ತಂದೆ ಕ್ಯಾರೆಕ್ಟರ್ ಹುಡುಕಾಟ!
Team Udayavani, Dec 3, 2023, 10:53 AM IST
ನಾಯಕ, ನಾಯಕಿ, ಉಳಿದ ಪಾತ್ರಗಳಿಗೆ ಸುಮಾರು ಜನರನ್ನು ಆಡಿಷನ್ ಮಾಡಿ ಆಯ್ಕೆ ಮಾಡಿದ್ದರು. ಆದರೆ ವಯಸ್ಸಾದ ಒಂದು ಪಾತ್ರದ ಹುಡುಕಾಟಕ್ಕಾಗಿ ಇಡೀ ನಿರ್ದೇಶಕನ ತಂಡವೇ ಪತ್ರಿಕೆಯಲ್ಲಿ ಜಾಹಿರಾತು ಹೊರಡಿಸಿತ್ತು. ಅದರಲ್ಲಿ ದಿನಕ್ಕೆ ಹತ್ತು ಜನ ಬಂದು ಆಡಿಷನ್ ಕೊಟ್ಟು ವಾಪಾಸು ಹೋಗುತ್ತಿದ್ದರು. ಇವರು, “ಫೋನ್ ಮಾಡಿ ಹೇಳ್ತಿವಿ…’ ಎಂದು ಹೇಳಿ ಕಳಿಸುತ್ತಿದ್ದರು. ಬಂದು ಹೋಗುತ್ತಿದ್ದ ಜನರು ಡೈಲಾಗ್ ಇಲ್ಲದೆ ಹೊಸ ಹೊಸದಾಗಿ ಆಂಗಿಕ ಅಭಿನಯ ಮಾಡಿ ನಿರ್ದೇಶಕನ ಮನಸು ಗೆಲ್ಲಲು ಪ್ರಯತ್ನಿಸುತ್ತಿದ್ದರು. ನಿರ್ದೇಶಕ ರೊಚ್ಚಿಗೆದ್ದು, “ವಯಸ್ಸಾದ ತಂದೆ ಕ್ಯಾರೆಕ್ಟರ್ ಮಾಡಿ ತೋರಿಸ್ರಪ್ಪ ಅಂದ್ರೆ, ಕಾಲೇಜು ಹುಡುಗನ ಹಾಗೆ ಮಾಡ್ತಿರಲ್ರಿ, ನಾನು ಮೆಚ್ಚಿಕೊಳ್ಳೋ ಹಾಗೆ ನಟಿಸ ಬೇಡ್ರಪ್ಪ, ಜನ ನಿಮ್ಮನ್ನು ಮೆಚ್ಚಿ ಕೊಂಡಾಡಿದರೆ ಸಾಕು’ ಎಂದು ಬೈದು ಕಳಿಸುತ್ತಿದ್ದ.
ಇವರಿಗೆ ಬೇಕಾದ ಹಾಗೆ ಅಲ್ಲ ಪಾತ್ರಕ್ಕೆ ಹೊಂದುವ ಹಾಗೆ ಯಾರು ಸಿಗಲಿಲ್ಲವೇನೋ. ನಂತರ ಬೇರೊಂದು ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಕೊಟ್ಟ ವಿಳಾಸಕ್ಕೆ ತನ್ನಿಬ್ಬರು ಅಸಿಸ್ಟೆಂಟ್ ಡೈರೆಕ್ಟರುಗಳನ್ನು ಕಳಿಸುವ ಮುನ್ನ, “ನಮಗೆ ಹೊಸ ಮುಖ ಬೇಕು. ನೋಡಿದ ಕೂಡಲೇ ಫ್ರೆಶ್ ಎನ್ನಿಸಬೇಕು, ಗೊತ್ತಲಾ. ದಿನಕ್ಕೆ ಹತ್ತು ಲಕ್ಷ ಪೇಮೆಂಟ್ ಬೇಕಾದರೂ ಕೊಡ್ತೀವಿ ಅಂತ ಹೇಳಿ ಕರ್ಕೊಂಡು ಬನ್ರಯ್ಯ ಸಾಕು’ ಎಂದು ಕಳಿಸಿದ್ದ. ಮೊದಲನೆ ಅಸಿಸ್ಟೆಂಟು ಆ ಕ್ಷಣಕ್ಕೆ, “ಸರ್, ನೀವೇ ಒಂದು ಆ್ಯಂಗಲ್ಲಿನಿಂದ ಆ ಪಾತ್ರದಂತೆ ಕಾಣಿ¤ದ್ದೀರ. ವಿಗ್ ಹಾಕಿ ಕೋಲು ಕೊಟ್ಟು ನಿಲ್ಲಿಸಿದ್ರೆ, ಥೇಟು ವಯಸ್ಸಾದವರ ಹಾಗೆ ಕಾಣ್ತೀರ’ ಎಂದು ಹುರಿದುಂಬಿಸಿ ನಕ್ಕ. ಮತ್ತೂಬ್ಬ ಅಸಿಸ್ಟೆಂಟ್, “ಇವನೇನು ಹೀಗೆ ಮಾತಾಡ್ತಿದ್ದಾನೆ? ಹೊಗಳಬೇಕು ಸರಿ. ಆದರೆ ಈ ಲೆವೆಲ್ಲಿಗಾ..? ಡೈರೆಕ್ಟರೇ ಆತ್ಮಹತ್ಯೆ ಮಾಡ್ಕೊàಬೇಕು ಹಂಗೆ ಟಾಂs… ಕೊಡ್ತಿನಾನಲ್ಲಪ್ಪ..!’ ಎಂದು ಗಾಬರಿಗೊಂಡ. ಡೈರೆಕ್ಟರಿಗೆ ಕೋಪ ಬಂದು, “ನಿಮ್ಮಂಥ ಅಸಿಸ್ಟೆಂಟು ಇರೋದರಿಂದಲೇ, ನನ್ನ ಸಿನಿಮಾ ಇನ್ನೂ ಶೂಟಿಂಗ್ ಹಂತಕ್ಕೂ ಹೋಗಿಲ್ಲ, ನಾಳೆಯಿಂದ ಅಲ್ಲ, ಈಗಿಂದೀಗ್ಲೇ ನೀನು ರೂಲ್ಡ… ಔಟ್’ ಎಂದು ಕೆನ್ನೆಗೆ ಬಾರಿಸಿ ಹೊರಗೆ ನೂಕಿದ.
“ಅರವತ್ತು ವರ್ಷ ದಾಟಿದವರು ನಮ್ಮ ಸಿನಿಮಾಗೆ ಬೇಕಾಗಿದ್ದಾರೆ’ ಎಂದು ಉಳಿದಿದ್ದ ಒಬ್ಬ ಅಸಿಸ್ಟೆಂಟ್ ಹುಡುಕಿಕೊಂಡು ಬಂದ. ಅದು ಒಂದಷ್ಟು ಬೀದಿ ನಾಟಕ, ಡಾಕ್ಯುಮೆಂಟರಿ, ಸದ್ದು ಮಾಡದ ಸಿನಿಮಾಗಳಲ್ಲಿ ನಟಿಸಿ ಎಲೆಮರೆ ಕಾಯಿಯಂತೆ ಉಳಿದುಹೋದ ಹಳೆಯ ಹಿರಿಯ ಕಲಾವಿದರೆಲ್ಲಾ ಸೇರಿ ಮಾಡಿಕೊಂಡಿರುವ ಮನೆ. ಇಲ್ಲಿ ಏಳೆಂಟು ಜನ ಕಲಾವಿದರಿದ್ದಾರೆ. ಯಾರಿಗೂ ಮದುವೆಯಾಗಿಲ್ಲ. ಮೊದಲು ಹದಿನೈದು ಜನರಿದ್ದರು. ಈಗ ಸರಿ ಸುಮಾರು ಎಲ್ಲರಿಗೂ ವಯಸ್ಸು ಅರವತ್ತು ದಾಟಿದೆ. ಎರಡು ಕೋಣೆ. ಒಂದು ತಾಲೀಮಿಗೆ ಮೀಸಲು. ಅಲ್ಲಿ ಉದ್ದಕ್ಕೆ ಕಾಲು ಚಾಚಿ ಮಲಗಲು ಆಗದೆ ಕಾಲು ಮಡಿಸಿಕೊಂಡೇ ಮಲಗುವುದು, ಏಳುವುದು, ಸಮಯ ಸಾಗದಿದ್ದಾಗ ಹುಕಿ ಬಂದಾಗ ಅಲ್ಲೇ ಲುಂಗಿಯನ್ನು ಎತ್ತಿ ಕಟ್ಟಿ, ತಲೆಗೆ ಹಳೆ ಮಾಸಿದ ಟವೆಲ್ಲನ್ನು ಸಿಂಬಿ ಸುತ್ತಿಕೊಂಡು ಭೀಮನ ಪಾತ್ರಕ್ಕೋ, ಶಕುನಿಯ ಮಾಟಕ್ಕೋ, ಶೂರ್ಪನಖೀಯ ಹಾಗೆ ವೈಯ್ನಾರ ಮಾಡುವುದಕ್ಕೆ ಸಿದ್ಧವಾಗುತ್ತಿದ್ದರು. ಉಳಿದ ಇನ್ನೊಂದು ಕೋಣೆಯಲ್ಲಿ ಅಡಿಗೆ. ತಮ್ಮ ತಮ್ಮಲ್ಲೇ ನಗುವುದಕ್ಕೆ, “ಇದು ಒಂಥರಾ ಕಂಪೆನಿ ಕಲಾವಿದರ ಹಾಸ್ಟೆಲ್ಲು..’ ಎಂದು ಹೇಳಿ ಆಗಾಗ ನಗುತ್ತಿರುತ್ತಾರೆ. ಎಲ್ಲಾ ಹಿರಿಯ ಕಲಾವಿದರು ಒಂದು ಕಡೆ ಸಿಕ್ಕರೆ ಅನುಕೂಲ, ಅವಕಾಶ ತಪ್ಪೋದಿಲ್ಲ, ಯಾರಿಗಾದರೂ ತಿಂಗಳಿಗೆ ಒಂದೆರಡು ಅವಕಾಶ ಸಿಕ್ಕರೆ ಸಾಕು ತಿಂಗಳ ಖಾನ-ಪಾನಿ ಮುಗಿದು ಹೋಗುತ್ತೆ. ಮನೆಯಂತೂ ನಮ್ಮನ್ನೆಲ್ಲಾ ಪೋಷಿಸಿದ ಕಂಪೆನಿ ಮಾಲೀಕರು ಉಂಬಳಿಯಾಗಿ ಕೊಟ್ಟಿದ್ದು. ಅದು ಕೊಡಬೇಕಾದರೆ, “ನಿಮಗೆ ನಾನು ಕೈ ತುಂಬಾ ಸಂಭಾವನೆಯಂತೂ ಕೊಡೋಕ್ಕಾಗಲ್ಲ. ಜನ ನಾವು ಎಷ್ಟೇ ಕಸರತ್ತು ಮಾಡಿದರೂ ನಾಟಕಕ್ಕೆ ಬರ್ತಿಲ್ಲ, ಏನು ಮಾಡೋಕಾಗಲ್ಲ, ಕಂಪೆನಿ ಮುಚ್ಚುವಂತ ಪರಿಸ್ಥಿತಿ ಬಂದಿದೆ. ನಿಮಗೆಲ್ಲರಿಗೂ ಸೇರಿ ಈ ಮನೆಯನ್ನು ಕೊಡ್ತಿದ್ದೇನೆ, ಸ್ವೀಕರಿಸಿ. ಆದಷ್ಟು ಬೇಗ ಬೇರೆ ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳಿ’ ಎಂದು ಹೊರಟು ಹೋಗಿದ್ದರು.
ಔಟ್ ಆಫ್ ಫೋಕಸ್ಸಿನಲ್ಲಿ ನಿಲ್ಲುವ ಸೆಕುರಿಟಿ ಗಾರ್ಡಿನಿಂದ ಹಿಡಿದು ಮಾಂಟೆಜ್ ಶಾಟಿನಲ್ಲಿ ಸಾಗುವ ದಾರಿಹೋಕರ ಪಾತ್ರಕ್ಕೂ ಸಹ ಇಲ್ಲ ಎನ್ನುತ್ತಾ ಪಾಲಿಗೆ ಬಂದ ಅವಕಾಶ ತಳ್ಳದೆ, ತಮ್ಮ ವೃದ್ಧಾಪ್ಯದಲ್ಲಿ ಒಬ್ಬರಿಗೊಬ್ಬರು ಆಸರೆಯಾಗುತ್ತಾ, ಹೀಗೆ ಸಿಕ್ಕ ಅವಕಾಶದಲ್ಲಿ ತನ್ನ ಸಹ ನಟನಿಗೂ ಸಿಗಲಿ ಎಂಬ ಆಸೆಯಲ್ಲಿ, “ಸರ್ ಬೇಜಾರು ಮಾಡ್ಕೋಬೇಡಿ. ನಿಮ್ಮ ಧಾರಾವಾಹಿಯಲ್ಲಿ ಬೇರೆ ಯಾವುದಾದರು ಒಂದು ನಿಮಿಷದ ಗೆಸ್ಟ್ ರೋಲ್ ಇದ್ರೆ ಹೇಳಿ ಸರ್, ಇವನು ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡ್ತಾನೆ. ಕಾರು ಕಳಿಸಿ, ಬಾಟ ಕೊಡಿ, ಓವರ್ ಮೇಕಪ್ಪು ಬೇಡ, ವಿಗ್ಗು ಬೇಡ, ಈ ಡೈಲಾಗ್ ಹೇಳಲ್ಲ, ಆ ಡೈಲಾಗ್ ನಂಗೆ ಸೂಟ್ ಆಗಲ್ಲ, ಸಂಜೆ ಮೇಲೆ ಡಬ್ಬಲ್ ಬಾಟ, ಇವೆಲ್ಲಾ ಕೇಳಲ್ಲ ಸರ್. ದೊಡ್ಡ ಮನಸು ಮಾಡಿ’ ಎಂದು ಅಂಗಲಾಚಿ ಒಮ್ಮೊಮ್ಮೆ ವಶೀಲಿಬಾಜಿ ಮಾಡಿಸಿ ಚಾನ್ಸ್ ಕೊಡಿಸುವ ಹೃದಯವಂತರಿದ್ದಾರೆ.
ಅಸಿಸ್ಟೆಂಟ್ ಡೈರೆಕ್ಟರು ಬಂದು ಎಲ್ಲರನ್ನೂ ಗಮನಿಸಿದ. ಎಲ್ಲಾ ಹಿರಿಯ ಜೀವಗಳು “ಇವನ ಆಯ್ಕೆ ನಾನೇ ಆಗಿರಲಿ’ ಎಂದು ಆಸೆಯಿಂದ ನೋಡುತ್ತಿದ್ದವು. ಇವರು ಸರಿ ಹೋಗ್ತಾರೆ ಎನಿಸುತ್ತೆ ಎಂದೆನಿಸಿ ಒಂದು ಫೋಟೋ ಕ್ಲಿಕ್ಕಿಸಿಕೊಂಡ. ಉಳಿದ ಮುಖಗಳು ಬಾಡಿ ಹೋದವು.
ಕಾರಿನಲ್ಲಿ ಕೂರುವಾಗ, “ನಾನು ಒಪ್ಪಿದ್ದು ಫೈನಲ್ ಅಲ್ಲ ಸರ್. ನಮ್ಮ ನಿರ್ದೇಶಕರು ಒಪ್ಪಬೇಕು. ಆಮೇಲೆ ಎರಡು ದಿನ ಕಾಡಲ್ಲಿ ಶೂಟಿಂಗ್ ಇರುತ್ತೆ. ಒಪ್ಪಿಗೆ ತಾನೆ? ಅಲ್ಲಿ ನೆಟ್‌ವರ್ಕ್ ಸಿಗಲ್ಲ. ಈಗಲೇ ನಿಮ್ಮ ಸ್ನೇಹಿತರಿಗೆ ಟಾಟಾ ಮಾಡಿºಡಿ’ ಎಂದ. ತಂದೆ ಪಾತ್ರಕ್ಕೆ ಆಯ್ಕೆಯಾಗಿದ್ದ ವ್ಯಕ್ತಿ ಗಂಟಲು ಸರಿ ಮಾಡಿಕೊಂಡು, “ನಾವು ಮಳೆಯಲ್ಲಿ ನೆಂದ ರೇಡಿಯೋ ಬಿಸಿಲಿಗೆ ಒಣಗಿಸಿ, ಅದರ ಸೆಲ್ಲು ತೆಗೆದು ಅಂಗೈಗೆ ಗಸಗಸ ತಿಕ್ಕಿ ಅದರಲ್ಲಿ ವಾರ್ತೆ, ಕ್ರಿಕೆಟ್ ಕಾಮೆಂಟರಿ ಕೇಳಿದೋರು. ಟೇಪು ರೇಕಾರ್ಡರಿನಲ್ಲಿ ಹಾಡ್ತಾ ಹಾಡ್ತಾ ಕ್ಯಾಸೆಟ್ಟಿನ ರೀಲು ಸಿಕ್ಕಿಕೊಂಡಿದ್ದನ್ನು ತುಂಡಾಗದಂತೆ ಹುಷಾರಾಗಿ ಬಿಡಿಸಿ ಮತ್ತೆ ಕ್ಯಾಸೆಟ್ಟಿಗೆ ಬೆರಳು ಹಾಕಿ ತಿರುಗಿಸಿ ಸುತ್ತಿಸಿ ಮತ್ತೆ ಹಾಡು ಕೇಳಿದವರಪ್ಪ ನಾವು. ಸಿಗ್ನಲ್ ಸಿಗಲ್ಲ ಎಂದೆಲ್ಲಾ ಬೇಜಾರು ಮಾಡಿಕೊಳ್ಳಲ್ಲ ನಡಿ’ ಎಂದರು.
ಕಾರು ಚಲಿಸುತ್ತಿತ್ತು. “ಪೇಮೆಂಟ್ ಡಿಮ್ಯಾಂಡ್ ಎನಾದ್ರೂ ಮಾಡ್ತಿರಾ ನೀವು’ ಎಂದ. ಜುಬ್ಟಾ ತೊಟ್ಟಿದ್ದ ಹಿರಿಜೀವ ಕನ್ನಡಕ ತೆಗೆದು, “ಬಹಳ ಖುಷಿಯಾಗ್ತಿದೆಯಪ್ಪ. ನಾಳೆ ಅಕ್ಕಿ ಖಾಲಿಯಾಗಿರೋದು, ನೀನು ಬಂದು ಏಳು ಹೊಟ್ಟೆ ತುಂಬಿಸಿದೆ ನೋಡು. ನಮಗೆಲ್ಲಾ ಕರೆದು ಯಾರು ಅವಕಾಶ ಕೊಡಲ್ಲ. ನಮ್ಮ ಜೊತೆ ಪಾರ್ಟ್ ಮಾಡುತ್ತಿದ್ದ ಅದೆಷ್ಟೋ ಜನರು ಸರಿಯಾಗಿ ಅವಕಾಶ ಸಿಗದೆ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೂ ಕೆಲವರು ಮೈ ತುಂಬಾ ಸಾಲ ಮಾಡಿಕೊಂಡು ಗುರುತೇ ಸಿಗದಂತೆ ತಲೆ ಮೇಲೆ ಟವೆಲ್ ಹಾಕ್ಕೊಂಡು ತಿರುಗ್ತಿದ್ದಾರೆ. ನಾವೇನು ಸರ್ಕಾರಿ ನೌಕರರ ಹೇಳು? ಬಿಡಪ್ಪ ನಮಗೆ ಅರವತ್ತು ದಾಟಿದ ಮೇಲೆ ಪಿಂಚನ್ ಬರ್ತದೆ, ಹೇಗೋ ಮಾತ್ರೆಗೆ, ಮದ್ದಿಗೆ, ಕಟಿಂಗ್ ಮಾಡಿಸ್ಕಳಕೆ ದುಡ್ಡು ಬರ್ತದೆ ಅನ್ನದಕ್ಕೆ. ಅವಾಗೆಲ್ಲಾ ನಾವು ಮಾಲೀಕರು ಎಷ್ಟು ಕೊಡ್ತಾರೋ ಅಷ್ಟು ಕಣ್ಣಿಗೆ ಒತ್ತಿಕೊಂಡು ಬರ್ತಿದ್ರು. ನಾಟಕದಲ್ಲಿ ಆರು ರೂಪಾಯಿಗೆ ಬಣ್ಣ ಹಚ್ಚಿದ್ದು ನಾನು, ಆ ಆರು ರೂಪಾಯಿಗಿಂತ ಜನ ಮಧ್ಯೆ ಮಧ್ಯೆ ತಟ್ಟಿದ್ದ ಚಪ್ಪಾಳೆ-ಶಿಳ್ಳೆ ಹೊಟ್ಟೆ ತುಂಬಿಸುತ್ತಾ ಬಂತು. ಡಿಮ್ಯಾಂಡ್ ಎಲ್ಲ ಇಲ್ಲಪ್ಪ, ನೀವು ಎಷ್ಟು ಕೊಡ್ತಿರೋ ಅಷ್ಟು’ ಎಂದರು
ಅಷ್ಟರಲ್ಲಿ ನಿರ್ದೇಶಕ ಫೋನು ಮಾಡಿ, “ಮಂಜು, ಎಲ್ಲಿದ್ದೀರಾ..? ಬೇಗ ಬನ್ನಿ, ನಾವು ಅಷ್ಟು ದಿನದಿಂದ ಹುಡುಕ್ತಿದ್ದ ಪಾತ್ರಕ್ಕೆ ಹೊಂದುವ ಒಬ್ಬರು ಸಿಕ್ಕಿದ್ದಾರೆ’ ಎಂದ. ಅಸಿಸ್ಟೆಂಟ್ ಹಿರಿಯ ಜೀವವನ್ನು ಒಮ್ಮೆ ನೋಡಿದ. ಹಿರಿ ಜೀವ ಸೈಡ್ ಕ್ರಾಪ್ ತೆಗೆದು ಕನ್ನಡಿ ನೋಡುತ್ತಾ ಹುಬ್ಬನ್ನು ಕುಣಿಸುತ್ತಾ, “ಒಂದು ಮಾತು, ನಾನು ಆಯ್ಕೆ ಆಗಿಲ್ಲ ಅಂದ್ರೆ ದಯವಿಟ್ಟು ಇಲ್ಲಿಗೆ ವಾಪಾಸು ತಂದು ಬಿಡಪ್ಪ, ನಿಂಗೆ ಪುಣ್ಯ ಬರುತ್ತೆ, ಬರೀ ಕೈಯಲ್ಲಿ ಕಳಿಸಬೇಡ’ ಎಂದ. ಮಂಜು ಕಾರನ್ನು ನಿಲ್ಲಿಸಿ ರಿವರ್ಸ್ ಹಾಕಲು ಕನ್ನಡಿ ನೋಡಿದ.
-ಶಶಿ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.