ದಕ್ಷಿಣ ಆಫ್ರಿಕದ ಕತೆ: ಬೆಳ್ಳಿಯ ಉಂಗುರ
Team Udayavani, Jun 16, 2019, 5:00 AM IST
ಒಬ್ಬ ಬಡವ ಹೆಂಡತಿಯೊಂದಿಗೆ ಜೀವನ ಸಾಗಿಸಿದ್ದ. ಅವನಿಗೆ ಬಂಟೂ ಎಂಬ ಒಬ್ಬನೇ ಮಗನಿದ್ದ. ಒಂದು ದಿನ ಬಡವನ ಕೊನೆಗಾಲ ಸಮೀಪಿಸಿತು. ಮಗನನ್ನು ಬಳಿಗೆ ಕರೆದ. “”ನಿನಗಾಗಿ ನಾನು ಯಾವ ಆಸ್ತಿಯನ್ನೂ ಗಳಿಸಿಡದೆ ಈ ಲೋಕದಿಂದ ಹೋಗುತ್ತಿದ್ದೇನೆ. ಆದರೆ ಪ್ರೀತಿಯಿಂದ ಸಾಕಿದ ಒಂದು ಬೆಕ್ಕು, ಒಂದು ನಾಯಿ ಮತ್ತು ಗಿಡುಗ ಪಕ್ಷಿಯಿದೆ. ಇವುಗಳನ್ನು ನನ್ನ ಹಾಗೆ ಮಮತೆಯಿಂದ ನೋಡಿಕೊಂಡರೆ ಜೀವನದಲ್ಲಿ ಸುಖ, ನೆಮ್ಮದಿ ಪಡೆಯಬಹುದು” ಎಂದು ಹೇಳಿ ಕಣ್ಣು ಮುಚ್ಚಿದ.
ತಂದೆಯ ಅಂತ್ಯವಿಧಿಗಳು ತೀರಿದ ಬಳಿಕ ಬಂಟೂ ನಾಯಿ, ಬೆಕ್ಕು, ಗಿಡುಗದೊಂದಿಗೆ ಕಾಡಿಗೆ ಹೋದ. ಆಹಾರ ಹುಡುಕಿ ತರಲು ಕಳುಹಿಸಿದ. ನಾಯಿ ಹರಿಯುವ ನೀರಿಗಿಳಿದು ದೊಡ್ಡ ಗಾತ್ರದ ಮೀನುಗಳನ್ನು ಹಿಡಿದು ತಂದು ಕೊಟ್ಟಿತು. ಗಿಡುಗ ಹಣ್ಣುಗಳನ್ನು ಕೊಯಿದು ತಂದು ರಾಶಿ ಹಾಕಿತು. ಬಂಟೂ ಬೆಕ್ಕಿನೊಂದಿಗೆ, “”ನೀನು ಏನು ತರುತ್ತೀ?” ಎಂದು ಕೇಳಿದ. ಬೆಕ್ಕು ಅವನನ್ನು ಕರೆದುಕೊಂಡು ಮುಂದೆ ಹೋಯಿತು. ಅಲ್ಲಿ ಒಂದು ದೊಡ್ಡ ಮನೆ ಇತ್ತು. ಅದರೊಳಗೆ ತುಂಬ ಇಲಿಗಳು ತುಂಬಿದ್ದವು. ಬೆಕ್ಕು ಎಲ್ಲ ಇಲಿಗಳನ್ನೂ ಕೊಂದು ಹಾಕಿತು.
ಆಗ ದೈತ್ಯ ಆಕಾರದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದ. ಬಂಟೂನೊಂದಿಗೆ, “”ನಿನ್ನ ಬೆಕ್ಕು ಒಳ್ಳೆಯ ಕೆಲಸವನ್ನೇ ಮಾಡಿದೆ. ನಾನೊಬ್ಬ ಮಂತ್ರವಾದಿ. ನನ್ನ ಶತ್ರುಗಳನ್ನು ಇಲಿಗಳಾಗಿ ಪರಿವರ್ತಿಸಿದ್ದೆ. ಅವುಗಳೆಲ್ಲ ಈಗ ಬೆಕ್ಕಿನಿಂದಾಗಿ ನಾಶವಾಗಿವೆ. ಇಷ್ಟು ಒಳ್ಳೆಯ ಕೆಲಸ ಮಾಡಿದ ನಿನಗೆ ಬಹುಮಾನ ಕೊಡುವುದು ಬೇಡವೆ? ಅದೋ ಅಲ್ಲಿ ಕಾಣುವ ಸರೋವರದ ತಳದಲ್ಲಿ ಬೆಳ್ಳಿಯ ಗಟ್ಟಿಗಳು ರಾಶಿ ಬಿದ್ದಿವೆ. ಮುಳುಗಿ ಹಾಕಿ ಬೇಕಾದಷ್ಟು ತೆಗೆದುಕೋ. ಆದರೆ ಅಲ್ಲಿ ಒಂದು ಚಿಕ್ಕ ಬೆಳ್ಳಿಯ ಉಂಗುರವಿದೆ. ಅದನ್ನು ತಂದು ನನಗೆ ನೆನಪಿನಲ್ಲಿ ಕೊಡು” ಎಂದು ಹೇಳಿದ. ಬಂಟೂ ನೀರಿನಲ್ಲಿ ಮುಳುಗಿದ.
ಬೆಳ್ಳಿಯ ರಾಶಿಯಲ್ಲಿ ಒಂದು ಉಂಗುರ ಇತ್ತು. ಬಂಟೂ ಅದನ್ನು ಎತ್ತಿಕೊಂಡ. ಆಗ ಒಂದು ಮೀನು ಮನುಷ್ಯರಂತೆ ಮಾತನಾಡುತ್ತ, “”ಈ ಉಂಗುರವನ್ನು ಕೈಯಲ್ಲಿ ಹಿಡಿದು ಯಾವ ವಸ್ತುವನ್ನು ಬಯಸಿದರೂ ಸಿಗುತ್ತದೆ. ಇದನ್ನು ಮಾಂತ್ರಿಕನ ಕೈಗೆ ಕೊಡಬೇಡ. ಸರೋವರಕ್ಕಿಳಿದರೆ ಅವನು ಕಲ್ಲಾಗುವಂತಹ ಶಾಪವಿದೆ. ಆದ್ದರಿಂದ ನಿನ್ನಲ್ಲಿ ತರಲು ಹೇಳಿದ್ದಾನೆ. ಉಂಗುರ ಕೈಸೇರಿದರೆ ಮತ್ತೆ ಅವನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ, ನಿನ್ನನ್ನು ಕೊಂದು ಹಾಕುತ್ತಾನೆ” ಎಂದು ಹೇಳಿತು. ಬಂಟೂ ಉಂಗುರವನ್ನು ತಲೆಗೂದಲಿನೆಡೆಯಲ್ಲಿ ಅಡಗಿಸಿಕೊಂಡು ನೀರಿನಿಂದ ಮೇಲೆ ಬಂದ. ಮಂತ್ರವಾದಿಯೊಂದಿಗೆ, “”ಅಲ್ಲಿ ಬೆಳ್ಳಿಯೂ ಇಲ್ಲ, ಉಂಗುರವೂ ಸಿಗಲಿಲ್ಲ. ನನ್ನನ್ನು ಸುಮ್ಮನೆ ನೀರಿಗಿಳಿಸಿದೆ” ಎಂದು ಸುಳ್ಳು ಹೇಳಿದ. ಮಂತ್ರವಾದಿ ಅವನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತ ಏನೂ ಹೇಳದೆ ಹೊರಟುಹೋದ.
ಬಳಿಕ ಬಂಟೂ ಉಂಗುರವನ್ನು ಪರೀಕ್ಷಿಸಲು ಅದನ್ನು ಕೈಯಲ್ಲಿ ಹಿಡಿದುಕೊಂಡು, ತನಗೆ ಧರಿಸಲು ರಾಜೋಚಿತವಾದ ಪೋಷಾಕುಗಳು ಬೇಕು, ಸವಾರಿಗೆ ಒಂದು ಒಂಟೆಯೂ ಬರಲಿ ಎಂದು ಬಯಸಿದ. ಅರೆಕ್ಷಣದಲ್ಲಿ ಅವು ಸಿದ್ಧವಾದವು. ಪೋಷಾಕು ಧರಿಸಿ ಒಂಟೆಯ ಮೇಲೆ ಕುಳಿತುಕೊಂಡು ಮನೆಗೆ ಬಂದಾಗ ತಾಯಿಗೆ ಅವನ ಗುರುತೇ ಸಿಗಲಿಲ್ಲ. ಅವನೇ ಮಾತನಾಡಿಸಿದಾಗ ದಿಗ್ಭ್ರಮೆಯಿಂದ, “”ಏನೋ ಇದು, ಸವಾರಿಗೆ ಒಂಟೆ! ಧರಿಸಲು ರಾಜರ ಉಡುಪು! ಎಲ್ಲಿಂದ ಕದ್ದು ತಂದೆ?” ಎಂದು ಕೇಳಿದಳು.
“”ಕದ್ದು ತಂದಿಲ್ಲವಮ್ಮ. ಎಲ್ಲ ಬೆಳ್ಳಿ ಉಂಗುರದ ಮಹಿಮೆ” ಎಂದು ಬಂಟೂ ನಡೆದ ವಿಷಯವನ್ನು ಹೇಳಿದ. ತಮಗೆ ವಾಸಕ್ಕೊಂದು ಅರಮನೆಯನ್ನು ಸೃಷ್ಟಿಸಿದ. ಅದರಲ್ಲಿ ಎಲ್ಲ ಸೌಲಭ್ಯಗಳನ್ನೂ ವ್ಯವಸ್ಥೆ ಮಾಡಿದ. ತಾಯಿ ಹಿರಿಹಿರಿ ಹಿಗ್ಗಿದಳು. “”ಇಷ್ಟು ವೈಭವದಿಂದ ನಾವು ಇರುವಾಗ ನಿನಗೊಬ್ಬ ಹೆಂಡತಿ ಬೇಡವೆ? ಈ ದೇಶದ ರಾಜನ ಮಗಳೇ ನನಗೆ ಸೊಸೆಯಾಗಿ ಬರಬೇಕು, ಅವಳನ್ನು ಮದುವೆ ಮಾಡಿಕೊಡುವಂತೆ ರಾಜನಲ್ಲಿ ಕೇಳಿಬರುತ್ತೇನೆ” ಎಂದು ಹೇಳಿ ಅರಮನೆಗೆ ಹೋದಳು. ತನ್ನ ಮಗನನ್ನು ಅಳಿಯನಾಗಿ ಮಾಡಿಕೊಳ್ಳುವಂತೆ ರಾಜನಲ್ಲಿ ಕೋರಿದಳು. ರಾಜನು, “”ಸಾಮಾನ್ಯ ವ್ಯಕ್ತಿಯನ್ನು ನನ್ನ ಮಗಳು ಮದುವೆಯಾಗಲು ಒಪ್ಪುವುದಿಲ್ಲ. ಅವಳಿಗೆ ಒಂದು ಕೋರಿಕೆಯಿದೆ. ಮಂಜಿನ ಗಡ್ಡೆಯಿಂದ ನಿರ್ಮಿಸಿದ ಅರಮನೆಯಾಗಬೇಕು, ಅದರೊಳಗೆ ಬಿಸಿಯಾದ ಹವೆಯಿರಬೇಕು, ಹಕ್ಕಿಗಳು ಸುಶ್ರಾವ್ಯವಾಗಿ ಹಾಡುತ್ತಿರಬೇಕು. ಇದನ್ನು ಸಾಧಿಸಿದ ಧೀರನನ್ನು ಮಾತ್ರ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ. ಆದರೆ ಯಾರಿಗೂ ಇಂತಹ ಅರಮನೆ ಕಟ್ಟಲು ಸಾಧ್ಯವಾಗಿಲ್ಲ” ಎಂದು ಹೇಳಿದ.
ತಾಯಿ ಮನೆಗೆ ಬಂದಳು. ಈ ವಿಷಯವನ್ನು ಮಗನಿಗೆ ಹೇಳಿದಳು. ಬಂಟೂ ಉಂಗುರದ ಮಹಿಮೆಯಿಂದ ಅಂಥ ಅರಮನೆಯನ್ನು ನಿರ್ಮಿಸಿ ನೋಡಲು ಬರುವಂತೆ ರಾಜಕುಮಾರಿಯನ್ನು ಕರೆಸಿದ. ಅವಳಿಗೂ ತುಂಬ ಖುಷಿಯಾಯಿತು. ಬಂಟೂನನ್ನು ಮೆಚ್ಚಿ ಕೊಂಡಳು. ರಾಜನು ಅವರ ವಿವಾಹವನ್ನು ನೆರವೇರಿಸಿದ. ಸ್ವಲ್ಪ ಸಮಯ ಕಳೆಯಿತು. ಬಂಟೂ ಬೇಟೆಗಾಗಿ ಒಂದು ಸಲ ಕಾಡಿಗೆ ಹೋಗಿದ್ದ. ಮಂತ್ರವಾದಿಗೆ ಅವನ ಮೇಲೆ ಅನುಮಾನ ಇತ್ತು. ಅವನು ಆಭರಣಗಳನ್ನು ಮಾರುವ ವ್ಯಾಪಾರಿಯ ಸೋಗು ಹಾಕಿಕೊಂಡು ಬಂಟೂನ ಅರಮನೆಗೆ ಬಂದ.
ರಾಜಕುಮಾರಿ ತನ್ನ ಮುಂದೆ ಮಂತ್ರವಾದಿ ಹರಡಿದ ಆಭರಣಗಳನ್ನು ಕಂಡು ಹಿಗ್ಗಿದಳು. ಒಂದೊಂದನ್ನೇ ನೋಡಿ ಕಣ್ಣರಳಿಸಿ, “”ಇದರ ಬೆಲೆ ಎಷ್ಟು?” ಎಂದು ಕೇಳಿದಳು. ಮಂತ್ರವಾದಿಯು, “”ಈ ಆಭರಣಗಳನ್ನು ತಮಗೆ ಕಾಣಿಕೆಯಾಗಿ ಕೊಡಲು ಬಯಸುತ್ತೇನೆ. ಆದರೆ ತಾವು ಒಂದು ಚಿಕ್ಕ ಸಹಾಯ ಮಾಡಬೇಕು. ತಮ್ಮ ಗಂಡ ಎಲ್ಲಿಯೋ ಒಂದು ಚಿಕ್ಕ ಬೆಳ್ಳಿಯ ಉಂಗುರವನ್ನು ಹುದುಗಿಸಿಟ್ಟಿದ್ದಾನೆ. ಒಂದು ಸಲ ಅದು ನನ್ನ ಕೈಗೆ ಸಿಕ್ಕಿದರೆ ನನ್ನನ್ನು ಬಾಧಿಸುತ್ತಿರುವ ಒಂದು ವ್ಯಾಧಿ ಶಮನವಾಗುತ್ತದೆ. ಅವನಿಗೆ ತಿಳಿದರೆ ನನಗೆ ಉಂಗುರ ಕೊಡಲು ಒಪ್ಪುವುದಿಲ್ಲ. ರಾತ್ರೆ ನಿದ್ರೆಯ ಸಮಯದಲ್ಲಿ ನೀವು ಅದನ್ನು ತೆಗೆದಿರಿಸಿ ನಾಳೆ ಬಂದಾಗ ನನಗೆ ಕೊಟ್ಟರೆ ಸಾಕು. ಮುತ್ತು, ರತ್ನ, ವಜ್ರಗಳಿಂದ ಹೊಳೆಯುವ ಈ ಬಂಗಾರದ ಎಲ್ಲ ಒಡವೆಗಳನ್ನು ನಿಮಗೆ ಈಗಲೇ ಕೊಟ್ಟುಹೋಗುತ್ತೇನೆ” ಎಂದು ಹೇಳಿದ.
ಮಂತ್ರವಾದಿಯ ಮೋಸ ತಿಳಿಯದೆ ರಾಜಕುಮಾರಿ ಬಂಟೂ ಗಾಢ ನಿದ್ರೆಯಲ್ಲಿ ಮೈ ಮರೆತಿರುವಾಗ ಅವನು ತಲೆಗೂದಲುಗಳ ನಡುವೆ ಅಡಗಿಸಿಟ್ಟುಕೊಂಡಿದ್ದ ಉಂಗುರವನ್ನು ತೆಗೆದಳು. ಮರುದಿನ ಬಂಟೂ ಮತ್ತೆ ಬೇಟೆಗೆ ಹೋಗಿದ್ದಾಗ ಅದಕ್ಕಾಗಿ ಬಂದ ಮಂತ್ರವಾದಿಗೆ ಒಪ್ಪಿಸಿದಳು. ಉಂಗುರ ಕೈಸೇರಿದ ಕೂಡಲೇ ಮಂತ್ರವಾದಿ ಬಂಟೂನ ಅರಮನೆಯನ್ನು ಮಾಯ ಮಾಡಿದ. ರಾಜಕುಮಾರಿಯನ್ನು ಕರೆದುಕೊಂಡು ಏಳು ಸಮುದ್ರಗಳಾಚೆಗೆ ಹೋಗಿಬಿಟ್ಟ. ಬೇಟೆಯಿಂದ ಮರಳಿ ಬಂದಾಗ ಬಂಟೂನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಹಾಗಾಯಿತು. ರಾಜನಿಗೂ ನಡೆದ ವಿಷಯ ಗೊತ್ತಾಯಿತು. ಅಲ್ಲಿಗೆ ಧಾವಿಸಿ ಬಂದ. “”ನೀನು ಒಬ್ಬ ಮಾಯಾವಿ ಇರಬೇಕು. ಅದಲ್ಲವಾದರೆ ಅರಮನೆ ಮಾಯವಾಗಲು ಹೇಗೆ ಸಾಧ್ಯ? ನನ್ನ ಮಗಳನ್ನು ಏಳು ದಿನಗಳೊಳಗೆ ಕರೆತರದಿದ್ದರೆ ನಿನಗೆ ಮರಣದಂಡನೆ ವಿಧಿಸುತ್ತೇನೆ” ಎಂದು ಎಚ್ಚರಿಸಿದ.
ಆಗ ನಾಯಿ, ಬೆಕ್ಕು, ಗಿಡುಗ ಬಂಟೂನ ಮುಂದೆ ಬಂದವು. ಗಿಡುಗ ವಿಶಾಲವಾಗಿ ಬೆಳೆದು ರೆಕ್ಕೆಗಳನ್ನು ಹರಡಿತು. ಅವನೊಂದಿಗೆ ನಾಯಿ, ಬೆಕ್ಕುಗಳನ್ನೂ ಬೆನ್ನ ಮೇಲೇರಿಸಿಕೊಂಡು ಹಾರುತ್ತ ಏಳು ಸಮುದ್ರಗಳನ್ನು ದಾಟಿತು. ಅಲ್ಲಿ ಕೆಳಗಿಳಿದ ಕೂಡಲೇ ಬೆಕ್ಕು ಎದುರಿನಲ್ಲಿದ್ದ ಇರುವೆ ಗೊದ್ದಗಳ ರಾಣಿಯೊಂದನ್ನು ಹಿಡಿದುಕೊಂಡಿತು. “”ಇಲ್ಲಿ ಒಬ್ಬ ಮಂತ್ರವಾದಿ ಅಡಗಿದ್ದಾನೆ. ನಿನ್ನ ಬಳಗದವರು ಅವನನ್ನು ಹುಡುಕಿ ಅವನಲ್ಲಿರುವ ಬೆಳ್ಳಿಯ ಉಂಗುರವನ್ನು ತರಬೇಕು. ಇಲ್ಲವಾದರೆ ನಿನ್ನನ್ನು ಬಿಡುವುದಿಲ್ಲ” ಎಂದು ಹೇಳಿತು. ರಾಣಿಯನ್ನು ರಕ್ಷಿಸಲು ಕೆಲಸಗಾರ ಇರುವೆಗಳು ಮಂತ್ರವಾದಿಯ ಪತ್ತೆ ಮಾಡಿದವು. ಅವನಿಗೆ ತಿಳಿಯದಂತೆ ಉಂಗುರವನ್ನು ಕಂಡುಹಿಡಿದು ಹೊತ್ತುಕೊಂಡು ಬರತೊಡಗಿದವು. ಆಗ ಒಂದು ಕಾಗೆ ಹೊಳೆಯುವ ಉಂಗುರವನ್ನು ನೋಡಿತು. ತಿನಸು ಎಂದು ಭ್ರಮಿಸಿ, ಸರಕ್ಕನೆ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರುತ್ತ ಕೊಳವೊಂದಕ್ಕೆ ಹಾಕಿಬಿಟ್ಟಿತು.
ಅದನ್ನು ಗಮನಿಸಿದ ಬಂಟೂನ ನಾಯಿ ಸುಮ್ಮನಿರಲಿಲ್ಲ. ಕಾಲಿನಲ್ಲಿ ಕೆದಕಿ ಕೊಳದ ಸಮೀಪದಲ್ಲಿದ್ದ ಗುಡ್ಡವನ್ನು ಕೀಳತೊಡಗಿತು. ಆಗ ಕೊಳದಲ್ಲಿದ್ದ ಮೀನುಗಳು, “”ಏನು ಮಾಡುತ್ತಿದ್ದೀಯಾ?” ಕೇಳಿದವು.””ಮಣ್ಣು ಹಾಕಿ ಕೊಳವನ್ನು ಮುಚ್ಚಿ ನಿಮ್ಮನ್ನೆಲ್ಲ ಕೊಲ್ಲುತ್ತೇನೆ” ಎಂದು ನಾಯಿ ಹೆದರಿಸಿತು. ಮೀನುಗಳು ಭಯಗೊಂಡು, “””ದಯವಿಟ್ಟು ಹಾಗೆ ಮಾಡಬೇಡ, ನಿನಗೆ ನಮ್ಮಿಂದ ಏನಾದರೂ ನೆರವು ಬೇಕಿದ್ದರೆ ಹೇಳು, ಮಾಡುತ್ತೇವೆ” ಎಂದವು. ನಾಯಿ, “”ಬದುಕುವ ಆಶೆಯಿದ್ದರೆ ಕೊಳದ ತಳದಲ್ಲಿ ಹುಡುಕಿ. ಅಲ್ಲೊಂದು ಬೆಳ್ಳಿಯ ಉಂಗುರ ಬಿದ್ದಿದೆ. ಅದನ್ನು ತಂದುಕೊಡಿ” ಎಂದು ಹೇಳಿತು. ಮೀನುಗಳು ಉಂಗುರವನ್ನು ಹುಡುಕಿ ತಂದು ನಾಯಿಗೆ ನೀಡಿದವು. ಅದನ್ನು ಯಜಮಾನನಿಗೆ ನಾಯಿ ತಲುಪಿಸಿತು.
ಬಂಟೂ ಉಂಗುರವನ್ನು ಕೈಯಲ್ಲಿ ಹಿಡಿದ. “”ಮಂತ್ರವಾದಿಯು ಸುಟ್ಟು ಬೂದಿಯಾಗಲಿ. ಅವನ ಜೊತೆಗಿರುವ ರಾಜಕುಮಾರಿಯು ಸುರಕ್ಷಿತವಾಗಿ ನನ್ನ ಬಳಿಗೆ ಬರಲಿ” ಎಂದು ಕೇಳಿಕೊಂಡ. ಅವನ ಕೋರಿಕೆ ನೆರವೇರಿತು. ರಾಜಕುಮಾರಿಯ ಜೊತೆಗೆ ತನ್ನ ಸಂಗಡಿಗರನ್ನೂ ಕೂಡಿಕೊಂಡು ಬಂಟೂ ಊರಿಗೆ ಮರಳಿ ಸುಖವಾಗಿ ಜೀವನ ಸಾಗಿಸಿದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.