ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ..!?
Team Udayavani, Jan 28, 2024, 12:29 PM IST
ಈ ಮೊಟ್ಟೆ ಒಂದು ರೀತಿ ರಾಜಕಾರಣಿಯಂತೆ, ಪ್ರತಿದಿನ ಮಾಧ್ಯಮದಲ್ಲಿ ಯಾವುದಾದರೊಂದು ರೀತಿ ಸದ್ದು ಮಾಡುತ್ತಲೇ ಇರುತ್ತದೆ. ಅಲ್ಲಿಗೆ ಇಲ್ಲಿಗೆ ಅಂತ ಸಾಕಷ್ಟು ಕಡೆ ರಾಜಾರೋಷವಾಗಿ ಪೂರೈಕೆಯಾಗುತ್ತ ತನ್ನ ಗತ್ತನ್ನು ಸದಾ ಕಾಯ್ದುಕೊಂಡಿರುತ್ತದೆ. 1996ರಿಂದ ಪ್ರತಿವರ್ಷ ಅಕ್ಟೋಬರ್ ಎರಡನೆಯ ಶುಕ್ರವಾರ “ಅಂತರಾಷ್ಟ್ರೀಯ ಮೊಟ್ಟೆ ದಿನ’ ಆಚರಿಸುತ್ತಾರೆ. ಕೋಳಿಗಿಲ್ಲದ ಭಾಗ್ಯ ಈ ಮೊಟ್ಟೆಗಿದೆ ನೋಡಿ!
ಕೋಳಿನಾ… ಮೊಟ್ಟೆನಾ…ಯೋಚಿಸಿ ನೋಡಿ. ಕೋಳಿಗಿಂತ ಮೊಟ್ಟೆಯೇ ಹೆಚ್ಚು ಫೇಮಸ್ ಎನ್ನಬಹುದು. ಕೋಳಿ ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವುದು ಕಡಿಮೆ. ಅಲ್ಲಿ ಇಲ್ಲಿ ತಿಪ್ಪೆ ಕೆದಕುತ್ತ, ಹುಳ ಹುಪ್ಪಟೆ ತಿಂದುಕೊಂಡು ಅರಾಮಾಗಿರುತ್ತವೆ. ಕಾವು ಕೊಟ್ಟು ಮರಿ ಮಾಡುತ್ತವೆ. ಆಗೀಗ ವೈರಸ್ ಅಟ್ಯಾಕ್ ಆಗಿ ಕೋಳಿಜ್ವರ ಅಂತ ಕಾಣಿಸಿಕೊಂಡು, ಪಾಪ ಅವುಗಳ ಮಾರಣಹೋಮ ನಡೆದುಹೋಗುತ್ತದೆ. ಇಲ್ಲದಿದ್ದರೆ ಪ್ರತಿದಿನ ಅದು ನೂರಾರು ಬಗೆಯ ತಿನಿಸುಗಳ ರೂಪದಲ್ಲಿ, ಮನುಷ್ಯರ ಹೊಟ್ಟೆಗೆ ಆಹಾರವಾಗುತ್ತಿರುತ್ತದೆ. ಅದನ್ನು ಬಿಟ್ಟರೆ ಮನುಷ್ಯ ಮನರಂಜನೆಗಾಗಿ ಕೋಳಿಗಳನ್ನು ಪರಸ್ಪರ ಜಗಳ ಮಾಡಿಸುವುದುಂಟು.
ಕೋಳಿ ಸಾಕುವುದಕ್ಕಿಂತ ಕೋಳಿ ಕಳ್ಳರಿಂದ ಅವುಗಳನ್ನು ಕಾಪಾಡಿಕೊಳ್ಳುವುದೇ ಫಜೀತಿ. ಇತ್ತೀಚೆಗೆ ಯಾವುದೋ ಶಾಲೆಯ ಮುಂದಿದ್ದ ಕೋಳಿ ಫಾರ್ಮ್ನಲ್ಲಿದ್ದ ಕೋಳಿಗಳು ಮಕ್ಕಳನ್ನು ಕುಕ್ಕಿ ಒಂದಿಷ್ಟು ಸದ್ದು ಮಾಡಿದವು. ಕೆಲ ದೇವಿ, ದೇವತೆಗಳ ಪೂಜೆಗೆ ಇವುಗಳ ಬಲಿ ಶ್ರೇಷ್ಠ ಎಂಬ ನಂಬಿಕೆಯಿದೆ. ಇಷ್ಟು ಬಿಟ್ಟರೆ ಕೋಳಿ ಹಿಂದಿನ ಕಾಲದವರ ಅಲಾರಾಂ ಆಗಿ ಅವರನ್ನು ಎಬ್ಬಿಸಲು ಸಹಾಯ ಮಾಡುತ್ತಿತ್ತು ಎನ್ನಬಹುದು.
ಆದರೂ ಕೋಳಿಯ ಬಗ್ಗೆ ಹೇಳುವ ಕಥೆಗಳನ್ನು ಕೇಳಿದರೆ, ಅಯ್ಯೋ ಎನಿಸುತ್ತದೆ. ಇಂದ್ರ ಕೋಳಿಯ ತರಹ ಕೂಗಿ ಗೌತಮ ಋಷಿಯನ್ನು ಆಶ್ರಮದಿಂದ ಹೊರಹೋಗುವಂತೆ ಮಾಡಿದ್ದು, ಬಂಗಾರದ ಮೊಟ್ಟೆ ಇಡುವ ಕೋಳಿಯನ್ನು ಅದರ ಮಾಲೀಕ ಅತಿಯಾಸೆಗೆ ಕೊಂದು ಹಾಕಿದ್ದು, ತನ್ನ ಕೋಳಿ ಕೂಗಿದರೇನೇ ಬೆಳಗಾಗುವುದು ಎಂದು ಮುದುಕಿಯೊಬ್ಬಳು ಅದನ್ನು ಹಿಡಿದುಕೊಂಡು ಕಾಡಿನಲ್ಲಿ ಅವಿತು ಕುಳಿತಿದ್ದು, ಎಲ್ಲ ಕಥೆಗಳಲ್ಲೂ ಬಲಿಪಶು ಕೋಳಿಯೇ. “ಕೋಳಿಯನ್ನು ಕೇಳಿ ಯಾರಾದರೂ ಮಸಾಲೆ ಅರೆಯುತ್ತಾರಾ’ ಎಂದು ಕೋಳಿಯನ್ನು ತುಂಬ ಕಡಿಮೆ ಅಂದಾಜು ಮಾಡುತ್ತಾರೆ.
ಆದರೆ ಈ ಮೊಟ್ಟೆ ಕಥೆ ಹಾಗಲ್ಲ. ಒಂದು ರೀತಿ ರಾಜಕಾರಣಿಯಂತೆ, ಪ್ರತಿದಿನ ಮಾಧ್ಯಮದಲ್ಲಿ ಯಾವುದಾದರೊಂದು ರೀತಿ ಸದ್ದು ಮಾಡುತ್ತಲೇ ಇರುತ್ತದೆ. ಅಲ್ಲಿಗೆ ಇಲ್ಲಿಗೆ ಅಂತ ಸಾಕಷ್ಟು ಕಡೆ ರಾಜಾರೋಷವಾಗಿ ಪೂರೈಕೆಯಾಗುತ್ತ ತನ್ನ ಗತ್ತನ್ನು ಸದಾ ಕಾಯ್ದುಕೊಂಡಿರುತ್ತದೆ. “ಮೊಟ್ಟೆ ಮೊದಲಾ? ಕೋಳಿ ಮೊದಲಾ?’ ಎನ್ನುವ ಚರ್ಚೆ ಒಮ್ಮೆ ಮುನ್ನೆಲೆಗೆ ಬಂದರೆ, ಮೊಟ್ಟೆ ಸಸ್ಯಹಾರಿಯಾ?, ಮಾಂಸಹಾರಿಯಾ? ಎಂದು ಮತ್ತೂಂದು ಕಡೆ ವಾದದಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ಕೆಲವೊಮ್ಮೆ ನಾಟಿ ಮೊಟ್ಟೆ, ಹೈಬ್ರಿಡ್ ಮೊಟ್ಟೆಗಳ ಪೌಷ್ಟಿಕಾಂಶದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಮೊಟ್ಟೆಯ ಹಳದಿ ಭಾಗ ಒಳ್ಳೆಯದಾ? ಬಿಳಿಯ ಭಾಗ ಒಳ್ಳೆಯದಾ? ಯಾವ ರೀತಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದರ ಬಗ್ಗೆ ಸಿಕ್ಕಾಪಟ್ಟೆ ಮಾಹಿತಿಗಳು ಪುಂಖಾನುಪುಂಖವಾಗಿ ಹರಿದಾಡುತ್ತಲೇ ಇರುತ್ತವೆ. ಅದೇನಾದರೂ ಆಗಿರಲಿ, ಒಟ್ಟಿನಲ್ಲಿ ಪ್ರಸಿದ್ಧಿಯ ಜೊತೆ ವಿವಾದ ಎನ್ನುವುದು ಇದನ್ನು ಸದಾ ಸುತ್ತುವರೆದಿರುತ್ತದೆ.
ಮೊಟ್ಟೆಗೂ ಅಂತಾರಾಷ್ಟ್ರೀಯ ದಿನ!
1996ರಿಂದ ಪ್ರತಿವರ್ಷ ಅಕ್ಟೋಬರ್ ಎರಡನೆಯ ಶುಕ್ರವಾರ “ಅಂತರಾಷ್ಟ್ರೀಯ ಮೊಟ್ಟೆ ದಿನ’ ಆಚರಿಸುತ್ತಾರೆ. ಕೋಳಿಗಿಲ್ಲದ ಭಾಗ್ಯ ಮೊಟ್ಟೆಗೆ ನೋಡಿ. ಅದಕ್ಕೆ ಥೀಮ್ ಕೂಡಾ ಇರುತ್ತದೆ. “ಎಗ್ ಗ್ಯಾಂಗ್’ ಅಂತ ಇನ್ಸ್ಟಾಗ್ರಾಂನಲ್ಲಿ ಪೇಜ್ ಕೂಡ ಇದೆ. ಇತ್ತೀಚೆಗೆ ಇದನ್ನು ತಿನ್ನುವವರು ಹೆಚ್ಚಾಗಿದ್ದಾರಂತೆ. ಇದೂ ಸಹ ಹತ್ತಾರು ವೆರೈಟಿ ತಿನಿಸುಗಳಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ಕೋಳಿ ಫಾರಂ ಹತ್ತಿರ ಇರುವ ಕಡೆ, ಕೆಲವರು ಕಡಿಮೆ ಬೆಲೆಗೆ ಸ್ವಲ್ಪ ಸಿಳುಕು ಬಿಟ್ಟಿರುವ ಮೊಟ್ಟೆಗಳನ್ನು “ಡ್ಯಾಮೇಜ್ ತತ್ತಿ’ ಎಂದು ತಂದು ಉಪಯೋಗಿಸುವುದಿದೆ. ಮನುಷ್ಯರಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿದ ಹಾಗೆ, ಮೊಟ್ಟೆಗಳಲ್ಲಿ ಬರೀ ಹೆಣ್ಣು ಮೊಟ್ಟೆಗಳನ್ನು ಉಳಿಸಿಕೊಂಡು, ಗಂಡು ಮೊಟ್ಟೆಗಳನ್ನು ಹುಡುಕಿ ಹುಡುಕಿ ನಾಶ ಮಾಡುವ ವಿಧಾನ ಕಂಡುಹಿಡಿಯುತ್ತಿದ್ದಾರಂತೆ!
ಕೆಲವು ಶ್ಯಾಂಪೂವಿನಲ್ಲೂ ಇದನ್ನು ಬಳಸುತ್ತಾರೆ. ಕೂದಲಿಗೆ, ಮುಖಕ್ಕೆ ಅಂತ ಮೊಟ್ಟೆಯ ಜೊತೆ ಏನೇನೋ ಸೇರಿಸಿ ಸೌಂದರ್ಯವರ್ಧಕವನ್ನಾಗಿ ಬಳಸುವುದಿದೆ.
ರಾಜಕಾರಣಿಗಳ ಭಾಷಣ ನಿಲ್ಲಿಸಲು ಕೊಳೆತ ಮೊಟ್ಟೆ ಹಾಗೂ ಟೊಮ್ಯಾಟೋ ಒಳ್ಳೆಯ ಕಾಂಬಿನೇಷನ್. ಹೋಳಿಯ ಹಬ್ಬದಲ್ಲಿ ಬಣ್ಣಗಳ ಎರಚಾಟದ ಜೊತೆಗೆ, ತಲೆಗಳ ಮೇಲೆ ಮೊಟ್ಟೆ ಒಡೆಯುವುದುಂಟು. ಕೆಲವೊಮ್ಮೆ ಹೈವೇಗಳಲ್ಲಿ ಕಾರು ನಿಲ್ಲಿಸಲು ಮೊಟ್ಟೆಯನ್ನು ಮುಂದಿನ ಗಾಜಿಗೆ ಒಡೆದು, ಅದು ವೈಪರ್‌ನಿಂದ ಹರಡಿ ಮಸುಕಾದ ನಂತರ ನಿಲ್ಲಿಸಲೇಬೇಕಾಗಿ ಬಂದಾಗ, ಕಳ್ಳರು ತಮ್ಮ ಕೈಚಳಕ ತೋರುವುದಿದೆ. ಗಂಡಸರ ಬೋಳಾಗಿರುವ ತಲೆಯನ್ನು ಮೊಟ್ಟೆಗೆ ಹೋಲಿಸುವುದರ ಜೊತೆಗೆ ಆ ಬಗ್ಗೆಯೇ “ಒಂದು ಮೊಟ್ಟೆಯ ಕಥೆ’ ಎನ್ನುವ ಸಿನೆಮಾ ಕೂಡಾ ಬಂದಿದೆ. ಫ್ರಿಡ್ಜ್ನಲ್ಲಿ ಯಾವ ಸಾಮಾನುಗಳಿಗೆ ಕೇರ್ ಮಾಡದಿದ್ದರೂ ಮೊಟ್ಟೆಗಳಿಗಾಗಿ ಮಾತ್ರ ವಿಶೇಷ ಜಾಗ್ರತೆ ವಹಿಸಿ, ಅವುಗಳನ್ನು ಇಡುವ ಸ್ಟ್ಯಾಂಡ್ ಕೊಟ್ಟೇ ಇರುತ್ತಾರೆ. “ಮೊಟ್ಟೆ ತಿಂದವರಿಗೆ ಹೊಟ್ಟೆ ಬರುವುದಿಲ್ಲ’ ಎನ್ನುವ ಮಾತೂ ಸಹ ಇದರ ಬೇಡಿಕೆ ಹೆಚ್ಚಲು ಕಾರಣವಿರಬಹುದು. ಇನ್ನು ಪಾಶ್ಚಾತ್ಯರ ತಿನಿಸಾದ ಕೇಕ್‌ಗೂ ಮೊಟ್ಟೆಗೂ ಬಿಡಿಸಲಾರದ ಸಂಬಂಧ. ಇತ್ತೀಚೆಗೆ ಮೊಟ್ಟೆ ರಹಿತ ಕೇಕುಗಳ ತಯಾರಿಕೆಯೂ ರೂಢಿಗೆ ಬಂದಿದೆ. ಇನ್ನೂ ಎಷ್ಟೋ ಅಡುಗೆ ಹಾಗೂ ಬೇಕರಿ ತಿನಿಸುಗಳಲ್ಲಿ ಮೆದುವಾಗಲು, ಗರಿಗರಿಯಾಗಲು, ಪದರು ಪದರಾಗಲು ಮೊಟ್ಟೆ ಬಳಕೆಯಾಗುತ್ತದೆ. ಗುರುವನ್ನು ಶಿಷ್ಯ ಮೀರಿಸಿದಂತೆ, ಮೊಟ್ಟೆ ಕೋಳಿಯನ್ನು ಮೀರಿಸಿದೆ ಎಂಬುವ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು ಬಿಡಿ.
-ನಳಿನಿ ಟಿ. ಭೀಮಪ್ಪ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.