ಶ್ರೀಲಂಕಾದ ಕತೆ: ಮೊಲ ಮತ್ತು ನರಿ
Team Udayavani, Oct 20, 2019, 4:39 AM IST
ಒಂದು ಬೆಳದಿಂಗಳಿನಂತೆ ಬೆಳ್ಳಗಾಗಿದ್ದ ಮೊಲ ಕಾಡಿನ ಬಿಲದಲ್ಲಿ ವಾಸವಾಗಿತ್ತು. ಅದರ ನೆರೆಯಲ್ಲಿ ಒಂದು ಗವಿಯಲ್ಲಿ ಕಪ್ಪು ಬಣ್ಣದ ನರಿ ನೆಲೆಸಿತ್ತು. ಮೊಲ ಶ್ರಮಜೀವಿ. ಕಷ್ಟದಿಂದ ಕೆಲಸ ಮಾಡಿ ಜೀವನ ನಡೆಸಿಕೊಂಡಿತ್ತು. ಆದರೆ ನರಿ ಹಾಗಲ್ಲ, ಸವಿಮಾತುಗಳಿಂದ ಬೇರೆಯವರನ್ನು ಮೋಸಪಡಿಸಿ ಕಾಲ ಕಳೆಯುವುದು ಬಿಟ್ಟರೆ ದುಡಿಯುವುದು ಅದರ ಮನಸ್ಸಿಗೆ ಒಗ್ಗುತ್ತಿರಲಿಲ್ಲ.
ಒಂದು ಸಲ ಕಾಡಿನಲ್ಲಿ ಆಹಾರಕ್ಕೆ ಕ್ಷಾಮವುಂಟಾಯಿತು. ಪ್ರಾಣಿಗಳೆಲ್ಲವೂ ಹಸಿವಿನಿಂದ ಪರಿತಪಿಸತೊಡಗಿದವು. ಮೊಲ ಮತ್ತು ನರಿ ಆಹಾರ ಹುಡುಕುತ್ತ ತುಂಬ ದೂರ ಅಲೆದವು. ಎಲ್ಲಿಯೂ ತಿನ್ನಲು ಏನೂ ಸಿಗಲಿಲ್ಲ. ಆಯಾಸ ಪರಿಹಾರಕ್ಕಾಗಿ ಒಂದು ಮರದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದವು. ಎಚ್ಚೆತ್ತಾಗ ಮೊಲದ ಮೈಯಲ್ಲಿ ಒಂದು ಬೀಜ ಅಂಟಿಕೊಂಡಿರುವುದು ಕಾಣಿಸಿತು. ನರಿಯನ್ನು ಕರೆದು, “”ನೋಡಿದೆಯಾ, ನನ್ನ ಮೈಯಲ್ಲಿ ಒಂದು ಬೀಜ ಅಂಟಿಕೊಂಡಿದೆ” ಎಂದು ತೋರಿಸಿತು.
“”ಬೀಜಕ್ಕೇನೂ ಬರವಿಲ್ಲ. ನನ್ನ ಮೈಯಲ್ಲಿಯೂ ಅಂಥದೇ ಒಂದು ಬೀಜ ಅಂಟಿಕೊಂಡಿದೆ. ಆದರೆ, ನಮ್ಮ ಇಷ್ಟು ದೊಡ್ಡ ಹೊಟ್ಟೆಗೆ ಅದರಿಂದ ಏನು ಪ್ರಯೋಜನವಿದೆ?” ಎಂದು ನರಿ ಅಸಹನೆಯಿಂದ ಕೇಳಿತು. ಮೊಲವು ನಗುತ್ತ, “”ನರಿಯಣ್ಣ, ಬೀಜ ಎಂದರೆ ಅಕ್ಷಯ ನಿಧಿ ಅಲ್ಲವೆ? ಇದು ಸೋರೆಕಾಯಿಯ ಬೀಜ. ಮಂಗಗಳು ಕಾಯಿ ತಿಂದು ಬೀಜವನ್ನು ಕೆಳಗೆಸೆದಿವೆ. ಇದನ್ನು ತೆಗೆದುಕೊಂಡು ಹೋಗಿ ನಮ್ಮ ಮನೆಗಳ ಮುಂದೆ ಬಿತ್ತನೆ ಮಾಡೋಣ. ಗೊಬ್ಬರ, ನೀರು ಹಾಕಿ ಗಿಡವನ್ನು ಬೆಳೆದರೆ ಬುಟ್ಟಿ ತುಂಬ ಕಾಯಿಗಳಾಗುತ್ತವೆ” ಎಂದಿತು.
ನರಿ ಮತ್ತು ಮೊಲ ಬೀಜವನ್ನು ತೆಗೆದುಕೊಂಡು ಬಂದವು. ಮೊಲ ಶ್ರದ್ಧೆಯಿಂದ ಬೀಜವನ್ನು ಬಿತ್ತಿ ಗಿಡವಾಗುವ ವರೆಗೂ ನೀರು ಹನಿಸಿತು. ಗಿಡವಾದ ಬಳಿಕ ಗೊಬ್ಬರ ಹಾಕಿ ಆರೈಕೆ ಮಾಡಿತು. ನರಿ ಯಾವ ಕೆಲಸಕ್ಕೂ ಹೋಗಲಿಲ್ಲ. ಬೀಜವನ್ನು ಹಿತ್ತಲಿನಲ್ಲಿ ಎಸೆದು, “”ತಿನ್ನುವ ಪುಣ್ಯವಿದ್ದರೆ ಬಂಡೆಯೂ ಚಿಗುರಿ ಕಾಯಿಗಳಾಗುತ್ತವೆ. ನೀರು, ಗೊಬ್ಬರ ಹಾಕಿ ಸಾಕುವುದೇ ಬೇಡ” ಎಂದು ಹೇಳಿತು. ಅದು ಬಿತ್ತಿದ ಬೀಜ ಹುಟ್ಟಲಿಲ್ಲ. ಮೊಲ ಬಿತ್ತಿದ ಬೀಜ ಬಳ್ಳಿಯಾಗಿ ಹರಡಿ ಒಂದು ದೊಡ್ಡ ಕಾಯಿಯನ್ನು ಬಿಟ್ಟಿತು.
“”ನರಿಯಣ್ಣ, ನನ್ನ ಬಳ್ಳಿ ನೋಡು, ಎಷ್ಟು ದೊಡ್ಡ ಕಾಯಿ ಬಿಟ್ಟಿದೆ!” ಎಂದು ಮೊಲ ತೋರಿಸಿತು. ಕಾಯಿಯನ್ನು ಕಂಡು ನರಿಗೆ ಬಾಯಲ್ಲಿ ನೀರೂರಿತು. ತಾನೊಬ್ಬನೇ ಅದನ್ನು ತಿನ್ನಬೇಕೆಂದು ಲೆಕ್ಕ ಹಾಕಿತು. ಮೊಲದೊಂದಿಗೆ, “”ಕಾಯಿಯೇನೋ ಭರ್ಜರಿಯಾಗಿದೆ. ಆದರೆ ಅದನ್ನು ಹಾಗೆಯೇ ತಿನ್ನುವಂತಿಲ್ಲ. ದೇಹಕ್ಕೆ ವಿಷವಾಗುತ್ತದೆ. ಅದರಿಂದ ಅಕ್ಕಿಯ ಜೊತೆಗೆ ಬೆರೆಸಿ ಪಾಯಸ ತಯಾರಿಸಿ ತಿನ್ನಬೇಕು” ಎಂದು ಸಲಹೆ ನೀಡಿತು. ಮೊಲ ಮುಖ ಸಣ್ಣದು ಮಾಡಿ, “”ಅಕ್ಕಿಯ ಪಾಯಸವೆ? ಅದಕ್ಕೆ ಅಕ್ಕಿ, ತೆಂಗಿನಕಾಯಿ, ಬೆಲ್ಲ ಬೇಕಾಗುತ್ತದೆ. ಮನೆಯೊಳಗೆ ಸಾಮಗ್ರಿಗಳಿರುವ ಡಬ್ಬಗಳೆಲ್ಲವೂ ಖಾಲಿಯಾಗಿವೆ. ಏನು ಮಾಡಲಿ?” ಎಂದು ಕೇಳಿತು.
“”ಅಯ್ಯೋ ಮರುಳೇ, ನಾನಿರುವಾಗ ನಿನಗೇಕೆ ಚಿಂತೆ? ನಾನು ಹೇಳಿದ ಹಾಗೆ ಮಾಡಿದರೆ ಎಲ್ಲವನ್ನೂ ಉಚಿತವಾಗಿ ಸಂಪಾದಿಸಬಹುದು. ನೋಡು, ನಮ್ಮ ಮನೆಯ ಸನಿಹದಲ್ಲಿ ಒಂದು ರಸ್ತೆಯಿದೆ ತಾನೆ? ಅಲ್ಲಿ ಯಾರಾದರೂ ರೈತರು ಅಕ್ಕಿಚೀಲ ಹೊತ್ತುಕೊಂಡು ಬರುತ್ತಾರೋ ಎಂದು ಗಮನಿಸು. ಅಂಥವರು ಕಣ್ಣಿಗೆ ಬಿದ್ದರೆ ರಸ್ತೆಯ ಮಧ್ಯೆ ಸತ್ತು ಹೋದವರ ಹಾಗೆ ನಟಿಸುತ್ತ ಮಲಗು. ಆಗ ಅವನು ಚೀಲವನ್ನು ಕೆಳಗಿಳಿಸಿ ನಿನ್ನನ್ನು ಹಿಡಿದುಕೊಳ್ಳಲು ಬರುತ್ತಾನೆ. ನಾನು ಮಿಂಚಿನ ವೇಗದಲ್ಲಿ ಚೀಲವನ್ನು ಹೊತ್ತುಕೊಂಡು ಬಂದು ನಿನ್ನ ಬಿಲದಲ್ಲಿಡುತ್ತೇನೆ. ನೀನು ಅವನ ಕೈಗೆ ಸಿಲುಕಬಾರದು. ಅವನು ಹತ್ತಿರ ಬಂದು ಕೈಚಾಚುವಾಗ ಪುಟಕ್ಕನೆ ಎದ್ದು ಓಡಿಬರಬೇಕು” ಎಂದು ನರಿ ಉಪಾಯ ಹೇಳಿಕೊಟ್ಟಿತು.
ಮೊಲ ದಾರಿಯಲ್ಲಿ ಕಾದು ಕುಳಿತಿತು. ಒಬ್ಬ ರೈತ ಅಕ್ಕಿಚೀಲ ಹೊತ್ತುಕೊಂಡು ಸಂತೆಗೆ ಹೊರಟು ಅದೇ ದಾರಿಯಾಗಿ ಬಂದ. ಮೊಲ ನರಿಗೆ ಈ ವಿಷಯ ಹೇಳಿ ನಡುದಾರಿಯಲ್ಲಿ ಮಲಗಿತು. ರೈತ ಮೊಲ ಸತ್ತಿದೆಯೆಂದು ಭಾವಿಸಿ ಚೀಲವನ್ನು ಕೆಳಗಿಟ್ಟು ಹಿಡಿಯಲು ಹೋದ. ಅಷ್ಟರಲ್ಲಿ ಮೊಲ ಓಡಿಹೋಯಿತು. ಮರಳಿ ಬಂದು ನೋಡಿದರೆ ಅಕ್ಕಿಯೂ ಕಾಣಿಸಲಿಲ್ಲ. ನರಿ ಅದನ್ನು ಲಪಟಾಯಿಸಿತ್ತು. ರೈತ ಚಿಂತೆಯಿಂದ ತಲೆಗೆ ಕೈಯಿಟ್ಟುಕೊಂಡು ಮನೆಗೆ ಮರಳಿದ.
ಅಕ್ಕಿ ಕಂಡು ಮೊಲ ಸಂತೋಷಪಟ್ಟಿತು. “”ನರಿಯಣ್ಣ, ನಿನ್ನ ತಂತ್ರದಿಂದ ಅಕ್ಕಿಯೇನೋ ಸಿಕ್ಕಿತು. ಇನ್ನು ಬೆಲ್ಲ ಮತ್ತು ತೆಂಗಿನಕಾಯಿ ಸಂಪಾದಿಸಲು ಏನು ದಾರಿಯಿದೆ?” ಎಂದು ಕೇಳಿತು. “”ಪ್ರತಿಯೊಂದಕ್ಕೂ ಹೊಸ ಉಪಾಯ ಮಾಡುವ ಅಗತ್ಯವಿಲ್ಲ. ತೆಂಗಿನಕಾಯಿ ಮೂಟೆ ಹೊತ್ತವರು ಬರುವಾಗ ನೀನು ಸತ್ತಂತೆ ಮಲಗಿಕೋ. ನಾನು ಮೂಟೆಯನ್ನು ಲಪಟಾಯಿಸುತ್ತೇನೆ. ಬೆಲ್ಲದ ವ್ಯಾಪಾರಿ ಬರುವಾಗಲೂ ಹೀಗೆಯೇ ಮಾಡಿದರಾಯಿತು” ಎಂದು ನರಿ ಹೇಳಿತು. ಅದೇ ಪ್ರಕಾರ ತೆಂಗಿನಕಾಯಿ, ಬೆಲ್ಲ ಬಿಲದ ಬಳಿಗೆ ತಲುಪಿತು. ಆದರೂ ಮೊಲದ ಮುಖ ಅರಳಲಿಲ್ಲ. “”ನರಿಯಣ್ಣ, ತೆಂಗಿನಕಾಯಿಯನ್ನು ತುರಿದು ಹಾಲು ತೆಗೆಯಬೇಕಿದ್ದರೆ ತುರಿಮಣೆ ಬೇಕು. ಅಕ್ಕಿಯನ್ನು ಹಿಟ್ಟು ಮಾಡಲು ಒರಳು ಬೇಕು. ಪಾಯಸ ತಯಾರಿಸಲು ದೊಡ್ಡ ಮಡಕೆ ಬೇಕು. ಇದೆಲ್ಲ ಎಲ್ಲಿಂದ ತರೋಣ?” ಎಂದು ಕೇಳಿತು.
“”ತುರಿಮಣೆ ಬೇಕಾಗಿಲ್ಲ. ನನ್ನ ಹಲ್ಲುಗಳಿಂದ ತೆಂಗಿನಕಾಯಿ ತುರಿದು ಕೊಡುತ್ತೇನೆ. ಅಕ್ಕಿಯನ್ನು ನೆನೆ ಹಾಕಿ ನನ್ನೊಂದಿಗೆ ತೆಗೆದುಕೊಂಡು ಬಾ. ಸಮೀಪದ ಹಳ್ಳಿಯಲ್ಲಿ ಒಬ್ಬಳು ಅಜ್ಜಿ ಇದ್ದಾಳೆ. ನಾನು ಅಂಗಳದಲ್ಲಿ ನಿಂತು ಕೆಟ್ಟದಾಗಿ ಕೂಗುತ್ತೇನೆ. ಅಜ್ಜಿ ನನ್ನನ್ನು ಓಡಿಸಲು ಅಂಗಳಕ್ಕೆ ಬರುತ್ತಾಳೆ. ಆ ಹೊತ್ತಿಗೆ ಒಳಗೆ ಹೋಗಿ ಅಕ್ಕಿಯನ್ನು ಅರೆದುಕೋ. ಅದಾದ ಮೇಲೆ ಕುಂಬಾರನ ಮನೆಗೆ ಹೋಗೋಣ. ಅವನ ಕೋಳಿಗೂಡಿನ ಬಳಿ ನಾನು ಕೂಗಿ ದೂರ ಓಡುತ್ತೇನೆ. ಕುಂಬಾರ ಕೋಳಿಗಳ ರಕ್ಷಣೆಗೆ ಬರುತ್ತಾನೆ. ಅದೇ ಸಮಯ ನೋಡಿ, ಒಂದು ಮಡಕೆ ಹೊತ್ತುಕೊಂಡು ಬಂದುಬಿಡು” ಎಂದು ನರಿ ಹೇಳಿಕೊಟ್ಟಿತು.
ನರಿ ಹೇಳಿದ ಹಾಗೆ ಮಾಡಿ ಮೊಲ ಎಲ್ಲ ವಸ್ತುಗಳನ್ನೂ ಸಂಪಾದಿಸಿತು. ಪಾಯಸ ಮಾಡಲು ಸಿದ್ಧತೆ ನಡೆಸಿ, “”ನರಿಯಣ್ಣ, ಬಾ ನನಗೆ ಸ್ವಲ್ಪ ಸಹಾಯ ಮಾಡು” ಎಂದು ಕರೆಯಿತು. ನರಿ ಮಲಗಿದಲ್ಲಿಂದ ಮೇಲೇಳಲಿಲ್ಲ. “”ಸುಸ್ತೋ ಸುಸ್ತು. ನಿನಗೆ ಬೇಕಾಗಿ ಊರಿಡೀ ಓಡಾಡಿ ಎದ್ದು ನಿಲ್ಲುವುದಕ್ಕೂ ಶಕ್ತಿಯಿಲ್ಲ. ಪಾಯಸ ನೀನೇ ಮಾಡು. ನನಗೇನೂ ಅದರಲ್ಲಿ ಆಶೆಯಿಲ್ಲ. ಆದರೂ ನನಗೆ ಕೊಡಬೇಕೆಂದು ನಿನಗನಿಸಿದರೆ ಒಂದೇ ಒಂದು ರಂಧ್ರವೂ ಇಲ್ಲದ ಬಾಳೆಯೆಲೆ ಹುಡುಕಿ ತಾ. ರಂಧ್ರವಿರುವ ಬಾಳೆಯೆಲೆಯಲ್ಲಿ ನಾನು ಆಹಾರ ಸ್ವೀಕರಿಸುವುದಿಲ್ಲ. ಅದರಿಂದ ಬುದ್ಧಿಶಕ್ತಿ ಕಡಿಮೆಯಾಗುತ್ತದೆ ಎಂದು ನನ್ನ ಅಜ್ಜ ಹೇಳುತ್ತಿದ್ದರು. ತೆಂಗಿನಕಾಯಿಯನ್ನು ಒಡೆದು ತಂದುಕೊಟ್ಟರೆ ಕಷ್ಟದಲ್ಲಿ ಹೆರೆದು ಕೊಡುತ್ತೇನೆ” ಎಂದು ಹೇಳಿತು. ಮೊಲ ತಂದುಕೊಟ್ಟ ತೆಂಗಿನಕಾಯಿಯನ್ನು ಎಲ್ಲ ತಿಂದು ಮುಗಿಸಿತು. ಮೊಲ ಬಂದು, “”ತೆಂಗಿನಕಾಯಿ ಎಲ್ಲಿದೆ?” ಎಂದು ಕೇಳಿದಾಗ ನಿದ್ರೆ ಬಂದವರಂತೆ ಮಲಗಿದ್ದ ನರಿ, “”ನಾನು ಹೆರೆದ ಕೂಡಲೇ ನೀನು ಯಾಕೆ ತೆಗೆದುಕೊಂಡು ಹೋಗಿಲ್ಲ? ಎಲ್ಲವನ್ನೂ ಕಾಡುಬೆಕ್ಕು ತಿಂದು ಹೋಗಿರಬೇಕು” ಎಂದು ಕೋಪ ನಟಿಸಿತು.
ಮೊಲ ಕಷ್ಟಪಟ್ಟು ಪಾಯಸ ತಯಾರಿಸಿತು. ರಂಧ್ರವಿಲ್ಲದ ಬಾಳೆಲೆ ಹುಡುಕಿಕೊಂಡು ಹೋಯಿತು. ನರಿ ಎದ್ದು ಎಲ್ಲ ಪಾಯಸವನ್ನೂ ತಿಂದು ಮಡಕೆಯನ್ನು ಖಾಲಿ ಮಾಡಿ ಒಡೆದು ಹಾಕಿತು. ಮೊಲ ಹಿಂತಿರುಗಿದಾಗ ಒಡೆದ ಮಡಕೆಯನ್ನು ಕಂಡು ಬೇಸರದಿಂದ, “”ನರಿಯಣ್ಣ, ಪಾಯಸ ಏನಾಯಿತು? ಮಡಕೆ ಹೇಗೆ ಒಡೆಯಿತು?” ಎಂದು ವಿಚಾರಿಸಿತು. ನರಿ ನಿದ್ರೆಯಿಂದ ಎದ್ದ ಹಾಗೆ ನಟಿಸಿತು. “”ಅಯ್ಯೋ ದೇವರೇ, ಏನಾಯಿತು? ಇದೆಲ್ಲ ಮಡಕೆ ಮಾಡಿದ ಕುಂಬಾರನ ಕಿತಾಪತಿ. ಹುಡುಕಿಕೊಂಡು ಬಂದು ಕೋಪ ತೀರಿಸಿ ಹೋಗಿದ್ದಾನೆ” ಎಂದು ದುಃಖಪಟ್ಟಿತು. ಆದರೆ ಮೊಲಕ್ಕೆ ನರಿಯ ಹೊಟ್ಟೆ ಕಂಡು ಅನುಮಾನ ಬಂದಿತು. “”ನರಿಯಣ್ಣ, ಪಾಯಸವಂತೂ ಸಿಗಲಿಲ್ಲ. ತಾಂಬೂಲವನ್ನಾದರೂ ಹಾಕೋಣ” ಎಂದು ಹೇಳಿ ತಾಂಬೂಲ ನೀಡಿತು. ತಾಂಬೂಲ ತಿಂದ ಕೂಡಲೇ ನರಿ ಹೊಟ್ಟೆಯೊಳಗಿದ್ದ ಪಾಯಸವನ್ನೆಲ್ಲ ಮೊಲದ ಮೈಮೇಲೆಯೇ ವಾಂತಿ ಮಾಡಿತು. ನರಿಯ ತಂತ್ರ ಮೊಲಕ್ಕೆ ಅರ್ಥವಾಯಿತು.
ಮೊಲ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ನದಿಯ ಕಡೆಗೆ ಓಡಿತು. ಆಕಾಶದಲ್ಲಿ ಹುಣ್ಣಿಮೆಯ ಚಂದ್ರ ಬೆಳದಿಂಗಳು ಚೆಲ್ಲುತ್ತ ಇದ್ದ. ತನ್ನ ಪ್ರೀತಿಯ ಮೊಲದ ಮೈ ಹೊಲಸಾಗಿರುವುದು ಅವನಿಗೆ ಕಾಣಿಸಿತು. ಕೆಳಗಿಳಿದು ಬಂದು, ಅದರ ಮೈದಡವಿದ. ಮೊಲದ ಮೈ ಇನ್ನಷ್ಟು ಕಾಂತಿಯಿಂದ ಹೊಳೆಯುವಂತೆ ಮಾಡಿದ. ಮೊಲ ಬಿಲದ ಬಳಿಗೆ ಬಂದಿತು. ನರಿ ಅದನ್ನು ನೋಡಿ, “”ವ್ಹಾವ್! ನಿನ್ನ ಮೈ ಹೇಗೆ ಇಷ್ಟು ಬೆಳ್ಳಗಾಯಿತು? ನನ್ನ ಮೈ ಬಣ್ಣ ನೋಡಿದರೆ ನಾಚಿಕೆಯಾಗುತ್ತದೆ” ಎಂದಿತು. “”ನದಿಯ ಬಳಿ ನಿಂತು ಚಂದಿರ ಮಾಮ ಬಟ್ಟೆ ತೊಳೆಯುತ್ತ ಇದ್ದಾನೆ. ಅವನೇ ನನ್ನನ್ನು ನೀರಿನಲ್ಲಿ ಅದ್ದಿ, ತಿಕ್ಕಿ ತೊಳೆದು ಬೆಳ್ಳಗೆ ಮಾಡಿ ಕಳುಹಿಸಿದ. ಬೇಕಿದ್ದರೆ ನೀನೂ ಹೋಗು. ಚೆನ್ನಾಗಿ ಆರೈಕೆ ಮಾಡುತ್ತಾನೆ” ಎಂದು ಮೊಲ ಹೇಳಿತು.
ನರಿ ನದಿಯ ಸನಿಹ ಹೋಯಿತು. ಅಗಸನೊಬ್ಬ ನೀರಿನಲ್ಲಿ ನಿಂತು ಕಲ್ಲಿಗೆ ಬಡಿದು ಬಟ್ಟೆಯನ್ನು ತೊಳೆಯುತ್ತ ಇದ್ದ. ಅವನೊಂದಿಗೆ, “”ಚಂದಿರ ಮಾಮಾ, ಮೊಲದ ಹಾಗೆ ನನ್ನನ್ನೂ ತೊಳೆದು ಬೆಳ್ಳಗೆ ಮಾಡುತ್ತೀಯಾ?” ಎಂದು ಕೇಳಿತು. ಅಗಸ ನರಿಯ ಕಡೆಗೆ ನೋಡಿದ. “”ಅದಕ್ಕೇನಂತೆ, ಬಾ. ನಾನಿರುವುದೇ ಅದಕ್ಕೆ” ಎಂದು ಹೇಳಿ ಅದನ್ನು ಕರೆದು ಹಿಂಗಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡ. “”ನನ್ನ ಕೋಳಿಗೂಡಿಗೆ ನುಗ್ಗಿ ಕೋಳಿಗಳನ್ನು ಒಂದೊಂದಾಗಿ ಕಚ್ಚಿಕೊಂಡು ಹೋಗಿ ನುಂಗಿದವನು ನೀನೇ ತಾನೆ? ನಿನ್ನನ್ನು ಒಗೆದು ಹೇಗೆ ಮಡಿ ಮಾಡುತ್ತೇನೆ ನೋಡು” ಎಂದು ಕಾಲುಗಳಲ್ಲಿ ಹಿಡಿದು ಎತ್ತಿ ಬಂಡೆಗೆ ಬಲವಾಗಿ ಹೊಡೆದ. ಮೋಸಗಾರ ನರಿ ಸತ್ತುಹೋಯಿತು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.