಖಂಡಿತವಾಗಿ ಪುತ್ರ ಸಂತಾನವಾಗುತ್ತದೆ”. 
ದಶರಥನ ಕುತೂಹಲ ಕೆರಳಿತು. ರಥವನ್ನು ಬದಿಗೆ ನಿಲ್ಲಿಸಲು ಹೇಳಿದ.  
“”ಅದು ಹೇಗೆ?”
ಸುಮಂತ್ರ, ತನ್ನ ಮಾತಿಗೆ ದೃಷ್ಟಾಂತವಾಗಿ ಅಂಗದರಾಜ ರೋಮಪಾದನ ಕತೆ ಹೇಳಿದ.
“”ಪ್ರಭು, ಅಂಗದ ಅರಸು ರೋಮಪಾದರಿಗೂ ಹೀಗೆಯೇ ಸಮಸ್ಯೆ ಬಂದಿತ್ತು. ರಾಜ್ಯದಲ್ಲಿ ಬರಗಾಲ ಬಂದಿತ್ತು. ರಾಜ್ಯದಲ್ಲಿ ಅಧರ್ಮ ಜಾಸ್ತಿಯಾಗಿತ್ತು. ರಾಜನಲ್ಲೂ ಆಗಿತ್ತು ಅದು ಎಂದು ಕೇಳಿದ್ದೇನೆ. ವರ್ತಕರು ಅಧರ್ಮಿಗಳಾಗಿದ್ದರು. ಅಧಿಕಾರಿಗಳು ಸಂವೇದನೆ ಕಳೆದುಕೊಂಡಿದ್ದರು. ಇತ್ತ ಜನರು ಹಸಿವಿನಿಂದ ಕಂಗಾಲಾಗಿದ್ದರು. ಅವರು ದಂಗೆ ಏಳಬಲ್ಲ ಪರಿಸ್ಥಿತಿ ನಿರ್ಮಾಣವಾಗಿತ್ತು. ತಿಳಿದವರು ರಾಜನಿಗೆ ತಿಳುವಳಿಕೆ ನೀಡಿದರು. ರಾಜಾ, ನೀನು ಗಟ್ಟಿಮನಸ್ಸು ಮಾಡಬೇಕು ಈಗ. ಇಲ್ಲದಿದ್ದರೆ ಅನಾಹುತವಾಗುತ್ತದೆ. ಆಡಳಿತ ಬಿಗಿಮಾಡಬೇಕು ನೀನು. ಕಾಲಮಿಂಚುವ ಮೊದಲು ಇಷ್ಟು ಮಾಡಬೇಕು, ಋಷ್ಯಶೃಂಗ ಮುನಿಗಳನ್ನು ರಾಜ್ಯಕ್ಕೆ ಕರೆಯಿಸು. ಅವರ ಬರುವಿಕೆಯಿಂದಾಗಿ ಮಳೆಯಾಗುತ್ತದೆ, ಬರವು ನೀಗುತ್ತದೆ” ಎಂದರು.

ತಿಳುವಳಿಕೆಯನ್ನೇನೋ ನೀಡಿದ್ದರು. ಆದರೆ, ವಿಭಾಂಡಕ ಮುನಿಗಳ ಮುಗ್ಧಪುತ್ರನನ್ನು ಅಷ್ಟೇನೂ ಮುಗ್ಧವಾಗಿರದ ಈ ಪೇಟೆಗೆ ಕರೆಯಿಸುವುದಾದರೂ ಹೇಗೆ? ಕಾಡಿನಿಂದ ಬೇರ್ಪಡಿಸಿ, ಮುದಿತಂದೆಯ ಸೇವೆಯಿಂದ ಬೇರ್ಪಡಿಸಿ, ಪೇಟೆಗೆ ತರುವುದಾದರೂ ಹೇಗೆ? ಶಾಪದ ಹೆದರಿಕೆ ಬೇರೆ. ಆದರೆ ಬೇರೆ ದಾರಿಯಿರಲಿಲ್ಲ. ವ್ಯವಹಾರ ಕುಶಲಿಗಳೆಲ್ಲ ಕಲೆತರು. ಋಷ್ಯಶೃಂಗ ಮುನಿಯ ಮುಗ್ಧತೆಯ ಲಾಭ ಪಡೆದು ಮುನಿಯನ್ನು ರಾಜ್ಯಕ್ಕೆ ಕರೆತರುವ ಒಂದು ಯೋಜನೆ ಹಾಕಿದರು.
ವೇಶ್ಯೆಯರನ್ನು ಅಡವಿಗೆ ಕಳುಹಿಸುವುದೆಂದು ನಿರ್ಧರಿಸಿದರು ವ್ಯವಹಾರ ಕುಶಲಿಗಳು. ಊರ ಬೇಟೆಗಾರ್ತಿಯರು, ಮೈತುಂಬ ಅಲಂಕಾರ ಮಾಡಿಕೊಂಡು ಅಡವಿ ಬೇಟೆಗೆ ಹೊರಟರು. ಒಂದು ತಂತ್ರ ಫ‌ಲಸದೆ ಹೋದರೆ ಇನ್ನೊಂದಿರಲಿ ಎಂದು, ಬಗೆಬಗೆಯ ತಿನಿಸುಗಳನ್ನು ಸಹ ಸಿದ್ಧ ಮಾಡಿಟ್ಟುಕೊಂಡಿದ್ದರು. ಮುಗ್ಧತೆಯನ್ನು ಹಾಳುಗೆಡಹುವುದು ಸುಲಭ ಎಂದು ತಿಳಿದಿತ್ತು ಅವರಿಗೆ”.
“”ಛೆ! ಇದೇನು ಹೇಳುತ್ತಿದ್ದೀಯ ನೀನು.”
“”ತಾಳ್ಮೆಗೆಡದಿರಿ ಪ್ರಭು, ಪೂರ್ತಿ ಕೇಳಿಸಿಕೊಳ್ಳಿ. ಫ‌ಲದ ಆಶಯವಿಲ್ಲದ ಪ್ರೇಮಿಗಳು ವೇಶ್ಯೆಯರು ಸರಿಯಾಗಿಯೇ ಕೆಲಸ ನಿರ್ವಹಿಸಿದರು. ಮುಗ್ಧ ಮುನಿಗಳನ್ನು ಕರೆತಂದೇ ಬಿಟ್ಟರು.  ದೇವೇಂದ್ರ ಅದೆಷ್ಟು ಬಾರಿ ಬಳಸಲಿಲ್ಲ ಹೇಳಿ ಈ ತಂತ್ರವನ್ನು. ಆಶ್ಚರ್ಯದ ಸಂಗತಿಯೆಂದರೆ, ಪ್ರತಿಬಾರಿ ಯಶಸ್ವಿಯಾಗುವ ತಂತ್ರವಿದು. ಈ ಬಾರಿಯೂ ಆಯಿತು”

“”ಸಾಕು ನಿಲ್ಲಿಸು, ನಾನು ಹಾಗೆ ಮಾಡಲಾರೆ”.
“”ಮಾಡುವ ಅಗತ್ಯವಿಲ್ಲ ಪ್ರಭು”
“”ಏನು ನಿನ್ನ ಮಾತಿನ ಅರ್ಥ?”
“”ಪವಾಡ ಸದೃಶವಾಗಿ ತನ್ನ ರಾಜ್ಯದಲ್ಲಿ ಮಳೆಯಾದಾಗ, ರೋಮಪಾದರು ಋಷ್ಯಶೃಂಗ ಮುನಿಗಳ ಪ್ರಾಮುಖ್ಯವನ್ನು ಸರಿಯಾಗಿಯೇ ಗ್ರಹಿಸಿದರು. ಮಗಳು ಶಾಂತಾದೇವಿಯನ್ನು ಮದುವೆ ಮಾಡಿಕೊಟ್ಟು ಋಷ್ಯಶೃಂಗರನ್ನು ಜೊತೆಯಲ್ಲಿಯೇ ಇಟ್ಟುಕೊಂಡರು. ಮಾತ್ರವಲ್ಲ, ಮಗಳು-ಅಳಿಯನನ್ನು ವಿಭಾಂಡಕ ಮುನಿಗಳ ಬಳಿಗೆ ಕರೆದೊಯ್ದು, ಕಾಲಿಗೆ ಬೀಳಿಸಿದರು. ಮುದಿಮುನಿಗಳ ಸೇವೆಗೆ ಪರ್ಯಾಯ ವ್ಯವಸ್ಥೆ ಮಾಡಿದರು, ಮುನಿಗಳನ್ನು ಸಾಂತ್ವನಗೊಳಿಸಿ ಸರಿಮಾಡಿಕೊಂಡರು”. 
“”ಅದೇನೇ ಇರಲಿ, ಒಳತಿನ ಸಂಘ ಒಳಿತು ಮಾಡುತ್ತದೆ. ಋಷ್ಯಶೃಂಗರ ಸಂಘದಲ್ಲಿ ರೋಮಪಾದರು ಸುಧಾರಿಸಿದರು. ಅವರ ರಾಜ್ಯಭಾರ ಸುಧಾರಿಸಿತು. ವರ್ತಕರು, ಶ್ರೀಮಂತರು, ಸೇನಾಪತಿಗಳು ಸರಿದಾರಿಗೆ ಬಂದರು. ರಾಜ್ಯ ಸುಭಿಕ್ಷವಾಯಿತು. ಈಗ ಋಷ್ಯಶೃಂಗರು ಊರಿನ ಮನುಷ್ಯ ಪ್ರಭು ಆದರೆ ಒಳ್ಳೆಯ ಮನುಷ್ಯ. ಕಾಡಿನಿಂದ ಅವರನ್ನು ಕರೆತರಬೇಕಾದ ಅಗತ್ಯವಿಲ್ಲ ಪ್ರಭು. ರೋಮಪಾದರು ಎಷ್ಟೆಂದರೂ ತಮ್ಮ ಸಂಬಂಧಿಯೇ ಹೌದು ತಾನೆ?’

ದಶರಥ ಗಾಢ ಆಲೋಚನೆಗೆ ಬಿದ್ದ. ಸುಮಂತ್ರನ ಮಾತು ಮೊಟಕುಗೊಳಿಸಿ ರಥ ಚಲಾಯಿಸುವಂತೆ ಆಜ್ಞೆ ಮಾಡಿದ. ಋಷ್ಯಶೃಂಗ ಮುನಿಗಳು ಅಯೋಧ್ಯೆಗೆ ಬಂದರು. ಅಶ್ವಮೇಧದಿಂದ ಹಿಡಿದು ಪುತ್ರಕಾಮೇಷ್ಠಿಯವರೆಗೆ ಎಲ್ಲ ಅದ್ದೂರಿ ಯಾಗಗಳನ್ನೂ ರಾಜನಿಂದ ಮಾಡಿಸಿದರು. ಯಾಗದ ಫ‌ಲವೆನ್ನಿ, ನಿಸರ್ಗದ ಚಮತ್ಕಾರವೆನ್ನಿ, ಏನೇ ಅನ್ನಿ, ಅಂತೂ ದಶರಥನ ಮೂವರು ಮಡದಿಯರಿಗೆ ನಾಲ್ಕು ಮಕ್ಕಳಾದವು! ಅದೂ ಗಂಡು ಮಕ್ಕಳು! ಹಿರಿಯರಾಣಿ ಕೌಸಲೆಯ ಮಗನಾಗಿ, ಕಥಾನಾಯಕ ರಾಮ ಜನಿಸಿದನು. ನಡುವಿನ ರಾಣಿ ಸುಮಿತ್ರೆಯಲ್ಲಿ ಲಕ್ಷ್ಮಣ-ಶತೃಘ್ನರು ಜನಿಸಿದರು. ಕಿರಿಯಳೂ, ವೃದ್ಧ ರಾಜನಿಗೆ ಪರಮಪ್ರಿಯಳೂ ಆಗಿದ್ದ ಕೈಕೇಯಿಯಲ್ಲಿ ಭರತ ಜನಿಸಿದನು. ನಾಲ್ಕೂ ಮಕ್ಕಳು ಒಳಿತಿನ ಫ‌ಲಗಳು. ಒಳ್ಳೆಯವರಾಗಿ ಬೆಳೆದರು. ವೃದ್ಧ ದಶರಥನ ಆನಂದಕ್ಕೆ ಪಾರವೇ ಇರಲಿಲ್ಲ.

ಮಕ್ಕಳನ್ನು ಸಭ್ಯರನ್ನಾಗಿ ಬೆಳೆಸುವ ಆತುರವಿರುತ್ತದೆ ಕೆಲವರಿಗೆ, ಅಥವಾ ತಮಗಿಂತ ಸಮರ್ಥರನ್ನಾಗಿ ರೂಪಿಸುವ ಅತಿ ಉತ್ಸಾಹವಿರುತ್ತದೆ. ತನ್ನಲ್ಲಿರುವ ದುರ್ಗುಣಗಳನ್ನು ಮಗು ಕಲಿಯದಿರಲಿ ಎಂಬ ಆತಂಕವಿರುತ್ತದೆ. ಅತಿ ಆತಂಕದಿಂದಾಗಿಯೇ ತಂದೆ-ತಾಯಿಯರು ಮಕ್ಕಳನ್ನು ಹಾಳುಗೆಡವುತ್ತಾರೆ. ರಾಮಲಕ್ಷ್ಮಣ ಭರತಶತ್ರುಘ್ನರು ಸಹಜವಾಗಿ ಬೆಳೆದರು, ಸಹಜವಾಗಿಯೇ ಸಭ್ಯರಾದರು, ಸಮರ್ಥರಾದರು. ಬಿಲ್ಲುವಿದ್ಯೆಯಿಂದ ಹಿಡಿದು ಅಕ್ಷರವಿದ್ಯೆಯವರೆಗೆ, ಕಲಾಪ್ರಕಾರಗಳಿಂದ ಹಿಡಿದು ಬದುಕಿನ ಕಲೆಯವರೆಗೆ ಎಲ್ಲವನ್ನೂ ಸಹಜವಾಗಿ ಕಲಿತರು. ರಾಮನಂತೂ ಸಹಜತೆ ಹಾಗೂ ಸಭ್ಯತೆಗಳ ಸಮರ್ಥಪಾಕವಾಗಿ ಮೂಡಿಬಂದನು. ಎಲ್ಲರಿಗೂ ಪ್ರಿಯನಾದನು.

ಅಯೋಧ್ಯೆಯ ನಾಗರೀಕರು ಈ ಚಿಕ್ಕ ಹುಡುಗನಲ್ಲಿಯೇ ನಾಯಕತ್ವದ ಎಲ್ಲ ಗುಣಗಳನ್ನೂ ಗುರುತಿಸಿದರು. ಇಂತಹ ಮನುಷ್ಯನನ್ನು ತಮ್ಮ ಭಾವಿ ಪ್ರಭುವಾಗಿ ಪಡೆಯಲಿರುವ ತಮ್ಮ ಅದೃಷ್ಟವನ್ನು ಕೊಂಡಾಡಿದರು. ತಮ್ಮಂದಿರ ಜೊತೆಗೆ ರಾಮನಿಗಿದ್ದ ಪ್ರೀತಿ ಅನನ್ಯವಾದದ್ದು, ಹಾಗೆಯೇ ಹಿರಿಯರ ಬಗ್ಗೆ ಅವನಿಗಿದ್ದ ಗೌರವ ಕೂಡ. ಅಣ್ಣ-ತಮ್ಮಂದಿರಲ್ಲಿ ಒಂದು ವಿಶೇಷತೆಯಿತ್ತು. ಮಧ್ಯದ ಇಬ್ಬರು ಮಕ್ಕಳು ತುದಿಯ ಇಬ್ಬರಿಗೆ ಸಹವರ್ತಿಗಳಾದರು. ಲಕ್ಷ್ಮಣನು ರಾಮನಿಗೂ, ಶತ್ರುಘ್ನನು ಭರತನಿಗೂ ಸಹವರ್ತಿಯಾದರು. ಅದೊಂದು ಮಧುರವಾದ ಸಂಬಂಧ. ಆ ಸಂಬಂಧದ ಬೇರುಗಳು ಅವರ ಬಾಲ್ಯದಲ್ಲಿ ಹುದುಗಿದ್ದವು. ಹೀಗೆ, ತಾವು ಬೆಳೆಯುವುದು ತಿಳಿಯಲೇ ಇಲ್ಲವೋ ಎಂಬಂತೆ ಮಕ್ಕಳು ಬೆಳೆದು, ಹನ್ನೆರಡು ವರುಷ ಪೂರೈಸಿದರು. 
ದಶರಥ ಮಹಾರಾಜನಿಗಾದರೋ ತನ್ನ ವೃದ್ಧಾಪ್ಯದ ಚಿಂತೆ. ಕೊಂಚ ಅವಸರ ಪ್ರವೃತ್ತಿ ಬೇರೆ. ಎರಡೂ ಸೇರಿ, ಮಕ್ಕಳಿಗೆ ಬೇಗ ಮದುವೆಮಾಡಿಬಿಡಬೇಕೆಂಬ ಚಿಂತೆ ಶುರುವಾಯಿತು ಅವನಿಗೆ. ಆದರೆ ಆತ ಚಿಂತಿಸಬೇಕಾದ ಅಗತ್ಯವೇ ಬೀಳಲಿಲ್ಲ. ವಿಶೇಷವಾದೊಂದು ಘಟನೆ, ಅಣ್ಣ ತಮ್ಮಂದಿರ ಬದುಕಿನಲ್ಲಿ ಘಟಿಸಿ, ಮದುವೆಯೂ ಸೇರಿದಂತೆ ಹಲವು ತರಹದ ಭಾಗ್ಯಗಳನ್ನು ಅವರಿಗೆ ಕರುಣಿಸಿತು. ಲವಕುಶರಿಗೆ ವಾಲ್ಮೀಕಿ ಮುನಿಗಳ ಮಾರ್ಗದರ್ಶನ ಹೇಗೆ ಸಿಕ್ಕಿತೋ ಹಾಗೆಯೇ ರಾಮಲಕ್ಷ್ಮಣರಿಗೆ ಮಹರ್ಷಿ ವಿಶ್ವಾಮಿತ್ರರ ಮಾರ್ಗದರ್ಶನ ಸಿಕ್ಕಿತು. ಮಾತ್ರವಲ್ಲ, ತಾನೇ ಹುಡುಕಿಕೊಂಡು ಬಂದಿತು. 

ವಿಶ್ವಾಮಿತ್ರರೇ ಹಾಗೆ, ಅದೃಷ್ಟ ತನಗೆ ಒಲಿದು ಬರಲಿ ಎಂದು ಕಾದು ಕುಳಿತವರೇ ಅಲ್ಲ ಅವರು. ಅದೃಷ್ಟವನ್ನೇ ಕಾಯಿಸಿ ಕರಗಿಸಿ, ಅದು ತನ್ನತ್ತ ಹರಿದು ಬರುವಂತೆ ಮಾಡಬಲ್ಲ ಅಸಾಧಾರಣ ಕತೃìತ್ವ ಶಕ್ತಿಯುಳ್ಳ ಮನುಷ್ಯ ಅವರು. ಹಾಗೆಂದೇ “ವಿಶ್ವಾಮಿತ್ರ ಸೃಷ್ಟಿ’ ಎಂಬ ಜನಪ್ರಿಯ ಪರಿಕಲ್ಪನೆ ಈ ಜಗತ್ತಿನಲ್ಲಿ ಪ್ರಚಲಿತವಿರುವುದು. ಅವರು ರಾಮನನ್ನು ಅರಸುತ್ತ ಬಂದರು. ಅವನಲ್ಲಿರುವ ಅಸಾಧಾರಣ ಸಾಧ್ಯತೆಗಳನ್ನು ಗುರುತಿಸಿ, ಅವನಿಗೆ ಪುರುಷಪ್ರಯತ್ನದ ಪ್ರಾಥಮಿಕ ತರಬೇತಿ ನೀಡಿದರು.

ವಿಚಿತ್ರ ಧೈರ್ಯ ವಿಶ್ವಾಮಿತ್ರರದ್ದು! ಬದುಕಿನ ಒಂದು ಘಟ್ಟದಲ್ಲಿ ಅವರಿಗನ್ನಿಸಿಬಿಟ್ಟಿತು, ತನ್ನ  ಕತೃìತ್ವಶಕ್ತಿಯೇ ತನ್ನ ಅಹಂಕಾರವೂ ಹೌದು ಎಂದು. ಸರಿ, ಹಠ ಹಿಡಿದರು. ದೀರ್ಘ‌ಕಾಲ ತಪಸ್ಸು ಮಾಡಿದರು. ಮತ್ತೆ ಮತ್ತೆ ಸೋತರು. ಆದರೆ, ಅಹಂಕಾರ ಮೀರುವಲ್ಲಿ, ಕಡೆಗೂ ಗೆದ್ದರು. ಅದನ್ನು  ಬುಡಸಹಿತ ಕಿತ್ತೆಸೆದರು. ಈಗವರು ಕತೃìತ್ವಶಾಲಿಯೂ ಹೌದು, ಒಬ್ಬ ಸನ್ಯಾಸಿಯೂ ಹೌದು! ಹಾಗೆಂದೇ ಯುವಕರಿಗೆ ಮುಂದಾಳು ಮಹರ್ಷಿ ವಿಶ್ವಾಮಿತ್ರರು. 

(ಮುಂದಿನ ಸಂಚಿಕೆಯಲ್ಲಿ ಅಂಕಣ ಮುಕ್ತಾಯ)

ಪ್ರಸನ್ನ ಹೆಗ್ಗೋಡು             

ಟಾಪ್ ನ್ಯೂಸ್

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.