Lakshmeesha tolpadi: ತೋಳ್ಪಾಡಿ ಎಂಬ ಬೆರಗು


Team Udayavani, Dec 24, 2023, 1:33 PM IST

Lakshmeesha tolpadi: ತೋಳ್ಪಾಡಿ ಎಂಬ ಬೆರಗು

ಲಕ್ಷ್ಮೀಶ ತೋಳ್ಪಾಡಿಯವರದು ವಿಶಿಷ್ಟ ಪ್ರತಿಭೆ. ಸಂಸ್ಕೃತ ಕಾವ್ಯ ಮೀಮಾಂಸೆಯ ಚೌಕಟ್ಟಿನಲ್ಲಿ ಅವರು ಕನ್ನಡ ಸಾಹಿತ್ಯವನ್ನೂ, ಕನ್ನಡ ಸಾಹಿತ್ಯದ ಓದಿನ ಗ್ರಹಿಕೆಯಲ್ಲಿ ಸಂಸ್ಕೃತ ಸಾಹಿತ್ಯವನ್ನೂ ವಿಶ್ಲೇಷಿಸಬಲ್ಲವರು. ಭೂತದ ಗಗ್ಗರದ ಕಿಣಿಕಿಣಿ ಸದ್ದಿಗೆ ತಾಳ ಹಾಕಬಲ್ಲ ಅವರು ಅದೇ ಕಾಲಕ್ಕೆ ವೈದಿಕ ಮಂತ್ರಗಳ ಲಯಗಳ ಬಗ್ಗೆ ಮಾತಾಡಬಲ್ಲರು. ಗಿಡದ ಚಿಗುರಲ್ಲಿ ಅವರಿಗೆ ಬೇಂದ್ರೆ ಕಂಡರೆ, ಹೆಮ್ಮರದಲ್ಲಿ ಕುವೆಂಪು ಕಾಣುತ್ತಿದ್ದರು. ಜಗತ್ತನ್ನು ಹೀಗೆ ಗ್ರಹಿಸಬಲ್ಲವರು ನಮ್ಮ ನಡುವೆ ಬಹಳ ಜನ ಇಲ್ಲ. ಚಿಕಿತ್ಸಕ ದೃಷ್ಟಿ, ಎಲ್ಲವನ್ನೂ ಒಳಗೊಳ್ಳಬಯಸುವ ಹೃದಯವಂತಿಕೆ, 20-21ನೇ ಶತಮಾನದ ದಾರ್ಶನಿಕತೆ – ಇತ್ಯಾದಿ ಗುಣಗಳಿಂದ ಪ್ರಸಿದ್ಧರಾಗಿರುವ ತೋಳ್ಪಾಡಿ ಅವರಿಗೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅದು ಅವರ ವಿದ್ವತ್ತಿಗೆ ಸಂದ ಗೌರವ.

“ಸರ್‌, ನಿಮ್ಮ ಒಳಗಡೆ ಕಾವ್ಯ ಹುಟ್ಟುವ ಬಗೆ ಹೇಗೆ?’ ನಿಜವಾಗಿಯೂ ಇದು ಕವಿಗಳಿಗೆ ಕೇಳಬಾರದ ಪ್ರಶ್ನೆ. ಅದು ಹುಟ್ಟು. ಪ್ರಕೃತಿ ಮೂಲ ಸಹಜ ಹೆರಿಗೆ. “ತರಂಗ’ದಲ್ಲಿ ಸಂದರ್ಶನದೊಂದಿಗೆ ವಿಶೇಷವಾಗಿ ಪ್ರಕಟಿಸಲು  ಆಗ ತಾನೆ ಬರೆದ ತಾಜಾ ಕವಿತೆಯೊಂದನ್ನು ಕೈಗಿತ್ತ ಹರಿ ಚರಿತೆಯ – ಆಧ್ಯಾತ್ಮ ಕವಿ ಪುತಿನ ಅವರಿಗೆ ನಾನು ಕೇಳಿದ ಅಧಿಕ ಪ್ರಸಂಗದ ಪ್ರಶ್ನೆಯಿದು. ಪತ್ರಕರ್ತನೆಂಬ ಭಂಡ ಧೈರ್ಯದಿಂದಲೇ ಪುತಿನ ಅವರಿಗೆ ಅಂದು ಈ ಪ್ರಶ್ನೆ ಕೇಳಿದ್ದೆ.

“ನೀವು ಮಂಗಳೂರಿನವರಲ್ವಾ? ಕಡಲು ನೋಡಿದ್ದೀರಾ? ಕಡಲ ಕಡೆಯಿಂದ ಬರುವ ಸದ್ದು ಕೇಳಿದ್ದೀರಾ?’ ಪುತಿನ ಮೇಲಿಂದ ಮೇಲೆ ನನ್ನನ್ನೇ ದುರುಗುಟ್ಟಿ ನೋಡಿದರು. “ಹೌದು. ಅದು ಅಲೆಯ ಸದ್ದು, ತೆರೆಯ ಸದ್ದು’ ಎಂದಿದ್ದೆ.

ಪುತಿನ “ಅದು ಅಲೆಯ ಸದ್ದೂ ಅಲ್ಲ, ತೆರೆಯ ಸದ್ದೂ ಅಲ್ಲ; ತೆರೆಯ ಆಳದಲ್ಲಿ ಚಲಿಸುವ ಮರಳಿನ ಸದ್ದು’ ಎಂದಿದ್ದರು!.

ಒಬ್ಬ ಕವಿಯ ಒಳಗಡೆ ಇರುವ ಬೌದ್ಧಿಕ ಚಕ್ರಸುಳಿ ಇದು. ಅನೇಕ ಜನ ಬಾಯಿಂದ ಮಾತನಾಡುತ್ತಾರೆ ಮತ್ತು ಬಾಯಿಂದಲೇ ಬರೆಯುತ್ತಾರೆ. ಇನ್ನೆಷ್ಟೋ ಜನ ಹೃದಯದಿಂದ ಬರೆಯುತ್ತಾರೆ. ಹೃದಯದಿಂದಲೇ ಮಾತನಾಡುತ್ತಾರೆ. ಆದರೆ ಮನಗೂಢ ಚಕ್ರಸುಳಿಯಿಂದ ಪದರ ಪದರವಾಗಿ ಬುದ್ಧಿಯನ್ನು  ತೆರೆದಿಡುವುದೆಂದರೆ ಅದೊಂದು ಧ್ಯಾನಸ್ಥ ಮನಸ್ಥಿತಿಯೇ ಸರಿ. ಬರೆಯುವ – ಮಾತನಾಡುವ ಮತ್ತು ಭಾಗಶಃ ಬದುಕುವ ಎಲ್ಲಾ ಕ್ರಿಯೆಗಳಲ್ಲಿ ಈ ಒಳಗಡೆಯ ಸೃಜನ ಬುದ್ಧಿ ಸುಳಿಯಿಂದಲೇ ಕಾಣಿಸುವ ಅಪರೂಪದ ವ್ಯಕ್ತಿ ಲಕ್ಷ್ಮೀಶ ತೋಳ್ಪಾಡಿ.

ಉಪನ್ಯಾಸ:

ಉಪ ಎಂದರೆ ಹತ್ತಿರ; ನ್ಯಾಸ ಎಂದರೆ ಇಡುವುದು ಎಂದರ್ಥ. ಲಕ್ಷ್ಮೀಶ ತೋಳ್ಪಾಡಿಯವರ ಉಪ-ನ್ಯಾಸ ಜಿನುಗಬೇಕಾದರೆ ಅದಕ್ಕೊಂದು ಮಾನಸಿಕ ತಯಾರಿ ಬೇಕು. ಸ್ವಲ್ಪ ಜಾರಿದ್ರು ಸಾಕು, ವಿಷಯ ಇನ್ನೊಂದು ಕಡೆಗೆ ಸಾಗುತ್ತದೆ. ದೂರ ಸರಿದಷ್ಟು ನಮ್ಮ ಪಾಲಿಗೆ ಅದು ಮರಳು ಹಿಂಡಿ ಎಣ್ಣೆ ತೆಗೆಯುವಷ್ಟೇ ಕಷ್ಟವಾಗಿ ಪರಿಣಮಿಸುತ್ತದೆ.

ಪುಸ್ತಕ ಪ್ರಕಟಣೆ, ಬಿಡುಗಡೆ, ವಿಚಾರಗೋಷ್ಠಿ, ಉಪನ್ಯಾಸ, ಆಧ್ಯಾತ್ಮ ಪ್ರವಚನ ಮಾಲಿಕೆ… ಹೇಗೆ ಅನೇಕ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಂಡ ಅಪರೂಪದ ಸಂಸ್ಥೆ ಪುತ್ತೂರಿನ “ಕರ್ನಾಟಕ ಸಂಘ’ ಈ ಸಂಘದಲ್ಲಿ ಈ ಮೇಲಿನ ಕಾರ್ಯಕ್ರಮಗಳದ್ದು ಒಂದು ತೂಕವಾದರೆ; ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರಿಂದ ನಿರಂತರ ಉಪನ್ಯಾಸ ಮಾಲಿಕೆಯನ್ನು ಏರ್ಪಡಿಸಿದ್ದು ಮತ್ತೂಂದು ತೂಕ. ಆದರೆ ಈ ಕಾರ್ಯಕ್ರಮಗಳೆಲ್ಲ ದಾಖಲಾಗದೆ ಪುಸ್ತಕ ರೂಪದಲ್ಲಿ ಪ್ರಕಟವಾಗದೆ ಇದ್ದದ್ದು ಅಷ್ಟೇ ದೊಡ್ಡ ಲೋಪ. ಒಂದು ವೇಳೆ ಆ ಉಪನ್ಯಾಸ ಮಾಲಿಕೆ ಪ್ರಕಟವಾಗುತ್ತಿದ್ದರೆ ಇವತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ “ಮಹಾಭಾರತ ಅನುಸಂಧಾನದ – ಭಾರತ ಯಾತ್ರೆ’ ಪುಸ್ತಕಕ್ಕಿಂತ ಹೆಚ್ಚು ಮೌಲ್ಯದ ಚಿಂತನಾರ್ಹ ಕೃತಿಸರಣಿ ಕನ್ನಡಕ್ಕೆ ಒದಗುತ್ತಿತ್ತು.

ಹೊಳಹು -ಹೊಳೆಯುವುದು ಇವೆಲ್ಲ ಸೃಜನ ಶಕ್ತಿಯ ಸಾಧ್ಯತೆಗಳು. ಈ ಅಗಾಧ ಬುದ್ಧಿಚಿಲುಮೆಯ ಸಾಧ್ಯತೆ, ಸಂಭ್ರಮ, ಬೆರಗನ್ನು ಗಮನಿಸಬೇಕಾದರೆ ಲಕ್ಷ್ಮೀಶರ ಒಂದಾದರೂ ಉಪನ್ಯಾಸ ಕೇಳಬೇಕು. “ಸಾಹಿತ್ಯ ಎಂಬುವುದು ಪ್ರತಿಪಾದನೆಯಲ್ಲ. ಅದು ಹಕ್ಕು ಸ್ಥಾಪನೆಯೂ ಅಲ್ಲ. ಹಾಗೊಮ್ಮೆ ಅದು ಆಗಿ ಹೋದರೆ ಅಲ್ಲಿ ರಸದ ಪ್ರಶ್ನೆ ಇರಲಾರದು’ ಎನ್ನುವ ಲಕ್ಷ್ಮೀಶರು, “ಏಕಾಗ್ರತೆ ಸಾಹಿತ್ಯಕ್ಕೆ ಹೇಗೆ ಬೇಕೋ ಹಾಗೆಯೇ ಅದಕ್ಕಿಂತ ಹೆಚ್ಚು ಅನ್ಯ ಮನಸ್ಕತೆ ಬೇಕು. ಆಗ ಮಾತ್ರ ಹೊಸ ಹೊಳಹು ಸಾಧ್ಯ’ ಎನ್ನುತ್ತಾರೆ.

ಲಕ್ಷ್ಮೀಶರ ಹುಟ್ಟು ಸೃಜನಶೀಲತೆ ಮೇಳೈಸುವ ದಾರಿಯಲ್ಲಿ ಅವರೇ ಸೃಷ್ಟಿಸಿಕೊಂಡ ಒಂದು ಅರಾಜಕತೆ ಇದೆ. ಯಾವುದೇ ಉಪನ್ಯಾಸಕ್ಕೆ ಅವರು ಮೊದಲೇ ತಯಾರಿ ಮಾಡಿಕೊಂಡು ಬಂದ, ಟಿಪ್ಪಣಿ ಬರೆದಿಟ್ಟುಕೊಂಡು ಬಂದ ಒಂದೇ ಒಂದು ದೃಷ್ಟಾಂತವನ್ನು ನಾನು ನೋಡಿಲ್ಲ. ವಸ್ತು ವಿಷಯವನ್ನು ಬೆಳೆಸಿ, ಬೆಳೆಸಿ ಆಶುನೆಲೆಯಲ್ಲಿ ವಿಸ್ತರಿಸುವ ತೋಳ್ಪಾಡಿ ಚಿಂತನ ಕ್ರಮಕ್ಕೆ  ಬೇರೆ ಸಾಟಿ ಇಲ್ಲ. ಅವರ ಮಾತು – ಮಾತು ನಿಲ್ಲಿಸಿ ಪದಗಳ ನಡುವೆ ಸೃಷ್ಟಿಯಾಗುವ ಮೌನಕ್ಕೂ ಒಂದು ಅರ್ಥವಿದೆ.

ಬರೀ ಅಧ್ಯಾತ್ಮವಲ್ಲ !:

ಬದುಕನ್ನು ಯಾವುದೇ ಪ್ರಶ್ನೆಗಳಿಲ್ಲದೆ ಕಗ್ಗಂಟು ಮಾಡದೆಯೇ ಸರಳವಾಗಿ ಬದುಕುವ ನನ್ನಂಥ ಸೋಮಾರಿಗಳಿಗೆ ತತ್ವ ಸಿದ್ಧಾಂತ ಆಧ್ಯಾತ್ಮಗಳೆಲ್ಲ ಸಹಜವಾಗಿ ಕಷ್ಟವೇ. ಆದರೆ ಒಂದೇ ಒಂದು ಸಲ ತೋಳ್ಪಾಡಿಯವರ ಉಪನ್ಯಾಸ ಕೇಳಿದರೆ, ಈ ಮೇಲಿನ ಎಲ್ಲಾ ಶಾಸ್ತ್ರ ತರಗತಿಯೊಳಗಡೆ ಕೂರುವ ಯಾವ ಅಗತ್ಯವೂ ಇಲ್ಲ. ಹಾಗಂತ ಲಕ್ಷ್ಮೀಶರು ಬರೀ ಪುರಾಣ ಆಧ್ಯಾತ್ಮ ತತ್ವ ಸಿದ್ಧಾಂತಗಳಿಗಷ್ಟೇ ಅಂಟಿಕೊಂಡವರಲ್ಲ. ಮಾರ್ಕ್ಸ್ವಾದ,  ಅಂಬೇಡ್ಕರ್‌ ಚಿಂತನೆ, ಗಾಂಧಿವಾದ, ಸಮಾಜವಾದ… ಎಲ್ಲವೂ ಅವರಿಗೆ ಬೇಕು. ಅಡಿಗ, ಲಂಕೇಶ, ತೇಜಸ್ವಿ, ಕಾರಂತ, ಕೀರಂ ನಾಗರಾಜ್‌ ಎಲ್ಲರೊಂದಿಗೂ ತೂರಿಕೊಂಡು ಶೋಧಿಸುವ ಬಹುದೊಡ್ಡ ಚಿಂತನಾ ಕ್ರಮ ಲಕ್ಷ್ಮೀಶರದ್ದು.

ಕೃಷಿಕರೂ ಹೌದು:

ಮೂಲತಃ ಲಕ್ಷ್ಮೀಶರದ್ದು ಕೃಷಿ ಕುಟುಂಬ. ಹಿರಿಯರು ಕೃಷಿಕರೇ. ಅಪ್ಪ-ಮಗ ಒಂದು ಕಾಲದಲ್ಲಿ ಸುಭಾಸ್‌ ಪಾಳೇಕಾರರನ್ನು ಓದಿ, ನೋಡಿ ಶೂನ್ಯ ನೈಸರ್ಗಿಕ ಕೃಷಿಯನ್ನು ತಮ್ಮ ಗದ್ದೆಯಲ್ಲೇ ಪ್ರಯೋಗಿ­ಸಿದವರು. ತೆಂಗು-ಕಂಗುಗಳ ಬುಡ ಬಿಡಿಸಿ ಬೇರಿಗೆ ಉಸಿರಾಡಲು ಅನುಕೂಲ ಮಾಡಿಕೊಟ್ಟ ಸೂಫಿ ಬ್ಯಾರಿಯ ಕೃಷಿ ಪ್ರಯೋಗ – ಪ್ರಭಾವಕ್ಕೆ ಒಳಗಾದವರು.

ನಾನೂ ಕೃಷಿಕನೇ. ಈ ಸಮಾನಾಂತರ ದಾರಿಯಲ್ಲಿ ಒಮ್ಮೆಯಾದರೂ ಅವರ ತೋಟಕ್ಕಿಳಿದು ಗದ್ದೆಯ ಬದುವಿನಲ್ಲಿ ಅವರ ಬೆನ್ನಿಗೆ ನಿಂತು ಮೌನವಾಗಿ ಒಂದಷ್ಟು ದೂರ ಸಾಗಿ ಕೆಸರಿಗೆ ಕಾಲಿಟ್ಟು ಅವರನ್ನು ಬಗೆಯಬೇಕೆಂದು ನಾನೆಷ್ಟೋ ಬಾರಿ ಭಾವಿಸಿದ್ದುಂಟು. ಸಾಹಿತಿ, ಚಿಂತಕ, ಆದ್ಯಾತ್ಮ ಜೀವಿಯೊಬ್ಬ ಕೃಷಿಕನಾಗಿ ಬದುಕುವುದಿದೆಯಲ್ಲ ಅಲ್ಲಿರುವ ಪರಮ ಸುಖ ಮತ್ತು ಸಾಧ್ಯತೆಯನ್ನು ತೆರೆದಿಡಬೇಕೆಂದು ಬಯಸಿದ್ದುಂಟು.

ನನ್ನ ದುರಾದೃಷ್ಟವೂ ಏನೋ. ಹಾಗೆ ಯೋಚಿಸುವಾಗಲೆಲ್ಲ, ವೇದಿಕೆಯ ಗೋಷ್ಠಿಯ ಚಿಂತನೆಯ ಗಡ್ಡ ಬಿಟ್ಟ ಪರಮ ಸಂತನಾಗಿ ಕಾಣಿಸುವ ಆ ಲಕ್ಷ್ಮೀಶರ ಮುಖವೇ ನೆನಪಾಗಿ ಅವರೊಂದಿಗೆ ನನ್ನ ಸಾಮಾನ್ಯ ಸರಳ ಕೃಷಿ ಭಾಷೆ ಎಲ್ಲಿ ಸೋತು ಹೋಗುತ್ತೋ ಎಂದು ಒಳಗೊಳಗೆ ಆತಂಕ ಪಡುವುದುಂಟು. ಆ ಕಾರಣಕ್ಕಾಗಿ ಕೃಷಿಕ ಲಕ್ಷ್ಮೀಶರು ನನಗಿನ್ನೂ ದಕ್ಕದ ನಿಧಿಯೇ ಆಗಿದ್ದಾರೆ.

ಆಗಾಗ ಪುತ್ತೂರು ಪೇಟೆಯಲ್ಲಿ ಖಾದಿ ಜುಬ್ಬ, ಸೊಗಸಾದ ಬಿಳಿಕಪ್ಪು ಗಡ್ಡ ಲೇಪಿತ ಕೋಲು ಮುಖ, ತೇಜಸ್ಸು ಸೂಸುವ ತೀಕ್ಷ್ಣ ಕಣ್ಣುಗಳು, ಹೆಗಲ ಮೇಲೊಂದು ಚೀಲ, ಸುತ್ತಿದ ಬಿಳಿ ಪಂಚೆಯ ಅಂಚನ್ನು ಎಡಗೈಯಲ್ಲೊಮ್ಮೆ ಬಲಗೈಯಲೊಮ್ಮೆ ಮೇಲೆತ್ತಿ ಹದವಾಗಿ ನಡೆದು ಬರುವ ಈ ಆಧ್ಯಾತ್ಮ ಜೀವಿ ಎಲ್ಲಿ ಈ ಭೌತಿಕ ಜಗತ್ತಿನಿಂದ ಕಳೆದು ಹೋಗುತ್ತಾರೋ ಎಂದು ಮರೆಯಲ್ಲಿ ನಿಂತು ಯೋಚಿಸಿದ್ದುಂಟು.

ಪ್ರಶಸ್ತಿಗಳ ಹಂಗಿಲ್ಲದ ನಿರ್ಲಿಪ್ತ ಜೀವ-ಜೀವನ:

ಪಂಪ ಪ್ರಶಸ್ತಿಗಾಗಿ ಪಂಪನು “ಪಂಪ ಭಾರತ’ವನ್ನು ಬರೆದವನಲ್ಲ. ಕುಮಾರ ವ್ಯಾಸನ ಕಾಲದಲ್ಲಿ “ಜ್ಞಾನಪೀಠ’ವಿರಲಿಲ್ಲ. ರನ್ನನಿಗೆ “ಕರ್ನಾಟಕ ರತ್ನ’ ಗೊತ್ತೇ ಇಲ್ಲ. ಬರೆಯುವ ಸಾಹಿತ್ಯಕ್ಕೆಲ್ಲ ಪ್ರಶಸ್ತಿಗಳು ಬರಬೇಕು; ಪ್ರಶಸ್ತಿಗಳಿಗಾಗಿಯೇ ಬರೆಯಬೇಕು ಎಂಬ ಜಾಯಮಾನದವರು ತೋಳ್ಪಾಡಿಯವರಲ್ಲ. ಈ ಕಾರಣಕ್ಕಾಗಿ “ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪ್ರಕಟವಾದಾಗ ಅವರಿಗೆ ಸಂತೋಷವಾಗಿರುವುದಕ್ಕಿಂತ, ಹೆಚ್ಚು ಅವರ ಓದುಗರಿಗೆ ಕೇಳುಗರಿಗೆ ನಿಜಾರ್ಥದಲ್ಲಿ ಸಂಭ್ರಮವಾಗಿದೆ. ನವ ಮಾಧ್ಯಮಗಳಲ್ಲಿ ಅವರ ಅನೇಕ ಅಭಿಮಾನಿಗಳು ಅಭಿನಂದನೆ ಸೂಚಿಸಿದ ವ್ಯಕ್ತಪಡಿಸಿದ ಕ್ರಮದಲ್ಲಿ ಅದು ವೇದ್ಯವಾಗುತ್ತದೆ.

ಮಾತಿನ ಮಾಧ್ಯಮ ಬರವಣಿಗೆಯಷ್ಟು ಖಾಯಂ ಅಲ್ಲದಿದ್ದರೂ ಹೆಚ್ಚು ಸುಖ-ಪರಿಣಾಮಕಾರಿ ಎಂಬುವುದು ತೋಳ್ಪಾಡಿಗೆ ಚೆನ್ನಾಗಿ ಗೊತ್ತು. ಬರೆಯುವ ಸುಖಕ್ಕಿಂತ ಬರೆದಿರುವ ಸುಖವನ್ನು ಹೆಚ್ಚು ಅನುಭವಿಸುವವರು ತೋಳ್ಪಾಡಿಯವರು. ಅವರು ಮಾತನಾಡಿರೆಲ್ಲ ಅಕ್ಷರ ರೂಪ ಪಡೆಯುತ್ತಿದ್ದರೆ, ಇಷ್ಟು ಹೊತ್ತಿಗೆ  ದೊಡ್ಡ ಲೇಖಕರಾಗಿ ಭಾರತೀಯ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರಾಗುತ್ತಿದರು. ಪ್ರಶಸ್ತಿಗಳು ಯಾವಾಗಲೂ ಹೀಗೆಯೇ ಬರಬೇಕು. ಕೃತಿಕಾರ ಬರೆದ ಕೃತಿಯನ್ನು ಮರೆಯುವ ಹೊತ್ತಿಗೆ ಅದು ಲಭ್ಯವಾಗಬೇಕು. ಹಾಗೆ ನೋಡಿದರೆ ತೋಳ್ಪಾಡಿ ಪ್ರಶಸ್ತಿಗಳನ್ನು ಮರೆಯುವವರೇ. ಅವರಿಗೆ ಬಹುಮಾನಗಳ ಹಂಗಿಲ್ಲ. ನಿರ್ಲಿಪ್ತ ಜೀವ – ಜೀವನ.

ತೋಳ್ಪಾಡಿ ನಡೆದು ಬಂದ ದಾರಿ :

1947ರ ಸೆಪ್ಟೆಂಬರ್‌ 12ರಂದು ಹುಟ್ಟಿದವರು ಲಕ್ಷ್ಮೀಶರು. ಪುತ್ತೂರಿನ ಬೋರ್ಡ್‌ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ. ಒಂದಷ್ಟು ಸಮಯ ಮಠ-ಸ್ವಾಮಿ ಸಖ್ಯ. ಹಾಡುವ ಸ್ವಾಮಿ ಎಂದೇ ಖ್ಯಾತರಾದ ವಿದ್ಯಾಭೂಷಣರು ಮತ್ತು ಪೇಜಾವರ ಸ್ವಾಮಿಗಳ ಮೂಲಕ ಸಂಸ್ಕೃತ -ವೇದಾಂತ ಅಧ್ಯಯನ.

ಲಕ್ಷ್ಮೀಶ ತೋಳ್ಪಾಡಿ ಅವರು ಈವರೆಗೆ ಹತ್ತಾರು ಕೃತಿಗಳನ್ನು ಬರೆದಿದ್ದಾರೆ. ಭಗವದ್ಗೀತೆಯ ಕುರಿತು ಬರೆದ ಟಿಪ್ಪಣಿ – “ಮಹಾಯುದ್ಧಕ್ಕೆ ಮುನ್ನ’, ಅಂತರ್ಜಾಲ ಮಾಧ್ಯಮಕ್ಕೆ ಬರೆದ “ಸಂಪಿಗೆ ಭಾಗವತ’, “ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ’, “ಆನಂದ ಲಹರಿ’, “ಭವತಲ್ಲಣ’, “ಭಕ್ತಿಯ ನೆಪದಲ್ಲಿ’, “ಮಹಾಭಾರತ ಅನುಸಂಧಾನದ – ಭಾರತ ಯಾತ್ರೆ’, “ಮಾತಿಗೆ ಮುನ್ನ’ … ಮುಂತಾದವು ಅವರ ಪ್ರಮುಖ ಕೃತಿಗಳು.

ಪುತ್ತೂರಿನ ಅನುರಾಗ ವಠಾರದ ಅಟ್ಟದಲ್ಲಿ ಅನೇಕ ವರ್ಷಗಳಿಂದ ಅವರು ನಡೆಸಿದ “ಭಗವದ್ಗೀತೆ’, “ರಾಮಾಯಣ’, “ಮಹಾಭಾರತ’, “ಭಾಗವತ’, “ವೇದ’, “ವಚನ ಸಾಹಿತ್ಯ’ ಪ್ರವಚನ ಮಾಲಿಕೆ ನೆನಪಿಡುವಂತದ್ದು. ದೇಶದ ಅನೇಕ ಪ್ರಮುಖ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಾ ಬಂದ ಲಕ್ಷ್ಮೀಶರು 2018ರಲ್ಲಿ ಅಮೆರಿಕದ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿದ್ದಲ್ಲದೆ, ಆ ದೇಶದ ಬೋಸ್ಟನ್‌, ನ್ಯೂಜೆರ್ಸಿ, ಚಿಕಾಗೋ, ಲಾಸ್‌ ಎಂಜಲೀಸ್‌… ಮುಂತಾದ ಕಡೆ ಕೂಡ ಪ್ರವಚನಗಳನ್ನು ನೀಡಿದ್ದಾರೆ.

ಲಕ್ಷ್ಮೀಶರಿಗೆ “ಪೊಳಲಿ ಶಾಸ್ತ್ರಿ ಪ್ರಶಸ್ತಿ’, “ಕಡವ ಶಂಬು ಶರ್ಮ ಪ್ರಶಸ್ತಿ’, “ಕಾಂತಾವರ ಸಾಹಿತ್ಯ ಪುರಸ್ಕಾರ’, “ರಾಮ ವಿಠಲ ಪ್ರಶಸ್ತಿ’, “ರಮಾ ಗೋವಿಂದ ಪುರಸ್ಕಾರ’, “ಅರಣ್ಯ ಮಿತ್ರ’ ಪ್ರಶಸ್ತಿ, “ಭಾರತ ಪುರಸ್ಕಾರ’ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಪತ್ನಿ ವಿಜಯಲಕ್ಷ್ಮೀ. ಮಗ ಪರೀಕ್ಷಿತ. ಮಗಳು ಮಾಳವಿಕ – ಸಂತೋಷದ ಕುಟುಂಬ ಲಕ್ಷ್ಮೀಶ ತೋಳ್ಪಾಡಿ ಅವರದ್ದು.

ಹೋರಾಟಗಾರ, ಯಕ್ಷಗಾನ ಅರ್ಥಧಾರಿ :

ನಿಮಗೆ ಗೊತ್ತಿಲ್ಲದಷ್ಟು ಈ ಲಕ್ಷ್ಮೀಶರು ವಾಸ್ತವ ವಾದಿಗಳು. ಲೋಕ ಕಂಟಕರ ವಿರುದ್ಧ ನಿರಂತರ ಸಮರ ಸಾರುವ, ಊರಿಗೆ ಅಣೆಕಟ್ಟು ಬಂದು ರೈತರಿಗೆ ತೊಂದರೆಯಾಗುವಾಗ ಪ್ರಭುತ್ವದ ವಿರುದ್ಧ ಸಂಘಟಿಸಿ ಹೋರಾಟಕ್ಕಿಳಿಯುವ, ಪಶ್ಚಿಮಘಟ್ಟ ಉಳಿಸಿ, ಪರಿಸರ-ರೈತಪರ ನಾಗರಿಕ ಹಕ್ಕುಗಳ ಈಡೇರಿಕೆಗಾಗಿ ಹಕ್ಕೊತ್ತಾಯ, 1995-96ರಲ್ಲಿ “ಕುಮಾರಧಾರ ಉಳಿಸಿ’ ಆಂದೋಲನದಲ್ಲಿ ಭಾಗಿಯಾದ ಛಾತಿ ಇವರದು.  ದಶಕ ಕಾಲ ಭಾರತೀಯ ಕಿಸಾನ್‌ ಸಂಘದ ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯ ರಾಗಿದ್ದವರು. ಯಕ್ಷಗಾನ ಕ್ಷೇತ್ರದಲ್ಲೂ ಪ್ರಮುಖ ಅರ್ಥಧಾರಿಗಳಾಗಿ ಕಾಣಿಸಿಕೊಂಡವರು. ದೇರಾಜೆ, ಶೇಣಿ ಗೋಪಾಲಕೃಷ್ಣ ಭಟ್ಟರಂತಹ ಮೇರು ಅರ್ಥಧಾರಿಗಳ ಒಡನಾಟ ಹೊಂದಿದವರು. “ನಾನು ನಾನಲ್ಲ’ ಖ್ಯಾತಿಯ ನೆಟ್ಟಾರು ಅಜ್ಜನ ಒಡನಾಟವೂ ಇವರಿಗೆ ಇತ್ತು.

-ನರೇಂದ್ರ ರೈ ದೇರ್ಲ

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.