Special Article: ಸಾರಸ್ವತ ಲೋಕದ ಅಪರೂಪದ ಬೆಳಕು…

ಉದಯೋನ್ಮುಖ ಗೆಳೆಯ ದಿವಾಕರ

Team Udayavani, Nov 26, 2023, 12:44 PM IST

Special Article: ಸಾರಸ್ವತ ಲೋಕದ ಅಪರೂಪದ ಬೆಳಕು…

ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನ, ಖ್ಯಾತ ಕಥೆಗಾರ ಎಸ್‌. ದಿವಾಕರ್‌ ಈಗ 80ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆಡಂಬರವಿಲ್ಲದೆ, ಪ್ರಚಾರ-ಪ್ರಶಂಸೆಗಳೆಲ್ಲದರಿಂದ ದೂರವಿದ್ದು, ಇಂದಿಗೂ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿರುವ ಹೆಗ್ಗಳಿಕೆ ಎಸ್‌. ದಿವಾಕರ್‌ ಅವರದ್ದು. ಅದೆಷ್ಟೋ ಯುವ ಪ್ರತಿಭೆಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿರುವ ಎಸ್‌. ದಿವಾಕರ್‌ ಅವರೊಂದಿಗೆ ಆತ್ಮೀಯ ಓಡನಾಟ ಹೊಂದಿರುವ ನರೇಂದ್ರ ಪೈ, ತಮ್ಮ ಲೇಖನದ ಮೂಲಕ ಎಸ್‌. ದಿವಾಕರ್‌ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ನಮ್ಮ ಕತೆ, ಕವಿತೆಗಳಿಂದ ಅದರ ಕಂಟೆಂಟ್‌ ತೆಗೆದು ಬಿಟ್ರೆ ಏನು ಉಳಿಯುತ್ತೆ?’ ಇದು ಮಂಗಳೂರಿನ ಹಾದಿಯಲ್ಲಿ ಜನ, ವಾಹನಗಳ ಸಂದುಗೊಂದಲಲ್ಲಿ ತೂರಿಕೊಂಡು ಸಾಗುತ್ತಿದ್ದಾಗ, ಎಸ್‌. ದಿವಾಕರ್‌ ನಮಗೆ ಕೇಳಿದ ಪ್ರಶ್ನೆ. ಕಂಟೆಂಟ್‌ ತೆಗೆದುಬಿಟ್ಟರೆ ಬರೀ ಫಾರ್ಮ್ ಉಳಿದುಕೊಳ್ಳಬೇಕು. ಆದರೆ ಕಂಟೆಂಟೇ ಇಲ್ಲದೆ ಅದನ್ನು ಕಾಣುವುದು ಹೇಗೆ? ಇದು ಸಂಗೀತ ಹೇಗೆ ಪ್ಯೂರ್‌ ಆರ್ಟ್‌ ಎನ್ನುವುದನ್ನು ವಿವರಿಸುವ ಮುನ್ನ ದಿವಾಕರ್‌ ಹಾಕಿದ ಪೀಠಿಕೆ. ಸಂಗೀತಕ್ಕೆ ಒಂದು ಪಠ್ಯದ ಅಗತ್ಯವಿಲ್ಲ, ರಾಗವೊಂದು ಯಾವ ಲಿರಿಕ್ಕುಗಳಿಲ್ಲದೆ ನಿಲ್ಲಬಲ್ಲದು. ಆದರೆ ಸಾಹಿತ್ಯ? ಅದರ ಫಾರ್ಮೆಟ್‌ ಕಾಣಲು ಕಂಟೆಂಟ್‌ ಬೇಕೇ ಬೇಕು, ಅಥವಾ ಅದಿಲ್ಲದೇನೆ ಕಾಣಲು ಸಾಧ್ಯವಿದೆಯೆ ನಮಗೆ?

ಎಸ್‌. ದಿವಾಕರ್‌ ಅವರಿಗೆ ಸಾಹಿತ್ಯ, ಓದು, ಬರವಣಿಗೆ, ಅನುವಾದ, ಸಾಹಿತಿ ಮಿತ್ರರೊಂದಿಗಿನ ಸಂವಾದ ಪ್ರತಿಯೊಂದೂ ಬದುಕಿನ ಪ್ಯಾಶನ್‌. ಅದು ಅವರ ಉಸಿರು, ಬದುಕಿನಷ್ಟೇ ಮುಖ್ಯವಾದದ್ದು. ಹಾಗಾಗಿಯೇ ಅವರ ಸಾನ್ನಿಧ್ಯ, ಸಾಮೀಪ್ಯ ಮತ್ತು ಸಾಂಗತ್ಯ ಸದಾ ಕಾಲ ಹೊಸತನ್ನು, ಅನಿರೀಕ್ಷಿತವಾದದ್ದನ್ನು ಕಾಣಿಸುತ್ತಿರುತ್ತದೆ, ಕಲಿಸುತ್ತಿರುತ್ತದೆ.

ಇಂಗ್ಲೀಷಿನಲ್ಲಿ Anti & Stories ಎಂಬ ಒಂದು ಪರಿಕಲ್ಪನೆಯಡಿ ಬಂದ ಕಥಾಸಂಕಲನಗಳಿವೆ. ಅಂಥದ್ದನ್ನು ಕನ್ನಡದಲ್ಲಿ ತರಲು ಹೊರಟಿದ್ದರು ದಿವಾಕರ್‌. ನಮ್ಮ ಹಲವು ಕತೆಗಾರರಿಗೆ ಇಂಥ ಒಂದು ಪಂಥಾಹ್ವಾನವನ್ನಿತ್ತು ಕತೆ ಬರೆಯಲು ಕೇಳಿಕೊಂಡಿದ್ದರು. ಪ್ರಯೋಗಶೀಲತೆ ಇಲ್ಲದೇ ಹೋದರೆ ಒಂದು ಪ್ರಕಾರ, ಒಂದು ಭಾಷೆಯ ಸಾಹಿತ್ಯ ನಿಂತ ನೀರಾಗಿ ಬಿಡುತ್ತದೆ ಎನ್ನುವ ದಿವಾಕರರ ಕಳಕಳಿಗೆ ಅವರದೇ ನೆಲೆಯಲ್ಲಿ, ವೇಗದಲ್ಲಿ ಸ್ಪಂದಿಸಿ, ಜೊತೆಯಲ್ಲಿ ಹೆಜ್ಜೆಯಿಕ್ಕಿದವರು ಕಡಿಮೆ ಎನ್ನಬೇಕು.

ಮಾರ್ಕೆಸ್‌ನ ಬಹುಮುಖ್ಯ ಕೃತಿಗಳಲ್ಲೊಂದಾದ “ಡೆತ್‌ ಫೋರ್‌ಟೋಲ್ಡ್‌’ನ್ನು ಅನುವಾದಿಸಿ ಸಿದ್ಧಪಡಿಸುತ್ತಿದ್ದಾರೆ, ಹಲವು ವರ್ಷಗಳಿಂದ! ಈ ಪುಟ್ಟ ಕಾದಂಬರಿಯಲ್ಲಿ ಅಂಥದ್ದೇನಿದೆ ಎಂದು ನಮಗೆಲ್ಲ ಅನಿಸುತ್ತಿರುವಾಗಲೇ ತಮಗಿನ್ನೂ ಅನುವಾದ ಪೂರ್ಣತೃಪ್ತಿ ಕೊಟ್ಟಿಲ್ಲ, ತಿದ್ದುತ್ತಿದ್ದೇನೆ ಎಂದೇ ಹೇಳುತ್ತಿದ್ದಾರವರು!

ಅಷ್ಟ ದಿಕ್ಕುಗಳಲ್ಲೂ ಸಾಹಿತ್ಯ ಸಂಚಲನ
ಹಲವು ದೇಶಭಾಷೆಗಳ ಕೃತಿಗಳನ್ನು ನಿಯಮಿತವಾಗಿ ಅನುವಾದಿಸಿ, ಪ್ರಕಟಿಸಲು ಒಂದು ನಿರ್ದಿಷ್ಟ ಚಂದಾದಾರರ ಬಳಗವನ್ನು ರೂಪಿಸುವ ಯೋಜನೆ ಕೂಡ ಹಾಕಿದ್ದರು ಅವರು. ದೇಶಕಾಲ ಪತ್ರಿಕೆಯನ್ನು ಓದುತ್ತಿದ್ದವರಿಗೆ ಈ ಅಷ್ಟ ದಿಕ್ಕು ಪ್ರಕಾಶನದ ಜಾಹೀರಾತು ಕಂಡ ನೆನಪಿರಬಹುದು. “ಪ್ರಿಸಂ’, “ವಸಂತ ಪ್ರಕಾಶನ’ ಮುಂತಾದೆಡೆ ಅವರು ಸಾಹಿತ್ಯ ಸಲಹೆಗಾರರಾಗಿ ಕನ್ನಡಕ್ಕೆ ಹಲವಾರು ಬಹುಮುಖ್ಯ ಕೃತಿಗಳು ಬರಲು ಕಾರಣರಾದವರು. ಈ ಅಷ್ಟ ದಿಕ್ಕು ಪ್ರಕಾಶನ ಕಾರ್ಯರೂಪಕ್ಕೆ ಬಂದಿದ್ದರೆ ಒಂದು ಶಿಸ್ತು, ಮೌಲ್ಯ ಮತ್ತು ಕ್ರಮಬದ್ಧ ಕೃತಿ ಸೇರ್ಪಡೆ ಸಾಧ್ಯವಾಗುತ್ತಿತ್ತು.

ದಿವಾಕರ್‌ ನಿರ್ದೇಶನದ ಬೇಂದ್ರೆ ಕವಿಗೋಷ್ಠಿಯ ಬಗ್ಗೆ ಈಗಿನ ತಲೆಮಾರಿನ ಹೆಚ್ಚಿನವರಿಗೆ ಗೊತ್ತಿರಲಾರದು. ಬೇರೆ ಬೇರೆ ಕ್ಷೇತ್ರದ ದಿಗ್ಗಜರು ವೇದಿಕೆಗೆ ಬಂದು ಬೇಂದ್ರೆಯ ಕವಿತೆ ವಾಚಿಸಿದ್ದ, ಆ ಬೇಂದ್ರೆ ಕವಿಗೋಷ್ಠಿಯಂಥದ್ದು ಇವತ್ತಿಗೂ “ನ ಭೂತೋ ನ ಭವಿಷ್ಯತಿ’ ಎಂಬ ಮಟ್ಟಿಗೆ ಒಂದು ದಾಖಲೆಯಾಗಿಯೇ ಉಳಿದಿದೆ. ದೂರದ ಊರಿನಲ್ಲಿದ್ದ ನಮ್ಮಂಥವರು ಟಿವಿಯಲ್ಲಿ ಆ ಕಾರ್ಯಕ್ರಮದ ತುಣುಕುಗಳನ್ನಷ್ಟೇ ಕಂಡು ತೃಪ್ತಿಪಟ್ಟವರು.

ಐದಾರು ವರ್ಷಗಳ ಹಿಂದೆ ದಿವಾಕರ್‌ ಕನ್ನಡ ಅಕ್ಷರಮಾಲೆಯ ಒಂದೊಂದು ಅಕ್ಷರಕ್ಕೂ ಒಂದೊಂದು ಕತೆಯನ್ನು ಬರೆಯುವ ಹೊಸ ಸಾಹಸಕ್ಕೆ ಅಣಿಯಾಗಿದ್ದರು. ದಿವಾಕರ್‌ ಅವರ ಕ್ರಿಯಾಶೀಲತೆ, ಪ್ರಯೋಗಶೀಲ ಮನಸ್ಸು ಮತ್ತು ಸದಾ ತಾನಿನ್ನೂ ವಿದ್ಯಾರ್ಥಿ ಎಂಬ ಭಾವದಿಂದ ಕಲಿಯುವ ವಿನಯಶೀಲತೆ ಮೂರೂ ಅವರ ಹೊಸದನ್ನು ಸಾಧಿಸುವ ಛಲ, ಶಿಸ್ತು ಮತ್ತು ಉತ್ಸಾಹಕ್ಕೆ ಕಾರಣ. ಇದರಿಂದ ನಾವು ಕಲಿಯಬೇಕಾದುದು ಬಹಳಷ್ಟಿದೆ.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರು ಸದ್ದಿಲ್ಲದೆ, ಪ್ರಶಸ್ತಿ, ಸನ್ಮಾನಗಳಿಗೆ ಹಾತೊರೆಯದೆ ನೀಡಿದ ಕೊಡುಗೆ ಬಹುಕಾಲ ನಿಲ್ಲುವಂಥದ್ದು. ಒಂದು ಸಂಸ್ಥೆ ಮಾಡಬಹುದಾದದ್ದನ್ನು ಎಸ್‌. ದಿವಾಕರ್‌ ಒಬ್ಬರೇ ಮಾಡಿ ತೋರಿಸಿದ್ದಾರೆ ಎನ್ನುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಯಾರ ಹಂಗಿಗೂ ಒಳಗಾಗದೆ ತಲೆಯೆತ್ತಿ, ಎದೆಯೆತ್ತಿ ನಡೆದ ಈ ವ್ಯಕ್ತಿಗೆ ತನ್ನ ಸಾಧನೆಯ ಬಗ್ಗೆ ಯಾವುದೆ ಜಂಭವಿಲ್ಲ, ಅಹಂ ಇಲ್ಲ. ತಮಾಶೆ ಎಂದರೆ ಅದು ಅವರ ತಲೆಯಲ್ಲೇ ಇಲ್ಲ. “ನನಗೇ ನಾನು ಬರೆದಿದ್ದೆಲ್ಲ ಮರೆತು ಹೋಗಿತ್ತು ಮಾರಾಯ!’ ಎಂದು ಬಿಟ್ಟರು ಅವರು ಅವರ ಒಟ್ಟು ಸಾಹಿತ್ಯ ಕೃತಿಗಳ ಒಂದು ಚಿತ್ರವನ್ನು ಅವರ ಕಣ್ಮುಂದೆ ತಂದಾಗ!

ಹಿರಿ-ಕಿರಿಯರೊಂದಿಗೆ ಸಾಹಿತ್ಯ ನಂಟು…
ಸಾಹಿತ್ಯ ಕ್ಷೇತ್ರದ ದಿಗ್ಗಜರೊಂದಿಗೂ, ಹಿರಿಯ ತಲೆಮಾರಿನವರೊಂದಿಗೂ, ತೀರ ಎಳೆಯ ಬರಹಗಾರರೊಂದಿಗೂ, ಸಾಮಾನ್ಯ ಜನರೊಂದಿಗೂ ಸಮಾನ ನೆಲೆಯಲ್ಲಿ ಬೆರೆಯಬಲ್ಲ ಈ ವ್ಯಕ್ತಿ ಅಷ್ಟೇ ಸೂಕ್ಷ್ಮ ಮತ್ತು ಸರಳ ಮನಸ್ಸಿನ ವ್ಯಕ್ತಿ. ಬಹುಬೇಗ ಆಪ್ತರಾಗುವ ಅವರು ಎಲ್ಲರಿಂದಲೂ ಪ್ರೀತಿಯನ್ನು, ಸ್ವಲ್ಪ ಹೆಚ್ಚೇ ಪ್ರೀತಿಯನ್ನು ಅಪೇಕ್ಷಿಸುವ ವ್ಯಕ್ತಿ. ಹಾಗಾಗಿ ಆಪ್ತರು ದೂರವಾದರು ಅನಿಸಿದಾಗ ಬಹುಬೇಗ ನೊಂದು ಕೊಳ್ಳುವ ಸ್ವಭಾವ ಕೂಡ. ಅವರ ಈ ನೋವು ಬೇರೆ ಬೇರೆ ರೀತಿಯಾಗಿ ಪ್ರಕಟಗೊಂಡಿದ್ದು ನಾನು ಬಲ್ಲೆ. ಒಮ್ಮೆ ನಿಮಗೆ ಅವರ ಮನಸ್ಸು, ಹೃದಯ ಅರ್ಥವಾಯಿತೆಂದರೆ ಅವರೊಳಗಿನ ಪುಟ್ಟ ಮಗುವನ್ನು ನಾವೂ ಮುಗ್ಧವಾಗಿ ಪ್ರೀತಿಸದೇ ಇರುವುದು ಸಾಧ್ಯವೇ ಇಲ್ಲ. ಅದನ್ನು ಬಿಟ್ಟು ಅವರಿಗೆ ಬೇಕಾದುದಾದರೂ ಬೇರೇನೂ ಇಲ್ಲ.

ಬೆನ್ನುತಟ್ಟುವ ಸ್ವಭಾವ
ಅವರು ಸ್ವತಃ ಬರೆದಿರುವುದಕ್ಕಿಂತ ಹೆಚ್ಚನ್ನು ಬೇರೆಯವರಿಂದ ಬರೆಸಿದ್ದಾರೆ ಎನ್ನುವದು ಅನೇಕರಿಗೆ ಗೊತ್ತಿಲ್ಲ. ಅಲಭ್ಯ ಮೂಲಕೃತಿಯನ್ನು ಕೂಡ ಅವರೇ ಒದಗಿಸಿಕೊಟ್ಟು, ಅನುವಾದಿಸಲು ಉತ್ತೇಜಿಸುವುದರ ಮೂಲಕ ಕನ್ನಡಕ್ಕೆ ಅನೇಕ ಅನುವಾದಿತ ಕೃತಿಗಳು ಬರುವಂತೆ ಮಾಡಿದ್ದಾ­ರವರು. ಇವರ ಲೇಖನ ಕೇಳಿ ಸಂಪಾದಕರು ಕರೆ ಮಾಡಿದರೆ, ಉಪಾಯವಾಗಿ ಅಂಥ ಅವಕಾಶವನ್ನು ನನ್ನಂಥ ಕಿರಿಯರಿಗೆ ಬಿಟ್ಟುಕೊಟ್ಟು ಬೇರೆಯವರು ಮುಂದೆ ಬರಲು ಹಾದಿ ತೋರಿಸಿದ ಉದಾರಿ ಅವರು. ಹಾಗೆಯೇ ಇವತ್ತಿಗೂ ಒಂದು ಒಳ್ಳೆಯ ಕೃತಿ ಕಣ್ಣಿಗೆ ಬಿದ್ದರೆ, ಅದನ್ನು ಯಾರೇ ಬರೆದಿರಲಿ, ತಪ್ಪದೇ ಅದರ ಬಗ್ಗೆ ಎಲ್ಲಾದರೂ ಬರೆದು ಅಂಥ ಲೇಖಕನ ಉತ್ಸಾಹ ಇಮ್ಮಡಿಸುವಲ್ಲಿ ಸದಾ ಮುಂದು. ಇಂಥ ದಿವಾಕರ್‌ ಅವರ ಬಗ್ಗೆ ಒಮ್ಮೊಮ್ಮೆ ಕನ್ನಡ ಸಾಹಿತ್ಯ ಕ್ಷೇತ್ರ ಅಂಥ ಉತ್ಸಾಹ ತೋರಿಸಿದ್ದು ಕಾಣುವುದಿಲ್ಲವಲ್ಲ ಅನಿಸಿದರೆ ಆಶ್ಚರ್ಯವೇನಿಲ್ಲ.

ದಿವಾಕರ್‌ ಅವರ ಪ್ರಧಾನ ಆಸಕ್ತಿಗಳತ್ತ ಗಮನಿಸಿದರೆ ಓದು, ಅನುವಾದ ಮತ್ತು ಬರವಣಿಗೆ ಇಲ್ಲಿ ಪ್ರಧಾನವಾದದ್ದು. ಇದರ ಜೊತೆ ಅವರು “ಶತಮಾನದ ಸಣ್ಣಕತೆಗಳು’, “ಬೆಸ್ಟ್‌ ಆಫ್ ಕೇಫ‌’, “ಕನ್ನಡದ ಅತಿಸಣ್ಣ ಕತೆಗಳು’, “ನಾದದ ನವನೀತ’ ಎಂದೆಲ್ಲ ಸಂಪಾದನ ಕ್ರಿಯೆಯಲ್ಲೂ ಸಕ್ರಿಯರಾಗಿದ್ದವರು. “ಮಲ್ಲಿಗೆ’, “ಸುಧಾ’ದಂಥ ಪತ್ರಿಕೆಗಳ ಸಂಪಾದಕರಾಗಿಯೂ ಹೆಸರು ಮಾಡಿದವರು.

ಪ್ರಬಂಧಗಳಲ್ಲಿಯೂ ಸಾದಾ ಲಲಿತ ಪ್ರಬಂಧಗಳದೇ ಒಂದು ಸೊಗಸಾದರೆ, ಕುರಿತಿಟ್ಟು ಡೂಡೋ, ಇರುವೆ, ಕಾಗೆ, ಜಿರಲೆಗಳ ಬಗ್ಗೆ ಬರೆದ ಅವರ ಪ್ರಬಂಧಗಳು ಕೂಡ ವಿಜ್ಞಾನದಿಂದ, ಸಾಹಿತ್ಯದಿಂದ, ಪರಂಪರೆಯಿಂದ, ದೇಶ-ವಿದೇಶಗಳ ಮಾಹಿತಿಯಿಂದ ವಿಶಿಷ್ಟವಾದ ಒಂದು ಪರಸ್ಪರ ಅಂತರ್‌ ಸಂಬಂಧವನ್ನು ಹೆಣೆದು ಬಿಡಬಲ್ಲ ಕಸೂತಿಯಂಥ ವಿನ್ಯಾಸವನ್ನು ತಳೆದು ಅಚ್ಚರಿ ಹುಟ್ಟಿಸುತ್ತವೆ.

ನಾನಾ ಆಸಕ್ತಿಯ ಬಹುಮುಖ ಪ್ರತಿಭೆ
ಸಂಗೀತ ಅವರ ಇನ್ನೊಂದು ಪ್ರಧಾನ ಆಸಕ್ತಿ. ಸಂಗೀತಕ್ಕೆ ಬಂದರೆ ಅವರು ಭೀಮಸೇನ ಜೋಶಿ, ಮಂಗಳಪಲ್ಲಿ, ಶೆಮ್ಮಗುಂಡಿ ಮುಂತಾದವರ ಬಗ್ಗೆ ಬರೆಯಬಲ್ಲಷ್ಟೇ ಸೊಗಸಾಗಿ ಹಾರ್ಮೋನಿಯಂ, ತಂಬೂರಿಗಳ ಬಗ್ಗೆ ರಸವತ್ತಾಗಿ ಬರೆಯಬಲ್ಲರು, ಬಿಲಾಸಖಾನಿ ತೋಡಿ, ಸುಗಮ ಸಂಗೀತದ ಬಗ್ಗೆ ವಿವರಿಸಬಲ್ಲರು. ಚಿತ್ರಕಲೆ, ಫೋಟೋಗ್ರಫಿ, ಬಣ್ಣಗಳು ಅವರನ್ನು ಸದಾ ಆಕರ್ಷಿಸಿವೆ. ವ್ಯಂಗ್ಯಚಿತ್ರ ಬಿಡಿಸಿದ, ಬಾಕಿನ ಅವರ “ಬಾಪ್ಕೊ’ ಪ್ರಕಾಶನದ ಪುಸ್ತಕಗಳಿಗೆ ಮುಖಪುಟ ಚಿತ್ರ ಬರೆದ ದಿವಾಕರ್‌ “ಘಟಶ್ರಾದ್ಧ’ ಸಿನಿಮಾದ ಸಹ ನಿರ್ದೇಶಕ ಕೂಡ, ಅದೂ ಗಿರೀಶ್‌ ಕಾಸರವಳ್ಳಿ ಅವರಿಗೆ.

ಇನ್ನು ಸಾಹಿತ್ಯದ ಬಗ್ಗೆ, ಸಾಹಿತಿಗಳ ಬಗ್ಗೆ, ಪುಸ್ತಕಗಳ ಬಗ್ಗೆ ತಮ್ಮ ಅರಿವಿನ ವಿಚಾರದಲ್ಲಿ ಅವರಾಗಲೇ ದಂತಕತೆಯಾಗಿ ಬಿಟ್ಟಿದ್ದಾರೆ. ಎಸ್‌. ದಿವಾಕರ್‌ಗೆ ಗೊತ್ತಿಲ್ಲದ ಲೇಖಕನಿಲ್ಲ, ಪುಸ್ತಕವಿಲ್ಲ ಎಂಬಷ್ಟು ಅವರೊಂದು ವಿಶ್ವಕೋಶವೆಂಬಂಥ ವಿಶ್ವಾಸ ಅವರ ಸಹವರ್ತಿಗಳಲ್ಲಿ, ಬರಹಗಾರರಲ್ಲಿ ಇದೆ. ಅಂಥವರು ಸಾಹಿತ್ಯದ ಬಗ್ಗೆ, ಪುಸ್ತಕಗಳ ಬಗ್ಗೆ ಬರೆದಾಗ ತಮ್ಮ ಓದಿನ ಅನುಭವದಿಂದ ಮಾತನಾಡುತ್ತಿದ್ದಾರೆ. ತಮ್ಮ ಓದಿಗೆ ದಕ್ಕಿದ ಶ್ರೇಷ್ಠ ಕೃತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ನಿರೀಕ್ಷೆ, ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿಯೇ, ಅವರು ಕನ್ನಡದ ಉದಯೋನ್ಮುಖರಿಗಷ್ಟೇ ಅಲ್ಲ, ನುರಿತ ತಲೆಮಾರಿನ ಬರಹಗಾರರಿಗೆ ಕೂಡ ಒಬ್ಬ ಗುರುವಿದ್ದಂತೆ. ವಯಸ್ಸಿನಿಂದಲ್ಲ, ಜ್ಞಾನದಿಂದ. ವಯಸ್ಸಿನಿಂದ ಅವರು ಈಗಲೂ ನಮ್ಮ ಅತ್ಯಂತ ಕಿರಿಯ ಗೆಳೆಯ!

ಎಂಬತ್ತರಲ್ಲೂ ಚಿಮ್ಮುವ ಉತ್ಸಾಹ!
ಹಾಗಾಗಿ ಎಂಬತ್ತು ಅವರ ಮಟ್ಟಿಗೆ ಚಿಕ್ಕ ವಯಸ್ಸೇ. ನನಗಂತೂ ಅವರ ಜೊತೆ ಮಾತನಾಡುವಾಗ ಯಾವತ್ತೂ ಅವರು ನನಗಿಂತ ಹಿರಿಯ ಅನಿಸಿದ್ದಿಲ್ಲ. ನನ್ನಂಥವರ ಬಳಿಯೇ ಸಲಹೆ, ಮಾರ್ಗದರ್ಶನ ಇತ್ಯಾದಿ ಕೇಳುವ ದಿವಾಕರ್‌ ಅವರಲ್ಲಿ ತೋರುಗಾಣಿಕೆಯ ನಡೆಯಿಲ್ಲ. “ದೇಶಕಾಲ’ ಪತ್ರಿಕೆಗೆ ಐದು ವರ್ಷ ತುಂಬಿದಾಗ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಮೊದಲ ಬಾರಿಗೆ ದೂರದಿಂದಲೇ ಕಂಡು, ಮಾತನಾಡಿಸಲು ಧೈರ್ಯ ಸಾಲದೆ ಊರಿಗೆ ಮರಳಿದ ನನಗೆ ಒಮ್ಮೆ ಪರಿಚಯವಾದದ್ದೇ ಹಳೆಯ ಗೆಳೆಯನಂತಾಗಿ ಬಿಟ್ಟ ದೊಡ್ಡಮನುಷ್ಯ! ಹಾಗಾಗಿ, ನಮಗೆ ಅವರ ಜೊತೆ ವ್ಯವಹರಿಸುವಷ್ಟೂ ಹೊತ್ತು ತಪ್ಪಿಯೂ ಅವರು ಹಿರಿಯರು, ತುಂಬ ದೊಡ್ಡ ವ್ಯಕ್ತಿ ಎಂದೆಲ್ಲ ಅನಿಸಿದ್ದೇ ಇಲ್ಲ! ಆಮೇಲೆ ಕೂತು ಯೋಚಿಸಿದರೆ ಅಬ್ಬ ನನ್ನ ಅಹಂಕಾರವೇ ಅನಿಸಿದ್ದು ನೂರು ಬಾರಿ. ಹಾಗೆಯೂ ಈ ಅದಮ್ಯ ಉತ್ಸಾಹದ ನಿತ್ಯ ಕ್ರಿಯಾಶೀಲ ದಿವಾಕರ ಸದಾ ಉದಯೋನ್ಮುಖ, ಇನ್ನೂ ಉದಯವಾಗಲಿರುವ ಸೂರ್ಯ!!! ಅವರು ಇನ್ನೂ ನೂರ್ಕಾಲ ಹೀಗೆಯೇ ಇರಲಿ ಎನ್ನುವುದೊಂದೇ ನಮ್ಮೆಲ್ಲರ ಹಾರೈಕೆ!

ಪೋಟೋಗಳು: ದಿನೇಶ್‌ ಹೆಗಡೆ ಮಾನೀರ್‌

– ನರೇಂದ್ರ ಪೈ

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.