ಅಧ್ಯಾತ್ಮ ಜ್ಯೋತಿಯ ಹಿಡಿದು ಅರಿವಿನ ಹಾದಿಯಲ್ಲಿ


Team Udayavani, Dec 17, 2017, 10:18 AM IST

Chin-Mudra.jpg

ಅಧ್ಯಾತ್ಮವಿದ್ಯಾ ವಿದ್ಯಾನಾಂ
 – ಶ್ರೀಮದ್ಭಗವದ್ಗೀತೆ
ಅಧ್ಯಾತ್ಮವೆ ನಿಚಿತ ಪ್ರಯೋಜನವೆನಗೆ
– ರತ್ನಾಕರವರ್ಣಿ
ಕಳೆದ ಐವತ್ತು ವರ್ಷಗಳ ಹಿಂದಿನ ಸಂದರ್ಭ! ಆಗ ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ಸಂಗೀತ ಮತ್ತು ಸಾಹಿತ್ಯ ನನ್ನ ಮನಸ್ಸನ್ನು ಗಾಢವಾಗಿ ಆವರಿಸಿಕೊಂಡಿದ್ದ ದಿನಗಳು. ಅವು ನನ್ನನ್ನು ಹಿಂಬಾಲಿಸುತ್ತಿದ್ದವು; ಇಲ್ಲ , ನಾನೇ ಅವುಗಳನ್ನು ಹಿಂಬಾಲಿಸುತ್ತಿದ್ದೆನೇನೊ. ನಮ್ಮ ಮನೆಯ ಕರಿಯಜ್ಜಿ, ನಮ್ಮ ತಂದೆಯ ತಾಯಿ ಹಾಗೂ ನನ್ನ ದೊಡ್ಡಪ್ಪನ ಹೆಂಡತಿ ಇಬ್ಬರಿಗೂ ನನ್ನನ್ನು ಕಂಡರೆ ಕಕ್ಕುಲಾತಿ! ನಮ್ಮ ಅಜ್ಜಿ ಸ್ವಾರಸ್ಯಕರವಾಗಿ ಹತ್ತಾರು ಕತೆಗಳನ್ನು ಹೇಳುತ್ತಿದ್ದಳು. ಅವಳು ಹೇಳಿದ ಕತೆಗಳ ಬೆನ್ನುಹತ್ತಿ ವಿಹರಿಸುತ್ತಿದ್ದೆ. ಅವು ನನ್ನ ಕನಸಿನಲ್ಲೂ ಲಗ್ಗೆ ಹಾಕುತ್ತಿದ್ದವು. ನಮ್ಮ ದೊಡ್ಡಮ್ಮ ಸುಶ್ರಾವ್ಯವಾಗಿ ಜನಪದ ಗೀತೆಗಳನ್ನು ಹಾಡುತ್ತಿದ್ದಳು. ನಾನು ಆಕೆಯಿಂದ ಮೊತ್ತಮೊದಲು ಗೋವಿನ ಹಾಡು ಕೇಳಿದ್ದೆ. ಆಕೆ ಅದನ್ನು ಎಲ್ಲಿಂದ ಕಲಿತಳೊ ನನಗೆ ತಿಳಿಯದು! ನಾನು ಮಾಧ್ಯಮಿಕ ತರಗತಿಯಲ್ಲಿ ಇದ್ದಾಗಲೇ ಅವಳು ಹೇಳುತ್ತಿದ್ದ ನೆನಪು! ನಾನು ದೊಡ್ಡಮ್ಮನ ಹಾಡಿಗೆ ಮರುಳಾದದ್ದು ಉಂಟು. ಆಕೆ ಸ್ವಲ್ಪಒರಟಾದ ಹೆಂಗಸು. ಆದರೆ, ನಾನು ಎಲೆ-ಅಡಿಕೆ ಕೊಟ್ಟು ಗೀತೆಗಳನ್ನು ಅವಳಿಂದ ಕೇಳುತ್ತಿದ್ದೆ. ಇದು ನಾನು ಚಿಕ್ಕಂದಿನಲ್ಲಿಯೇ ಸಾಹಿತ್ಯ-ಸಂಗೀತದ ಕಡೆ ಒಲಿದ ಕ್ಷಣಗಳು. ಐವತ್ತು ವರ್ಷಗಳ ಹಿಂದಿನ ಆ ನೆನಪು ಇನ್ನೂ ಹಸುರಾಗಿದೆ.

ಪ್ರೌಢಶಾಲೆಯಲ್ಲಿದ್ದಾಗ ಹರಿಶ್ಚಂದ್ರಕಾವ್ಯ ಮತ್ತು ಲಕ್ಷ್ಮೀಶನ ಜೈಮಿನಿಭಾರತ ನನ್ನ ಅಚ್ಚುಮೆಚ್ಚಿನ ಕಾವ್ಯಗಳಾಗಿದ್ದುವು. ಆ ಕಾವ್ಯಗಳನ್ನು ಹೇಗೋ ಸಂಪಾದಿಸಿಕೊಂಡು ಓದಿದ್ದರ ನೆನಪು. ನನಗೆ ಈ ಕಾವ್ಯಗಳನ್ನು ಕೊಟ್ಟು ಓದಿಸಿದವರು ನೆಲಮಂಗಲದ ಅಡೇಪೇಟೆಯಲ್ಲಿ ಸಣ್ಣದಾದ ಚಿಲ್ಲರೆ ಅಂಗಡಿಯನ್ನು ಇಟ್ಟುಕೊಂಡಿದ್ದ ಒಬ್ಬ ಶೆಟ್ಟರು! ಅವರ ಹೆಸರು ನೆನಪಿಲ್ಲ. ಅವರು ಲಕ್ಷ್ಮೀಶನ ಜೈಮಿನಿಭಾರತದ ಹಳೆಪ್ರತಿಯೊಂದನ್ನು ಓದಲು ನೀಡಿದರು. ಅನಂತರ ತಮ್ಮಲ್ಲಿದ್ದ ಇನ್ನಷ್ಟು ಕೃತಿಗಳನ್ನು ಕೊಟ್ಟರು. ಆ ಹಳೆಯ ಸುಂದರ ನೆನಪುಗಳು ನನ್ನ ಹೃದಯದಲ್ಲಿ ತುಂಬಿ ನಿಂತಿವೆ! ಅದೇ ರೀತಿ ದೇವಾಂಗ ಬೀದಿಯಲ್ಲಿದ್ದ ಒಬ್ಬ ಗೃಹಸ್ಥರು ಹರಿಶ್ಚಂದ್ರಕಾವ್ಯವನ್ನು ಕೊಟ್ಟು ಓದಿಸಿದ್ದು ಅಚ್ಚಳಿಯದೇ ಉಳಿದಿದೆ. ನಾನು ಇಂಥವರ ಜತೆ ಓಡಾಡುವಾಗ ನಾನೇನೊ ಸಾಧಿಸುತ್ತಿದ್ದೇನೆಂಬ ಭಾವ ಒತ್ತರಿಸಿಕೊಂಡು ಬರುತ್ತಿತ್ತು. ನಾನು ಹನ್ನೊಂದನೆಯ ತರಗತಿಯ ವಿದ್ಯಾರ್ಥಿಯಾಗಿರುವಾಗ, ನಮಗೆ ಅರ್ಥಶಾಸ್ತ್ರದ ಪಾಠವನ್ನು ಹೇಳುತ್ತಿದ್ದ ಆರ್‌.ಎಂ. ಶಿವಕುಮಾರ ಆರಾಧ್ಯರಿಗೆ ನನ್ನನ್ನು ಕಂಡರೆ ಅತೀವ ಪ್ರೀತಿ. ಅವರು ಗ್ರಂಥಾಲಯವನ್ನು ನೋಡಿಕೊಳ್ಳುತ್ತಿದ್ದರು. ನನಗೆ ಓದುವ ಚಪಲ. ಅವರು ಸಂಜೆ ನನ್ನನ್ನು ಗ್ರಂಥಾಲಯಕ್ಕೆ ಬಿಟ್ಟು, ಬೀಗಹಾಕಿಕೊಂಡು ಆಟವಾಡಲು ಹೋಗುತ್ತಿದ್ದರು. ನಾನು ಒಂದೊಂದೇ ಕಪಾಟುಗಳನ್ನು ತೆರೆಯುತ್ತ ಪುಸ್ತಕಗಳನ್ನು ನೋಡುತ್ತ ಆನಂದಿಸುತ್ತಿದ್ದೆ. ನಾನು ಅಲ್ಲಿ ಚಿಕ್ಕಚಿಕ್ಕ ಪುಸ್ತಕಗಳನ್ನು ಓದುತ್ತ ಕೂರುತ್ತಿದ್ದೆ. ಮನೆಗೆ ಹೋಗುವಾಗ ಯಾವುದಾದರೊಂದು ಪುಸ್ತಕವನ್ನು ಓದಲು ಕೊಡುತ್ತಿದ್ದರು. ನಾನು ಮನೆಗೆ ಬರುವಾಗ ನನ್ನ ಕಾಲುಗಳು ಭೂಮಿಯ ಮೇಲೆ ನಿಲ್ಲುತ್ತಿರಲಿಲ್ಲ. ಆಕಾಶದಲ್ಲಿ ಹಾರುತ್ತಿರುವ ಅನುಭವ ನನಗಾಗುತ್ತಿತ್ತು!

ನೆಲಮಂಗಲದ ಜಯಚಾಮರಾಜೇಂದ್ರ ಮುನಿಸಿಪಲ್‌ ಹೈಸ್ಕೂಲ್‌ ನನ್ನ ಜ್ಞಾನದ ತಾಣವಾಗಿತ್ತು! ಸ್ವಾಮಿ ವಿವೇಕಾನಂದರ “ಕೃತಿಶ್ರೇಣಿ’ಯ ಹಲವು ಸಂಪುಟಗಳನ್ನು ಓದಿದ್ದು ಅಲ್ಲಿಯೇ. ಮಾಸ್ಟರ್‌ ಮಹಾಶಯನ “ಶ್ರೀರಾಮಕೃಷ್ಣ ವಚನವೇದ’ ಮತ್ತು “ಶ್ರೀಅರವಿಂದ’ ಮತ್ತು “ಶ್ರೀರಮಣ’ರ ಜೀವನ-ಸಾಧನೆಗಳನ್ನು ಪರಿಚಯ ಮಾಡಿಕೊಂಡದ್ದು ಆಗಲೇ. 

ಜಿ. ಹನುಮಂತರಾಯರ ಧರ್ಮದೀಪಕರು (1998) ನಮಗೆ ಉಪ ಪಠ್ಯಪುಸ್ತಕವಾಗಿತ್ತು. ನಾನು ಆ ಬರೆಹದ ಸೊಗಸಿಗೆ ಮಾರುಹೋಗಿದ್ದೆ. ಅನಂತರ ಕುವೆಂಪು ಅವರ ಸ್ವಾಮಿ ವಿವೇಕಾನಂದ ಹಾಗೂ ಶ್ರೀರಾಮಕೃಷ್ಣಪರಮಹಂಸ ಗ್ರಂಥಗಳು ನನ್ನ ಬದುಕಿನ ಮಾರ್ಗದರ್ಶಕ ಸೂತ್ರಗಳಾದುವು. ಜೀವನ ಚರಿತ್ರೆಗಳು ಅನಂತರ ನನ್ನ ಭಾವಕೋಶದ ಭಾಗಗಳೇ ಆದುವು. ನಾನು ಸಿದ್ಧಗಂಗಾ ಕ್ಷೇತ್ರದಲ್ಲಿ ಓದುತ್ತಿದ್ದಾಗ ಅಲ್ಲಿಯ ಗ್ರಂಥ ಭಂಡಾರವನ್ನು ಸಂಪೂರ್ಣವಾಗಿ ಬಳಸಿಕೊಂಡೆ. ಇದು ಈಗಲೂ ನನಗೊಂದು ಹೆಮ್ಮೆಯ ಸಂಗತಿ. ಸಿದ್ಧಗಂಗಾಮಠದ ಸಂಸ್ಕೃತ ಕಾಲೇಜಿನ ಗ್ರಂಥಭಂಡಾರದಲ್ಲಿ 18 ಮತ್ತು 19ನೆಯ ಶತಮಾನದ ನೂರಾರು ಶರಣರ, ತಣ್ತೀಪದಕಾರರ, ಯೋಗಿಗಳ, ಮಹಾಂತರ, ಸಿದ್ಧರ, ಅವಧೂತರ, ಸಂನ್ಯಾಸಿಗಳ ಜೀವನಕಥಾ ಸಾಹಿತ್ಯವನ್ನು ಓದಿದೆ. ಅವರು ಬದುಕಿನುದ್ದಕ್ಕೂ ಸಾಧಿಸಿದ ತಣ್ತೀಗಳು, ಜೀವನಕ್ರಮಗಳು ನನ್ನ ಮನಸ್ಸನ್ನು ಆಳವಾಗಿ ಪ್ರಭಾವಿಸಿದುವು! ನಾನು ಕೇಳಿದ, ನೋಡಿದ, ಸಂಪರ್ಕಕ್ಕೆ ಬಂದಂಥ ನೂರಾರು ಸಂತರು ಇಲ್ಲಿಯ ಮಾತುಗಳನ್ನು ಬರೆಯುವಾಗ ನನ್ನ ನೆನಪಿಗೆ ಬರುತ್ತಿದ್ದಾರೆ.

ನಾನು 1972-73ರಲ್ಲಿ ಕೆಲಕಾಲ ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿದ್ದೆ. ಆಗ ಸಂನ್ಯಾಸಿಯಾಗಬೇಕೆಂಬ ಉಮೇದು ನನ್ನೊಳಗೆ ಬಂದಿತ್ತು. ಅದೊಂದು ರುದ್ರಸಂಕಟದ ಸಮಯ. ಆಗ ಕೂಡಲೆ ಅನ್ನಿಸಿದ್ದು ಸಂನ್ಯಾಸಿಯಾಗಬೇಕೆಂಬ ದಿಢೀರ್‌ ಬಯಕೆ. ನನ್ನ ಹಿರಿಯಮಿತ್ರ ಬಿ.ಎಸ್‌. ಬಸವಾರಾಧ್ಯ-ಬೆಂಗಳೂರಿನ ರಾಮಕೃಷ್ಣಾಶ್ರಮಕ್ಕೆ ತಂದು ಬಿಟ್ಟುಹೋದರು. ಆಗ ಆಶ್ರಮದ ಅಧ್ಯಕ್ಷರಾಗಿದ್ದವರು ಪರಮ ಪೂಜ್ಯರಾದ ಸ್ವಾಮಿ ಆದಿದೇವಾನಂದರು. ಅವರು ಮಂಗಳೂರಿನ ಆಶ್ರಮದಿಂದ,  ಬೆಂಗಳೂರಿನ ಆಶ್ರಮಕ್ಕೆ ಬಂದು ಕೆಲವು ವರ್ಷಗಳೇ ಆಗಿದ್ದುವು. ನಾನು ಅವರನ್ನು ಕಂಡೆ. ಅವರಲ್ಲಿ ನನ್ನ ಪ್ರವೃತ್ತಿಗಳನ್ನು ನಿವೇದಿಸಿಕೊಂಡೆ. ನಾನು ಓದಿದ ಹಲವಾರು ಅಧ್ಯಾತ್ಮಸಂಬಂಧಿ ಪುಸ್ತಕಗಳ ವಿವರಗಳನ್ನು ಹೇಳಿದೆ. ಸ್ವಾಮೀಜಿಯವರೇ ತಂದಿದ್ದ ಶ್ರೀಮದ್ಭಗವದ್ಗೀತಾ ಕೃತಿಯ ವೈಶಿಷ್ಟ್ಯಗಳನ್ನು ಆ ಸಂದರ್ಭದಲ್ಲೇ ನಾನು ಪ್ರಸ್ತಾವಿಸಿದ ನೆನಪು. ಆನಂತರ ಆಶ್ರಮದಲ್ಲಿ ಗುಪ್ತನಾಗಿ ಆರುತಿಂಗಳಿದ್ದೆ. ಆಗ ಪ್ರತಿನಿತ್ಯ ಬೆಳಿಗ್ಗೆ ಐದುಗಂಟೆಗೆ ಅವರ ಬಳಿ ಉಪನಿಷತ್‌ ಪಾಠಕ್ಕೆ ಹೋಗುತ್ತಿದ್ದೆ. ಅವರು ಈಶ, ಕೇನ ಮತ್ತು ಕಠೊಪನಿಷತ್ತಿನ ಆಯ್ದ ಭಾಗಗಳನ್ನು ಶಾಂಕರಭಾಷ್ಯ ಸಹಿತ ಪಾಠ ಮಾಡಿದರು. ಆ ವೃದ್ಧ ತಪಸ್ವಿಯ ಮಂತ್ರಗಳ ಬೆಳಕಿನಲ್ಲಿ ಕುಳಿತು ಪಾಠಕೇಳಿದ್ದು, ಹೃದ್ಗತ ಮಾಡಿಕೊಂಡದ್ದು ಅಪೂರ್ವ ಭಾಗ್ಯವಿಶೇಷವೇ ಸರಿ! ನನ್ನ ಜೀವನದಲ್ಲಿ ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದರ ಮಂತ್ರಸದೃಶ ನುಡಿಗಳು ಸ್ವಾಮಿ ಆದಿದೇವಾನಂದರಿಂದ ನನಗೆ ಅನುಗ್ರಹಿತವಾದುವು! ಇದೊಂದು ನನ್ನ ಬದುಕಿನ ಪುಣ್ಯವಿಶೇಷವೇ ಸರಿ!

ನಾನು ಓದನ್ನು ಮುಗಿಸಿ 1976ನೆಯ ಇಸವಿಯಲ್ಲಿ  ಬೆಂಗಳೂರಿಗೆ ಬಂದೆ. ಕೆಲವು ತಿಂಗಳಲ್ಲೆ ಅನೇಕ ವಿದ್ವಾಂಸರ ಹಾಗೂ ಸಾಧುಗಳ ಪರಿಚಯ ನನಗೆ ಆಯಿತು! ಆಗ ಶ್ರೀಮೂರ್ತಿ ನುಲೇನೂರು ಎಂಬುವರು ಪರಿಚಯವಾಗಿ ಗಾಢವಾದ ಅನುಬಂಧ ನಮ್ಮಿಬ್ಬರಲ್ಲಿ ಬೆಳೆಯಿತು. ಅವರು ಸ್ವಾಮಿ ರಾಮತೀರ್ಥರ ಬರೆಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, ಹಲವಾರು ಅಧ್ಯಾತ್ಮ ಸಂಬಂಧಿ ಕೃತಿಗಳನ್ನು ರಚಿಸಿದ್ದರು. ಅವರು ಖೋಡೆ ಅವರ ಮನೆಯಲ್ಲಿ ಇರುತ್ತಿದ್ದರು. ಅವರ ಸ್ನೇಹದಿಂದ ನನಗೆ ಅಧ್ಯಾತ್ಮಸಂಬಂಧಿ ವಿಚಾರಗಳು, ವ್ಯಕ್ತಿಗಳು ಸಾಧನಕ್ರಮಗಳು ತಿಳಿದುವು. ನಾನು ಅನೇಕ ಹಿರಿಯರನ್ನು ಕಂಡೆ! ಸಂನ್ಯಾಸಿಗಳ ಸಹವಾಸವಂತೂ ಆಗ ಇದ್ದೇ ಇತ್ತು. ಈ ಹೊತ್ತಿನಲ್ಲೇ ಶಂಬಾಜೋಶಿ ಅವರ ಕೃತಿವ್ಯಾಸಂಗಕ್ಕೆ ತೊಡಗಿದೆ. ಅವರು ಬರೆದ ಅರವಿಂದ ಘೋಷ್‌ ಕೃತಿ ನನ್ನ ಮನಸ್ಸನ್ನು ಆಳವಾಗಿ ಸೆಳೆಯಿತು! ಅವರ ಬರೆಹದ ವಿಚಾರಕ್ರಮ ಇಷ್ಟವಾಯಿತು. ಮುಂದೆ ಕರ್ನಾಟಕ-ಮಹಾರಾಷ್ಟ್ರ ಸಂತರ ಪರಮಾರ್ಥದ ನೆಲೆಗಳನ್ನು ತಿಳಿಯಲು ಇವರಿಂದ ಸಹಾಯಕ  ವಾಯಿತು. ತಮಿಳುನಾಡಿನ ಆಳ್ವಾರರ ಹಾಗೂ ನಾಯನ್ಮಾರರ ಭಕ್ತಿಯ ನೆಲೆಗಳನ್ನು ಅರಿಯತೊಡಗಿದೆ. ನನ್ನ ಪ್ರೌಢಶಾಲೆಯ ಗುರುಗಳಾದ ಮಹಾವಿದ್ವಾನ್‌ ಎಸ್‌.ವಿ. ರಾಮಸ್ವಾಮಿ ಅಯ್ಯಂಗಾರ್‌ ಅವರು ತಿರುವಾಯೊ¾ಳಿ, ತಿರುಪ್ಪಾವೈ, ತಿರುಕ್ಕುರುಳ್‌ ಮುಂತಾದ ಕೃತಿಗಳನ್ನು ಪರಿಚಯ ಮಾಡಿಕೊಟ್ಟರು. ಈ ರೀತಿ ನಡಿಗೆಯ ಅಧ್ಯಾತ್ಮ ಸಂಬಂಧೀ ಸ್ತರಗಳಿಂದ ವಿದ್ವದ್‌ ಸ್ತರಗಳ ಕಡೆಗೆ ಸಂಚರಿಸಲು ನನಗೆ ಅವಕಾಶವಾಯಿತು. ಆಗ ನವಕರ್ನಾಟಕದಲ್ಲಿದ್ದ ಎಸ್‌. ಆರ್‌. ಭಟ್‌ ಎಂಬ ವಿದ್ವಾಂಸ ಮಹನೀಯರು ಬೌದ್ಧ-ಜೈನ-ಚಾರ್ವಾಕ ದರ್ಶನಗಳ ಕಡೆಗೆ ನನ್ನ ಗಮನವನ್ನು ಸೆಳೆದರು. ಅವರು ರಾಹುಲ ಸಾಂಕೃತ್ಯಾಯನರ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು. ನಾನು ರಾಹುಲರ ಕೆಲವು ಕೃತಿಗಳನ್ನು ನೋಡಿದೆ, ಓದಿದೆ. 

ನನ್ನ ಹಿರಿಯ ಸನಿ¾ತ್ರರಾದ ಪಂ. ಷಣ್ಮಖಯ್ಯ ಅಕ್ಕೂರಮಠ ಅವರ ನೆರವಿನಿಂದ ರಾಹುಲರ ದರ್ಶನ್‌ ಔರ್‌ ದಿಗªರ್ಶನ್‌ ಕೃತಿಯ ಅಭ್ಯಾಸಕ್ಕೆ ನನಗೆ ಅವಕಾಶವಾಯಿತು. ಈ ನಡುವೆ ಹಿರಿಯರಾದ ಶಾಸ್ತ್ರ ಚೂಡಾಮಣಿ ಪ್ರೊ. ಎಸ್‌.ಕೆ. ರಾಮಚಂದ್ರ ರಾವ್‌ ಅವರ ಪರಿಚಯ ಲಾಭ ಲಭಿಸಿತು. ಇದು ಪೂರ್ವಜನ್ಮದ ಪುಣ್ಯಫ‌ಲವೇ ಸರಿ! ಅವರ ಜತೆಗಿನ ಒಡನಾಟದಲ್ಲಿ ನಾನು ಅನುಭಾವ, ಅಧ್ಯಾತ್ಮ, ತಣ್ತೀಶಾಸ್ತ್ರಗಳ ಸೂಕ್ಷ್ಮಪರದೆಗಳನ್ನು ಅವರ ವಾಕ್‌ಪ್ರಪಂಚದಿಂದ ಗ್ರಹಿಸಿದೆ. ಅವರು ನನ್ನನ್ನು ಕಿರಿಯ ಸ್ನೇಹಿತನಂತೆ ಕಂಡು ತಮ್ಮ ಅನೇಕ ಅನುಭವಗಳನ್ನು ನನ್ನೊಡನೆ ಹಂಚಿಕೊಂಡರು!

ನಾನು ಅವರನ್ನು ಮೊದಲಿಗೆ ಕಂಡದ್ದು 1982-83ರಲ್ಲಿ ಎಂದು ತೋರುತ್ತದೆ. ಆಗ ನಾನು ಹೈಸ್ಕೂಲಿನ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅವರ ಪ್ರಸನ್ನ ಮುಖಮಂಡಲ, ಪ್ರೀತಿಯೇ ಮೈವೆತ್ತಿದಂತೆ ಹೃದಯದಿಂದ ಬರುತ್ತಿದ್ದ ಮಾತುಗಳು, ಅನೇಕ ಅಪೂರ್ವಗ್ರಂಥಗಳಿಂದ ಉದ್ಧರಿಸುತ್ತಿದ್ದ ಶ್ಲೋಕಗಳೂ ವಾಕ್ಯಗಳೂ ಮನೋಹರವಾಗುತ್ತಿದ್ದುವು. ನಾನೊಮ್ಮೆ “”ತಾವು ಯಾವುದಾದರೊಂದು ಪ್ರಕರಣಗ್ರಂಥವನ್ನು ನನಗೆ ಪಾಠಮಾಡಿ” ಎಂದು ಕೇಳಿಕೊಂಡೆ. ಆದರೆ, ಅವರು ಅದಕ್ಕೆ ಸಮ್ಮತಿಸದೆ “”ಇಬ್ಬರೂ ಕುಳಿತು ಓದೋಣ” ಎಂದು ಬಿಟ್ಟರು. ಆದರೆ, ಅನೇಕ ಗ್ರಂಥಗಳ ಬಗೆಗೆ ಪರಸ್ಪರ ಚರ್ಚಿಸಿದ್ದುಂಟು! ಅವರ ವ್ಯಾಖ್ಯಾನಕ್ಕೆ ನಾನು ತಲೆಬಾಗುತ್ತಿದ್ದೆ. ಆಮೇಲೆ ಡಾ. ಬನ್ನಂಜೆ ಗೋವಿಂದಾಚಾರ್ಯರ ಸಂಪರ್ಕಕ್ಕೆ ಬಂದೆ. ಅವರ ಗ್ರಂಥರಾಶಿಗಳಿಂದ ಹೊಸದಿಕ್ಕನ್ನು ಕಂಡುಕೊಂಡೆ. ಅವರು ಸಂಸ್ಕೃತದಲ್ಲಿ ಬರೆದ ಸೂತ್ರ, ಭಾಷ್ಯ, ವ್ಯಾಖ್ಯಾನಗಳು ನನ್ನನ್ನು ಇನ್ನಿಲ್ಲದಂತೆ ಹೊಸಹೊಸ ದಿಕ್ಕುಗಳನ್ನು ತೋರಿಸಿದುವು. ಉಪನಿಷತ್ತು, ಗೀತೆ, ರಾಮಾಯಣ, ಮಹಾಭಾರತ, ಭಾಗವತ, ತಂತ್ರಶಾಸ್ತ್ರ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಹತ್ತಾರು ಮೌಲಿಕ ಗ್ರಂಥಗಳು “ತಣ್ತೀಶಾಸ್ತ್ರ’ದ ಪ್ರಪಂಚಕ್ಕೂ ಅಧ್ಯಾತ್ಮಶಾಸ್ತ್ರದ ಪ್ರಪಂಚಕ್ಕೂ ಬೆಲೆಯುಳ್ಳ ಕೊಡುಗೆಗಳಾಗಿವೆ. ನಾನು ಮಧ್ಯರಾತ್ರಿಯ ನಿತಾಂತ ಮೌನದಲ್ಲಿ ಅವರ ಮಾತುಗಳನ್ನು ಕೃತಿಗಳ ಮೂಲಕ ಆಲಿಸಿದ್ದೇನೆ. ನಾನು ಇಂಥ ಇಬ್ಬರು ಋಷಿಸದೃಶರ ಸಹವಾಸಕ್ಕೆ ಬಂದದ್ದು ಭಾಗ್ಯವೇ ಸರಿ. “ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ’ ಎನ್ನದೆ ಬೇರೇನನ್ನು ಹೇಳಬಹುದು?

– ಮಲ್ಲೇಪುರಂ ಜಿ. ವೆಂಕಟೇಶ 

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.