Special story: ಸುಮ್ಮನೇ ಜೀವಿಸಿದ ಒಂದು ದಿನ: ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ!


Team Udayavani, Sep 10, 2023, 10:32 AM IST

Special story: ಸುಮ್ಮನೇ ಜೀವಿಸಿದ ಒಂದು ದಿನ: ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ!

ಒಂದಷ್ಟು ದಿನಗಳ ಕಾಲ ಎಲ್ಲಿಗಾದರೂ ದೂರ ಹೋಗಿಬಿಡಬೇಕು. ಕಚೇರಿ, ಮನೆ, ಸಂಸಾರ, ಗೆಳೆಯರು, ಮೊಬೈಲ್ – ಇದೆಲ್ಲದರಿಂದ ದೂರ ಇದ್ದುಬಿಡಬೇಕು. ಒಂದಷ್ಟು ದಿನ ನಮಗಿಷ್ಟ ಬಂದಂತೆ ಬದುಕಬೇಕು. ಒತ್ತಡಗಳಿಂದ, ಜವಾಬ್ದಾರಿಗಳಿಂದ, ಜಂಜಾಟದಿಂದ ದೂರವಿದ್ದು ಸ್ವತಂತ್ರ ಹಕ್ಕಿಗಳಂತೆ ಸಂಭ್ರಮಿಸಬೇಕು ಎಂಬುದು ಎಲ್ಲರ ಆಸೆ, ಕನವರಿಕೆ. ಅಂಥದೊಂದು ಸಂದರ್ಭ ನಿಜಕ್ಕೂ ಒದಗಿಬಂದರೆ…

ಧೋ… ಸುರಿಯುವ ಮಳೆ. ದೂರದ ಊರಿನಲ್ಲಿ ಓದುತ್ತಿರುವ ಮಕ್ಕಳು. ಮನೆಯಲ್ಲಿ ಯಾರೊಬ್ಬರೂ ಇಲ್ಲದ ಹೊತ್ತು, ಎಷ್ಟೋ ದಿನಗಳ ಹಂಬಲಿಕೆಗೆ ಉತ್ತರದಾಯಿಯಾಗಿ, ಏನಾದರೂ ಓದಿಕೋ, ಎಷ್ಟಾದರೂ ಬರೆ, ಬೇಕಾದಷ್ಟು ನಿದ್ದೆ ಮಾಡು.. ಒಳ ಮನಸು ಕೂಗಿ ಕೂಗಿ ಹೇಳುತ್ತಿತ್ತು. ಅದೆಂತಾ ಬೋರ್‌ ಹೊಡೆಯಿತು ಅಂದರೆ ಏನೂ ಕೆಲಸವಿಲ್ಲದಿದ್ದರೂ, ನನ್ನ ಇಷ್ಟದ ಯಾವ ಕೆಲಸಗಳನ್ನೂ ಮಾಡಲಾಗದ ಪರಿಸ್ಥಿತಿ. ಹೀಗೇ ಇನ್ನಷ್ಟು ಹೊತ್ತು ಇದ್ದರೆ ಸತ್ತೇ ಹೋಗಿಬಿಡುವೆನೇನೋ ಅನ್ನುವ ದಿಗಿಲು ಶುರುವಾಯಿತು.

ಎಷ್ಟು ಬಾರಿ ನಾವು ಹೀಗೆ ನೆನೆದುಕೊಂಡಿಲ್ಲ? ನಾವು ನೆನೆದುಕೊಂಡಂತೆ ಯಾವತ್ತಾದರೂ ಹಿಂಗೆ ಸುಮ್ಮಗೆ ಜೀವಿಸಿರುವೆವಾ? ಯಾವುದೇ ನೆನಪಿನ ಹಂಗಿಲ್ಲದೆ, ಹೊತ್ತು ಗೊತ್ತಿಲ್ಲದೆ, ಹೀಗೇ ಗೊತ್ತು ಗುರಿಯಿಲ್ಲದೆ ಎತ್ತೆತ್ತಲೋ ಅಲೆದಾಡುತ್ತಾ? ನೆಟ್ಟ ಕಣ್ಣಿನಿಂದ ನೊಡುತ್ತಾ?

ಎಳವೆಯಲ್ಲಿರುವಾಗ ಬುಡುಬುಡಿಕಿ ಸನ್ಯಾಸಿಗಳು ಮನೆಗೆ ಬರುತ್ತಿದ್ದರು. ಅವರು ಆಚೆ ದೂರದಲ್ಲಿ ಗದ್ದೆ ಅಂಚಿನಲ್ಲಿ ಬರುವಾಗಲೇ ಅಲ್ಲಿಗೇ ಓಡಿ ಅವರನ್ನು ಎಳೆದುಕೊಂಡು ಬಂದು ಜಾತಕ ಹರವಿ ಅವನ ಮುಂದೆ ಕಣಿ ಕೇಳಲು ಕೂರುತ್ತಿದ್ದೆವು. ಇದೊಂದು ಮಾಸ ಜಾಗ್ರತೆ ಇರಿ, ಮತ್ತೆ ನಿಮಗೆ ಮಹಾಯೋಗ ಅಂತ ಅರುಹಿ ಟಕಟಕ ಆಡಿಸುತ್ತಾ, ನಮ್ಮೊಳಗೊಂದು ಆಶಾವಾದದ ಗರಿ ಇಟ್ಟು, ಕಣ್ಣಂಚಿನಾಚೆಗೆ ಕಳೆದು ಹೋಗಿಬಿಡುತ್ತಿದ್ದ. ಅವನು ಏನನ್ನು ಹುಡುಕುತ್ತಾ ಹೋದದ್ದು? ಹೋದದ್ದಾದರೂ ಎಲ್ಲಿಗೆ? ಸರಿದು ಹೋದ ನೆನಪಿನ ತುಣುಕೊಂದು ಈ ಹೊತ್ತಿನಲ್ಲಿ ಬಗಲಲ್ಲಿ ಕೂತು ಕಾಡುತ್ತಿದೆ. “ಎಲ್ಲೋ ಜೋಗಪ್ಪ ನಿನ್ನ ಅರಮನೆ.. ಎಲ್ಲೋ ಜೋಗಪ್ಪ ನಿನ್ನ ಅರಮನೆ ..’ ಅಂತ ಬುಡುಬುಡುಕಿ ಅದೇ ದಾಸಯ್ಯನ ಹಿಂದೆ ಮನೆಮಠ ಬಿಟ್ಟು ಅವನ ಹಿಂದೆ ಅವಳು ಹೋದದ್ದಾದರೂ ಏಕೆ? ಒಂದು ದಿನವಾದರೂ ಹೀಗೆ ಸುಮ್ಮಗೆ ಅವನಂತೆ ಜೀವಿಸಬೇಕೆಂಬ ಹಪಾಹಪಿಯೇ ಅದು?!

ಕೆಲವೊಂದು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ದಕ್ಕದೆ ನಾವು ಒದ್ದಾಡುತ್ತೇವೆ. ಎಲ್ಲವನ್ನೂ ಮರೆತು ಸುಮ್ಮಗೆ ಜೀವಿಸಬೇಕೆಂಬ ಗಳಿಗೆಗಳಿಗೆ ಕಾಯುತ್ತೇವೆ. ಗೊತ್ತಿಲ್ಲದೇ ಅದರ ಹಂಬಲಕ್ಕೆ ಬಿದ್ದು ನಿರಾಳವಾಗಲು ಬಯಸುತ್ತೇವೆ. ಗೆಳತಿಯರೆಲ್ಲ ಒಟ್ಟು ಸೇರಿ ಮಾತನಾಡುವಾಗ ಇದೇ ಮಾತು ಒಂದಲ್ಲ ಒಂದು ರೀತಿಯಲ್ಲಿ ಹೊರಳಿ ಹೋಗುತ್ತದೆ. ಸಾಕಾಯ್ತು ಜೀವನ, ಅದೇ ಕೆಲಸ, ಅದೇ ಹಾಳು-ಮೂಳು ಯೋಚನೆ, ಇಲ್ಲದ್ದಕ್ಕೆ ಕೊರಗುತ್ತಾ ಮರುಗುವುದಾದರೂ ಎಷ್ಟು? ಇನ್ನಾದರೂ ಸುಮ್ಮಗೆ ಬದುಕಬೇಕು ಅನ್ನಿಸ್ತಿದೆ, ಹೀಗೆ ಇನ್ನೇನೋ. ಬಹುಶಃ ಇದು ನಡುವಯಸಿನ ತಲ್ಲಣವಾ? ಸಣ್ಣಗೆ ನಗು ಬರುತ್ತದೆ. ನಮಗೂ ವಯಸ್ಸಾಗಿದೆ ಅನ್ನುವುದನ್ನು ಪ್ರಕೃತಿ ಯಾವುದೆಲ್ಲ ರೀತಿಯಲ್ಲಿ ನಮಗೆ ತೋರಿಸಿಕೊಡುತ್ತದೆ ಅಲ್ಲವಾ?
ಎಷ್ಟೋ ಸಲ ಬಾಲ್ಯದಲ್ಲಿ ನನ್ನ ಅಮ್ಮನ ಓರಗೆಯವರು ಒಟ್ಟು ಸೇರಿದಾಗ ಇದೇ ವಾಕ್ಯ ಆಡಿದ್ದನ್ನು ಬಹಳ ಬಾರಿ ಕೇಳಿಸಿಕೊಂಡಿದ್ದೇನೆ. “ಸಾಕಾಯ್ತು ಈ ಗೋಳು, ಒಮ್ಮೆಯಾದರೂ ಯಾವ ರಗಳೆ ಇಲ್ಲದೆ ಸುಮ್ಮಗೆ ಬದುಕಿಬಿಡಬೇಕು’ ಎಂದು ಅಮ್ಮ ಹೇಳಿದ ಮಾತುಗಳು ಈಗ ಅದೇ ಹೊಸ್ತಿಲಿನಲ್ಲಿ ನಿಂತಿರುವ ನನ್ನಂಥವರ ಬಾಯಿಯಿಂದ ಪುನರಾವರ್ತನೆಗೊಳ್ಳುತ್ತಿದೆ. ಕಾಲ ಕೆಲವೊಂದು ವಾಕ್ಯಗಳನ್ನ ತನ್ನ ಸಂದರ್ಭಕ್ಕೆ ಅನುಸಾರವಾಗಿ ತನ್ನ ಬತ್ತಳಿಕೆಯಿಂದ ಬಿಡುತ್ತದೆಯಾ? ಹೂವು, ಹೀಚು, ಕಾಯಿ, ಹಣ್ಣಾಗುವ ತೆರದಲಿ ನಮ್ಮ ಮನಸ್ಥಿತಿಗಳೂ ಬದಲಾಗುತ್ತವಾ?

ಮೊನ್ನೆಯೊಮ್ಮೆ ಹೀಗೇ ಇದೇ ನೈರಾಶ್ಯ ನನ್ನೊಳಗೆ ಹೊಕ್ಕು ಒಳಗನ್ನು ಅಯೋಮಯಗೊಳಿಸಿದ ಹೊತ್ತು ಕಂಗಾಲಾಗಿದ್ದೆ. ಎಲ್ಲರಿಗೂ ಹೀಗಾಗುತ್ತದೋ? ಅಥವಾ ತನಗೆ ಮಾತ್ರ ಹೀಗೆಯಾ? ಅಂತೆಲ್ಲಾ ಯೋಚಿಸಿದ್ದೆ. ಅದೇ ಸಮಯಕ್ಕೆ ಗೆಳತಿಯೊಬ್ಬಳು ಪೋನಾಯಿಸಿ, ಏನೆಲ್ಲ ತಾಪತ್ರಯ, ಅಡುಗೆ ಚೆನ್ನಾಗಿಲ್ಲವೆಂಬ ರಂಪ, ತಟ್ಟೆ ಮೂಲೆಗೆ ತಳ್ಳಿ ಕೈ ತೊಳೆದುಕೊಳ್ಳುವ ಮಕ್ಕಳು, ಹಾಗಂತ ಮಾಡದೇ ಇರೋಕೆ ಆಗುತ್ತದಾ? ಇವರುಗಳ ಹಿಂದೆ ಅಲೆಯುವುದ ಬಿಟ್ಟು, ಯಾವ ರಗಳೆಯೂ ಬೇಡವೆಂದು ಎಲ್ಲಿಗಾದರೂ ಓಡಿ ಹೋಗಿ, ಸುಮ್ಮಗೆ ಬದುಕಬೇಕು ಅನ್ನಿಸುತ್ತದೆ. ಹಾಗೆ ಮಾಡಿದರೆ ಏನಾಗಬಹುದು? ಅಂತ ಪ್ರಶ್ನೆ ಹಾಕಿದಳು.

ಈಗ ಓಡಲಿಕ್ಕೆ ಹೋಗಬೇಡ, ಬಿದ್ದು ಕೈಕಾಲು ಮುರಿದುಕೊಂಡರೆ, ಓಡುವುದು ಹೋಗಲಿ, ನಡಿಯೋದಕ್ಕೂ ಸಾಧ್ಯ ಇಲ್ಲ ಅಂತ ಅಣಕಿಸಿ ನಕ್ಕೆ. ಬಹುಶಃ ಇದು ನನ್ನೊಬ್ಬಳ ಸಮಸ್ಯೆ ಅಲ್ಲ, ಇದೊಂದು ಜಾಗತಿಕ ಸಮಸ್ಯೆ ಅಂತ ಗೊತ್ತಾದಾಗ ಆ ಕ್ಷಣಕ್ಕೆ ಮನಸು ಹಗುರವಾಗಿತ್ತು.

ಅಸಲಿಗೆ ಸುಮ್ಮಗೆ ಹೀಗೇ ಜೀವಿಸಬೇಕು ಅಂತ ಯೋಚನೆಗೆ ಬರುವುದು ಬರೇ ಹೆಣ್ಣು ಮಕ್ಕಳಿಗಾ? ಅಥವಾ ಎಲ್ಲರಿಗೂ ಈ ಯೋಚನೆ ಬರುತ್ತದಾ? ಬಿಡುಗಡೆಯೆಂದರೆ ಇದೇನಾ? ಅಷ್ಟಕ್ಕೂ ಸುಮ್ಮಗೆ ಬದುಕುವುದು ಅಂದರೆ ಏನು?

ಆಕಸ್ಮಿಕವಾಗಿ ತೀರಾ ಎಳವೆಯಲ್ಲಿ ನನ್ನ ಅಪ್ಪನನ್ನು ಕಳೆದುಕೊಳ್ಳುವ ಪ್ರಸಂಗ ಬಂತು. ಇದೊಂದು ಅನಿರೀಕ್ಷಿತ ಸಂಗತಿ ಆದ ಕಾರಣ ನಾನು ಒಂದು ರೀತಿಯಲ್ಲಿ ಖಾಲಿ ಆಗಿದ್ದೆ. ಎಲ್ಲರೂ ಅಳುತ್ತಿದ್ದಾರೆ. ನನ್ನ ಕಣ್ಣು ಯಾಕೆ ಹನಿಯುತ್ತಿಲ್ಲ? ಯಾವುದೋ ಶೂನ್ಯವೊಂದು ನನ್ನನ್ನು ಆವರಿಸಿಕೊಂಡಿತ್ತು. ಎಲ್ಲರೂ ಅಳುತ್ತಿದ್ದಾರೆ, ಸಂತೈಸುತ್ತಿದ್ದಾರೆ. ನನಗೆ ಇದು ಯಾವುದೂ ಸಂಬಂಧವಿಲ್ಲವೆಂಬಂತೆ ಯಾಂತ್ರಿಕವಾಗಿ ನೆಟ್ಟ ನೋಟದಿಂದ ನೋಡುತ್ತಿರುವೆ. ಅಮ್ಮನೂ ಗರಬಡಿದಂತೆ ಕೂತಿದ್ದಾಳೆ. ಮತ್ತೆ ಎಷ್ಟೋ ದಿನಗಳೇ ಕಳೆದಿತ್ತು ಸಹಜವಾದ ಸ್ಥಿತಿಗೆ ಬರುವುದಕ್ಕೆ. ಸುಮ್ಮಗೆ ಜೀವಿಸಿದ್ದೆಂದರೆ ಅದುವೇ ಆಗಿರಬಹುದಾ? ಆ ನಡುವೆ ಎಷ್ಟೋ ಸಮಯದವರೆಗೆ ಅಮ್ಮ ಯಾವುದೋ ಲೋಕದಲ್ಲಿ ಕಳೆದುಹೋಗಿದ್ದಳು. ಭವಿಷ್ಯದ ಪ್ರಶ್ನೆ ಭೂತಾಕಾರವಾಗಿ ಅವಳ ಮುಂದೆ ನಿಂತಿತ್ತೋ ಏನೋ. ಕೆಲಸಗಳೆಲ್ಲಾ ಯಾಂತ್ರಿಕವಾಗಿ ಸಾಗುತ್ತಿತ್ತು. ಎಲ್ಲ ಸದ್ದುಗಳ ನಡುವೆ ನೀರಸ ಮೌನವೊಂದು ಆವರಿಸಿಕೊಂಡಿತ್ತು. ಸತ್ತದ್ದು ಯಾರು? ಅಪ್ಪನಾ? ನಾವುಗಳಾ? ಮತ್ತದೇ ಕಾಡುವ ಗೊಂದಲ. ಸುಮ್ಮಗೆ ಜೀವಿಸುವುದೆಂದರೆ ಹೀಗೆಯಾ..?

ಎಲ್ಲರೂ ಒಮ್ಮೊಮ್ಮೆಯಾದರೂ ಸುಮ್ಮಗೆ ಬದುಕಬೇಕೆಂಬ ಆಸೆ ಹೊತ್ತವರೇ. ಹಿರಿಯ ಕವಿ ಎಚ್‌.ಎಸ್‌.ವಿ.ಯವರ “ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಅನ್ನುವ ಭಾವ ಗೀತೆ ಕೇಳಿದಾಗಲೆಲ್ಲಾ ಸುಮ್ಮಗೆ ಜೀವಿಸುವ ಹೊಸತೊಂದು ಅರ್ಥ ತೆರೆದುಕೊಳ್ಳತೊಡಗುತ್ತದೆ.

ಕೆಲ ದಿನಗಳ ಹಿಂದೆಯೊಮ್ಮೆ ಮೂರು ದಿನದ ಸಾಹಿತ್ಯದ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂದಿತ್ತು. ಅದೇ ಅಡುಗೆ ಮನೆ, ಹಿತ್ತಲು, ಹಟ್ಟಿ, ತೋಟಕ್ಕೆ ನಡೆದಾಡಿ ಉದಾಸೀನ ಹಿಡಿದಿತ್ತು. ಒಂದು ಬದಲಾವಣೆ ಬೇಕು ತಾನೇ? ಒಂದೆರಡು ದಿನದ ಮಟ್ಟಿಗೆ ಯಾರ ಕಿರಿಕಿರಿಯಿಲ್ಲದೆ ಸುಮ್ಮಗೆ ಜೀವಿಸಬೇಕೆಂದು ನಿರ್ಧರಿಸಿ ಹೊರಡುವ ತಯಾರಿ ನಡೆಸಿದ್ದೆ. ಎರಡು ದಿನದ ಮಟ್ಟಿಗೆ ಹೊರಡಬೇಕೆಂದರೂ ಒಂದು ವಾರದಿಂದಲೇ ತಯಾರಿ ನಡೆಸಬೇಕು. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿಟ್ಟು ಹೋಗಬೇಕಾಗುತ್ತದೆ. ಇಲ್ಲದಿದ್ದರೆ, ಅದೆಲ್ಲಿ, ಇದೆಲ್ಲಿ ಅಂತ ನಡುನಡುವೆ ಕರೆಬಂದು, ನಮ್ಮ ಏಕಾಂತಕ್ಕೆ ಭಂಗ ಬಂದು ಬಂದ ಉದ್ದೇಶವೇ ಅರ್ಥಗೆಡುತ್ತದೆ. ನನ್ನೊಂದಿಗೆ ನನ್ನ ಅಷ್ಟೂ ಜನ ಗೆಳತಿಯರು ಇದ್ದರು. ಎಲ್ಲರೂ ಪರಿಚಿತರೇ. ಅವರೆಲ್ಲರೂ ಒತ್ತಡದ ನಡುವೆ ಸುಮ್ಮಗೆ ಎರಡು ದಿನ ನಮ್ಮ ಪಾಡಿಗೆ ಬದುಕಿ ಬಿಡುವ ಅಂತ ಯಾವುದೋ ಹುಕಿಯಲ್ಲಿ ಮನೆಯಿಂದ ಹೊರಟು ಬಂದವರು.

ಮಾತು, ಹರಟೆ, ಗೋಷ್ಠಿಗಳ ನಡುವೆ ಒಂದಷ್ಟು ಕಾಲ ಮೈಮರೆತೆವು. ಮನಸಿಗೆ ಒಂದು ರೀತಿಯ ರಿಲ್ಯಾಕ್ಸ್‌ ಆದ ಅನುಭವ. ಆ ರಾತ್ರೆಯಂತೂ ನಮ್ಮೆಲ್ಲರದ್ದು ಮಾತು… ಮಾತು.. ನಡುರಾತ್ರೆಯವರೆಗೂ. ನಾಳೆ ಬೆಳಗ್ಗೆ ಬೇಗ ಏಳಬೇಕಿಲ್ಲ, ತಿಂಡಿ, ಅಡುಗೆ ಒಂದೂ ಇಲ್ಲ, ಯಾವ ರಗಳೆಯೂ ಇಲ್ಲ. ಬೆಳಗ್ಗೆ ಅದಷ್ಟೂ ತಡವಾಗಿ ಎದ್ದೆವು. ಮಾಡಿಕೊಟ್ಟದ್ದನ್ನ ತಿಂದೆವು. ಮತ್ತೆ ಉಪನ್ಯಾಸ, ಗೋಷ್ಠಿಗಳ ನಡುವೆ ಕಳೆದುಹೋದೆವು. ಆ ರಾತ್ರಿ ಮಾತ್ರ ಯಾಕೋ ಸರಿಯಾಗಿ ನಿದ್ದೆ ಬರಲಿಲ್ಲ. ಏನೋ ತಳಮಳ, ಮನೆಯ ಸೆಳೆತ ಶುರುವಾಗತೊಡಗಿತು. ಆ ದಿನ ಎಲ್ಲ ಗೆಳತಿಯರದ್ದೂ ಅದೇ ಚಿಂತೆ. ಒಮ್ಮೆ ಮನೆ ತಲುಪಿದರೆ ಸಾಕಿತ್ತಪ್ಪಾ ಅಂತ. ಮಾರನೆ ದಿನ ಬ್ಯಾಗ್‌ ಪ್ಯಾಕ್‌ ಮಾಡಿ ಹೊರಟು ನಿಂತಾಗ ಅನ್ನಿಸಿದ್ದು ಇಷ್ಟೇ: “ಎಲ್ಲಾ ಸರಿ, ಒಂದು ದಿನಕ್ಕಿಂತ ಜಾಸ್ತಿ ಮನೆಯಿಂದ ಹೊರಗುಳಿಯಬಾರದಪ್ಪ!’

ಮತ್ತೆ ಒಂದಷ್ಟು ದಿನಕ್ಕೆ ಎಲ್ಲ ನೆನಪುಗಳು ಮರೆತಂತೆ ಖಾಲಿತನವೊಂದು ಆವರಿಸಿಕೊಳ್ಳುತ್ತದೆ. ಸುಮ್ಮಗೆ ಜೀವಿಸಬೇಕೆಂದು ಮನಸು ಹಾತೊರೆಯುತ್ತದೆ. ಆ ಹಾತೊರೆಯುವಿಕೆಯೊಂದು ಭ್ರಮೆಯಾ? ಯಾವುದೇ ಅರ್ಥಗಳಿಲ್ಲದೆ ಸುಮ್ಮಗೆ ಬದುಕುವುದೂ ಸತ್ತಂತೇ ಅನ್ನುವ ಜ್ಞಾನೋದಯವಾದ ಗಳಿಗೆಯಲ್ಲಿ ಒಳಗೊಂದು ಉತ್ಸಾಹ ಗರಿಗೆದರಿಕೊಳ್ಳುತ್ತದೆ.

– ಸ್ಮಿತಾ ಅಮೃತರಾಜ್‌, ಸಂಪಾಜೆ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.