ಸರಳ ಶ್ರೀಮಂತ ಕಲಾಧರ
Team Udayavani, Oct 8, 2017, 2:12 PM IST
ತಮ್ಮ ಮನೆಯ ಎದುರು ಒಂದು ಅಡಿಕೆ ದಬ್ಬೆಯ ಅಟ್ಟಣಿಗೆ ಹಾಕಿಕೊಂಡು ಕೂತು, ಹೋಗಿ ಬರುವವರನ್ನು “”ಏನಾ ತಮಾ ಯಾವ್ಕಡೆ ಹೊಂಟ್ಯಾ? ಚಾ ಕುಡಿತ್ಯನಾ?” ಎಂದು ಮಾತಾಡಿಸಿ ಕಷ್ಟಸುಖ ಹಂಚಿಕೊಳ್ಳುವ ಸರಳತೆಯನ್ನು ನೋಡಿದರೆ ಅವರು ಪದ್ಮಶ್ರೀ ಪುರಸ್ಕೃತರೆಂದು ಗೊತ್ತೇ ಆಗುತ್ತಿರಲಿಲ್ಲ !
ವೈಜ್ಞಾನಿಕ ವಿವರಣೆಗೆ ನಿಲುಕದ ವಿಸ್ಮಯಕಾರಿ ಸಂಗತಿಗಳು ಈ ಭೂಮಿಯ ಮೇಲಿರುವುದರಿಂದಲೇ ಇಲ್ಲಿಯ ಬದುಕು ಇನ್ನೂ ಸಹನೀಯವಾಗಿದೆ, ವೈಶಿಷ್ಟಪೂರ್ಣವಾಗಿದೆ ಎಂದು ನಂಬುವವರಲ್ಲಿ ನಾನೂ ಒಬ್ಬಳು. ಒಂದು ಪ್ರದೇಶದ ಮಣ್ಣನ್ನು ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿದರೆ ಆ ಮಣ್ಣಿನ ಗುಣ, ಸಾರ, ವೈಶಿಷ್ಟಗಳ ಬಗ್ಗೆ ಯಾವ ಬೆಳೆಗೆ ಯೋಗ್ಯ… ಇತ್ಯಾದಿ ವಿವರಗಳು ದೊರೆತಾವು. ಆದರೆ, ಒಂದು ಪ್ರದೇಶದ ಮಣ್ಣಿನಲ್ಲಿ ಇನ್ನೆಲ್ಲೂ ದೊರೆಯದ ಅಪರೂಪದ ಕಲಾಕುಸುಮಗಳು ಹೆಜ್ಜೆ ಹೆಜ್ಜೆಗೆ ಅರಳಿ ನಿಂತಿರುವ ಪರಿಯನ್ನು ಪರೀಕ್ಷಿಸುವ ಕಾರಣ ತಿಳಿಯುವ “ಮಣ್ಣಿನ ಪರೀಕ್ಷೆ’ ನಮ್ಮಲ್ಲಿ ನಡೆದಿಲ್ಲ ನಡೆಯಲು ಸಾಧ್ಯವೂ ಇಲ್ಲ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿಳಿದು ಯಾವ ದಿಕ್ಕಿಗೆ ಯಾವ ರಸ್ತೆ ಹಿಡಿದು ಹೊರಟರೂ ಪ್ರತಿ ಗ್ರಾಮದಲ್ಲಿ ವಿಶ್ವವಿಖ್ಯಾತವಾದ ಯಕ್ಷಗಾನ ಕಲಾವಿದರ ಹೆಸರೊಂದು ಇದ್ದೇ ಇದೆ. ಭಾಗವತರು, ಸಂಗೀತಗಾರರು ಸಿಗುತ್ತಾರೆ. ಎಲ್ಲಾ ಪಟ್ಟಿ ಮಾಡುವುದು ಸಾಧ್ಯವಿಲ್ಲವಾದರೂ ತಾಳಮದ್ದಲೆ ಅರ್ಥಧಾರಿಗಳಾದ ಸಾಲ್ಕೋಡು (ಗಪ್ಪಣ್ಣ, ಶ್ರೀಪಾದ ಭಟ್ಟರು), ನೀಲ್ಕೋಡು (ವಿಷ್ಣು ಭಟ್ಟರು, ಶಂಕರ ಹೆಗಡೆ), ಹಡಿನಬಾಳು (ಶ್ರೀಪಾದ ಭಟ್ಟರು), ಕಪ್ಪೆಕೆರೆ (ಸುಬ್ರಾಯ ಭಾಗವತ, ಮಹಾದೇವ ಸೋದರರು), ತೋಟಮನೆ (ಗಣಪತಿ), ನವಿಲುಗೋಣ (ಈಶ್ವರ ಭಟ್), ಕೊಂಡದಕುಳಿ (ರಾಮಚಂದ್ರ ಹೆಗಡೆ), ಕಣ್ಣಿಮನೆ (ಗಪ್ಪು), ಬಳ್ಕೂರು (ಕೃಷ್ಣಯಾಜಿ), ಜಲವಳ್ಳಿ (ವೆಂಕಟೇಶ, ವಿದ್ಯಾಧರ), ಯಲಗುಪ್ಪ (ಸುಬ್ರಹ್ಮಣ್ಯ- ಪ್ರಸಿದ್ಧ ಸ್ತ್ರೀವೇಷಧಾರಿ), ಕರ್ಕಿ (ಹಾಸ್ಯಗಾರ ಮೇಳ), ಧಾರೇಶ್ವರ (ಸುಬ್ರಹ್ಮಣ್ಯ), ಮೂರೂರು (ದೇವರು ಹೆಗಡೆ, ನಾಗೇಂದ್ರ), ಗುಣವಂತೆ-ಕೆರೆಮನೆ (ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಶಿವಾನಂದ)… ಇದೀಗ ಕಣ್ಮರೆಯಾಗಿ ತೆರೆಗೆ ಸರಿದಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಇದೇ ಮಣ್ಣಿನಲ್ಲಿ ಅರಳಿ ನಿಂತವರು. ಇವರೆಲ್ಲರಿಗೆ ಯಕ್ಷಗಾನದ ಮೂಲ ಶಿಕ್ಷಣ ನೀಡಿದ “ಯಕ್ಷಗಾನ ವಿಶ್ವವಿದ್ಯಾಲಯ’ವೆಂದು ಕರೆಯಬಹುದಾದ ತರಬೇತಿ ಕೇಂದ್ರ ಗುಂಡಬಾಳ (ಮುಖ್ಯಸ್ಥ ಪ್ರಭಾಕರ ಹೆಗಡೆ) ಮತ್ತು ಇವರ ಒಡನಾಟದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಅನೇಕ ಕಿರಿಯ ಕಲಾವಿದರು ಹೀಗೆ ಕೇವಲ 15-20 ಕಿ.ಮೀ. ವ್ಯಾಪ್ತಿಯಲ್ಲಿ ಅರಳಿ ನಿಂತ ಯಕ್ಷಗಾನದ ಹುಲುಸಾದ ಬೆಳೆಗೆ ಈ ಮಣ್ಣಿನ ಅಂತಃಸತ್ವ ಆಧಾರವಾಗಿದೆ.
ರಂಗದ ಮೇಲೆ ವಿಜೃಂಭಿಸುವ ಈ ಕಲಾವಿದರ್ಯಾರೂ ಕನಿಷ್ಟ ಡಿಗ್ರಿ ಪಡೆದವರಲ್ಲ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪ್ರಾಥಮಿಕ ಶಾಲೆಯನ್ನೇ ಮುಗಿಸಿದವರಲ್ಲ. ಆದರೆ ಪುರಾಣ ಪ್ರಸಂಗವೊಂದರ ಪಾತ್ರಧಾರಿಯಾಗಿ ರಂಗವೇರಿದರೆ ಅವರ ಕಾವ್ಯಶಾಸ್ತ್ರಗಳ ಜ್ಞಾನ, ಪುರಾಣ ಪುಣ್ಯಕಥೆಗಳ ಕುರಿತ ತಿಳುವಳಿಕೆ, ದೇವ-ದಾನವರ ನಡವಳಿಕೆಯ ಬಗೆಗಿರುವ ವಿವೇಕ… ಯಾವ ವಿಶ್ವವಿದ್ಯಾಲಯದ ಪದವಿಯೂ ಒದಗಿಸಲಾರದ ಅದ್ಭುತ ಕಲಾಸಂಪತ್ತು.
ಯಕ್ಷನೃತ್ಯ, ಭಾವಾಭಿವ್ಯಕ್ತಿ ಮಾತುಗಾರಿಕೆ, ವೇಷಭೂಷಣ, ಕುಣಿತ, ಭಾಗವತಿಕೆ- ಹೀಗೆ ಒಂದಲ್ಲ ಎರಡಲ್ಲ ಹಲವು ಬಗೆಯ ಪರಿಣಿತಿ ಇದ್ದಾಗ ಮಾತ್ರ ಯಶಸ್ವೀ ಯಕ್ಷಗಾನ ಪ್ರದರ್ಶನ ಸಾಧ್ಯ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರದ್ದು ಅಪ್ಪಟ ಅಡಿಕೆ ಬೆಳೆಗಾರನ ಹವ್ಯಕ ಜೀವನ ಶೈಲಿ. ಶಾಲೆ ಬಿಟ್ಟು ಯಕ್ಷಗಾನ ಕ್ಷೇತ್ರದ ಬೆನ್ನುಹತ್ತಿ ಹೊರಟವರು ಅಲ್ಲಿಯೇ ನೆಲೆಯೂರಿ ನಿಂತವರು. “ಚಿಟ್ಟಾಣಿ ಶೈಲಿ’ಯನ್ನೇ ಹುಟ್ಟು ಹಾಕಿದರು. ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡರು. ಪದ್ಮಶ್ರೀ ತನಕ ಬೆಳೆದರು. ಯಕ್ಷಗಾನದ “ಸ್ಟಾರ್’ ಆದರು. ಯಕ್ಷಗಾನಕ್ಕೆ ಕೀರ್ತಿ ತಂದರು.
ಆದರೆ, ಈ ಕೀರ್ತಿ ಈ ಜನಪ್ರಿಯತೆ, ಪದ್ಮಶ್ರೀ ಗರಿ ಯಾವುದನ್ನೂ ತಲೆಗೇರಿಸಿಕೊಳ್ಳದೇ ಮೈಗೂಡಿಸಿಕೊಂಡ ಮಣ್ಣಿನ ಗುಣವನ್ನೂ ಸರಳತೆಯ ಸಂಪನ್ನ ಬದುಕನ್ನೂ ಕೊನೆಯವರೆಗೂ ಬಾಳಿದವರು ಚಿಟ್ಟಾಣಿಯವರು. ಬೇರೆ ಊರುಗಳಲ್ಲಿ ಪ್ರದರ್ಶನವಿದ್ದಾಗ ಹೇಗಾಯೊ¤à ಹಾಗೆ ಹೊಂದಿಕೊಳ್ಳುವ ಜಾಯಮಾನದ ಚಿಟ್ಟಾಣಿ ಮನೆಯಲ್ಲಿದ್ದಾಗ ಮಾತ್ರ ಬೆಳಿಗ್ಗೆ ಐದಕ್ಕೆಲ್ಲ ಎದ್ದು ಒಂದು ಸುತ್ತು ತೋಟಕ್ಕೆ ಹೋಗಿ ಬರುತ್ತಾರೆ. ಅಪ್ಪಟ ಹವ್ಯಕ ಬೆಳಗಿನ ಆಸರಿಗೆ ದೋಸೆ-ಚಟ್ನಿ , ಚಾ… ಸಿಗ್ನೇಚರ್ ಐಟಮ್ ಎಲೆಅಡಿಕೆ ಕವಳ ಮೆಲ್ಲುತ್ತ ಮನೆಯಜ್ಜನ ಸರಳ ಓಡಾಟ ನಡೆಸಿಕೊಂಡಿದ್ದವರು. ಗುಡ್ಡೇಕೇರಿಯ ತಮ್ಮ ಮನೆಯ ಎದುರು ಒಂದು ಅಡಿಕೆ ದಬ್ಬೆಯ ಅಟ್ಟಣಿಗೆ ಹಾಕಿಕೊಂಡು ಕೂತು ಹೋಗಿ ಬರುವವರನ್ನು “”ಏನಾ ತಮಾ ಯಾವ್ಕಡೆ ಹೊಂಟ್ಯಾ? ಚಾ ಕುಡಿತ್ಯನಾ?” ಎಂದು ಮಾತಾಡಿಸಿ ಕಷ್ಟಸುಖ ಮಾತಾಡುವವರು.
ಊರವರಿಗಂತೂ ಚೂರೂ ಸಂಕೋಚವಿಲ್ಲದೆ ಏಕವಚನದಲ್ಲಿಯೇ ಲಭ್ಯವಾಗುವ ಅಜ್ಜ , ರಾಮಚಂದ್ರಣ್ಣ (ಉತ್ತರಕನ್ನಡ ಜಿಲ್ಲೆಯ ಹವ್ಯಕರು ಬಹುವಚನದಲ್ಲಿ ಕರೆದುಕೊಂಡರೆ ಅಡಿಕೆ ಮೇಲಾಣೆ, ಅಡಿಕೆ ಅಟ್ಟದ ಮೇಲಾಣೆ!) ಅವರ ಸರಳತೆಯ ಅನುಭವ ನನಗೆ ಒದಗಿಬಂದಿದ್ದು ಹಡಿನಬಾಳದಲ್ಲಿ.
ಎರಡು ವರ್ಷದ ಹಿಂದೆ ಬೇಸಿಗೆ ರಜೆಗೆಂದು ಹಡಿನಬಾಳಕ್ಕೆ ಹೋಗಿದ್ದೆ. ನಾನಲ್ಲಿರುವಾಗ, “ದೇವಸ್ಥಾನದಲ್ಲಿ ಸಂಜೆ ಒಂದು ಭಾಷಣ ಮಾಡ್ತೀಯ?’ ಎಂಬ ಆಹ್ವಾನಗಳಿರುತ್ತವೆ. ಅವತ್ತೂ ಅಲ್ಲಿಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಗೀತ ಶಾಲೆಯ ಕಾರ್ಯಕ್ರಮ ಶಂಕರ ಜಯಂತಿ. “ಭುವನೇಶ್ವರಕ್ಕಾ ಭಾಷಣ ಮಾಡು’ ಎಂದು ಕರೆದೊಯ್ದರು. ಕೊಟ್ಟಿಗೆ ಕೆಲಸ, ತೋಟದ ಕೆಲಸ ಮುಗಿಸಿ ಬಂದು ಕೂತ ಹಳ್ಳಿಯ ಪ್ರೇಕ್ಷಕರು, ಅವತ್ತೇ ಶ್ರಾದ್ಧವೊಂದಕ್ಕೆ ಅಲ್ಲಿಗೆ ಬಂದಿದ್ದ ರಾಮಚಂದ್ರಣ್ಣನನ್ನೂ ಹುಡುಗರು ಕರೆದಿದ್ದರು ಮತ್ತು ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರಿಲ್ಲ ಇತ್ಯಾದಿ “ಆಧುನಿಕ ವಿದ್ವಾಂಸರ ವರಸೆ’ ಗೊತ್ತಿಲ್ಲದ ಚಿಟ್ಟಾಣಿ ಅಜ್ಜ ಬಂದು ಕೂತಿದ್ದರು. ನನಗೋ ಪದ್ಮಶ್ರೀ ಪುರಸ್ಕೃತ ಮೇರು ಕಲಾವಿದನ ಪಕ್ಕ ಕೂಡುವುದಕ್ಕೆ ಸಂಕೋಚ. ಮುಗುಳ್ನಕ್ಕು ಕೈಮುಗಿದೆ.
“”ಗೋವಿಂದ ಹೆಗಡೆ ಸೊಸೆ ಅಲ್ದನೆ ತಂಗಿ? ನಿನ್ನ ಗಂಡನ ಗುರುತಿದ್ದು ನನಗೆ” ಎಂದು ಮನೆಯಜ್ಜನ ಧಾಟಿಯಲ್ಲಿ ಮಾತಾಡಿಸಿ ಆತ್ಮೀಯರೆನಿಸಿಬಿಟ್ಟರು. ಸರಳ ಸಂಪನ್ನ “ಸ್ಟಾರ್’ ಕಲಾವಿದನ ಪಕ್ಕದಲ್ಲಿ ಕುಳಿತೆ.
ಅಂದು ಸಂಜೆ ಗುಡುಗು ಸಿಡಿಲು ಸಹಿತ ಮಳೆ ಒಮ್ಮೆಲೇ ಶುರುವಾಗಿ ದೇವಸ್ಥಾನ ಕತ್ತಲಲ್ಲಿ ಮುಳುಗಿತು. ಮೈಕು ತಣ್ಣಗಾಯ್ತು. ದೇವರ ಗುಡಿಯೊಳಗಿಂದ ನೀಲಾಂಜನಗಳನ್ನು ತಂದು ಎಣ್ಣೆಬತ್ತಿ ತುಂಬಿಸಿ ಬೆಳಕು ತುಂಬಿದರು. ಸುರಿಯುವ ಮಳೆಯಲ್ಲಿ ನಮ್ಮ ಭಾಷಣ! ಹಳ್ಳಿಯ ಪ್ರೀತಿ ತುಂಬಿದ ಮೌನ. ಅಂದು ನಾನು ಶಂಕರರ ಬೋಧನೆಗಳ ಕುರಿತು ಮಾತಾಡುವುದನ್ನು ಬಿಟ್ಟು , ಯಕ್ಷಗಾನದ ಹೃದಯ ಸಂಸ್ಕಾರ, ಕಲಾವಿದರ ಬಡತನದಲ್ಲಿ ಅರಳಿದ ಶ್ರೀಮಂತ ಬದುಕು, ಚಿಟ್ಟಾಣಿಯವರ ಪಾತ್ರಗಳ ತನ್ಮಯ ತಾದಾತ್ಮé… ಹೀಗೆ ಮಾತಾಡಿದೆ. ಮಂದ ಬೆಳಕಿನ ಆ ಸಂಜೆಯ ಆತ್ಮೀಯ ಸಭೆ ಇಂದಿಗೂ ಮನಸ್ಸಿನ ಮೂಲೆಯಲ್ಲಿ ಬೆಳಗುತ್ತಲೇ ಇದೆ.
ನಂತರ ಮಾತಾಡಿಸಿ ರಾಮಚಂದ್ರಣ್ಣ ಇಂಥದೇ ದೀಪಗಳೆದುರು ತಾವು ಯಕ್ಷಗಾನ ಪ್ರದರ್ಶಿಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಸವಲತ್ತುಗಳಿಲ್ಲದ ಕಡೆ ಪ್ರಯಾಣ, ತಮ್ಮ ಬಣ್ಣ, ವೇಷ-ಭೂಷಣಗಳ ಪೆಟ್ಟಿಗೆಯನ್ನು ತಾವೇ ಹೊತ್ತುಕೊಂಡು ನಡೆದೇ ಹೋಗಬೇಕಾಗಿದ್ದ ಅನಿವಾರ್ಯತೆ, ಭಾವನೆಗಳೇ ಇಲ್ಲದ ಚೂರುಪಾರು ಸಂಭಾವನೆ, ಹೀಗೆ ಮಾತಾಡುತ್ತ ತಾವು “ನಡೆದು ಬಂದ ದಾರಿ’ಯನ್ನು ಬಿಚ್ಚಿಡುತ್ತ ಹೋದರು. ಅದ್ಭುತ ಕಲಾವಿದನೊಬ್ಬನ ಅಂತರಂಗದ ಅನಾವರಣಕ್ಕೆ ನಸುಗತ್ತಲಿನ ಸಭೆಯೇ ಸಾಕ್ಷಿಯಾಯಿತು. ಕಾರ್ಯಕ್ರಮ ಮುಗಿದ ಮೇಲೆ ನಾನೊಂದು ಫೋಟೋ ಅವರ ಜತೆ ತೆಗೆಸಿಕೊಂಡೆ. “”ರಾತ್ರಿ ಮಳೆ ಎಲ್ಲಿಯೂ ಹೋಗಲಾರೆ. ಇಲ್ಲೇ ದೇವಸ್ಥಾನದಲ್ಲೇ ಮಲಗಿ ಬಿಡ್ತೆ. ಒಂದು ಕಂಬಳಿ ತಂದೊಡಿ ಸಾಕು” ಎನ್ನುತ್ತಿದ್ದ ರಾಮಚಂದ್ರಣ್ಣನನ್ನು ಹುಡುಗರು ಒತ್ತಾಯ ಮಾಡಿ ಬೈಕಿನಲ್ಲಿ ಕೂಡ್ರಿಸಿಕೊಂಡು ಮನೆಗೊಯ್ದರು.
ಎದೆ ಝಲ್ಲೆನ್ನಿಸುವ ಕಂಸ, ದುಷ್ಟಬುದ್ಧಿ , ಜರಾಸಂಧನಂಥ ಪಾತ್ರಗಳನ್ನು ಸಾಟಿ ಇಲ್ಲವೆಂಬಂತೆ ಅಭಿನಯಿಸಿ ತೋರಿಸುತ್ತಿದ್ದ ಚಿಟ್ಟಾಣಿಯವರು ತಮ್ಮ ಎದುರಿನ ಪಾತ್ರಗಳನ್ನು , ಅವರು ಪರಿಣಿತರೇ ಇರಲಿ ಕಿರಿಯ ಕಲಾವಿದರೇ ಆಗಲಿ ತುಂಬ ಪ್ರೀತಿಯಿಂದ ಅನುಸರಿಸಿಕೊಂಡು ಅವರನ್ನು ಮೇಲಕ್ಕೆತ್ತಿಕೊಳ್ಳುತ್ತಲೇ ಮುಂದೆ ಸಾಗುತ್ತಿದ್ದರು. ರಂಗದ ಮೇಲಿನ ಅವರ ಈ ಮಾನವೀಯ ನಡೆ, ನಡತೆಯಿಂದಾಗಿ ಅಭಿನಯ ಕಲಿತ ಹುಡುಗರು ಅಜ್ಜನೆದುರು ಕೀಳರಿಮೆ ಇಲ್ಲದೆ ಅಭಿನಯಿಸುತ್ತಾರೆ. ತನ್ನನ್ನು ಕಲಾವಿದನನ್ನಾಗಿ ರೂಪಿಸಿದ ಭಾಗವತರನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.
ದೀರ್ಘಕಾಲ ದೂರ ದೂರವಿದ್ದ ನೆಬ್ಬೂರರು ಹಾಗೂ ಚಿಟ್ಟಾಣಿಯವರ “ಮರು ಸಂಗಮ’ ಶಿರಸಿಯ ಬಳಿ ಹಳ್ಳಿ ವರ್ಗಾಸರದಲ್ಲಿ ನಡೆದಾಗ ಅಪಾರ ಸಂಖ್ಯೆಯಲ್ಲಿ ನೆರೆದ ಇಬ್ಬರ ಅಭಿಮಾನಿಗಳೂ ಮೂಕವಿಸ್ಮಿತರಾಗಿ ಆನಂದ ವ್ಯಕ್ತಪಡಿಸಿದ್ದರು. “”ನಾರಾಯಣಾ ಒಂದು ಹಾಡು ಹೇಳಾ” ಎಂದು ನೆಬ್ಬೂರರ ಬಳಿ ತಾನೇ ಕೇಳಿ ಅಭಿನಯಿಸಿದ್ದಂತೂ ಅವರ ಹೃದಯಶ್ರೀಮಂತಿಕೆಗೆ ಸಾಕ್ಷಿಯಾಯಿತು.
ಯಕ್ಷಗಾನ ಕ್ಷೇತ್ರದಲ್ಲಿ ಏಕನಿಷ್ಠೆಯಿಂದ ಮೇಲಕ್ಕೇರಿದ ಚಿಟ್ಟಾಣಿಯವರದು ವಿಸ್ಮಯಕಾರಿ ಧಾರಣಶಕ್ತಿ. ಇತ್ತೀಚಿನ ವರ್ಷಗಳಲ್ಲಿ ಚೌಕಿ ಮನೆಯಲ್ಲಿ ಅವರು ಕೆಮ್ಮುತ್ತಿದ್ದರು. ತೀರ ಬಳಲಿದಂತೆ ಕಂಡುಬಂದರೂ ಬೇರೆಯವರ ಸಹಾಯವಿಲ್ಲದೆ ಬಣ್ಣ ಹಚ್ಚಿಕೊಂಡು, ಗೆಜ್ಜೆ ಕಟ್ಟಿ ರಂಗವೇರಿದರೆಂದರೆ ಅವರ ಕೆಮ್ಮೇ ಮಾಯವಾಗಿ ಬಿಡುತ್ತಿತ್ತು. ಯುವಕನಾಗಿ ಬಿಡುತ್ತಿದ್ದರು. ಒಂದೊಂದು ಭಂಗಿ, ಭಾವಾಭಿನಯ ಲಾಲಿತ್ಯಪೂರ್ಣ ಹೆಜ್ಜೆ , ಕುಣಿತ, ಕಾಲಕ್ಷೇಪಕ್ಕಾಗಿ ಪಾಂಡಿತ್ಯ ಪ್ರದರ್ಶನಕ್ಕೆ ತೊಡಗದೆ ಕಥಾಭಾಗಕ್ಕೆ ಬೇಕಾದಷ್ಟು ಮಾತು, ಸಹ ಕಲಾವಿದರೊಂದಿಗೆ ಸೌಜನ್ಯ ಸಹಕಾರ… ಇಂದಿನ ಯುವ ಕಲಾವಿದರು ಅವರಿಂದ ಕಲಿಯುವದು ಬಹಳಷ್ಟಿದೆ. ಜನಪ್ರಿಯತೆಯನ್ನೂ ಸಾಂಪ್ರದಾಯಿಕ ಶುದ್ಧ ಪರಂಪರೆಯನ್ನೂ ಮೇಳೈಸಿಕೊಂಡವರು ಮಾತ್ರ ಚಿಟ್ಟಾಣಿಯವರ ಎತ್ತರಕ್ಕೇರಲು ಸಾಧ್ಯ ಎಂಬ ಆದರ್ಶವನ್ನು ಯಕ್ಷಗಾನ ಕ್ಷೇತ್ರಕ್ಕೆ ಸಾರಿ ಚಿರವಿರಾಮಕ್ಕೆ ತೆರಳಿದ ರಾಮಚಂದ್ರಣ್ಣನಿಗಿದೋ ನಮಸ್ಕಾರ. ಹೋಗಿ ಬನ್ನಿ. ಪುನಃ ಯಕ್ಷಗಾನದ ಕೀರ್ತಿ ಮರಳಿ ತನ್ನಿ.
ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಈಗ ನಮ್ಮ ಜೊತೆ ಇಲ್ಲವೆನುವುದಾದರೂ ಹೇಗೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.