ಹಾಡುಗಾರರ ಹಾವಭಾವ 


Team Udayavani, Oct 8, 2017, 2:08 PM IST

08-21.jpg

ನೆನಪಿನ ಗಣಿಯಿಂದ ಕವಿ ಗೋಪಾಲಕೃಷ್ಣ ಅಡಿಗರ ಆತ್ಮಚರಿತ್ರೆ. ಅದರಲ್ಲಿ ಒಂದೆಡೆ ಅವರು ಮೈಸೂರಿನ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೇಳಿದ ಕೆಲವು ಸಂಗೀತ ಕಛೇರಿಗಳ ಬಗೆಗೆ ಹೇಳುತ್ತಾ ಚಿಕ್ಕರಾಮರಾಯರ ಸಂಗೀತ ವೈಖರಿಯನ್ನು ವಿಶೇಷವಾಗಿ ಸ್ಮರಿಸುತ್ತಾರೆ. ಚಿಕ್ಕರಾಮರಾಯರು ವೇದಿಕೆಯ ಮಧ್ಯದಲ್ಲಿ ಕುಳಿತಿದ್ದರೂ ಅವರು ಪ್ರಾರಂಭಿಸಿದ ಗಾಯನಕ್ಕೆ ಕಾವೇರಿದಂತೆ ಕೂತಲ್ಲಿ ಕೂರುತ್ತಿರಲಿಲ್ಲವಂತೆ; ರಾಗದ ಅಥವಾ ಕೀರ್ತನೆಯ ಓಘಕ್ಕೆ ಅನುಗುಣವಾಗಿ ಕಪ್ಪೆಯ ಹಾಗೆ ಕುಪ್ಪಳಿಸುತ್ತ ವೇದಿಕೆಯ ಉದ್ದಗಲಕ್ಕೆ ಹರಿದಾಡುತ್ತಿದ್ದರಂತೆ! ನೂರಾರು ಸಂಗೀತ ಕಛೇರಿಗಳನ್ನು ಕೇಳಿರುವ ನನಗೆ ಅಡಿಗರು ಉದಾಹರಿಸಿರುವ ಈ ಪ್ರಸಂಗದಲ್ಲಿ ಉತ್ಪ್ರೇಕ್ಷೆಯೇನೊ ಕಾಣುವುದಿಲ್ಲ.

“ಗಾನ ಸೌಧದ ಶಿಲ್ಪಿ ಗಾಯಕನೇ ಅಥವಾ ರೂಪಕವನ್ನು ಬದಲಾಯಿಸಿ ಹೀಗೆ ಹೇಳಬಹುದು: ವಿಮಾನ ಹಾರುವುದಕ್ಕೆ ಮುಂಚೆ ಸ್ವಲ್ಪ ದೂರ ಟಾರ್‌ಮ್ಯಾಕ್‌ನ ಮೇಲೆ ಹೋಗಬೇಕಷ್ಟೆ. (ಸಂಗೀತ ಕೃತಿಯ) ವಾಚ್ಯಾರ್ಥ ಆ ಟಾರ್‌ಮ್ಯಾಕ್‌ ಅಷ್ಟೆ. ಗಗನ ಸಂಚಾರವೇನಿದ್ದರೂ ಸಂಗೀತದ, ಅದನ್ನು ಸೃಷ್ಟಿಸಿದ ಗಾಯಕನ, ಅದನ್ನು ಆಸ್ವಾದಿಸುವ ಶ್ರೋತೃವಿನ ಕೆಲಸ. ರಾಗಾಲಾಪನೆ ಮಾಡುವಾಗ ಕಲೆಗಾರನಿಗೆ ಟಾರ್‌ಮ್ಯಾಕ್‌ ಬೇಕಿಲ್ಲ. ಅವನದ್ದು ಪುಷ್ಪಕ ವಿಮಾನ, ನೇರವಾಗಿ ಹಾರಿ ನೀಹಾರಿಕೆಗಳ ನಡುವೆ ವಿಹಾರಿಸುತ್ತದೆ! ಎ. ಎನ್‌. ಮೂರ್ತಿರಾಯರ ಈ ಮಾತುಗಳೇನೋ ಸಂಗೀತಗಾರನ ಶಾರೀರದ, ಅವನ ಕಲ್ಪನಾಶಕ್ತಿಯ ಸೃಷ್ಟಿಶೀಲತೆಯನ್ನು ಚಿತ್ರಿಸುತ್ತವೆ. (ಅವರ ಗಾನವಿಹಾರ ಎಂಬ ಪುಸ್ತಕವನ್ನು ನೋಡಿ). ಆದರೆ ಗಾಯಕ ಹಾಡಿದ್ದು ತುಸುವಾದರೂ, ದೃಶ್ಯವಾಗಿ ಕಣ್ಣಿಗೆ ಕಟ್ಟಬೇಕಾದರೆ ಅವನಿಗೆ ಅಭಿನಯವೂ ಬೇಕೆನ್ನುತ್ತೇನೆ ನಾನು. ಇಲ್ಲಿ ರೇಡಿಯೋದಲ್ಲೋ ಅಥವಾ ಸಿಡಿಗಳಲ್ಲೋ ಸಂಗೀತ ಕೇಳುವವರ ಗೊಡವೆ ನಮಗೆ ಬೇಡ. 

ಮಧುರೈ ಸೋಮಸುಂದರಂ ಒಂದು ಕಾಲದಲ್ಲಿ ಪ್ರಸಿದ್ದ ಗಾಯಕರಾಗಿದ್ದವರು. ಅವರದು ಹೇಳಿಕೇಳಿ ತಾರಸ್ಥಾಯಿಯ ಶಾರೀರ. ಮಂದ್ರಸ್ಥಿತಿಗೆ ಇಳಿದಾಗ ಅವರ ಸ್ವರ ಗೊಗ್ಗರುದನಿಯಲ್ಲಿ ಗೊಣಗಿಕೊಂಡಂತೆ ಕೇಳಿಸುತ್ತಿತ್ತು. ಕೀರ್ತನೆ ಹಾಡುತ್ತಿರುವಾಗ ಮಂದ್ರಸ್ಥಾಯಿಗೇನಾದರೂ ಬಂದುಬಿಟ್ಟರೆ ಅವರ ಬಾಯಿ ನುಡಿಯುತ್ತಿದ್ದ ಶಬ್ದಗಳು ಕೇಳಿಸುತ್ತಲೇ ಇರಲಿಲ್ಲ. ಅಂಥ ಸಂದರ್ಭಗಳಲ್ಲಿ ಅವರು ಮುಷ್ಠಿ ಬಿಗಿಹಿಡಿದು ಏನನ್ನೋ ಗುದ್ದುವಂತೆ ಅಭಿನಯಿಸುತ್ತಿದ್ದರು; ಇಲ್ಲವೆ ತೊಡೆಯ ಮೇಲೋ ಕೈಯಲ್ಲೋ ಹಾಕುತ್ತಿದ್ದ ತಾಳಕ್ಕೆ ವಿಶೇಷ ರಭಸ ಪ್ರಾಪ್ತವಾಗಿ ಫ‌ಳೀರ್‌ ಫ‌ಳೀರ್‌ ಎಂದು ಸ¨ªಾಗುತ್ತಿತ್ತು. ಈ ಸಾಭಿನಯದಿಂದಲೇ ಅವರ ಬಾಯಲ್ಲಿ ಕೇಳಿಸದಿದ್ದ ಹಾಡಿನ ಮಾತುಗಳು ನನ್ನಂಥವರಿಗೆ ಕೇಳಿಸಿದಂತಾಗುತ್ತಿತೆಂಬುದರಲ್ಲಿ ಸಂಶಯವೇ ಇಲ್ಲ. ರಾಗಾಲಾಪನೆಯ ಕಾಲದಲ್ಲಿ ಅವರಿಗೆ ವಿಶೇಷ ಸ್ಫೂರ್ತಿಯೇನಾದರೂ ಬಂದುಬಿಟ್ಟರೆ ಮೊದಲೇ ತಾರಕದಲ್ಲಿರುತ್ತಿದ್ದ ಅವರ ಧ್ವನಿ ಇನ್ನೂ ತಾರಕಕ್ಕೇರಲು ಹೆಣಗಾಡುತ್ತಿತ್ತು. ಒಮ್ಮೆ ಅವರು ಹಾಡಿದ ತೋಡಿ ರಾಗದ ಆಲಾಪನೆ ಇನ್ನೂ ನನ್ನ ನೆನಪಿನಲ್ಲಿದೆ. ಅವರ ಶಾರೀರಕ್ಕೆ ಸಾಧ್ಯವಿದ್ದಷ್ಟು ತಾರಕದಲ್ಲಿ ಹಾಡಿದ ನಂತರ ಇನ್ನೂ ಮೇಲೆ ಹೋಗಬೇಕೆಂದು ಪ್ರಯತ್ನಿಸಿದರು. ಶ್ರೋತೃಗಳು ಅಂಥ ಸಂದರ್ಭದಲ್ಲಿ “ಭಲೆ’ ಎಂದು ಚಪ್ಪಾಳೆ ತಟ್ಟುತ್ತಾರಷ್ಟೆ. ತಟ್ಟಿದರು. ಸೋಮಸುಂದರಂ ಅವರ ಬಾಯಿ ತೆರೆದುಕೊಂಡೇ ಇದ್ದರೂ ಅವರ ಧ್ವನಿ ಮಾತ್ರ ಗಪ್‌ಚಿಪ್ಪಾಗಿಬಿಟ್ಟಿತ್ತು. ಅದಾಗ ಅವರು ಕೂತಲ್ಲಿಂದಲೇ ತುಸು ಮೇಲೆದ್ದು ಎರಡು ಕೈಗಳನ್ನು ಆಕಾಶ ಚುಚ್ಚುವಂತೆ ಮೇಲಕ್ಕೆ ಚಾಚಿದವರೇ “ಎಪ್ಪಡಿ… ಬಡೇ ಗುಲಾಂ ಅಲಿಖಾನ್‌ ಪಾಡಿನದು ಇಪ್ಪಡಿಯೇ ತಾನ್‌?’ ಎಂದು ಒಂದೆರಡು ನಿಮಿಷ ಅದೇ ಭಂಗಿಯಲ್ಲಿದ್ದರು. ಜನರ ಹರ್ಷೋದ್ಗಾರಕ್ಕೆ ಮೇರೆಯೆಲ್ಲಿ? ಆಗಿನ ಅವರ ಆ ತೋಡಿ ನೇರವಾಗಿ ಮೇಲೆ ಹಾರಿ ತಾರೆ ನೀಹಾರಿಕೆಗಳ ನಡುವೆ ವಿಹರಿಸುತ್ತಿರುವಂತೆ ನಮಗೆ ಭಾಸವಾಯಿತು!

ಶಾರೀರದಲ್ಲಿ ಮಧುರೈ ಸೋಮಸುಂದರಂ ಅವರಿಗೆ ತದ್ವಿರುದ್ಧವಾಗಿ ದ್ದರು ಎಂ.ಡಿ. ರಾಮನಾಥನ್‌. ತಾರಕವನ್ನು ಕಂಡರಿಯದ ಅವರ ಕೊರಳು ಮಂದ್ರದಲ್ಲಿ, ಅದಕ್ಕೂ ಅತೀ ಮಂದ್ರದಲ್ಲಿ, ಲೀಲಾಜಾಲವಾಗಿ ಮೊಳಗುತ್ತಿತ್ತು. ಅವಸರ, ಧಾವಂತ‌, ಆತಂಕ ಇವು ಯಾವುವೂ ಅವರ ಸಂಗೀತಕ್ಕೆ ಗೊತ್ತಿರಲಿಲ್ಲ.  ಬೇಸಿಗೆಯಲ್ಲೂ ನದಿ ಹರಿಯುವುದಷ್ಟೆ. ಆದರೆ, ಅದು ಹರಿಯುತ್ತಿರುವುದು ನಮಗೆ ಗೊತ್ತಾಗುವುದಿಲ್ಲ. ಎಂ.ಡಿ. ರಾಮನಾಥನ್‌ ಸಂಗೀತ ಆ ಬಗೆಯದು. ರಘುವಂಶ ಸುಧಾ… ದಂಥ ಅಶ್ವಾವೇಗದ ಕೀರ್ತನೆಗಳೂ ಅವರ ಬಾಯಲ್ಲಿ ಆಮೆಯ ನಡಿಗೆ ಪಡೆದುಕೊಳ್ಳುತ್ತಿದ್ದವು. ಒಮ್ಮೆ, ಬಹುಶಃ ಬೆಂಗಳೂರಿನ ಗಾಯನ ಸಮಾಜದಲ್ಲಿ, ಅವರು ಯದುಕುಲ ಕಾಂಭೋಜಿ ರಾಗದ ಶ್ರೀರಾಮ ರಘುರಾಮ ಶೃಂಗಾರರಾಮ ಕೀರ್ತನೆಯನ್ನು ಹಾಡಿದರು. ಅದರ ಕೌಸಲ್ಯಮುನು ತಪಮೇಮಿ ಜೇಸೆನೋ ತೆಲಿಯ ಎಂಬ ಚರಣಕ್ಕೆ ವಿಸ್ತಾರವಾಗಿ ನೆರವಲು ಹಾಡುತ್ತಿರುವಾಗ, ನೀವು ನಂಬುತ್ತೀರೋ ಇಲ್ಲವೋ, ಅವರ ಜುಟ್ಟಿನ ಗಂಟು ಬಿಚ್ಚಿಹೋಯಿತು. “ಕೌಸಲೆ ರಾಮನ ಕೆನ್ನೆಗೆ ಮುತ್ತಿಟ್ಟಳಲ್ಲ, ಅದಕ್ಕೆ ಅವಳೇನು ತಪಸ್ಸು ಮಾಡಿದ್ದಳ್ಳೋ’ ಎಂಬ ಭಾವವುಳ್ಳ ಚರಣ ಅದು. ರಾಮನಾಥನ್‌ ಅವರು ಒಂದಿಷ್ಟೂ ವಿಚಲಿತರಾಗದೆ ಬಿಚ್ಚಿಹೋದ ತಮ್ಮ ಜುಟ್ಟನ್ನು ಒಂದೆರಡು ಸಲ ಮೆಲ್ಲಗೆ ಕೊಡವಿ, ಪಾರಿವಾಳವನ್ನು ಸವರುವಂತೆ ಅದನ್ನು ಸವರಿ, ನಿಧಾನವಾಗಿ ಮತ್ತೆ ಗಂಟುಕಟ್ಟಿದ ಆ ವೈಖರಿಯಲ್ಲೇ ಆ ಚರಣದ ಸಮಗ್ರಾರ್ಥ ಸ್ಪುರಿಸಿಬಿಟ್ಟಿತು. ಹೀಗೆಯೇ ಚಂಬೈ, ಶೆಮ್ಮಂಗುಡಿ, ಮಹಾರಾಜಪುರಂ ಮೊದಲಾದವರ ಹಾವಭಾವಗಳ ಬಗೆಗೂ ಕೆಲವು ಪ್ರಸಂಗಗಳನ್ನು ಒದಗಿಸಿಯೇನು. 

ಹಿಂದೂಸ್ತಾನಿ ಸಂಗೀತಕ್ಕೆ ಬಂದಾಗ ನಮ್ಮ ಭೀಮಸೇನ ಜೋಶಿಯವರನ್ನು ಮರೆಯುವುದುಂಟೆ? ಅವರಿಗೆ ಪ್ರಿ¿åವಾದ ಪೂರಿಯಾ ರಾಗವನ್ನೇ ತೆಗೆದುಕೊಳ್ಳಿ. ಕೋಮಲ ರಿಷಭ ಸ್ವರ ಹಾಡುವಾಗ ಅವರು ಎರಡೂ ಕೈಯ ಮುಷ್ಟಿ ಹಿಡಿದು ಹತ್ತಿಯನ್ನು ಹಿಂಜುವಂತೆ ಅಥವಾ ಬಟ್ಟೆಯನ್ನು ಹರಿಯುವಂತೆ ಎಳೆಯುತ್ತಿದ್ದರು. ಗ ಮ ಧ ನಿಗಳಂಥ ತೀವ್ರ ಸ್ವರಗಳಾದರಂತೂ ಭಾವಕ್ಕೆ ತಕ್ಕಂತೆ ಕೈ ಬೀಸುವ, ಮುಷ್ಟಿ ಬಿಚ್ಚಿ ಮುಚ್ಚುವ, ಇಡೀ ಮೈಯನ್ನು ಅಡ್ಡಡ್ಡಕ್ಕೆ, ಹಿಂದಕ್ಕೆ ಮುಂದಕ್ಕೆ ಬಾಗಿಸುವ, ನಿರಾಕರಿಸುವಂತೆ ಬೆರಳಾಡಿಸುವ, ಏನನ್ನೋ ಬಾಚಿಕೊಳ್ಳುವಂತೆ ಎರಡೂ ಹಸ್ತಗಳನ್ನು ಒಟ್ಟಿಗೇ ತರುವ ಅವರ ಭಾವಾಭಿನಯವನ್ನು ನೋಡಿಯೇ ಅರಿಯಬೇಕು. ಬೋಲ್‌ತಾನುಗಳನ್ನು ಹಾಡುವಾಗ ಅವರ ಹಾವಭಾವಗಳು ಒಮ್ಮೊಮ್ಮೆ ತಂತಿಯ ಮೇಲೆ ನಡೆಯುವವನ ತಲ್ಲಣವನ್ನು ಸೂಚಿಸುವಂತಿದ್ದರೆ ತಾನುಗಳನ್ನು ಹಾಡುವಾಗ ನಾಗಾಲೋಟದಲ್ಲಿ ಓಡಿ ಓಡಿ ಇದ್ದಕ್ಕಿದ್ದಂತೆ ಪ್ರಪಾತವೊಂದನ್ನು ಕಂಡು ನಿಂತುಬಿಟ್ಟವನೊಬ್ಬನ ಆವೇಗವನ್ನು ತೋರಿಸುವಂತಿರುತ್ತಿತ್ತು- ಅವರ ಮೈಕೈಗಳ ಭಾವಭಂಗಿ. ಸಂಗೀತ ಬರೀ ಕೇಳುವುದಕ್ಕಷ್ಟೇ ಅಲ್ಲ, ನೋಡುವುದಕ್ಕೂ ಉಂಟು ಎಂಬುದಕ್ಕೆ ಭೀಮಸೇನರು ಒಂದು ಜ್ವಲಂತ ನಿದರ್ಶನ.

1922ರಲ್ಲಿ ರೈಟ್‌ ಆನರಬಲ್‌ ವಿ.ಎಸ್‌. ಶ್ರೀನಿವಾಸ ಶಾಸ್ತ್ರಿಗಳು ಕೆಲವು ದಿನ ಮೈಸೂರು ಮಹಾರಾಜರ ಅತಿಥಿಗಳಾಗಿದ್ದರಂತೆ. ಅವರ ಜೊತೆಗೆ ಡಿ.ವಿ.ಜಿ.ಯವರು ಮತ್ತು ಇತರ ಮೂವರು ಮಿತ್ರರು. ಅರಮನೆಯ ಮೊಕ್ತೇಸರರಾಗಿದ್ದ ಎ.ವಿ. ಸುಬ್ರಹ್ಮಣ್ಯರಾಜ ಅರಸು ಅವರೆಲ್ಲರನ್ನೂ ವಸಂತ ಮಹಲಿನಲ್ಲಿ ಇಳಿಸಿದ್ದರಂತೆ.  ರಾಜೋಪಚಾರ ಎಂದ ಮೇಲೆ ಕೇಳಬೇಕೆ?  “”ವಸಂತಮಹಲಿನಲ್ಲಿ ಎಲ್ಲ ನಿರ್ಮಲ, ಎಲ್ಲ ಅಂದ, ಎಲ್ಲ ಗಂಭೀರ, ಎಲ್ಲ ದೊಡ್ಡತನ. ಅದು ನಡವಳಿಕೆಯಲ್ಲಿ ನಯನಾಜೂಕುಗಳನ್ನು ಅಪೇಕ್ಷಿಸುತ್ತಿತ್ತು. ಈ ಮರ್ಯಾದೆಯ ವಾತಾವರಣ ನನ್ನ ಪಾಲಿಗೆ ಬಿಕ್ಕಟ್ಟಾಗಿತ್ತು” ಎಂದು ಬರೆದಿದ್ದಾರೆ ಡಿ.ವಿ.ಜಿ.  ಅಲ್ಲಿಂದ ಸ್ವಲ್ಪ ಹೊತ್ತು ತಪ್ಪಿಸಿಕೊಳ್ಳಲೆಂದು ಅವರು ತಮ್ಮ ಮಿತ್ರರ ಜೊತೆ ಹೇರ್‌ಕಟ್‌ ಮಾಡಿಸಿಕೊಳ್ಳುವ ನೆಪದಲ್ಲಿ ಹೊರಗೆ ಹೊರಟರು. 

ಅವರನ್ನು ಕಂಡ ಅರಸ‌ರು, “”ಅರಮನೆಯ ಅತಿಥಿಗಳಿಗೆ ಅಂಗಡಿ ûೌರವೇ? ನಡೆಯಿರಿ, ಅವನೇ ಇಲ್ಲಿಗೆ ಬರುತ್ತಾನೆ” ಎಂದು ಹಿಂದಕ್ಕೆ ಅಟ್ಟಿದರಂತೆ. “”ಆತ ಬಂದು, ನನಗೆ ಬೇಕಾಗಿತ್ತೋ ಇಲ್ಲವೋ, ರುಂಡವನ್ನಂತೂ ಚೊಕ್ಕಟಮಾಡಿದ” ಎಂದಿರುವ ಡಿ.ವಿ.ಜಿ. ಈ ವಿಪರ್ಯಾಸದ ಬಗ್ಗೆ ಎರಡು ಸಾಲಿನ ಈ ಪದ್ಯ ಬರೆದರು:      

ಆಪಾದ ಮೌಳಿ ಪರ್ಯಂತಂ ರಾಜಸೇವಕಸೇವಿತಃ
    ಗುಂಡೋ ವಿರಾಜತೇ ಹೃದ್ಯ ಶ್ರೀನಿವಾಸಕೃಪಾಬಲಾತ್‌
ಈ ಪದ್ಯ ಅದು ಹೇಗೋ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಕೈಗೆ ಸಿಕ್ಕಿತು. ಆಮೇಲೆ ನಡೆದದ್ದನ್ನು ಡಿ.ವಿ.ಜಿ.ಯವರ ಮಾತಿನಲ್ಲೇ ಕೇಳಬೇಕು: 
“”ಬೆಂಗಳೂರಿನಲ್ಲಿ ಶ್ರೀನಿವಾಸ ಶಾಸ್ತ್ರಿಗಳು ಬಂದಿದ್ದಾಗ ಅವರ ಸಂತೋಷಕ್ಕೋಸ್ಕರ ಡಾ. ಬಿ.ಕೆ. ನಾರಾಯಣರಾಯರ ಮನೆಯಲ್ಲಿ ಒಂದು ಮಿತ್ರಕೂಟವನ್ನು ಏರ್ಪಡಿಸಿದ್ದರು. ಅಂದು  ವಾಸುದೇವಾಚಾರ್ಯರು ಹಾಡತಕ್ಕದ್ದೆಂದು ಗೊತ್ತಾಗಿತ್ತು. ಮಿತ್ರಸಭೆ ಸೇರಿತು. ಆಚಾರ್ಯರು ವಾಡಿಕೆಯಂತೆ ವರ್ಣದಿಂದ ಪ್ರಾರಂಭಮಾಡಿ ಒಂದೆರಡು ಕೃತಿಗಳನ್ನು ಹಾಡಿ ಮೂರನೆಯದಕ್ಕಾಗಿ ರಾಗವಿನ್ಯಾಸ ಮಾಡುತ್ತಿದ್ದರು. ನಾನೂ ಕುತೂಹಲದಿಂದ ಕೇಳುತ್ತಿದ್ದೆ.

ಆಗ ನನ್ನ ಮಿತ್ರರೊಬ್ಬರು ಎದ್ದು ಬಾಗಿಲಿನ ಬಳಿ ಹೋಗಿ ನನಗೆ ಸಂಜ್ಞೆಮಾಡಿದರು. ನಾನು ಅವರಲ್ಲಿಗೆ ಹೋದೆ. ಅವರು ನನ್ನನ್ನು ಕರೆದುಕೊಂಡು ಹೊರಕ್ಕೆ ನಡೆದರು. ಅಲ್ಲಿ ಯಾವುದೋ ಮಾತನ್ನೆತ್ತಿ ಒಂದೈದು ನಿಮಿಷ ನಿಲ್ಲಿಸಿಕೊಂಡರು. ಬಳಿಕ ಇಬ್ಬರೂ ಒಳಕ್ಕೆ ಬಂದೆವು. ಆ ಹೊತ್ತಿಗೆ ಏನಾಗಿದೆ? ಆಚಾರ್ಯರು ಕಲ್ಯಾಣಿ ಪ್ರಾರಂಭಮಾಡಿ ಗುಂಡೋ ವಿರಾಜಿತೇ ಹೇಳುತ್ತಿದ್ದರು. ಎಲ್ಲರೂ ನನ್ನನ್ನು ನೋಡಿ ನಗಲಿಕ್ಕಾರಂಭಮಾಡಿದರು. ಆಚಾರ್ಯರು ನಗುವನ್ನು ತುಟಿಯ ಹಿಂದುಗಡೆ ಅಡಗಿಸಿಕೊಂಡು, ಅದು ದೀಕ್ಷಿತರ ಕೃತಿಯೋ ಎಂಬಂತೆ ರಾಗವಿನ್ಯಾಸ ಮಾಡಿ, ಸ್ವರಸಂಯೋಜನೆ ಮಾಡಿ ಹಾಡಿದರು. ಅಕ್ಷರಕ್ಷರಕ್ಕೂ ಸ್ವರ ಹಾಡಿದರು.

ಗುಂಡೋ ವಿರಾಜತೇ
ಏಷ ಗುಂಡೋ ವಿರಾಜತೇ
ಆದ್ಯ ಗುಂಡೋ ವಿರಾಜತೇ
ಹೀಗೆ ಹಾಡುತ್ತ, ಗುಂಡ ಶಬ್ದ ಬಂದೊಡನೆಯೇ ಕೈಯನ್ನು ಬೊಗಸೆಮಾಡಿ, ಬೋರಲಿಸಿ, ಒರಳಿನಲ್ಲಿ ಹಿಟ್ಟು ತಿರುವುವಾಗ ರುಬ್ಬುಗುಂಡನ್ನು ರುಬ್ಬುವಂತೆ ಅಭಿನಯ ಮಾಡಿದರು. “ಆಪಾದ’ ಎಂಬ ಪದವನ್ನು ಹೇಳುವಾಗ ಕಾಲ ಕಡೆ ಬೆಟ್ಟು ತಿರುಗಿಸಿ ಅಂಗಾಲನ್ನು ತೋರಿಸುತ್ತಲೂ ಮೌಳಿ ಎನ್ನುವಾಗ ಕೈ ಬೆರಳನ್ನು ತಲೆಯ ಮೇಲೆಡೆಗೆ ಎತ್ತಿ ಕ್ಷೌರಕತ್ತಿಯಾಡಿದಂತೆ ಸನ್ನೆಮಾಡುತ್ತಲೂ “ಶ್ರೀನಿವಾಸ ಕೃಪಾಬಲಾತ್‌’ ಎನ್ನುವಾಗ ಶ್ರೀನಿವಾಸಶಾಸ್ತ್ರಿಗಳ ಕಡೆ ಕೈ ಮಾಡುತ್ತಲೂ ಅಭಿನಯಪೂರ್ವಕವಾಗಿ ಹಾಡಿದರು! ಆ ಹೊತ್ತು ಶ್ರೀನಿವಾಸಶಾಸ್ತ್ರಿಗಳು ಪಟ್ಟ ಆನಂದವಂತೂ ಮೇರೆಯಿಲ್ಲದ್ದು. ಆಮೇಲೆ ನನ್ನನ್ನು ಕಂಡಾಗಲೆಲ್ಲ ವಾಸುದೇವಾಚಾರ್ಯರ ಪ್ರತಿಭೆಯನ್ನು ಕೊಂಡಾಡುತ್ತಿದ್ದರು. “”ಹಾಡುವುದೆಂದರೆ ವಾಸುದೇವಾಚಾರ್ಯರ ಹಾಗೆ ಅರ್ಥವತ್ತಾಗಿ ರಸಪುಷ್ಟವಾಗಿ ಹಾಡಬೇಕು” ಎಂದು ಹೇಳುತ್ತಿದ್ದರು.

ಹಾಡುವಾಗ ವಿಶೇಷ ಹಾವಭಾವವನ್ನೇನೂ ತೋರ್ಪಡಿಸದ ಸಂಗೀತಗಾರರೆಂದರೆ ನನಗೆ ತೋರುವ ಮಟ್ಟಿಗೆ ಇಬ್ಬರೇ ಇಬ್ಬರು: ಎಂ.ಎಸ್‌. ಸುಬ್ಬಲಕ್ಷ್ಮೀ, ಎಂ. ಬಾಲಮುರಲೀ ಕೃಷ್ಣ. ಶಾರೀರವೊಂದರಿಂದಲೇ ಸಂಗೀತದ ಸಮಗ್ರ ಅರ್ಥ ಭಾವಗಳನ್ನು ಹೊಮ್ಮಿಸಬಲ್ಲ ಇವರಿಗೆ ವಿಚಿತ್ರ ಹಾವಭಾವಗಳ ಮೂಲಕ ವಿಶೇಷವಾಗಿ ಸ್ಪುರಿಸುವುದಕ್ಕೆ ಬಹುಶಃ ಏನೂ ಉಳಿದಿರುವುದಿಲ್ಲ. ಆದರೆ ಇವರಿಬ್ಬರಿಂದಲೇ ನಮ್ಮ ಸಂಗೀತ ಸರಸ್ಸು ತುಂಬಿಕೊಂಡಿಲ್ಲವಷ್ಟೆ. 

ಹಿಂದೊಮ್ಮೆ ಕವಿ ಸುಮತ್ರೀಂದ್ರ ನಾಡಿಗರು ಹಯಗ್ರೀವಾಚಾರ್‌ ಅವರ ಬಗ್ಗೆ  ಹೇಳಿದ ಸಂಗತಿಯೊಂದು ನೆನಪಾಗುತ್ತಿದೆ. ಹಯಗ್ರೀವಾಚಾರ್‌ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದವರು. ರಾಮಚಂದ್ರ ಶರ್ಮರಂತೆ ಎಷ್ಟೋ ವರ್ಷ ಇಥಿಯೋಫಿಯದಲ್ಲಿದ್ದು ಮತ್ತೆ ಬೆಂಗಳೂರಿಗೆ ಬಂದು ನೆಲೆಸಿದರು. ಅವರ ಪತ್ನಿ ವನಮಾಲಾ ಆಚಾರ ಪ್ರಸಿದ್ಧ ಲೇಖಕಿ. ಹಯಗ್ರೀವಾಚಾರ್ಯರು ಸಂಗೀತಗಾರರೇನಲ್ಲ. ಆದರೆ, ಲಹರಿ ಬಂದಾಗ ಸ್ನೇಹಿತರ ಸಮ್ಮುಖದಲ್ಲಿ ಹಾಡುತ್ತಿದ್ದರಂತೆ. ಗಾಯನದಲ್ಲಿ ಚಿಕ್ಕರಾಮರಾಯರದು ಅಕ್ಷಾಂಶವಾದರೆ ಇವರದು ರೇಖಾಂಶ. ಶುರುವಲ್ಲಿ ಒಂದು ಕಡೆ ಕೂತಿರುತ್ತಿದ್ದರು. ಹಾಡು ಪ್ರಾರಂಭಿಸಿದ ಮೇಲೆ ಇಂಚಿಂಚೇ ಮೇಲು ಮೇಲಕ್ಕೆ ಮೈಯನ್ನೆಬ್ಬಿಸುತ್ತ ಎಬ್ಬಿಸುತ್ತ¤ ಕೊನೆಗೆ ತಮ್ಮ ಧ್ವನಿ ತಾರಕವನ್ನು ಮುಟ್ಟಿದೆಯೆಂದು ಸೂಚಿಸುವುದಕ್ಕಾಗಿ ನಿಂತೇಬಿಡುತ್ತಿದ್ದರಂತೆ. ನಾಡಿಗರು ಅವರ ಸಂಗೀತವನ್ನು “ಪಿರಮಿಡ್‌ ಸಂಗೀತ’ ಎಂದು ಕರೆದದ್ದುಂಟು. 

ಗಾಯಕ ಗಾಯಕಿಯರ ವಿಷಯವಂತೂ ಸರಿಯೇ. ಇನ್ನು ವೀಣೆ ಪಿಟೀಲು ಕೊಳಲು ಸಿತಾರ್‌ ತಬಲ ಹಾರೊ¾ನಿಯಂ ಮೊದಲಾದ ವಾದ್ಯಗಳನ್ನು ನುಡಿಸುವವರು? ಅವರಿಗೇನು ಹಾವಭಾವಗಳು ಬೇಡವೆ? ಬೇಡ ಎಂದರೆ ಪರಲೋಕದಲ್ಲಿರುವ ಕುನ್ನಕುಡಿ ವೈದ್ಯನಾಥನ್‌ ಅವರಿಗೆ ಸಿಟ್ಟು ಬಂದೀತು. ಅವರು ಪಿಟೀಲು ಮುಟ್ಟಿದರೆ ಸಾಕು ಅದು ತಂತಾನೆ ನುಡಿಯುತ್ತಿತ್ತು. ಆದರೆ, ಅವರಿಗೆ ಅಷ್ಟೇ ಸಾಕಾಗುತ್ತಿರಲಿಲ್ಲ.  ದಾಂಗುಡಿಯುತ್ತಿದ್ದ ಸ್ವರಗಳಿಗೆ ಅನುಗುಣವಾಗಿ ಅವರು ತಮ್ಮ ಪಿಟೀಲಿನ ಕಮಾನನ್ನು ಒಮ್ಮೆ ಮರ ಕೊಯ್ಯುವ ರಂಪದಂತೆ ತಂತಿಗಳ ಮೇಲೆ ಒತ್ತಿ ಒತ್ತಿ ಎಳೆಯುತ್ತ, ಇನ್ನೊಮ್ಮೆ ತಂತಿಗಳನ್ನು ಬಾರಿಸುತ್ತ ನಾದದ ನದಿಯೊಂದನ್ನು ಹರಿಯಿಸುತ್ತಿದ್ದರು. ಹಾಗೆ ಹರಿಯಿಸುತ್ತಿರುವಾಗಲೇ ಅವರ ಮುಖದ ಹಣೆ, ಕಣ್ಣು, ಹುಬ್ಬು, ಮೂಗು, ಬಾಯಿ ನವರಸಗಳಲ್ಲಿ ಒಂದನ್ನೂ ಬಿಡದೆ ಅಭಿನಯಿಸಿ ತೋರಿಸುತ್ತಿದ್ದುವು. ಅವರಂಥ ವಾದ್ಯವಾದನ ಪ್ರವೀಣರನ್ನು ಗಮನದಲ್ಲಿಟ್ಟುಕೊಂಡೇ ನಾನೊಂದು ಬರಹ ಬರೆದೆ. ತರುಣ ವಿಮರ್ಶಕ ಗೆಳೆಯರೊಬ್ಬರು ಅದೊಂದು ಅತಿ ಸಣ್ಣಕತೆ ಎಂದರು. ಆಗಲಿ, ಆ ಅತಿ ಸಣ್ಣಕತೆಯನ್ನೇ ಇಲ್ಲಿ ಕೊಡುತ್ತಿದ್ದೇನೆ – ನಿಮ್ಮ ಅವಗಾಹನೆಗಾಗಿ.

ಏರುಪೇರು
ತಿರುವೆಂಗಾಡು ವೈದೀಶ್ವರನ್ನನ ಮಹಿಮೆಯ ಬಗ್ಗೆ ಏನು ಹೇಳ್ಳೋಣ. ಆತ ಹುಟ್ಟು ಸಂಗೀತಗಾರ; ಬಾಲ ಮೇಧಾವಿ ಅಂತಾರಲ್ಲ, ಆ ಜಾತಿಗೆ ಸೇರಿದವನು. ಐದು ತುಂಬುವ ಹೊತ್ತಿಗೇ ಅವನ ಪಿಟೀಲು ರಂಜಿನಿ ರಾಗದ ಮೈದಡವಿ ದುರ್ಮಾರ್ಗಚರಾ….ವನ್ನು ಆದ್ರì ರೀತಿಯಲ್ಲಿ ಮಿಡಿಸುತ್ತಿತ್ತು.  ಒಂಬತ್ತು ತುಂಬಿದ ಮೇಲಂತೂ ಕಾವೇರಿಯಿಂದ ಕನ್ಯಾಕುಮಾರಿಯವರೆಗೆ ಎಲ್ಲ ಕಡೆಯೂ ಅವನ ಪಿಟೀಲುವಾದನ ಕೇಳುವುದಕ್ಕೆ ಜನವೋ ಜನ.

ಹದಿನೆಂಟಕ್ಕೆ ದಂಟು ಎನ್ನುತ್ತಾರಲ್ಲ, ಹಾಗೆ ಹದಿನೆಂಟು ತುಂಬಿದಾಗ ಅವನು ವಿಚಿತ್ರ ರೂಪಾಂತರಕ್ಕೆ ಗುರಿಯಾದ. ಮೊದಲೆಲ್ಲ ಎಡತೊಡೆಯ ಮೇಲೆ ಇಟ್ಟುಕೊಂಡಿದ್ದ ಪಿಟೀಲನ್ನು ಎದೆಗಾನಿಸಿಕೊಂಡು, ಅದರ ಅಷ್ಟುದ್ದದ ಕಮಾನನ್ನು ಲೀಲಾಜಾಲವಾಗಿ ಮೀಟುತ್ತ ಗಂಭೀರವಾಗಿ ತಲೆ ತಗ್ಗಿಸಿಕೊಂಡಿರುತ್ತಿದ್ದವನು, ಈಗೀಗ ವಿವಿಧ ಹಾವಭಾವಗಳನ್ನೂ ಕ್ಷಣಕ್ಕೊಂದು ಗತ್ತನ್ನೂ ಪ್ರದರ್ಶಿಸತೊಡಗಿದ. ಸ್ವರ ಸ್ವರಗಳ ನಾದ ಹೊಮ್ಮಿದಂತೆ ಅವನು ಕಣ್ಣನ್ನು ಅರೆಮುಚ್ಚುವುದೇನು, ಆಗಾಗ ಹುಬ್ಬುಗಂಟಿಕ್ಕುವುದೇನು, ಇದ್ದಕ್ಕಿದ್ದಂತೆ ಮಗುವಿನ ಹಾಗೆ ಮುಗುಳುನಗುವುದೇನು, ಅಸಾಧ್ಯ ನೋವು ತಿನ್ನುತ್ತಿರುವವನಂತೆ ಮುಖ ಹಿಂಡುವುದೇನು, ನುಡಿಸಿದ್ದನ್ನ ಆಕಾಶದಲ್ಲಿ ಕೊರೆದಿಡುವವನ ಹಾಗೆ ಪಿಟೀಲಿನ ಕಮಾನನ್ನು ಮೇಲೆತ್ತಿ ಆಡಿಸುವುದೇನು!

ಕ್ರಮೇಣ ತಿರುವೆಂಗಾಡು ವೈದೀಶ್ವರನ್‌ ಅಸಂಖ್ಯಾತ ಹಾವಭಾವಗಳಲ್ಲಿ ಪಾರಂಗತನಾದ.  ಚಾಲ ಕಲಲಲಾಡುಕೊನ್ನ…. ನುಡಿಸುವಾಗ ಒಂದು ಹಾವವಾದರೆ ದೇವೀ ಬ್ರೋವ ಸಮಯಮಿದೇ… ನುಡಿಸುವಾಗ ಇನ್ನೊಂದೇ ಭಾವ. ಅಮೃತವರ್ಷಿಣಿ ರಾಗದ ಕೀರ್ತನೆಗೆ ಸ್ವರಗಳನ್ನು ನುಡಿಸುವಾಗಂತೂ ಆಕಾಶದ ವಿಮಾನ ನೇರವಾಗಿ ತನ್ನ ತಲೆಯ ಮೇಲೆಯೇ ಬಂದು ಬೀಳಲಿದೆಯೆನ್ನುವಂಥ ಭೀತಭಾವ!  ಪ್ರತಿಯೊಂದು ಕಛೇರಿಗೂ ಮೊದಲು ಅವನು ಕನ್ನಡಿಯ ಮುಂದೆ ಕೂತು ಅಭ್ಯಾಸಮಾಡುತ್ತಿದ್ದನೆನ್ನಿ.  ಆದರೆ ಜನರು ಅವನ ಹಾವಭಾವಗಳನ್ನು ಸಹಜಸ್ಫೂರ್ತಿಯೆಂದು ತಿಳಿದು ತಾವೂ ತಾಳಹಾಕುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು.  

ಕೆಲವು ದಿನಗಳ ನಂತರ ನಡೆದ ಸಂಗೀತ ಕಛೇರಿಯೊಂದರಲ್ಲಿ ವಿಲಕ್ಷಣ ಚಹರೆಯೊಂದು ಹಠಾತ್ತನೆ ಕಾಣಿಸಿಕೊಂಡಿತು. ಸಂಗೀತಪ್ರಿಯರೆಲ್ಲರೂ ಏನೋ ವಿಶೇಷವಾದ್ದು ನಡೆಯಲಿದೆಯೆಂದು ಉಸಿರು ಬಿಗಿಹಿಡಿದುಕೊಂಡರು. ಪಕ್ಕವಾದ್ಯದವರ “ಆಹಾ… ಆಹಾ…’ಗಳ ನಡುವೆ ಅಚ್ಚರಿಯೊಂದು ಕೈಕಾಲು ಮೂಡಿಸಿಕೊಂಡು ಸ್ಪಷ್ಟ ಆಕಾರ ತಳೆಯಿತು. ನಡೆದದ್ದಿಷ್ಟೆ:  ತಿರುವೆಂಗಾಡು ವೈದೀಶ್ವರನ್‌ ಭೈರವಿ ರಾಗದ ಅಂಬಾ ತವಪದಾಂಭೋಜ ಭಕ್ತಿಂದೇಹಿಮೇ… ನುಡಿಸುತ್ತಿರುವಾಗ ರಘುವಂಶಸುಧಾಂಬುಧಿ…ಯ ಕದನ ಕುತೂಹಲವನ್ನು ಮಿಂಚಿಸಿಬಿಟ್ಟಿದ್ದ. 

ಈ ಹೊಸ ಬೆಳವಣಿಗೆ ಅಂದಿಗೇ ನಿಲ್ಲಲಿಲ್ಲ.  ಎರಡು ತಿಂಗಳ ಬಳಿಕ ಅವನನ್ನು ಪರೀಕ್ಷಿಸಿದ ವೈದ್ಯರೊಬ್ಬರು ಇದು ಮರೆಗುಳಿ ರೋಗ ಎಂದರು. ಆಮೇಲೆ ರಾತ್ರಿ ಬೆಳಗಾಗುವುದರೊಳಗೆ ತಿರುವೆಂಗಾಡು ವೈದೀಶ್ವರನ್‌ ಅದುವರೆಗೂ ಕಛೇರಿಗಳಲ್ಲಿ ನುಡಿಸಿ, ಶಹಬ್ಟಾಸ್‌ಗಿರಿ ಪಡೆಯುತ್ತಿದ್ದ ಎಲ್ಲ ರಾಗವರ್ಣ ಕೀರ್ತನೆ ಜಾವಳಿ ತಿಲ್ಲಾನಗಳನ್ನೂ ಮರೆತುಬಿಟ್ಟ.  ನೆನಪಿನಲ್ಲಿದ್ದ ಒಂದೆರಡು ಸ್ವರಗಳಿಂದ ನೆರವಲ್‌ ಕೂಡ ಸಾಧ್ಯವಾಗುವಂತಿರಲಿಲ್ಲ.

ಇದೆಲ್ಲಕ್ಕಿಂತ ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ, ಅವನು ಅಷ್ಟು ವರ್ಷಗಳಿಂದ ರೂಢಿಸಿಕೊಂಡಿದ್ದ ಹಾವಭಾವಗಳಲ್ಲಿ ಒಂದನ್ನೂ ಮರೆಯಲಾಗದ್ದು. ಈಗ ಅವನು ಪಿಟೀಲು ನುಡಿಸುವುದಿಲ್ಲ, ನಿಜ. ಆದರೆ ಅವನಿಗೆ ನೆಮ್ಮದಿ ಕೊಡುವ ಮತ್ತೂಂದಂತೂ ಇದ್ದೇ ಇದೆ.  ಪ್ರತಿ ಶುಕ್ರವಾರ ಸಾಯಂಕಾಲ ಅವನ ಮನೆಯಲ್ಲಿ ಈಗಲೂ ಆಪ್ತಮಿತ್ರರು ಸೇರುತ್ತಾರೆ – ಬೆಳಗಾಗುವವರೆಗೂ ಅವನ ಹಾವಭಾವಗಳ ಮೌನ ಸಂಗೀತವನ್ನು ಕಣ್ಣಿಂದಲೇ ಆಲಿಸಿ ಆನಂದಿಸುವುದಕ್ಕೆ!

ಎಸ್‌. ದಿವಾಕರ್‌

ಟಾಪ್ ನ್ಯೂಸ್

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.